ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಕಡೇ ದಿವಸಗಳಲ್ಲಿ ಸಹವಾಸದ ಬಗ್ಗೆ ಎಚ್ಚರವಹಿಸಿರಿ!

ಈ ಕಡೇ ದಿವಸಗಳಲ್ಲಿ ಸಹವಾಸದ ಬಗ್ಗೆ ಎಚ್ಚರವಹಿಸಿರಿ!

“ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂ. 15:33.

ಗೀತೆಗಳು: 73, 119

1. ನಾವು ಯಾವ ಸಮಯದಲ್ಲಿ ಜೀವಿಸುತ್ತಿದ್ದೇವೆ?

“ನಿಭಾಯಿಸಲು ಕಷ್ಟಕರವಾದ ಕಠಿನಕಾಲ”ದಲ್ಲಿ ನಾವು ಜೀವಿಸುತ್ತಿದ್ದೇವೆ. 1914ರಿಂದ ಕಡೇ ದಿವಸಗಳು ಆರಂಭವಾಗಿವೆ. ಅಂದಿನಿಂದ ಲೋಕದ ಪರಿಸ್ಥಿತಿಗಳು ಹಿಂದೆಂದಿಗಿಂತಲೂ ಹೆಚ್ಚು ಕೆಟ್ಟದ್ದಾಗಿವೆ. (2 ತಿಮೊ. 3:1-5) ಇನ್ನೂ ಕೆಟ್ಟದ್ದಾಗುತ್ತಲೇ ಹೋಗುತ್ತದೆಂದು ನಮಗೆ ಗೊತ್ತು. ಯಾಕೆಂದರೆ “ದುಷ್ಟರೂ ವಂಚಕರೂ . . . ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು” ಎಂದು ಬೈಬಲ್‌ ಪ್ರವಾದಿಸಿದೆ.—2 ತಿಮೊ. 3:13.

2. ಇಂದು ಅನೇಕ ಜನರಿಗೆ ಎಂಥ ಮನೋರಂಜನೆ ತುಂಬ ಇಷ್ಟ? (ಲೇಖನದ ಆರಂಭದ ಚಿತ್ರ ನೋಡಿ.)

2 ಅನೇಕ ಜನರು ಇಂದು ಕ್ರೂರತನ, ಅನೈತಿಕತೆ, ಮಾಟಮಂತ್ರ, ದೆವ್ವಭೂತಗಳ ಕುರಿತ ವಿಷಯಗಳಿರುವ ಮನೋರಂಜನೆ ನೋಡುತ್ತಾರೆ ಅಥವಾ ಅಂಥ ವಿಷಯಗಳಲ್ಲಿ ಒಳಗೂಡುತ್ತಾರೆ. ಹೊಡೆದಾಟ-ಕೊಲೆ, ಅನೈತಿಕತೆಯಲ್ಲಿ ಏನೂ ತಪ್ಪಿಲ್ಲವೆಂದು ಇಂಟರ್‌ನೆಟ್‌, ಟಿವಿ ಕಾರ್ಯಕ್ರಮಗಳು, ಸಿನೆಮಾಗಳು, ಪುಸ್ತಕಗಳು, ಪತ್ರಿಕೆಗಳು ಬಿಂಬಿಸುತ್ತವೆ. ಒಂದು ಕಾಲದಲ್ಲಿ ಜನರು ಅಸಹ್ಯಪಡುತ್ತಿದ್ದಂಥ ನಡತೆ ಇಂದು ಜನರು ಎಷ್ಟರ ಮಟ್ಟಿಗೆ ಒಪ್ಪಿದ್ದಾರೆಂದರೆ ಅದಕ್ಕೆ ಕಾನೂನು ಕೂಡ ಒಪ್ಪಿಗೆ ಕೊಟ್ಟಿದೆ. ಹಾಗಂತ ಯೆಹೋವನು ಇಂಥ ನಡತೆ ಒಪ್ಪುತ್ತಾನೆಂದು ಅರ್ಥವಲ್ಲ.—ರೋಮನ್ನರಿಗೆ 1:28-32 ಓದಿ.

3. ದೇವರ ಮಟ್ಟಗಳ ಪ್ರಕಾರ ಜೀವಿಸುವವರ ಬಗ್ಗೆ ಅನೇಕರು ಏನು ನೆನಸುತ್ತಾರೆ?

3 ಮೊದಲನೇ ಶತಮಾನದಲ್ಲಿದ್ದ ಜನರು ಸಹ ಹೊಡೆದಾಟ-ಬಡಿದಾಟ, ಅನೈತಿಕತೆ ತುಂಬಿದ ಮನೋರಂಜನೆ ನೋಡುತ್ತಿದ್ದರು. ಆದರೆ ಯೇಸುವಿನ ಹಿಂಬಾಲಕರು ಅಂಥವುಗಳನ್ನೆಲ್ಲ ನೋಡುತ್ತಿರಲಿಲ್ಲ. ಏಕೆಂದರೆ ಅವರು ದೇವರ ಮಟ್ಟಗಳ ಪ್ರಕಾರ ಜೀವಿಸುತ್ತಿದ್ದರು. ಸುತ್ತಮುತ್ತ ಇದ್ದ ಜನರು ಇದನ್ನು ನೋಡಿ ‘ಇವರು ಯಾಕೆ ಹೀಗೆ?’ ಎಂದು ಆಶ್ಚರ್ಯಪಡುತ್ತಿದ್ದರು. ಹಾಗಾಗಿ ಕ್ರೈಸ್ತರನ್ನು ಗೇಲಿಮಾಡುತ್ತಿದ್ದರು, ಹಿಂಸಿಸುತ್ತಿದ್ದರು. (1 ಪೇತ್ರ 4:4) ಇವತ್ತಿಗೂ ದೇವರ ಮಟ್ಟಗಳ ಪ್ರಕಾರ ಜೀವಿಸುತ್ತಿರುವ ಜನರನ್ನು ಅನೇಕರು ‘ವಿಚಿತ್ರ ಜನ’ ಎಂದೆಣಿಸುತ್ತಾರೆ. ಅಷ್ಟೇ ಅಲ್ಲ, ಕ್ರಿಸ್ತ ಯೇಸುವಿನ ಮಾದರಿಯನ್ನು ಅನುಕರಿಸುವವರು ಹಿಂಸೆಗೂ ಒಳಗಾಗುವರೆಂದು ಬೈಬಲ್‌ ಎಚ್ಚರಿಸುತ್ತದೆ.—2 ತಿಮೊ. 3:12.

“ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ”

4. ನಾವು ಈ ಲೋಕವನ್ನು ಏಕೆ ಪ್ರೀತಿಸಬಾರದು?

4 ದೇವರ ಚಿತ್ತ ಮಾಡಬೇಕೆನ್ನುವ ಆಸೆಯಿದ್ದರೆ ನಾವು ‘ಲೋಕವನ್ನಾಗಲಿ ಲೋಕದಲ್ಲಿ ಇರುವವುಗಳನ್ನಾಗಲಿ’ ಪ್ರೀತಿಸಬಾರದು. (1 ಯೋಹಾನ 2:15, 16 ಓದಿ.) ಲೋಕವು “ಈ ವಿಷಯಗಳ ವ್ಯವಸ್ಥೆಯ ದೇವ”ನಾದ ಸೈತಾನನ ನಿಯಂತ್ರಣದಲ್ಲಿದೆ. ಅವನು ಧರ್ಮಗಳನ್ನು, ಸರ್ಕಾರಗಳನ್ನು, ವ್ಯಾಪಾರ ಸಂಘಟನೆಗಳನ್ನು, ಸುದ್ದಿ ವಾಹಿನಿಗಳನ್ನು ಬಳಸಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾನೆ. (2 ಕೊರಿಂ. 4:4; 1 ಯೋಹಾ. 5:19) ನಮಗೆ ಈ ಲೋಕದ ಪ್ರಭಾವಕ್ಕೆ ಒಳಗಾಗಲು ಇಷ್ಟವಿಲ್ಲ, ಹಾಗಾಗಿ ನಾವು ಕೆಟ್ಟ ಸಹವಾಸದಿಂದ ದೂರವಿರಬೇಕು. ಬೈಬಲ್‌ ಸ್ಪಷ್ಟವಾಗಿ ಈ ಎಚ್ಚರಿಕೆ ಕೊಡುತ್ತದೆ: “ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂ. 15:33.

5, 6. ನಾವು ಯಾರ ಜೊತೆ ಸಹವಾಸ ಮಾಡಬಾರದು? ಯಾಕೆ?

5 ಯೆಹೋವನೊಟ್ಟಿಗೆ ಒಳ್ಳೇ ಸಂಬಂಧ ಇಟ್ಟುಕೊಳ್ಳಬೇಕೆಂದರೆ ಕೆಟ್ಟ ವಿಷಯಗಳನ್ನು ಮಾಡುವವರ ಜೊತೆ ಸಹವಾಸ ಮಾಡಬಾರದು. ಇಂಥವರಲ್ಲಿ, ಯೆಹೋವನನ್ನು ಆರಾಧಿಸುತ್ತೇವೆಂದು ಹೇಳಿ ಆತನಿಗೆ ಅವಿಧೇಯರಾಗುವವರೂ ಸೇರಿದ್ದಾರೆ. ಗಂಭೀರ ಪಾಪಮಾಡಿರುವ ಇವರು ಪಶ್ಚಾತ್ತಾಪಪಡದಿದ್ದರೆ ಅವರ ಜೊತೆ ಸೇರುವುದನ್ನು ನಾವು ನಿಲ್ಲಿಸುತ್ತೇವೆ.—ರೋಮ. 16:17, 18.

6 ಸಾಮಾನ್ಯವಾಗಿ ನಮ್ಮೆಲ್ಲರಿಗೆ ಸ್ನೇಹಿತರು ನಮ್ಮನ್ನು ಮೆಚ್ಚಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ನಾವು ದೇವರಿಗೆ ವಿಧೇಯತೆ ತೋರಿಸದವರ ಸಹವಾಸ ಮಾಡಿದರೆ ಅವರನ್ನು ಮೆಚ್ಚಿಸಲಿಕ್ಕಾಗಿ ಅವರಂತೆಯೇ ಮಾಡುವ ಆಸೆ ನಮಗೂ ಬರಬಹುದು. ಉದಾಹರಣೆಗೆ ಲೈಂಗಿಕ ಅನೈತಿಕತೆಯಲ್ಲಿ ತೊಡಗಿರುವವರ ಜೊತೆ ಹತ್ತಿರದ ಸಹವಾಸ ಇಟ್ಟುಕೊಂಡರೆ ನಾವೂ ಅವರಂತೆ ಆಗುವ ಸಾಧ್ಯತೆ ಇದೆ. ನಮ್ಮ ಕೆಲವು ಸಹೋದರ ಸಹೋದರಿಯರಿಗೆ ಹೀಗೆ ಆಗಿದೆ. ಇಂಥವರು ಪಶ್ಚಾತ್ತಾಪಪಡದಿದ್ದ ಕಾರಣ ಅವರಿಗೆ ಬಹಿಷ್ಕಾರವೂ ಆಗಿದೆ. (1 ಕೊರಿಂ. 5:11-13) ಇದಾದ ನಂತರವೂ ಪಶ್ಚಾತ್ತಾಪದ ಸುಳಿವು ಅವರಲ್ಲಿ ಇರದಿದ್ದರೆ ಪೇತ್ರನು ವರ್ಣಿಸಿದ ಸ್ಥಿತಿಗೆ ತಲುಪುತ್ತಾರೆ.—2 ಪೇತ್ರ 2:20-22 ಓದಿ.

7. ಯಾರು ನಮ್ಮ ಆಪ್ತ ಸ್ನೇಹಿತರಾಗಿರಬೇಕು?

7 ನಾವೆಲ್ಲರೊಟ್ಟಿಗೆ ದಯೆಯಿಂದ ನಡಕೊಳ್ಳಬೇಕು ನಿಜ. ಆದರೆ ಯೆಹೋವನಿಗೆ ವಿಧೇಯರಾಗದವರ ಜೊತೆ ಆಪ್ತ ಗೆಳೆತನ ಬೆಳೆಸಿಕೊಳ್ಳಲೇಬಾರದು. ಹಾಗಾಗಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಯೆಹೋವನಿಗೆ ಸಮರ್ಪಿತರಾಗಿಲ್ಲದ, ನಂಬಿಗಸ್ತರಲ್ಲದ ವ್ಯಕ್ತಿಯ ಜೊತೆ ಪ್ರೀತಿ-ಪ್ರೇಮ ಎಂದೆಲ್ಲ ಶುರುಮಾಡುವುದು ತಪ್ಪು. ದೇವರನ್ನು ಪ್ರೀತಿಸದ ಜನರ ಮೆಚ್ಚಿಕೆಗಿಂತ ಯೆಹೋವನ ಮೆಚ್ಚಿಕೆ ಪಡೆಯುವುದು ಮುಖ್ಯ. ಯಾರು ದೇವರ ಚಿತ್ತ ಮಾಡುತ್ತಾರೊ ಅಂಥವರು ಮಾತ್ರ ನಮ್ಮ ಆಪ್ತ ಸ್ನೇಹಿತರಾಗಿರಬೇಕು. ಯೇಸು ಹೀಗಂದನು: “ದೇವರ ಚಿತ್ತವನ್ನು ಮಾಡುವವನೇ ನನ್ನ ತಮ್ಮನೂ ತಂಗಿಯೂ ತಾಯಿಯೂ ಆಗಿದ್ದಾನೆ.”—ಮಾರ್ಕ 3:35.

8. ಕೆಟ್ಟ ಸಹವಾಸ ಪುರಾತನ ಇಸ್ರಾಯೇಲ್ಯರ ಮೇಲೆ ಯಾವ ಪರಿಣಾಮ ಬೀರಿತು?

8 ಕೆಟ್ಟ ಸಹವಾಸ ದುರಂತಕ್ಕೆ ನಡೆಸುತ್ತದೆ. ಉದಾಹರಣೆಗೆ ಇಸ್ರಾಯೇಲ್ಯರಿಗೆ ಏನಾಯಿತೆಂದು ನೋಡಿ. ವಾಗ್ದತ್ತ ದೇಶಕ್ಕೆ ಅವರು ಬರುವ ಮುಂಚೆ ಆ ದೇಶದಲ್ಲಿ ಈಗಾಗಲೇ ಜೀವಿಸುತ್ತಿದ್ದ ಜನರ ಬಗ್ಗೆ ಯೆಹೋವನು ಎಚ್ಚರಿಕೆ ನೀಡಿದನು. ಆತನಂದದ್ದು: “ಅವರ ದೇವತೆಗಳನ್ನು ನೀವು ನಮಸ್ಕರಿಸಲೂ ಬಾರದು, ಪೂಜಿಸಲೂ ಬಾರದು; ಅವರ ಆಚರಣೆಗಳನ್ನು ಅನುಸರಿಸಲೇ ಬಾರದು; ಆ ಜನಗಳನ್ನು ನಿರ್ಮೂಲಮಾಡಿ ವಿಗ್ರಹಸ್ತಂಭಗಳನ್ನು ನಾಶನ ಮಾಡಬೇಕು. ನಿಮ್ಮ ದೇವರಾದ ಯೆಹೋವನೊಬ್ಬನನ್ನೇ ಆರಾಧಿಸಬೇಕು.” (ವಿಮೋ. 23:24, 25) ಆದರೆ ಹೆಚ್ಚಿನ ಇಸ್ರಾಯೇಲ್ಯರು ದೇವರು ಕೊಟ್ಟ ಈ ಎಚ್ಚರಿಕೆಗೆ ವಿಧೇಯರಾಗಲಿಲ್ಲ, ಅಪನಂಬಿಗಸ್ತರಾದರು. (ಕೀರ್ತ. 106:35-39) ಇದರ ಫಲಿತಾಂಶ? ಮುಂದೆ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ತಿರಸ್ಕರಿಸಿ ಕ್ರೈಸ್ತ ಸಭೆಯನ್ನು ತನ್ನ ಜನರನ್ನಾಗಿ ಆಯ್ಕೆಮಾಡಿದನು.—ಮತ್ತಾ. 23:38; ಅ. ಕಾ. 2:1-4.

ಏನು ಓದುತ್ತೀರೊ, ನೋಡುತ್ತೀರೊ ಅದರ ಬಗ್ಗೆ ಎಚ್ಚರವಹಿಸಿ!

9. ಈ ಲೋಕದ ಮಾಧ್ಯಮಗಳು ಅಪಾಯಕಾರಿ ಯಾಕೆ?

9 ಲೋಕದ ಮಾಧ್ಯಮಗಳಾದ ಟಿವಿ ಕಾರ್ಯಕ್ರಮಗಳು, ವೆಬ್‌ಸೈಟ್‌ಗಳು ಮತ್ತು ಪುಸ್ತಕಗಳಲ್ಲಿ ಹೆಚ್ಚಿನವು ಯೆಹೋವನ ಜೊತೆ ನಮಗಿರುವ ಸಂಬಂಧವನ್ನು ಹಾಳುಮಾಡುವ ಸಾಧ್ಯತೆಯಿದೆ. ಯೆಹೋವನಲ್ಲಿ, ಆತನ ಮಾತುಗಳಲ್ಲಿ ನಂಬಿಕೆ ಬೆಳೆಸುವಂಥ ವಿಷಯಗಳು ಅದರಲ್ಲಿರುವುದಿಲ್ಲ. ಬದಲಿಗೆ ಸೈತಾನನ ದುಷ್ಟ ಲೋಕದ ಮೇಲೆ ಭರವಸೆಯಿಡಲು ಅವು ಪ್ರೋತ್ಸಾಹಿಸುತ್ತವೆ. ಆದ್ದರಿಂದ ನಮ್ಮಲ್ಲಿ ಪ್ರಪಂಚದ ಅಥವಾ “ಲೌಕಿಕ ಆಶೆ”ಗಳನ್ನು ಬಡಿದೆಬ್ಬಿಸುವ ಯಾವುದೇ ವಿಷಯವನ್ನು ನೋಡದಂತೆ, ಓದದಂತೆ, ಕೇಳದಂತೆ ನಾವು ತುಂಬ ಜಾಗ್ರತೆ ವಹಿಸಬೇಕು.—ತೀತ 2:12.

10. ಈ ಲೋಕದ ಮಾಧ್ಯಮಗಳಿಗೆ ಏನಾಗಲಿದೆ?

10 ಸೈತಾನನ ಲೋಕ ಮತ್ತು ಅದರ ಹಾನಿಕಾರಕ ಮಾಧ್ಯಮಗಳು ಬೇಗನೆ ನಾಶವಾಗಲಿವೆ. ಬೈಬಲ್‌ ಹೀಗನ್ನುತ್ತದೆ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.” (1 ಯೋಹಾ. 2:17) ಅದೇ ರೀತಿ ಕೀರ್ತನೆಗಾರ ಹೀಗಂದನು: “ಕೆಡುಕರು ತೆಗೆದುಹಾಕಲ್ಪಡುವರು.” ಅವನು ಕೂಡಿಸಿ ಹೇಳಿದ್ದು: “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಎಷ್ಟರ ವರೆಗೆ? “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತ. 37:9, 11, 29.

11. ತನಗೆ ನಂಬಿಗಸ್ತರಾಗಿ ಉಳಿಯಲು ದೇವರು ನಮಗೆ ಹೇಗೆ ಸಹಾಯ ಮಾಡುತ್ತಿದ್ದಾನೆ?

11 ಯೆಹೋವನ ಸಂಘಟನೆ ಸೈತಾನನ ಲೋಕದಂತಿಲ್ಲ. ಈ ಸಂಘಟನೆ ನಮಗೆ ನಿತ್ಯಜೀವಕ್ಕೆ ನಡೆಸುವಂಥ ರೀತಿಯಲ್ಲಿ ಜೀವಿಸಲು ಸಹಾಯಮಾಡುತ್ತದೆ. ಯೇಸು ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾ. 17:3) ಯೆಹೋವನ ಬಗ್ಗೆ ತಿಳಿದುಕೊಳ್ಳಲು ನಮಗೆ ಏನೆಲ್ಲ ಬೇಕೊ ಅದೆಲ್ಲವನ್ನು ಆತನು ತನ್ನ ಸಂಘಟನೆ ಮೂಲಕ ಕೊಡುತ್ತಿದ್ದಾನೆ. ಉದಾಹರಣೆಗೆ ದೇವರ ಸೇವೆ ಮಾಡುತ್ತಾ ಇರಲು ನೆರವಾಗುವ ತುಂಬ ಪತ್ರಿಕೆಗಳು, ಕಿರುಹೊತ್ತಗೆಗಳು, ಪುಸ್ತಕಗಳು, ವಿಡಿಯೊಗಳು, ವೆಬ್ ಪೇಜ್‌ಗಳು ಇವೆ. ಇಡೀ ಲೋಕದಲ್ಲಿರುವ 1,10,000ಕ್ಕೂ ಹೆಚ್ಚು ಸಭೆಗಳಲ್ಲಿ ತಪ್ಪದೇ ಪ್ರತಿ ವಾರ ಕೂಟಗಳು ನಡೆಯುವಂತೆಯೂ ಆತನ ಸಂಘಟನೆ ಏರ್ಪಾಡು ಮಾಡಿದೆ. ಆ ಕೂಟಗಳಲ್ಲಿ ಮತ್ತು ದೊಡ್ಡ ಸಮ್ಮೇಳನಗಳಲ್ಲಿ ನಾವು ಬೈಬಲಿನಿಂದ ಕಲಿಯುವ ಸಂಗತಿಗಳು ಯೆಹೋವ ಮತ್ತು ಆತನ ಮಾತುಗಳ ಮೇಲೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.—ಇಬ್ರಿ. 10:24, 25.

“ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಿ

12. “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಬೇಕೆಂಬ ಬೈಬಲ್‌ ಆಜ್ಞೆಯನ್ನು ವಿವರಿಸಿ.

12 ಮದುವೆ ಆಗಬೇಕೆಂದಿರುವ ಕ್ರೈಸ್ತರು ತಾವು ಯಾರ ಜೊತೆ ಸಹವಾಸಮಾಡಲು ಆರಿಸಿಕೊಳ್ಳುತ್ತೇವೆಂಬ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಏಕೆಂದರೆ ದೇವರ ವಾಕ್ಯ ನಮ್ಮನ್ನು ಹೀಗೆ ಎಚ್ಚರಿಸುತ್ತದೆ: “ನೀವು ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ಜೊತೆಯಾಗಬೇಡಿರಿ. ನೀತಿಗೂ ಅನೀತಿಗೂ ಮೈತ್ರಿ ಏನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?” (2 ಕೊರಿಂ. 6:14) ದೇವರ ಸೇವಕರು “ಕರ್ತನಲ್ಲಿರುವವನನ್ನು ಮಾತ್ರ” ಅಂದರೆ ಸಮರ್ಪಣೆಮಾಡಿ, ದೀಕ್ಷಾಸ್ನಾನ ಪಡೆದು, ಯೆಹೋವನ ಮಟ್ಟಗಳ ಪ್ರಕಾರ ಜೀವಿಸುವವರನ್ನೇ ಮದುವೆಯಾಗಬೇಕೆಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 7:39) ಯೆಹೋವನನ್ನು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾದರೆ ಆತನಿಗೆ ನಂಬಿಗಸ್ತರಾಗಿರಲು ಅವರು ನಿಮಗೆ ನೆರವಾಗುವರು.

13. ಮದುವೆ ಬಗ್ಗೆ ಇಸ್ರಾಯೇಲ್ಯರಿಗೆ ದೇವರು ಯಾವ ಆಜ್ಞೆ ಕೊಟ್ಟನು?

13 ನಮಗೆ ಯಾವುದು ಒಳ್ಳೇದು ಎನ್ನುವುದು ನಮಗಿಂತ ಚೆನ್ನಾಗಿ ಯೆಹೋವನಿಗೆ ಗೊತ್ತು. ‘ಕರ್ತನಲ್ಲಿರುವವರನ್ನು ಮಾತ್ರ’ ಮದುವೆಯಾಗಬೇಕು ಎನ್ನುವ ಆಜ್ಞೆ ಹೊಸದೇನಲ್ಲ. ಉದಾಹರಣೆಗೆ, ತನ್ನನ್ನು ಆರಾಧಿಸದ ಜನರ ಬಗ್ಗೆ ಯೆಹೋವನು ಇಸ್ರಾಯೇಲ್ಯರಿಗೆ ಮೋಶೆ ಮುಖಾಂತರ ಈ ಆಜ್ಞೆ ಕೊಟ್ಟನು: “ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.”—ಧರ್ಮೋ. 7:3, 4.

14, 15. ಯೆಹೋವನ ಆಜ್ಞೆಯನ್ನು ಮೀರಿದ್ದರಿಂದ ಸೊಲೊಮೋನನಿಗೆ ಏನಾಯಿತು?

14 ಇಸ್ರಾಯೇಲ್ಯರ ಅರಸನಾದ ನಂತರ ಸೊಲೊಮೋನನು ವಿವೇಕಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಅವನ ಪ್ರಾರ್ಥನೆಗೆ ಉತ್ತರಕೊಟ್ಟನು. ಹಾಗಾಗಿ ಸೊಲೊಮೋನನು ಸಮೃದ್ಧಿ ತುಂಬಿದ ರಾಜ್ಯದ ಬುದ್ಧಿವಂತ ಅರಸನೆಂದು ಪ್ರಸಿದ್ಧನಾದ. ಅವನ ವಿವೇಕವನ್ನು ನೋಡಿ ಶೆಬದ ರಾಣಿಗೆ ಎಷ್ಟು ಆಶ್ಚರ್ಯವಾಯಿತೆಂದರೆ “ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ” ಎಂದು ಹೇಳಿದಳು. (1 ಅರ. 10:7) ಸೊಲೊಮೋನನ ಉದಾಹರಣೆ ನಮಗೆ ಇನ್ನೊಂದು ಪಾಠವನ್ನೂ ಕಲಿಸುತ್ತದೆ: ದೇವರ ಆಜ್ಞೆಯನ್ನು ಮೀರಿ ಆತನನ್ನು ಆರಾಧಿಸದೆ ಇರುವವರನ್ನು ಮದುವೆಯಾದರೆ ಫಲಿತಾಂಶ ದುಃಖಕರ.—ಪ್ರಸಂ. 4:13.

15 ಸೊಲೊಮೋನನನ್ನು ಯೆಹೋವನು ಆಶೀರ್ವದಿಸಿದರೂ ದೇವರ ಸ್ಪಷ್ಟವಾದ ಆಜ್ಞೆಯನ್ನು ಅವನು ಮೀರಿದನು. ಯೆಹೋವನ ಆರಾಧಕರಲ್ಲದ ಅನೇಕ “ಜನಾಂಗಗಳ ಸ್ತ್ರೀಯರನ್ನೂ ಮೋಹಿಸಿದನು.” ಕೊನೆಯಲ್ಲಿ ಅವನಿಗೆ 700 ಪತ್ನಿಯರು, 300 ಉಪಪತ್ನಿಯರು ಇದ್ದರು. ಇದರಿಂದ ಏನಾಯಿತು? ಅವನು ವೃದ್ಧನಾದಾಗ ಈ ಹೆಂಡತಿಯರು “ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು.” ಹೀಗೆ “ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.” (1 ಅರ. 11:1-6) ಈ ಕೆಟ್ಟ ಸಹವಾಸವು ಅವನ ಮೇಲೆ ಪರಿಣಾಮ ಬೀರಿತು. ಅವನು ಯೆಹೋವನಿಗೆ ನಂಬಿಗಸ್ತನಾಗಿ ಉಳಿಯಲಿಲ್ಲ. ಸೊಲೊಮೋನನಿಗೇ ಹೀಗಾಯಿತು ಅಂದಮೇಲೆ ಈ ರೀತಿ ಯಾರಿಗೆ ಬೇಕಾದರೂ ಆಗಬಹುದು. ಹಾಗಾಗಿ ಯೆಹೋವನ ಮೇಲೆ ಪ್ರೀತಿಯಿಲ್ಲದ ವ್ಯಕ್ತಿಯನ್ನು ಮದುವೆಯಾಗುವುದರ ಬಗ್ಗೆ ನಾವು ಕನಸುಮನಸ್ಸಲ್ಲೂ ಯೋಚಿಸಬಾರದು!

16. ಯೆಹೋವನ ಆರಾಧಕರಲ್ಲದ ಸಂಗಾತಿ ಇರುವವರಿಗೆ ಬೈಬಲ್‌ ಯಾವ ಸಲಹೆ ಕೊಡುತ್ತದೆ?

16 ನೀವು ಯೆಹೋವನ ಆರಾಧಕರು, ಆದರೆ ನಿಮ್ಮ ಸಂಗಾತಿ ಯೆಹೋವನ ಆರಾಧಕರಲ್ಲ ಎಂದು ನೆನಸಿ. ಆಗೇನು ಮಾಡುವಿರಿ? ಬೈಬಲ್‌ ಹೀಗನ್ನುತ್ತದೆ: “ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ . . . ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” (1 ಪೇತ್ರ 3:1, 2) ಈ ಮಾತು ಯೆಹೋವನ ಆರಾಧನೆ ಮಾಡದ ಹೆಂಡತಿಯಿರುವ ಗಂಡನಿಗೂ ಅನ್ವಯ. ಬೈಬಲ್‌ ಸ್ಪಷ್ಟವಾಗಿ ಈ ಸಲಹೆ ಕೊಡುತ್ತದೆ: ಒಳ್ಳೇ ಗಂಡ ಅಥವಾ ಹೆಂಡತಿ ಆಗಿರಿ ಮತ್ತು ವಿವಾಹ ಜೀವನಕ್ಕಾಗಿ ದೇವರು ಇಟ್ಟಿರುವ ಮಟ್ಟಗಳನ್ನು ಪಾಲಿಸಿರಿ. ನೀವು ಮಾಡಿರುವ ಬದಲಾವಣೆಗಳನ್ನು ಸಂಗಾತಿ ಗಮನಿಸಿದಾಗ ಅವರಿಗೂ ಯೆಹೋವನ ಆರಾಧನೆ ಮಾಡುವ ಆಸೆ ಬರಬಹುದು. ಅನೇಕ ದಂಪತಿಗಳಿಗೆ ಈ ಅನುಭವ ಆಗಿದೆ.

ಯೆಹೋವನನ್ನು ಪ್ರೀತಿಸುವವರ ಜೊತೆ ಮಾತ್ರ ಸಹವಾಸಮಾಡಿ

17, 18. (ಎ) ಜಲಪ್ರಳಯದಿಂದ ಪಾರಾಗಲು ನೋಹನಿಗೆ ಸಹಾಯಮಾಡಿದ್ದು ಯಾವುದು? (ಬಿ) ಮೊದಲನೇ ಶತಮಾನದ ಕ್ರೈಸ್ತರಿಗೆ ಯೆರೂಸಲೇಮ್‌ ನಾಶವಾದಾಗ ಪಾರಾಗಲು ಯಾವುದು ಸಹಾಯಮಾಡಿತು?

17 ಕೆಟ್ಟ ಸಹವಾಸ ನೀವು ಯೆಹೋವನಿಗೆ ಅವಿಧೇಯರಾಗುವಂತೆ ಮಾಡುತ್ತದೆ. ಆದರೆ ಒಳ್ಳೇ ಸಹವಾಸ ನೀವಾತನಿಗೆ ನಂಬಿಗಸ್ತರಾಗಿರಲು ಸಹಾಯ ಮಾಡುತ್ತದೆ. ಇದಕ್ಕೆ ಒಳ್ಳೇ ಉದಾಹರಣೆಯೆಂದರೆ ನೋಹ. ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿದ್ದ’ ಮತ್ತು ‘ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿದ್ದ’ ಸಮಯದಲ್ಲಿ ಅವನು ಜೀವಿಸಿದನು. (ಆದಿ. 6:5) ಜನರು ಎಷ್ಟು ಕೆಟ್ಟುಹೋಗಿದ್ದರೆಂದರೆ ಆ ದುಷ್ಟ ಲೋಕವನ್ನು ಯೆಹೋವನು ನಾಶಮಾಡಬೇಕೆಂದು ತೀರ್ಮಾನಿಸಿದನು. ಆದರೆ ನೋಹ ಆ ಜನರಂತೆ ಇರಲಿಲ್ಲ. ಬೈಬಲ್‌ ಅವನನ್ನು ‘ನೀತಿವಂತನು’ ಎಂದು ಕರೆಯುತ್ತಾ ಅವನು “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು” ಎಂದು ಹೇಳುತ್ತದೆ.—ಆದಿ. 6:7-9.

18 ಯೆಹೋವನ ಮೇಲೆ ಪ್ರೀತಿ ಇಲ್ಲದವರ ಜೊತೆ ನೋಹ ಸಹವಾಸ ಮಾಡಲಿಲ್ಲ. ಅವನು ಮತ್ತು ಅವನ ಕುಟುಂಬದವರು ನಾವೆಯನ್ನು ಕಟ್ಟುವುದರಲ್ಲಿ ತಲ್ಲೀನರಾಗಿದ್ದರು. ಜೊತೆಗೆ ನೋಹ ‘ನೀತಿಯನ್ನು ಸಾರುವವನಾಗಿದ್ದನು.’ (2 ಪೇತ್ರ 2:5) ನೋಹ, ಅವನ ಹೆಂಡತಿ, ಅವನ ಮೂವರು ಪುತ್ರರು, ಅವನ ಸೊಸೆಯಂದಿರು ಒಬ್ಬರಿನ್ನೊಬ್ಬರ ಜೊತೆ ಮಾಡಿದ ಸಹವಾಸ ಒಳ್ಳೇದಾಗಿತ್ತು. ಅವರು ಯೆಹೋವನಿಗೆ ವಿಧೇಯರಾಗಿ ಕೆಟ್ಟ ಸಹವಾಸದಿಂದ ದೂರವಿದ್ದರು. ದೇವರು ಮೆಚ್ಚುವ ಕೆಲಸಗಳನ್ನು ಮಾಡುವುದರಲ್ಲೇ ತಲ್ಲೀನರಾಗಿದ್ದರು. ಇದರಿಂದಾಗಿ ಜಲಪ್ರಳಯದಿಂದ ಪಾರಾದರು. ಹಾಗಾಗಿ ನಾವೆಲ್ಲರೂ ಅವರ ಸಂತತಿಯವರಾಗಿ ಹುಟ್ಟಲು ಸಾಧ್ಯವಾಯಿತು. ಇದಕ್ಕಾಗಿ ನಾವು ಕೃತಜ್ಞರಾಗಿರಬೇಕು. ಅದೇ ರೀತಿ ಮೊದಲನೇ ಶತಮಾನದ ಕ್ರೈಸ್ತರು ಸಹ ಯೆಹೋವನನ್ನು ಪ್ರೀತಿಸದಿದ್ದ ಜನರ ಜೊತೆ ಸೇರಲಿಲ್ಲ. ಆತನಿಗೆ ವಿಧೇಯರಾದರು ಮತ್ತು ಕ್ರಿ.ಶ. 70ರಲ್ಲಾದ ಯೆರೂಸಲೇಮಿನ ನಾಶನದಿಂದ ಪಾರಾದರು.—ಲೂಕ 21:20-22.

ಯೆಹೋವನನ್ನು ಪ್ರೀತಿಸುವವರ ಜೊತೆ ನಾವು ಸಹವಾಸ ಮಾಡಿದಾಗ ಹೊಸ ಲೋಕದಲ್ಲಿ ಜೀವನ ಹೇಗಿರುತ್ತದೆಂದು ಊಹಿಸಲು ಸಹಾಯವಾಗುತ್ತದೆ(ಪ್ಯಾರ 19 ನೋಡಿ)

19. ಯೆಹೋವನಿಗೆ ನಂಬಿಗಸ್ತರಾಗಿರಲು ನಮಗೆ ಯಾವುದು ನೆರವಾಗುವುದು?

19 ನೋಹ, ಅವನ ಕುಟುಂಬ ಮತ್ತು ಮೊದಲನೇ ಶತಮಾನದ ಕ್ರೈಸ್ತರಂತೆ ನಾವು ಯೆಹೋವನನ್ನು ಪ್ರೀತಿಸದೇ ಇರುವ ಯಾರ ಜೊತೆಯೂ ಸಹವಾಸ ಮಾಡುವುದಿಲ್ಲ. ಆಪ್ತ ಸ್ನೇಹಿತರನ್ನಾಗಿ ಆಯ್ಕೆಮಾಡಿಕೊಳ್ಳಲು ಮಿಲ್ಯಾಂತರ ಸಹೋದರ ಸಹೋದರಿಯರು ನಮಗಿದ್ದಾರೆ. ಈ ಕಷ್ಟಕರ ಸಮಯದಲ್ಲಿ ಅವರು ನಮಗೆ “ನಂಬಿಕೆಯಲ್ಲಿ ದೃಢರಾಗಿ ನಿಂತು”ಕೊಳ್ಳಲು ನೆರವಾಗುತ್ತಾರೆ. (1 ಕೊರಿಂ. 16:13; ಜ್ಞಾನೋ. 13:20) ಈ ದುಷ್ಟ ಲೋಕದ ಅಂತ್ಯವನ್ನು ಪಾರಾಗಿ ಯೆಹೋವನು ತರಲಿರುವ ಹೊಸ ಲೋಕದಲ್ಲಿ ಬದುಕುವುದು ಎಷ್ಟು ಚೆನ್ನಾಗಿರುತ್ತದೆಂದು ಸ್ವಲ್ಪ ಊಹಿಸಿನೋಡಿ! ಆ ಲೋಕದಲ್ಲಿ ನಾವಿರಬೇಕಾದರೆ ಈಗ ನಾವು ಕೆಟ್ಟ ಸಹವಾಸದಿಂದ ದೂರವಿರಬೇಕು!