ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರು ಅರ್ಹರಾಗಲು ಹಿರಿಯರು ಹೇಗೆ ತರಬೇತಿ ಕೊಡಬೇಕು?

ಇತರರು ಅರ್ಹರಾಗಲು ಹಿರಿಯರು ಹೇಗೆ ತರಬೇತಿ ಕೊಡಬೇಕು?

“ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು . . . ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು.”—2 ತಿಮೊ. 2:2.

1. (ಎ) ದೇವರ ಸೇವಕರಿಗೆ ತರಬೇತಿಯ ಬಗ್ಗೆ ಹಿಂದಿನ ಕಾಲದಿಂದಲೂ ಏನು ತಿಳಿದಿತ್ತು? (ಬಿ) ಇದು ನಮ್ಮ ದಿನಗಳಲ್ಲಿ ಹೇಗೆ ಅನ್ವಯಿಸುತ್ತದೆ? (ಸಿ) ಈ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

ತರಬೇತಿಯಿಂದ ಯಶಸ್ಸು ಸಿಗುತ್ತದೆ ಎಂದು ದೇವರ ಜನರಿಗೆ ಹಿಂದಿನ ಕಾಲದಿಂದಲೂ ತಿಳಿದಿತ್ತು. ಉದಾಹರಣೆಗೆ, ಅಬ್ರಾಮನು ‘ಶಿಕ್ಷಿತರಾದ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿದನು.’ ಇವರು ಯುದ್ಧಮಾಡಿ ಲೋಟನನ್ನು ಕಾಪಾಡಿದರು. (ಆದಿ. 14:14-16) ರಾಜ ದಾವೀದನ ದಿನಗಳಲಿದ್ದ ಗಾಯಕರಿಗೆ ಯೆಹೋವನನ್ನು ಸ್ತುತಿಸುವ ಹಾಡುಗಳನ್ನು ‘ಕಲಿಸಲಾಗಿತ್ತು’ ಅಂದರೆ ಹಾಡಲು ತರಬೇತಿ ಕೊಡಲಾಗಿತ್ತು. (1 ಪೂರ್ವ. 25:7) ಇಂದು ನಾವು ಸೈತಾನ ಮತ್ತವನ ಲೋಕದ ವಿರುದ್ಧ ಹೋರಾಡಲಿಕ್ಕಿದೆ. (ಎಫೆ. 6:11-13) ಅಷ್ಟುಮಾತ್ರವಲ್ಲ ಯೆಹೋವನ ಹೆಸರನ್ನು ಇತರರಿಗೆ ತಿಳಿಸುವ ಮೂಲಕ ಆತನಿಗೆ ಸ್ತುತಿ ತರಲು ಶ್ರಮಿಸುತ್ತೇವೆ. (ಇಬ್ರಿ. 13:15, 16) ಹಿಂದಿನ ಕಾಲದ ದೇವರ ಸೇವಕರಂತೆ ನಾವೂ ಯಶಸ್ವಿಗಳಾಗಬೇಕಾದರೆ ನಮಗೆ ತರಬೇತಿ ಸಿಗಬೇಕು. ಸಭೆಯಲ್ಲಿ ಸಹೋದರರಿಗೆ ತರಬೇತಿ ಕೊಡುವ ಜವಾಬ್ದಾರಿಯನ್ನು ಯೆಹೋವನು ಇಂದು ಹಿರಿಯರಿಗೆ ಕೊಟ್ಟಿದ್ದಾನೆ. (2 ತಿಮೊ. 2:2) ಯೆಹೋವನ ಜನರನ್ನು ನೋಡಿಕೊಳ್ಳಲಿಕ್ಕಾಗಿ ಸಹೋದರರಿಗೆ ತರಬೇತಿ ಕೊಡಲು ಕೆಲವು ಹಿರಿಯರು ಯಾವ ವಿಧಾನಗಳನ್ನು ಬಳಸಿದ್ದಾರೆ?

ವಿದ್ಯಾರ್ಥಿಗೆ ಯೆಹೋವನ ಮೇಲಿರುವ ಪ್ರೀತಿಯನ್ನು ಬಲಗೊಳಿಸಿ

2. ವಿದ್ಯಾರ್ಥಿಗೆ ಹೊಸ ಕೌಶಲಗಳನ್ನು ಕಲಿಸುವ ಮುಂಚೆ ಹಿರಿಯರು ಏನು ಮಾಡಬೇಕು? ಏಕೆ?

2 ಒಬ್ಬ ಹಿರಿಯನು ತೋಟಗಾರನಂತೆ ಇದ್ದಾನೆ. ಬೀಜ ಬಿತ್ತುವ ಮುಂಚೆ ತೋಟಗಾರ ಮಣ್ಣಿಗೆ ಗೊಬ್ಬರ ಹಾಕಬೇಕಾಗುತ್ತದೆ. ಆಗ ಗಿಡ ಬೆಳೆದು ಬಲಗೊಳ್ಳುತ್ತದೆ. ಅದೇ ರೀತಿ ವಿದ್ಯಾರ್ಥಿ ಕಲಿಯಲಿರುವ ವಿಷಯಗಳನ್ನು ಅನ್ವಯಿಸಲು ಅವನನ್ನು ಸಿದ್ಧಗೊಳಿಸುವಂಥ ಬೈಬಲ್‌ ತತ್ವಗಳ ಬಗ್ಗೆ ಹಿರಿಯನು ಅವನ ಜೊತೆ ಮೊದಲು ಮಾತಾಡಬೇಕು. ಆಮೇಲೆ ಹೊಸ ಕೌಶಲಗಳನ್ನು ಕಲಿಸಬೇಕು.—1 ತಿಮೊ. 4:6.

3. (ಎ) ವಿದ್ಯಾರ್ಥಿಯೊಂದಿಗೆ ಮಾತಾಡುವಾಗ ನೀವು ಮಾರ್ಕ 12:29, 30ರಲ್ಲಿರುವ ಯೇಸುವಿನ ಮಾತನ್ನು ಹೇಗೆ ಬಳಸಬಹುದು? (ಬಿ) ಹಿರಿಯನ ಪ್ರಾರ್ಥನೆ ಕೇಳಿ ವಿದ್ಯಾರ್ಥಿಗೆ ಹೇಗನಿಸಬಹುದು?

3 ವಿದ್ಯಾರ್ಥಿಯ ಯೋಚನೆ ಹಾಗೂ ಭಾವನೆಗಳ ಮೇಲೆ ಸತ್ಯ ಹೇಗೆ ಪ್ರಭಾವ ಬೀರುತ್ತಿದೆಯೆಂದು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯ. ಇದನ್ನು ತಿಳಿಯಲು ವಿದ್ಯಾರ್ಥಿ ಯೆಹೋವನಿಗೆ ಮಾಡಿದ ಸಮರ್ಪಣೆಯು ಅವನ ನಿರ್ಣಯಗಳನ್ನು ಹೇಗೆ ಪ್ರಭಾವಿಸಿದೆ ಎಂದು ಕೇಳಿ. ಈ ಪ್ರಶ್ನೆ ಯೆಹೋವನನ್ನು ನಾವು ಪೂರ್ಣ ಹೃದಯದಿಂದ ಸೇವಿಸುವುದು ಹೇಗೆ ಎಂಬ ಮಾತುಕತೆಗೆ ದಾರಿಮಾಡಿಕೊಡುತ್ತದೆ. (ಮಾರ್ಕ 12:29, 30 ಓದಿ.) ನಂತರ ಅವನೊಟ್ಟಿಗೆ ಪ್ರಾರ್ಥಿಸಿ ತರಬೇತಿಯ ಸಮಯದಲ್ಲಿ ಅವನಿಗೆ ಬೇಕಾದ ಪವಿತ್ರಾತ್ಮ ಕೊಡಲು ಯೆಹೋವನ ಹತ್ತಿರ ಬೇಡಿಕೊಳ್ಳಿ. ನೀವು ಅವನಿಗಾಗಿ ಮಾಡುವ ಪ್ರಾರ್ಥನೆ ಕೇಳಿದಾಗ ಇನ್ನೂ ಹೆಚ್ಚನ್ನು ಮಾಡಲು ಅವನಿಗೆ ಪ್ರೋತ್ಸಾಹ ಸಿಗುತ್ತದೆ.

4. (ಎ) ಪ್ರಗತಿಮಾಡಲು ವಿದ್ಯಾರ್ಥಿಗೆ ಸಹಾಯವಾಗುವ ಬೈಬಲಿನ ವೃತ್ತಾಂತಗಳ ಕೆಲವು ಉದಾಹರಣೆ ಕೊಡಿ. (ಬಿ) ತರಬೇತಿ ಕೊಡುವಾಗ ಹಿರಿಯರ ಗುರಿ ಏನಾಗಿರಬೇಕು?

4 ಸಹಾಯಮಾಡಲು ಸಿದ್ಧರೂ, ನಂಬಿಗಸ್ತರೂ, ದೀನರೂ ಆಗಿರುವುದು ಯಾಕೆ ಪ್ರಾಮುಖ್ಯ ಎಂದು ಕಲಿಸುವ ಬೈಬಲಿನ ವೃತ್ತಾಂತಗಳನ್ನು ತರಬೇತಿಯ ಆರಂಭದಲ್ಲಿ ವಿದ್ಯಾರ್ಥಿಯೊಟ್ಟಿಗೆ ಚರ್ಚಿಸಿ. (1 ಅರ. 19:19-21; ನೆಹೆ. 7:2; 13:13; ಅ. ಕಾ. 18:24-26) ಮಣ್ಣಿಗೆ ಗೊಬ್ಬರ ಎಷ್ಟು ಮುಖ್ಯವೋ ಈ ಗುಣಗಳೂ ವಿದ್ಯಾರ್ಥಿಗೆ ಅಷ್ಟೇ ಮುಖ್ಯ. ಈ ಗುಣಗಳು ವಿದ್ಯಾರ್ಥಿ ಬೇಗ ಪ್ರಗತಿ ಮಾಡಲು ನೆರವಾಗುತ್ತವೆ. ತರಬೇತಿ ಕೊಡುವಾಗ ತನ್ನ ಗುರಿ ಬೈಬಲ್‌ ತತ್ವಗಳನ್ನು ಬಳಸಿ ನಿರ್ಣಯ ಮಾಡಲು ವಿದ್ಯಾರ್ಥಿಗೆ ಸಹಾಯ ಮಾಡುವುದೇ ಆಗಿದೆ ಎಂದು ಫ್ರಾನ್ಸ್‌ ದೇಶದಲ್ಲಿರುವ ಒಬ್ಬ ಹಿರಿಯರಾದ ಸಾನ್‌ ಕ್ಲಾಡ್ ಹೇಳುತ್ತಾರೆ. “ಇಬ್ಬರು ಸೇರಿ ಒಂದು ವಚನ ಓದುವ ಸಂದರ್ಭಕ್ಕಾಗಿ ಹುಡುಕುತ್ತೇನೆ. ಯಾಕೆಂದರೆ ಇದು ದೇವರ ವಾಕ್ಯದಲ್ಲಿರುವ ‘ಅದ್ಭುತ’ ವಿಷಯಗಳನ್ನು ನೋಡಲು ವಿದ್ಯಾರ್ಥಿಯ ‘ಕಣ್ಣು ತೆರೆಸುತ್ತದೆ’” ಎಂದೂ ಹೇಳುತ್ತಾರೆ. (ಕೀರ್ತ. 119:18) ವಿದ್ಯಾರ್ಥಿಯನ್ನು ಇನ್ನೂ ಯಾವೆಲ್ಲ ವಿಧದಲ್ಲಿ ಬಲಪಡಿಸಬಹುದು?

ಗುರಿಗಳ ಬಗ್ಗೆ ಹೇಳಿ, ಕೆಲಸದ ಹಿಂದಿರುವ ಕಾರಣ ಹೇಳಿ

5. (ಎ) ಯೆಹೋವನ ಸೇವೆಯಲ್ಲಿ ಗುರಿಗಳನ್ನಿಡುವ ಬಗ್ಗೆ ವಿದ್ಯಾರ್ಥಿಯೊಟ್ಟಿಗೆ ಮಾತಾಡುವುದು ಎಷ್ಟು ಪ್ರಾಮುಖ್ಯ? (ಬಿ) ಹಿರಿಯರು ಸಹೋದರರಿಗೆ ಎಳೆಯ ಪ್ರಾಯದಲ್ಲೇ ತರಬೇತಿ ಕೊಡುವುದು ಪ್ರಾಮುಖ್ಯವೇಕೆ? (ಪಾದಟಿಪ್ಪಣಿ ನೋಡಿ.)

5 ಯೆಹೋವನ ಸೇವೆಯಲ್ಲಿ ಯಾವ ಗುರಿಗಳನ್ನು ವಿದ್ಯಾರ್ಥಿ ಇಟ್ಟಿದ್ದಾನೆಂದು ಕೇಳಿ. ಒಂದುವೇಳೆ ಗುರಿ ಇಟ್ಟಿಲ್ಲದಿದ್ದರೆ ಮುಟ್ಟಬಹುದಾದ ಒಂದು ಗುರಿ ಇಡಲು ಸಹಾಯಮಾಡಿ. ನೀವು ಇಟ್ಟಿದ್ದ ಒಂದು ಗುರಿಯ ಬಗ್ಗೆ ಮತ್ತು ಅದನ್ನು ಮುಟ್ಟಿದಾಗ ನಿಮಗೆಷ್ಟು ಖುಷಿ ಆಯಿತೆಂದು ವಿದ್ಯಾರ್ಥಿಗೆ ಉತ್ಸಾಹದಿಂದ ಹೇಳಿ. ಈ ವಿಧಾನ ಸರಳ ಮತ್ತು ಪರಿಣಾಮಕಾರಿ. ಆಫ್ರಿಕದಲ್ಲಿ ಹಿರಿಯ ಹಾಗೂ ಪಯನೀಯರ್‌ ಆಗಿ ಸೇವೆಮಾಡುತ್ತಿರುವ ವಿಕ್ಟರ್‌ ಹೀಗನ್ನುತ್ತಾರೆ: “ನಾನು ಚಿಕ್ಕವನಿದ್ದಾಗ ಒಬ್ಬ ಹಿರಿಯ ನನ್ನ ಗುರಿಗಳ ಬಗ್ಗೆ ಕೆಲವು ಪ್ರಶ್ನೆ ಕೇಳಿದರು. ಅವರು ಕೇಳಿದ ಆ ಪ್ರಶ್ನೆಗಳಿಂದಲೇ ನನ್ನ ಸೇವೆ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸಿದೆ.” ಎಳೆಯ ಪ್ರಾಯದಲ್ಲೇ ಅಂದರೆ ಹದಿವಯಸ್ಸಿನಿಂದಲೇ ಸಹೋದರರಿಗೆ ತರಬೇತಿ ಕೊಡುವುದು ಪ್ರಾಮುಖ್ಯ ಎಂದು ಅನುಭವೀ ಹಿರಿಯರು ಹೇಳುತ್ತಾರೆ. ಅವರ ವಯಸ್ಸಿಗೆ ತಕ್ಕಂತೆ ಸಭೆಯಲ್ಲಿ ಕೆಲವು ಕೆಲಸಗಳನ್ನು ಕೊಡಬಹುದು. ಎಳೆಯ ಪ್ರಾಯದಲ್ಲೇ ಸಹೋದರರಿಗೆ ತರಬೇತಿ ಕೊಟ್ಟರೆ ಅವರು ದೊಡ್ಡವರಾಗುತ್ತಾ ಹೋದಾಗ ಮತ್ತು ಅಪಕರ್ಷಣೆಗಳು ಬಂದರೂ ತಮ್ಮ ಗುರಿಗಳನ್ನು ಬಿಟ್ಟುಬಿಡದಂತೆ ಅವರಿಗೆ ಸಹಾಯವಾಗುತ್ತದೆ.—ಕೀರ್ತನೆ 71:5, 17 ಓದಿ. * (ಪಾದಟಿಪ್ಪಣಿ ನೋಡಿ.)

ಒಬ್ಬ ಸಹೋದರನಿಗೆ ಕೆಲಸ ಕೊಡುವಾಗ ಆ ಕೆಲಸ ಯಾಕೆ ಮುಖ್ಯ ಎಂಬುದಕ್ಕೆ ಕಾರಣವನ್ನು ಕೊಡಿ ಮತ್ತು ಅವನ ಶ್ರಮಕ್ಕೆ ಶಭಾಷ್‌ ಹೇಳಿ (ಪ್ಯಾರ 5-8 ನೋಡಿ)

6. ಯೇಸು ಇತರರಿಗೆ ತರಬೇತಿ ಕೊಡಲು ಯಾವ ಪ್ರಾಮುಖ್ಯ ವಿಧಾನವನ್ನು ಬಳಸಿದನು?

6 ಸಭೆಯಲ್ಲಿ ಹೆಚ್ಚಿನ ಸೇವೆ ಮಾಡಲು ವಿದ್ಯಾರ್ಥಿಯನ್ನು ಹುರಿದುಂಬಿಸುವಾಗ ಏನು ಮಾಡಬೇಕೆಂದು ಹೇಳಿದರೆ ಸಾಲದು, ಅದು ಯಾಕೆ ಪ್ರಾಮುಖ್ಯ ಎಂದೂ ಹೇಳಬೇಕು. ಮಹಾ ಬೋಧಕನಾದ ಯೇಸು ತನ್ನ ಶಿಷ್ಯರಿಗೆ ಸಾರಲು ಹೇಳಿದನು. ಆದರೆ ಅದಕ್ಕೆ ಮುಂಚೆ ಯಾಕೆ ವಿಧೇಯರಾಗಬೇಕು ಎನ್ನುವುದಕ್ಕೆ ಕಾರಣ ಕೊಟ್ಟನು. ಅವನು ಹೇಳಿದ್ದು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” (ಮತ್ತಾ. 28:18, 19) ಯೇಸು ತರಬೇತಿ ಕೊಟ್ಟ ರೀತಿಯನ್ನು ನೀವು ಹೇಗೆ ಅನುಕರಿಸಬಹುದು?

7, 8. (ಎ) ಯೇಸು ಕೊಟ್ಟ ತರಬೇತಿಯನ್ನು ಹಿರಿಯರು ಹೇಗೆ ಅನುಕರಿಸಬಹುದು? (ಬಿ) ವಿದ್ಯಾರ್ಥಿಗೆ ಶಭಾಷ್‌ ಹೇಳುವುದು ಎಷ್ಟು ಪ್ರಾಮುಖ್ಯ? (ಸಿ) ಇತರರಿಗೆ ತರಬೇತಿ ಕೊಡಲು ಹಿರಿಯರಿಗೆ ಯಾವ ಸಲಹೆಗಳು ಸಹಾಯ ಮಾಡುತ್ತವೆ? (“ ಇತರರಿಗೆ ತರಬೇತಿ ಕೊಡುವುದು ಹೇಗೆ?” ಎಂಬ ಚೌಕ ನೋಡಿ.)

7 ಒಬ್ಬ ಸಹೋದರನಿಗೆ ಕೆಲಸ ಕೊಡುವಾಗ ಆ ಕೆಲಸ ಯಾಕೆ ಮುಖ್ಯವೆಂದು ಬೈಬಲಿನಿಂದ ವಿವರಿಸಿ. ಹೀಗೆ, ನೀವು ಅವನಿಗೆ ಒಂದು ಕೆಲಸವನ್ನು ಕೇವಲ ನಿಯಮ ಪಾಲಿಸಲಿಕ್ಕಲ್ಲ ಬದಲಿಗೆ ಬೈಬಲಿನ ತತ್ವಗಳನ್ನು ಪಾಲಿಸಲಿಕ್ಕೆ ಮಾಡಬೇಕೆಂದು ಕಲಿಸುತ್ತೀರಿ. ಉದಾಹರಣೆಗೆ, ನೀವೊಬ್ಬ ಸಹೋದರನಿಗೆ ರಾಜ್ಯ ಸಭಾಗೃಹದ ಬಾಗಿಲ ಹತ್ತಿರದ ಜಾಗವನ್ನು ಶುದ್ಧವಾಗಿಡಲು, ನಡೆಯಲಿಕ್ಕೆ ಸುರಕ್ಷಿತವಾಗಿಡಲು ಹೇಳುವಾಗ ತೀತ 2:10ನ್ನು ತೋರಿಸಬಹುದು. ಅವನು ಮಾಡುವ ಈ ಕೆಲಸ ರಾಜ್ಯ ಸಂದೇಶದ ಕಡೆಗೆ ಜನರನ್ನು ಹೇಗೆ ಆಕರ್ಷಿಸುತ್ತದೆಂದು ವಿವರಿಸಿ. ಅಷ್ಟುಮಾತ್ರವಲ್ಲ ಈ ಕೆಲಸ ಸಭೆಯಲ್ಲಿರುವ ವಯಸ್ಸಾದವರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಗೆ ಯೋಚಿಸಲು ಹೇಳಿ. ಈ ರೀತಿಯ ಮಾತುಕತೆಯಿಂದಾಗಿ ಅವನು ಬರೀ ನಿಯಮಗಳ ಬಗ್ಗೆ ಅಲ್ಲ ಬದಲಿಗೆ ಜನರ ಬಗ್ಗೆಯೂ ಯೋಚಿಸಲು ಕಲಿಯುತ್ತಾನೆ. ತನ್ನ ಕೆಲಸದಿಂದ ಸಹೋದರ ಸಹೋದರಿಯರಿಗೆ ಆಗುವ ಪ್ರಯೋಜನ ನೋಡಿ ಅವರಿಗಾಗಿ ತಾನು ಮಾಡುತ್ತಿರುವ ಸೇವೆಯಿಂದ ಸಂತೋಷ ಪಡೆಯುವನು.

8 ನೀವು ಕೊಟ್ಟ ಸಲಹೆಯಂತೆ ವಿದ್ಯಾರ್ಥಿ ಮಾಡುವಾಗ ಅವನಿಗೆ ಶಭಾಷ್‌ ಹೇಳಲು ಮರೆಯಬೇಡಿ. ಇದು ಎಷ್ಟು ಪ್ರಾಮುಖ್ಯ? ಗಿಡಕ್ಕೆ ನೀರು ಹಾಕಿದರೆ ಮಾತ್ರ ಅದು ಬೆಳೆಯುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಅದೇ ರೀತಿ ನೀವು ವಿದ್ಯಾರ್ಥಿಗೆ ಪ್ರಶಂಸೆ ಕೊಡುವಾಗ ಯೆಹೋವನ ಸೇವೆಯಲ್ಲಿ ಹೆಚ್ಚು ಪ್ರಗತಿ ಮಾಡಲು ಅವನಿಗೆ ಪ್ರಚೋದನೆ ಸಿಗುತ್ತದೆ.—ಮತ್ತಾಯ 3:17 ಹೋಲಿಸಿ.

ಇನ್ನೊಂದು ಸಮಸ್ಯೆ

9. (ಎ) ಕೆಲವು ದೇಶಗಳಲ್ಲಿನ ಹಿರಿಯರಿಗೆ ಇತರರಿಗೆ ತರಬೇತಿ ಕೊಡಲು ಯಾಕೆ ಕಷ್ಟವಾಗಬಹುದು? (ಬಿ) ಕೆಲವು ಯುವ ಸಹೋದರರು ದೇವರ ಸೇವೆಗೆ ಯಾಕೆ ಪ್ರಥಮ ಸ್ಥಾನ ಕೊಟ್ಟಿಲ್ಲ?

9 ಅನೇಕ ದೇಶಗಳಲ್ಲಿನ ಹಿರಿಯರಿಗೆ ದೀಕ್ಷಾಸ್ನಾನ ಪಡೆದಿರುವ 20ರಿಂದ 40 ವರ್ಷದೊಳಗಿನ ಸಹೋದರರಿಗೆ ಸಭೆಯಲ್ಲಿ ಹೆಚ್ಚನ್ನು ಮಾಡಲಿಕ್ಕೆ ಪ್ರೋತ್ಸಾಹಿಸಲು ಕಷ್ಟವಾಗಬಹುದು. ಕೆಲವು ಯುವ ಸಹೋದರರು ಸಭೆಯಲ್ಲಿ ಹೆಚ್ಚಿನ ಕೆಲಸ ಯಾಕೆ ಮಾಡುವುದಿಲ್ಲ ಎಂಬದರ ಬಗ್ಗೆ 20 ದೇಶಗಳಲ್ಲಿರುವ ಅನುಭವೀ ಹಿರಿಯರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಹಿರಿಯರಲ್ಲಿ ಅನೇಕರು ಹೇಳಿದ್ದೇನೆಂದರೆ ತುಂಬ ಸಹೋದರರಿಗೆ ಎಳೆಯ ಪ್ರಾಯದಲ್ಲಿ ಅವರ ಹೆತ್ತವರು ಯೆಹೋವನ ಸೇವೆಯಲ್ಲಿ ಗುರಿಗಳನ್ನಿಡಲು ಪ್ರೋತ್ಸಾಹಿಸಲೇ ಇಲ್ಲ. ಇನ್ನೂ ಕೆಲವು ಯುವ ಸಹೋದರರಿಗೆ ಹೆಚ್ಚು ಸೇವೆಮಾಡಲು ಇಷ್ಟವಿದ್ದರೂ ಹೆತ್ತವರು ಅವರಿಗೆ ಉನ್ನತ ಶಿಕ್ಷಣ ಅಥವಾ ಲೌಕಿಕ ಉದ್ಯೋಗದ ಹಿಂದೆ ಬೀಳುವಂತೆ ಮಾಡಿದ್ದರು. ಹಾಗಾಗಿ ಇವರಿಗೆ ಜೀವನದಲ್ಲಿ ದೇವರ ಸೇವೆಗೆ ಪ್ರಥಮ ಸ್ಥಾನ ಕೊಡಲು ಆಗಲಿಲ್ಲ!—ಮತ್ತಾ. 10:24.

10, 11. (ಎ) ಒಬ್ಬ ಸಹೋದರನು ಯೋಚಿಸುವ ರೀತಿಯನ್ನು ಹಿರಿಯನು ನಿಧಾನವಾಗಿ ಹೇಗೆ ಬದಲಾಯಿಸಬಹುದು? (ಬಿ) ಸಹೋದರರನ್ನು ಹುರಿದುಂಬಿಸಲು ಹಿರಿಯನು ಯಾವ ವಚನಗಳನ್ನು ಬಳಸಬಹುದು? ಯಾಕೆ? (ಪಾದಟಿಪ್ಪಣಿ ನೋಡಿ.)

10 ಸಭೆಯಲ್ಲಿ ಸಹೋದರನೊಬ್ಬನಿಗೆ ಹೆಚ್ಚನ್ನು ಮಾಡಲು ಆಸಕ್ತಿ ಇಲ್ಲದಿದ್ದರೆ ಅವನು ಯೋಚಿಸುವ ರೀತಿಯನ್ನು ಬದಲಾಯಿಸಲು ತುಂಬ ಶ್ರಮ ಹಾಗೂ ತಾಳ್ಮೆ ಬೇಕು. ಆದರೆ ಅದು ಸಾಧ್ಯ. ಒಬ್ಬ ತೋಟಗಾರನು ಗಿಡಕ್ಕೆ ಕೋಲನ್ನು ಕಟ್ಟಿದಾಗ ಅದು ನಿಧಾನವಾಗಿ ನೆಟ್ಟಗೆ ಬೆಳೆಯುತ್ತದೆ. ಅದೇ ರೀತಿ ಆ ಸಹೋದರನು ಸಭೆಯಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಸ್ವೀಕರಿಸುವುದರ ಕಡೆಗಿನ ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಇದನ್ನು ನೀವು ಅವನಿಗೆ ನಿಧಾನವಾಗಿ ಮನದಟ್ಟು ಮಾಡಿಸಬೇಕು. ಹೇಗೆ?

11 ನೀವು ತರಬೇತಿ ಕೊಡಲಿರುವ ಸಹೋದರನ ಸ್ನೇಹಿತನಾಗಲು ಸಮಯ ಮಾಡಿಕೊಳ್ಳಿ. ಸಭೆಗೆ ಅವನ ಅವಶ್ಯಕತೆ ಇದೆಯೆಂದು ತಿಳಿಸಿ. ಸಮಯ ದಾಟಿದಂತೆ ಅವನೊಂದಿಗೆ ಕುಳಿತು, ಅವನು ಮಾಡಿರುವ ಸಮರ್ಪಣೆ ಬಗ್ಗೆ ಯೋಚಿಸುವಂತೆ ಮಾಡುವ ವಚನಗಳ ಕುರಿತು ತರ್ಕಿಸಿ. (ಪ್ರಸಂ. 5:4; ಯೆಶಾ. 6:8; ಮತ್ತಾ. 6:24, 33; ಲೂಕ 9:57-62; 1 ಕೊರಿಂ. 15:58; 2 ಕೊರಿಂ. 5:15; 13:5) ಈ ಪ್ರಶ್ನೆಗಳನ್ನು ಕೇಳಿ ಅವನ ಹೃದಯ ಮುಟ್ಟಲು ಪ್ರಯತ್ನಿಸಿ: ‘ಯೆಹೋವನಿಗೆ ನಿನ್ನ ಬದುಕನ್ನು ಸಮರ್ಪಣೆ ಮಾಡಿದಾಗ ನೀನು ಏನೆಂದು ಮಾತುಕೊಟ್ಟಿದ್ದೆ? ನಿನಗೆ ದೀಕ್ಷಾಸ್ನಾನವಾದಾಗ ಯೆಹೋವನಿಗೆ ಹೇಗೆ ಅನಿಸಿರಬೇಕು?’ (ಜ್ಞಾನೋ. 27:11) ‘ಸೈತಾನನಿಗೆ ಹೇಗನಿಸಿರಬೇಕು?’ (1 ಪೇತ್ರ 5:8) ಈ ವಚನಗಳು ಸಹೋದರರ ಹೃದಯದ ಮೇಲೆ ತುಂಬ ಪರಿಣಾಮ ಬೀರುವಷ್ಟು ಪ್ರಬಲವಾಗಿವೆ.—ಇಬ್ರಿಯ 4:12 ಓದಿ. * (ಪಾದಟಿಪ್ಪಣಿ ನೋಡಿ.)

ವಿದ್ಯಾರ್ಥಿಗಳೇ, ನೀವು ನಂಬಿಗಸ್ತರೆಂದು ರುಜುಪಡಿಸಿ

12, 13. (ಎ) ವಿದ್ಯಾರ್ಥಿಯಾಗಿ ಎಲೀಷ ಯಾವ ಮನೋಭಾವ ತೋರಿಸಿದನು? (ಬಿ) ಎಲೀಷನ ನಂಬಿಗಸ್ತಿಕೆಗೆ ಯೆಹೋವನು ಹೇಗೆ ಬಹುಮಾನ ಕೊಟ್ಟನು?

12 ಯುವ ಸಹೋದರರೇ, ಸಭೆಗೆ ನಿಮ್ಮ ಸಹಾಯ ಬೇಕು. ಯೆಹೋವನ ಸೇವೆಯಲ್ಲಿ ಯಶಸ್ಸು ಗಳಿಸಲು ಯಾವ ಮನೋಭಾವ ನಿಮಗೆ ಸಹಾಯ ಮಾಡುತ್ತದೆ? ಉತ್ತರ ತಿಳಿಯಲು ಹಿಂದಿನ ಕಾಲದ ವಿದ್ಯಾರ್ಥಿಯಾಗಿದ್ದ ಎಲೀಷನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಚರ್ಚಿಸೋಣ.

13 ಪ್ರವಾದಿ ಎಲೀಯ 3,000 ವರ್ಷಗಳಷ್ಟು ಹಿಂದೆ ಯುವ ಎಲೀಷನಿಗೆ ತನ್ನ ಸಹಾಯಕನಾಗುವಂತೆ ಹೇಳಿದನು. ಎಲೀಷ ತಕ್ಷಣ ಒಪ್ಪಿಕೊಂಡು ಎಲೀಯನ ಸಾಮಾನ್ಯ ಕೆಲಸಗಳನ್ನೂ ನಂಬಿಗಸ್ತಿಕೆಯಿಂದ ಮಾಡಿದನು. (2 ಅರ. 3:11) ಎಲೀಯ ಸುಮಾರು 6 ವರ್ಷ ಎಲೀಷನಿಗೆ ತರಬೇತಿ ಕೊಟ್ಟನು. ಇಸ್ರಾಯೇಲಿನಲ್ಲಿ ಎಲೀಯನ ಕೆಲಸ ಮುಗಿಯಲಿದ್ದಾಗ ಇನ್ನು ಮುಂದೆ ತನಗೆ ಸಹಾಯ ಮಾಡುವುದನ್ನು ನಿಲ್ಲಿಸಲು ಅವನು ಎಲೀಷನಿಗೆ ಹೇಳಿದನು. ಆದರೆ ಎಲೀಷ “ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ” ಎಂದು ಮೂರು ಸಾರಿ ಹೇಳಿದನು. ತನ್ನಿಂದಾದಷ್ಟು ದಿನ ತನ್ನ ಶಿಕ್ಷಕನೊಟ್ಟಿಗೆ ಇರಬೇಕೆಂದು ದೃಢತೀರ್ಮಾನ ಮಾಡಿದ್ದನು. ಎಲೀಷನ ಈ ನಂಬಿಗಸ್ತಿಕೆ ಹಾಗೂ ನಿಷ್ಠೆಗೆ ಯೆಹೋವನು ಬಹುಮಾನ ಕೊಟ್ಟನು. ಹೇಗೆ? ಸುಳಿಗಾಳಿ ಎಲೀಯನನ್ನು ಎತ್ತಿಕೊಂಡು ಹೋಗುವುದನ್ನು ನೋಡುವ ಅವಕಾಶವನ್ನು ಎಲೀಷನಿಗೆ ಕೊಟ್ಟನು.—2 ಅರ. 2:1-12.

14. (ಎ) ವಿದ್ಯಾರ್ಥಿಗಳು ಎಲೀಷನನ್ನು ಹೇಗೆ ಅನುಕರಿಸಬಹುದು? (ಬಿ) ವಿದ್ಯಾರ್ಥಿ ನಂಬಿಗಸ್ತನಾಗಿರುವುದು ಯಾಕಷ್ಟು ಪ್ರಾಮುಖ್ಯ?

14 ವಿದ್ಯಾರ್ಥಿಯಾಗಿ ನೀವು ಎಲೀಷನನ್ನು ಹೇಗೆ ಅನುಕರಿಸಬಹುದು? ಹಿರಿಯರು ಕೊಡುವ ನೇಮಕಗಳು ಚಿಕ್ಕಪುಟ್ಟದ್ದು, ಮಾಮೂಲಿಯಾದದ್ದು ಎಂದು ಅನಿಸಿದರೂ ಅವನ್ನು ಕೂಡಲೇ ಸ್ವೀಕರಿಸಿ. ನಿಮ್ಮ ಶಿಕ್ಷಕರು ನಿಮ್ಮ ಸ್ನೇಹಿತರೆಂದು ಮರೆಯಬೇಡಿ. ಅವರು ನಿಮಗಾಗಿ ಮಾಡುತ್ತಿರುವ ವಿಷಯಗಳಿಗಾಗಿ ಮಾತಲ್ಲಿ ಕೃತಜ್ಞತೆ ವ್ಯಕ್ತಪಡಿಸಿ. ನೀವು ಅವರಿಂದ ಇನ್ನೂ ಕಲಿಯಲು ಬಯಸುತ್ತೀರೆಂದು ತೋರಿಸಿ. ಮುಖ್ಯವಾಗಿ ನಿಮ್ಮ ನೇಮಕಗಳನ್ನು ನಂಬಿಗಸ್ತಿಕೆಯಿಂದ ಮಾಡಿ. ಯಾಕೆ? ನೀವು ನಂಬಿಗಸ್ತರು ಮತ್ತು ವಿಶ್ವಾಸಾರ್ಹರು ಎಂದು ರುಜುಪಡಿಸುವಾಗ ಯೆಹೋವನು ನಿಮಗೆ ಸಭೆಯಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ಕೊಡಲು ಬಯಸುತ್ತಾನೆಂದು ಹಿರಿಯರಿಗೆ ಖಾತ್ರಿಯಾಗುತ್ತದೆ.—ಕೀರ್ತ. 101:6; 2 ತಿಮೊಥೆಯ 2:2 ಓದಿ.

ಅನುಭವೀ ಹಿರಿಯರನ್ನು ಗೌರವಿಸಿ

15, 16. (ಎ) ಎಲೀಷ ಯಾವ ವಿಧಗಳಲ್ಲಿ ತನ್ನ ಶಿಕ್ಷಕನಿಗೆ ಗೌರವ ತೋರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಬೇರೆ ಪ್ರವಾದಿಗಳು ಎಲೀಷನಲ್ಲಿ ಯಾಕೆ ಭರವಸೆಯಿಟ್ಟರು?

15 ಸಹೋದರರು ಅನುಭವೀ ಹಿರಿಯರಿಗೆ ಗೌರವ ತೋರಿಸುವುದು ಕೂಡ ಪ್ರಾಮುಖ್ಯ ಎಂದು ಎಲೀಷನ ವೃತ್ತಾಂತ ತೋರಿಸುತ್ತದೆ. ಎಲೀಯ ಮತ್ತು ಎಲೀಷ ಯೆರಿಕೋವಿನಲ್ಲಿದ್ದ ಪ್ರವಾದಿಗಳ ಗುಂಪನ್ನು ಭೇಟಿಯಾದ ಮೇಲೆ ಯೊರ್ದನ್‌ ನದಿಗೆ ಬಂದರು. ಆಗ “ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು.” ಆಗ ಇಬ್ಬರೂ “ಮಾತಾಡುತ್ತಾ” ಆ ನದಿಯನ್ನು ಒಣನೆಲದ ಮೇಲೆ ದಾಟಿ ಹೋದರು. ತನ್ನ ಶಿಕ್ಷಕ ಹೇಳಿದ ಪ್ರತಿಯೊಂದು ಮಾತನ್ನು ಎಲೀಷ ತುಂಬ ಜಾಗ್ರತೆಯಿಂದ ಕೇಳಿಸಿಕೊಳ್ಳುತ್ತಾ ಅವನಿಂದ ಕಲಿಯುತ್ತಾ ಇದ್ದನು. ತನಗೆಲ್ಲಾ ಗೊತ್ತು ಎಂದು ಎಲೀಷನು ಯಾವತ್ತು ನೆನಸಲಿಲ್ಲ. ಎಲೀಯನನ್ನು ಸುಳಿಗಾಳಿ ಎತ್ತಿಕೊಂಡು ಹೋದಾಗ ಎಲೀಷ ಯೊರ್ದನ್‌ ನದಿಗೆ ವಾಪಸ್ಸು ಬಂದನು. ಅಲ್ಲಿ ಅವನು ಎಲೀಯನ ಕಂಬಳಿಯನ್ನು ನೀರಿಗೆ ಹೊಡೆಯುತ್ತಾ “ಎಲೀಯನ ದೇವರಾದ ಯೆಹೋವನೆಲ್ಲಿ” ಎಂದು ಕೇಳಿದಾಗ ಪುನಃ ನದಿ ಎರಡು ಭಾಗವಾಯಿತು.—2 ಅರ. 2:8-14.

16 ಗಮನಿಸಿದಿರಾ, ಎಲೀಷ ಮಾಡಿದ ಮೊದಲ ಅದ್ಭುತ ಎಲೀಯನ ಕೊನೆಯ ಅದ್ಭುತದಂತೆಯೇ ಇತ್ತು. ಇದು ನಮಗೇನನ್ನು ಕಲಿಸುತ್ತದೆ? ಈಗ ತನಗೆ ಅಧಿಕಾರ ಸಿಕ್ಕಿದೆ ಅಂತ ಎಲೀಯನ ವಿಧಾನ ಬಿಟ್ಟು ತನ್ನದೇ ಆದ ಹೊಸ ವಿಧಾನ ಬಳಸುತ್ತೇನೆಂದು ಎಲೀಷ ಭಾವಿಸಲಿಲ್ಲ. ಬದಲಿಗೆ ಎಲೀಯ ಮಾಡಿದಂತೆಯೇ ಮಾಡಿ ಎಲೀಷ ತನ್ನ ಶಿಕ್ಷಕನ ಮೇಲಿದ್ದ ಗೌರವವನ್ನು ತೋರಿಸಿಕೊಟ್ಟನು. ಹೀಗೆ ಬೇರೆ ಪ್ರವಾದಿಗಳು ಎಲೀಷನೇ ದೇವರ ಪ್ರವಾದಿ ಎಂದು ಅವನಲ್ಲಿ ಭರವಸೆಯಿಡಲು ಸಾಧ್ಯವಾಯಿತು. (2 ಅರ. 2:15) ಎಲೀಷ 60 ವರ್ಷಗಳ ತನಕ ಪ್ರವಾದಿಯಾಗಿದ್ದನು. ಎಲೀಯನು ಮಾಡಿದ್ದಕ್ಕಿಂತ ಇನ್ನೂ ಅನೇಕ ಅದ್ಭುತಗಳನ್ನು ಮಾಡಲು ಯೆಹೋವನು ಅವನಿಗೆ ಸಹಾಯಮಾಡಿದನು. ಇದರಿಂದ ಇಂದಿನ ವಿದ್ಯಾರ್ಥಿಗಳು ಏನು ಕಲಿಯಬಹುದು?

17. (ಎ) ಎಲೀಷನ ಮನೋಭಾವವನ್ನು ವಿದ್ಯಾರ್ಥಿಗಳು ಇಂದು ಹೇಗೆ ಅನುಕರಿಸಬಹುದು? (ಬಿ) ನಂಬಿಗಸ್ತ ವಿದ್ಯಾರ್ಥಿಗಳನ್ನು ಯೆಹೋವನು ತಕ್ಕ ಸಮಯದಲ್ಲಿ ಹೇಗೆ ಬಳಸುವನು?

17 ನಿಮಗೆ ಸಭೆಯಲ್ಲಿ ಹೆಚ್ಚು ಜವಾಬ್ದಾರಿಗಳು ಸಿಗುವಾಗ ಅವನ್ನು ಈ ಮುಂಚೆ ಇದ್ದವರು ನಿರ್ವಹಿಸುತ್ತಿದ್ದ ರೀತಿಗಿಂತ ಪೂರ್ತಿ ಭಿನ್ನವಾಗಿ ನಿರ್ವಹಿಸಬೇಕೆಂದು ನೆನಸಬೇಡಿ. ಸಭೆಯಲ್ಲಿ ಅಗತ್ಯ ಇರುವಾಗ ಮತ್ತು ಯೆಹೋವನ ಸಂಘಟನೆಯಿಂದ ನಿರ್ದೇಶನಗಳು ಬರುವಾಗ ಮಾತ್ರ ಬದಲಾವಣೆಗಳನ್ನು ಮಾಡಬೇಕೆಂದು ನೆನಪಿಡಿ. ನಿಮಗೆ ಇಷ್ಟ ಅನ್ನೋ ಕಾರಣಕ್ಕೆ ಬದಲಾವಣೆಗಳನ್ನು ಮಾಡಬಾರದು. ಎಲೀಯನ ವಿಧಾನವನ್ನೇ ಎಲೀಷನು ಬಳಸುವ ಮೂಲಕ ಇತರ ಪ್ರವಾದಿಗಳು ಅವನಲ್ಲಿ ಭರವಸೆಯಿಡಲು ಸಹಾಯ ಮಾಡಿದನು ಮಾತ್ರವಲ್ಲ ಹೀಗೆ ಮಾಡುವ ಮೂಲಕ ತನ್ನ ಶಿಕ್ಷಕನಿಗೆ ಗೌರವವನ್ನೂ ತೋರಿಸಿದನು. ಅದೇ ರೀತಿ ನಿಮ್ಮ ಶಿಕ್ಷಕನು ಬಳಸಿದ ಬೈಬಲ್‌ ಆಧಾರಿತ ವಿಧಾನಗಳನ್ನೇ ನೀವು ಬಳಸುವಾಗ ಅನುಭವೀ ಹಿರಿಯರಿಗೆ ಗೌರವ ತೋರಿಸುತ್ತೀರಿ ಮತ್ತು ಇತರ ಸಹೋದರ ಸಹೋದರಿಯರಿಗೆ ನಿಮ್ಮಲ್ಲಿ ಭರವಸೆ ಇರುತ್ತದೆ. (1 ಕೊರಿಂಥ 4:17 ಓದಿ.) ನಿಮ್ಮ ಅನುಭವ ಹೆಚ್ಚಾಗುತ್ತಾ ಹೋದಂತೆ, ಮುಂದೆ ಸಾಗುತ್ತಿರುವ ಯೆಹೋವನ ಸಂಘಟನೆ ಹೇಳುವ ಹಾಗೆ ಸಭೆಗೆ ಸಹಾಯವಾಗುವ ಬದಲಾವಣೆಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಆಗ ಯೆಹೋವನು ಎಲೀಷನಿಗೆ ಸಹಾಯ ಮಾಡಿದಂತೆ ನಿಮಗೂ ಮಾಡುವನು. ಅಂದರೆ ನಿಮ್ಮ ಶಿಕ್ಷಕರು ಮಾಡಿದಕ್ಕಿಂತ ಮಹತ್ತಾದ ಕ್ರಿಯೆಗಳನ್ನು ಮಾಡಲು ತಕ್ಕ ಸಮಯದಲ್ಲಿ ಸಹಾಯ ಮಾಡುವನು.—ಯೋಹಾ. 14:12.

18. ಸಭೆಯಲ್ಲಿರುವ ಸಹೋದರರಿಗೆ ತರಬೇತಿ ಕೊಡುವುದು ಯಾಕೆ ತುಂಬ ತುರ್ತಿನದ್ದಾಗಿದೆ?

18 ಈ ಲೇಖನ ಮತ್ತು ಹಿಂದಿನ ಲೇಖನದಲ್ಲಿರುವ ಸಲಹೆಗಳು ಸಹೋದರರಿಗೆ ತರಬೇತಿ ಕೊಡಲು ಸಮಯವನ್ನು ಮಾಡಿಕೊಳ್ಳುವಂತೆ ಹಿರಿಯರನ್ನು ಹುರಿದುಂಬಿಸಲಿ ಎಂದು ಹಾರೈಸುತ್ತೇವೆ. ಅಷ್ಟುಮಾತ್ರವಲ್ಲ ತರಬೇತಿ ಪಡೆಯಲು ಇನ್ನೂ ಹೆಚ್ಚು ಸಹೋದರರು ಸಿದ್ಧಮನಸ್ಸು ತೋರಿಸಿ, ಕಲಿತ ವಿಷಯಗಳನ್ನು ಬಳಸಿ ಯೆಹೋವನ ಜನರನ್ನು ನೋಡಿಕೊಳ್ಳಲಿ ಎಂದೂ ಹಾರೈಸುತ್ತೇವೆ. ಹೀಗೆ ಲೋಕದ ಎಲ್ಲಾ ಕಡೆ ಇರುವ ಸಭೆಗಳು ಬಲಗೊಳ್ಳುವವು ಮತ್ತು ಮುಂದೆ ಬರಲಿರುವ ರೋಮಾಂಚಕ ಸಮಯದಲ್ಲಿ ನಂಬಿಗಸ್ತರಾಗಿ ಉಳಿಯಲು ನಮ್ಮೆಲ್ಲರಿಗೆ ಸಹಾಯವಾಗುವುದು.

^ ಪ್ಯಾರ. 5 ಯುವ ಸಹೋದರನೊಬ್ಬ ಪ್ರೌಢನೂ, ದೀನನೂ ಆಗಿದ್ದು, ಸಭೆಯಲ್ಲಿ ಸೇವೆಮಾಡಲಿಕ್ಕೆ ಬೇಕಾದ ಇತರ ಗುಣಗಳನ್ನು ತೋರಿಸುವಲ್ಲಿ ಹಿರಿಯರು ಅವನನ್ನು ಶುಶ್ರೂಷಾ ಸೇವಕನಾಗಿ ನೇಮಿಸಬಹುದು. ಅವನು 20 ವರ್ಷಕ್ಕಿಂತ ಚಿಕ್ಕವನಾಗಿದ್ದರೂ ನೇಮಿಸಬಹುದು.—1 ತಿಮೊ.3:8-10, 12. ಮೇ 2000ದ ನಮ್ಮ ರಾಜ್ಯ ಸೇವೆ, ಪುಟ 8 ನೋಡಿ.