ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆ?

ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆ?

“ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” —1 ಯೋಹಾ. 4:19.

ಗೀತೆಗಳು: 56, 138

1, 2. ಯೆಹೋವನು ನಮಗೆ ಆತನನ್ನು ಪ್ರೀತಿಸಲು ಕಲಿಸಿರುವುದು ಹೇಗೆ?

ಒಬ್ಬ ತಂದೆ ತನ್ನ ಮಕ್ಕಳಿಗೆ ಏನನ್ನಾದರೂ ಕಲಿಸಬೇಕೆಂದರೆ ಅದನ್ನು ಮಾಡುವ ಉತ್ತಮ ವಿಧ, ತಾನೇ ಸ್ವತಃ ಮಾದರಿಯಿಡುವ ಮೂಲಕ. ಉದಾಹರಣೆಗೆ ಪ್ರೀತಿಸುವುದು ಹೇಗೆಂದು ತನ್ನ ಮಕ್ಕಳಿಗೆ ಕಲಿಸುವುದು ಅವರನ್ನು ಪ್ರೀತಿಸುವ ಮೂಲಕ. ನಮ್ಮೆಲ್ಲರ ತಂದೆಯಾದ ಯೆಹೋವನು ನಮ್ಮನ್ನು ಪ್ರೀತಿಸಿರುವಷ್ಟು ಯಾರೂ ಎಂದೂ ಪ್ರೀತಿಸಿಲ್ಲ. “ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ” ನಾವು ಪ್ರೀತಿಸುವುದು ಹೇಗೆಂದು ಕಲಿತಿದ್ದೇವೆ.—1 ಯೋಹಾ. 4:19.

2 ಯೆಹೋವನು ‘ನಮ್ಮನ್ನು ಮೊದಲು ಪ್ರೀತಿಸಿದನೆಂದು’ ಯಾವ ವಿಧದಲ್ಲಿ ತೋರಿಸಿದ್ದಾನೆ? ಬೈಬಲ್‌ ಹೀಗನ್ನುತ್ತದೆ: ‘ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತನು.’ (ರೋಮ. 5:8) ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮ್ಮನ್ನು ಪಾಪ ಮರಣದಿಂದ ಬಿಡಿಸಲು ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟನು. ಈ ಅಮೂಲ್ಯ ಉಡುಗೊರೆಯು ನಾವು ಯೆಹೋವನಿಗೆ ಹತ್ತಿರವಾಗಲು ಮತ್ತು ಆತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸಲು ಸಾಧ್ಯ ಮಾಡಿದೆ. ಈ ಮಹಾ ತ್ಯಾಗವನ್ನು ಮಾಡುವ ಮೂಲಕ ನಾವು ಸ್ವಾರ್ಥವಿಲ್ಲದೆ, ಧಾರಾಳ ಮನಸ್ಸಿನಿಂದ ಪ್ರೀತಿ ತೋರಿಸಬೇಕೆಂಬ ಒಳ್ಳೇ ಮಾದರಿಯನ್ನು ಯೆಹೋವನು ಇಟ್ಟಿದ್ದಾನೆ.—1 ಯೋಹಾ. 4:10.

3, 4. ನಾವು ದೇವರನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆ?

3 ಪ್ರೀತಿ ಯೆಹೋವನ ಪ್ರಾಮುಖ್ಯ ಗುಣವಾಗಿದೆ. ಆದ್ದರಿಂದಲೇ ‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದ, ನಿನ್ನ ಪೂರ್ಣ ಪ್ರಾಣದಿಂದ, ನಿನ್ನ ಪೂರ್ಣ ಮನಸ್ಸಿನಿಂದ, ನಿನ್ನ ಪೂರ್ಣ ಬಲದಿಂದ ಪ್ರೀತಿಸಬೇಕು’ ಎಂಬ ಆಜ್ಞೆ ಮುಖ್ಯವಾದದ್ದೆಂದು ಯೇಸು ಹೇಳಿದನು. (ಮಾರ್ಕ 12:30) “ಪೂರ್ಣ ಹೃದಯ”ದಿಂದ ನಾವು ಆತನನ್ನು ಪ್ರೀತಿಸಬೇಕೆಂದು ಯೆಹೋವನು ಬಯಸುತ್ತಾನೆ. ಅದರ ಬದಲು ಬೇರೆ ಯಾರನ್ನೊ ಅಥವಾ ಯಾವುದೊ ಒಂದು ವಿಷಯವನ್ನೊ ಆತನಿಗಿಂತ ಹೆಚ್ಚಾಗಿ ಪ್ರೀತಿಸಿದರೆ ಯೆಹೋವನ ಮನಸ್ಸಿಗೆ ತುಂಬ ನೋವಾಗುತ್ತದೆ. ಹಾಗಂಥ ಯೆಹೋವನ ಮೇಲಿನ ನಮ್ಮ ಪ್ರೀತಿ ಬರೀ ಒಂದು ಭಾವನೆಯಾಗಿಯೇ ಉಳಿಯಬಾರದು. ನಮ್ಮ “ಪೂರ್ಣ ಮನಸ್ಸು” ಮತ್ತು “ಪೂರ್ಣ ಬಲ”ದಿಂದ ಆತನನ್ನು ಪ್ರೀತಿಸಬೇಕೆಂದೂ ಯೆಹೋವನು ಬಯಸುತ್ತಾನೆ. ಅಂದರೆ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ನಾವೇನು ಯೋಚಿಸುತ್ತೇವೊ ನಾವೇನು ಮಾಡುತ್ತೇವೊ ಅದರ ಮೂಲಕ ತೋರಿಸಬೇಕು.—ಮಿಾಕ 6:8 ಓದಿ.

4 ಆದ್ದರಿಂದ ನಾವು ಯಾವುದೇ ಮಿತಿ ಅಥವಾ ಶರತ್ತು ಇಡದೆ ಯೆಹೋವನನ್ನು ಪ್ರೀತಿಸಬೇಕು. ನಮ್ಮ ಜೀವನದಲ್ಲಿ ಮೊದಲ ಸ್ಥಾನ ಯೆಹೋವನಿಗೆ ಕೊಟ್ಟಾಗ ಆತನನ್ನು ನಿಜವಾಗಲೂ ಪ್ರೀತಿಸುತ್ತೇವೆಂದು ತೋರಿಸುತ್ತೇವೆ. ನಾಲ್ಕು ವಿಧಗಳಲ್ಲಿ ಯೆಹೋವನು ತನ್ನ ಮಕ್ಕಳಿಗೆ ಹೇಗೆ ತನ್ನ ಮಹಾ ಪ್ರೀತಿ ತೋರಿಸಿದ್ದಾನೆಂದು ಹಿಂದಿನ ಲೇಖನದಲ್ಲಿ ಕಲಿತೆವು. ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಇನ್ನೂ ಜಾಸ್ತಿ ಮಾಡಿಕೊಳ್ಳುವುದು ಹೇಗೆ ಮತ್ತು ಆತನನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆಂದು ಈ ಲೇಖನದಲ್ಲಿ ಕಲಿಯೋಣ.

ಯೆಹೋವನಿಗೆ ನೀವು ಕೃತಜ್ಞರೆಂದು ತೋರಿಸಿ

5. ಯೆಹೋವನು ನಮಗಾಗಿ ಏನೆಲ್ಲ ಮಾಡಿದ್ದಾನೊ ಅದರ ಬಗ್ಗೆ ಯೋಚಿಸುವಾಗ ಏನು ಮಾಡಬೇಕೆಂದು ನಮಗನಿಸುತ್ತದೆ?

5 ನಿಮಗೆ ಯಾರಾದರೂ ಒಂದು ಉಡುಗೊರೆ ಕೊಟ್ಟರೆ ಅದಕ್ಕಾಗಿ ಕೃತಜ್ಞತೆ ತೋರಿಸುತ್ತೀರಿ. ನಿಮಗದು ತುಂಬ ಅಮೂಲ್ಯವಾಗಿರುವುದರಿಂದ ಅದನ್ನು ಬಳಸುತ್ತೀರಿ ಸಹ. ಯಾಕೋಬನು ಹೀಗಂದನು: “ಪ್ರತಿಯೊಂದು ಒಳ್ಳೆಯ ದಾನವೂ ಪ್ರತಿಯೊಂದು ಪರಿಪೂರ್ಣ ವರವೂ ಮೇಲಣಿಂದ ಬರುತ್ತದೆ; ಏಕೆಂದರೆ ಅದು ದಿವ್ಯ ಬೆಳಕುಗಳ ತಂದೆಯಾಗಿರುವಾತನಿಂದ ಇಳಿದುಬರುತ್ತದೆ ಮತ್ತು ಆತನಲ್ಲಿ ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ.” (ಯಾಕೋ. 1:17) ಜೀವಿಸಲು ಮತ್ತು ಸಂತೋಷವಾಗಿರಲು ಏನೆಲ್ಲ ಬೇಕೊ ಅದನ್ನೆಲ್ಲ ಯೆಹೋವನು ನಮಗೆ ಕೊಟ್ಟಿದ್ದಾನೆ. ಇದರಿಂದ ನಮ್ಮ ಮೇಲೆ ಆತನಿಗೆ ಎಷ್ಟು ಪ್ರೀತಿಯಿದೆ ಎಂದು ಗೊತ್ತಾಗುತ್ತದೆ. ನಾವೂ ಆತನನ್ನು ಪ್ರೀತಿಸುತ್ತೇವೆಂದು ತೋರಿಸಲು ಬಯಸುತ್ತೇವೆ. ನಿಮಗೂ ಹಾಗನಿಸುತ್ತದಾ?

6. ಯೆಹೋವನು ತಮ್ಮನ್ನು ಆಶೀರ್ವದಿಸುತ್ತಾ ಇರಬೇಕಾದರೆ ಇಸ್ರಾಯೇಲ್ಯರು ಏನು ಮಾಡಬೇಕಿತ್ತು?

6 ಇಸ್ರಾಯೇಲ್ಯರು ಯೆಹೋವನಿಂದ ಅನೇಕ ಒಳ್ಳೇ ವಿಷಯಗಳನ್ನು ಪಡೆದರು. ನಿಯಮಗಳನ್ನು ಕೊಟ್ಟು ಯೆಹೋವನು ಅವರನ್ನು ಮಾರ್ಗದರ್ಶಿಸಿದನು ಮತ್ತು ಬದುಕಲು ಅವರಿಗೆ ಏನೆಲ್ಲ ಬೇಕಿತ್ತೊ ಅದನ್ನೆಲ್ಲಾ ಕೊಟ್ಟು ನೂರಾರು ವರ್ಷಗಳ ವರೆಗೆ ನೋಡಿಕೊಂಡನು. (ಧರ್ಮೋ. 4:7, 8) ಆ ನಿಯಮಗಳಿಗೆ ವಿಧೇಯತೆ ತೋರಿಸುವ ಮೂಲಕ ಇಸ್ರಾಯೇಲ್ಯರು ಯೆಹೋವನಿಗೆ ಕೃತಜ್ಞತೆ ತೋರಿಸಬೇಕಿತ್ತು. ಉದಾಹರಣೆಗೆ ಅವರು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವಾಗ “ಬೆಳೆಯ ಪ್ರಥಮಫಲದಲ್ಲಿ ಉತ್ಕೃಷ್ಟವಾದದ್ದನ್ನು” ಕೊಡಬೇಕಿತ್ತು. (ವಿಮೋ. 23:19) ಆತನಿಗೆ ವಿಧೇಯತೆ ತೋರಿಸಿದರೆ ಮತ್ತು ತಮ್ಮಲ್ಲಿರುವುದರಲ್ಲೇ ಉತ್ತಮವಾದದ್ದನ್ನು ಕೊಟ್ಟರೆ ಆತನು ತಮ್ಮನ್ನು ಆಶೀರ್ವದಿಸುತ್ತಾ ಇರುವನೆಂದು ಇಸ್ರಾಯೇಲ್ಯರಿಗೆ ಗೊತ್ತಿತ್ತು.—ಧರ್ಮೋಪದೇಶಕಾಂಡ 8:7-11 ಓದಿ.

7. ನಮ್ಮ “ಆದಾಯ” ಅಂದರೆ ಅಮೂಲ್ಯ ವಸ್ತುಗಳನ್ನು ಕೊಡುವ ಮೂಲಕ ಯೆಹೋವನ ಮೇಲಿನ ಪ್ರೀತಿಯನ್ನು ಹೇಗೆ ತೋರಿಸಬಹುದು?

7 ನಾವೂ ನಮ್ಮ “ಆದಾಯ” ಅಂದರೆ ಅಮೂಲ್ಯ ವಸ್ತುಗಳನ್ನು ಕೊಡುವ ಮೂಲಕ ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸಬಹುದು. (ಜ್ಞಾನೋ. 3:9) ಇದನ್ನು ಹೇಗೆ ಮಾಡಬಹುದು? ನಮ್ಮ ಹತ್ತಿರ ಏನಿದೆಯೊ ಅದನ್ನು ಆತನ ಮಹಿಮೆಗಾಗಿ ಬಳಸುವ ಮೂಲಕ. ಉದಾಹರಣೆಗೆ ನಮ್ಮ ಸಭೆಯಲ್ಲೇ ಅಥವಾ ಲೋಕದಲ್ಲೆಲ್ಲ ನಡೆಯುವ ರಾಜ್ಯದ ಕೆಲಸವನ್ನು ಬೆಂಬಲಿಸಲು ನಾವು ಕಾಣಿಕೆಗಳನ್ನು ಕೊಡಬಹುದು. ನಮ್ಮ ಹತ್ತಿರ ಜಾಸ್ತಿ ಇರಲಿ ಕಡಿಮೆ ಇರಲಿ ಅದನ್ನು ಬಳಸುವ ಮೂಲಕ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಬಹುದು. (2 ಕೊರಿಂ. 8:12) ಆದರೆ ಆತನನ್ನು ಪ್ರೀತಿಸುತ್ತೇವೆಂದು ತೋರಿಸಲು ಬೇರೆ ವಿಧಗಳು ಸಹ ಇವೆ.

8, 9. (ಎ) ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವ ಇನ್ನೊಂದು ವಿಧ ಯಾವುದು? (ಬಿ) ಮೈಕ್‌ ಮತ್ತು ಅವನ ಕುಟುಂಬ ಏನು ಮಾಡಿತು?

8 ರಾಜ್ಯವನ್ನು ಮೊದಲು ಹುಡುಕುವಂತೆ ಅಂದರೆ ಅದಕ್ಕೆ ಪ್ರಥಮ ಸ್ಥಾನ ಕೊಡುವಂತೆ ಮತ್ತು ಊಟ, ಬಟ್ಟೆ ಬಗ್ಗೆ ಚಿಂತಿಸದಿರುವಂತೆ ಯೇಸು ನಮಗೆ ಕಲಿಸಿದ್ದಾನೆ. ನಮ್ಮ ತಂದೆ ನಮಗೇನು ಅಗತ್ಯವಿದೆಯೊ ಅದನ್ನು ಒದಗಿಸುತ್ತೇನೆಂದು ಮಾತುಕೊಟ್ಟಿದ್ದಾನೆ. (ಮತ್ತಾ. 6:31-33) ಆತನು ಕೊಟ್ಟ ಮಾತನ್ನು ಉಳಿಸಿಕೊಳ್ಳುವನೆಂದು ನಾವು ಭರವಸೆ ಇಡುತ್ತೇವೆ. ನಾವು ಯಾರನ್ನಾದರೂ ತುಂಬ ಪ್ರೀತಿಸಿದರೆ ಅವರ ಮೇಲೆ ಭರವಸೆ ಇಡುತ್ತೇವೆ. ಯೆಹೋವನ ಮೇಲೆ ಎಷ್ಟು ಹೆಚ್ಚು ಭರವಸೆ ಇಡುತ್ತೇವೊ ಅಷ್ಟು ಹೆಚ್ಚಾಗಿ ಆತನನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ. (ಕೀರ್ತ. 143:8) ಆದ್ದರಿಂದ ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನಾನು ಮಾಡುವ ಯೋಜನೆಗಳು, ನನ್ನ ಸಮಯ ಮತ್ತು ಶಕ್ತಿಯನ್ನು ನಾನು ಹೇಗೆ ಬಳಸುತ್ತೇನೊ ಅವೆಲ್ಲವು ನಾನು ಯೆಹೋವನ ಮೇಲೆ ಭರವಸೆ ಇಡುತ್ತೇನೆಂದು ತೋರಿಸುತ್ತದಾ? ನನ್ನ ಅಗತ್ಯಗಳಿಗಾಗಿ ಯೆಹೋವನ ಮೇಲೆ ಪ್ರತಿ ದಿನ ಆತುಕೊಳ್ಳುತ್ತೇನಾ?’

9 ಮೈಕ್‌ ಮತ್ತು ಅವನ ಕುಟುಂಬ ಯೆಹೋವನ ಮೇಲೆ ಭರವಸೆಯಿಟ್ಟರು. ಬೇರೆ ದೇಶಕ್ಕೆ ಹೋಗಿ ಸುವಾರ್ತೆ ಸಾರಬೇಕೆಂಬ ಆಸೆ ಮೈಕ್‍ಗೆ ಚಿಕ್ಕ ವಯಸ್ಸಿನಿಂದಲೇ ಇತ್ತು. ಮದುವೆಯಾಗಿ ಇಬ್ಬರು ಮಕ್ಕಳಾದರೂ ಅವನಿಗೆ ಆ ಆಸೆ ಇನ್ನೂ ಇತ್ತು. ಇತರ ಸಹೋದರ ಸಹೋದರಿಯರು ಅಗತ್ಯ ಹೆಚ್ಚಿದ್ದ ಸ್ಥಳಕ್ಕೆ ಹೋಗಿ ಸೇವೆ ಮಾಡುತ್ತಾ ಇರುವುದರ ಬಗ್ಗೆ ಮೈಕ್‌ ಮತ್ತು ಅವನ ಕುಟುಂಬ ಓದಿದಾಗ ತಾವೂ ತಮ್ಮ ಜೀವನ ಸರಳ ಮಾಡಿಕೊಂಡು ಹೆಚ್ಚಿನ ಸೇವೆ ಮಾಡಬೇಕು ಎಂದು ತೀರ್ಮಾನಿಸಿದರು. ಇದ್ದ ಮನೆಯನ್ನು ಮಾರಿ ಚಿಕ್ಕ ಮನೆಗೆ ಹೋದರು. ಮೈಕ್‌ ಶುಚಿ ಕೆಲಸಕ್ಕೆ ಸಂಬಂಧಪಟ್ಟ ವ್ಯಾಪಾರ ಮಾಡುತ್ತಿದ್ದನು. ತನ್ನ ಗಿರಾಕಿಗಳನ್ನು ಕಡಿಮೆಗೊಳಿಸಿ ಬೇರೆ ದೇಶದಲ್ಲಿದ್ದು ಇಂಟರ್‌ನೆಟ್‌ ಸಹಾಯದಿಂದ ಹೇಗೆ ಕೆಲಸ ಮಾಡಬಹುದೆಂದು ತಿಳಿದುಕೊಂಡನು. ಹೀಗೆಲ್ಲಾ ಮಾಡಿದ್ದರಿಂದ ಮೈಕ್‌ ಮತ್ತು ಅವನ ಕುಟುಂಬ ಬೇರೆ ದೇಶಕ್ಕೆ ಸ್ಥಳಾಂತರಿಸಲು ಸಾಧ್ಯವಾಯಿತು ಮತ್ತು ಅಲ್ಲಿ ಸುವಾರ್ತೆ ಸಾರುವುದರಲ್ಲಿ ತುಂಬ ಆನಂದ ಪಡೆದರು. “ಮತ್ತಾಯ 6:33ರಲ್ಲಿರುವ ಯೇಸುವಿನ ಮಾತು ಎಷ್ಟು ನಿಜ ಎಂದು ಅನುಭವದಿಂದ ತಿಳಿದೆವು” ಎಂದನು ಮೈಕ್‌.

ಯೆಹೋವನು ಏನು ಕಲಿಸುತ್ತಾನೊ ಅದರ ಬಗ್ಗೆ ಧ್ಯಾನಿಸಿ

10. ರಾಜ ದಾವೀದನಂತೆ ನಾವೂ ಯೆಹೋವನ ಬಗ್ಗೆ ಕಲಿತ ವಿಷಯಗಳನ್ನು ಧ್ಯಾನಿಸುವುದು ಒಳ್ಳೇದು ಏಕೆ?

10 ರಾಜ ದಾವೀದನು ಹೀಗೆ ಬರೆದನು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” ಅವನು ಕೂಡಿಸಿ ಹೀಗಂದನು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” ಯೆಹೋವನ ವಿವೇಕಭರಿತ ನಿಯಮಗಳ ಬಗ್ಗೆ, ಆತನ ಸುಂದರ ಸೃಷ್ಟಿಯ ಬಗ್ಗೆ ಧ್ಯಾನಿಸಿದಾಗ ದಾವೀದನು ಯೆಹೋವನಿಗೆ ಇನ್ನೂ ಹೆಚ್ಚು ಹತ್ತಿರವಾದನು. ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ದಾವೀದನು ಆಸೆಪಟ್ಟನು. “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ” ಅಂದರೆ ಮೆಚ್ಚಿಕೆಯಾಗಿರಲಿ ಎಂದು ದಾವೀದನು ಹೇಳಿದನು.—ಕೀರ್ತ. 19:1, 7, 14.

11. ಯೆಹೋವನ ಮೇಲಿನ ನಮ್ಮ ಪ್ರೀತಿಯನ್ನು ತೋರಿಸಲಿಕ್ಕಾಗಿ ಆತನು ಕೊಟ್ಟಿರುವ ಜ್ಞಾನವನ್ನು ಹೇಗೆ ಬಳಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

11 ಇಂದು ಯೆಹೋವನು ತನ್ನ ಬಗ್ಗೆ, ತನ್ನ ಉದ್ದೇಶದ ಬಗ್ಗೆ, ಸೃಷ್ಟಿಯ ಬಗ್ಗೆ ಮತ್ತು ತನ್ನ ವಾಕ್ಯದ ಬಗ್ಗೆ ನಮಗೆ ಬಹಳಷ್ಟನ್ನು ಕಲಿಸುತ್ತಿದ್ದಾನೆ. ಉನ್ನತ ಶಿಕ್ಷಣ ಪಡೆಯುವಂತೆ ಲೋಕ ಇಂದು ಉತ್ತೇಜಿಸುತ್ತದೆ. ಇದರಿಂದ ಹೆಚ್ಚಿನವರು ದೇವರ ಮೇಲಿನ ಪ್ರೀತಿಯನ್ನು ಕಳಕೊಳ್ಳುತ್ತಾರೆ. ಆದರೆ ಇದಕ್ಕೆ ಬದಲಾಗಿ ಯೆಹೋವನು ನಮಗೆ ಜ್ಞಾನವನ್ನು ಮಾತ್ರವಲ್ಲ ವಿವೇಕವನ್ನೂ ಪಡೆಯಲು ಸಹಾಯ ಮಾಡುತ್ತಾನೆ. ನಾವೇನು ಕಲಿಯುತ್ತೇವೊ ಅದನ್ನು ಸ್ವತಃ ನಮ್ಮ ಮತ್ತು ಇತರರ ಒಳಿತಿಗೆ ಬಳಸಬೇಕೆಂದು ಯೆಹೋವನು ಇಷ್ಟಪಡುತ್ತಾನೆ. (ಜ್ಞಾನೋ. 4:5-7) ಉದಾಹರಣೆಗೆ ಇತರರು ರಕ್ಷಣೆ ಪಡೆಯುವಂತೆ “ಸತ್ಯದ ನಿಷ್ಕೃಷ್ಟ ಜ್ಞಾನವನ್ನು” ನಾವು ಅವರಿಗೆ ಕೊಡಬೇಕೆಂದು ಯೆಹೋವನು ಬಯಸುತ್ತಾನೆ. (1 ತಿಮೊ. 2:4) ದೇವರ ರಾಜ್ಯದ ಬಗ್ಗೆ, ಅದು ಮಾನವಕುಲಕ್ಕಾಗಿ ಮಾಡಲಿರುವ ಸಂಗತಿಗಳ ಬಗ್ಗೆ ಆದಷ್ಟು ಹೆಚ್ಚು ಮಂದಿಗೆ ಕಲಿಸುವಾಗ ಯೆಹೋವ ಹಾಗೂ ಜನರ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ.—ಕೀರ್ತನೆ 66:16, 17 ಓದಿ.

12. ಯೆಹೋವನಿಂದ ಪಡೆದ ಒಂದು ಉಡುಗೊರೆಯ ಬಗ್ಗೆ ಒಬ್ಬ ಯುವ ಸಹೋದರಿ ಏನನ್ನುತ್ತಾಳೆ?

12 ಯೆಹೋವನು ತಮಗೆ ಏನೆಲ್ಲಾ ಕೊಟ್ಟಿದ್ದಾನೊ, ಕಲಿಸಿದ್ದಾನೊ ಅವುಗಳ ಬಗ್ಗೆ ಎಳೆಯರು, ಯುವ ಜನರು ಸಹ ಧ್ಯಾನಿಸಬಹುದು. ಶ್ಯಾನನ್‌ ಎಂಬವಳ ಉದಾಹರಣೆ ನೋಡೋಣ. ಅವಳ ತಂಗಿಗೆ 10 ಮತ್ತು ಅವಳಿಗೆ 11 ವರ್ಷವಿದ್ದಾಗ ಅವರು ಹಾಜರಾದ “ದೈವಭಕ್ತಿ” ಎಂಬ ಅಧಿವೇಶನದಲ್ಲಿ ತನಗಾದ ಅನುಭವ ಅವಳಿಗಿನ್ನೂ ಚೆನ್ನಾಗಿ ನೆನಪಿದೆ. ಆ ಅಧಿವೇಶನದ ಒಂದು ನಿರ್ದಿಷ್ಟ ಸಮಯದಲ್ಲಿ ಎಳೆಯರು, ಯುವ ಜನರು ಸಭಾಂಗಣದ ಒಂದು ವಿಶೇಷ ಭಾಗದಲ್ಲಿ ಕೂರಬೇಕೆಂದು ಹೇಳಲಾಗಿತ್ತು. ಶ್ಯಾನನ್‌ ಮತ್ತು ಅವಳ ತಂಗಿಯೂ ಅಲ್ಲಿ ಕೂತರು. ಅಲ್ಲಿ ಏನು ಮಾಡುತ್ತಾರೊ, ಕೇಳುತ್ತಾರೊ ಎಂದು ಶ್ಯಾನನ್‌ಗೆ ಮೊದಲು ಭಯವಾಯಿತು. ಆದರೆ ನಂತರ ಅಲ್ಲಿದ್ದ ಯುವ ಜನರಲ್ಲಿ ಪ್ರತಿಯೊಬ್ಬರಿಗೆ ಯುವಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕ ಕೊಡಲಾದಾಗ ಅವಳಿಗೆ ತುಂಬ ಆಶ್ಚರ್ಯವಾಯಿತು. ಈ ಸುಂದರ ಉಡುಗೊರೆಯನ್ನು ಪಡೆದಾಗ ಶ್ಯಾನನ್‌ಗೆ ಯೆಹೋವನ ಬಗ್ಗೆ ಹೇಗನಿಸಿತು? ಅವಳು ಹೀಗನ್ನುತ್ತಾಳೆ: “ಯೆಹೋವನು ನಿಜವಾಗಿಯೂ ಇದ್ದಾನೆ ಎಂದು ನನಗೆ ಪೂರ್ತಿ ಮನವರಿಕೆ ಆಯಿತು. ವೈಯಕ್ತಿಕವಾಗಿ ನನ್ನನ್ನು ತುಂಬ ತುಂಬ ಪ್ರೀತಿಸುತ್ತಾನೆಂದು ನನಗೆ ಗೊತ್ತಾಯಿತು. ನಮ್ಮ ಮಹಾ ದೇವರಾದ ಯೆಹೋವನು ಉಚಿತವಾಗಿ ಇಂಥ ಸುಂದರ ಪರಿಪೂರ್ಣ ಉಡುಗೊರೆಗಳನ್ನು ಕೊಟ್ಟದ್ದಕ್ಕೆ ನಮಗೆ ತುಂಬ ಸಂತೋಷವಾಯಿತು!”

ಯೆಹೋವನಿಂದ ಬರುವ ಶಿಸ್ತನ್ನು ಸ್ವೀಕರಿಸಿ

13, 14. ಯೆಹೋವನು ನಮಗೆ ಶಿಸ್ತು ಕೊಡುವಾಗ ಹೇಗೆ ಪ್ರತಿಕ್ರಿಯಿಸಬೇಕು? ಏಕೆ?

13 “ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ” ಎಂದು ಬೈಬಲ್‌ ನಮಗೆ ನೆನಪಿಸುತ್ತದೆ. (ಜ್ಞಾನೋ. 3:12) ಯೆಹೋವನು ಕೊಡುವ ಶಿಸ್ತನ್ನು ಒಪ್ಪಿಕೊಂಡು ಆತನು ನಮ್ಮನ್ನು ತರಬೇತುಗೊಳಿಸಲು ನಾವು ಬಿಟ್ಟುಕೊಟ್ಟರೆ ಸರಿಯಾದದ್ದನ್ನೇ ಮಾಡಲು ಕಲಿಯುತ್ತೇವೆ ಮತ್ತು ನಮಗೆ ಸಮಾಧಾನ ಇರುತ್ತದೆ. “ಯಾವ ಶಿಸ್ತು ಸಹ ತತ್ಕಾಲಕ್ಕೆ ಆನಂದಕರವಾಗಿ ತೋರದೆ ದುಃಖಕರವಾಗಿಯೇ ತೋರುತ್ತದೆ” ಎನ್ನುವ ಮಾತು ನಿಜ. (ಇಬ್ರಿ. 12:11) ಹಾಗಾಗಿ ಯೆಹೋವನು ನಮಗೆ ಶಿಸ್ತು ಕೊಡುವಾಗ ಹೇಗೆ ಪ್ರತಿಕ್ರಿಯಿಸಬೇಕು? ಆತನು ಕೊಡುವ ಬುದ್ಧಿವಾದವನ್ನು ಯಾವತ್ತೂ ತಳ್ಳಿಹಾಕಬಾರದು. ಅಥವಾ ನಮಗೆ ಕೊಡಲಾದ ಬುದ್ಧಿವಾದ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಮನಸ್ಸಲ್ಲೇ ಸಿಟ್ಟು ಇಟ್ಟುಕೊಳ್ಳಬಾರದು. ನಾವು ಯೆಹೋವನನ್ನು ಪ್ರೀತಿಸುತ್ತೇವೆ. ಹಾಗಾಗಿ ಆತನ ಮಾತನ್ನು ಕೇಳುತ್ತೇವೆ, ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ.

14 ಮಲಾಕಿಯನ ಸಮಯದಲ್ಲಿ ತುಂಬ ಮಂದಿ ಯೆಹೂದ್ಯರು ಯೆಹೋವನ ಮಾತು ಕೇಳಲಿಲ್ಲ. ತಾವು ಅರ್ಪಿಸುತ್ತಿದ್ದ ಯಜ್ಞಗಳನ್ನು ಯೆಹೋವನು ಮೆಚ್ಚಲಿಲ್ಲವಾದರೂ ಅವರು ಅದರ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ. ಆದ್ದರಿಂದ ಯೆಹೋವನು ಅವರಿಗೆ ಖಡಕ್ಕಾಗಿ ಬುದ್ಧಿವಾದ ಕೊಟ್ಟನು. (ಮಲಾಕಿಯ 1:12, 13 ಓದಿ.) ಒಂದು ಸಲ ಅಲ್ಲ, ಅನೇಕ ಸಲ ಯೆಹೋವನು ಬುದ್ಧಿವಾದ ಕೊಟ್ಟರೂ ಈ ಜನ ಬಗ್ಗಲಿಲ್ಲ. ಆದ್ದರಿಂದ ಯೆಹೋವನು ಹೀಗಂದನು: “ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳನ್ನೂ ಶಪಿಸುವೆನು.” (ಮಲಾ. 2:1, 2) ಇದರಿಂದ ಸ್ಪಷ್ಟವಾಗುವುದೇನೆಂದರೆ ಯೆಹೋವನು ಕೊಡುವ ಬುದ್ಧಿವಾದವನ್ನು ಪದೇಪದೇ ತಳ್ಳಿಹಾಕುತ್ತಾ ಇದ್ದರೆ ಅಥವಾ ಅದೇನು ಅಷ್ಟು ಪ್ರಾಮುಖ್ಯವಲ್ಲ ಎಂದು ನೆನಸಿದರೆ ಕೊನೆಗೆ ಯೆಹೋವನ ಜೊತೆಗಿನ ನಮ್ಮ ಸ್ನೇಹವನ್ನೇ ನಾವು ಕಳಕೊಳ್ಳುತ್ತೇವೆ.

ಲೋಕದ ಜನ ಏನನ್ನು ಇಷ್ಟಪಡುತ್ತಾರೊ, ಮಾಡುತ್ತಾರೊ ಅದನ್ನಲ್ಲ ಬದಲಿಗೆ ಯೆಹೋವನು ಏನು ಇಷ್ಟಪಡುತ್ತಾನೆಂದು ಯೋಚಿಸಿ (ಪ್ಯಾರ 15 ನೋಡಿ)

15. ನಾವು ಯಾವ ರೀತಿ ಯೋಚಿಸಬಾರದು?

15 ಸ್ವಾರ್ಥಿಯಾಗಿರಲು, ಹೆಮ್ಮೆಯಿಂದ ಮೆರೆಯಲು ಸೈತಾನನ ಲೋಕ ಜನರನ್ನು ಉತ್ತೇಜಿಸುತ್ತದೆ. ತಮ್ಮನ್ನು ಸರಿಪಡಿಸಿದರೆ, ತಾವೇನು ಮಾಡಬೇಕೆಂದು ಯಾರಾದರೂ ಹೇಳಿದರೆ ಅನೇಕರಿಗೆ ಮೈಯೆಲ್ಲಾ ಉರಿಯುತ್ತದೆ. ನಾವು ಹಾಗೆ ಇರಬಾರದು. ‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡಬೇಡಿ’ ಎಂದು ಬೈಬಲ್‌ ನಮಗೆ ಹೇಳುತ್ತದೆ. ಬದಲಾಗಿ ಯೆಹೋವನು ನಮ್ಮಿಂದ ಏನನ್ನು ಬಯಸುತ್ತಾನೆಂದು ಅರ್ಥಮಾಡಿಕೊಂಡು ಆತನಿಗೆ ಮೆಚ್ಚಿಕೆಯಾದದ್ದನ್ನು ಮಾಡಬೇಕು. (ರೋಮ. 12:2) ಸರಿಯಾದ ಸಮಯಕ್ಕೆ ಬುದ್ಧಿವಾದ ಕೊಡಲು ಯೆಹೋವನು ತನ್ನ ಸಂಘಟನೆಯನ್ನು ಬಳಸುತ್ತಾನೆ. ಉದಾಹರಣೆಗೆ ವಿರುದ್ಧ ಲಿಂಗದವರ ಜೊತೆ ಹೇಗಿರಬೇಕು, ಸ್ನೇಹಿತರನ್ನು ಹೇಗೆ ಆಯ್ಕೆ ಮಾಡಬೇಕು, ಮನರಂಜನೆಯ ಬಗ್ಗೆ ಹೇಗೆ ನಿರ್ಣಯಗಳನ್ನು ಮಾಡಬೇಕೆಂಬುದರ ಕುರಿತು ಸಂಘಟನೆ ನಮಗೆ ನೆನಪು ಹುಟ್ಟಿಸುತ್ತದೆ. ಯೆಹೋವನು ಕೊಡುವ ಬುದ್ಧಿವಾದವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಆತನನ್ನು ಮೆಚ್ಚಿಸುವಂಥ ಬದಲಾವಣೆಗಳನ್ನು ಮಾಡಬೇಕು. ಹೀಗೆ ಆತನ ಮಾರ್ಗದರ್ಶನಕ್ಕೆ ನಾವು ಕೃತಜ್ಞರು ಮತ್ತು ನಾವಾತನನ್ನು ನಿಜವಾಗಲೂ ಪ್ರೀತಿಸುತ್ತೇವೆಂದು ತೋರಿಸುತ್ತೇವೆ.—ಯೋಹಾ. 14:31; ರೋಮ. 6:17.

ಸಹಾಯ ಮತ್ತು ಸಂರಕ್ಷಣೆಗಾಗಿ ಯೆಹೋವನ ಮೇಲೆ ಆತುಕೊಳ್ಳಿ

16, 17. (ಎ) ನಾವು ನಿರ್ಣಯಗಳನ್ನು ಮಾಡುವ ಮುಂಚೆ ಅದರ ಬಗ್ಗೆ ಯೆಹೋವನ ಅಭಿಪ್ರಾಯವೇನು ಎಂದು ತಿಳಿಯಬೇಕು ಏಕೆ? (ಬಿ) ಯೆಹೋವನ ಮೇಲೆ ಭರವಸೆಯಿಡುವ ಬದಲು ಇಸ್ರಾಯೇಲ್ಯರು ಏನು ಮಾಡಿದರು?

16 ಸಹಾಯ ಮತ್ತು ಸಂರಕ್ಷಣೆ ಬೇಕಾದಾಗ ಚಿಕ್ಕ ಮಕ್ಕಳು ಅಪ್ಪಅಮ್ಮನ ಬಳಿ ಓಡಿ ಹೋಗುತ್ತಾರೆ. ದೊಡ್ಡವರು ಸಹ ಅಪ್ಪಅಮ್ಮನ ಸಹಾಯ ಕೇಳುತ್ತಾರೆ. ಸ್ವಂತ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ ಇರುವುದಾದರೂ ಅಪ್ಪಅಮ್ಮ ಒಳ್ಳೇ ಸಲಹೆ ಕೊಡುತ್ತಾರೆಂದು ಅವರು ಗ್ರಹಿಸುತ್ತಾರೆ. ನಮ್ಮ ತಂದೆಯಾದ ಯೆಹೋವನು ನಾವೇ ತೀರ್ಮಾನ ಮಾಡುವಂತೆ ಬಿಡುತ್ತಾನೆ. ಆದರೆ ಆತನ ಮೇಲೆ ನಿಜವಾಗಲೂ ಭರವಸೆ, ಪ್ರೀತಿ ಇದ್ದರೆ ಆತನ ಸಹಾಯಕ್ಕಾಗಿ ಕೇಳಿಕೊಳ್ಳುತ್ತೇವೆ. ಯಾವುದೇ ನಿರ್ಣಯ ಮಾಡುವ ಮುಂಚೆ ಆ ವಿಷಯದ ಬಗ್ಗೆ ಯೆಹೋವನ ಅಭಿಪ್ರಾಯವೇನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾದದ್ದೆಲ್ಲವನ್ನು ಮಾಡುತ್ತೇವೆ. ಯೆಹೋವನ ಮೇಲೆ ಆತುಕೊಂಡರೆ ಸರಿಯಾದದ್ದನ್ನು ಮಾಡಲು ಆತನು ನಮಗೆ ಪವಿತ್ರಾತ್ಮ ಕೊಟ್ಟು ಸಹಾಯ ಮಾಡುತ್ತಾನೆ.—ಫಿಲಿ. 2:13.

17 ಸಮುವೇಲನ ಸಮಯದಲ್ಲಿ ಇಸ್ರಾಯೇಲ್ಯರು ಫಿಲಿಷ್ಟಿಯರ ವಿರುದ್ಧ ಒಂದು ಯುದ್ಧದಲ್ಲಿ ಸೋತರು. ಮುಂದೇನು ಮಾಡಬೇಕೆಂದು ಯೆಹೋವನನ್ನು ಕೇಳುವ ಬದಲು ಅವರು “ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಗೆ ನಮ್ಮನ್ನು ತಪ್ಪಿಸಲಿ” ಎಂದು ಹೇಳಿಕೊಂಡರು. ಆ ನಿರ್ಣಯದ ಪರಿಣಾಮ? “ಮಹಾಸಂಹಾರವಾಯಿತು; ಇಸ್ರಾಯೇಲ್ಯರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷವು ಶತ್ರುವಶವಾಯಿತು.” (1 ಸಮು. 4:2-4, 10, 11) ಮಂಜೂಷವನ್ನು ತೆಗೆದುಕೊಂಡು ಹೋದರೆ ಸಾಕು ಯೆಹೋವನು ತಮಗೆ ಸಹಾಯ ಮಾಡುವನು, ಸಂರಕ್ಷಿಸುವನೆಂದು ಇಸ್ರಾಯೇಲ್ಯರು ನೆನಸಿದರು. ಅವರು ಯೆಹೋವನ ಸಹಾಯ ಕೇಳಲೂ ಇಲ್ಲ, ಕಡಿಮೆಪಕ್ಷ ಆತನ ಅಭಿಪ್ರಾಯ ಏನೆಂದು ತಿಳಿಯುವ ಪ್ರಯತ್ನ ಕೂಡ ಮಾಡಲಿಲ್ಲ. ತಮಗೆ ಯಾವುದು ಸರಿಯೆನಿಸಿತೊ ಅದನ್ನೇ ಮಾಡಿದರು. ನಂತರ ‘ಮಾಡಿದ್ದುಣ್ಣೊ ಮಾರಾಯ’ ಎಂಬಂತೆ ನಷ್ಟ ಅನುಭವಿಸಿದರು.—ಜ್ಞಾನೋಕ್ತಿ 14:12 ಓದಿ.

18. ಯೆಹೋವನ ಮೇಲೆ ಭರವಸೆಯಿಡುವುದರ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

18 ಯೆಹೋವನನ್ನು ತುಂಬ ಪ್ರೀತಿಸಿದ ಮತ್ತು ಆತನ ಮೇಲೆ ಆತುಕೊಂಡ ಕೀರ್ತನೆಗಾರನೊಬ್ಬ ಹೀಗೆ ಬರೆದನು: “ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. . . . ನನ್ನ ಪ್ರಾಣವು ಕುಗ್ಗಿಹೋಗಿದೆ; ಆದದರಿಂದ . . . ನಿನ್ನನ್ನು ಸ್ಮರಿಸುತ್ತೇನೆ.” (ಕೀರ್ತ. 42:5, 6) ನಿಮಗೂ ಹೀಗನಿಸುತ್ತದಾ? ಯೆಹೋವನಿಗೆ ಹತ್ತಿರವಾಗಿದ್ದೀರಿ ಎಂದು ನಿಮಗನಿಸುತ್ತದಾ? ಆತನ ಮೇಲೆ ನಿಮಗೆ ಭರವಸೆ ಇದೆಯಾ? ನಿಮ್ಮ ಉತ್ತರ ಹೌದು ಎಂದಾಗಿದ್ದರೂ ಆತನ ಮೇಲೆ ಇನ್ನೂ ಹೆಚ್ಚು ಭರವಸೆಯಿಡಲು ನೀವು ಕಲಿಯಬಹುದು. ಬೈಬಲ್‌ ಹೀಗನ್ನುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋ. 3:5, 6.

19. ನೀವು ಯೆಹೋವನನ್ನು ಪ್ರೀತಿಸುತ್ತೀರೆಂದು ಆತನಿಗೆ ಹೇಗೆ ತೋರಿಸುವಿರಿ?

19 ಯೆಹೋವನು ನಮ್ಮನ್ನು ಮೊದಲು ಪ್ರೀತಿಸುವ ಮೂಲಕ ನಾವು ಆತನನ್ನು ಪ್ರೀತಿಸುವುದು ಹೇಗೆ ಎಂದು ಕಲಿಸಿದ್ದಾನೆ. ಆತನು ನಮಗಾಗಿ ಏನೆಲ್ಲಾ ಮಾಡಿದ್ದಾನೆ, ನಮ್ಮ ಮೇಲೆ ಆತನಿಗೆ ಎಷ್ಟು ಪ್ರೀತಿಯಿದೆ ಎಂಬುದರ ಬಗ್ಗೆ ನಾವು ಯಾವಾಗಲೂ ಯೋಚಿಸೋಣ. ನಾವು ಆತನನ್ನು ನಮ್ಮ ಪೂರ್ಣ ಹೃದಯ, ಮನಸ್ಸು, ಬುದ್ಧಿ ಮತ್ತು ಬಲದಿಂದ ಪ್ರೀತಿಸುತ್ತೇವೆಂದು ತೋರಿಸೋಣ.—ಮಾರ್ಕ 12:30.