ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದಕ್ಕಾಗಿ ಕಾಯುತ್ತಾ ಇರಿ!

ಅದಕ್ಕಾಗಿ ಕಾಯುತ್ತಾ ಇರಿ!

“ತಡವಾದರೂ ಅದಕ್ಕೆ ಕಾದಿರು.”—ಹಬ. 2:3.

ಗೀತೆಗಳು: 128, 45

1, 2. ಯೆಹೋವನ ಸೇವಕರಿಗೆ ಎಂಥ ಮನೋಭಾವ ಇದೆ?

ಯೆಹೋವನ ಸೇವಕರು ಪ್ರವಾದನೆಗಳ ನೆರವೇರಿಕೆಗಾಗಿ ತಾಳ್ಮೆಯಿಂದ ಕಾಯುತ್ತಾ ಬಂದಿದ್ದಾರೆ. ಉದಾಹರಣೆಗೆ ಬಾಬೆಲ್‍ನವರು ಯೆಹೂದವನ್ನು ನಾಶಮಾಡುವರೆಂದು ಯೆರೆಮೀಯನು ಪ್ರವಾದಿಸಿದ್ದನು. ಕ್ರಿಸ್ತ ಪೂರ್ವ 607ರಲ್ಲಿ ಅದು ನೆರವೇರಿತು. (ಯೆರೆ. 25:8-11) ಬಾಬೆಲ್‍ನಲ್ಲಿ ಬಂದಿವಾಸದಲ್ಲಿದ್ದ ಯೆಹೂದ್ಯರನ್ನು ಯೆಹೋವನು ಪುನಃ ಯೆಹೂದಕ್ಕೆ ಕರಕೊಂಡು ಬರುವನೆಂದು ಯೆಶಾಯನು ಪ್ರವಾದಿಸಿದ್ದನು. ಅವನಂದದ್ದು: “ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.” (ಯೆಶಾ. 30:18) ಯೆಹೋವನ ಮಾತುಗಳ ನೆರವೇರಿಕೆಗಾಗಿ ಮೀಕನು ಸಹ ಕಾದನು. ಅವನು ಹೇಳಿದ್ದು: “ನಾನಂತು ಯೆಹೋವನನ್ನು ಎದುರುನೋಡುವೆನು.” (ಮಿಾಕ 7:7) ಮೆಸ್ಸೀಯ ಅಥವಾ ಕ್ರಿಸ್ತನು ಬಂದೇ ಬರುವನೆಂದು ದೇವರ ಸೇವಕರಿಗೆ ನೂರಾರು ವರ್ಷಗಳ ವರೆಗೆ ನಿಶ್ಚಯವಿತ್ತು.—ಲೂಕ 3:15; 1 ಪೇತ್ರ 1:10-12. * (ಪಾದಟಿಪ್ಪಣಿ ನೋಡಿ.)

2 ಇಂದು ನಾವು ಸಹ ಯೆಹೋವನ ರಾಜ್ಯಕ್ಕೆ ಸಂಬಂಧಪಟ್ಟ ಪ್ರವಾದನೆಗಳ ನೆರವೇರಿಕೆಗಾಗಿ ಕಾಯುತ್ತಿದ್ದೇವೆ. ಆ ರಾಜ್ಯದ ಅರಸನಾದ ಯೇಸು ಬೇಗನೆ ದೇವರ ಸೇವಕರನ್ನು ಈ ಅಪಾಯಕಾರಿ ಲೋಕದಿಂದ ಕಾಪಾಡಲಿದ್ದಾನೆ. ಕೆಟ್ಟವರನ್ನು ನಾಶಮಾಡಿ ಎಲ್ಲಾ ಕಷ್ಟನೋವನ್ನು ನಿವಾರಿಸಲಿದ್ದಾನೆ. (1 ಯೋಹಾ. 5:19) ಯೆಹೋವನ ದಿನ ಯಾವ ಕ್ಷಣದಲ್ಲಾದರೂ ಬರಬಹುದು. ಆದ್ದರಿಂದ ಅದಕ್ಕಾಗಿ ತಯಾರಾಗಿರಲು ನಮ್ಮಿಂದಾದ ಎಲ್ಲವನ್ನೂ ಮಾಡಬೇಕು.

3. ನಾವು ತುಂಬ ವರ್ಷಗಳಿಂದ ಅಂತ್ಯಕ್ಕಾಗಿ ಕಾಯುತ್ತಾ ಇರುವವರಾಗಿದ್ದರೆ ಯಾವ ಯೋಚನೆ ಬರಬಹುದು?

3 ದೇವರ ಚಿತ್ತ ಭೂಮಿಯಲ್ಲಿ ನೆರವೇರುವ ಸಮಯಕ್ಕಾಗಿ ನಾವು ತುಂಬ ಕಾತುರದಿಂದ ಎದುರುನೋಡುತ್ತಿದ್ದೇವೆ. (ಮತ್ತಾ. 6:10) ಆದರೆ ಅಂತ್ಯಕ್ಕಾಗಿ ತುಂಬ ವರ್ಷಗಳಿಂದ ನಾವು ಕಾಯುತ್ತಾ ಇರುವವರಾಗಿದ್ದರೆ ‘ನಾವೇಕೆ ಇನ್ನೂ ಕಾಯುತ್ತಾ ಇರಬೇಕು?’ ಎಂಬ ಯೋಚನೆ ನಮಗೆ ಬರಬಹುದು.

ಅಂತ್ಯ ಬೇಗ ಬರುತ್ತದೆಂದು ನಾವೇಕೆ ಕಾಯುತ್ತಾ ಇರಬೇಕು?

4. ನಾವು “ಸದಾ ಎಚ್ಚರ”ವಾಗಿರುವುದು ಏಕೆ ಪ್ರಾಮುಖ್ಯ?

4 “ಸದಾ ಎಚ್ಚರವಾಗಿರಿ” ಎಂದು ಯೇಸು ತನ್ನ ಹಿಂಬಾಲಕರಿಗೆ ಆಜ್ಞೆ ಕೊಟ್ಟನು. ಹಾಗಾಗಿ ಅಂತ್ಯ ಬೇಗ ಬರುವುದೆಂದು ನಾವು ಕಾಯುತ್ತಾ ಇರುವುದು ತುಂಬ ಮುಖ್ಯ. (ಮತ್ತಾ. 24:42; ಲೂಕ 21:34-36) ‘ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಅದನ್ನು ಮನಸ್ಸಿನಲ್ಲಿ ನಿಕಟವಾಗಿ’ ಇಡಬೇಕು ಮತ್ತು ಹೊಸ ಲೋಕದ ಬಗ್ಗೆ ಯೆಹೋವನು ಕೊಟ್ಟಿರುವ ಮಾತನ್ನು ಯಾವಾಗಲೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ವಿಷಯಗಳ ಬಗ್ಗೆ ಯೆಹೋವನ ಸಂಘಟನೆ ಸಹ ನಮಗೆ ನೆನಪು ಹುಟ್ಟಿಸುತ್ತಾ ಇರುತ್ತದೆ.—2 ಪೇತ್ರ 3:11-13 ಓದಿ.

5. ಯೆಹೋವನ ದಿನಕ್ಕಾಗಿ ಕಾಯಲು ನಮಗೆ ಇನ್ನು ಯಾವ ಕಾರಣವಿದೆ?

5 ಮೊದಲನೇ ಶತಮಾನದಲ್ಲಿದ್ದ ಯೇಸುವಿನ ಹಿಂಬಾಲಕರು ಯೆಹೋವನ ದಿನಕ್ಕಾಗಿ ಕಾಯಬೇಕಿತ್ತು ಅಂದಮೇಲೆ ನಾವು ಅದಕ್ಕಾಗಿ ಕಾಯುವುದು ಇನ್ನೂ ಪ್ರಾಮುಖ್ಯ. ಏಕೆ? ಏಕೆಂದರೆ ಯೇಸು ಕೊಟ್ಟ ಸೂಚನೆ ತೋರಿಸುವಂತೆ 1914ರಲ್ಲಿ ಯೇಸು ದೇವರ ರಾಜ್ಯದ ರಾಜನಾದನು ಮತ್ತು ಅಂದಿನಿಂದ ನಾವು ಕಡೇ ದಿವಸಗಳಲ್ಲಿ ಅಥವಾ “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆ. ಉದಾಹರಣೆಗೆ ಯೇಸು ಪ್ರವಾದಿಸಿದಂತೆ ಲೋಕದ ಪರಿಸ್ಥಿತಿ ಕೆಟ್ಟದಾಗುತ್ತಾ ಹೋಗುತ್ತಿದೆ ಮತ್ತು ಭೂಮಿಯ ಎಲ್ಲಾ ಕಡೆಗಳಲ್ಲಿ ರಾಜ್ಯದ ಸುವಾರ್ತೆ ಸಾರಲಾಗುತ್ತಿದೆ. (ಮತ್ತಾ. 24:3, 7-14) ಕಡೇ ದಿವಸಗಳು ಯಾವಾಗ ಕೊನೆ ಆಗುತ್ತದೆಂದು ಯೇಸು ಹೇಳಲಿಲ್ಲ. ಅಂತ್ಯ ಯಾವ ಕ್ಷಣದಲ್ಲಾದರೂ ಬರುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ನಾವು ಎಚ್ಚರಿಕೆಯಿಂದಿರಬೇಕು.

6. ಅಂತ್ಯ ಹತ್ತಿರವಾಗುತ್ತಿದ್ದಂತೆ ಲೋಕದ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗುತ್ತಾ ಹೋಗುತ್ತದೆಂದು ನಮಗೆ ಹೇಗೆ ಗೊತ್ತು?

6 “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎನ್ನುವುದು ಭವಿಷ್ಯದಲ್ಲಿ ಲೋಕವು ಇಂದಿಗಿಂತ ಹೆಚ್ಚು ಕೆಟ್ಟದ್ದಾಗುವ ಸಮಯಕ್ಕೆ ಸೂಚಿಸುತ್ತದಾ? “ಕಡೇ ದಿವಸಗಳಲ್ಲಿ” ಜನ ಹೆಚ್ಚೆಚ್ಚು ದುಷ್ಟರಾಗುವರೆಂದು ಬೈಬಲ್‌ ಹೇಳುತ್ತದೆ. (2 ತಿಮೊ. 3:1, 13; ಮತ್ತಾ. 24:21; ಪ್ರಕ. 12:12) ಈಗಾಗಲೇ ಪರಿಸ್ಥಿತಿ ತುಂಬ ಕೆಟ್ಟದ್ದಾಗಿದೆ. ಮುಂದಕ್ಕೆ ಇನ್ನೂ ಕೆಟ್ಟದ್ದಾಗುತ್ತದೆಂದು ನಮಗೆ ಗೊತ್ತು.

7. ಕಡೇ ದಿವಸಗಳಲ್ಲಿ ಲೋಕದ ಪರಿಸ್ಥಿತಿಗಳ ಬಗ್ಗೆ ಮತ್ತಾಯ 24:37-39 ಏನು ತಿಳಿಸುತ್ತದೆ?

7 “ಮಹಾ ಸಂಕಟ”ಕ್ಕಿಂತ ಮುಂಚೆ ಎಲ್ಲ ದೇಶಗಳಲ್ಲಿ ಯುದ್ಧವಿರುತ್ತದೆ, ಹೆಚ್ಚಿನ ಜನರಿಗೆ ಕಾಯಿಲೆಗಳಿರುತ್ತದೆ, ಯಾರಿಗೂ ಹೊಟ್ಟೆಗಿರುವುದಿಲ್ಲ ಎಂದು ಕೆಲವರು ನೆನಸಬಹುದು. (ಪ್ರಕ. 7:14) ಆದರೆ ಒಂದುವೇಳೆ ಹಾಗೇನಾದರೂ ನಡೆದರೆ ಬೈಬಲ್‌ ಪ್ರವಾದನೆ ನೆರವೇರುತ್ತಿದೆ ಎಂದು ಎಲ್ಲರಿಗೂ ಸುಲಭವಾಗಿ ಗೊತ್ತಾಗಿಬಿಡುತ್ತದೆ. ಬೈಬಲಿನ ಬಗ್ಗೆ ಒಂಚೂರು ಆಸಕ್ತಿ ಇಲ್ಲದವರಿಗೂ ಸ್ಪಷ್ಟವಾಗಿ ಈ ವಿಷಯ ತಿಳಿದುಬರುತ್ತದೆ. ಆದರೆ ಯೇಸು ಏನು ಹೇಳಿದನೆಂದು ನೆನಪಿಸಿಕೊಳ್ಳಿ. ಕಡೇ ದಿವಸಗಳಲ್ಲಿ ಅನೇಕ ಜನರು ‘ಲಕ್ಷ್ಯ ಕೊಡುವುದಿಲ್ಲ’ ಅಂದರೆ ಅವರ ಗಮನ ಅದರ ಕಡೆ ಹೋಗುವುದಿಲ್ಲ. ಎಂದಿನಂತೆ ಆರಾಮವಾಗಿ ಬದುಕುತ್ತಿರುತ್ತಾರೆ. ಯೆಹೋವನ ದಿನ ಬಂದಾಗ ಅವರು ಕಕ್ಕಾಬಿಕ್ಕಿಯಾಗುತ್ತಾರೆ. (ಮತ್ತಾಯ 24:37-39 ಓದಿ.) ಹಾಗಾಗಿ “ಮಹಾ ಸಂಕಟ”ಕ್ಕಿಂತ ಮುಂಚೆ ಲೋಕದ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗುತ್ತದೆಂದರೆ ಅಂತ್ಯ ಹತ್ತಿರವಿದೆಯೆಂದು ನಂಬುವಂತೆ ಜನರು ಒತ್ತಾಯಿಸಲ್ಪಡುವರೆಂದು ನಾವು ನೆನಸಬಾರದು.—ಲೂಕ 17:20; 2 ಪೇತ್ರ 3:3, 4.

8. ಯೇಸು ಕೊಟ್ಟ ಸೂಚನೆಯ ನೆರವೇರಿಕೆಗಾಗಿ ನಾವು ಕಾಯುತ್ತಾ ಎಚ್ಚರವಾಗಿದ್ದರಿಂದ ನಮಗೆ ಯಾವ ಭರವಸೆಯಿದೆ?

8 ಆದರೆ ಯೇಸುವಿನ ಹಿಂಬಾಲಕರಿಗೆ ಅವರು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದಾರೆಂದು ತಿಳಿದಿದೆ. ಏಕೆಂದರೆ ಯೇಸು ಕೊಟ್ಟ ಸೂಚನೆಯು ಅವರಿಗೆ ಅದರ ಬಗ್ಗೆ ಎಚ್ಚರಿಸಿದೆ. ಈ ಸೂಚನೆಯ ನೆರವೇರಿಕೆಗಾಗಿ ಅವರು ಕಾಯುತ್ತಾ ಎಚ್ಚರವಾಗಿದ್ದರು. (ಮತ್ತಾ. 24:27, 42) ಇದರ ಬೇರೆಬೇರೆ ಅಂಶಗಳು 1914ರಿಂದ ನೆರವೇರುತ್ತಾ ಬಂದಿವೆ. ಹಾಗಾಗಿ ನಾವು ಕಡೇ ದಿವಸಗಳಲ್ಲಿದ್ದೇವೆ, “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ ಸಮಯದಲ್ಲೇ ಜೀವಿಸುತ್ತಿದ್ದೇವೆಂದು ನಮಗೆ ಪೂರ್ಣ ಭರವಸೆಯಿದೆ. ಸೈತಾನನ ದುಷ್ಟ ಲೋಕವನ್ನು ಯಾವಾಗ ನಾಶ ಮಾಡಬೇಕೆಂದು ಯೆಹೋವನು ಈಗಾಗಲೇ ತೀರ್ಮಾನ ಮಾಡಿದ್ದಾನೆ.

9. ಅಂತ್ಯ ಬೇಗ ಬರಲಿದೆಯೆಂದು ನಾವೇಕೆ ಕಾಯುತ್ತಿರಬೇಕು?

9 ಹೀಗಿರುವಾಗ ಅಂತ್ಯ ಬೇಗ ಬರಲಿದೆಯೆಂದು ನಾವೇಕೆ ಕಾಯುತ್ತಿರಬೇಕು? ಏಕೆಂದರೆ ಹಾಗೆ ಮಾಡುವಂತೆ ಯೇಸು ಕ್ರಿಸ್ತನು ಹೇಳಿದ್ದಾನೆ ಮತ್ತು ನಾವು ಅವನ ಮಾತಿಗೆ ವಿಧೇಯತೆ ತೋರಿಸುತ್ತೇವೆ. ಅಷ್ಟೇ ಅಲ್ಲದೆ, ಕಡೇ ದಿವಸಗಳ ಬಗ್ಗೆ ಯೇಸು ಕೊಟ್ಟ ಸೂಚನೆ ಸ್ಪಷ್ಟವಾಗಿ ನಮ್ಮ ಕಣ್ಮುಂದೆಯೇ ನೆರವೇರುತ್ತಿದೆ. ಅಂತ್ಯ ಹತ್ತಿರವಿದೆಯೆಂದು ನಾವು ನಂಬಲು ಕಾರಣ ಬೈಬಲ್‌ ಪ್ರವಾದನೆ ನೆರವೇರುತ್ತಿದೆ ಎಂಬ ಭರವಸೆ ನಮಗಿರುವುದರಿಂದಲೇ ಹೊರತು ಕಿವಿಗೆ ಬಿದ್ದದ್ದನ್ನೆಲ್ಲ ನಂಬುವುದರಿಂದ ಅಲ್ಲ. ಹಾಗಾಗಿ ಹತ್ತಿರವಾಗುತ್ತಿರುವ ಅಂತ್ಯದ ವಿಷಯದಲ್ಲಿ ಎಚ್ಚರವಾಗಿದ್ದು ಅದಕ್ಕಾಗಿ ಸಿದ್ಧರಾಗಿರೋಣ.

ನಾವು ಇನ್ನೆಷ್ಟು ಕಾಲ ಕಾಯಬೇಕು?

10, 11. (ಎ) “ಸದಾ ಎಚ್ಚರವಾಗಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇಕೆ? (ಬಿ) ತಾವು ನೆನಸಿದಷ್ಟು ಬೇಗ ಅಂತ್ಯ ಬರಲಿಲ್ಲವಾದರೆ ಏನು ಮಾಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು? (ಲೇಖನದ ಆರಂಭದ ಚಿತ್ರ ನೋಡಿ.)

10 ನಮ್ಮಲ್ಲಿ ಅನೇಕರು ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡುತ್ತಾ ಆತನ ದಿನಕ್ಕಾಗಿ ತುಂಬ ವರ್ಷಗಳಿಂದ ಕಾಯುತ್ತಾ ಇದ್ದೇವೆ. ನಾವೆಷ್ಟೇ ವರ್ಷಗಳಿಂದ ಕಾಯುತ್ತಿದ್ದರೂ, ಆ ದಿನ ಬೇಗ ಬರುತ್ತದೆಂದು ಎದುರುನೋಡುತ್ತಲೇ ಇರಬೇಕು. ಸೈತಾನನ ದುಷ್ಟ ಲೋಕವನ್ನು ನಾಶ ಮಾಡಲು ಯೇಸು ಬರುವಾಗ ನಾವು ತಯಾರಾಗಿರಬೇಕು. ತನ್ನ ಹಿಂಬಾಲಕರು ಏನು ಮಾಡಬೇಕೆಂದು ಯೇಸು ಹೇಳಿದನೊ ಅದನ್ನು ಜ್ಞಾಪಿಸಿಕೊಳ್ಳಿ: “ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ ಅದಕ್ಕಾಗಿ ನೋಡುತ್ತಾ ಇರಿ, ಎಚ್ಚರವಾಗಿ ಇರಿ. ಅದು ದೂರ ದೇಶಕ್ಕೆ ಪ್ರಯಾಣಿಸುವ ಒಬ್ಬ ಮನುಷ್ಯನಿಗೆ ಸಮಾನವಾಗಿದೆ. ಅವನು ತನ್ನ ಮನೆಯನ್ನು ಬಿಟ್ಟುಹೋಗುವಾಗ ತನ್ನ ಆಳುಗಳಿಗೆ ಅಧಿಕಾರವನ್ನು ಕೊಟ್ಟು ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ನೇಮಿಸಿ ಬಾಗಿಲು ಕಾಯುವವನಿಗೆ ಸದಾ ಎಚ್ಚರವಾಗಿರುವಂತೆ ಆಜ್ಞಾಪಿಸಿದನು. ಆದುದರಿಂದ ಮನೆಯ ಯಜಮಾನನು ಸಂಜೆಯಲ್ಲಿಯೊ ಮಧ್ಯರಾತ್ರಿಯಲ್ಲಿಯೊ . . . ಬೆಳಗಾಗುವಾಗಲೊ ಯಾವಾಗ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ; ಇಲ್ಲವಾದರೆ ಅವನು ಫಕ್ಕನೆ ಬರುವಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು. ನಾನು ನಿಮಗೆ ಹೇಳುವುದನ್ನು ಎಲ್ಲರಿಗೂ ಹೇಳುತ್ತೇನೆ, ಸದಾ ಎಚ್ಚರವಾಗಿರಿ.”—ಮಾರ್ಕ 13:33-37.

11 ಯೇಸು 1914ರಲ್ಲಿ ರಾಜನಾಗಿ ತನ್ನ ಆಳ್ವಿಕೆಯನ್ನು ಶುರುಮಾಡಿದ್ದಾನೆ ಎಂದು ಅವನ ಹಿಂಬಾಲಕರಿಗೆ ಅರ್ಥವಾದಾಗ ಅಂತ್ಯ ಯಾವ ಕ್ಷಣವಾದರೂ ಬರಬಹುದೆಂದು ಗ್ರಹಿಸಿದರು. ಹಾಗಾಗಿ ಸಾರುವ ಕೆಲಸವನ್ನು ಹೆಚ್ಚಾಗಿ ಮಾಡುವ ಮೂಲಕ ಅದಕ್ಕಾಗಿ ಸಿದ್ಧರಾದರು. ಯೇಸು ತಾನು ಸಮಯಾನಂತರ ಅಥವಾ ‘ಬೆಳಗಾಗುವಾಗ’ ಬರಬಹುದೆಂದು ಹೇಳಿದನು. ಒಂದುವೇಳೆ ಹಾಗೆ ಆದರೆ ಅವನ ಹಿಂಬಾಲಕರು ಏನು ಮಾಡಬೇಕು? ಯೇಸು ಹೇಳಿದ್ದು: “ಸದಾ ಎಚ್ಚರವಾಗಿರಿ.” ಹಾಗಾಗಿ ನಾವು ತುಂಬ ವರ್ಷಗಳಿಂದ ಕಾಯುತ್ತಿರುವುದಾದರೂ, ಅಂತ್ಯ ಬರುವುದಕ್ಕೆ ಇನ್ನೂ ತುಂಬ ಸಮಯ ಇದೆ, ನಮ್ಮ ಕಾಲದಲ್ಲಿ ಅಂತ್ಯ ಬರುವುದಿಲ್ಲ ಎಂದು ನಾವು ನೆನಸಬಾರದು.

12. (ಎ) ಯೆಹೋವನ ಬಳಿ ಹಬಕ್ಕೂಕನು ಏನೆಂದು ಕೇಳಿದನು? (ಬಿ) ಯೆಹೋವನು ಹೇಗೆ ಉತ್ತರಿಸಿದನು?

12 ಪ್ರವಾದಿ ಹಬಕ್ಕೂಕನು ಯೆರೂಸಲೇಮಿನ ನಾಶನದ ಬಗ್ಗೆ ಸಾರುತ್ತಾ, ತಾಳ್ಮೆಯಿಂದ ಕಾದನು. ಇವನಿಗಿಂತ ಮುಂಚೆ ಇದ್ದ ಪ್ರವಾದಿಗಳು ಸಹ ಈ ಸಂದೇಶವನ್ನು ತುಂಬ ವರ್ಷಗಳ ವರೆಗೆ ಸಾರಿದ್ದರು. ಹಿಂದೆಂದಿಗಿಂತಲೂ ಹೆಚ್ಚು ದುಷ್ಟತನ, ಅನ್ಯಾಯ ಇದ್ದದ್ದನ್ನು ಹಬಕ್ಕೂಕನು ನೋಡಿದನು. ಸಹಾಯಕ್ಕಾಗಿ ಬೇಡುತ್ತಾ ಯೆಹೋವನಿಗೆ ಹೀಗೆ ಕೇಳಿದನು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ?” ಯೆರೂಸಲೇಮಿನ ಅಂತ್ಯ ಯಾವಾಗ ಬರುವುದೆಂದು ಯೆಹೋವನು ಹೇಳಲಿಲ್ಲವಾದರೂ ಅದು ತಡವಾಗದು ಎಂದು ಮಾತು ಕೊಟ್ಟನು. ಜೊತೆಗೆ “ಅದಕ್ಕೆ ಕಾದಿರು” ಎಂದೂ ಹೇಳಿದನು.—ಹಬಕ್ಕೂಕ 1:1-4; 2:3 ಓದಿ.

13. (ಎ) ಹಬಕ್ಕೂಕನಿಗೆ ಯಾವ ಯೋಚನೆ ಬರುವ ಸಾಧ್ಯತೆ ಇತ್ತು? (ಬಿ) ಒಂದುವೇಳೆ ಹಾಗೆ ಯೋಚಿಸಿದ್ದರೆ ಯಾವ ಅಪಾಯ ಕಾದಿತ್ತು?

13 ಅಂತ್ಯಕ್ಕಾಗಿ ಕಾದುಕಾದು ಹಬಕ್ಕೂಕನಿಗೆ ಸಾಕಾಗಿ ಹೋಗಿ, ‘ಯೆರೂಸಲೇಮ್‌ ನಾಶವಾಗುತ್ತದೆಂದು ಎಷ್ಟೊ ವರ್ಷಗಳಿಂದ ಕಾಯುತ್ತಾ ಇದ್ದೇನೆ. ಅಂತ್ಯ ಬರುವುದು ಇನ್ನು ಯಾವ ಕಾಲಕ್ಕೊ! ಅದರ ನಾಶನದ ಬಗ್ಗೆ ಇನ್ಮು೦ದೆ ಸಾರುವ ಅಗತ್ಯವೇನಿಲ್ಲ. ಬೇರೆಯವರು ಬೇಕಾದರೆ ಆ ಕೆಲಸ ಮಾಡಲಿ’ ಎಂದು ಯೋಚಿಸಿದ್ದರೆ ಏನಾಗುತ್ತಿತ್ತು? ಯೆಹೋವನ ಮೆಚ್ಚುಗೆಯನ್ನೇ ಹಬಕ್ಕೂಕನು ಕಳಕೊಳ್ಳುತ್ತಿದ್ದನು. ಅಂತ್ಯ ಬಂದಾಗ ಅವನು ಸಿದ್ಧನಿಲ್ಲದಿರುತ್ತಿದ್ದರೆ ತನ್ನ ಜೀವವನ್ನೂ ಕಳಕೊಳ್ಳುವ ಸಾಧ್ಯತೆ ಇತ್ತು.

14. ಅಂತ್ಯಕ್ಕಾಗಿ ಕಾಯುತ್ತಾ ಇರುವಂತೆ ಯೆಹೋವನು ಎಚ್ಚರಿಸಿದ್ದಕ್ಕೆ ನಾವೇಕೆ ಕೃತಜ್ಞರಾಗಿರುವೆವು?

14 ಮುಂದೆ ನೀವು ಹೊಸ ಲೋಕದಲ್ಲಿರುವಾಗ ಹೇಗಿರುವುದೆಂದು ಯೋಚಿಸಿ. ಕಡೇ ದಿವಸಗಳ ಬಗ್ಗೆ ಯೆಹೋವನು ಹೇಳಿದ್ದ ಎಲ್ಲಾ ಪ್ರವಾದನೆಗಳು ನೆರವೇರಿವೆ. ಹಾಗಾಗಿ ಹಿಂದೆಂದಿಗಿಂತಲೂ ಹೆಚ್ಚಾಗಿ ಯೆಹೋವನ ಮೇಲೆ ಭರವಸೆ ಇಡುತ್ತೀರಿ. ಇನ್ನು ಮುಂದೆ ತಾನು ಏನೆಲ್ಲಾ ಮಾಡುತ್ತೇನೆಂದು ಮಾತು ಕೊಟ್ಟಿದ್ದಾನೊ ಅವೆಲ್ಲಾ ಖಂಡಿತ ನೆರವೇರುತ್ತವೆ ಎಂದು ಪೂರ್ಣ ಭರವಸೆ ಇಡುತ್ತೀರಿ. (ಯೆಹೋಶುವ 23:14 ಓದಿ.) ಅಂತ್ಯ ತರಲು ಯೆಹೋವನು ಸರಿಯಾದ ಸಮಯ ನಿಗದಿಪಡಿಸಿ ತನ್ನ ಜನರಿಗೆ ಕಾಯುತ್ತಾ ಇರಬೇಕೆಂದು ಎಚ್ಚರಿಕೆ ನೀಡುತ್ತಾ ಬಂದದ್ದಕ್ಕೆ ಆತನಿಗೆ ತುಂಬ ಕೃತಜ್ಞರಾಗಿರುತ್ತೀರಿ.—ಅ. ಕಾ. 1:7; 1 ಪೇತ್ರ 4:7.

ಅಂತ್ಯಕ್ಕಾಗಿ ಕಾಯುತ್ತಿರುವಾಗ ಸಾರುತ್ತಾ ಇರುವೆವು

ನೀವು ಹುರುಪಿನಿಂದ ಸುವಾರ್ತೆ ಸಾರುತ್ತೀರಾ?(ಪ್ಯಾರ 15 ನೋಡಿ)

15, 16. ಈ ಅಂತ್ಯಕಾಲದಲ್ಲಿ ಸಾರುವ ಕೆಲಸವನ್ನು ಮಾಡಲು ನಮ್ಮಿಂದಾದ ಎಲ್ಲವನ್ನೂ ನಾವೇಕೆ ಮಾಡಬೇಕು?

15 ಯೆಹೋವನ ಸೇವೆಗೆ ನಮ್ಮ ಬದುಕಲ್ಲಿ ಪ್ರಮುಖ ಸ್ಥಾನ ಕೊಡುವಂತೆ ಆತನ ಸಂಘಟನೆ ನಮಗೆ ನೆನಪಿಸುತ್ತಾ ಇರುತ್ತದೆ. ಈ ಮರುಜ್ಞಾಪನಗಳು ದೇವರ ಸೇವೆಯಲ್ಲಿ ನಾವು ಹೆಚ್ಚಾಗಿ ಒಳಗೂಡಿರುವಂತೆ ಮಾತ್ರವಲ್ಲ ನಾವು ಸಾರುವ ಸಂದೇಶ ಎಷ್ಟು ತುರ್ತಿನದ್ದು ಎಂದು ತಿಳಿಯಲೂ ಸಹಾಯ ಮಾಡುತ್ತವೆ. ಯೇಸು ಕೊಟ್ಟ ಸೂಚನೆ ಈಗ ನೆರವೇರುತ್ತಿದೆ ಮತ್ತು ಅಂತ್ಯ ಬೇಗ ಬರಲಿದೆ ಎಂದು ನಮಗೆ ನಿಶ್ಚಯವಾಗಿ ಗೊತ್ತು. ಆದ್ದರಿಂದ ಯೆಹೋವನಿಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುತ್ತೇವೆ ಮತ್ತು ರಾಜ್ಯದ ಸುವಾರ್ತೆ ಸಾರುತ್ತಾ ಇರುತ್ತೇವೆ.—ಮತ್ತಾ. 6:33; ಮಾರ್ಕ 13:10.

16 ನಾವು ಸುವಾರ್ತೆ ಸಾರುವಾಗ ಬೇಗನೆ ಬರಲಿರುವ ಸೈತಾನನ ಲೋಕದ ನಾಶನದಿಂದ ಪಾರಾಗಲು ಬೇರೆಯವರಿಗೆ ಸಹಾಯ ಮಾಡುತ್ತಿದ್ದೇವೆ. 1945ರಲ್ಲಿ ವಿಲ್‌ಹೆಲ್ಮ್ ಗಸ್ಟ್‌ಲಾಫ್‌ ಎಂಬ ಹಡಗು ಮುಳುಗಿ ಹೋಯಿತು. ಇದು ಸಮುದ್ರದಲ್ಲಿ ನಡೆದ ಅತಿ ದೊಡ್ಡ ದುರಂತಗಳಲ್ಲಿ ಒಂದು. ಸಾವಿರಾರು ಜನ ಸತ್ತುಹೋದರು. ಆ ಹಡಗಲ್ಲಿದ್ದ ನಮ್ಮ ಒಬ್ಬ ಸಹೋದರಿ ಮತ್ತು ಅವಳ ಗಂಡ ಬದುಕುಳಿದರು. ಹಡಗು ಮುಳುಗುತ್ತಿದ್ದಾಗಲೂ ಒಬ್ಬ ಸ್ತ್ರೀ “ಅಯ್ಯೊ ನನ್ನ ಸೂಟ್‌ಕೇಸ್‌! ನನ್ನ ಸೂಟ್‌ಕೇಸ್‌! ನನ್ನ ಒಡವೆ! ಎಲ್ಲಾ ಕೆಳಗೆ ಕೋಣೆಯಲ್ಲಿ ಇದೆಯಲ್ಲಾ! ಎಲ್ಲಾ ಹೋಯಿತು. ಎಲ್ಲಾ ಕಳಕೊಂಡೆ!” ಎಂದು ಕೂಗುತ್ತಾ ಇದ್ದದ್ದನ್ನು ಸಹೋದರಿ ನೆನಪಿಸಿಕೊಳ್ಳುತ್ತಾರೆ. ಆದರೆ ಬೇರೆ ಪ್ರಯಾಣಿಕರು ಯಾವುದು ಪ್ರಾಮುಖ್ಯ ಎಂದು ಗ್ರಹಿಸಿ ಇತರರ ಪ್ರಾಣ ಉಳಿಸಲು ಶತಪ್ರಯತ್ನ ಮಾಡಿದರು. ಇಂದು ಸಹ ಜನರ ಪ್ರಾಣ ಅಪಾಯದಲ್ಲಿದೆ. ಆ ನಿಸ್ವಾರ್ಥ ಪ್ರಯಾಣಿಕರಂತೆ ನಾವು ಸಹ ಸಾರುವ ಕೆಲಸ ಎಷ್ಟು ತುರ್ತಿನದ್ದು ಅನ್ನುವುದಕ್ಕೆ ಗಮನ ಕೊಡಬೇಕು. ಜನರು ಈ ವ್ಯವಸ್ಥೆಯ ಅಂತ್ಯದಿಂದ ಪಾರಾಗಲು ನಮ್ಮಿಂದಾದ ಎಲ್ಲಾ ನೆರವನ್ನು ಕೊಡಬೇಕು.

ಸಾರುವ ಕೆಲಸವನ್ನು ತುರ್ತಿನಿಂದ ಮಾಡುವುದಕ್ಕೆ ಅಡಚಣೆಯಾಗದಂತೆ ವಿವೇಕಭರಿತ ನಿರ್ಣಯಗಳನ್ನು ಮಾಡುತ್ತೀರಾ?(ಪ್ಯಾರ 17 ನೋಡಿ)(See paragraph 17)

17. ಯಾವ ಸಮಯದಲ್ಲಿ ಬೇಕಾದರೂ ಅಂತ್ಯ ಬರಬಹುದೆಂದು ನಾವು ಏಕೆ ನಂಬಬೇಕು?

17 ಬೈಬಲ್‌ ಪ್ರವಾದನೆಗಳು ನೆರವೇರುತ್ತಿರುವುದು ಮತ್ತು ಈ ದುಷ್ಟ ಲೋಕದ ಕೊನೆ ಹತ್ತಿರವಾಗುತ್ತಿರುವುದು ನಮಗೆ ಸ್ಪಷ್ಟವಾಗಿ ಕಾಣುತ್ತಿದೆ. ಮಹಾ ಬಾಬೆಲ್‌ ಅಂದರೆ ಸುಳ್ಳು ಧರ್ಮದ ಮೇಲೆ ‘ಹತ್ತು ಕೊಂಬುಗಳ ಮತ್ತು ಕಾಡುಮೃಗದ’ ಆಕ್ರಮಣಕ್ಕಾಗಿ ಕಾಯುತ್ತಿದ್ದೇವೆ. (ಪ್ರಕ. 17:16) ಇದು ನಡೆಯಲು ಇನ್ನು ತುಂಬ ಸಮಯ ಇದೆಯೆಂದು ನಾವು ನೆನಸಬಾರದು. ಸುಳ್ಳು ಧರ್ಮದ ಮೇಲೆ ಆಕ್ರಮಣ ಮಾಡುವಂತೆ ‘ಅವರ ಹೃದಯಗಳಲ್ಲಿ ಯೋಚನೆಯನ್ನು ಹಾಕುವವನು’ ದೇವರು ಎನ್ನುವುದನ್ನು ಮರೆಯಬೇಡಿ. ಇದು ಥಟ್ಟನೆ ಯಾವಾಗ ಬೇಕಾದರೂ ಆಗಬಹುದು! (ಪ್ರಕ. 17:17) ಸೈತಾನನ ದುಷ್ಟ ಲೋಕದ ಅಂತ್ಯ ಹತ್ತಿರವಾಗುತ್ತಾ ಇದೆ. ಆದ್ದರಿಂದ ಯೇಸುವಿನ ಈ ಎಚ್ಚರಿಕೆಗೆ ಗಮನ ಕೊಡೋಣ: “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ಮತ್ತು ಆ ದಿನವು ಥಟ್ಟನೆ ಉರ್ಲಿನಂತೆ ನಿಮ್ಮ ಮೇಲೆ ಎರಗಿ ಬರದಿರುವಂತೆ ನಿಮಗೆ ಗಮನಕೊಟ್ಟುಕೊಳ್ಳಿರಿ.” (ಲೂಕ 21:34, 35; ಪ್ರಕ. 16:15) ಎಚ್ಚರವಾಗಿದ್ದು ಯೆಹೋವನ ಸೇವೆಯನ್ನು ಹೆಚ್ಚು ಮಾಡುತ್ತಾ ಇರೋಣ. ಆತನನ್ನು ನಿರೀಕ್ಷಿಸಿಕೊಂಡೇ ಇರುವವರನ್ನು ಕಾಪಾಡುವನೆಂಬ ದೃಢಭರವಸೆ ಇಟ್ಟುಕೊಳ್ಳೋಣ.—ಯೆಶಾ. 64:4.

18. ಯಾವ ಪ್ರಶ್ನೆಯನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ?

18 ಈ ದುಷ್ಟ ಲೋಕದ ನಾಶನಕ್ಕಾಗಿ ಕಾಯುತ್ತಿರುವಾಗ ಶಿಷ್ಯ ಯೂದನ ಈ ಸಲಹೆಯನ್ನು ಪಾಲಿಸೋಣ: “ಪ್ರಿಯರೇ, ನೀವಾದರೋ ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಪವಿತ್ರಾತ್ಮದೊಂದಿಗೆ ಪ್ರಾರ್ಥನೆಮಾಡುತ್ತಾ ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಗಾಗಿ ಕಾಯುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 20, 21) ಆದರೆ ಹೊಸ ಲೋಕ ಬೇಗ ಬರುವುದನ್ನು ಎದುರುನೋಡುತ್ತಿದ್ದೇವೆಂದು ನಾವು ಹೇಗೆ ತೋರಿಸಬಹುದು? ಅದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.

^ ಪ್ಯಾರ. 1 ಮೆಸ್ಸೀಯನ ಕುರಿತ ಪ್ರವಾದನೆಗಳು ಮತ್ತು ಅವು ನೆರವೇರಿದ್ದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 200 ನೋಡಿ.