ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವಾಗಲೂ ಯೆಹೋವನ ಮೇಲೆ ಭರವಸೆ ಇಡಿ!

ಯಾವಾಗಲೂ ಯೆಹೋವನ ಮೇಲೆ ಭರವಸೆ ಇಡಿ!

“ಜನರೇ, ಯಾವಾಗಲೂ ಆತನನ್ನೇ ನಂಬಿ.”—ಕೀರ್ತ. 62:8.

1-3. ಯೆಹೋವನಲ್ಲಿ ಭರವಸೆ ಇಡಬಹುದೆಂದು ಪೌಲನಿಗೆ ಮನದಟ್ಟಾಗಲು ಕಾರಣವೇನು? (ಲೇಖನದ ಆರಂಭದ ಚಿತ್ರ ನೋಡಿ.)

ನೀವು ಮೊದಲನೇ ಶತಮಾನದ ರೋಮಿನಲ್ಲಿರುವ ಕ್ರೈಸ್ತರಾಗಿದ್ದೀರಿ ಎಂದು ನೆನಸಿ. ನಿಮಗೆ ಅಪಾಯ ತಪ್ಪಿದ್ದಲ್ಲ. ಯಾಕೆಂದರೆ ಅಲ್ಲಿನ ಜನರು ಕ್ರೈಸ್ತರನ್ನು ಕ್ರೂರವಾಗಿ ಹಿಂಸಿಸುತ್ತಿದ್ದಾರೆ. ‘ಜನರನ್ನು ಹಗೆ ಮಾಡುವವರು, ಕ್ರಿ.ಶ. 64ರಲ್ಲಿ ರೋಮ್‌ ನಗರಕ್ಕೆ ಬೆಂಕಿ ಹೊತ್ತಿಸಿದವರು ಇವರೇ’ ಎಂದು ರೋಮಿನವರು ಕ್ರೈಸ್ತರ ಮೇಲೆ ಆರೋಪ ಹಾಕುತ್ತಿದ್ದಾರೆ. ಅನೇಕ ಕ್ರೈಸ್ತ ಸಹೋದರ ಸಹೋದರಿಯರನ್ನು ಬಂಧಿಸಿದ್ದಾರೆ. ಕೆಲವರನ್ನು ಕ್ರೂರ ಪ್ರಾಣಿಗಳಿಗೆ ಎಸೆಯಲಾಗಿದ್ದು, ಆ ಪ್ರಾಣಿಗಳು ಅವರನ್ನು ಚಿಂದಿಚಿಂದಿ ಮಾಡಿವೆ. ಇನ್ನೂ ಕೆಲವರನ್ನು ರಾತ್ರಿ ಸಮಯದಲ್ಲಿ ಬೆಳಕಿಗಾಗಿ ಕಂಬಕ್ಕೆ ಜಡಿದು ಬೆಂಕಿ ಹಚ್ಚಿ ಉರಿಸಲಾಗಿದೆ. ಇವತ್ತಲ್ಲ ನಾಳೆ ಇವೆಲ್ಲದ್ದರಲ್ಲಿ ಯಾವುದಾದರೂ ಒಂದು ನಿಮಗೂ ಆಗುತ್ತದೆ ಎಂದು ನಿಮಗೆ ಖಂಡಿತ ಗೊತ್ತು.

2 ಅಪೊಸ್ತಲ ಪೌಲನು ಜೈಲಿನಲ್ಲಿದ್ದಾಗ ಹೊರಗೆ ಪರಿಸ್ಥಿತಿ ಹೀಗೇ ಇತ್ತು. ಈ ಸಾರಿ ತನ್ನ ಕ್ರೈಸ್ತ ಸಹೋದರರು ತನಗೆ ಸಹಾಯ ಮಾಡುವರಾ ಎಂದವನು ಯೋಚಿಸಿದ್ದಿರಬೇಕು. ಯಾಕೆಂದರೆ ಇದಕ್ಕಿಂತ ಮುಂಚೆ ತನಗೆ ಯಾರೂ ಸಹಾಯ ಮಾಡಿರದಿದ್ದ ಸಂದರ್ಭವೊಂದು ಪೌಲನಿಗೆ ನೆನಪಾಯಿತು. ಆಗ ಕರ್ತನಾದ ಯೇಸುವಿನ ಮೂಲಕ ಯೆಹೋವನು ಸಹಾಯ ಮಾಡಿದನು. ಪೌಲನು ಬರೆದದ್ದು: “ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನಲ್ಲಿ ಶಕ್ತಿಯನ್ನು ತುಂಬಿಸಿದನು.” ಪೌಲನಿಗೆ ಬೇಕಾದ ಶಕ್ತಿಯನ್ನು ಯೇಸು ಕೊಟ್ಟಿದ್ದನು. “ನಾನು ಸಿಂಹದ ಬಾಯಿಂದ ಬಿಡಿಸಲ್ಪಟ್ಟೆನು” ಎಂದು ಸಹ ಪೌಲನು ಬರೆದನು.—2 ತಿಮೊ. 4:16, 17. * (ಪಾದಟಿಪ್ಪಣಿ ನೋಡಿ.)

3 ಯೆಹೋವನು ತನಗೆ ಹಿಂದೆಲ್ಲಾ ಹೇಗೆ ಸಹಾಯಮಾಡಿದ್ದನು ಎಂದು ಪೌಲ ನೆನಪಿಸಿಕೊಂಡನು. ಆದ್ದರಿಂದ ಈ ಸನ್ನಿವೇಶವನ್ನು ಮತ್ತು ಮುಂದೆ ಬರುವ ಯಾವುದೇ ಕಷ್ಟಗಳನ್ನು ಎದುರಿಸಲು ಯೆಹೋವನು ಸಹಾಯ ಮಾಡುವನೆಂದು ಅವನಿಗೆ ಮನದಟ್ಟಾಗಿತ್ತು. ಅವನಿಗೆ ಅದರಲ್ಲಿ ಎಷ್ಟು ನಂಬಿಕೆ ಇತ್ತೆಂದರೆ ‘ಕರ್ತನು ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಬಿಡಿಸುವನು’ ಎಂದು ಬರೆದನು. (2 ತಿಮೊ. 4:18) ತನ್ನ ಸಹೋದರರು ಸಹಾಯ ಮಾಡಲಾಗದ ಪರಿಸ್ಥಿತಿಯಲ್ಲೂ ಯೆಹೋವ ಮತ್ತು ಯೇಸು ಸಹಾಯ ಮಾಡುವರೆಂಬ ಭರವಸೆ ಇಡಬಹುದೆಂದು ಪೌಲನು ತಿಳಿದುಕೊಂಡಿದ್ದನು. ಇದರ ಬಗ್ಗೆ ಅವನಿಗೆ ಸ್ವಲ್ಪವೂ ಸಂಶಯವಿರಲಿಲ್ಲ.

ಯೆಹೋವನಲ್ಲಿ ಭರವಸೆ ಇಡಲು ನಮಗಿರುವ ಅವಕಾಶಗಳು

4, 5. (ಎ) ನಿಮಗೆ ಸಹಾಯ ಬೇಕಾದಾಗೆಲ್ಲ ಯಾರು ಮಾತ್ರ ಅದನ್ನು ಕೊಡಸಾಧ್ಯ? (ಬಿ) ಯೆಹೋವನೊಟ್ಟಿಗಿನ ನಿಮ್ಮ ಸಂಬಂಧವನ್ನು ನೀವು ಹೇಗೆ ಗಟ್ಟಿಮಾಡಬಹುದು?

4 ನೀವು ದೊಡ್ಡ ಸಮಸ್ಯೆಯಲ್ಲಿದ್ದಾಗ ಸಹಾಯ ಮಾಡಲು ಯಾರೂ ಇಲ್ಲ ಎಂದು ಯಾವತ್ತಾದರೂ ಅನಿಸಿದೆಯಾ? ನೀವು ಕೆಲಸ ಕಳೆದುಕೊಂಡಿರಬಹುದು ಅಥವಾ ಶಾಲೆಯಲ್ಲಿ ಒತ್ತಡಗಳನ್ನು ಎದುರಿಸಿರಬಹುದು. ನೀವು ಕಾಯಿಲೆ ಬಿದ್ದಿರಬಹುದು ಅಥವಾ ಬೇರಾವುದೋ ಕಷ್ಟದ ಪರಿಸ್ಥಿತಿಯಲ್ಲಿದ್ದಿರಬಹುದು. ಆಗ ಬೇರೆಯವರ ಸಹಾಯ ಕೇಳಿದ್ದರೂ ಅವರಿಂದ ನಿಮಗೆ ಬೇಕಾದ ಸಹಾಯ ಸಿಗದಿದ್ದಾಗ ಬೇಜಾರು ಆಗಿದ್ದಿರಬಹುದಲ್ಲವಾ? ಕೆಲವು ಸಮಸ್ಯೆಗಳಿಗಂತೂ ಮಾನವರಿಂದ ಸಹಾಯ ಮಾಡಲಿಕ್ಕೇ ಆಗುವುದಿಲ್ಲ. ಆಗೇನು ಮಾಡುತ್ತೀರಾ? “ಯೆಹೋವನಲ್ಲಿ ಭರವಸವಿಡು” ಎನ್ನುತ್ತದೆ ಬೈಬಲ್‌. (ಜ್ಞಾನೋ. 3:5, 6) ಆದರೆ ಯೆಹೋವನು ಸಹಾಯ ಮಾಡುತ್ತಾನೆ ಅನ್ನೋ ಮಾತು ಖಂಡಿತನಾ? ಹೌದು. ಯೆಹೋವನು ತನ್ನ ಜನರಿಗೆ ಸಹಾಯ ಮಾಡೇ ಮಾಡುತ್ತಾನೆಂದು ನಮಗೆ ಮನದಟ್ಟು ಮಾಡುವ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ.

5 ನಿಮಗೆ ಬೇಕಾದ ಸಹಾಯ ಬೇರೆಯವರು ಕೊಡಲಿಲ್ಲ ಎಂದು ಮನಸ್ಸಲ್ಲೇ ಕುದಿಯಬೇಡಿ. ಬದಲಿಗೆ ಆ ಸಮಸ್ಯೆ ನೀವು ಯೆಹೋವನಲ್ಲಿ ಪೂರ್ಣ ಭರವಸೆ ಇಡಲು ಒಂದು ಅವಕಾಶವಾಗಿದೆ ಎಂದು ಪೌಲನಂತೆ ನೆನಸಿ. ನಿಮ್ಮ ಬಗ್ಗೆ ಯೆಹೋವನು ಎಷ್ಟು ಕಾಳಜಿ ವಹಿಸುತ್ತಾನೆಂದು ನೀವೇ ನೋಡಲು ಇದೊಂದು ಅವಕಾಶವಾಗಿದೆ. ಆಗ ಯೆಹೋವನ ಮೇಲೆ ನಿಮಗಿರುವ ಭರವಸೆ ಹೆಚ್ಚಾಗುತ್ತದೆ. ಆತನೊಂದಿಗಿನ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.

ಯೆಹೋವನಲ್ಲಿ ನಾವು ಭರವಸೆ ಇಡಬೇಕು

6. ನಿಮಗೊಂದು ದೊಡ್ಡ ಸಮಸ್ಯೆ ಇರುವಾಗ ಯೆಹೋವನಲ್ಲಿ ಭರವಸೆ ಇಡುವುದು ಸುಲಭವಲ್ಲ ಯಾಕೆ?

6 ತುಂಬ ಚಿಂತೆ ಉಂಟುಮಾಡುವ ಒಂದು ದೊಡ್ಡ ಸಮಸ್ಯೆ ನಿಮಗಿರಬಹುದು. ನಿಮ್ಮಿಂದ ಆದದ್ದೆಲ್ಲವನ್ನು ಮಾಡಿದ್ದೀರಿ. ಪ್ರಾರ್ಥನೆಯಲ್ಲಿ ಯೆಹೋವನ ಸಹಾಯ ಕೂಡ ಕೇಳಿದ್ದೀರಿ. ಆತನು ಸಹಾಯ ಮಾಡುತ್ತಾನೆಂದು ನೀವು ನಂಬುವುದರಿಂದ ಅಥವಾ ಭರವಸೆ ಇಡುವುದರಿಂದ ಈಗ ನೆಮ್ಮದಿಯಿಂದ ಇರಬಹುದಾ? ಹೌದು! (ಕೀರ್ತನೆ 62:8; 1 ಪೇತ್ರ 5:7 ಓದಿ.) ಯೆಹೋವನೊಟ್ಟಿಗೆ ಒಳ್ಳೇ ಸಂಬಂಧ ಇರಬೇಕೆಂದರೆ ಆತನಲ್ಲಿ ಭರವಸೆಯಿಡಲು ಕಲಿಯುವುದು ತುಂಬ ಮುಖ್ಯ. ಇದು ಹೇಳಿದಷ್ಟು ಸುಲಭವಲ್ಲ. ಯಾಕೆ? ಒಂದು ಕಾರಣವೇನೆಂದರೆ ಯೆಹೋವನು ಯಾವಾಗಲೂ ನಿಮ್ಮ ಪ್ರಾರ್ಥನೆಗೆ ತಕ್ಷಣ ಉತ್ತರ ಕೊಡಲಿಕ್ಕಿಲ್ಲ.—ಕೀರ್ತ. 13:1, 2; 74:10; 89:46; 90:13; ಹಬ. 1:2.

7. ಯೆಹೋವನು ಯಾವಾಗಲೂ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ತರ ಕೊಡುವುದಿಲ್ಲ ಏಕೆ?

7 ಯೆಹೋವನು ಯಾವಾಗಲೂ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ತರ ಕೊಡುವುದಿಲ್ಲ ಏಕೆ? ಏಕೆಂದರೆ ಯೆಹೋವನು ನಮ್ಮ ತಂದೆ ನಾವಾತನ ಮಕ್ಕಳು ಎಂದು ಬೈಬಲಲ್ಲಿದೆ. (ಕೀರ್ತ. 103:13) ಒಬ್ಬ ಮಾನವ ತಂದೆ ಮಗ ಕೇಳಿದ್ದನೆಲ್ಲ ಕೊಡುವುದಿಲ್ಲ ಅಥವಾ ಕೇಳಿದ ಕೂಡಲೇ ಕೊಡುವುದಿಲ್ಲ. ಯಾಕೆಂದರೆ ಮಗ ಈಗ ಬೇಕು ಅಂತ ಕೇಳಿದ್ದನ್ನು ಆಮೇಲೆ ಬೇಡ ಅನ್ನಬಹುದೆಂದು ಅಪ್ಪನಿಗೆ ಗೊತ್ತಿರುತ್ತದೆ. ಮಗನಿಗೆ ಯಾವುದು ಒಳ್ಳೇದು, ಅದನ್ನು ಕೊಟ್ಟರೆ ಬೇರೆಯವರ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂದೂ ಅಪ್ಪನಿಗೆ ಗೊತ್ತು. ಮಗನಿಗೆ ಏನು ಅಗತ್ಯ, ಅದನ್ನು ಯಾವಾಗ ಕೊಡಿಸಬೇಕೆಂದು ಅವನಿಗೆ ಚೆನ್ನಾಗಿ ಗೊತ್ತು. ಕೇಳಿದ್ದನ್ನೆಲ್ಲಾ ತಕ್ಷಣ ಕೊಡಿಸುತ್ತಾ ಇದ್ದರೆ ಅಪ್ಪ ಮಗನಿಗೆ ದಾಸನಾಗಿ ಬಿಡುತ್ತಾನೆ. ಅದೇ ರೀತಿಯಲ್ಲಿ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ. ವಿವೇಕವುಳ್ಳ ಸೃಷ್ಟಿಕರ್ತನಾದ ಆತನಿಗೆ ನಮಗೆ ಯಾವಾಗ ಏನು ಬೇಕು ಅಂತ ಚೆನ್ನಾಗಿ ಗೊತ್ತು. ನಾವು ಕೇಳಿದ್ದನ್ನು ಕೊಡಲು ಸರಿಯಾದ ಸಮಯ ಯಾವುದು ಎಂದು ಆತನು ನಿರ್ಣಯಿಸುತ್ತಾನೆ. ಆದ್ದರಿಂದ ಯೆಹೋವನು ಹೇಗೆ ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆಂದು ನೋಡಲು ತಾಳ್ಮೆಯಿಂದ ಕಾಯುವುದು ಉತ್ತಮ.—ಯೆಶಾಯ 29:16; 45:9 ಹೋಲಿಸಿ.

8. ನಾವೇನು ತಾಳಿಕೊಳ್ಳಬಹುದು ಎಂಬುದರ ಬಗ್ಗೆ ಯೆಹೋವನು ಯಾವ ಮಾತು ಕೊಡುತ್ತಾನೆ?

8 ನೆನಪಿಡಿ, ಒಬ್ಬ ವ್ಯಕ್ತಿ ಏನು ಸಹಿಸಬಲ್ಲ, ಏನನ್ನಲ್ಲ ಎಂದು ಯೆಹೋವನಿಗೆ ಗೊತ್ತು. (ಕೀರ್ತ. 103:14) ಹಾಗಾಗಿ ನಮಗೆ ಬೇಕಾದ ಬಲ ಕೊಡುತ್ತಾನೆ. ಒಮ್ಮೊಮ್ಮೆ ನಮಗೆ, ‘ಇದಕ್ಕಿಂತ ಹೆಚ್ಚು ನನ್ನಿಂದ ಸಹಿಸಲಿಕ್ಕಾಗಲ್ಲ’ ಎಂದನಿಸಬಹುದು ನಿಜ. ಆದರೆ ನಮ್ಮ ಕಷ್ಟ ಆ ಹಂತಕ್ಕೆ ಹೋದರೆ ಅದರಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಪಡಿಸುತ್ತೇನೆಂದು ಯೆಹೋವನು ಮಾತುಕೊಟ್ಟಿದ್ದಾನೆ. (1 ಕೊರಿಂಥ 10:13 ಓದಿ.) ನಾವೆಷ್ಟರ ಮಟ್ಟಿಗೆ ತಾಳಿಕೊಳ್ಳಬಹುದೆಂದು ಯೆಹೋವನಿಗೆ ಗೊತ್ತಿದೆ ಎಂಬ ಭರವಸೆ ನಮಗೆ ಸಾಂತ್ವನ ತರುತ್ತದೆ.

9. ಸಹಾಯಕ್ಕಾಗಿ ಬೇಡಿದ ಕೂಡಲೇ ಯೆಹೋವನು ಉತ್ತರ ಕೊಡದಿದ್ದರೆ ನಾವೇನು ಮಾಡಬೇಕು?

9 ಸಹಾಯಕ್ಕಾಗಿ ಬೇಡಿದ ಕೂಡಲೇ ಯೆಹೋವನು ಉತ್ತರ ಕೊಡದಿದ್ದರೆ ತಾಳ್ಮೆಯಿಂದಿರೋಣ. ನೆನಪಿಡಿ, ನಮಗೆ ಸಹಾಯಮಾಡಲು ಆತನು ತುದಿಗಾಲಲ್ಲಿ ನಿಂತಿದ್ದಾನೆ. ಆದರೂ, ನಮಗೆ ಬೇಕಾದದ್ದನ್ನು ಕೊಡಲು ಸೂಕ್ತ ಸಮಯಕ್ಕಾಗಿ ತಾಳ್ಮೆಯಿಂದ ಕಾಯುತ್ತಾನೆ. “ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು” ಎನ್ನುತ್ತದೆ ಬೈಬಲು.—ಯೆಶಾ. 30:18.

‘ಸಿಂಹದ ಬಾಯಿ’

10-12. (ಎ) ಕಾಯಿಲೆಬಿದ್ದ ಕುಟುಂಬ ಸದಸ್ಯನನ್ನು ನೋಡಿಕೊಳ್ಳುವುದು ಯಾಕೆ ಕಷ್ಟಕರವಾಗಬಹುದು? (ಬಿ) ಕಷ್ಟದ ಸಮಯದಲ್ಲಿ ಯೆಹೋವನ ಮೇಲೆ ಭರವಸೆಯಿಡುವಾಗ ಆತನೊಂದಿಗಿನ ನಿಮ್ಮ ಸಂಬಂಧಕ್ಕೆ ಏನಾಗುತ್ತದೆ? ಉದಾಹರಣೆ ಕೊಡಿ.

10 ನೀವೆಷ್ಟು ಕಷ್ಟದ ಪರಿಸ್ಥಿತಿಯಲ್ಲಿ ಇರಬಹುದೆಂದರೆ ಪೌಲನಿಗೆ ಅನಿಸಿದಂತೆ ‘ಸಿಂಹದ ಬಾಯಲ್ಲಿ’ ಇದ್ದೀರೆಂದು ಅನಿಸಬಹುದು. ಬೇಗ ಅದರಿಂದ ಹೊರಗೆ ಬರಬೇಕೆಂದು ಅನಿಸಬಹುದು. (2 ತಿಮೊ. 4:17) ಇಂಥ ಸಮಯಗಳಲ್ಲಿ ಯೆಹೋವನಲ್ಲಿ ಭರವಸೆಯಿಡುವುದು ತುಂಬ, ತುಂಬ ಮುಖ್ಯ. ಉದಾಹರಣೆಗೆ, ಕಾಯಿಲೆಬಿದ್ದಿರುವ ಕುಟುಂಬ ಸದಸ್ಯರೊಬ್ಬರನ್ನು ನೋಡಿಕೊಳ್ಳುತ್ತಿದ್ದೀರೆಂದು ನೆನಸಿ. ಅವರ ವಿಷಯದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡಲು, ನಿಮ್ಮ ಮನಸ್ಸನ್ನು ಗಟ್ಟಿಮಾಡಿಕೊಳ್ಳಲು ಸಹಾಯ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸಿ. * (ಪಾದಟಿಪ್ಪಣಿ ನೋಡಿ.) ಆಗ ನಿಮಗೆ, ಯೆಹೋವನು ನಿಮ್ಮ ಪರಿಸ್ಥಿತಿ ನೋಡುತ್ತಿದ್ದಾನೆ, ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳುತ್ತಿದ್ದಾನೆಂದು ನೆಮ್ಮದಿ ಸಿಗುವುದು. ಈ ಕಷ್ಟವನ್ನು ತಾಳಿಕೊಳ್ಳಲು ಮತ್ತು ಆತನಿಗೆ ನಂಬಿಗಸ್ತರಾಗಿರಲು ನಿಮಗೆ ಖಂಡಿತ ಸಹಾಯ ಮಾಡುವನು.—ಕೀರ್ತ. 32:8.

11 ಆದರೆ ಕೆಲವೊಮ್ಮೆ ಯೆಹೋವನು ಸಹಾಯ ಮಾಡುತ್ತಿಲ್ಲ ಎಂದು ನಿಮಗನಿಸಬಹುದು. ಉದಾಹರಣೆಗೆ, ವೈದ್ಯರು ನೀವು ಹೇಳುವ ವಿಷಯಗಳಿಗೆ ಬಹುಶಃ ಒಪ್ಪುತ್ತಿಲ್ಲ. ಅಥವಾ ಇಂಥ ಸನ್ನಿವೇಶದಲ್ಲಿ ಸಾಂತ್ವನ ಕೊಡಬೇಕಾದ ಸಂಬಂಧಿಕರೇ ನಿಮ್ಮ ಕಷ್ಟವನ್ನು ಹೆಚ್ಚಿಸುತ್ತಿರಬಹುದು. ಹಾಗಿದ್ದರೂ ಬಲಕ್ಕಾಗಿ ಯಾವಾಗಲೂ ಯೆಹೋವನ ಮೇಲೆ ಭರವಸೆಯಿಡಿ. ಆತನಿಗೆ ಹೆಚ್ಚೆಚ್ಚು ಹತ್ತಿರ ಬರುತ್ತಾ ಇರಿ. (1 ಸಮುವೇಲ 30:3, 6, 7 ಓದಿ.) ಯೆಹೋವನು ಆ ಸನ್ನಿವೇಶದಲ್ಲಿ ಸಹಾಯ ಮಾಡಿದ್ದನೆಂದು ಮುಂದೊಂದು ದಿನ ನಿಮಗೆ ಅರಿವಾಗುವುದು. ಆಗ ಆತನೊಂದಿಗಿನ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

12 ಲಿಂಡಾ ಎಂಬವಳಿಗೆ ಈ ಮಾತು ಎಷ್ಟು ಸತ್ಯವೆಂದು ಗೊತ್ತಾಯಿತು. * (ಪಾದಟಿಪ್ಪಣಿ ನೋಡಿ.) ಕಾಯಿಲೆಬಿದ್ದಿದ್ದ ಅವಳ ತಂದೆತಾಯಿ ತೀರಿಕೊಳ್ಳುವ ವರೆಗೂ ಹಲವಾರು ವರ್ಷ ಅವರ ಆರೈಕೆ ಮಾಡಿದಳು. ಅವಳನ್ನುವುದು: “ಇಂಥ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ನನಗೆ, ನನ್ನ ಗಂಡನಿಗೆ, ತಮ್ಮನಿಗೆ ಗೊತ್ತಾಗುತ್ತಿರಲಿಲ್ಲ. ಒಮ್ಮೊಮ್ಮೆ ದಿಕ್ಕೇ ತೋಚದಂತಾಗಿ ನಿಸ್ಸಹಾಯಕ ಭಾವನೆ ಬಂದುಬಿಡುತ್ತಿತ್ತು. ಆದರೆ ಈಗ ಅದರ ಬಗ್ಗೆ ಯೋಚಿಸಿದರೆ, ಯೆಹೋವನು ಆ ಸಮಯದಲ್ಲಿ ನಮ್ಮೊಟ್ಟಿಗೆ ಇದ್ದನೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತನು ನಮಗೆ ಬಲ ಕೊಟ್ಟನು. ನಮ್ಮ ಮುಂದೆ ದಾರಿಯೇ ಇಲ್ಲ ಎಂದನಿಸಿದಾಗ, ದಾರಿ ತೆರೆದನು. ಬೇಕಾದದ್ದನ್ನೇ ಕೊಟ್ಟನು.”

13. ಯೆಹೋವನಲ್ಲಿ ರೊಂಡಾ ಭರವಸೆ ಇಟ್ಟದ್ದು ದುರಂತಗಳ ಸರಮಾಲೆಯನ್ನು ತಾಳಿಕೊಳ್ಳಲು ಹೇಗೆ ಸಹಾಯ ಮಾಡಿತು?

13 ಯೆಹೋವನಲ್ಲಿ ನಮಗಿರುವ ಪೂರ್ಣ ಭರವಸೆ ಬದುಕಿನ ದುರಂತಗಳನ್ನೂ ತಾಳಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ರೊಂಡಾ ಎಂಬವಳಿಗೆ ಇದರ ಅನುಭವವಾಯಿತು. ಆಕೆಯ ಗಂಡ ಯೆಹೋವನ ಸಾಕ್ಷಿಯಲ್ಲ. ಅವಳಿಗೆ ವಿಚ್ಛೇದನ ಕೊಡಲು ಅರ್ಜಿ ಹಾಕಿದ. ಅದೇ ಸಮಯಕ್ಕೆ ಆಕೆಯ ತಮ್ಮನಿಗೆ ತುಂಬ ಗಂಭೀರವಾದ ‘ಲೂಪಸ್‌’ ಕಾಯಿಲೆ ಇದೆಯೆಂದು ಗೊತ್ತಾಯಿತು. ಕೆಲವೇ ತಿಂಗಳಲ್ಲಿ ತಮ್ಮನ ಹೆಂಡತಿ ತೀರಿಹೋದಳು. ಈ ದುರಂತಗಳ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ರೊಂಡಾ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಲಾರಂಭಿಸಿದಳು. ಅಷ್ಟರಲ್ಲಿ ಆಕೆಯ ತಾಯಿ ತೀರಿಹೋದರು. ಈ ದುರಂತಗಳ ಸರಮಾಲೆಯನ್ನು ರೊಂಡಾ ತಾಳಿಕೊಂಡದ್ದಾದರೂ ಹೇಗೆ? “ಪ್ರತಿದಿನ ಯೆಹೋವನ ಜೊತೆ ಮಾತಾಡುತ್ತಿದ್ದೆ. ಚಿಕ್ಕಚಿಕ್ಕ ನಿರ್ಣಯಗಳ ಬಗ್ಗೆಯೂ ಮಾತಾಡುತ್ತಿದ್ದೆ. ಇದರಿಂದಾಗಿ ಯೆಹೋವನು ನನಗೆ ಇನ್ನಷ್ಟು ನೈಜ ವ್ಯಕ್ತಿಯಾಗಿ ಅನಿಸತೊಡಗಿದ. ಇದು ನಾನು ನನ್ನ ಮೇಲೆಯೇ ಅಥವಾ ಬೇರೆಯವರ ಮೇಲೆ ಭರವಸೆ ಇಡಬಾರದೆಂದು ಕಲಿಸಿತು. ಯೆಹೋವನು ನನಗೆ ಕೊಟ್ಟ ಸಹಾಯ ನೈಜವಾಗಿತ್ತು. ನನ್ನೆಲ್ಲ ಅಗತ್ಯಗಳನ್ನು ಪೂರೈಸಿದನು. ಹೀಗೆ ಯೆಹೋವನು ನನ್ನ ಕೈಹಿಡಿದು ನನ್ನ ಜೊತೆ ಕೆಲಸಮಾಡಿದ ಅನುಭವ ನನಗಾಯಿತು” ಎನ್ನುತ್ತಾಳೆ ರೊಂಡಾ.

ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ಪರೀಕ್ಷಿಸುವ ಕಷ್ಟಗಳು ಕುಟುಂಬದಿಂದಲೂ ಬರಬಹುದು (ಪ್ಯಾರ 14-16 ನೋಡಿ)

14. ಕುಟುಂಬದಲ್ಲಿ ಯಾರಿಗಾದರೂ ಬಹಿಷ್ಕಾರ ಆಗಿರುವಲ್ಲಿ ಯೆಹೋವನು ನಿಮಗೆ ಹೇಗೆ ಸಹಾಯ ಮಾಡಬಲ್ಲನು?

14 ಇನ್ನೊಂದು ಕಷ್ಟಕರ ಸನ್ನಿವೇಶದ ಬಗ್ಗೆ ಯೋಚಿಸಿ. ಬಹುಶಃ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಬಹಿಷ್ಕಾರ ಆಗಿದೆ. ಬಹಿಷ್ಕೃತರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಬೈಬಲು ಏನನ್ನುತ್ತದೊ ಅದು ನಿಮಗೆ ಗೊತ್ತು. (1 ಕೊರಿಂ. 5:11; 2 ಯೋಹಾ. 10) ಆದರೆ ನಿಮಗೆ ಆ ವ್ಯಕ್ತಿ ಮೇಲೆ ಎಷ್ಟು ಪ್ರೀತಿ ಇದೆಯೆಂದರೆ, ಬೈಬಲಿನ ಆ ಆಜ್ಞೆ ಪಾಲಿಸುವುದು ತುಂಬ ಕಷ್ಟ ಅಥವಾ ಅಸಾಧ್ಯವೆಂದು ಅನಿಸಬಹುದು. * ಹೀಗಿರುವಾಗ, ಸ್ವರ್ಗದಲ್ಲಿರುವ ನಿಮ್ಮ ತಂದೆ ನೀವಾತನಿಗೆ ನಂಬಿಗಸ್ತಿಕೆಯಿಂದ ವಿಧೇಯರಾಗಿರಲು ಬೇಕಾದ ಬಲ ಕೊಡುವನೆಂದು ಭರವಸೆ ಇಡುವಿರಾ? ಈ ಸನ್ನಿವೇಶವು ನೀವು ಯೆಹೋವನಿಗೆ ಹೆಚ್ಚು ಹತ್ತಿರವಾಗಲಿಕ್ಕಿರುವ ಅವಕಾಶವೆಂದು ಎಣಿಸುವಿರಾ?

15. ಆದಾಮನು ಯೆಹೋವನಿಗೆ ಅವಿಧೇಯನಾದದ್ದು ಏಕೆ?

15 ಈ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಮೊದಲ ಮಾನವನಾದ ಆದಾಮನ ಸನ್ನಿವೇಶವನ್ನು ಹೋಲಿಸಿ ನೋಡೋಣ. ಹಣ್ಣು ತಿನ್ನುವ ಮುಂಚೆ ಆದಾಮನು ತಾನು ಯೆಹೋವನಿಗೆ ಅವಿಧೇಯನಾದರೂ ಜೀವಿಸುತ್ತಾ ಇರಬಹುದೆಂದು ನೆನಸಿದನಾ? ಇಲ್ಲ. “ಆದಾಮನು ವಂಚಿಸಲ್ಪಡಲಿಲ್ಲ” ಎಂದು ಬೈಬಲಲ್ಲಿದೆ. (1 ತಿಮೊ. 2:14) ಹಾಗಾದರೆ ಅವನು ಯೆಹೋವನಿಗೆ ಅವಿಧೇಯನಾದದ್ದು ಏಕೆ? ಏಕೆಂದರೆ ಅವನು ಯೆಹೋವನಿಗಿಂತಲೂ ಹೆಚ್ಚಾಗಿ ಹೆಂಡತಿಯನ್ನು ಪ್ರೀತಿಸಿದ. ಯೆಹೋವನ ಮಾತು ಕೇಳುವ ಬದಲು ಹೆಂಡತಿಯ ಮಾತು ಕೇಳಿದ.—ಆದಿ. 3:6, 17.

16. ನಮಗೆ ಎಲ್ಲಕ್ಕಿಂತ ಹೆಚ್ಚಿನ ಪ್ರೀತಿ ಯಾರ ಮೇಲೆ ಇರಬೇಕು? ಏಕೆ?

16 ಆದಾಮನ ಆ ನಿರ್ಣಯ ನಮಗೊಂದು ಪಾಠ ಕಲಿಸುತ್ತದೆ. ಏನೆಂದರೆ ಬೇರಾರಿಗಿಂತಲೂ ಹೆಚ್ಚಾಗಿ ನಾವು ಯೆಹೋವನನ್ನು ಪ್ರೀತಿಸಬೇಕೆಂದೇ. (ಮತ್ತಾಯ 22:37, 38 ಓದಿ.) ಯೆಹೋವನ ಮೇಲೆ ನಮಗಿರುವ ಅಷ್ಟು ಬಲವಾದ ಪ್ರೀತಿಯೇ ನಾವು ನಮ್ಮ ಸಂಬಂಧಿಕರಿಗೆ ಕೊಡಬಹುದಾದ ಅತ್ಯುತ್ತಮವಾದ ಸಹಾಯವಾಗಿದೆ. ಅವರು ಈಗ ಯೆಹೋವನ ಸೇವೆ ಮಾಡುತ್ತಿರಲಿ, ಇಲ್ಲದಿರಲಿ ಇದು ಸತ್ಯ. ಹಾಗಾಗಿ ಯೆಹೋವನ ಮೇಲಿನ ನಿಮ್ಮ ಪ್ರೀತಿ ಹಾಗೂ ಭರವಸೆಯನ್ನು ಬಲಪಡಿಸುತ್ತಾ ಇರಿ. ಬಹಿಷ್ಕೃತ ಸದಸ್ಯನ ಬಗ್ಗೆ ನಿಮಗೆ ಚಿಂತೆಯಿರುವಲ್ಲಿ, ಯೆಹೋವನಿಗೆ ಪ್ರಾರ್ಥನೆ ಮಾಡಿ. ನಿಮಗೆ ಹೇಗನಿಸುತ್ತದೆ ಎನ್ನುವುದನ್ನು ಮನಬಿಚ್ಚಿ ತಿಳಿಸಿ. * (ಪಾದಟಿಪ್ಪಣಿ ನೋಡಿ.) (ರೋಮ. 12:12; ಫಿಲಿ. 4:6, 7) ನಿಮಗೆ ತುಂಬ ಸಂಕಟವಾಗುತ್ತಿದ್ದರೂ, ಈ ಸನ್ನಿವೇಶವು ಯೆಹೋವನೊಟ್ಟಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡುವ ಅವಕಾಶವಾಗಿದೆ ಎಂದು ನೆನಸಿ. ಆಗ ನೀವು ಆತನಲ್ಲಿ ಭರವಸೆ ಇಡಬಲ್ಲಿರಿ. ಆತನಿಗೆ ವಿಧೇಯರಾಗುವುದು ಅತ್ಯುತ್ತಮ ಫಲಿತಾಂಶ ತರುತ್ತದೆಂದು ತಿಳಿಯಲು ಶಕ್ತರಾಗುವಿರಿ.

ಕಾಯುತ್ತಿರುವಾಗ . . .

ಯೆಹೋವನ ಕೆಲಸದಲ್ಲಿ ಆದಷ್ಟು ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಆತನ ಮೇಲೆ ನಿಮಗಿರುವ ಭರವಸೆ ತೋರಿಸಿ(ಪ್ಯಾರ 17 ನೋಡಿ)

17. ಸಾರುವ ಕೆಲಸದಲ್ಲಿ ಆದಷ್ಟು ಹೆಚ್ಚಾಗಿ ತೊಡಗಿಸಿಕೊಂಡರೆ ಯೆಹೋವನು ಏನು ಮಾಡುವನೆಂದು ಭರವಸೆಯಿಡಬಲ್ಲೆವು?

17 ಯೆಹೋವನು ಪೌಲನನ್ನು “ಸಿಂಹದ ಬಾಯಿಂದ” ಬಿಡಿಸಿದ್ದು ಯಾಕೆ? ‘ನನ್ನ ಮೂಲಕವಾಗಿ ಸಾರುವಿಕೆಯು ಪೂರ್ಣವಾಗಿ ನೆರವೇರುವಂತೆ’ ಎಂದನು ಪೌಲ. (2 ತಿಮೊ. 4:17) ಯೆಹೋವನು ನಮಗೂ “ಸುವಾರ್ತೆ” ಸಾರುವ ಕೆಲಸಕೊಟ್ಟಿದ್ದಾನೆ ಮತ್ತು ನಮ್ಮನ್ನು ತನ್ನ “ಜೊತೆಕೆಲಸಗಾರ”ರೆಂದು ಕರೆದಿದ್ದಾನೆ. (1 ಥೆಸ. 2:4; 1 ಕೊರಿಂ. 3:9) ಸಾರುವ ಕೆಲಸದಲ್ಲಿ ಆದಷ್ಟು ಹೆಚ್ಚಾಗಿ ತೊಡಗಿಸಿಕೊಂಡರೆ ನಮಗೆ ಅಗತ್ಯವಿರುವುದೆಲ್ಲವನ್ನು ಯೆಹೋವನು ಕೊಡುವನೆಂದು ಭರವಸೆಯಿಡಬಲ್ಲೆವು. (ಮತ್ತಾ. 6:33) ಜೊತೆಗೆ, ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವಂತೆ ಕಾಯಲೂ ನಮಗೆ ಸುಲಭವಾಗುವುದು.

18. ಯೆಹೋವನಲ್ಲಿ ಭರವಸೆಯನ್ನು ಹೆಚ್ಚಿಸುವ ಮತ್ತು ಆತನೊಂದಿಗಿನ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ವಿಧಾನಗಳಾವವು?

18 ಹಾಗಾಗಿ ಪ್ರತಿಯೊಂದು ದಿನವನ್ನು ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಸದುಪಯೋಗಿಸಿ. ಒಂದು ಕಷ್ಟದ ಸನ್ನಿವೇಶದಿಂದಾಗಿ ನೀವು ಚಿಂತಿತರಾಗಿದ್ದರೆ ಅದನ್ನು ಯೆಹೋವನಿಗೆ ಹೆಚ್ಚು ಹತ್ತಿರವಾಗಲು ಒಂದು ಅವಕಾಶವಾಗಿ ಬಳಸಿ. ದೇವರ ವಾಕ್ಯವಾದ ಬೈಬಲನ್ನು ಓದಿ, ಅಧ್ಯಯನ ಮಾಡಿ, ಧ್ಯಾನಿಸಿ. ಯೆಹೋವನಿಗೆ ಪ್ರಾರ್ಥಿಸುತ್ತಾ ಇರಿ. ಆತನ ಸೇವೆಯಲ್ಲಿ ಆದಷ್ಟು ಹೆಚ್ಚಾಗಿ ತೊಡಗಿಸಿಕೊಳ್ಳಿ. ಇದೆಲ್ಲವನ್ನು ಮಾಡುತ್ತಾ ಇದ್ದರೆ ನಿಮಗೆ ಈಗಿರುವ ಮತ್ತು ಮುಂದೆ ಬರಬಹುದಾದ ಕಷ್ಟಗಳನ್ನು ತಾಳಿಕೊಳ್ಳಲು ಯೆಹೋವನು ಸಹಾಯ ಮಾಡುವನೆಂಬ ಭರವಸೆ ಇಡಬಲ್ಲಿರಿ.

^ ಪ್ಯಾರ. 2 ಪೌಲನು ನಿಜವಾದ ಸಿಂಹದಿಂದ ಅಥವಾ ಬೇರಾವುದೋ ಅಪಾಯಕಾರಿ ಸನ್ನಿವೇಶದಿಂದ ರಕ್ಷಿಸಲ್ಪಟ್ಟಿರಬೇಕು.

^ ಪ್ಯಾರ. 10 ಕಾಯಿಲೆಯನ್ನು ನಿಭಾಯಿಸಲು ಮತ್ತು ಕಾಯಿಲೆ ಇದ್ದವರನ್ನು ನೋಡಿಕೊಳ್ಳುವವರಿಗೆ ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ಸಹಾಯಮಾಡುವ ಲೇಖನಗಳನ್ನು ಮುದ್ರಿಸಲಾಗಿದೆ. ಕಾವಲಿನಬುರುಜು ಮೇ 15, 2010ರ ಪುಟ 17-19 ಮತ್ತು ಕಾವಲಿನಬುರುಜು ಡಿಸೆಂಬರ್‌ 15, 2011ರ ಪುಟ 27-30 ನೋಡಿ.

^ ಪ್ಯಾರ. 12 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 14 ಇದೇ ಸಂಚಿಕೆಯಲ್ಲಿ “ಬಹಿಷ್ಕಾರ—ಪ್ರೀತಿಯ ಏರ್ಪಾಡು” ಎಂಬ ಲೇಖನ ನೋಡಿ.

^ ಪ್ಯಾರ. 16 ಕುಟುಂಬದ ಸದಸ್ಯನೊಬ್ಬನು ಯೆಹೋವನನ್ನು ಬಿಟ್ಟು ಹೋಗುವಾಗ ಆ ಸನ್ನಿವೇಶವನ್ನು ನಿಭಾಯಿಸಲು ನಮ್ಮ ಸಹಾಯಕ್ಕಾಗಿ ಲೇಖನಗಳನ್ನು ಮುದ್ರಿಸಲಾಗಿದೆ. ಕಾವಲಿನಬುರುಜು ಜುಲೈ 15, 2011ರ ಪುಟ 30-32 ಮತ್ತು ಕಾವಲಿನಬುರುಜು ಜನವರಿ 15, 2013ರ ಪುಟ 15-16.