ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

‘ದ್ವೀಪಸಮೂಹಗಳು ಹರ್ಷಿಸಲಿ’

‘ದ್ವೀಪಸಮೂಹಗಳು ಹರ್ಷಿಸಲಿ’

ಮೇ 22, 2000. ಆ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಲೋಕದ ಬೇರೆಬೇರೆ ಕಡೆಯಿಂದ ಬಂದಿದ್ದ ಅನೇಕ ಸಹೋದರರ ಜೊತೆ ನಾನಿದ್ದೆ. ನಾವೆಲ್ಲರೂ ಆಡಳಿತ ಮಂಡಲಿಯ ಕೂಟ ನಡೆಯುವ ಕೋಣೆಯಲ್ಲಿ ಗಾಬರಿಯಿಂದ ಕಾಯುತ್ತಿದ್ದೆವು. ರೈಟಿಂಗ್‌ ಕಮಿಟಿಯ ಸದಸ್ಯರು ಇನ್ನೇನು ಕೋಣೆ ಒಳಗೆ ಬರಲಿದ್ದರು. ಅವರ ಮುಂದೆ ನಾವೊಂದು ವಿಷಯ ಪ್ರಸ್ತುತಪಡಿಸಬೇಕಿತ್ತು. ಭಾಷಾಂತರಕಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೆಲವು ವಾರಗಳಿಂದ ಪರಿಶೀಲಿಸಿದ್ದೆವು. ಈಗ ಅದಕ್ಕೆ ಪರಿಹಾರಗಳನ್ನು ಸೂಚಿಸಬೇಕಿತ್ತು. ಆದರೆ ಈ ಕೂಟ ಯಾಕೆ ಅಷ್ಟೊಂದು ಪ್ರಾಮುಖ್ಯವಾಗಿತ್ತು? ಅದನ್ನು ವಿವರಿಸುವ ಮುಂಚೆ ನನ್ನ ಹಿನ್ನೆಲೆಯ ಬಗ್ಗೆ ಸ್ವಲ್ಪ ಹೇಳುತ್ತೇನೆ ಕೇಳಿ.

ನಾನು ಕ್ವೀನ್ಸ್‌ಲ್ಯಾಂಡ್‍ನಲ್ಲಿ ದೀಕ್ಷಾಸ್ನಾನ ಪಡೆದೆ, ಟಾಸ್ಮೇನಿಯದಲ್ಲಿ ಪಯನೀಯರ್‌ ಸೇವೆ ಮಾಡಿದೆ ಮತ್ತು ಟುವಾಲು, ಸಮೋವ, ಫಿಜಿಯಲ್ಲಿ ಮಿಷನರಿಯಾಗಿ ಸೇವೆ ಮಾಡಿದೆ

ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‍ನಲ್ಲಿ 1955ರಲ್ಲಿ ನಾನು ಹುಟ್ಟಿದೆ. ಸ್ವಲ್ಪ ಸಮಯದ ನಂತರ ನನ್ನ ತಾಯಿ ಎಸ್ಟೆಲ್‌ ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಕಲಿಯಲು ಶುರುಮಾಡಿದರು. ಮುಂದಿನ ವರ್ಷ ದೀಕ್ಷಾಸ್ನಾನ ಪಡೆದರು. 13 ವರ್ಷಗಳ ನಂತರ ನನ್ನ ತಂದೆ ರಾನ್‌ ಸತ್ಯಕ್ಕೆ ಬಂದರು. ನಾನು 1968ರಲ್ಲಿ ಕ್ವೀನ್ಸ್‌ಲ್ಯಾಂಡ್‍ನಲ್ಲಿ ದೀಕ್ಷಾಸ್ನಾನ ಪಡೆದೆ.

ಚಿಕ್ಕಂದಿನಿಂದಲೇ ನನಗೆ ಓದುವುದೆಂದರೆ ತುಂಬ ಇಷ್ಟ. ಭಾಷೆಗಳ ಕಡೆಗೆ ನನಗೇನೊ ಆಕರ್ಷಣೆ. ಕುಟುಂಬ ಸಮೇತ ಹೊರಗೆ ಹೋಗುವಾಗೆಲ್ಲಾ ನಾನು ಸುತ್ತಮುತ್ತಲಿನ ಪ್ರಕೃತಿಯನ್ನು ಆನಂದಿಸುವ ಬದಲು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಪುಸ್ತಕಗಳನ್ನು ಓದುತ್ತಿರುತ್ತಿದ್ದೆ. ಇದನ್ನು ನೋಡಿ ಅಪ್ಪಅಮ್ಮನಿಗೆ ಕಿರಿಕಿರಿಯಾಗಿರಬಹುದು. ಪುಸ್ತಕಗಳನ್ನು ಓದುವ ನನ್ನ ಹುಚ್ಚು ನನಗೆ ಶಾಲೆಯಲ್ಲಿ ತುಂಬ ಉಪಯೋಗಕ್ಕೆ ಬಂತು. ನಾನು ಓದಿದ್ದು ಟಾಸ್ಮೇನಿಯ ಎಂಬ ದ್ವೀಪರಾಜ್ಯದ ಗ್ಲೇನಾರ್‌ಕಿ ಎಂಬಲ್ಲಿನ ಪ್ರೌಢಶಾಲೆಯಲ್ಲಿ. ಓದಿನಲ್ಲಿ ಮುಂದಿದ್ದ ನನಗೆ ಹಲವಾರು ಪ್ರಶಸ್ತಿಗಳೂ ಸಿಕ್ಕಿದವು.

ಸಮಯಾನಂತರ ನಾನು, ವಿದ್ಯಾರ್ಥಿವೇತನ ಪಡೆದು ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾ ಎಂಬ ಗಂಭೀರ ತೀರ್ಮಾನ ಮಾಡಬೇಕಾಗಿ ಬಂತು. ಪುಸ್ತಕಗಳೆಂದರೆ, ಓದುವುದೆಂದರೆ ನನಗೆ ಪಂಚಪ್ರಾಣ. ಆದರೆ ಯಾರಿಗಿಂತಲೂ ಹೆಚ್ಚಾಗಿ, ಯಾವುದಕ್ಕಿಂತಲೂ ಹೆಚ್ಚಾಗಿ ಯೆಹೋವನನ್ನು ಪ್ರೀತಿಸಲು ಅಮ್ಮ ನನಗೆ ಸಹಾಯ ಮಾಡಿದರು. ಅದಕ್ಕಾಗಿ ನಾನು ಅವರಿಗೆ ಕೃತಜ್ಞನು. (1 ಕೊರಿಂ. 3:18, 19) ನಾನು ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ಕೂಡಲೇ ಓದನ್ನು ನಿಲ್ಲಿಸಬೇಕೆಂದು ಹೆತ್ತವರ ಒಪ್ಪಿಗೆ ಪಡೆದು ನಿರ್ಧರಿಸಿದೆ. ನಂತರ ಜನವರಿ 1971ರಿಂದ ಪಯನೀಯರ್‌ ಸೇವೆ ಶುರುಮಾಡಿದೆ. ನನಗಾಗ 15 ವರ್ಷ.

ಎಂಟು ವರ್ಷಗಳ ವರೆಗೆ ಟಾಸ್ಮೇನಿಯದಲ್ಲಿ ಪಯನೀಯರ್‌ ಸೇವೆ ಮಾಡುವ ಸುಯೋಗ ನನಗೆ ಸಿಕ್ಕಿತು. ಆಗಲೇ ನಾನು ಟಾಸ್ಮೇನಿಯದ ಸುಂದರ ಹುಡುಗಿಯೊಬ್ಬಳನ್ನು ಮದುವೆಯಾದೆ. ಅವಳ ಹೆಸರು ಜೆನಿ ಆಲ್‌ಕೊಕ್‌. ನಾವಿಬ್ಬರೂ ಒಟ್ಟಿಗೆ ಸ್ಮಿತ್‌ಟನ್‌ ಮತ್ತು ಕ್ವೀನ್ಸ್‌ಟೌನ್‍ನ ದೂರದೂರದ ಪ್ರದೇಶಗಳಲ್ಲಿ ವಿಶೇಷ ಪಯನೀಯರರಾಗಿ 4 ವರ್ಷ ಸೇವೆ ಮಾಡಿದೆವು.

ಪೆಸಿಫಿಕ್‌ ದ್ವೀಪಗಳಿಗೆ ಹೊರಟೆವು

1978ರಲ್ಲಿ ಪಾಪುವ ನ್ಯೂ ಗಿನಿಯ ಪೊರ್ಟ್ ಮೋರ್ಸ್‌ಬಿ ಎಂಬಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ಮೊದಲ ಬಾರಿಗೆ ಕಡಲಾಚೆ ಪ್ರಯಾಣ ಮಾಡಿದೆವು. ಅಲ್ಲಿ ಹಿರಿ ಮೊಟು ಭಾಷೆಯಲ್ಲಿ ಭಾಷಣ ಕೊಡುತ್ತಿದ್ದ ಮಿಷನರಿಯನ್ನು ನಾನಿನ್ನು ಮರೆತ್ತಿಲ್ಲ. ಆ ಭಾಷಣದಲ್ಲಿ ನನಗೇನೂ ಅರ್ಥವಾಗದಿದ್ದರೂ ನಾನೊಬ್ಬ ಮಿಷನರಿಯಾಗಲು, ಬೇರೆ ಭಾಷೆಗಳನ್ನು ಕಲಿತು ಅವರಂತೆಯೇ ಭಾಷಣ ಕೊಡಲು ನನಗೆ ಸ್ಫೂರ್ತಿ ಸಿಕ್ಕಿತು. ಯೆಹೋವನ ಮೇಲೆ ಮತ್ತು ಭಾಷೆಯ ಮೇಲೆ ನನಗಿದ್ದ ಪ್ರೀತಿಯನ್ನು ತೋರಿಸಲು ಕೊನೆಗೂ ನನಗೆ ದಾರಿ ಸಿಕ್ಕಿತು.

ಆಸ್ಟ್ರೇಲಿಯಗೆ ವಾಪಸ್‌ ಬಂದ ಮೇಲೆ ನಮಗೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಟುವಾಲುವಿನಲ್ಲಿರುವ ಫುನಾಫುಟಿ ದ್ವೀಪದಲ್ಲಿ ಮಿಷನರಿಗಳಾಗಿ ಸೇವೆ ಮಾಡಲು ನಮಗೆ ಆಮಂತ್ರಣ ಸಿಕ್ಕಿತು. ಆ ದ್ವೀಪಕ್ಕೆ ಎಲ್ಲೀಸ್‌ ದ್ವೀಪ ಎಂದು ಮುಂಚೆ ಕರೆಯಲಾಗುತ್ತಿತ್ತು. ನಾವಲ್ಲಿಗೆ ಜನವರಿ 1979ರಲ್ಲಿ ತಲುಪಿದೆವು. ಆಗ ಇಡೀ ಟುವಾಲುವಿನಲ್ಲಿ ದೀಕ್ಷಾಸ್ನಾನ ಪಡೆದ ಪ್ರಚಾರಕರು ಬರೀ 3 ಜನ ಇದ್ದರು.

ಟುವಾಲುವಿನಲ್ಲಿ ನನ್ನ ಹೆಂಡತಿ ಜೆನಿ ಜೊತೆ

ಟುವಾಲುವನ್‌ ಭಾಷೆ ಕಲಿಯುವುದು ಸುಲಭವಾಗಿರಲಿಲ್ಲ. ಏಕೆಂದರೆ ಈ ಭಾಷೆಯಲ್ಲಿ ಲಭ್ಯವಿದ್ದ ಒಂದೇ ಒಂದು ಪುಸ್ತಕ ಎಂದರೆ “ಹೊಸ ಒಡಂಬಡಿಕೆ.” ಯಾವುದೇ ಶಬ್ದಕೋಶಗಳಾಗಲಿ ಭಾಷಾ ಕೋರ್ಸುಗಳಾಗಲಿ ಲಭ್ಯವಿರಲಿಲ್ಲ. ಹಾಗಾಗಿ ಪ್ರತಿದಿನ ನಾವಾಗಿಯೇ 10-20 ಹೊಸ ಪದಗಳನ್ನು ಕಲಿಯಲು ತೀರ್ಮಾನಿಸಿದೆವು. ಆದರೆ ನಾವು ಕಲಿಯುತ್ತಿದ್ದ ಹೆಚ್ಚಿನ ಪದಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ ಎಂದು ನಮಗೆ ಗೊತ್ತಾಯಿತು. ಉದಾಹರಣೆಗೆ ಕಣಿ ಕೇಳುವುದು ತಪ್ಪೆಂದು ಹೇಳುವ ಬದಲು ಜನರಿಗೆ ಅಳತೆಗೋಲು ಮತ್ತು ನಡೆದಾಡುವ ಕೋಲನ್ನು ಬಳಸುವುದು ತಪ್ಪೆಂದು ಹೇಳುತ್ತಿದ್ದೆವು! ನಾವು ಈಗಾಗಲೇ ಶುರುಮಾಡಿದ ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸಬೇಕಾದರೆ ಆ ಭಾಷೆಯನ್ನು ಕಲಿಯಲೇಬೇಕಿತ್ತು. ಆದ್ದರಿಂದ ನಮ್ಮ ಪ್ರಯತ್ನವನ್ನು ಬಿಟ್ಟುಕೊಡಲಿಲ್ಲ. ಆ ಸಮಯದಲ್ಲಿ ನಮ್ಮಿಂದ ಬೈಬಲ್‌ ಕಲಿಯುತ್ತಿದ್ದ ಒಬ್ಬರು ವರ್ಷಗಳ ನಂತರ ಹೀಗಂದರು: “ಮೊದಲೆಲ್ಲ ನೀವು ಏನು ಹೇಳುತ್ತಾ ಇದ್ದೀರೆಂದು ನಮಗೆ ಒಂಚೂರು ಅರ್ಥವಾಗುತ್ತಿರಲಿಲ್ಲ! ಈಗ ನೀವು ನಮ್ಮ ಭಾಷೆ ಮಾತಾಡುವುದರಿಂದ ನಮಗೆ ತುಂಬ ಖುಷಿಯಾಗುತ್ತದೆ.”

ಈ ಭಾಷೆಯನ್ನು ಕಲಿಯಲು ನಾವು ಅನುಕೂಲವಾದ ಒಂದು ಸ್ಥಿತಿಯಲ್ಲಿದ್ದೆವು. ಹೇಗೆಂದರೆ ಬಾಡಿಗೆ ಮನೆ ಸಿಗದಿದ್ದ ಕಾರಣ ನಾವು ಅಲ್ಲಿನ ಮುಖ್ಯ ಹಳ್ಳಿಯೊಂದರಲ್ಲಿ ಸಾಕ್ಷಿ ಕುಟುಂಬದ ಜೊತೆ ವಾಸಿಸಬೇಕಾಗಿ ಬಂತು. ಹಾಗಾಗಿ ಅಲ್ಲಿನ ಭಾಷೆ ಮತ್ತು ಹಳ್ಳಿ ಜೀವನದಲ್ಲಿ ಪೂರ್ತಿಯಾಗಿ ಮುಳುಗಲು ನೆರವಾಯಿತು. ಅನೇಕ ವರ್ಷಗಳ ವರೆಗೆ ಇಂಗ್ಲಿಷ್‌ ಮಾತಾಡದ ಕಾರಣ ಟುವಾಲುವನ್‌ ನಮಗೆ ಮುಖ್ಯ ಭಾಷೆಯಾಯಿತು.

ಅಲ್ಲಿ ಅನೇಕರು ಬೇಗನೆ ಸತ್ಯದಲ್ಲಿ ಆಸಕ್ತಿ ತೋರಿಸಲು ಶುರುಮಾಡಿದರು. ಆದರೆ ಅವರಿಗೆ ಬೈಬಲ್‌ ಬಗ್ಗೆ ಕಲಿಸಲು ಅವರ ಭಾಷೆಯಲ್ಲಿ ಪ್ರಕಾಶನಗಳೇ ಇರಲಿಲ್ಲವಲ್ಲ. ಹಾಗಾಗಿ ಅವರು ವೈಯಕ್ತಿಕ ಅಧ್ಯಯನ ಮಾಡುವುದಾದರೂ ಹೇಗೆ? ಕೂಟಗಳಿಗೆ ಬಂದಾಗ ಸ್ತುತಿಗೀತೆಗಳನ್ನು ಹಾಡುವುದಾದರೂ ಹೇಗೆ? ಯಾವ ಸಾಹಿತ್ಯವನ್ನು ಬಳಸಬಹುದು? ಕೂಟಗಳಿಗೆ ಹೇಗೆ ತಯಾರಿ ಮಾಡುವರು? ದೀಕ್ಷಾಸ್ನಾನದ ತನಕ ಹೇಗೆ ಪ್ರಗತಿ ಮಾಡುವರು? ಇಂಥೆಲ್ಲಾ ಪ್ರಶ್ನೆಗಳು ನಮ್ಮ ಮನಸ್ಸಲ್ಲಿ ಮೂಡಿದವು. ಈ ದೀನ ವ್ಯಕ್ತಿಗಳಿಗೆ ಅವರ ಸ್ವಂತ ಭಾಷೆಯಲ್ಲೇ ಆಧ್ಯಾತ್ಮಿಕ ಆಹಾರದ ಅಗತ್ಯ ತುಂಬ ಇತ್ತು! (1 ಕೊರಿಂ. 14:9) ‘15,000ಕ್ಕಿಂತ ಕಡಿಮೆ ಜನರು ಮಾತಾಡುವ ಟುವಾಲುವನ್‌ ಭಾಷೆಯಲ್ಲಿ ಯಾವತ್ತಾದರೂ ಪ್ರಕಾಶನಗಳು ಬರಬಹುದಾ?’ ಎಂದು ಯೋಚಿಸಿದೆವು. ಈ ಎಲ್ಲಾ ಪ್ರಶ್ನೆಗಳಿಗೆ ಯೆಹೋವನು ಉತ್ತರಕೊಟ್ಟು ಈ ಎರಡು ವಿಷಯಗಳನ್ನು ಸಾಬೀತುಪಡಿಸಿದನು: (1) ತನ್ನ ವಾಕ್ಯವು “ದೂರದ್ವೀಪಗಳಲ್ಲಿ” ಘೋಷಿಸಲ್ಪಡಬೇಕು ಮತ್ತು (2) ಲೋಕವು ಯಾರನ್ನು ‘ದೀನದರಿದ್ರರು’ ಎಂದು ವೀಕ್ಷಿಸುತ್ತದೊ ಅಂಥವರು ತನ್ನ ನಾಮದಲ್ಲಿ ಆಶ್ರಯ ಪಡೆಯಬೇಕು ಎಂಬ ಆಸೆ ಆತನಿಗಿದೆ.—ಯೆರೆ. 31:10; ಚೆಫ. 3:12.

ಆಧ್ಯಾತ್ಮಿಕ ಆಹಾರದ ಭಾಷಾಂತರ

ಮಾಡಲು ಅರ್ಹತೆಯೇ ಇಲ್ಲ ಎಂದನಿಸಿದ ನೇಮಕ ನಮಗೆ 1980ರಲ್ಲಿ ಸಿಕ್ಕಿತು. ಬ್ರಾಂಚ್‌ ಆಫೀಸ್‌ ನಮಗೆ ಭಾಷಾಂತರ ಕೆಲಸವನ್ನು ನೇಮಿಸಿತು. (1 ಕೊರಿಂ. 1:28, 29) ಆರಂಭದಲ್ಲಿ ನಾವು ಸರ್ಕಾರದಿಂದ ಹಳೇ ಮಿಮಿಯೋಗ್ರಾಫ್‌ ಮಷೀನ್‌ (ನಕಲುಯಂತ್ರ) ಖರೀದಿಸಿ ಕೂಟಗಳಿಗೆ ಬೇಕಾದ ಸಾಹಿತ್ಯವನ್ನು ಮುದ್ರಿಸಿದೆವು. ನಿತ್ಯಜೀವಕ್ಕೆ ನಡೆಸುವ ಸತ್ಯ ಎಂಬ ಪುಸ್ತಕವನ್ನೂ ಟುವಾಲುವನ್‌ ಭಾಷೆಗೆ ಭಾಷಾಂತರ ಮಾಡಿ ಈ ಯಂತ್ರದಲ್ಲಿ ಮುದ್ರಿಸಿದೆವು. ಆ ಕಾಲದಲ್ಲಿ ವಿದ್ಯುತ್‌ ಇರಲಿಲ್ಲ. ಆ ಮಸಿ ವಾಸನೆ, ಆ ವಿಪರೀತ ಕಾವು, ಕೈಯಿಂದ ಎಲ್ಲಾ ಸಾಹಿತ್ಯವನ್ನು ಮುದ್ರಿಸಲು ಪಟ್ಟ ಶ್ರಮವನ್ನು ನಾನು ಯಾವತ್ತೂ ಮರೆಯಲ್ಲ.

ಟುವಾಲುವನ್‌ ಭಾಷೆಗೆ ಭಾಷಾಂತರ ಮಾಡುವುದು ನಮಗೆ ದೊಡ್ಡ ಸವಾಲಾಗಿತ್ತು. ಸಹಾಯಕ್ಕಾಗಿ ಬೇರಾವುದೇ ಪುಸ್ತಕಗಳು ಇರಲಿಲ್ಲ. ಆದರೆ ನೆನಸದೇ ಇದ್ದ ಮೂಲಗಳಿಂದ ಕೆಲವೊಮ್ಮೆ ಸಹಾಯ ಸಿಗುತ್ತಿತ್ತು. ಉದಾಹರಣೆಗೆ ಸತ್ಯವನ್ನು ವಿರೋಧಿಸುತ್ತಿದ್ದ ವ್ಯಕ್ತಿಯ ಮನೆಗೆ ನಾನು ಒಂದು ಸಲ ಅಪ್ಪಿತಪ್ಪಿ ಹೋದೆ. ಆ ವಯಸ್ಸಾದ ವ್ಯಕ್ತಿ ಶಿಕ್ಷಕರಾಗಿದ್ದರು. ತಮ್ಮ ಮನೆಗೆ ಇನ್ನು ಯಾವತ್ತೂ ಬರಬಾರದೆಂದು ನಮಗೆ ಹೇಳಿದ್ದನ್ನು ನೆನಪಿಸಿದರು. ನಂತರ ಹೀಗಂದರು: “ನಿಮಗೊಂದು ವಿಷಯ ಹೇಳಬೇಕಿತ್ತು. ನಿಮ್ಮ ಭಾಷಾಂತರದಲ್ಲಿ ಕರ್ಮಣಿ ಪ್ರಯೋಗ ತುಂಬ ಇದೆ. ಟುವಾಲುವನ್‌ ಭಾಷೆಯಲ್ಲಿ ಅದನ್ನು ಬಳಸುವುದು ತುಂಬ ಕಡಿಮೆ.” ನಾನು ಬೇರೆಯವರ ಹತ್ತಿರ ವಿಚಾರಿಸಿದಾಗ ಆ ಮಾತು ನಿಜ ಎಂದು ಗೊತ್ತಾಯಿತು. ಆದ್ದರಿಂದ ಬೇಕಾದ ಹೊಂದಾಣಿಕೆಗಳನ್ನು ಮಾಡಿದೆವು. ಒಬ್ಬ ವಿರೋಧಿಯ ಮೂಲಕ ಯೆಹೋವನು ನಮಗೆ ಈ ಸಹಾಯ ಕೊಟ್ಟನು ಎಂಬ ವಿಷಯ ನನ್ನಲ್ಲಿ ಅಚ್ಚರಿ ಮೂಡಿಸಿತು. ಆ ವ್ಯಕ್ತಿ ನಮ್ಮನ್ನು ವಿರೋಧಿಸಿದರೂ ನಮ್ಮ ಸಾಹಿತ್ಯವನ್ನು ಓದುತ್ತಾರೆ ಎಂದೂ ನನಗೆ ಗೊತ್ತಾಯಿತು.

ಟುವಾಲುವನ್‌ ಭಾಷೆಯಲ್ಲಿ ರಾಜ್ಯ ವಾರ್ತೆ ನಂ. 30

ಟುವಾಲುವನ್‌ ಭಾಷೆಯಲ್ಲಿ ಸಾರ್ವಜನಿಕರಿಗೆಂದು ಮುದ್ರಿಸಲಾದ ಮೊಟ್ಟಮೊದಲ ಸಾಹಿತ್ಯ ಕ್ರಿಸ್ತನ ಸ್ಮರಣೆಯ ಆಮಂತ್ರಣ ಪತ್ರವಾಗಿತ್ತು. ನಂತರ ರಾಜ್ಯ ವಾರ್ತೆ ನಂ. 30ನ್ನು ಇಂಗ್ಲಿಷ್‌ ಜೊತೆ ಬಿಡುಗಡೆ ಮಾಡಲಾಯಿತು. ಜನರಿಗೆ ಅವರದ್ದೇ ಭಾಷೆಯಲ್ಲಿ ಸಾಹಿತ್ಯವನ್ನು ಕೊಡುವಾಗ ನಮಗೆಷ್ಟು ಖುಷಿ ಆಗುತ್ತಿತ್ತು! ಕ್ರಮೇಣ ಕಿರುಹೊತ್ತಿಗೆಗಳು ಮತ್ತು ಪುಸ್ತಕಗಳು ಟುವಾಲುವನ್‌ ಭಾಷೆಯಲ್ಲಿ ಲಭ್ಯವಾಗತೊಡಗಿದವು. 1983ರಲ್ಲಿ ಆಸ್ಟ್ರೇಲಿಯ ಬ್ರಾಂಚ್‌ 24 ಪುಟಗಳ ತ್ರೈಮಾಸಿಕ ಕಾವಲಿನಬುರುಜುವನ್ನು ಮುದ್ರಿಸಲು ಶುರುಮಾಡಿತು. ಹೀಗೆ ನಮಗೆ ಪ್ರತಿ ವಾರ 7 ಪ್ಯಾರಗಳನ್ನು ಅಧ್ಯಯನ ಮಾಡಲು ಸಾಧ್ಯವಾಯಿತು. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು? ಟುವಾಲುವನ್‌ ಜನರಿಗೆ ಓದುವುದು ತುಂಬ ಇಷ್ಟವಾಗಿರುವುದರಿಂದ ನಮ್ಮ ಸಾಹಿತ್ಯ ತುಂಬ ಜನಪ್ರಿಯವಾಯಿತು. ಎಷ್ಟೆಂದರೆ ಹೊಸ ಪ್ರಕಾಶನಗಳ ಬಿಡುಗಡೆ ಆದಾಗಲೆಲ್ಲಾ ಅದರ ಬಗ್ಗೆ ಸರ್ಕಾರಿ ರೇಡಿಯೋ ವಾರ್ತಾ ಪ್ರಸಾರದಲ್ಲಿ ಹೇಳಲಾಗುತ್ತಿತ್ತು. ಒಮ್ಮೊಮ್ಮೆ ಅದು ವಾರ್ತಾ ಮುಖ್ಯಾಂಶವೂ ಆಗಿರುತ್ತಿತ್ತು! *

ಭಾಷಾಂತರ ಕೆಲಸ ಹೇಗೆ ಮಾಡಲಾಗುತ್ತಿತ್ತು? ಮೊದಲು ಹಾಳೆ ಮೇಲೆ ಎಲ್ಲವನ್ನು ಬರೆದು ನಂತರ ಅದನ್ನು ಟೈಪ್‌ ಮಾಡುತ್ತಿದ್ದೆವು. ತಪ್ಪುಗಳನ್ನು ತಿದ್ದಲು ಪುನಃ ಅನೇಕ ಸಲ ಟೈಪ್‌ ಮಾಡಿ ಸಿದ್ಧಪಡಿಸಿ ಆಸ್ಟ್ರೇಲಿಯ ಬ್ರಾಂಚ್‌ಗೆ ಕಳುಹಿಸುತ್ತಿದ್ದೆವು. ಅಲ್ಲಿ ಇಬ್ಬರು ಸಹೋದರಿಯರು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡುತ್ತಿದ್ದರು. ಇವರಿಗೆ ಟುವಾಲುವನ್‌ ಭಾಷೆ ಅರ್ಥವಾಗುತ್ತಿರಲಿಲ್ಲ. ಎರಡೆರಡು ಸಲ ಎಂಟ್ರಿ ಮಾಡಿ ಕಂಪ್ಯೂಟರಿನಲ್ಲಿ ಒಂದನ್ನು ಇನ್ನೊಂದರೊಟ್ಟಿಗೆ ಹೋಲಿಸಿ ತಪ್ಪುಗಳನ್ನು ಕಂಡುಹಿಡಿದು ಸರಿಪಡಿಸುತ್ತಿದ್ದರು. ಆಮೇಲೆ ಬ್ರಾಂಚ್‌ನಲ್ಲಿ ಆ ಪ್ರಕಾಶನವನ್ನು ಕಂಪೋಸ್‌ ಮಾಡಿ ಚಿತ್ರಗಳನ್ನು ಜೋಡಿಸುತ್ತಿದ್ದರು. ಈ ಕಂಪೋಸ್‌ ಮಾಡಲಾದ ಪುಟಗಳನ್ನು ಏರ್‌ಮೇಲ್‍ನಲ್ಲಿ ನಮಗೆ ಕಳುಹಿಸುತ್ತಿದ್ದರು. ನಾವು ಅದನ್ನು ಚೆಕ್‌ ಮಾಡಿ ಪುನಃ ವಾಪಸ್‌ ಬ್ರಾಂಚ್‌ಗೆ ಮುದ್ರಿಸಲು ಕಳುಹಿಸುತ್ತಿದ್ದೆವು.

ಈಗ ಭಾಷಾಂತರ ಕೆಲಸ ಮುಂಚೆಗಿಂತ ಸುಲಭವಾಗಿದೆ! ಹೇಗೆಂದರೆ ಭಾಷಾಂತರ ತಂಡಗಳು ನೇರವಾಗಿ ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಿ ಅದರಲ್ಲೇ ತಿದ್ದುತ್ತಾರೆ. ಸಾಮಾನ್ಯವಾಗಿ ಭಾಷಾಂತರ ತಂಡ ಇರುವಲ್ಲೇ ಒಬ್ಬರು ಪ್ರಕಾಶನಗಳನ್ನು ಕಂಪೋಸ್‌ ಮಾಡುತ್ತಾರೆ. ನಂತರ ಇಂಟರ್‌ನೆಟ್‌ ಮೂಲಕ ಫೈಲುಗಳನ್ನು ಬ್ರಾಂಚ್‌ಗೆ ಮುದ್ರಿಸಲು ಕಳುಹಿಸುತ್ತಾರೆ. ಭಾಷಾಂತರ ಮಾಡಿರುವ ಮಾಹಿತಿಯನ್ನು ಕಳುಹಿಸಲು ಕೊನೆ ನಿಮಿಷಕ್ಕೆ ಯಾರೂ ಈಗ ಅಂಚೆ ಕಛೇರಿಗೆ ಓಡಬೇಕಾಗಿಲ್ಲ!

ಇತರ ನೇಮಕಗಳು

ವರ್ಷಗಳು ಕಳೆದಂತೆ ನನಗೂ ಜೆನಿಗೂ ಪೆಸಿಫಿಕ್‍ನ ಬೇರೆಬೇರೆ ಭಾಗಗಳಲ್ಲಿ ನೇಮಕಗಳು ಸಿಕ್ಕಿದವು. 1985ರಲ್ಲಿ ನಮ್ಮನ್ನು ಟುವಾಲುವಿನಿಂದ ಸಮೋವ ಬ್ರಾಂಚ್‌ಗೆ ಕಳುಹಿಸಲಾಯಿತು. ಅಲ್ಲಿ ನಾವು ಸಮೋವನ್‌, ಟಾ೦ಗನ್‌, ಟೋಕೆಲೊನ್‌ ಭಾಷೆಗಳವರಿಗೆ ಭಾಷಾಂತರ ಕೆಲಸದಲ್ಲಿ ಸಹಾಯಮಾಡಿದೆವು. ಜೊತೆಗೆ ಟುವಾಲುವನ್‌ ಭಾಷಾಂತರಕ್ಕೂ ನೆರವಾದೆವು. * (ಪಾದಟಿಪ್ಪಣಿ ನೋಡಿ.) 1996ರಲ್ಲಿ ನಮ್ಮನ್ನು ಫಿಜಿ ಬ್ರಾಂಚ್‌ಗೆ ಕಳುಹಿಸಲಾಯಿತು. ಅಲ್ಲಿ ನಾವು ಫಿಜಿಯನ್‌, ಕಿರಿಬಾಟಿ, ರೋಟುಮನ್‌ ಮತ್ತು ಟುವಾಲುವನ್‌ ಭಾಷೆಗಳವರಿಗೆ ಭಾಷಾಂತರ ಕೆಲಸದಲ್ಲಿ ಸಹಾಯಮಾಡಿದೆವು.

ಬೇರೆಯವರಿಗೆ ಸಹಾಯ ಮಾಡಲು ಟುವಾಲುವನ್‌ ಪ್ರಕಾಶನಗಳನ್ನು ಬಳಸುತ್ತಿದ್ದದ್ದು

ಭಾಷಾಂತರ ಕೆಲಸ ಸುಲಭವಲ್ಲ, ತುಂಬ ಆಯಾಸಪಡಿಸುತ್ತದೆ. ಆದರೂ ಭಾಷಾಂತರಕಾರರು ತಮ್ಮ ಕೆಲಸವನ್ನು ತುಂಬ ಇಷ್ಟಪಡುತ್ತಾರೆ. ಇದನ್ನು ನೋಡಿ ನನಗೆ ತುಂಬ ಖುಷಿಯಾಗುತ್ತದೆ. ಎಲ್ಲ ಜನರು ತಮ್ಮತಮ್ಮ ಭಾಷೆಯಲ್ಲೇ ಸುವಾರ್ತೆ ಕೇಳಿಸಿಕೊಳ್ಳಬೇಕೆಂದು ಯೆಹೋವನು ಬಯಸುವಂತೆಯೇ ಈ ನಂಬಿಗಸ್ತ ಸಹೋದರ ಸಹೋದರಿಯರೂ ಬಯಸುತ್ತಾರೆ. (ಪ್ರಕ. 14:6) ಉದಾಹರಣೆಗೆ ಕಾವಲಿನಬುರುಜು ಪತ್ರಿಕೆಯನ್ನು ಟಾ೦ಗನ್‌ ಭಾಷೆಗೆ ಭಾಷಾಂತರ ಮಾಡುವ ಕೆಲಸವನ್ನು ಸಂಘಟಿಸುತ್ತಿದ್ದಾಗ ನಾನು ಟಾ೦ಗಾದಲ್ಲಿದ್ದ ಎಲ್ಲ ಹಿರಿಯರ ಜೊತೆ ಒಂದು ಕೂಟ ನಡೆಸಿದೆ. ಯಾರನ್ನು ಭಾಷಾಂತರಕಾರರಾಗಿ ತರಬೇತಿಗೊಳಿಸಬಹುದು ಎಂದು ಅವರನ್ನು ಕೇಳಿದೆ. ಮೆಕಾನಿಕ್‌ ಆಗಿ ಒಳ್ಳೇ ಕೆಲಸವಿದ್ದ ಒಬ್ಬ ಹಿರಿಯರು ಮರು ದಿನವೇ ತಮ್ಮ ಕೆಲಸ ಬಿಟ್ಟು ತಕ್ಷಣ ಭಾಷಾಂತರ ಕೆಲಸ ಮಾಡಲು ತಯಾರಾದರು. ಅವರ ಕುಟುಂಬವನ್ನು ನೋಡಿಕೊಳ್ಳಲು ಹಣದ ಅಗತ್ಯವಿದ್ದರೂ ಅದರ ಬಗ್ಗೆಯೇ ಅತಿಯಾಗಿ ಚಿಂತಿಸದೆ ಕೂಡಲೇ ಆ ಕೆಲಸಕ್ಕೆ ಒಪ್ಪಿಕೊಂಡರು. ಅವರ ಈ ಬಲವಾದ ನಂಬಿಕೆ ನನ್ನನ್ನು ಉತ್ತೇಜಿಸಿತು. ಯೆಹೋವನು ಅವರನ್ನು ಅವರ ಕುಟುಂಬವನ್ನು ನೋಡಿಕೊಂಡನು. ಹಾಗಾಗಿ ಈ ಸಹೋದರರು ತುಂಬ ವರ್ಷ ಭಾಷಾಂತರ ಕೆಲಸದಲ್ಲಿದ್ದರು.

ಈ ಭಾಷಾಂತರಕಾರರಂತೆ ಆಡಳಿತ ಮಂಡಲಿಯ ಸಹೋದರರು ಸಹ ಪ್ರಕಾಶನಗಳನ್ನು ಎಲ್ಲಾ ಭಾಷೆಗಳಲ್ಲಿ ಒದಗಿಸಲು ಇಷ್ಟಪಡುತ್ತಾರೆ. ಕೆಲವೇ ಮಂದಿ ಮಾತಾಡುವ ಭಾಷೆಗಳಿದ್ದರೂ ಸರಿ ಇದನ್ನೇ ಬಯಸುತ್ತಾರೆ. ಉದಾಹರಣೆಗೆ ಟುವಾಲುವನ್‌ ಭಾಷೆಯನ್ನೇ ನೋಡಿ. ಇಷ್ಟೆಲ್ಲಾ ಶ್ರಮಪಟ್ಟು ಆ ಭಾಷೆಗೆ ಭಾಷಾಂತರ ಮಾಡಬೇಕಾ ಎಂಬ ಪ್ರಶ್ನೆಗೆ ಆಡಳಿತ ಮಂಡಲಿ ಹೀಗೆ ಉತ್ತರ ಕೊಟ್ಟಿತು: “ಟುವಾಲುವನ್‌ ಭಾಷೆಯಲ್ಲಿ ಭಾಷಾಂತರ ಕೆಲಸವನ್ನು ನಿಲ್ಲಿಸಲು ಯಾವುದೇ ಕಾರಣವಿಲ್ಲ ಎಂದು ನಮಗನಿಸುತ್ತದೆ. ಬೇರೆ ಭಾಷಾ ಗುಂಪುಗಳಿಗೆ ಹೋಲಿಸಿದರೆ ಟುವಾಲುವನ್‌ ಭಾಷೆ ಮಾತಾಡುವವರು ಸ್ವಲ್ಪ ಮಂದಿಯಾಗಿದ್ದರೂ ಅವರು ತಮ್ಮ ಸ್ವಂತ ಭಾಷೆಯಲ್ಲೇ ಸುವಾರ್ತೆಯನ್ನು ಕೇಳಬೇಕಾಗಿದೆ.” ಈ ಮಾತುಗಳಿಂದ ನನಗೆ ತುಂಬ ಪ್ರೋತ್ಸಾಹ ಸಿಕ್ಕಿತು.

ಸಿಹಿನೀರಿನ ಸರೋವರದಲ್ಲಿ ಒಬ್ಬರಿಗೆ ದೀಕ್ಷಾಸ್ನಾನ ಕೊಡುತ್ತಿರುವುದು

ನನ್ನನ್ನು ಮತ್ತು ಜೆನಿಯನ್ನು 2003ರಲ್ಲಿ ಫಿಜಿಯಲ್ಲಿದ್ದ ಭಾಷಾಂತರ ಡಿಪಾರ್ಟ್‍ಮೆಂಟ್‍ನಿಂದ ನ್ಯೂ ಯಾರ್ಕ್‍ನಲ್ಲಿರುವ ಪ್ಯಾಟರ್‌ಸನ್‍ನ ಟ್ರಾನ್ಸ್‌ಲೇಷನ್‌ ಸರ್ವಿಸಸ್‌ಗೆ [ಭಾಷಾಂತರಕಾರರಿಗೆ ಸಹಾಯ ಮಾಡುವ ವಿಭಾಗ] ವರ್ಗಾಯಿಸಲಾಯಿತು. ಇದು ನಮಗೆ ಕನಸಿನಂತೆ ಇತ್ತು! ಪ್ರಕಾಶನಗಳನ್ನು ಇನ್ನು ಹೆಚ್ಚು ಭಾಷೆಗಳಿಗೆ ಭಾಷಾಂತರ ಮಾಡಲು ನೆರವಾಗುವ ಒಂದು ತಂಡದ ಭಾಗವಾದೆವು. ಸುಮಾರು ಎರಡು ವರ್ಷಗಳ ವರೆಗೆ ನಾವು ಟ್ರಾನ್ಸ್‌ಲೇಷನ್‌ ಸರ್ವಿಸಸ್‍ನಲ್ಲಿ ಇದ್ದಾಗ ಬೇರೆ ದೇಶಗಳಿಗೆ ಹೋಗಿ ಅಲ್ಲಿರುವ ಭಾಷಾಂತರ ತಂಡಗಳಿಗೆ ತರಬೇತಿ ಕೊಟ್ಟು ಸಹಾಯಮಾಡುವ ನೇಮಕ ಸಿಕ್ಕಿತು.

ತುಂಬ ಪ್ರಾಮುಖ್ಯವಾದ ತೀರ್ಮಾನಗಳು

ಆರಂಭದಲ್ಲಿ ನಾನು ಹೇಳಿದ್ದ ಆ ಪ್ರಾಮುಖ್ಯ ಕೂಟದ ಬಗ್ಗೆ ಈಗ ಹೇಳುತ್ತೇನೆ ಕೇಳಿ. ಇಡೀ ಲೋಕದಲ್ಲಿರುವ ಭಾಷಾಂತರ ತಂಡಗಳಿಗೆ ಅವರ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಸಹಾಯ ಕೊಡಬೇಕೆಂದು ಇಸವಿ 2000ದಷ್ಟಕ್ಕೆ ಆಡಳಿತ ಮಂಡಲಿಗೆ ಅನಿಸಿತು. ಭಾಷಾಂತರಕಾರರಲ್ಲಿ ಹೆಚ್ಚಿನವರು ಭಾಷಾಂತರಕ್ಕೆ ಸಂಬಂಧಪಟ್ಟ ಯಾವುದೇ ಕೋರ್ಸುಗಳಿಗೆ ಹೋಗಿರಲಿಲ್ಲ. ಆದ್ದರಿಂದ ರೈಟಿಂಗ್‌ ಕಮಿಟಿಯೊಟ್ಟಿಗಿನ ಆ ಕೂಟದ ನಂತರ ಆಡಳಿತ ಮಂಡಲಿಯು ಲೋಕದೆಲ್ಲೆಡೆ ಇರುವ ಎಲ್ಲಾ ಭಾಷಾಂತರಕಾರರಿಗೆ ತರಬೇತಿ ಕೊಡಬೇಕೆಂದು ತೀರ್ಮಾನಿಸಿತು. ಇಂಗ್ಲಿಷ್‌ ಮಾಹಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಭಾಷಾಂತರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕು, ಒಂದು ತಂಡವಾಗಿ ಒಟ್ಟಿಗೆ ಹೇಗೆ ಕೆಲಸ ಮಾಡಬೇಕೆಂದು ಭಾಷಾಂತರಕಾರರಿಗೆ ತರಬೇತಿ ಸಿಗಲಿತ್ತು.

ಭಾಷಾಂತರಕಾರರಿಗೆ ಇಷ್ಟೆಲ್ಲಾ ತರಬೇತಿ ಕೊಟ್ಟಿದ್ದರ ಫಲಿತಾಂಶವೇನು? ಭಾಷಾಂತರದ ಗುಣಮಟ್ಟ ಉತ್ತಮವಾಗಿದೆ. ಹಿಂದೆಂದಿಗಿಂತಲೂ ಈಗ ನಮ್ಮ ಪ್ರಕಾಶನಗಳು ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಆಗುತ್ತಿವೆ. 1979ರಲ್ಲಿ ನಾವು ಮಿಷನರಿಗಳಾದಾಗ ಕಾವಲಿನಬುರುಜು ಪತ್ರಿಕೆ ಬರೀ 82 ಭಾಷೆಗಳಲ್ಲಿ ಸಿಗುತ್ತಿತ್ತು. ಆದರೂ ಹೆಚ್ಚಿನ ಭಾಷೆಗಳಲ್ಲಿ ಮುದ್ರಿಸಲ್ಪಟ್ಟ ಮಾಹಿತಿ ಇಂಗ್ಲಿಷ್‌ ಪತ್ರಿಕೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಂದ ಮಾಹಿತಿ ಆಗಿರುತ್ತಿತ್ತು. ಆದರೆ ಈಗ 240ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಕಾವಲಿನಬುರುಜು ಭಾಷಾಂತರವಾಗುತ್ತಿದೆ. ಇಂಗ್ಲಿಷ್‌ ಪತ್ರಿಕೆಯಲ್ಲಿರುವ ಮಾಹಿತಿಯು ಅನೇಕ ಭಾಷೆಗಳಲ್ಲಿ ಅದೇ ತಿಂಗಳ ಸಂಚಿಕೆಗಳಲ್ಲಿ ಲಭ್ಯವಾಗುತ್ತಿದೆ. ಬೈಬಲ್‌ ಸತ್ಯವನ್ನು ಕಲಿಸುವ ಯಾವುದಾದರೊಂದು ಸಾಹಿತ್ಯ ಈಗ 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಕೆಲವು ವರ್ಷಗಳ ಹಿಂದೆ ಇದು ಅಸಾಧ್ಯವೆಂದು ತೋರುತ್ತಿತ್ತು.

2004ರಲ್ಲಿ ನೂತನ ಲೋಕ ಭಾಷಾಂತರ ಇನ್ನು ಹೆಚ್ಚಿನ ಭಾಷೆಗಳಲ್ಲಿ ಆದಷ್ಟು ಬೇಗ ಲಭ್ಯಗೊಳಿಸುವುದು ತುಂಬ ಪ್ರಾಮುಖ್ಯವೆಂದು ಆಡಳಿತ ಮಂಡಲಿ ತೀರ್ಮಾನಿಸಿತು. ಈ ತೀರ್ಮಾನದಿಂದಾಗಿ ಇಂದು ಅನೇಕರಿಗೆ ತಮ್ಮ ಸ್ವಂತ ಭಾಷೆಯಲ್ಲಿ ನೂತನ ಲೋಕ ಭಾಷಾಂತರವನ್ನು ಓದಲು ಸಾಧ್ಯವಾಗುತ್ತಿದೆ. 2014ರಷ್ಟಕ್ಕೆ ಈ ಇಡೀ ಬೈಬಲ್‌ ಅಥವಾ ಒಂದು ಭಾಗ (ಗ್ರೀಕ್‌ ಶಾಸ್ತ್ರಗ್ರಂಥ) 128 ಭಾಷೆಗಳಲ್ಲಿ ಲಭ್ಯವಾಯಿತು. ಅದರಲ್ಲಿ ದಕ್ಷಿಣ ಪೆಸಿಫಿಕ್‍ನ ಅನೇಕ ಭಾಷೆಗಳು ಸೇರಿವೆ.

ಟುವಾಲುವನ್‌ ಭಾಷೆಯ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರವನ್ನು ಬಿಡುಗಡೆ ಮಾಡುತ್ತಿರುವುದು

ನನಗಿರುವ ಸವಿ ನೆನಪುಗಳಲ್ಲಿ ಅಚ್ಚುಮೆಚ್ಚಿನದ್ದು 2011ರಲ್ಲಿ ಟುವಾಲುವಿನಲ್ಲಿ ನಡೆದ ಒಂದು ಅಧಿವೇಶನಕ್ಕೆ ಸಂಬಂಧಪಟ್ಟದ್ದು. ಅನೇಕ ತಿಂಗಳುಗಳಿಂದ ಆ ಇಡೀ ದೇಶದಲ್ಲಿ ವಿಪರೀತ ಬರಗಾಲವಿತ್ತು. ಅಧಿವೇಶನವನ್ನು ರದ್ದುಗೊಳಿಸಬೇಕಾದೀತೆಂದು ಸಹೋದರರು ನೆನಸಿದರು. ಆದರೆ ಸಂತೋಷದ ವಿಷಯವೇನೆಂದರೆ ನಾವು ಅಲ್ಲಿಗೆ ತಲುಪಿದ ಸಾಯಂಕಾಲವೇ ಜೋರು ಮಳೆ ಶುರುವಾಯಿತು. ಹಾಗಾಗಿ ನಮ್ಮ ಅಧಿವೇಶನ ನಡೆಸಲು ಸಾಧ್ಯವಾಯಿತು! ಆ ಅಧಿವೇಶನದಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರವನ್ನು ಟುವಾಲುವನ್‍ನಲ್ಲಿ ಬಿಡುಗಡೆ ಮಾಡುವ ಮಹಾ ಸುಯೋಗ ನನಗೆ ಸಿಕ್ಕಿತು! ಆ ಭಾಷೆಯನ್ನು ಮಾತಾಡುವ ಸಹೋದರರು ಸ್ವಲ್ಪವೇ ಇದ್ದರೂ ಅವರಿಗೂ ಯೆಹೋವನಿಂದ ಈ ಸುಂದರ ಉಡುಗೊರೆ ಸಿಕ್ಕಿತು. ನಂತರ ಅಧಿವೇಶನದ ಕೊನೆಯಲ್ಲಿ ಪುನಃ ಜೋರು ಮಳೆ ಬಂತು. ಎಲ್ಲರಿಗೂ ಸತ್ಯದ ನೀರು ಮತ್ತು ಮಳೆ ನೀರು ಧಾರಾಳವಾಗಿ ಸಿಕ್ಕಿತು!!

2014ರಲ್ಲಿ ನನ್ನ ಹೆತ್ತವರಾದ ರಾನ್‌ ಮತ್ತು ಎಸ್ಟೆಲ್‌ರನ್ನು ಆಸ್ಟ್ರೇಲಿಯದ ಟೌನ್ಸ್‌ವಿಲ್ಲ ಎಂಬಲ್ಲಿನ ಒಂದು ಅಧಿವೇಶನದಲ್ಲಿ ಸಂದರ್ಶನ ಮಾಡುತ್ತಿರುವುದು

ದುಃಖದ ಸಂಗತಿಯೇನೆಂದರೆ ನನ್ನ ಪ್ರೀತಿಯ ಹೆಂಡತಿ ಜೆನಿ ಆಗ ನನ್ನೊಟ್ಟಿಗೆ ಇರಲಿಲ್ಲ. 10 ವರ್ಷಗಳ ತನಕ ಕ್ಯಾನ್ಸರ್‌ ವಿರುದ್ಧ ಹೋರಾಡಿ 2009ರಲ್ಲಿ ಕೊನೆ ಉಸಿರೆಳೆದಳು. ಅವಳು 35 ವರ್ಷಗಳ ವರೆಗೆ ನನ್ನ ಬಾಳಸಂಗಾತಿ ಆಗಿದ್ದಳು. ಅವಳ ಪುನರುತ್ಥಾನವಾದಾಗ ಟುವಾಲುವನ್‌ ಭಾಷೆಯಲ್ಲಿ ಬೈಬಲ್‌ ಬಿಡುಗಡೆಯಾದ ವಿಷಯ ಕೇಳಿ ಅವಳಿಗೆ ಖಂಡಿತ ತುಂಬ ಸಂತೋಷ ಆಗಲಿದೆ.

ಯೆಹೋವನು ನನಗೆ ಇನ್ನೊಬ್ಬಳು ಸುಂದರ ಹೆಂಡತಿಯನ್ನು ಕೊಟ್ಟು ಆಶೀರ್ವದಿಸಿದ್ದಾನೆ. ಅವಳ ಹೆಸರು ಲೊರೇನಿ ಸಿಕಿವೊ. ಫಿಜಿ ದೇಶದ ಬೆತೆಲ್‍ನಲ್ಲಿ ಜೆನಿ ಮತ್ತು ಲೊರೇನಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಲೊರೇನಿ ಭಾಷಾಂತರಕಾರಳೂ ಆಗಿದ್ದಳು. ಈಗ ನನಗಿರುವ ಹೆಂಡತಿ ಸಹ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವೆ ಮಾಡುವವಳಾಗಿದ್ದಾಳೆ. ಅಷ್ಟೇ ಅಲ್ಲ ಅವಳಿಗೂ ನನ್ನಂತೆಯೇ ಭಾಷೆಗಳೆಂದರೆ ತುಂಬ ಇಷ್ಟ!

ಫಿಜಿಯಲ್ಲಿ ಲೊರೇನಿ ಜೊತೆ ಸುವಾರ್ತೆ ಸಾರುತ್ತಿರುವುದು

ಈ ವರ್ಷಗಳಲೆಲ್ಲಾ ನಮ್ಮ ಪ್ರೀತಿಯ ತಂದೆಯಾದ ಯೆಹೋವನು ಹೇಗೆ ಎಲ್ಲಾ ಭಾಷೆಗಳ ಜನರ ಕಾಳಜಿ ವಹಿಸುತ್ತಾನೆಂದು ನೋಡಿದ್ದೇನೆ. ಕೇವಲ ಸ್ವಲ್ಪ ಮಂದಿ ಮಾತಾಡುವ ಭಾಷೆಯಾಗಿದ್ದರೂ ಸರಿ ಕಾಳಜಿ ವಹಿಸುತ್ತಾನೆ. (ಕೀರ್ತ. 49:1-3) ಜನರಿಗೆ ಅವರ ಸ್ವಂತ ಭಾಷೆಯಲ್ಲಿ ಒಂದು ಪ್ರಕಾಶನ ಮೊದಲ ಬಾರಿ ಸಿಕ್ಕಿದಾಗ ಅಥವಾ ಅವರ ಮನಮುಟ್ಟುವ ಭಾಷೆಯಲ್ಲಿ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವಾಗ ಅವರಿಗಾಗುವ ಖುಷಿಯನ್ನು ಕಣ್ಣಾರೆ ನೋಡಿದ್ದೇನೆ. ಕೆಲವೊಮ್ಮೆ ಇಂಥ ಸಂದರ್ಭಗಳಲ್ಲಿ ನಾನು ಯೆಹೋವನಿಗೆ ನಮ್ಮೆಲ್ಲರ ಮೇಲಿರುವ ಅಪಾರ ಪ್ರೀತಿಯ ಬಗ್ಗೆ ಯೋಚಿಸುತ್ತೇನೆ. (ಅ. ಕಾ. 2:8, 11) ಟುವಾಲುವಿನ ಒಬ್ಬ ವೃದ್ಧ ಸಹೋದರ ಸೌಲೋ ಟೀಸಿ ಹೇಳಿದ ಮಾತುಗಳು ನನಗಿನ್ನೂ ಚೆನ್ನಾಗಿ ನೆನಪಿದೆ. ಇವರು ತಮ್ಮ ಭಾಷೆಯಲ್ಲಿ ಮೊದಲ ಬಾರಿ ರಾಜ್ಯ ಗೀತೆಯನ್ನು ಹಾಡಿದ ನಂತರ ಹೀಗಂದರು: “ಇಂಗ್ಲಿಷ್‌ಗಿಂತ ಟುವಾಲುವನ್‌ ಭಾಷೆಯಲ್ಲಿರುವ ಈ ಹಾಡುಗಳು ತುಂಬ ಚೆನ್ನಾಗಿವೆ ಎಂದು ನೀನು ಖಂಡಿತವಾಗಿ ಆಡಳಿತ ಮಂಡಲಿಗೆ ಹೇಳಬೇಕು.”

ಸೆಪ್ಟೆಂಬರ್‌ 2005ರಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯನಾಗಿ ಸೇವೆ ಸಲ್ಲಿಸುವ ಸುಯೋಗ ನನಗೆ ಸಿಕ್ಕಿದಾಗ ತುಂಬ ಆಶ್ಚರ್ಯವಾಯಿತು. ಈಗ ನಾನೊಬ್ಬ ಭಾಷಾಂತರಕಾರನಾಗಿ ಕೆಲಸ ಮಾಡುವುದಿಲ್ಲ. ಆದರೆ ಲೋಕವ್ಯಾಪಕವಾಗಿ ನಡೆಯುತ್ತಿರುವ ಭಾಷಾಂತರ ಕೆಲಸವನ್ನು ಬೇರೆ ರೀತಿಯಲ್ಲಿ ಬೆಂಬಲಿಸಲು ಯೆಹೋವನು ಈಗಲೂ ನನಗೆ ಅವಕಾಶ ಕೊಟ್ಟಿರುವುದಕ್ಕೆ ನಾನು ತುಂಬ ಕೃತಜ್ಞನು. ಯೆಹೋವನು ತನ್ನೆಲ್ಲಾ ಜನರ ಅಗತ್ಯಗಳನ್ನು ಪೂರೈಸುತ್ತಾನೆ, ಪೆಸಿಫಿಕ್‌ ಸಾಗರದ ಮಧ್ಯದಲ್ಲಿರುವ ತುಂಬ ಚಿಕ್ಕ ದ್ವೀಪಗಳಲ್ಲಿರುವವರನ್ನು ಅಲಕ್ಷ್ಯ ಮಾಡಿಲ್ಲ ಎಂಬ ವಿಷಯ ನನಗೆ ತುಂಬ ಖುಷಿ ತರುತ್ತದೆ. ಹೌದು ಕೀರ್ತನೆಗಾರ ಹೇಳಿದಂತೆ “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ [ದ್ವೀಪಗಳ ಸಮೂಹ, ಪವಿತ್ರ ಗ್ರಂಥ] ಹರ್ಷಿಸಲಿ.”—ಕೀರ್ತ. 97:1.

^ ಪ್ಯಾರ. 18 ನಮ್ಮ ಸಾಹಿತ್ಯಕ್ಕೆ ಬಂದ ಪ್ರತಿಕ್ರಿಯೆ ಬಗ್ಗೆ ಉದಾಹರಣೆಗಳನ್ನು ಕಾವಲಿನಬುರುಜು ಡಿಸೆಂಬರ್‌ 15, 2000, ಪುಟ 32; ಆಗಸ್ಟ್‌ 1, 1988 (ಇಂಗ್ಲಿಷ್‌), ಪುಟ 22; ಎಚ್ಚರ! ಡಿಸೆಂಬರ್‌ 22, 2000 (ಇಂಗ್ಲಿಷ್‌), ಪುಟ 9 ನೋಡಿ.

^ ಪ್ಯಾರ. 22 ಸಮೋವದಲ್ಲಿನ ಭಾಷಾಂತರ ಕೆಲಸದ ಬಗ್ಗೆ ಹೆಚ್ಚನ್ನು ತಿಳಿಯಲು 2009 ವರ್ಷಪುಸ್ತಕ (ಇಂಗ್ಲಿಷ್‌) ಪುಟ 120-121, 123-124 ನೋಡಿ.