ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಅನುಕೂಲ ಇದ್ದಾಗಲೂ ತೊಂದರೆ ಇದ್ದಾಗಲೂ ಆಶೀರ್ವಾದಗಳು

ಅನುಕೂಲ ಇದ್ದಾಗಲೂ ತೊಂದರೆ ಇದ್ದಾಗಲೂ ಆಶೀರ್ವಾದಗಳು

ನಾನು ಹುಟ್ಟಿದ್ದು 1930ರ ಮಾರ್ಚ್ನಲ್ಲಿ. ನನ್ನ ಊರು ಮಲಾವಿ ದೇಶದ ಲಿಲಾಂಗ್ವೇ ನಗರಕ್ಕೆ ಹತ್ತಿರ ಇರುವ ನಾಮ್‌ಕೂಂಬಾ ಹಳ್ಳಿ. ಈಗಾಗಲೇ ಅಪ್ಪಅಮ್ಮ, ಸಂಬಂಧಿಕರೆಲ್ಲರು ಯೆಹೋವನಿಗೆ ನಂಬಿಗಸ್ತರಾಗಿ ಸೇವೆಮಾಡುತ್ತಿದ್ದರು. 12 ವಯಸ್ಸಿನಲ್ಲಿದ್ದಾಗ ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡೆ. ಸುಂದರ ನದಿಯೊಂದರಲ್ಲಿ ನನ್ನ ದೀಕ್ಷಾಸ್ನಾನ ಆಯಿತು. ಅವತ್ತಿನಿಂದ ಇವತ್ತಿನ ವರೆಗೂ 70ಕ್ಕೂ ಹೆಚ್ಚು ವರ್ಷಗಳ ಕಾಲ ‘ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ ಸುವಾರ್ತೆ ಸಾರಲು’ ನನ್ನಿಂದ ಆಗುವುದನ್ನೆಲ್ಲ ಮಾಡಿದ್ದೇನೆ.—2 ತಿಮೊ. 4:2.

1948ರಲ್ಲಿ ನ್ಯೂ ಯಾರ್ಕ್‍ನಲ್ಲಿರುವ ಮುಖ್ಯ ಕಾರ್ಯಾಲಯದಿಂದ ಇಬ್ಬರು ಸಹೋದರರು ಮಲಾವಿಗೆ ಭೇಟಿಕೊಟ್ಟರು. ಅವರ ಹೆಸರು ನೇತನ್‌ ಎಚ್‌. ನಾರ್‌ ಮತ್ತು ಮಿಲ್ಟನ್‌ ಜಿ. ಹೆನ್ಶೆಲ್‌. ಅವರಿಬ್ಬರು ಹೇಳಿದ ಪ್ರೋತ್ಸಾಹದ ಮಾತುಗಳು ಪೂರ್ಣ ಸಮಯದ ಸೇವೆಯನ್ನು ಮಾಡಬೇಕೆಂಬ ಆಸೆಯನ್ನು ನನ್ನಲ್ಲಿ ಚಿಗುರಿಸಿತು. “ಸರ್ವ ಜನಾಂಗಗಳ ಮೇಲೆ ಚಿರಕಾಲ ಆಳುವ ನಾಯಕ” ಎಂಬ ಭಾಷಣವನ್ನು ಸಹೋದರ ನಾರ್‌ರವರು ನೀಡಿದರು. ಕೆಸರಾಗಿದ್ದ ಬಯಲಲ್ಲಿ ನಿಂತು ಸುಮಾರು 6,000 ಮಂದಿ ಆ ಭಾಷಣವನ್ನು ಕೇಳಿಸಿಕೊಂಡೆವು. ಆ ಭಾಷಣ ನಮ್ಮನ್ನು ತುಂಬ ಹುರಿದುಂಬಿಸಿತು.

ಸಮಯಾನಂತರ ಲಿಡಾಸೀ ಎಂಬ ಯುವತಿಯ ಪರಿಚಯ ನನಗಾಯಿತು. ನನ್ನ ಹಾಗೆ ಅವಳ ಕುಟುಂಬದಲ್ಲಿ ಎಲ್ಲರೂ ಯೆಹೋವನ ಸಾಕ್ಷಿಗಳಾಗಿದ್ದರು. ಅವಳಿಗೂ ಪೂರ್ಣ ಸಮಯದ ಸೇವೆ ಮಾಡುವ ಗುರಿಯಿತ್ತು. ಹಾಗಾಗಿ 1950ರಲ್ಲಿ ಆ ಗುಣವತಿಯನ್ನು ನಾನು ಮದುವೆಯಾದೆ. 1953ರಷ್ಟಕ್ಕೆ ಇಬ್ಬರು ಮಕ್ಕಳಾದರು. ಜವಾಬ್ದಾರಿ ಜಾಸ್ತಿಯಾಯಿತು. ಆದರೂ ನಾನೂ ನನ್ನ ಹೆಂಡತಿ ಕೂತು ಮಾತಾಡಿ ನಾನು ರೆಗ್ಯುಲರ್‌ ಪಯನೀಯರ್‌ ಸೇವೆ ಆರಂಭಿಸಬೇಕೆಂಬ ನಿರ್ಧಾರ ಮಾಡಿದೆವು. ನಾನು ಪಯನೀಯರ್‌ ಸೇವೆ ಆರಂಭಿಸಿ ಎರಡು ವರ್ಷಗಳ ನಂತರ ನನಗೆ ವಿಶೇಷ ಪಯನೀಯರ್‌ ನೇಮಕ ಸಿಕ್ಕಿತು.

ಸ್ವಲ್ಪ ಸಮಯದಲ್ಲೇ ನನಗೆ ಸರ್ಕಿಟ್‌ ಮೇಲ್ವಿಚಾರಕನಾಗಿ ಸಭೆಗಳನ್ನು ಭೇಟಿಮಾಡುವ ಸುಯೋಗ ಸಿಕ್ಕಿತು. ಆ ಸುಯೋಗವನ್ನು ಒಳ್ಳೇ ರೀತಿ ನಿರ್ವಹಿಸುವುದರ ಜೊತೆಗೆ ಕುಟುಂಬವನ್ನು ನೋಡಿಕೊಂಡು ಎಲ್ಲರನ್ನು ದೇವಭಯದಲ್ಲಿ ಬೆಳೆಸಲು ನನ್ನಾಕೆ ಕೊಟ್ಟ ಉತ್ತಮ ಬೆಂಬಲವೇ ಕಾರಣ. * ಆದರೂ ಅವಳು ಕೂಡ ಪೂರ್ಣ ಸಮಯ ಸೇವೆ ಆರಂಭಿಸಬೇಕೆಂಬ ಬಹುದಿನಗಳ ಕನಸು ಇನ್ನೂ ಕನಸಾಗಿಯೇ ಇತ್ತು. ಹಾಗಾಗಿ ಏನು ಮಾಡಬೇಕೆಂದು ಇಬ್ಬರೂ ಜಾಗ್ರತೆಯಿಂದ ಯೋಚಿಸಿದ್ವಿ. ನಮ್ಮ ಮಕ್ಕಳ ಒಳ್ಳೇ ಸಹಕಾರದಿಂದ 1960ರಲ್ಲಿ ಲಿಡಾಸೀ ಪೂರ್ಣ ಸಮಯದ ಸೇವೆ ಆರಂಭಿಸಿದಳು.

ಮುಂದೆ ಬರಲಿದ್ದ ಹಿಂಸೆಯನ್ನು ಸಹಿಸಿಕೊಳ್ಳಲು ಸಮ್ಮೇಳನಗಳು ನಮ್ಮ ನಂಬಿಕೆಯನ್ನು ಬಲಪಡಿಸಿದವು

ಅದು ಸಾರಲು ಅನುಕೂಲವಾದ ಸಮಯವಾಗಿತ್ತು. ಬೇರೆ ಬೇರೆ ಸಭೆಗಳನ್ನು ಭೇಟಿಮಾಡಿ ಸೇವೆಮಾಡುವುದು ನಿಜಕ್ಕೂ ಆನಂದ ತಂದಿತು. ಮಲಾವಿಯ ದಕ್ಷಿಣ ದಿಕ್ಕಿನಲ್ಲಿರುವ ಮಲಾನ್ಯೀ ಬೆಟ್ಟಗಳ ಬಹು ಸುಂದರ ಇಳಿಜಾರು ಪ್ರದೇಶದಿಂದ ಹಿಡಿದು ಪೂರ್ವ ದಿಕ್ಕಿನಲ್ಲಿರುವ ಮಲಾವೀ ಸರೋವರದ ಪ್ರಶಾಂತ ತೀರಪ್ರದೇಶದ ವರೆಗೆ ಇದ್ದ ಸಭೆಗಳನ್ನು ನಾವು ಭೇಟಿ ಮಾಡಿದೆವು. ಆ ಪ್ರದೇಶಗಳಲ್ಲಿ ಪ್ರಚಾರಕರ ಮತ್ತು ಸಭೆಗಳ ಸಂಖ್ಯೆ ಹೆಚ್ಚೆಚ್ಚಾಗುವುದನ್ನು ನೋಡಿ ತುಂಬ ಸಂತೋಷಪಟ್ಟೆವು.

1962ರಲ್ಲಿ ನಡೆದ ಡಿಸ್ಟ್ರಿಕ್ಟ್‌ ಸಮ್ಮೇಳನದ ಮುಖ್ಯ ವಿಷಯ “ಧೀರ ಶುಶ್ರೂಷಕರು” ಎಂದಾಗಿತ್ತು. ಅಂಥ ಆಧ್ಯಾತ್ಮಿಕ ಕಾರ್ಯಕ್ರಮಗಳು ಸರಿಯಾದ ಸಮಯದಲ್ಲಿ ನಡೆದವೆಂದು ನನಗೀಗ ಅನಿಸುತ್ತದೆ. ಏಕೆಂದರೆ ಮುಂದೆ ಬರಲಿದ್ದ ಎಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳಲು ಅವು ನಮ್ಮನ್ನು ಸಿದ್ಧಮಾಡಿದವು. ಮುಂದಿನ ವರ್ಷ ಸಹೋದರ ಹೆನ್ಶೆಲ್‌ ಅವರು ಪುನಃ ಒಮ್ಮೆ ಮಲಾವಿಗೆ ಭೇಟಿಕೊಟ್ಟರು. ಆಗ ಒಂದು ವಿಶೇಷ ಅಧಿವೇಶನವನ್ನು ಬ್ಲಾ೦ಟಾಯರ್‌ ನಗರದ ಹೊರಗೆ ಏರ್ಪಾಡು ಮಾಡಲಾಯಿತು. ಸುಮಾರು 10,000 ಜನರು ಹಾಜರಿದ್ದರು. ನಮ್ಮ ನಂಬಿಕೆಗೆ ಬರಲಿದ್ದ ಪರೀಕ್ಷೆಗಳನ್ನು ಎದುರಿಸಲು ಆ ಅಧಿವೇಶನ ಧೈರ್ಯ ತುಂಬಿತು.

ತೊಂದರೆಯ ಸಮಯಗಳು

ನಮ್ಮ ಕೆಲಸದ ಮೇಲೆ ಸರ್ಕಾರ ನಿಷೇಧ ಹಾಕಿತು. ಬ್ರಾಂಚ್‌ ಆಫೀಸನ್ನು ವಶಪಡಿಸಿಕೊಂಡಿತು

ಯೆಹೋವನ ಸಾಕ್ಷಿಗಳು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ 1964ರಲ್ಲಿ ಅವರನ್ನು ತುಂಬ ಹಿಂಸಿಸಲಾಯಿತು. ಒಂದರ ಮೇಲೊಂದು ಬಂದ ಹಿಂಸೆಗಳಲ್ಲಿ 100ಕ್ಕೂ ಹೆಚ್ಚು ರಾಜ್ಯ ಸಭಾಗೃಹಗಳನ್ನು ಮತ್ತು ಸಾಕ್ಷಿಗಳ 1,000ಕ್ಕೂ ಹೆಚ್ಚು ಮನೆಗಳನ್ನು ನಾಶಮಾಡಲಾಯಿತು. 1967ರಲ್ಲಿ ಸಾಕ್ಷಿಗಳ ಮೇಲೆ ಮಲಾವಿ ಸರ್ಕಾರವು ನಿಷೇಧ ಹಾಕುವ ವರೆಗೂ ನಾವು ಸಂಚರಣ ಸೇವೆಯನ್ನು ಮಾಡುತ್ತಾ ಇದ್ದೆವು. ನಿಷೇಧದ ಸಮಯದಲ್ಲಿ ಬ್ಲಾ೦ಟಾಯರ್‌ ನಗರದಲ್ಲಿದ್ದ ಬ್ರಾಂಚ್‌ ಸೌಕರ್ಯವನ್ನು ಸರ್ಕಾರ ವಶಪಡಿಸಿಕೊಂಡಿತು. ಎಲ್ಲ ಮಿಷನರಿಗಳನ್ನು ದೇಶದಿಂದ ಹೊರಗಟ್ಟಲಾಯಿತು. ನನ್ನನ್ನೂ ನನ್ನ ಹೆಂಡತಿಯನ್ನೂ ಜೊತೆಗೆ ಎಷ್ಟೋ ಮಂದಿ ಸಾಕ್ಷಿಗಳನ್ನು ಸೆರೆಮನೆಗೆ ಹಾಕಲಾಯಿತು. ಬಿಡುಗಡೆಯಾಗಿ ಬಂದ ಮೇಲೆ ನಾವಿಬ್ಬರು ಸಂಚರಣ ಕೆಲಸವನ್ನು ಗುಟ್ಟಾಗಿ ಮುಂದುವರಿಸಿದೆವು.

ರಾಜಕೀಯ ಉಗ್ರಗಾಮಿಗಳಾಗಿದ್ದ ಯುವಕರು ತಮ್ಮದೇ ಒಂದು ಸಂಘ ಮಾಡಿಕೊಂಡಿದ್ದರು. 1972ರ ಅಕ್ಟೋಬರ್‌ನಲ್ಲಿ ಒಂದು ದಿನ ಆ ಸಂಘದ ಸುಮಾರು ನೂರು ಮಂದಿ ನನ್ನ ಕುಟುಂಬದ ಮೇಲೆ ದಾಳಿ ಮಾಡಲಿಕ್ಕಾಗಿ ಬರುತ್ತಿದ್ದರು. ಆದರೆ ಅವರ ಗುಂಪಿನಿಂದಲೇ ಒಬ್ಬ ವ್ಯಕ್ತಿ ಓಡಿ ಬಂದು ಮುಂಚೆಯೇ ನನಗೆ ಸುದ್ದಿ ಮುಟ್ಟಿಸಿದ. ನನ್ನನ್ನು ಕೊಲ್ಲಲಿಕ್ಕಿದ್ದಾರೆಂದು ಹೇಳಿದ. ತಕ್ಷಣ ನನ್ನ ಹೆಂಡತಿ ಮಕ್ಕಳಿಗೆ ಸಮೀಪದಲ್ಲಿದ್ದ ಬಾಳೆ ತೋಟಕ್ಕೆ ಓಡಿಹೋಗಿ ಅಡಗಿಕೊಳ್ಳುವಂತೆ ಹೇಳಿದೆ. ನಾನೂ ಓಡಿಹೋಗಿ ಸ್ವಲ್ಪ ದೂರದಲ್ಲಿದ್ದ ಒಂದು ದೊಡ್ಡ ಮಾವಿನ ಮರವನ್ನು ಹತ್ತಿದೆ. ಅಲ್ಲಿಂದ ಆ ಉಗ್ರಗಾಮಿಗಳು ಬರುವುದನ್ನು, ನಮ್ಮ ಮನೆಯೊಳಗೆ ನುಗ್ಗಿ ಎಲ್ಲ ವಸ್ತುಗಳನ್ನೂ ಮನೆಯನ್ನೂ ಹಾಳುಮಾಡುವುದನ್ನು ಕಣ್ಣಾರೆ ನೋಡಿದೆ.

ಸಹೋದರರು ರಾಜಕೀಯದಲ್ಲಿ ಭಾಗವಹಿಸದ ಕಾರಣ ಅವರ ಮನೆಗಳನ್ನು ಸುಟ್ಟುಹಾಕಲಾಯಿತು

ಮಲಾವಿಯಲ್ಲಿ ಹಿಂಸೆ ಜಾಸ್ತಿಯಾಗುತ್ತಾ ಹೋಯಿತು. ಹಾಗಾಗಿ ಸಾವಿರಾರು ಮಂದಿ ಸಾಕ್ಷಿಗಳು ದೇಶವನ್ನು ಬಿಟ್ಟು ಹೋಗುವಂಥ ಪರಿಸ್ಥಿತಿ ಬಂತು. ನಾವು ಕೂಡ ಮಲಾವಿಯನ್ನು ಬಿಟ್ಟು ಪಶ್ಚಿಮ ಮೊಜಾಂಬಿಕ್‍ಗೆ ಹೋಗಿ ಅಲ್ಲಿ ನಿರಾಶ್ರಿತರ ಶಿಬಿರದಲ್ಲಿ ಉಳುಕೊಂಡೆವು. 1974ರ ಜೂನ್‌ ವರೆಗೆ ನಾವು ಅಲ್ಲಿದ್ದೆವು. ಅನಂತರ ನಮ್ಮನ್ನು ಮೊಜಾಂಬಿಕ್‍ನ ಡೋಮ್ವಾ ಎಂಬ ಚಿಕ್ಕ ಪಟ್ಟಣದಲ್ಲಿ ವಿಶೇಷ ಪಯನೀಯರರಾಗಿ ಸೇವೆ ಮಾಡುವಂತೆ ಕೇಳಿಕೊಳ್ಳಲಾಯಿತು. ಈ ಪಟ್ಟಣ ಮಲಾವಿಯ ಗಡಿಯ ಹತ್ತಿರದಲ್ಲಿತ್ತು. 1975ರವರೆಗೆ ನಾವಲ್ಲಿ ಸೇವೆ ಮಾಡಿದೆವು. ಆ ವರ್ಷ ಮೊಜಾಂಬಿಕ್‌ ದೇಶಕ್ಕೆ ಪೋರ್ಚುಗಲ್‍ನಿಂದ ಸ್ವಾತಂತ್ರ್ಯ ಸಿಕ್ಕಿತು. ಆಗ ನಮ್ಮನ್ನೂ ಇತರ ಸಾಕ್ಷಿಗಳನ್ನೂ ಮಲಾವಿಗೆ ಹಿಂತೆರಳುವಂತೆ ಒತ್ತಾಯಿಸಲಾಯಿತು. ನಮ್ಮನ್ನು ಹಿಂಸಿಸುತ್ತಿದ್ದವರ ಬಳಿಗೇ ಮತ್ತೆ ಹೋಗಬೇಕಾಯಿತು.

ಮಲಾವಿಗೆ ಬಂದ ನಂತರ ರಾಜಧಾನಿಯಾದ ಲಿಲಾಂಗ್ವೇಯಲ್ಲಿನ ಸಭೆಗಳನ್ನು ಭೇಟಿಮಾಡುವ ನೇಮಕ ನಮಗೆ ಸಿಕ್ಕಿತು. ಸಂತೋಷದ ವಿಷಯ ಏನೆಂದರೆ ನಾವು ಸೇವೆ ಮಾಡಿದ ಸರ್ಕಿಟ್‌ಗಳಲ್ಲಿ ಎಷ್ಟೋ ಕಷ್ಟ, ಹಿಂಸೆಗಳಿದ್ದರೂ ಸಭೆಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು.

ಯೆಹೋವನ ಸಹಾಯ

ಒಮ್ಮೆ ಏನಾಯಿತೆಂದರೆ ನಾವೊಂದು ಹಳ್ಳಿಗೆ ಹೋದಾಗ ಅಲ್ಲಿ ರಾಜಕೀಯದವರು ಕೂಟ ನಡೆಸುತ್ತಿದ್ದರು. ಅವರ ಕಡೆಯವರು ನಮ್ಮನ್ನು ನೋಡಿ ಯೆಹೋವನ ಸಾಕ್ಷಿಗಳು ಎಂದು ತಿಳಿದು ಕರಕೊಂಡು ಹೋದರು. ಮಲಾವಿ ಯುವಸಂಘದ ಪ್ರವರ್ತಕರ ಮಧ್ಯೆ ಕೂರಿಸಿದರು. ಸನ್ನಿವೇಶ ಹೇಗೆ ತಿರುಗುತ್ತದೋ ನಮಗೆ ಗೊತ್ತಿರಲಿಲ್ಲ. ನಮ್ಮನ್ನು ಮಾರ್ಗದರ್ಶಿಸುವಂತೆ ಪೂರ್ಣ ಮನಸ್ಸಿನಿಂದ ಯೆಹೋವನಿಗೆ ಪ್ರಾರ್ಥಿಸಿದೆವು. ಅವರ ಕೂಟ ಮುಗಿದ ಮೇಲೆ ನಮ್ಮನ್ನು ಚೆನ್ನಾಗಿ ಹೊಡೆಯಲು ಶುರುಮಾಡಿದರು. ಆದರೆ ಇದ್ದಕ್ಕಿದ್ದಂತೆ ಒಬ್ಬ ವೃದ್ಧ ಸ್ತ್ರೀ ಓಡಿಬರುತ್ತಾ “ಸ್ವಾಮಿ ಬಿಟ್ಟುಬಿಡಿ, ಅವನು ನನ್ನ ಅಣ್ಣನ ಮಗ, ದಯವಿಟ್ಟು ಅವರನ್ನು ಹೊಡಿಬೇಡಿ, ಅವರು ಬೇರೆ ಊರಿಗೆ ಹೋಗಬೇಕು” ಎಂದು ಕೂಗಿಕೊಂಡಳು. ಆಗ ಆ ಕೂಟದ ಮುಖ್ಯಸ್ಥ “ಅವರನ್ನು ಬಿಟ್ಟುಬಿಡಿ” ಎಂದು ಹೇಳಿದ. ನಿಜ ಹೇಳಬೇಕಾದರೆ ಆಕೆ ಯಾರು ಅಂತನೇ ನಮಗೆ ಗೊತ್ತಿರಲಿಲ್ಲ, ಯಾಕೆ ಹಾಗೆ ಹೇಳಿದಳು ಅಂತನೂ ಗೊತ್ತಿರಲಿಲ್ಲ. ಯೆಹೋವನು ನಮ್ಮ ಪ್ರಾರ್ಥನೆಗೆ ಈ ರೀತಿ ಉತ್ತರ ಕೊಟ್ಟಿದ್ದಾನೆ ಎಂದು ನಮಗನಿಸಿತು.

ರಾಜಕೀಯ ಪಾರ್ಟಿ ಕಾರ್ಡ್‌

1981ರಲ್ಲಿ ಪುನಃ ಒಮ್ಮೆ ಮಲಾವಿ ಯುವಸಂಘದವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡೆವು. ಈ ಸಲ ಅವರು ನಮ್ಮ ಸೈಕಲುಗಳನ್ನು, ವಸ್ತುಗಳನ್ನು, ಪುಸ್ತಕಗಳಿದ್ದ ಬಾಕ್ಸ್‌ಗಳನ್ನು, ಸರ್ಕಿಟ್‍ನ ಫೈಲುಗಳನ್ನು ಕಿತ್ತುಕೊಂಡರು. ಆದರೆ ನಾವು ಹೇಗೋ ತಪ್ಪಿಸಿಕೊಂಡು ಹೋಗಿ ಒಬ್ಬ ಸಭಾ ಹಿರಿಯನ ಮನೆಯಲ್ಲಿ ಅಡಗಿಕೊಂಡೆವು. ಯೆಹೋವನಲ್ಲಿ ಪ್ರಾರ್ಥಿಸಿದೆವು. ಫೈಲುಗಳಲ್ಲಿದ್ದ ಮಾಹಿತಿ ನೋಡಿ ಅವರು ಏನಾದರೂ ತೊಂದರೆ ಮಾಡಿದರೆ ಎಂಬ ಚಿಂತೆ ನಮ್ಮನ್ನು ಕಾಡಿತು. ಆ ಯುವಕರು ನಮ್ಮ ಫೈಲುಗಳನ್ನು ತೆರೆದು ಅದರಲ್ಲಿದ್ದ ಪತ್ರಗಳನ್ನು ನೋಡಿದರು. ನನ್ನ ಹೆಸರಿಗೆ ಬಂದಿದ್ದ ಆ ಪತ್ರಗಳು ಮಲಾವಿಯ ಎಲ್ಲ ಕಡೆಗಳಿಂದ ಬಂದಿದ್ದರಿಂದ ಅವರದನ್ನು ನೋಡಿ ನಾನೇನೋ ಸರ್ಕಾರಿ ಅಧಿಕಾರಿಯಾಗಿರಬೇಕು ಎಂದು ನೆನಸಿ ತುಂಬ ಹೆದರಿದರು. ಕೂಡಲೇ ಅವೆಲ್ಲವನ್ನು ಹೇಗಿತ್ತೋ ಹಾಗೇ ತಂದು ಅಲ್ಲಿನ ಸಭಾ ಹಿರಿಯರಿಗೆ ಕೊಟ್ಟುಬಿಟ್ಟರು.

ಇನ್ನೊಂದು ಸಂದರ್ಭ ಕೂಡ ನನಗೆ ನೆನಪಿದೆ. ನಾವು ಒಂದು ನದಿ ದಾಟಲು ದೋಣಿಯಲ್ಲಿ ಹೋಗುತ್ತಿದ್ವಿ. ಆ ದೋಣಿಯ ಮಾಲೀಕ ರಾಜಕೀಯ ವ್ಯಕ್ತಿ. ಆ ಊರಿನ ಅಧ್ಯಕ್ಷ. ಹಾಗಾಗಿ ಅವನು ದೋಣಿಯಲ್ಲಿದ್ದ ಎಲ್ಲರ ಹತ್ತಿರ ‘ರಾಜಕೀಯ ಪಾರ್ಟಿ ಕಾರ್ಡ್‌’ ಇದೆಯಾ ಎಂದು ಪರೀಕ್ಷಿಸಲು ಶುರುಮಾಡಿದ. ಒಬ್ಬೊಬ್ಬರ ಹತ್ತಿರ ಹೋಗಿ ಅವರ ಕಾರ್ಡನ್ನು ನೋಡುತ್ತಾ ನಾವು ಕೂತಿದ್ದ ಕಡೆಗೆ ಬರತೊಡಗಿದ. ಆದರೆ ಇನ್ನೇನು ನಮ್ಮ ಹತ್ತಿರ ಬರಬೇಕು ಅನ್ನುವಷ್ಟರಲ್ಲಿ ತುಂಬ ದಿನಗಳಿಂದ ಪೊಲೀಸರು ಹುಡುಕುತ್ತಿದ್ದ ಕಳ್ಳನೊಬ್ಬ ಅವನ ಕೈಯಲ್ಲಿ ಸಿಕ್ಕಿಬಿದ್ದ. ಇದ್ದಕ್ಕಿದ್ದಂತೆ ಒಂದೇ ಸಮನೆ ಗದ್ದಲ ಶುರುವಾಯಿತು. ಅಲ್ಲಿಗೆ ಅಧ್ಯಕ್ಷನು ಉಳಿದವರ ಪಾರ್ಟಿ ಕಾರ್ಡನ್ನು ಕೇಳೋದನ್ನೇ ಮರೆತುಬಿಟ್ಟ. ನಿಜವಾಗಲೂ ಯೆಹೋವನು ಹೇಗೆಲ್ಲಾ ಸಹಾಯ ಮಾಡುತ್ತಾನೆಂಬ ಅನುಭವ ಮತ್ತೆ ನಮಗಾಯಿತು.

ಪೊಲೀಸರ ಕೈಗೆ ನಂತರ ಸೆರೆಮನೆಗೆ

1984ರ ಫೆಬ್ರವರಿಯಲ್ಲಿ ನಾನು ಸಾಂಬಿಯದಲ್ಲಿರುವ ಬ್ರಾಂಚ್‌ ಆಫೀಸಿಗೆ ತಲಪಬೇಕಿದ್ದ ಸರ್ಕಿಟ್‌ ವರದಿಗಳನ್ನು ತಕ್ಕೊಂಡು ಲಿಲಾಂಗ್ವೇಗೆ ಹೋಗುತ್ತಿದ್ದೆ. ಆಗ ಒಬ್ಬ ಪೊಲೀಸ್‌ ನನ್ನನ್ನು ಹಿಡಿದು ನನ್ನ ಬ್ಯಾಗ್‍ನಲ್ಲಿ ಏನಿದೆಯೆಂದು ಪರಿಶೀಲಿಸಿದ. ಕೆಲವು ಬೈಬಲ್‌ ಸಾಹಿತ್ಯ ಅವನಿಗೆ ಸಿಕ್ಕಿತು. ಹಾಗಾಗಿ ಅವನು ನನ್ನನ್ನು ಪೊಲೀಸ್‌ ಠಾಣೆಗೆ ಕರಕೊಂಡು ಹೋಗಿ ತುಂಬ ಹೊಡೆದ. ನಂತರ ಹಗ್ಗಗಳಿಂದ ನನ್ನನ್ನು ಕಟ್ಟಿಹಾಕಿ ಕಳ್ಳರಿದ್ದ ಕೋಣೆಗೆ ಹಾಕಿದ.

ಮರುದಿನ ಪೊಲೀಸ್‌ ಮುಖ್ಯಾಧಿಕಾರಿ ಬಂದು ನನ್ನನ್ನು ಬೇರೆ ಕೋಣೆಗೆ ಕರಕೊಂಡು ಹೋದ. ಒಂದು ಕಾಗದದಲ್ಲಿ, ‘ಟ್ರಾಫಿಮ್‌ ಆರ್‌. ಸ್ಸಾ೦ಬಾ ಎಂಬ ನಾನು ಬಿಡುಗಡೆ ಆಗಲು ಬಯಸುತ್ತೇನೆ. ಹಾಗಾಗಿ ನಾನು ಇನ್ನು ಮುಂದೆ ಯೆಹೋವನ ಸಾಕ್ಷಿಯಾಗಿರಲ್ಲ’ ಎಂದು ಬರೆದು ನನಗೆ ಸಹಿ ಹಾಕಲು ಕೊಟ್ಟ. ನಾನದಕ್ಕೆ, “ನೀವು ನನ್ನನ್ನು ಕಟ್ಟಿಹಾಕಿದರೂ ಹೊಡೆದರೂ ಸಾಯಿಸಿದರೂ ನಾನು ಮಾತ್ರ ಸಹಿ ಹಾಕಲ್ಲ” ಎಂದೆ. ಆ ಪೊಲೀಸ್‌ ಮುಖ್ಯಾಧಿಕಾರಿಗೆ ಸಿಟ್ಟು ನೆತ್ತಿಗೇರಿತು. ಮುಷ್ಟಿಯಿಂದ ಮೇಜಿನ ಮೇಲೆ ಎಷ್ಟು ಜೋರಾಗಿ ಬಡಿದನೆಂದರೆ ಪಕ್ಕದ ಕೋಣೆಯಲ್ಲಿದ್ದ ಪೊಲೀಸ್‌ ಹೆದರಿ ಏನೋ ಆಗಿರಬೇಕೆಂದು ನೆನಸಿ ಓಡಿ ಬಂದ. ಅವನಿಗೆ ಈ ಮುಖ್ಯಾಧಿಕಾರಿ ಹೇಳಿದನು, “ಯೆಹೋವನ ಸಾಕ್ಷಿಯಾಗಿರಲ್ಲ ಅನ್ನೋ ಕಾಗದಕ್ಕೆ ಇವನು ಸಹಿ ಹಾಕುತ್ತಿಲ್ಲ. ಕರಕೊಂಡು ಹೋಗು ಇವನನ್ನ. ‘ನಾನು ಯೆಹೋವನ ಸಾಕ್ಷಿ’ ಎಂದು ಬರೆಸಿಕೊಂಡು ಸಹಿ ಹಾಕಿಸಿಕೊ. ಲಿಲಾಂಗ್ವೇಗೆ ಕಳುಹಿಸೋಣ.” ಇಷ್ಟೆಲ್ಲ ಆಗಿರೋದು ನನ್ನ ಹೆಂಡತಿಗೆ ಗೊತ್ತಿರಲಿಲ್ಲ. ನನಗೆ ಏನಾಯಿತೋ ಎಂದು ಚಿಂತೆಗೀಡಾಗಿದ್ದಳು. ನಾಲ್ಕು ದಿನದ ನಂತರ ಸಹೋದರರಿಗೆ ಗೊತ್ತಾದಾಗ ಅವರು ನನ್ನ ಹೆಂಡತಿಗೆ ತಿಳಿಸಿದರು.

ಲಿಲಾಂಗ್ವೇ ಪೊಲೀಸ್‌ ಠಾಣೆಯಲ್ಲಿ ನನಗೆ ದಯೆ ತೋರಿಸಿದರು. ಅಲ್ಲಿನ ಪೊಲೀಸ್‌ ಮುಖ್ಯಾಧಿಕಾರಿ ನನ್ನನ್ನು ನೋಡಿ, “ಈ ತಟ್ಟೆಯಲ್ಲಿ ಅನ್ನ ಇದೆ, ಊಟಮಾಡಿ. ನೀವೇನು ಬೇರೆಯವರ ಹಾಗೆ ಕಳ್ಳತನ ಮಾಡಿ ಜೈಲಿಗೆ ಬಂದಿಲ್ಲ, ದೇವರ ವಾಕ್ಯಕ್ಕಾಗಿ ಬಂದಿದ್ದೀರ” ಎಂದು ಹೇಳಿದನು. ಬಳಿಕ ಅವರು ನನ್ನನ್ನು ಕಾಚೆರೆ ಸೆರೆಮನೆಗೆ ಕಳುಹಿಸಿದನು. ಐದು ತಿಂಗಳು ನಾನಲ್ಲಿದ್ದೆ.

ಅಲ್ಲಿನ ಸೆರೆಮನೆಯ ಮುಖ್ಯಾಧಿಕಾರಿಗೆ ನನ್ನನ್ನು ನೋಡಿ ಸಂತೋಷ ಆಯಿತು. ಏಕೆಂದರೆ ಕೈದಿಗಳಿಗಾಗಿ ಪ್ರತಿ ವಾರ ಏರ್ಪಡಿಸಲಾಗಿದ್ದ ಕೂಟಗಳಲ್ಲಿ ಪಾಸ್ಟರ್‌ ಆಗಿ ಬೋಧಿಸಲು ಅವರಿಗೆ ಯಾರಾದರೂ ಬೇಕಿದ್ದರು. ನಾನು ಹೋಗುವುದಕ್ಕೆ ಮುಂಚೆ ಅಲ್ಲಿ ಪಾಸ್ಟರ್‌ ಆಗಿದ್ದವನು ಅವನ ಚರ್ಚ್ನಿಂದಲೇ ಕಳ್ಳತನ ಮಾಡಿ ಜೈಲಿಗೆ ಬಂದಿದ್ದ. ಹಾಗಾಗಿ ಅವನನ್ನು ತೆಗೆದು ಹಾಕಿ ಬೈಬಲಿನ ಬಗ್ಗೆ ಬೋಧಿಸಲು ನನ್ನನ್ನು ನೇಮಿಸಿದನು.

ಆದರೆ ಪರಿಸ್ಥಿತಿ ಇದೇ ರೀತಿ ಇರಲಿಲ್ಲ. ಸ್ವಲ್ಪ ದಿನದ ನಂತರ ಸೆರೆಮನೆಯ ಅಧಿಕಾರಿಗಳು ನನ್ನನ್ನು ಕರೆದು ಮಲಾವಿಯಲ್ಲಿ ಎಷ್ಟು ಮಂದಿ ಯೆಹೋವನ ಸಾಕ್ಷಿಗಳು ಇದ್ದಾರೆ ಎಂದು ವಿಚಾರಣೆ ಮಾಡಿದರು. ಉತ್ತರ ಕೊಡದಿದ್ದಾಗ ನನಗೆ ಪ್ರಜ್ಞೆ ತಪ್ಪುವ ವರೆಗೂ ಹೊಡೆದರು. ಇನ್ನೊಂದು ಸಲ ನನ್ನನ್ನು ಕರೆದು ನಮ್ಮ ಮುಖ್ಯ ಕಾರ್ಯಾಲಯ ಎಲ್ಲಿದೆ ಎಂದು ಕೇಳಿದರು. ನಾನವರಿಗೆ, “ಓ ಇಷ್ಟು ಚಿಕ್ಕ ವಿಷ್ಯನಾ, ಹೇಳ್ತೇನೆ” ಎಂದೆ. ಅವರಿಗೆ ಖುಷಿಯೋ ಖುಷಿ. ನಾನು ಹೇಳೋದನ್ನು ರೆಕಾರ್ಡ್‌ ಮಾಡಲು ಟೇಪ್‌ ರೆಕಾರ್ಡರನ್ನು ಆನ್‌ ಮಾಡಿದರು. ಆಗ ನಾನು ‘ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯ ಎಲ್ಲಿದೆ ಎಂದು ಬೈಬಲಿನಲ್ಲಿದೆ’ ಎಂದೆ. ಅವರಿಗೆ ತುಂಬ ಆಶ್ಚರ್ಯ ಆಯಿತು. ‘ಬೈಬಲಿನಲ್ಲಾ? ಎಲ್ಲಿದೆ ಹೇಳು’ ಎಂದರು.

ಯೆಶಾಯ 43:12ರಲ್ಲಿದೆ” ಎಂದೆ. ಅವರು ಬೈಬಲ್‌ ತೆರೆದು ಜಾಗ್ರತೆಯಿಂದ ಓದಿದರು. ‘ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು ಎಂಬುದೇ ಯೆಹೋವನ ಮಾತು’ ಎಂದು ಓದಿದರು. ಅರ್ಥ ಆಗದೆ ಮತ್ತೆ ಎರಡು ಸಲ ಓದಿದರು. ಆಮೇಲೆ ನನ್ನನ್ನು ನೋಡಿ ಹೀಗೆ ಕೇಳಿದರು “ಅದು ಹೇಗೆ? ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯ ಅಮೆರಿಕದಲ್ಲಿ ಅಲ್ಲವಾ ಇರೋದು? ಬೈಬಲಿನಲ್ಲಿ ಹೇಗಿರುತ್ತೆ?” ಎಂದರು. ನಾನದಕ್ಕೆ “ಅಮೆರಿಕದಲ್ಲಿರುವ ಯೆಹೋವನ ಸಾಕ್ಷಿಗಳು ಕೂಡ ತಮ್ಮ ಮುಖ್ಯ ಕಾರ್ಯಾಲಯ ಎಲ್ಲಿದೆ ಅಂತ ತಿಳಿದುಕೊಳ್ಳಲು ಈ ವಚನ ನೋಡುತ್ತಾರೆ” ಎಂದೆ. ಅವರಿಗೆ ಬೇಕಾದ ಉತ್ತರ ನಾನು ಕೊಡದಿದ್ದ ಕಾರಣ 1984ರ ಜುಲೈಯಲ್ಲಿ ನನ್ನನ್ನು ಲಿಲಾಂಗ್ವೇಯ ಉತ್ತರಕ್ಕಿದ್ದ ಜಾಲೆಕಾ ಎಂಬ ಹಳ್ಳಿಯಲ್ಲಿನ ಸೆರೆಮನೆಗೆ ವರ್ಗಾಯಿಸಿದರು.

ತೊಂದರೆಯ ಸಮಯದಲ್ಲೂ ಆಶೀರ್ವಾದಗಳು

ಜಾಲೆಕಾ ಸೆರೆಮನೆಯಲ್ಲಿ ಈಗಾಗಲೇ 81 ಸಾಕ್ಷಿಗಳಿದ್ದರು. ಒಂದು ಕೋಣೆಯಲ್ಲಿ 300 ಮಂದಿ ಖೈದಿಗಳನ್ನು ಒಟ್ಟಿಗೆ ಹಾಕಿದ್ದರು. ಮಲಗಲು ಜಾಗ ಇರಲಿಲ್ಲ. ನೆಲದ ಮೇಲೆ ಒಬ್ಬರಿಗೊಬ್ಬರು ಅಂಟಿಕೊಂಡು ಮಲಗುತ್ತಿದ್ದೆವು. ಸ್ವಲ್ಪ ಸಮಯದ ನಂತರ ಬೈಬಲ್‌ ವಚನವನ್ನು ಚರ್ಚಿಸಲಿಕ್ಕಾಗಿ ಸಾಕ್ಷಿಗಳೆಲ್ಲರು ಚಿಕ್ಕ ಚಿಕ್ಕ ಗುಂಪುಗಳನ್ನು ಮಾಡಿಕೊಂಡೆವು. ಪ್ರತಿದಿನ ಒಬ್ಬೊಬ್ಬರು ಒಂದೊಂದು ವಚನ ಹೇಳುತ್ತಿದ್ದರು. ಅದನ್ನು ನಾವು ಚರ್ಚಿಸುತ್ತಿದ್ದೆವು. ಅದು ನಮ್ಮಲ್ಲಿ ಹೊಸ ಬಲವನ್ನು ತುಂಬಿತು.

ಆಗ ಸೆರೆಮನೆಯ ಮುಖ್ಯಾಧಿಕಾರಿ ಸಾಕ್ಷಿಗಳೆಲ್ಲರನ್ನು ಪ್ರತ್ಯೇಕ ಕೋಣೆಯಲ್ಲಿ ಇಟ್ಟರು. ಅಲ್ಲದೆ ಒಬ್ಬ ಕಾವಲುಗಾರ ಗುಟ್ಟಾಗಿ ನಮಗೆ ಹೀಗೆ ಹೇಳಿದ: “ಸರ್ಕಾರ ನಿಮ್ಮನ್ನು ದ್ವೇಷಿಸೋದಿಲ್ಲ. ಆದರೂ ನಿಮ್ಮನ್ನು ಯಾಕೆ ಇಲ್ಲಿಟ್ಟಿದ್ದಾರೆ ಗೊತ್ತಾ? ಯುವಕ ಸಂಘದವರು ಎಲ್ಲಿ ನಿಮ್ಮನ್ನು ಕೊಂದು ಬಿಡುತ್ತಾರೋ ಎಂಬ ಭಯದಿಂದ. ಅಲ್ಲದೆ ನೀವು ಮುಂದೆ ಏನೋ ಯುದ್ಧ ಆಗಲಿಕ್ಕಿದೆ ಅಂತ ಬೇರೆ ಸಾರುತ್ತಿದ್ದೀರಲ್ಲ. ಆ ಯುದ್ಧ ನಡೆಯುವಾಗ ಸೈನಿಕರೆಲ್ಲ ಹೆದರಿ ಓಡಿಹೋದರೆ ಎಂಬ ಭಯ ಸರ್ಕಾರಕ್ಕಿದೆ.”

ಸಹೋದರರನ್ನು ಕೋರ್ಟ್ ವಿಚಾರಣೆಯ ನಂತರ ಕರಕೊಂಡು ಹೋಗುತ್ತಿರುವುದು

1984ರ ಅಕ್ಟೋಬರ್‌ನಲ್ಲಿ ಸಾಕ್ಷಿಗಳಾದ ನಮ್ಮೆಲ್ಲರನ್ನು ಕೋರ್ಟ್ಗೆ ಹಾಜರುಪಡಿಸಿದರು. ನಮ್ಮೆಲ್ಲರಿಗೂ 2 ವರ್ಷ ಸೆರೆವಾಸವನ್ನು ವಿಧಿಸಿದರು. ಮತ್ತೆ ನಮ್ಮನ್ನು ಮುಂಚಿನಂತೆ ಸಾಕ್ಷಿಗಳಲ್ಲದ ಜನರೊಟ್ಟಿಗೆ ಸೆರೆಯಲ್ಲಿಟ್ಟರು. ಆದರೆ ಸೆರೆಮನೆಯ ಮುಖ್ಯಾಧಿಕಾರಿ ಅಲ್ಲಿದ್ದ ಬೇರೆಲ್ಲರಿಗೆ ಹೀಗೆ ಹೇಳಿದರು: “ಯೆಹೋವನ ಸಾಕ್ಷಿಗಳು ಸಿಗರೇಟು ಸೇದುವುದಿಲ್ಲ. ಹಾಗಾಗಿ ಕಾವಲುಗಾರರೇ, ಸಿಗರೇಟು ಕೊಡಿ ಅಂತ ಅವರ ಹತ್ತಿರ ಕೇಳಬಾರದು. ನಿಮ್ಮ ಸಿಗರೇಟನ್ನು ಹೊತ್ತಿಸಲು ಕೆಂಡ ತಂದುಕೊಡಿ ಎಂದೂ ಹೇಳಬಾರದು. ಅವರೆಲ್ಲರೂ ದೇವರ ಜನರು! ದಿನಕ್ಕೆ ಎರಡು ಹೊತ್ತು ಊಟ ಅವರಿಗೆ ಕೊಡಬೇಕು ಯಾಕೆಂದರೆ ಯೆಹೋವನ ಸಾಕ್ಷಿಗಳು ಇಲ್ಲಿರೋದು ಏನೋ ಅಪರಾಧ ಮಾಡಿದ್ದಕ್ಕಾಗಿ ಅಲ್ಲ. ಅವರಿಗೆ ಬೈಬಲಿನಲ್ಲಿರುವ ನಂಬಿಕೆಯಿಂದಾಗಿ.”

ಯೆಹೋವನ ಸಾಕ್ಷಿಗಳಾಗಿ ನಮಗಿದ್ದ ಒಳ್ಳೇ ಹೆಸರಿನಿಂದ ಬೇರೆ ವಿಧದಲ್ಲೂ ಪ್ರಯೋಜನವಾಯಿತು. ಅಲ್ಲಿ ಕತ್ತಲೆಯಾದ ಮೇಲೆ ಅಥವಾ ಮಳೆ ಬರುವಾಗ ಕೈದಿಗಳಿಗೆ ಆಚೀಚೆ ಓಡಾಡಲು ಅನುಮತಿ ಇರಲಿಲ್ಲ. ಆದರೆ ಸಾಕ್ಷಿಗಳಿಗೆ ಕಟ್ಟಡದಿಂದ ಹೊರಗೆ ಯಾವಾಗ ಬೇಕಾದರೂ ಹೋಗಿ ಬರಲು ಅನುಮತಿ ಇತ್ತು. ಏಕೆಂದರೆ ನಾವು ತಪ್ಪಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಅವರಿಗಿತ್ತು. ಒಮ್ಮೆ ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮನ್ನು ಕಾಯುತ್ತಿದ್ದ ಕಾವಲುಗಾರನಿಗೆ ಹುಷಾರಿಲ್ಲದೆ ಹೋಯಿತು. ನಾವು ಅವನನ್ನು ಎತ್ತಿಕೊಂಡು ಸೆರೆಮನೆಯ ಕಂಪೌಂಡಿಗೆ ಬಂದೆವು. ಅಲ್ಲಿ ಅವನಿಗೆ ಔಷಧಿ ಕೊಡಲಾಯಿತು. ಆದುದರಿಂದ ಸೆರೆಮನೆಯ ಅಧಿಕಾರಿಗಳಿಗೆ ನಮ್ಮ ಮೇಲೆ ಭರವಸೆ. ಹೀಗೆ ನಮ್ಮನ್ನು ಸೆರೆಹಿಡಿದ ಜನರ ಬಾಯಿಂದಲೇ ಯೆಹೋವನ ಹೆಸರಿಗೆ ಮಹಿಮೆ ಸಲ್ಲುವುದನ್ನು ನೋಡುವುದು ನಿಜಕ್ಕೂ ಒಂದು ದೊಡ್ಡ ಆಶೀರ್ವಾದ.—1 ಪೇತ್ರ 2:12. *

ಅನುಕೂಲವಾದ ಸಮಯ ಪುನಃ ಒಮ್ಮೆ

1985ರ ಮೇ 11ರಂದು ಜಾಲೆಕಾ ಸೆರೆಮನೆಯಿಂದ ನಾನು ಬಿಡುಗಡೆಯಾದೆ. ತುಂಬ ಸಮಯದ ನಂತರ ಮತ್ತೆ ಹೆಂಡತಿ ಮಕ್ಕಳನ್ನು ನೋಡಿ ಬಹಳ ಖುಷಿಯಾಯಿತು. ಅತಿ ಕಷ್ಟಕರವಾದ ಆ ಸಮಯದಲ್ಲಿ ನಂಬಿಗಸ್ತರಾಗಿ ಉಳಿಯಲು ಯೆಹೋವನು ಸಹಾಯ ಮಾಡಿದ್ದಕ್ಕಾಗಿ ನಾವು ಆತನಿಗೆ ಕೃತಜ್ಞತೆ ಹೇಳುತ್ತೇವೆ. ನಾವು ಅನುಭವಿಸಿದ ಕಷ್ಟಗಳ ಬಗ್ಗೆ ಯೋಚಿಸುವಾಗ ಅಪೊಸ್ತಲ ಪೌಲನಂತೆ ನಮಗನಿಸುತ್ತದೆ: “ಸಹೋದರರೇ, ನಾವು . . . ಅನುಭವಿಸಿದ ಸಂಕಟದ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬೇಕೆಂದು ನಾವು ಬಯಸುವುದಿಲ್ಲ . . . ನಮ್ಮ ಜೀವದ ವಿಷಯದಲ್ಲಿಯೇ ನಾವು ತುಂಬ ಅನಿಶ್ಚಿತರಾಗಿದ್ದೆವು. ವಾಸ್ತವದಲ್ಲಿ, ನಮಗೆ ಮರಣದಂಡನೆ ವಿಧಿಸಲ್ಪಟ್ಟಿದೆಯೋ ಎಂಬಂಥ ಅನಿಸಿಕೆಯೂ ಆಯಿತು. ಇದು ನಾವು ನಮ್ಮ ಮೇಲಲ್ಲ, ಸತ್ತವರನ್ನು ಎಬ್ಬಿಸುವಂಥ ದೇವರ ಮೇಲೆ ಭರವಸೆಯಿಡುವಂತೆ ಸಂಭವಿಸಿತು. ಮರಣದಂಥ ದೊಡ್ಡ ಸಂಗತಿಯಿಂದ ಆತನು ನಮ್ಮನ್ನು ಕಾಪಾಡಿದನು.”—2 ಕೊರಿಂ. 1:8-10.

2004ರಲ್ಲಿ ರಾಜ್ಯ ಸಭಾಗೃಹದ ಮುಂದೆ ಸಹೋದರ ಸ್ಸಾ೦ಬಾ ಮತ್ತು ಅವರ ಪತ್ನಿ ಲಿಡಾಸೀ

ನಿಜ, ನಾವು ಬದುಕಿ ಉಳಿಯುತ್ತೇವೆಂಬ ನಂಬಿಕೆಯನ್ನೇ ಕೆಲವೊಮ್ಮೆ ಕಳೆದುಕೊಂಡಿದ್ದೆವು. ಅಂಥ ಕಷ್ಟದ ಸಮಯದಲ್ಲಿ ನಮಗೆ ಧೈರ್ಯ, ವಿವೇಕವನ್ನು ಕೊಡುವಂತೆ ಯಾವಾಗಲೂ ಯೆಹೋವನಲ್ಲಿ ಪ್ರಾರ್ಥಿಸಿದೆವು. ಯೆಹೋವನ ಮಹಾ ನಾಮಕ್ಕೆ ಸದಾ ಮಹಿಮೆಯನ್ನು ತರುವಂತೆ ನಡೆದುಕೊಳ್ಳುತ್ತಾ ದೀನರಾಗಿ ಉಳಿಯಲು ಸಹಾಯ ಮಾಡುವಂತೆ ಬೇಡಿದೆವು.

ಅನುಕೂಲವಾದ ಸಮಯದಲ್ಲೂ ತೊಂದರೆಯ ಸಮಯದಲ್ಲೂ ನಾವು ಮಾಡಿದ ಸೇವೆಯನ್ನು ಯೆಹೋವನು ಆಶೀರ್ವದಿಸಿದನು. ಇಸವಿ 2000ದಲ್ಲಿ ಲಿಲಾಂಗ್ವೇಯಲ್ಲಿ ಬ್ರಾಂಚ್‌ ಆಫೀಸನ್ನು ಕಟ್ಟಿಮುಗಿಸಲಾಯಿತು. ಮಾತ್ರವಲ್ಲ ಮಲಾವಿಯ ಬೇರೆ ಬೇರೆ ಕಡೆಗಳಲ್ಲಿ 1,000ಕ್ಕೂ ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟಲಾಗಿದೆ. ಇದನ್ನೆಲ್ಲ ನೋಡುವಾಗ ಮೈ ಜುಮ್ಮೆನ್ನುತ್ತದೆ. ಒಂದು ಕನಸೇನೋ ಅನಿಸುತ್ತದೆ. ಮಲಾವಿಯಲ್ಲಿ ಇಷ್ಟೊಂದು ಪ್ರಗತಿ ಆಗಿರುವುದು ಯೆಹೋವ ದೇವರ ಆಶೀರ್ವಾದದಿಂದಲೇ. *

^ ಪ್ಯಾರ. 7 ಅಪ್ರಾಪ್ತ ವಯಸ್ಸಿನ ಮಕ್ಕಳಿರುವ ಸಹೋದರರಿಗೆ ಈಗ ಸರ್ಕಿಟ್‌ ಸೇವೆ ಮಾಡುವ ನೇಮಕ ಕೊಡಲಾಗುವುದಿಲ್ಲ.

^ ಪ್ಯಾರ. 30 ಮಲಾವಿಯಲ್ಲಿ ಸಾಕ್ಷಿಗಳು ಎಷ್ಟೆಲ್ಲ ಹಿಂಸೆಯನ್ನು ಅನುಭವಿಸಿದರು ಎಂದು ತಿಳಿಯಲು 1999ರ ಯಿಯರ್‌ಬುಕ್‌ ಪುಟ 171-223 ನೋಡಿ.

^ ಪ್ಯಾರ. 34 ಈ ಲೇಖನವು ಪ್ರಕಟಿಸಲು ಸಿದ್ಧವಾಗುತ್ತಿದ್ದಾಗ 83ರ ಪ್ರಾಯದಲ್ಲಿದ್ದ ಸಹೋದರ ಸ್ಸಾ೦ಬಾ ತೀರಿಹೋದರು.