“ನಿಮಗೆ ತಾಳ್ಮೆಯ ಅಗತ್ಯವಿದೆ”
ಅನಿತಾ * ಎಂಬಾಕೆ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದ ನಂತರ ಅವಳ ಗಂಡನ ವಿರೋಧ ಹೆಚ್ಚಾಯಿತು. ಅನಿತಾ ಹೇಳಿದ್ದು: “ಅವರು ನನಗೆ ಕೂಟಗಳಿಗೆ ಹೋಗಲಿಕ್ಕೆ ಬಿಡುತ್ತಿರಲಿಲ್ಲ. ದೇವರ ಹೆಸರನ್ನೂ ಹೇಳಬಾರದೆಂದು ಗದರಿಸುತ್ತಿದ್ದರು. ಯೆಹೋವನ ಹೆಸರನ್ನು ನಾನು ಹೇಳಿದರೆ ಸಾಕು, ಅವರ ಕೋಪ ನೆತ್ತಿಗೇರುತ್ತಿತ್ತು.”
ಅನಿತಾಳಿಗಿದ್ದ ಇನ್ನೊಂದು ದೊಡ್ಡ ಸವಾಲು, ತನ್ನ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸುವುದೇ. “ಸ್ವಂತ ಮನೆಯಲ್ಲೇ ನನಗೆ ಯೆಹೋವನನ್ನು ಆರಾಧಿಸಲು ಸ್ವಾತಂತ್ರ್ಯ ಇರಲಿಲ್ಲ. ಮಕ್ಕಳಿಗೆ ಯೆಹೋವನ ಬಗ್ಗೆ ಕದ್ದುಮುಚ್ಚಿ ಕಲಿಸಬೇಕಾಗುತ್ತಿತ್ತು. ಅವರನ್ನು ಕೂಟಗಳಿಗೆ ಕರೆದುಕೊಂಡು ಹೋಗಲಿಕ್ಕೆ ನನಗೆ ಅನುಮತಿ ಇರಲಿಲ್ಲ” ಎನ್ನುತ್ತಾಳೆ ಅವಳು.
ಅನಿತಾಳ ಅನುಭವ ತೋರಿಸುವಂತೆ ಕುಟುಂಬ ಸದಸ್ಯರಿಂದ ಬರುವ ವಿರೋಧ ಒಬ್ಬ ಕ್ರೈಸ್ತನ ಸಮಗ್ರತೆಯನ್ನು ಪರೀಕ್ಷಿಸುತ್ತದೆ. ವಾಸಿಯಾಗದೆ ಬಹುಕಾಲ ಇರುವ ಆರೋಗ್ಯ ಸಮಸ್ಯೆಗಳಿಂದ, ಸಂಗಾತಿಯ ಅಥವಾ ಮಗುವಿನ ಸಾವಿನಿಂದ, ಆಪ್ತ ಕುಟುಂಬ ಸದಸ್ಯರೊಬ್ಬರು ಯೆಹೋವನಿಗೆ ಬೆನ್ನುಹಾಕಿದಾಗಲೂ ಸಮಗ್ರತೆಯ ಪರೀಕ್ಷೆಯಾಗುತ್ತದೆ. ಆದರೆ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯಲು ಒಬ್ಬ ಕ್ರೈಸ್ತನಿಗೆ ಯಾವುದು ಸಹಾಯ ಮಾಡುವುದು?
ಇಂಥ ಕಷ್ಟಪರೀಕ್ಷೆಗಳು ಇರುವಾಗ ನೀವೇನು ಮಾಡುವಿರಿ? ಅಪೊಸ್ತಲ ಪೌಲನು ಹೀಗಂದನು: “ನಿಮಗೆ ತಾಳ್ಮೆಯ ಅಗತ್ಯವಿದೆ.” (ಇಬ್ರಿ. 10:36) ಆದರೆ ನಿಮಗೆ ತಾಳಿಕೊಳ್ಳಲು ಯಾವುದು ಸಹಾಯ ಮಾಡುವುದು?
ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ಆತುಕೊಳ್ಳಿ
ಕಷ್ಟಗಳನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ಪಡೆಯುವ ಒಂದು ಪ್ರಧಾನ ವಿಧ, ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ಆತುಕೊಳ್ಳುವುದೇ. ಈ ಉದಾಹರಣೆ ತೆಗೆದುಕೊಳ್ಳಿ. ಒಂದು ಸೋಮವಾರ ಮಧ್ಯಾಹ್ನ ಆ್ಯನಳ ಕುಟುಂಬದವರಿಗೆ ದುರಂತವೊಂದು ಬಡಿಯಿತು. 30 ವರ್ಷಗಳ ತನಕ ಬಾಳಸಂಗಾತಿಯಾಗಿದ್ದ ಅವಳ ಗಂಡ ಆ ದಿನ ಸತ್ತುಹೋದ. “ಕೆಲಸಕ್ಕೆ ಹೋದವರು ಮತ್ತೆ ವಾಪಸ್ಸು ಬರಲೇ ಇಲ್ಲ. ಅವರಿಗೆ ಆಗ ಬರೀ 52 ವರ್ಷ” ಎಂದಳು ಆ್ಯನ.
ಆ್ಯನ ಈ ನಷ್ಟವನ್ನು ಹೇಗೆ ನಿಭಾಯಿಸಿದಳು? ಅವಳು ಕೆಲಸಕ್ಕೆ ಹೋಗಲು ಶುರುಮಾಡಿದಳು. ಅಲ್ಲಿ ಅವಳಿಗಿದ್ದ ಕೆಲಸದಲ್ಲಿ ಸಂಪೂರ್ಣ ಗಮನ ಕೊಡಬೇಕಾಗಿತ್ತು. ಆದರೆ ಇದು ಮನಸ್ಸಲ್ಲಿದ್ದ ನೋವನ್ನು ಪೂರ್ತಿಯಾಗಿ ತೆಗೆದು ಹಾಕಲಿಲ್ಲ. ಅವಳು ಹೇಳಿದ್ದು: “ಸಹಿಸಲಾರದ ಈ ನಷ್ಟದ ನೋವನ್ನು ನಿಭಾಯಿಸಲು ಸಹಾಯ ಮಾಡಪ್ಪಾ ಎಂದು ಮನಸ್ಸು ಬಿಚ್ಚಿ ಯೆಹೋವನಿಗೆ ಅಂಗಲಾಚಿದೆ.” ಯೆಹೋವನು ಅವಳ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನಾ? ಹೌದೆಂದು ಅವಳಿಗೆ ಮನದಟ್ಟಾಯಿತು. ಅವಳು ಮುಂದುವರಿಸಿದ್ದು: “ದೇವರು ಮಾತ್ರ ಕೊಡಸಾಧ್ಯವಿರುವ ಶಾಂತಿ ನನ್ನ ಹೃದಮನಸ್ಸಿಗೆ ನೆಮ್ಮದಿ ತಂದಿತು. ನನ್ನ ಗಂಡನನ್ನು ಪುನರುತ್ಥಾನದಲ್ಲಿ ವಾಪಸ್ಸು ಯೆಹೋವನು ತಂದೇ ತರುತ್ತಾನೆಂದು ನನಗೆ ನಂಬಿಕೆ ಇದೆ.”—ಫಿಲಿ. 4:6, 7.
ನಂಬಿಗಸ್ತರಾಗಿ ಉಳಿಯಲು ಬೇಕಾದ ಸಹಾಯವನ್ನೆಲ್ಲಾ “ಪ್ರಾರ್ಥನೆ ಕೇಳುವವ”ನಾಗಿರುವ ಯೆಹೋವನು ಒದಗಿಸುತ್ತಾನೆಂದು ವಾಗ್ದಾನ ಮಾಡಿದ್ದಾನೆ. (ಕೀರ್ತ. 65:2) ಆತನ ಈ ಆಶ್ವಾಸನೆ ನಂಬಿಕೆಯನ್ನು ಬಲಗೊಳಿಸುತ್ತದೆ. ಒಪ್ಪುತ್ತೀರಲ್ಲವೇ? ನೀವೂ ತಾಳಿಕೊಳ್ಳಬಹುದೆಂದು ಇದು ತೋರಿಸುತ್ತದಲ್ಲವೇ?
ಬೆಂಬಲದ ಮೂಲ—ಕ್ರೈಸ್ತ ಕೂಟಗಳು
ಕ್ರೈಸ್ತ ಸಭೆಯ ಮೂಲಕ ಯೆಹೋವನು ತನ್ನ ಜನರನ್ನು ಬೆಂಬಲಿಸಿದ್ದಾನೆ. ಉದಾಹರಣೆಗೆ, ಥೆಸಲೊನೀಕ ಸಭೆಯವರು ಘೋರ ಹಿಂಸೆಗೆ ಒಳಗಾದಾಗ ಪೌಲ ಅಲ್ಲಿನ ಕ್ರೈಸ್ತರಿಗೆ ಹೀಗೆ ಪ್ರೋತ್ಸಾಹಿಸಿದನು: “ನೀವು ಈಗಾಗಲೇ ಮಾಡುತ್ತಿರುವಂತೆ ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ.” (1 ಥೆಸ. 2:14; 5:11) ನಂಬಿಕೆಯ ಪರೀಕ್ಷೆಯನ್ನು ಜಯಿಸಲು ಥೆಸಲೊನೀಕದ ಕ್ರೈಸ್ತರಿಗೆ ನೆರವಾಗಿದ್ದು ಅವರ ಮಧ್ಯೆಯಿದ್ದ ಪ್ರೀತಿ ಮತ್ತು ಅವರು ಒಬ್ಬರಿಗೊಬ್ಬರು ಕೊಟ್ಟ ಸಹಾಯ. ಅವರು ತಾಳಿಕೊಂಡ ಈ ದಾಖಲೆ ನಮಗಿಂದು ಉತ್ತಮ ಮಾದರಿಯಾಗಿದೆ. ತಾಳಿಕೊಳ್ಳಲು ಯಾವುದು ಸಹಾಯ ಮಾಡುತ್ತದೆಂದು ತೋರಿಸಿಕೊಡುತ್ತದೆ.
ಸಭೆಯ ಸದಸ್ಯರೊಟ್ಟಿಗೆ ಆಪ್ತ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಿ. ಅದು “ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು” ಹಂಚಿಕೊಳ್ಳಲು ಸಹಾಯ ಮಾಡುತ್ತದೆ. (ರೋಮ. 14:19) ವಿಶೇಷವಾಗಿ ಕಷ್ಟದ ಸಮಯಗಳಲ್ಲಿ ಇದು ಪ್ರಾಮುಖ್ಯ. ಸ್ವತಃ ಪೌಲನೇ ಅನೇಕ ಕಷ್ಟಗಳನ್ನು ಅನುಭವಿಸಿದ್ದನು. ತಾಳಿಕೊಳ್ಳಲು ಶಕ್ತಿಯನ್ನು ಯೆಹೋವನು ಅವನಿಗೆ ಕೊಟ್ಟನು. ಕೆಲವೊಂದು ಸಾರಿ ಜೊತೆ ವಿಶ್ವಾಸಿಗಳ ಮೂಲಕವೂ ಪೌಲನಿಗೆ ಪ್ರೋತ್ಸಾಹ ನೀಡಿದನು. ಉದಾಹರಣೆಗೆ, ಕೊಲೊಸ್ಸೆ ಸಭೆಯ ಸದಸ್ಯರಿಗೆ ಪೌಲನು ತನ್ನ ವಂದನೆಗಳನ್ನು ಕಳುಹಿಸಿದಾಗ ಅವರ ಕುರಿತು ಹೀಗಂದನು: “ಇವರೇ ನನಗೆ ಬಲವರ್ಧಕ ಸಹಾಯವಾಗಿದ್ದಾರೆ.” (ಕೊಲೊ. 4:10, 11) ಅವರಿಗೆ ಪೌಲನ ಮೇಲಿದ್ದ ವಾತ್ಸಲ್ಯದ ಕಾರಣ ಅವನಿಗೆ ಅಗತ್ಯವಿದ್ದಾಗ ಸಾಂತ್ವನ ಕೊಟ್ಟರು ಮತ್ತು ಅವನನ್ನು ಬಲಪಡಿಸಿದರು. ಅದೇ ರೀತಿಯ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀವೂ ಈಗಾಗಲೇ ಸಭೆಯ ಸದಸ್ಯರಿಂದ ಪಡೆದಿರಬಹುದು.
ಹಿರಿಯರಿಂದ ಬೆಂಬಲ
ದೇವರು ಕ್ರೈಸ್ತ ಸಭೆಯೊಳಗೆ ಬೆಂಬಲ ನೀಡುವ ಇನ್ನೊಂದು ಮೂಲ ಹಿರಿಯರೇ. ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ಈ ಪುರುಷರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇದ್ದಾರೆ. (ಯೆಶಾ. 32:2) ಇದೆಷ್ಟು ಚೈತನ್ಯಕರ ಆಶ್ವಾಸನೆ ಅಲ್ಲವೇ! ಈ ಪ್ರೀತಿಯ ಏರ್ಪಾಡಿನಿಂದ ನೀವು ಸಹಾಯ ಪಡೆದಿದ್ದೀರಾ? ಹಿರಿಯರ ಬೆಂಬಲ ಮತ್ತು ಪ್ರೋತ್ಸಾಹ ನಿಮಗೆ ತಾಳಿಕೊಳ್ಳಲು ಸಹಾಯ ಮಾಡುತ್ತದೆ.
ಹಿರಿಯರೇನು ಅದ್ಭುತ ಮಾಡುವವರಲ್ಲ. ಅವರೂ ಅಪರಿಪೂರ್ಣ ಮನುಷ್ಯರೇ. ನಮ್ಮಂತೆಯೇ ‘ದೌರ್ಬಲ್ಯಗಳುಳ್ಳ ಮನುಷ್ಯರಾಗಿದ್ದಾರೆ.’ (ಅ. ಕಾ. 14:15) ಹಾಗಿದ್ದರೂ ನಮಗಾಗಿ ಅವರು ಮಾಡುವ ಯಾಚನೆಗಳಿಂದ ನಮಗೆ ತುಂಬ ನೆರವಾಗುತ್ತದೆ. (ಯಾಕೋ. 5:14, 15) ಅನೇಕ ವರ್ಷಗಳಿಂದ ಸ್ನಾಯುಕ್ಷಯ (ಮಸ್ಕ್ಯುಲರ್ ಡಿಸ್ಟ್ರೋಫಿ) ಎಂಬ ಆನುವಂಶಿಕ ರೋಗದಿಂದ ಬಳಲುತ್ತಿರುವ ಇಟಲಿಯ ಸಹೋದರನೊಬ್ಬನು ಹೀಗಂದನು: “ಹಿರಿಯರು ತೋರಿಸಿದ ಪ್ರೀತಿ, ಮಮತೆ ಮತ್ತು ಆಗಾಗ ಮಾಡಿದ ಭೇಟಿಗಳು ತಾಳಿಕೊಳ್ಳಲು ನನಗೆ ಸಹಾಯ ಮಾಡಿವೆ.” ಯೆಹೋವನ ಪ್ರೀತಿಯ ಏರ್ಪಾಡಾಗಿರುವ ಹಿರಿಯರಿಂದ ನೀವು ಇನ್ನಷ್ಟು ಸಹಾಯ ಪಡೆಯಬಾರದೇಕೆ?
ಆಧ್ಯಾತ್ಮಿಕ ರೂಢಿಯನ್ನು ಬಿಡಬೇಡಿ
ತಾಳಿಕೊಳ್ಳಲಿಕ್ಕೆ ಸಹಾಯ ಮಾಡುವ ಇನ್ನು ಅನೇಕ ವಿಷಯಗಳಿವೆ. ಅದರಲ್ಲಿ ಒಂದು ಆಧ್ಯಾತ್ಮಿಕ ರೂಢಿ. ಇದನ್ನು ಯಾವತ್ತೂ ಬಿಡಬಾರದು. ತುಂಬ ಕಡಿಮೆ ಜನರಿಗೆ ಬರುವ ಒಂದು ವಿಧದ ಕ್ಯಾನ್ಸರ್ ಇದ್ದ 39 ವರ್ಷದ ಜಾನ್ನ ಉದಾಹರಣೆ ತೆಗೆದುಕೊಳ್ಳಿ. ಅವನು ಒಪ್ಪಿಕೊಂಡದ್ದು: “ಈ ವಯಸ್ಸಿಗೆ ನನಗೆ ಈ ಕಾಯಿಲೆ ಬಂದಿದ್ದು ಒಂಥರಾ ಮೋಸ ಅನಿಸಿತು.” ಆಗ ಅವನ ಮಗನಿಗೆ ಮೂರು ವರ್ಷ ಅಷ್ಟೆ. “ಇದರರ್ಥ ನನ್ನ ಹೆಂಡತಿ ಈಗ ನಮ್ಮ ಮಗುವನ್ನು ಮಾತ್ರವಲ್ಲ ನನ್ನನ್ನೂ ನೋಡಿಕೊಳ್ಳಬೇಕಾಯಿತು. ನಾನು ಡಾಕ್ಟರ್ ಹತ್ತಿರ ಹೋಗಬೇಕಾದಾಗೆಲ್ಲಾ ಅವಳ ಸಹಾಯ ಬೇಕಿತ್ತು” ಎಂದನು ಜಾನ್. ಕಿಮತೆರಪಿ ಚಿಕಿತ್ಸೆಯಿಂದ ಅವನಿಗೆ ವಾಕರಿಕೆ ಬರುತ್ತಿತ್ತು, ವಿಪರೀತ ಆಯಾಸವಾಗುತ್ತಿತ್ತು. ಅವನ ಕಷ್ಟ ಅಷ್ಟಕ್ಕೆ ನಿಲ್ಲಲಿಲ್ಲ. ಅವನ ತಂದೆಗೆ ಮಾರಣಾಂತಿಕ ಕಾಯಿಲೆಯೊಂದು ಬಂದಿತು. ಅವರನ್ನೂ ನೋಡಿಕೊಳ್ಳಬೇಕಾಯಿತು.
ಈ ಕಷ್ಟದ ಪರಿಸ್ಥಿತಿಯನ್ನು ಜಾನ್ ಮತ್ತು ಅವನ ಕುಟುಂಬದವರು ಹೇಗೆ ಎದುರಿಸಿದರು? “ನನಗೆ ವಿಪರೀತ ಆಯಾಸವಾಗುತ್ತಿದ್ದರೂ ನಮ್ಮ ಕುಟುಂಬದಲ್ಲಿ ಆಧ್ಯಾತ್ಮಿಕ ರೂಢಿಯನ್ನು ನಾವು ಬಿಟ್ಟುಬಿಡಲಿಲ್ಲ. ಕಷ್ಟವೆಂದು ಅನಿಸಿದರೂ ಎಲ್ಲಾ ಕೂಟಗಳಿಗೆ ಹಾಜರಾದೆವು, ಪ್ರತೀ ವಾರ ಸೇವೆಗೆ ಹೋಗುತ್ತಿದ್ದೆವು ಮತ್ತು ತಪ್ಪದೆ ಕುಟುಂಬ ಆರಾಧನೆ ನಡೆಸುತ್ತಿದ್ದೆವು.” ಯಾವುದೇ ಸವಾಲುಗಳನ್ನು ತಾಳಿಕೊಳ್ಳಲು ಸಹಾಯ ಮಾಡುವ ವಿಧ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳುವುದಾಗಿದೆ ಎಂದು ಜಾನ್ಗೆ ಗೊತ್ತಾಯಿತು. ತಮ್ಮದೇ ಆದ ಕಷ್ಟಗಳನ್ನು ಎದುರಿಸುತ್ತಿರುವವರಿಗೆ ಅವನೇನಾದರೂ ಸಲಹೆ ಕೊಡುತ್ತಾನಾ? ಅವನನ್ನುವುದು: “ಆರಂಭದಲ್ಲಿ ಮನಸ್ಸಿಗಾದ ಆಘಾತ ಕಡಿಮೆಯಾದಾಗ ನೋವು ತುಂಬಿದ ಆ ಯೋಚನೆಗಳ ಬದಲು ಯೆಹೋವನ ಬಲ ಮತ್ತು ಪ್ರೀತಿ ನಮ್ಮಲ್ಲಿ ತುಂಬಿಕೊಳ್ಳುತ್ತದೆ. ಯೆಹೋವನು ನಿಮ್ಮನ್ನು ಬಲಪಡಿಸುವನು. ನನಗೂ ಹಾಗೇ ಮಾಡಿದನು.”
ಈಗ ಅಥವಾ ಭವಿಷ್ಯದಲ್ಲಿ ನಾವು ಎದುರಿಸುವ ಕಷ್ಟದ ಪರಿಸ್ಥಿತಿಗಳನ್ನು ದೇವರ ಸಹಾಯದಿಂದ ಖಂಡಿತ ತಾಳಿಕೊಳ್ಳಬಹುದು. ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ಆತುಕೊಳ್ಳೋಣ. ನಮ್ಮ ಸಭೆಯಲ್ಲಿರುವವರ ಜೊತೆ ಆಪ್ತವಾದ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳೋಣ. ಕ್ರೈಸ್ತ ಹಿರಿಯರ ಬೆಂಬಲ ಪಡೆಯೋಣ. ಆಧ್ಯಾತ್ಮಿಕ ರೂಢಿಯನ್ನು ಬಿಡದಿರೋಣ. ಹೀಗೆ ಮಾಡುವಾಗ ನಾವು ಪೌಲನ ಈ ಮಾತುಗಳಿಗೆ ಹೊಂದಿಕೆಯಲ್ಲಿ ನಡೆಯಲು ಸಾಧ್ಯವಾಗುತ್ತದೆ: “ನಿಮಗೆ ತಾಳ್ಮೆಯ ಅಗತ್ಯವಿದೆ.”
^ ಪ್ಯಾರ. 2 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.