ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?

ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” —ಯಾಕೋ. 4:8.

1. ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ಏಕೆ ಬಲವಾಗಿ ಇಟ್ಟುಕೊಳ್ಳಬೇಕು?

ನೀವು ದೀಕ್ಷಾಸ್ನಾನ ಆಗಿರುವ ಯೆಹೋವನ ಸಾಕ್ಷಿಯಾಗಿದ್ದೀರಾ? ಹಾಗಾದರೆ ನಿಮ್ಮ ಬಳಿ ತುಂಬ ಬೆಲೆಬಾಳುವ ವಿಷಯವೊಂದಿದೆ. ಅದೇ ಯೆಹೋವನೊಟ್ಟಿಗಿನ ವೈಯಕ್ತಿಕ ಸಂಬಂಧ. ಆದರೆ ಸೈತಾನನ ಲೋಕ ಆಗಿಂದಾಗ್ಗೆ ಈ ಸಂಬಂಧದ ಮೇಲೆ ಆಕ್ರಮಣ ನಡೆಸುತ್ತಾ ಇರುತ್ತದೆ. ಜೊತೆಗೆ ನಮ್ಮ ಅಪರಿಪೂರ್ಣತೆಯಿಂದಲೂ ಈ ಸಂಬಂಧ ದುರ್ಬಲವಾಗಬಹುದು. ಆದ್ದರಿಂದ ಯೆಹೋವನೊಟ್ಟಿಗಿನ ಸಂಬಂಧವನ್ನು ಆದಷ್ಟು ಬಲವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.

2. ಯೆಹೋವನ ಜೊತೆಗಿನ ನಮ್ಮ ಸಂಬಂಧ ಗಟ್ಟಿ ಮಾಡುವುದು ಹೇಗೆ?

2 ಯೆಹೋವನು ನೈಜ ವ್ಯಕ್ತಿಯೆಂದು ನಿಮಗನಿಸುತ್ತದಾ? ನಿಮ್ಮ ಸ್ನೇಹಿತ ಎಂದು ಅನಿಸುತ್ತದಾ? ಆತನ ಜೊತೆ ನಿಮಗಿರುವ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು ಬಯಸುತ್ತೀರಾ? ಹಾಗಿರುವಲ್ಲಿ ನೀವೇನು ಮಾಡಬೇಕೆಂದು ಯಾಕೋಬ 4:8 ಹೇಳುತ್ತದೆ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” ಯೆಹೋವನ ಜೊತೆಗಿನ ನಿಮ್ಮ ಸಂಬಂಧದಲ್ಲಿ ನಿಮ್ಮಿಬ್ಬರ ಪಾತ್ರ ಇದೆ. ಯೆಹೋವನ ಹತ್ತಿರ ಹೋಗಲು ನೀವು ಹೆಜ್ಜೆ ತಕ್ಕೊಂಡರೆ ಆತನೂ ನಿಮ್ಮ ಹತ್ತಿರಕ್ಕೆ ಬರುತ್ತಾನೆ. ನೀವದನ್ನು ಹೆಚ್ಚು ಮಾಡಿದರೆ ಆತನು ನಿಮಗೆ ಹೆಚ್ಚು ನೈಜನಾಗುತ್ತಾನೆ. ನಿಮ್ಮ ಸಂಬಂಧ ಎಷ್ಟು ಆಪ್ತವಾಗುತ್ತದೆಂದರೆ ಯೇಸುವಿಗೆ ಅನಿಸಿದಂತೇ ನಿಮಗೂ ಅನಿಸುವುದು. ಅವನಂದದ್ದು: “ನನ್ನನ್ನು ಕಳುಹಿಸಿದಾತನು ನೈಜವಾದಾತನು . . . ನಾನು ಆತನನ್ನು ತಿಳಿದಿದ್ದೇನೆ.” (ಯೋಹಾ. 7:28, 29) ಯೆಹೋವನ ಹತ್ತಿರ ಹೋಗಲು ನೀವು ಮಾಡಬಹುದಾದ ಕೆಲವು ವಿಷಯಗಳೇನು?

ನಾವು ಹೇಗೆ ಯೆಹೋವನ ಮಾತಿಗೆ ಕಿವಿಗೊಡಬಹುದು? (ಪ್ಯಾರ 3 ನೋಡಿ)

3. ಯೆಹೋವನ ಜೊತೆ ನಾವು ಮಾತಾಡುವುದು ಮತ್ತು ಆತನ ಮಾತಿಗೆ ಕಿವಿಗೊಡುವುದು ಹೇಗೆ?

3 ನೀವು ಯೆಹೋವನಿಗೆ ಹತ್ತಿರವಾಗಬೇಕಾದರೆ ಆತನೊಟ್ಟಿಗೆ ಯಾವಾಗಲೂ ಮಾತಾಡುವುದು, ಆತನ ಮಾತಿಗೆ ಕಿವಿಗೊಡುವುದು ತುಂಬ ಪ್ರಾಮುಖ್ಯ. ಆದರೆ ಇದು ಹೇಗೆ ಸಾಧ್ಯ? ಅದನ್ನು ಅರ್ಥ ಮಾಡಿಕೊಳ್ಳಲು ದೂರದ ಸ್ಥಳದಲ್ಲಿರುವ ನಿಮ್ಮ ಸ್ನೇಹಿತನೊಟ್ಟಿಗೆ ಹೇಗೆ ಸಂಪರ್ಕ ಇಟ್ಟುಕೊಳ್ಳುತ್ತೀರೆಂದು ಯೋಚಿಸಿ. ನೀವು ಒಬ್ಬರಿಗೊಬ್ಬರು ಪತ್ರ ಬರೆಯುತ್ತೀರಿ ಅಥವಾ ಫೋನಲ್ಲಿ ಮಾತಾಡುತ್ತೀರಿ ಅಲ್ಲವೇ? ಯೆಹೋವನೊಟ್ಟಿಗೂ ಪ್ರಾರ್ಥನೆ ಮೂಲಕ ನಾವು ಯಾವಾಗಲೂ ಮಾತಾಡಬಹುದು. (ಕೀರ್ತನೆ 142:2 ಓದಿ.) ಆದರೆ ಯೆಹೋವನು ನಿಮ್ಮೊಟ್ಟಿಗೆ ಮಾತಾಡಲು ಅವಕಾಶ ಮಾಡಿಕೊಡುವುದು ಹೇಗೆ? ಆತನ ವಾಕ್ಯವಾದ ಬೈಬಲನ್ನು ಓದಿ ಧ್ಯಾನಿಸುವ ಮೂಲಕ. (ಯೆಶಾಯ 30:20, 21 ಓದಿ.) ನಿಮ್ಮ ಮತ್ತು ಯೆಹೋವನ ಜೊತೆಗಿನ ಮಾತುಕತೆ ನಿಮ್ಮಿಬ್ಬರ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುತ್ತದೆ ಮತ್ತು ಆತನು ಹೇಗೆ ನಿಮಗೊಬ್ಬ ನೈಜ ವ್ಯಕ್ತಿ ಆಗಬಹುದೆಂದು ತಿಳಿಯೋಣ.

ಯೆಹೋವನು ಮಾತಾಡುತ್ತಾನೆ —ನೀವು ಬೈಬಲನ್ನು ಓದುವಾಗ

4, 5. ನೀವು ಬೈಬಲನ್ನು ಓದುವಾಗ ಯೆಹೋವನು ನಿಮ್ಮೊಟ್ಟಿಗೆ ಹೇಗೆ ಮಾತಾಡುತ್ತಾನೆ? ಉದಾಹರಣೆ ಕೊಡಿ.

4 ಬೈಬಲ್‌ ಎಲ್ಲರಿಗಾಗಿರುವ ದೇವರ ಸಂದೇಶ ಎಂದು ನಮಗೆ ಗೊತ್ತು. ಆದರೆ ಯೆಹೋವನಿಗೆ ಇನ್ನಷ್ಟು ಹತ್ತಿರವಾಗಲು ಬೈಬಲ್‌ ನಿಮಗೆ ಸಹಾಯ ಮಾಡುತ್ತದಾ? ಹೌದು! ದಿನಾಲೂ ಬೈಬಲನ್ನು ಓದಿ ಧ್ಯಾನಿಸುವಾಗ ಓದಿದ ವಿಷಯದ ಬಗ್ಗೆ ನಿಮಗೆ ಹೇಗನಿಸುತ್ತದೆ ಎಂಬುದಕ್ಕೆ ಗಮನಕೊಡಿ. ಕಲಿತ ವಿಷಯಗಳನ್ನು ಹೇಗೆ ಅನ್ವಯಿಸಬಹುದೆಂದೂ ಯೋಚಿಸಿ. ಹೀಗೆ ಮಾಡುವಾಗ ಯೆಹೋವನು ನಿಮ್ಮೊಟ್ಟಿಗೆ ಮಾತಾಡುವಂತೆ ಬಿಟ್ಟುಕೊಡುತ್ತೀರಿ. ಆಗ ಯೆಹೋವನು ನಿಮಗೆ ಸಹಾಯ ಮಾಡುವ ಆಪ್ತ ಸ್ನೇಹಿತನಾಗುತ್ತಾನೆ. ನೀವಾತನಿಗೆ ಇನ್ನಷ್ಟು ಹತ್ತಿರವಾಗುತ್ತೀರಿ.—ಇಬ್ರಿ. 4:12; ಯಾಕೋ. 1:23-25.

5 ಉದಾಹರಣೆಗೆ, “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ” ಎಂಬ ಯೇಸುವಿನ ಮಾತನ್ನು ಓದಿದಾಗ ನಿಮಗೆ ಹೇಗನಿಸುತ್ತದೆ? ನಿಮ್ಮ ಬದುಕಲ್ಲಿ ಯೆಹೋವನಿಗೆ ಪ್ರಥಮ ಸ್ಥಾನ ಕೊಡಲು ಕೈಲಾದದ್ದೆಲ್ಲನ್ನು ಮಾಡುತ್ತಿರುವಲ್ಲಿ ಯೆಹೋವನು ನಿಮ್ಮನ್ನು ಮೆಚ್ಚುತ್ತಾನೆ ಎಂಬ ಭಾವನೆ ನಿಮಗಿರುತ್ತದೆ. ಆಗ ನಿಮಗೆ ಸಂತೋಷವಾಗುತ್ತದೆ. ಆದರೆ ಆ ಮಾತನ್ನು ಓದಿದಾಗ ನಿಮ್ಮ ಬದುಕನ್ನು ಸರಳ ಮಾಡಿಕೊಂಡು ದೇವರ ಸೇವೆಯನ್ನು ಹೆಚ್ಚಿಸಲು ಗಮನ ಕೊಡಬೇಕೆಂದು ನಿಮಗನಿಸುವಲ್ಲಿ ಆಗೇನು? ಇದರರ್ಥ ಯೆಹೋವನು ನೀವಾತನಿಗೆ ಹೆಚ್ಚು ಹತ್ತಿರವಾಗುವುದು ಹೇಗೆಂದು ತಿಳಿಸಿಕೊಡುತ್ತಿದ್ದಾನೆ.—ಮತ್ತಾ. 6:19, 20.

6, 7. (ಎ) ನಾವು ಬೈಬಲ್‌ ಅಧ್ಯಯನ ಮಾಡುವಾಗ ಯೆಹೋವನಿಗಾಗಿ ನಮ್ಮಲ್ಲಿರುವ ಪ್ರೀತಿ ಮತ್ತು ಆತನಿಗೆ ನಮ್ಮ ಮೇಲಿರುವ ಪ್ರೀತಿಗೆ ಏನಾಗುತ್ತದೆ? (ಬಿ) ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವಾಗ ನಮ್ಮ ಮುಖ್ಯ ಗುರಿ ಏನಾಗಿರಬೇಕು?

6 ಯೆಹೋವನ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ನಾವು ಮಾಡಬೇಕಾದ ಬದಲಾವಣೆಗಳ ಬಗ್ಗೆ ವೈಯಕ್ತಿಕ ಬೈಬಲ್‌ ಅಧ್ಯಯನದಲ್ಲಿ ಕಲಿಯುತ್ತೇವೆ ನಿಜ. ಅದರ ಜೊತೆಗೆ ಆತನು ಪ್ರೀತಿಯಿಂದ ನಮಗಾಗಿ ಮಾಡುವ ವಿಷಯಗಳ ಬಗ್ಗೆ, ಆತನ ಅದ್ಭುತ ವ್ಯಕ್ತಿತ್ವದ ಬಗ್ಗೆಯೂ ಕಲಿಯುತ್ತೇವೆ. ಇದರಿಂದಾಗಿ ಯೆಹೋವನ ಮೇಲಿನ ನಮ್ಮ ಪ್ರೀತಿ ಹೆಚ್ಚುತ್ತದೆ. ಆತನ ಮೇಲಿನ ಪ್ರೀತಿ ಹೆಚ್ಚುತ್ತಾ ಹೋದಂತೆ ಆತನಿಗೂ ನಮ್ಮ ಮೇಲೆ ಪ್ರೀತಿ ಹೆಚ್ಚುತ್ತದೆ. ಆತನೊಟ್ಟಿಗಿರುವ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.—1 ಕೊರಿಂಥ 8:3 ಓದಿ.

7 ನಾವು ಯೆಹೋವನ ಸಮೀಪಕ್ಕೆ ಬರಬೇಕಾದರೆ ಬೈಬಲನ್ನು ಸರಿಯಾದ ಕಾರಣಕ್ಕಾಗಿ ಅಧ್ಯಯನ ಮಾಡುವುದು ಮುಖ್ಯ. ಯೇಸು ಹೀಗಂದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾ. 17:3) ನಾವು ಬೈಬಲನ್ನು ಓದಿ ಅಧ್ಯಯನ ಮಾಡುವಾಗ ಹೊಸಹೊಸ, ಆಸಕ್ತಿಕರ ವಿಷಯಗಳನ್ನು ಕಲಿಯುತ್ತೇವೆ ನಿಜ. ಆದರೆ ನಮ್ಮ ಮುಖ್ಯ ಗುರಿ ಯೆಹೋವನನ್ನು ಇನ್ನೂ ಚೆನ್ನಾಗಿ ಬಲ್ಲವರಾಗಿರುವುದೇ ಅಥವಾ ತಿಳಿದುಕೊಳ್ಳುವುದೇ ಆಗಿರಬೇಕು.—ವಿಮೋಚನಕಾಂಡ 33:13 ಓದಿ; ಕೀರ್ತ. 25:4.

8. (ಎ) ರಾಜ ಅಜರ್ಯನೊಂದಿಗೆ ಯೆಹೋವನು ವ್ಯವಹರಿಸಿದ ರೀತಿ ಬಗ್ಗೆ ಕೆಲವರಿಗೆ ಏನನಿಸಬಹುದು? (ಬಿ) ನೀವು ಯೆಹೋವನನ್ನು ಚೆನ್ನಾಗಿ ತಿಳುಕೊಂಡಿದ್ದರೆ ಆತನು ವ್ಯವಹರಿಸಿದ್ದರ ಬಗ್ಗೆ ನಿಮಗೇನನಿಸುತ್ತದೆ?

8 ಯೆಹೋವನು ವ್ಯವಹರಿಸಿದ ರೀತಿಗೆ ಬೈಬಲ್‌ ಯಾವಾಗಲೂ ಕಾರಣ ಕೊಡುವುದಿಲ್ಲ. ಆದರೆ ಒಬ್ಬ ಆಪ್ತ ಸ್ನೇಹಿತನನ್ನು ತಿಳಿದುಕೊಂಡಂತೆ ನಾವು ಯೆಹೋವನನ್ನು ಚೆನ್ನಾಗಿ ತಿಳಿದುಕೊಂಡಿರುವಲ್ಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಅಜರ್ಯನು ಯೆಹೂದದ ರಾಜನಾಗಿದ್ದಾಗ ಜನರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದರು. ಆದರೆ ಅಜರ್ಯ ಹಾಗೆ ಮಾಡಲಿಲ್ಲ. “ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.” (2 ಅರ. 15:1-5) ಹಾಗಿದ್ದರೂ ಅವನಿಗೆ ಕುಷ್ಠರೋಗ ಬರುವಂತೆ ಯೆಹೋವನು ಮಾಡಿದನು. ಯಾಕೆ? ಕಥೆಯ ಈ ಭಾಗದಲ್ಲಿ ಅದನ್ನು ತಿಳಿಸಲಾಗಿಲ್ಲ. ಹಾಗಾಗಿ ‘ಯೆಹೋವನು ಮಾಡಿದ್ದು ಅನ್ಯಾಯ. ಏನೂ ತಪ್ಪು ಮಾಡದ ಅಜರ್ಯನಿಗೆ ಶಿಕ್ಷೆ ಕೊಟ್ಟ’ ಎಂದು ನಿಮಗನಿಸುತ್ತದಾ? ಯೆಹೋವನ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುವಲ್ಲಿ, ಆತನು ಶಿಕ್ಷೆ ಕೊಟ್ಟರೆ ಸರಿಯಾದ ಕಾರಣಕ್ಕೇ ಕೊಡುತ್ತಾನೆ, ಯಾವತ್ತೂ ಯಾರನ್ನೂ ‘ಮಿತಿಮಿಾರಿ ಶಿಕ್ಷಿಸುವುದಿಲ್ಲ’ ಎಂದು ಗೊತ್ತಿರುತ್ತದೆ. (ಯೆರೆ. 30:11) ಯೆಹೋವನು ಅಜರ್ಯನನ್ನು ಏಕೆ ಶಿಕ್ಷಿಸಿದನು ಎಂದು ನಿಮಗೆ ತಿಳಿದಿಲ್ಲವಾದರೂ ಆತನು ಮಾಡಿದ್ದು ಸರಿಯಾಗಿತ್ತೆಂಬ ಭರವಸೆ ನಿಮಗಿರುತ್ತದೆ.

9. ಅಜರ್ಯನಿಗೆ ಕುಷ್ಠರೋಗ ಬರುವಂತೆ ಯೆಹೋವನು ಮಾಡಿದ್ದೇಕೆಂದು ತಿಳಿಯಲು ಯಾವ ಹೆಚ್ಚಿನ ವಿವರಗಳು ಸಹಾಯ ಮಾಡುತ್ತವೆ?

9 ರಾಜ ಅಜರ್ಯನ ಬದುಕಿನ ಬಗ್ಗೆ ಬೈಬಲಿನ ಇನ್ನೊಂದು ಪುಸ್ತಕದಲ್ಲಿ ಹೆಚ್ಚು ವಿವರಗಳಿವೆ. ಅವನಿಗೆ ರಾಜ ಉಜ್ಜೀಯ ಎಂಬ ಹೆಸರೂ ಇತ್ತು. (2 ಅರ. 15:7, 32) ಎರಡನೇ ಪೂರ್ವಕಾಲವೃತ್ತಾಂತ 26:3-5, 16-21ರಲ್ಲಿರುವ ಕಥೆಯ ಉಳಿದ ಭಾಗದಲ್ಲಿ ಉಜ್ಜೀಯನು “ಯೆಹೋವನ ಚಿತ್ತಾನುಸಾರವಾಗಿ ನಡೆದನು” ಎಂದು ಇದೆ. ಆದರೆ ಸಮಯ ದಾಟಿದಂತೆ ಅವನು “ಗರ್ವಿಷ್ಠನಾಗಿ ಭ್ರಷ್ಟನಾದನು” ಎಂದೂ ಬೈಬಲಲ್ಲಿದೆ. ಯಾಜಕರು ಮಾತ್ರ ಮಾಡಬೇಕಾಗಿದ್ದ ಕೆಲಸಕ್ಕೆ ಇವನು ಕೈಹಾಕಿದನು. ಉಜ್ಜೀಯ ಮಾಡುತ್ತಿರುವುದು ತಪ್ಪೆಂದು 81 ಮಂದಿ ಯಾಜಕರು ಹೇಳಿದರೂ, ತಡೆಯಲು ಪ್ರಯತ್ನಿಸಿದರೂ ಅವನು ಯಾರ ಮಾತೂ ಕೇಳಲಿಲ್ಲ. ಅವರೆಲ್ಲರ ಮೇಲೆ ಅವನಿಗೆ ಕೋಪವೂ ಬಂತು. ಅವನಲ್ಲಿ ಅಷ್ಟು ಅಹಂಕಾರ ಬೆಳೆದಿತ್ತು! ಈ ಹೆಚ್ಚಿನ ವಿವರಗಳಿಂದ ಯೆಹೋವನು ಅವನಿಗೆ ಕುಷ್ಠರೋಗ ಬರುವಂತೆ ಮಾಡಿದ್ದೇಕೆಂದು ತಿಳಿಯಲು ಸಹಾಯವಾಗುತ್ತದೆ.

10. (ಎ) ಯೆಹೋವನು ಏನೇ ಮಾಡಿದರೂ ಅದಕ್ಕೆಲ್ಲ ನಮಗೆ ಕಾರಣ ಗೊತ್ತಿರಲೇಬೇಕೆಂದಿಲ್ಲ ಯಾಕೆ? (ಬಿ) ಯೆಹೋವನು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ ಎಂಬ ಭರವಸೆಯನ್ನು ಹೇಗೆ ಹೆಚ್ಚಿಸಬಹುದು?

10 ಇದರಿಂದ ನಾವು ಯಾವ ಮುಖ್ಯ ಪಾಠ ಕಲಿಯುತ್ತೇವೆ? ರಾಜ ಅಜರ್ಯನನ್ನು ಯೆಹೋವನು ಯಾಕೆ ಶಿಕ್ಷಿಸಿದನು ಎಂದು ತಿಳಿಯಲು ಸಹಾಯ ಮಾಡುವ ವಿವರಗಳು ನಮಗಿವೆ. ಆದರೆ ಒಂದು ವೃತ್ತಾಂತದ ಬಗ್ಗೆ ಬೈಬಲಲ್ಲಿ ಎಲ್ಲಾ ವಿವರಗಳು ಇಲ್ಲದಿದ್ದರೆ? ಯೆಹೋವನು ಮಾಡಿದ್ದು ನಿಜವಾಗಲೂ ಸರಿಯಾಗಿತ್ತಾ ಎಂದು ಯೋಚಿಸುತ್ತೀರಾ? ಅಥವಾ ದೇವರು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ ಎಂದು ನಂಬಲು ಎಷ್ಟು ಬೇಕೊ ಅಷ್ಟು ಮಾಹಿತಿ ಮಾತ್ರ ಬೈಬಲಲ್ಲಿದೆ ಎಂದು ನೆನಸುತ್ತೀರಾ? (ಧರ್ಮೋ. 32:4) ಯೆಹೋವನ ಬಗ್ಗೆ ನಾವು ಇನ್ನಷ್ಟು ಚೆನ್ನಾಗಿ ತಿಳಿದುಕೊಂಡಾಗ ಆತನ ಮೇಲಿನ ಪ್ರೀತಿ, ಭರವಸೆ ಇನ್ನೂ ಹೆಚ್ಚುತ್ತದೆ. ಆತನು ಏನೇ ಮಾಡಿದರೂ ಅದಕ್ಕೆ ನಮಗೆ ಕಾರಣ ಗೊತ್ತಿರಲೇಬೇಕು ಎಂದು ನಮಗನಿಸುವುದಿಲ್ಲ. ಬೈಬಲಿನ ವೈಯಕ್ತಿಕ ಅಧ್ಯಯನ ಮಾಡುತ್ತಾ ಹೋದಂತೆ ಯೆಹೋವನು ಹೆಚ್ಚು ನೈಜನಾಗುತ್ತಾನೆ. ನೀವಾತನಿಗೆ ಇನ್ನಷ್ಟು ಹತ್ತಿರವಾಗುತ್ತೀರಿ.—ಕೀರ್ತ. 77:12, 13.

ಯೆಹೋವನೊಟ್ಟಿಗೆ ಮಾತಾಡಿ —ಪ್ರಾರ್ಥನೆ ಮೂಲಕ

11-13. ಯೆಹೋವನು ಪ್ರಾರ್ಥನೆಗಳನ್ನು ಕೇಳುತ್ತಾನೆಂದು ನಿಮಗೆ ಹೇಗೆ ಗೊತ್ತು? (ಲೇಖನದ ಆರಂಭದ ಚಿತ್ರ ನೋಡಿ.)

11 ನಾವು ಪ್ರಾರ್ಥನೆ ಮಾಡುವಾಗ ಯೆಹೋವನಿಗೆ ಹತ್ತಿರವಾಗುತ್ತೇವೆ. ಪ್ರಾರ್ಥನೆಯಲ್ಲಿ ನಾವಾತನಿಗೆ ಸ್ತುತಿ ಸಲ್ಲಿಸುತ್ತೇವೆ, ಧನ್ಯವಾದ ಹೇಳುತ್ತೇವೆ, ಆತನ ಸಹಾಯ ಬೇಡುತ್ತೇವೆ. (ಕೀರ್ತ. 32:8) ಆದರೆ ಯೆಹೋವನೊಟ್ಟಿಗೆ ಆಪ್ತ ಸ್ನೇಹಸಂಬಂಧ ಇರಬೇಕಾದರೆ ಆತನು ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂದು ನಮಗೆ ನಿಶ್ಚಯ ಇರಬೇಕು.

12 ಕೆಲವರು ಹೇಳುವುದೇನೆಂದರೆ, ದೇವರೇನೂ ನಮ್ಮ ಪ್ರಾರ್ಥನೆಗಳನ್ನು ಕೇಳುವುದಿಲ್ಲ. ಪ್ರಾರ್ಥನೆ ಮಾಡಿದಾಗ ನಮಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಬಿಟ್ಟರೆ ಬೇರೇನಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಯೋಚಿಸಿ ನಾವೇ ಪರಿಹಾರ ಕಂಡುಕೊಳ್ಳುವಂತೆ ಪ್ರಾರ್ಥನೆ ಸಹಾಯ ಮಾಡುತ್ತದೆ ಅಷ್ಟೇ ಎಂದವರು ನಂಬುತ್ತಾರೆ. ಈ ವಿಧಗಳಲ್ಲಿ ಪ್ರಾರ್ಥನೆ ನಮಗೆ ಸಹಾಯ ಮಾಡಬಹುದು ನಿಜ ಆದರೆ ನೀವು ಪ್ರಾರ್ಥನೆಯಲ್ಲಿ ಯೆಹೋವನೊಟ್ಟಿಗೆ ಮಾತಾಡುವಾಗ ನೀವು ಹೇಳುವುದನ್ನು ಆತನು ಕೇಳುತ್ತಾನೆ. ಇದನ್ನು ಅಷ್ಟು ಖಡಾಖಂಡಿತವಾಗಿ ಹೇಗೆ ಹೇಳಬಹುದು?

13 ಇದರ ಬಗ್ಗೆ ಯೋಚಿಸಿ: ಯೇಸು ಭೂಮಿಗೆ ಬರುವುದಕ್ಕೆ ಮುಂಚೆ ಯೆಹೋವನು ಮನುಷ್ಯರ ಪ್ರಾರ್ಥನೆಗಳಿಗೆ ಉತ್ತರ ಕೊಡುವುದನ್ನು ನೋಡಿದ್ದನು. ಯೇಸು ಭೂಮಿ ಮೇಲಿದ್ದಾಗ ತನ್ನ ಭಾವನೆ, ಅನಿಸಿಕೆಗಳ ಬಗ್ಗೆ ತನ್ನ ತಂದೆಗೆ ಪ್ರಾರ್ಥಿಸುತ್ತಿದ್ದನು. ಒಂದು ಸಲ ಇಡೀ ರಾತ್ರಿ ಪ್ರಾರ್ಥಿಸಿದನು. (ಲೂಕ 6:12; 22:40-46) ಯೆಹೋವನು ಪ್ರಾರ್ಥನೆಗಳನ್ನು ಆಲಿಸುವುದಿಲ್ಲ ಎಂದು ಯೇಸು ನೆನಸಿರುತ್ತಿದ್ದರೆ ಪ್ರಾರ್ಥನೆ ಮಾಡುತ್ತಿದ್ದನಾ? ತನ್ನ ಹಿಂಬಾಲಕರಿಗೂ ಹೇಗೆ ಪ್ರಾರ್ಥಿಸಬೇಕೆಂದು ಹೇಳಿಕೊಟ್ಟನು. ಯೆಹೋವನು ಪ್ರಾರ್ಥನೆಗಳನ್ನು ಆಲಿಸುವುದಿಲ್ಲ ಎಂದು ಯೇಸು ನೆನಸಿರುತ್ತಿದ್ದರೆ ಅವನು ಹಾಗೆ ಹೇಳಿಕೊಡುತ್ತಿದ್ದನಾ? ಯೆಹೋವನು ಪ್ರಾರ್ಥನೆಗಳನ್ನು ಕೇಳುತ್ತಾನೆಂದು ಯೇಸುವಿಗೆ ಗೊತ್ತಿತ್ತು. “ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ತಿಳಿದಿತ್ತು” ಎಂದು ಯೇಸು ಹೇಳಿದನು. ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆಂದು ನಮಗೂ ಯೇಸುವಿನಷ್ಟೇ ಖಾತ್ರಿ ಇರಬೇಕು.—ಯೋಹಾ. 11:41, 42; ಕೀರ್ತ. 65:2.

14, 15. (ಎ) ನಿರ್ದಿಷ್ಟ ವಿಷಯಗಳಿಗಾಗಿ ಪ್ರಾರ್ಥಿಸಿದಾಗ ನಮಗೆ ಹೇಗೆ ಪ್ರಯೋಜನವಾಗುತ್ತದೆ? (ಬಿ) ಕ್ಯಾತಿಯ ಪ್ರಾರ್ಥನೆಗಳು ಅವಳನ್ನು ಹೇಗೆ ಯೆಹೋವನ ಹತ್ತಿರಕ್ಕೆ ತಂದಿವೆ?

14 ನಮ್ಮ ಪ್ರಾರ್ಥನೆಗಳಿಗೆ ಯೆಹೋವನು ಕೊಡುವ ಉತ್ತರ ಯಾವಾಗಲೂ ನಮಗೆ ಸ್ಪಷ್ಟವಾಗಿ ತೋರಿಬರದೇ ಇರಬಹುದು. ಆದರೆ ನಿರ್ದಿಷ್ಟ ವಿಷಯಗಳಿಗಾಗಿ ನಾವು ಪ್ರಾರ್ಥಿಸುವಾಗ ಯೆಹೋವನು ಕೊಡುವ ಉತ್ತರವನ್ನು ಸ್ಪಷ್ಟವಾಗಿ ನೋಡಲು ಶಕ್ತರಾಗುತ್ತೇವೆ. ಆಗ ಆತನು ನಮಗೆ ಇನ್ನಷ್ಟು ನೈಜನಾಗುತ್ತಾನೆ. ನಿಮಗಿರುವ ಒಂದೊಂದು ಚಿಂತೆ ಬಗ್ಗೆಯೂ ಯೆಹೋವನ ಹತ್ತಿರ ಬಿಚ್ಚು ಮನಸ್ಸಿನಿಂದ ಮಾತಾಡಿದರೆ ನಿಮಗಾತನು ಹೆಚ್ಚು ಹತ್ತಿರವಾಗುತ್ತಾನೆ.

15 ಈ ಉದಾಹರಣೆ ನೋಡಿ. ಕ್ಯಾತಿ ಆಗಾಗ ಸೇವೆಗೆ ಹೋಗುತ್ತಿದ್ದರೂ ಅವಳಿಗೆ ಅದರಿಂದ ಸ್ವಲ್ಪವೂ ಖುಷಿ ಸಿಗುತ್ತಿರಲಿಲ್ಲ. * (ಪಾದಟಿಪ್ಪಣಿ ನೋಡಿ.) ಅವಳ ಮಾತುಗಳನ್ನೇ ಕೇಳಿ: “ನನಗೆ ಸೇವೆ ಅಂದರೆನೇ ಆಗುತ್ತಿರಲಿಲ್ಲ. ನಿಜವಾಗಲೂ ಇಷ್ಟ ಆಗುತ್ತಿರಲಿಲ್ಲ.” ಕೆಲಸದಿಂದ ನಿವೃತ್ತಿ ಪಡೆದ ನಂತರ ಅವಳ ಸಭೆಯ ಹಿರಿಯನೊಬ್ಬರು ಅವಳಿಗೆ ರೆಗ್ಯುಲರ್‌ ಪಯನೀಯರ್‌ ಆಗುವಂತೆ ಉತ್ತೇಜಿಸಿದರು. “ಆ ಸಹೋದರ ನನ್ನ ಕೈಗೆ ಅರ್ಜಿಯನ್ನೂ ಕೊಟ್ಟರು. ಸರಿ, ಪಯನೀಯರ್‌ ಸೇವೆ ಮಾಡೋಣ ಅಂತ ತೀರ್ಮಾನ ಮಾಡಿಯೇ ಬಿಟ್ಟೆ. ಜೊತೆಗೆ ನಾನು ಪ್ರತಿದಿನ ನಿರ್ದಿಷ್ಟವಾಗಿ ‘ಯೆಹೋವನೇ ನಾನು ಸೇವೆಯನ್ನು ಇಷ್ಟಪಡುವಂತೆ ಮಾಡಪ್ಪಾ’ ಎಂದು ಪ್ರಾರ್ಥಿಸಲೂ ಶುರುಮಾಡಿದೆ.” ಅವಳ ಪ್ರಾರ್ಥನೆಯನ್ನು ಯೆಹೋವನು ಕೇಳಿದನಾ? 3 ವರ್ಷದಿಂದ ರೆಗ್ಯುಲರ್‌ ಪಯನೀಯರ್‌ ಆಗಿರುವ ಕ್ಯಾತಿ ಈಗ ಏನನ್ನುತ್ತಾಳೆ ಕೇಳಿ: “ನಾನೀಗ ಸೇವೆಯಲ್ಲಿ ತುಂಬ ಸಮಯ ಕಳೆಯುತ್ತಿರುವುದರಿಂದ ಮತ್ತು ಬೇರೆ ಸಹೋದರಿಯರಿಂದ ತುಂಬ ವಿಷಯಗಳನ್ನು ಕಲಿಯುತ್ತಿರುವುದರಿಂದ ಸಾಕ್ಷಿ ಕೊಡುವ ನನ್ನ ಸಾಮರ್ಥ್ಯ ನಿಧಾನವಾಗಿ ಬೆಳೆದಿದೆ. ಈಗ ನನಗೆ ಸೇವೆ ಎಂದರೆ ಬರೀ ಇಷ್ಟ ಅಲ್ಲ, ತುಂಬ ತುಂಬ ಇಷ್ಟ. ಅದಕ್ಕಿಂತ ಹೆಚ್ಚಾಗಿ ಯೆಹೋವನ ಜೊತೆ ನನಗೀಗ ಮೊದಲಿಗಿಂತಲೂ ಹೆಚ್ಚು ಹತ್ತಿರದ ಸಂಬಂಧ ಇದೆ.” ಕ್ಯಾತಿಯ ಪ್ರಾರ್ಥನೆಗಳು ನಿಜವಾಗಲೂ ಅವಳಿಗೆ ಯೆಹೋವನ ಹತ್ತಿರ ಬರಲು ಸಹಾಯ ಮಾಡಿವೆ.

ನಿಮ್ಮ ಕೆಲಸ ನೀವು ಮಾಡಿ

16, 17. (ಎ) ಯೆಹೋವನೊಟ್ಟಿಗಿನ ನಮ್ಮ ಸಂಬಂಧ ಗಟ್ಟಿಗೊಳಿಸುತ್ತಾ ಇರಲು ನಾವೇನು ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನು ಕಲಿಯಲಿದ್ದೇವೆ?

16 ನಾವು ನಿರಂತರಕ್ಕೂ ಯೆಹೋವನಿಗೆ ಹತ್ತಿರವಾಗುತ್ತಾ ಇರಬಹುದು. ವೈಯಕ್ತಿಕ ಬೈಬಲ್‌ ಅಧ್ಯಯನ ತಪ್ಪದೇ ಮಾಡುವ ಮೂಲಕ ಆತನಿಗೆ ಕಿವಿಗೊಡೋಣ. ಪ್ರಾರ್ಥನೆ ಮೂಲಕ ಯಾವಾಗಲೂ ಆತನೊಂದಿಗೆ ಮಾತಾಡೋಣ. ಹೀಗೆ ಮಾಡಿದರೆ ಆತನೊಟ್ಟಿಗಿನ ನಮ್ಮ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಕಷ್ಟತೊಂದರೆಗಳು ಬಂದರೂ ಆತನ ಸಹಾಯದಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ.

ಜೀವನಪರ್ಯಂತ ಯೆಹೋವನಿಗೆ ನಾವು ಹತ್ತಿರವಾಗುತ್ತಾ ಇರಬಹುದು (ಪ್ಯಾರ 16, 17 ನೋಡಿ)

17 ಆದರೆ ಕೆಲವೊಮ್ಮೆ ಎಷ್ಟೇ ಪ್ರಾರ್ಥನೆ ಮಾಡಿದರೂ ವೈಯಕ್ತಿಕ ಸಮಸ್ಯೆಗಳಿಂದ ನಾವು ಕಷ್ಟಪಡುತ್ತಿರುತ್ತೇವೆ. ಆಗ ಯೆಹೋವನ ಮೇಲಿನ ಭರವಸೆ ಕಮ್ಮಿಯಾಗುತ್ತಾ ಬರಬಹುದು. ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳುವುದಿಲ್ಲ, ನಾವಾತನ ಸ್ನೇಹಿತರಲ್ಲ ಎಂಬ ಭಾವನೆ ನಮಗೆ ಬರಬಹುದು. ನಿಮಗೆ ಹೀಗನಿಸಿದರೆ ಏನು ಮಾಡಬಹುದು? ಮುಂದಿನ ಲೇಖನ ನಿಮಗೆ ಸಹಾಯ ಮಾಡಲಿದೆ.

^ ಪ್ಯಾರ. 15 ಹೆಸರನ್ನು ಬದಲಾಯಿಸಲಾಗಿದೆ.