ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಿ

ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಿ

“ಈ ಸಂಗತಿಗಳ ಕುರಿತು ಪರ್ಯಾಲೋಚಿಸು; ಅವುಗಳಲ್ಲಿ ಮಗ್ನನಾಗಿರು. ಹೀಗಾದರೆ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗುವುದು.”—1 ತಿಮೊ. 4:15.

ಗೀತೆಗಳು: 57, 52

1, 2. ಮಾನವರು ಪ್ರಾಣಿಗಳಿಗಿಂತ ಹೇಗೆ ಭಿನ್ನರಾಗಿದ್ದಾರೆ?

ಮಾನವನ ಮಿದುಳು ಅಪೂರ್ವ. ಉದಾಹರಣೆಗೆ ಮನುಷ್ಯರಿಗೆ ಭಾಷೆ ಕಲಿಯುವ ಸಾಮರ್ಥ್ಯವಿದೆ. ಭಾಷೆ ಇರುವುದರಿಂದ ನಾವು ಓದಲು, ಬರೆಯಲು, ಮಾತಾಡಲು, ಕೇಳಿದ್ದನ್ನು ಅರ್ಥಮಾಡಿಕೊಳ್ಳಲು ಆಗುತ್ತದೆ. ಇದರಿಂದ ನಮಗೆ ಪ್ರಾರ್ಥನೆ ಮಾಡಲು ಮತ್ತು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಲೂ ಸಾಧ್ಯವಾಗುತ್ತದೆ. ಇದೆಲ್ಲವನ್ನು ಮಾಡುವ ಸಾಮರ್ಥ್ಯ ಇರುವುದರಿಂದ ನಾವು ಪ್ರಾಣಿಗಳಿಗಿಂತ ಭಿನ್ನರಾಗಿದ್ದೇವೆ. ನಮ್ಮ ಮಿದುಳು ಈ ಎಲ್ಲಾ ವಿಸ್ಮಯಕಾರಿ ಕೆಲಸಗಳನ್ನು ಹೇಗೆ ಮಾಡುತ್ತದೆಂದು ವಿಜ್ಞಾನಿಗಳಿಗೆ ಈಗಲೂ ಪೂರ್ತಿ ಅರ್ಥವಾಗದೇ ತಲೆ ಕೆರೆದುಕೊಳ್ಳುತ್ತಾ ಇದ್ದಾರೆ.

2 ಭಾಷೆಯನ್ನಾಡುವ ಸಾಮರ್ಥ್ಯ ಯೆಹೋವನು ನಮಗೆ ಕೊಟ್ಟಿರುವ ಉಡುಗೊರೆ. (ಕೀರ್ತ. 139:14; ಪ್ರಕ. 4:11) ನಮ್ಮನ್ನು ಪ್ರಾಣಿಗಳಿಗಿಂತ ಭಿನ್ನರನ್ನಾಗಿ ಮಾಡುವ ಇನ್ನೊಂದು ಉಡುಗೊರೆಯನ್ನೂ ಕೊಟ್ಟಿದ್ದಾನೆ. ಅದೇನೆಂದರೆ ಮಾನವರನ್ನು ‘ತನ್ನ ಸ್ವರೂಪದಲ್ಲಿ’ ಸೃಷ್ಟಿಸಿದ್ದಾನೆ. ಹಾಗಾಗಿ ಇಚ್ಛಾಸ್ವಾತಂತ್ರ್ಯ, ಅಂದರೆ ನಮ್ಮ ನಿರ್ಣಯಗಳನ್ನು ನಾವೇ ಮಾಡುವ ಸ್ವಾತಂತ್ರ್ಯ ನಮಗಿದೆ. ಭಾಷೆಯನ್ನು ಬಳಸಿ ಯೆಹೋವನ ಸೇವೆ ಹಾಗೂ ಆತನನ್ನು ಸ್ತುತಿಸುವ ಆಯ್ಕೆ ಮಾಡಬಲ್ಲೆವು.—ಆದಿ. 1:27.

3. ನಮ್ಮನ್ನು ವಿವೇಕಿಗಳನ್ನಾಗಿ ಮಾಡಲು ಯೆಹೋವನು ಏನು ಕೊಟ್ಟಿದ್ದಾನೆ?

3 ಯೆಹೋವನು ನಮಗೆ ಬೈಬಲನ್ನು ಕೊಡುವ ಮೂಲಕ ಆತನ ಸೇವೆ ಮಾಡುವುದು ಹೇಗೆ, ಆತನನ್ನು ಸ್ತುತಿಸುವುದು ಹೇಗೆಂದು ತೋರಿಸಿದ್ದಾನೆ. ಇಡೀ ಬೈಬಲ್‌ ಅಥವಾ ಅದರ ಭಾಗಗಳು 2,800 ಭಾಷೆಗಳಲ್ಲಿ ಲಭ್ಯವಿದೆ! ಬೈಬಲಿನಲ್ಲಿ ಏನಿದೆಯೊ ಅದರ ಕುರಿತು ಧ್ಯಾನಿಸುವಾಗ ದೇವರು ಆಲೋಚಿಸುವ ರೀತಿಯಲ್ಲೇ ನಾವೂ ಆಲೋಚಿಸಲು ಆರಂಭಿಸುತ್ತೇವೆ. (ಕೀರ್ತ. 40:5; 92:5; 139:17) ಯೆಹೋವನ ಆಲೋಚನೆಗಳು ನಮ್ಮನ್ನು ವಿವೇಕಿಗಳನ್ನಾಗಿ ಮಾಡುತ್ತವೆ, ನಿತ್ಯಜೀವಕ್ಕೂ ನಡೆಸುತ್ತವೆ.—2 ತಿಮೊಥೆಯ 3:14-17 ಓದಿ.

4. (ಎ) ಧ್ಯಾನಿಸುವುದು ಎಂದರೇನು? (ಬಿ) ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

4 ಧ್ಯಾನಿಸುವುದು ಎಂದರೆ ಒಂದು ವಿಷಯದ ಮೇಲೆ ಪೂರ್ತಿ ಗಮನ ಇಟ್ಟು ಅದರ ಬಗ್ಗೆ ಆಳವಾಗಿ, ಜಾಗ್ರತೆಯಿಂದ ಯೋಚಿಸುವುದೇ. (ಕೀರ್ತ. 77:12; ಜ್ಞಾನೋ. 24:1, 2) ಯೆಹೋವ ಮತ್ತು ಯೇಸುವಿನ ಬಗ್ಗೆ ಧ್ಯಾನಿಸುವುದರಿಂದ ನಮಗೆ ಅತಿ ಹೆಚ್ಚು ಪ್ರಯೋಜನ ಸಿಗುತ್ತದೆ. (ಯೋಹಾ. 17:3) ಈ ಲೇಖನದಲ್ಲಿ ಮುಂದಿನ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲಿದ್ದೇವೆ: ಧ್ಯಾನಿಸಲು ಸುಲಭವಾಗುವಂಥ ರೀತಿಯಲ್ಲಿ ಹೇಗೆ ಓದಬಹುದು? ಯಾವುದರ ಬಗ್ಗೆ ಧ್ಯಾನಿಸಬಹುದು? ಆಗಿಂದಾಗ್ಗೆ ಧ್ಯಾನಿಸಲು ಮತ್ತು ಅದರಿಂದ ಸಂತೋಷ ಪಡೆಯಲು ನಮಗೆ ಯಾವುದು ಸಹಾಯಮಾಡುತ್ತದೆ?

ಅಧ್ಯಯನದಿಂದ ನಿಮಗೆ ಪ್ರಯೋಜನ ಆಗುವಂತೆ ನೋಡಿಕೊಳ್ಳಿ

5, 6. ನೀವೇನು ಓದುತ್ತೀರೊ ಅದನ್ನು ನೆನಪಿಡಲು, ಹೆಚ್ಚು ಅರ್ಥಮಾಡಿಕೊಳ್ಳಲು ಯಾವುದು ಸಹಾಯಮಾಡಬಲ್ಲದು?

5 ಕೆಲವೊಂದು ಕೆಲಸಗಳನ್ನು ಯೋಚಿಸದೇ ಮಾಡಲು ಆಗುತ್ತದೆ. ಗಮನಿಸಿದ್ದೀರಾ? ಉಸಿರಾಡುತ್ತೇವೆ, ನಡೆಯುತ್ತೇವೆ, ಊಟ ಮಾಡುತ್ತೇವೆ ಇತ್ಯಾದಿ. ಆದರೆ ಓದುವಾಗಲೂ ಒಮ್ಮೊಮ್ಮೆ ಹೀಗೆ ಮಾಡಿಬಿಡುತ್ತೇವೆ. ಅಂದರೆ ಓದುತ್ತೇವೆ, ಆದರೆ ಮನಸ್ಸುಕೊಟ್ಟು ಓದುವುದಿಲ್ಲ. ಓದುತ್ತಾ ಇರುವಾಗ ಬಹುಶಃ ಮನಸ್ಸಲ್ಲಿ ಬೇರೆ ವಿಷಯಗಳು ಓಡಾಡುತ್ತಾ ಇರಬಹುದು. ಹೀಗಾಗದಂತೆ ನೀವೇನು ಮಾಡಬಹುದು? ನೀವೇನು ಓದುತ್ತಿದ್ದೀರಾ ಅದಕ್ಕೆ ಪೂರ್ತಿ ಗಮನ ಕೊಟ್ಟು, ಅದರ ಅರ್ಥವೇನು ಎಂಬುದರ ಬಗ್ಗೆ ಯೋಚಿಸುವುದು ತುಂಬ ಮುಖ್ಯ. ಆಮೇಲೆ, ಒಂದು ಪ್ಯಾರ ಓದಿದ ನಂತರ ಇಲ್ಲವೇ ಒಂದು ಉಪಶೀರ್ಷಿಕೆ ಅಡಿಯಿರುವ ಎಲ್ಲ ಪ್ಯಾರಗಳನ್ನು ಓದಿ ಮುಗಿಸಿದ ಮೇಲೆ ಸ್ವಲ್ಪ ನಿಲ್ಲಿಸಿ, ಈಗತಾನೇ ಓದಿದ ವಿಷಯದ ಬಗ್ಗೆ ಧ್ಯಾನಿಸಿ. ನೀವು ಕಲಿತ ವಿಷಯದ ಬಗ್ಗೆ ಯೋಚಿಸಿ. ಅದು ನಿಮಗೆ ನಿಜವಾಗಿ ಅರ್ಥವಾಗಿದೆಯೆಂದು ಖಚಿತಮಾಡಿಕೊಳ್ಳಿ.

6 ನಾವು ಬರೀ ಮನಸ್ಸಲ್ಲೇ ಓದದೇ ಬಾಯಿಬಿಟ್ಟು ಓದಿದರೆ ನೆನಪಿಡಲು ಸಹಾಯವಾಗುತ್ತದೆಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನಮ್ಮ ಸೃಷ್ಟಿಕರ್ತನಿಗೂ ಇದು ಗೊತ್ತು. ಆದ್ದರಿಂದಲೇ ಆತನು ಯೆಹೋಶುವನಿಗೆ ಧರ್ಮಶಾಸ್ತ್ರವನ್ನು “ಧ್ಯಾನಿಸು”ವಂತೆ ಹೇಳಿದನು. “ಧ್ಯಾನಿಸು” ಎಂಬ ಪದವನ್ನು ಹೀಬ್ರುವಿನಿಂದ ಭಾಷಾಂತರಿಸಿದರೆ “ತಗ್ಗಿದ ದನಿ” ಎಂಬ ಅರ್ಥವೂ ಬರುತ್ತದೆ. (ಯೆಹೋಶುವ 1:8 ಓದಿ.) ಬೈಬಲನ್ನು ತಗ್ಗಿದ ದನಿಯಲ್ಲಿ ಓದುವಾಗ ಹೆಚ್ಚು ಗಮನಕೊಡಲು ಮತ್ತು ನೆನಪಿಡಲು ಸಾಧ್ಯವಾಗುತ್ತದೆ.

7. ಬೈಬಲಿನ ಬಗ್ಗೆ ಧ್ಯಾನಿಸಲು ಅತ್ಯುತ್ತಮ ಸಮಯ ಯಾವುದು? (ಲೇಖನದ ಆರಂಭದ ಚಿತ್ರ ನೋಡಿ.)

7 ನಾವು ಅಧ್ಯಯನ ಮಾಡುವ ವಿಷಯಕ್ಕೆ ಪೂರ್ತಿ ಗಮನಕೊಡಲು, ಧ್ಯಾನಿಸಲು ತುಂಬ ಪ್ರಯತ್ನ ಹಾಕಬೇಕಾಗುತ್ತದೆ. ಆದ್ದರಿಂದಲೇ ನಿಮಗೆ ಸುಸ್ತಾಗಿರದ ಸಮಯದಲ್ಲಿ, ಸದ್ದುಗದ್ದಲ ಹಾಗೂ ಯಾವುದೇ ಅಪಕರ್ಷಣೆ ಇಲ್ಲದ ಜಾಗದಲ್ಲಿ ಧ್ಯಾನಿಸುವುದು ಉತ್ತಮ. ಕೀರ್ತನೆಗಾರ ದಾವೀದನು, ರಾತ್ರಿ ಹಾಸಿಗೆಯಲ್ಲಿ ಎಚ್ಚರವಿದ್ದಾಗ ಧ್ಯಾನಿಸುತ್ತಿದ್ದನು. (ಕೀರ್ತ. 63:6) ಪರಿಪೂರ್ಣ ಮನುಷ್ಯನಾದ ಯೇಸು ಸಹ ಧ್ಯಾನಿಸಲು ಮತ್ತು ಪ್ರಾರ್ಥಿಸಲು ಪ್ರಶಾಂತ ಸ್ಥಳಗಳನ್ನು ಆರಿಸಿಕೊಂಡನು.—ಲೂಕ 6:12.

ಧ್ಯಾನಿಸಲಿಕ್ಕಾಗಿ ಉತ್ತಮ ವಿಷಯಗಳು

8. (ಎ) ನಾವು ಯಾವುದರ ಬಗ್ಗೆ ಧ್ಯಾನಿಸಬಹುದು? (ಬಿ) ನಾವು ಯೆಹೋವನ ಬಗ್ಗೆ ಇತರರೊಟ್ಟಿಗೆ ಮಾತಾಡುವಾಗ ಆತನಿಗೆ ಹೇಗನಿಸುತ್ತದೆ?

8 ಧ್ಯಾನಿಸಲಿಕ್ಕಾಗಿ ಬೈಬಲಿನಲ್ಲಿರುವ ವಿಷಯಗಳ ಜೊತೆಗೆ ಇನ್ನೂ ಇತರ ವಿಷಯಗಳಿವೆ. ಉದಾಹರಣೆಗೆ, ಯೆಹೋವನ ಅದ್ಭುತಕರ ಸೃಷ್ಟಿಗಳಲ್ಲಿ ಒಂದನ್ನು ನೋಡುವಾಗ ಸ್ವಲ್ಪ ನಿಂತು, ನಿಮ್ಮನ್ನೇ ಕೇಳಿಕೊಳ್ಳಿ: ‘ಇದು ನನಗೆ ಯೆಹೋವನ ಬಗ್ಗೆ ಏನು ಕಲಿಸುತ್ತದೆ?’ ಇಂಥ ಯೋಚನೆಗಳು ಯೆಹೋವನಿಗೆ ಪ್ರಾರ್ಥನೆಯಲ್ಲಿ ಧನ್ಯವಾದ ಹೇಳುವಂತೆ ಖಂಡಿತವಾಗಿಯೂ ನಿಮ್ಮನ್ನು ಪ್ರೇರಿಸುತ್ತವೆ. ನಿಮ್ಮೊಟ್ಟಿಗೆ ಇತರರು ಇದ್ದರೆ ನಿಮ್ಮ ಭಾವನೆಗಳನ್ನು ಅವರೊಟ್ಟಿಗೆ ಹಂಚಿಕೊಳ್ಳಿ. (ಕೀರ್ತ. 104:24; ಅ. ಕಾ. 14:17) ನಾವು ಯೆಹೋವನ ಬಗ್ಗೆ ಧ್ಯಾನಿಸುವಾಗ, ಪ್ರಾರ್ಥಿಸುವಾಗ, ಆತನ ಬಗ್ಗೆ ಇತರರೊಟ್ಟಿಗೆ ಮಾತಾಡುವಾಗ ಆತನು ಗಮನ ಕೊಡುತ್ತಾನೆ ಮತ್ತು ಸಂತೋಷಪಡುತ್ತಾನೆ. “ಯೆಹೋವನು . . . ತನ್ನ ನಾಮಸ್ಮರಣೆಮಾಡುವವರ [“ಹೆಸರಿನ ಬಗ್ಗೆ ಧ್ಯಾನಿಸುವವರ,” ನೂತನ ಲೋಕ ಭಾಷಾಂತರ] ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.”—ಮಲಾ. 3:16.

ನಿಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬೇಕೆಂದು ಧ್ಯಾನಿಸುತ್ತೀರಾ? (ಪ್ಯಾರ 9 ನೋಡಿ)

9. (ಎ) ಯಾವುದರ ಬಗ್ಗೆ ಧ್ಯಾನಿಸುವಂತೆ ಪೌಲನು ತಿಮೊಥೆಯನಿಗೆ ಹೇಳಿದನು? (ಬಿ) ಸೇವೆಗಾಗಿ ತಯಾರಿಸುವಾಗ ನಾವು ಯಾವುದರ ಬಗ್ಗೆ ಧ್ಯಾನಿಸಬಹುದು?

9 ತಿಮೊಥೆಯನು ತನ್ನ ಮಾತು, ನಡತೆ, ಬೋಧನಾ ರೀತಿಯ ಬಗ್ಗೆ ಧ್ಯಾನಿಸುವಂತೆ ಅಪೊಸ್ತಲ ಪೌಲನು ಹೇಳಿದನು. ಏಕೆಂದರೆ ಇವೆಲ್ಲ ಬೇರೆಯವರ ಮೇಲೆ ಪರಿಣಾಮ ಬೀರಲಿತ್ತು. (1 ತಿಮೊಥೆಯ 4:12-16 ಓದಿ.) ಈ ವಿಷಯಗಳ ಬಗ್ಗೆ ನೀವೂ ಧ್ಯಾನಿಸಬಹುದು. ಉದಾಹರಣೆಗೆ, ನೀವು ನಡೆಸುವ ಬೈಬಲ್‌ ಅಧ್ಯಯನಕ್ಕಾಗಿ ತಯಾರಿಸುವಾಗ ಧ್ಯಾನಿಸಲು ಸಮಯ ಮಾಡಿ. ನಿಮ್ಮ ವಿದ್ಯಾರ್ಥಿಯ ಬಗ್ಗೆ ಯೋಚಿಸಿ. ಅವನು/ಳು ಪ್ರಗತಿ ಮಾಡಲು ನೆರವಾಗುವ ಒಂದು ಪ್ರಶ್ನೆ ಇಲ್ಲವೆ ದೃಷ್ಟಾಂತವನ್ನು ಕಂಡುಹಿಡಿಯಲು ಪ್ರಯತ್ನಿಸಿ. ನಿಮ್ಮ ಬೈಬಲ್ ಅಧ್ಯಯನಗಳಿಗಾಗಿ ಹೀಗೆ ತಯಾರಿಸಿದರೆ ನಿಮ್ಮ ಸ್ವಂತ ನಂಬಿಕೆ ಬಲಗೊಳ್ಳುತ್ತದೆ. ಜೊತೆಗೆ ಬೈಬಲಿನ ಹೆಚ್ಚು ಉತ್ತಮ, ಹೆಚ್ಚು ಉತ್ಸಾಹಭರಿತ ಶಿಕ್ಷಕರಾಗುತ್ತೀರಿ. ಸೇವೆಗೆ ಹೋಗುವ ಮುಂಚೆ ಧ್ಯಾನಿಸಿದರೂ ನಿಮಗೆ ಪ್ರಯೋಜನವಾಗುತ್ತದೆ. (ಎಜ್ರ 7:10 ಓದಿ.) ಬಹುಶಃ ಅಪೊಸ್ತಲರ ಕಾರ್ಯಗಳ ಪುಸ್ತಕದಿಂದ ಒಂದು ಅಧ್ಯಾಯ ಓದಿದರೆ ಹೆಚ್ಚು ಹುರುಪಿನಿಂದ ಸಾರಲು ಸಹಾಯವಾಗುತ್ತದೆ. ಆ ದಿನ ನೀವು ಬಳಸಲಿರುವ ವಚನಗಳು ಮತ್ತು ನೀಡಲಿರುವ ಸಾಹಿತ್ಯದ ಬಗ್ಗೆಯೂ ಧ್ಯಾನಿಸಬಹುದು. (2 ತಿಮೊ. 1:6) ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರ ಬಗ್ಗೆ ಯೋಚಿಸಿ. ಅವರೊಟ್ಟಿಗೆ ಯಾವ ವಿಷಯದ ಬಗ್ಗೆ ಮಾತಾಡಿದರೆ ಆಸಕ್ತಿ ಹುಟ್ಟಬಹುದೆಂದು ಯೋಚಿಸಿ. ಈ ರೀತಿಯ ತಯಾರಿ ಮಾಡಿದರೆ, ಇತರರಿಗೆ ಸಾಕ್ಷಿಕೊಡುವಾಗ ಬೈಬಲನ್ನು ಪರಿಣಾಮಕಾರಿಯಾಗಿ ಬಳಸಲು ನಿಮ್ಮಿಂದ ಆಗುತ್ತದೆ.—1 ಕೊರಿಂ. 2:4.

10. ಆಧ್ಯಾತ್ಮಿಕ ವಿಷಯಗಳ ಕುರಿತು ಧ್ಯಾನಿಸಲಿಕ್ಕಾಗಿ ನಮಗೆ ಇನ್ಯಾವ ಹೆಚ್ಚಿನ ಅವಕಾಶಗಳಿವೆ?

10 ಇನ್ನು ಯಾವುದರ ಬಗ್ಗೆ ನೀವು ಧ್ಯಾನಿಸಬಹುದು? ಸಾರ್ವಜನಿಕ ಭಾಷಣಗಳ, ಸಮ್ಮೇಳನಗಳ, ಅಧಿವೇಶನಗಳ ಸಮಯದಲ್ಲಿ ನೀವು ಟಿಪ್ಪಣಿ ಬರೆಯುತ್ತಿರುವಲ್ಲಿ ಅವುಗಳನ್ನು ಪುನಃ ಓದಲಿಕ್ಕಾಗಿ ಸಮಯ ಮಾಡಿಕೊಳ್ಳಿ. ಹೀಗೆ ಪುನಃ ಓದುವಾಗ ‘ದೇವರ ವಾಕ್ಯ ಮತ್ತು ಆತನ ಸಂಘಟನೆಯಿಂದ ನಾನೇನು ಕಲಿತಿದ್ದೇನೆ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳ ಒಂದೊಂದು ಸಂಚಿಕೆಯಲ್ಲಿ ಮತ್ತು ಇತ್ತೀಚಿನ ಅಧಿವೇಶನದಲ್ಲಿ ಬಿಡುಗಡೆಯಾದ ಸಾಹಿತ್ಯದಲ್ಲಿರುವ ವಿಷಯದ ಬಗ್ಗೆಯೂ ಧ್ಯಾನಿಸಬಹುದು. ನೀವು ವರ್ಷಪುಸ್ತಕದಲ್ಲಿ ಒಂದು ಅನುಭವ ಓದಿದಾಗ ಒಂದು ಕ್ಷಣ ನಿಲ್ಲಿಸಿ, ಅದರ ಬಗ್ಗೆ ಯೋಚಿಸಿ. ಅದು ನಿಮ್ಮ ಹೃದಯವನ್ನು ಸ್ಪರ್ಶಿಸುವಂತೆ ಬಿಡಿ. ನಮ್ಮ ಸಾಹಿತ್ಯ ಓದುವಾಗ ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕಿ. ಇಲ್ಲವೇ ಪುಟದ ಅಂಚುಗಳಲ್ಲಿರುವ ಜಾಗದಲ್ಲಿ ಟಿಪ್ಪಣಿ ಬರೆಯಿರಿ. ಇದು ಪುನರ್ಭೇಟಿಗಾಗಿ, ಪರಿಪಾಲನಾ ಭೇಟಿಗಾಗಿ, ಭಾಷಣಕ್ಕಾಗಿ ತಯಾರಿಸುವಾಗ ನಿಮ್ಮ ಉಪಯೋಗಕ್ಕೆ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಧ್ಯಾನಿಸುವುದರಿಂದ ಆಗುವ ಪ್ರಯೋಜನವೇನೆಂದರೆ ಓದಿದ ಮಾಹಿತಿ ನಿಮ್ಮ ಹೃದಯವನ್ನು ತಲಪಲು, ಈ ಒಳ್ಳೇ ವಿಷಯಗಳಿಗಾಗಿ ಯೆಹೋವನಿಗೆ ಧನ್ಯವಾದ ಹೇಳಲು ಸಮಯ ಸಿಗುತ್ತದೆ.

ದೇವರ ವಾಕ್ಯದ ಬಗ್ಗೆ ಪ್ರತಿ ದಿನ ಧ್ಯಾನಿಸಿ

11. (ಎ) ನಾವು ಧ್ಯಾನಿಸಬೇಕಾದ ಅತೀ ಪ್ರಾಮುಖ್ಯ ಪುಸ್ತಕ ಯಾವುದು? (ಬಿ) ಇದನ್ನು ಮಾಡುವುದರಿಂದ ನಮಗೆ ಹೇಗೆ ಸಹಾಯವಾಗುತ್ತದೆ? (ಪಾದಟಿಪ್ಪಣಿ ಸಹ ನೋಡಿ.)

11 ನಾವು ಧ್ಯಾನಿಸಬೇಕಾದ ಅತೀ ಪ್ರಾಮುಖ್ಯ ಪುಸ್ತಕ ಬೈಬಲ್‌. ಆದರೆ, ನೀವು ಬೈಬಲನ್ನು ಇನ್ನು ಮುಂದೆ ಇಟ್ಟುಕೊಳ್ಳುವ ಹಾಗಿಲ್ಲ ಎಂಬ ಪರಿಸ್ಥಿತಿ ಮುಂದೊಂದು ದಿನ ಬಂದರೆ ಏನು ಮಾಡುತ್ತೀರಾ? * (ಪಾದಟಿಪ್ಪಣಿ ನೋಡಿ.) ನೀವು ಈಗಾಗಲೇ ಬಾಯಿಪಾಠ ಮಾಡಿರುವ ವಿಷಯಗಳ ಬಗ್ಗೆ, ಅಂದರೆ ನಿಮ್ಮ ಅಚ್ಚುಮೆಚ್ಚಿನ ವಚನಗಳಾಗಲಿ ರಾಜ್ಯ ಗೀತೆಗಳ ಬಗ್ಗೆಯಾಗಲಿ ಧ್ಯಾನಿಸುವುದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. (ಅ. ಕಾ. 16:25) ಕಲಿತಂಥ ವಿಷಯಗಳನ್ನು ನೆನಪಿಡಲು ದೇವರಾತ್ಮವು ನಿಮಗೆ ಸಹಾಯಮಾಡುವುದು. ಇದರಿಂದ ನೀವು ನಂಬಿಗಸ್ತರಾಗಿ ಉಳಿಯಬಹುದು.—ಯೋಹಾ. 14:26.

12. ನಿಮ್ಮ ದೈನಂದಿನ ಬೈಬಲ್‌ ವಾಚನಕ್ಕಾಗಿ ಯೋಜನೆಮಾಡುವ ಒಂದು ವಿಧ ಯಾವುದು?

12 ನಿಮ್ಮ ದೈನಂದಿನ ಬೈಬಲ್‌ ವಾಚನಕ್ಕಾಗಿ ಯೋಜನೆಮಾಡುವ ಒಂದು ವಿಧ ಯಾವುದು? ವಾರದ ಕೆಲವೊಂದು ದಿನಗಳಂದು ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ವಾರದ ಬೈಬಲ್‌ ವಾಚನ ಭಾಗವನ್ನು ಓದಿ ಧ್ಯಾನಿಸಬಹುದು. ಉಳಿದ ದಿನಗಳಂದು ನೀವು ಮತ್ತಾಯ, ಮಾರ್ಕ, ಲೂಕ, ಯೋಹಾನ ಎಂಬ ಸುವಾರ್ತಾ ಪುಸ್ತಕಗಳಿಂದ ಓದಿ, ಯೇಸು ಏನು ಹೇಳಿದನು, ಮಾಡಿದನು ಅದರ ಬಗ್ಗೆ ಧ್ಯಾನಿಸಬಹುದು. (ರೋಮ. 10:17; ಇಬ್ರಿ. 12:2; 1 ಪೇತ್ರ 2:21) ಅಷ್ಟೇ ಅಲ್ಲ, ಯೇಸುವಿನ ಬದುಕಲ್ಲಾದ ಘಟನೆಗಳನ್ನು ಅವುಗಳು ನಡೆದ ಕ್ರಮದಲ್ಲೇ ವರ್ಣಿಸುವ ಒಂದು ಪುಸ್ತಕವೂ ನಮಗಿದೆ. ಇದು ನಿಮಗೆ ಸುವಾರ್ತಾ ಪುಸ್ತಕಗಳ ವಾಚನದಿಂದ ಹೆಚ್ಚು ಪ್ರಯೋಜನ ಪಡೆಯಲು ಸಹಾಯಮಾಡಬಲ್ಲದು.—ಯೋಹಾ. 14:6.

ಧ್ಯಾನಿಸುವುದು ಏಕೆ ಪ್ರಾಮುಖ್ಯ?

13, 14. (ಎ) ಯೆಹೋವ ಮತ್ತು ಯೇಸುವಿನ ಬಗ್ಗೆ ಧ್ಯಾನಿಸುತ್ತಾ ಇರುವುದು ಏಕೆ ತುಂಬ ಮುಖ್ಯ? (ಬಿ) ಇದು ನಾವೇನು ಮಾಡುವಂತೆ ಪ್ರೇರೇಪಣೆ ನೀಡುತ್ತದೆ?

13 ಯೆಹೋವ ಹಾಗೂ ಯೇಸುವಿನ ಬಗ್ಗೆ ಧ್ಯಾನಿಸುವುದರಿಂದ ಒಬ್ಬ ವ್ಯಕ್ತಿಗೆ ಪ್ರೌಢ ಕ್ರೈಸ್ತನಾಗಲು ಮತ್ತು ನಂಬಿಕೆಯನ್ನು ಬಲವಾಗಿರಿಸಲು ಸಹಾಯವಾಗಬಲ್ಲದು. (ಇಬ್ರಿ. 5:14; 6:1) ದೇವರ ಬಗ್ಗೆ ಯೋಚಿಸಲು ತೀರ ಕಡಿಮೆ ಸಮಯ ಕೊಡುವ ವ್ಯಕ್ತಿ ನಿಧಾನವಾಗಿ ಆತನೊಂದಿಗಿನ ಸಂಬಂಧವನ್ನು ಕಳಕೊಳ್ಳಬಹುದು ಅಥವಾ ಬಹುಶಃ ಅವನು ಯೆಹೋವನನ್ನು ನೇರವಾಗಿ ತಿರಸ್ಕರಿಸಿಬಿಡಬಹುದು. (ಇಬ್ರಿ. 2:1; 3:12) ನಾವು ದೇವರ ವಾಕ್ಯವನ್ನು “ಉತ್ತಮವಾದ ಒಳ್ಳೆಯ ಹೃದಯದಿಂದ” ಕೇಳದಿದ್ದರೆ ಇಲ್ಲವೇ ಸ್ವೀಕರಿಸದಿದ್ದರೆ, ನಾವದನ್ನು “ಇಟ್ಟುಕೊಳ್ಳಲು” ಆಗುವುದಿಲ್ಲವೆಂದು ಯೇಸು ಎಚ್ಚರಿಸಿದನು. ಅದರ ಬದಲಿಗೆ ನಾವು ಸುಲಭವಾಗಿ “ಜೀವನದ ಚಿಂತೆಗಳು, ಐಶ್ವರ್ಯ ಮತ್ತು ಸುಖಭೋಗಗಳಿಂದ ದಾರಿತಪ್ಪಿ” ಹೋಗುವೆವು.—ಲೂಕ 8:14, 15.

14 ಹಾಗಾಗಿ ನಾವು ಬೈಬಲಿನ ಬಗ್ಗೆ ಧ್ಯಾನಿಸುವುದನ್ನು ಮತ್ತು ಯೆಹೋವನ ಬಗ್ಗೆ ಇನ್ನೂ ಉತ್ತಮವಾಗಿ ತಿಳಿಯುವುದನ್ನು ಮುಂದುವರಿಸೋಣ. ಇದು ನಮಗೆ ಆತನ ಗುಣಗಳನ್ನು ಹಾಗೂ ವ್ಯಕ್ತಿತ್ವವನ್ನು ಇನ್ನಷ್ಟು ಪೂರ್ಣವಾಗಿ ಅನುಕರಿಸಲು ಪ್ರೇರೇಪಣೆ ಕೊಡಲಿದೆ. (2 ಕೊರಿಂ. 3:18) ಸ್ವರ್ಗದಲ್ಲಿರುವ ನಮ್ಮ ತಂದೆಯ ಬಗ್ಗೆ ಹೆಚ್ಚನ್ನು ಕಲಿಯಲು ಮತ್ತು ಆತನನ್ನು ಸದಾಕಾಲಕ್ಕೂ ಅನುಕರಿಸುತ್ತಾ ಇರಲು ನಾವು ಮುಂದುವರಿಸಬಲ್ಲೆವು. ಇದಕ್ಕಿಂತ ಮಿಗಿಲಾದ ಗೌರವ ಉಂಟೇ?—ಪ್ರಸಂ. 3:11.

15, 16. (ಎ) ಯೆಹೋವ ಹಾಗೂ ಯೇಸುವಿನ ಬಗ್ಗೆ ಧ್ಯಾನಿಸುವುದರಿಂದ ನಿಮಗೆ ಹೇಗೆ ಪ್ರಯೋಜನವಾಗಿದೆ? (ಬಿ) ಧ್ಯಾನಿಸುವುದು ಒಮ್ಮೊಮ್ಮೆ ಏಕೆ ಕಷ್ಟವಾಗಬಹುದು? (ಸಿ) ಆದರೆ ನಾವೇಕೆ ಪ್ರಯತ್ನಮಾಡುತ್ತಾ ಇರಬೇಕು?

15 ಯೆಹೋವ ಮತ್ತು ಯೇಸುವಿನ ಕುರಿತು ಧ್ಯಾನಿಸುತ್ತಾ ಇರುವುದರಿಂದ ನೀವು ಸತ್ಯಕ್ಕಾಗಿ ಹುರುಪಿನವರಾಗಿರಬಲ್ಲಿರಿ. ನಿಮ್ಮ ಹುರುಪು ಇತರ ಸಹೋದರರಿಗೆ ಮತ್ತು ನೀವು ಸೇವೆಯಲ್ಲಿ ಭೇಟಿಯಾಗುವ ಜನರಿಗೆ ಚೈತನ್ಯ ನೀಡುತ್ತದೆ. ಯೆಹೋವನು ನಿಮಗಾಗಿ ಯೇಸುವಿನ ವಿಮೋಚನಾ ಮೌಲ್ಯವನ್ನು ಒದಗಿಸುವ ಮೂಲಕ ಎಷ್ಟೆಲ್ಲ ಮಾಡಿದ್ದಾನೊ ಅದರ ಬಗ್ಗೆ ನೀವು ಧ್ಯಾನಿಸಬೇಕು. ಆಗ ದೇವರೊಟ್ಟಿಗಿನ ನಿಮ್ಮ ಆಪ್ತ ಸಂಬಂಧವನ್ನು ಅಮೂಲ್ಯವಾಗಿ ಎಣಿಸುವುದನ್ನು ಮುಂದುವರಿಸಲು ಸಹಾಯವಾಗುತ್ತದೆ. (ರೋಮ. 3:24; ಯಾಕೋ. 4:8) ದಕ್ಷಿಣ ಆಫ್ರಿಕದ ಸಹೋದರ ಮಾರ್ಕ್‌ ತಮ್ಮ ನಂಬಿಕೆಗಾಗಿ ಜೈಲಲ್ಲಿ ಮೂರು ವರ್ಷ ಕಳೆಯಬೇಕಾಯಿತು. ಅವರನ್ನುವುದು: “ಧ್ಯಾನಿಸುವುದನ್ನು ಒಂದು ರೋಮಾಂಚಕ ಸಾಹಸಕಾರ್ಯಕ್ಕೆ ಹೋಲಿಸಬಹುದು. ನಾವು ಅಧ್ಯಾತ್ಮಿಕ ವಿಷಯಗಳ ಬಗ್ಗೆ ಎಷ್ಟು ಹೆಚ್ಚು ಧ್ಯಾನಿಸುತ್ತೇವೊ, ನಮ್ಮ ದೇವರಾದ ಯೆಹೋವನ ಬಗ್ಗೆ ಅಷ್ಟು ಹೊಸ ವಿಷಯಗಳನ್ನು ಕಲಿಯುತ್ತೇವೆ. ಒಮ್ಮೊಮ್ಮೆ ನನಗೆ ಸ್ವಲ್ಪ ಬೇಜಾರಾದರೆ ಇಲ್ಲವೆ ಭವಿಷ್ಯದ ಬಗ್ಗೆ ಚಿಂತೆ ಹುಟ್ಟಿದರೆ, ಬೈಬಲ್ ತಕ್ಕೊಂಡು ಅದರಿಂದ ಒಂದು ಚಿಕ್ಕ ಭಾಗ ಓದಿ, ಅದರ ಬಗ್ಗೆ ಧ್ಯಾನಿಸುತ್ತೇನೆ. ಹೀಗೆ ಮಾಡಿದಾಗೆಲ್ಲ ನನ್ನ ಮನಸ್ಸು ನಿಜವಾಗಲೂ ಶಾಂತವಾಗುತ್ತದೆ.”

16 ಈ ಲೋಕದಲ್ಲಿನ ಜೀವನ ಅಪಕರ್ಷಣೆಗಳಿಂದ ತುಂಬಿಕೊಂಡಿದೆ. ಹಾಗಾಗಿ ಬೈಬಲಿನ ಬಗ್ಗೆ ಧ್ಯಾನಿಸಲು ಸಮಯ ಮಾಡಿಕೊಳ್ಳಲು ಕೆಲವು ಸಲ ಕಷ್ಟವಾಗಬಹುದು. ಆಫ್ರಿಕದ ಸಹೋದರ ಪ್ಯಾಟ್ರಿಕ್‌ ಹೇಳುವುದು: “ನನ್ನ ತಲೆಯಲ್ಲಿ ಎಲ್ಲ ರೀತಿಯ ಮಾಹಿತಿ ತುಂಬಿಕೊಂಡಿರುತ್ತದೆ. ಬೇಕಾದದ್ದು, ಬೇಡವಾದದ್ದು ಎಲ್ಲ! ಪ್ರತಿ ದಿನ ಅವನ್ನು ಬೇರ್ಪಡಿಸುತ್ತಾ ಇರಬೇಕು. ಮನಸ್ಸಲ್ಲಿ ಯಾವೆಲ್ಲ ವಿಷಯಗಳಿವೆ ಎಂದು ಯೋಚಿಸುವಾಗ, ಎಷ್ಟೋ ಸಲ ‘ಚಿಂತೆಗಳೇ’ ತುಂಬಿಕೊಂಡಿರುವುದು ಗೊತ್ತಾಗುತ್ತದೆ. ಪ್ರಶಾಂತ ಮನಸ್ಸಿನಿಂದ ಧ್ಯಾನಿಸಬೇಕಾದರೆ ಮೊದಲು ಆ ಚಿಂತೆಗಳ ಬಗ್ಗೆ ಯೆಹೋವನ ಹತ್ತಿರ ಪ್ರಾರ್ಥಿಸುತ್ತೇನೆ. ಇದಕ್ಕೆ ಸಮಯ ಹಿಡಿಯುತ್ತದಾದರೂ ನಂತರ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸಿದಾಗ ಯೆಹೋವನಿಗೆ ಹತ್ತಿರವಾಗಿದ್ದೇನೆಂದು ನನಗನಿಸುತ್ತದೆ. ಸತ್ಯವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇದು ನನ್ನ ಮನಸ್ಸನ್ನು ತೆರೆಯುತ್ತದೆ.” (ಕೀರ್ತ. 94:19) ಹೌದು, ಬೈಬಲನ್ನು ಪ್ರತಿ ದಿನ ಓದಿ, ಧ್ಯಾನಿಸುವಾಗ ನಮಗೆ ಹಲವಾರು ವಿಧಗಳಲ್ಲಿ ಪ್ರಯೋಜನವಾಗುತ್ತದೆ.—ಅ. ಕಾ. 17:11.

ಸಮಯ ಮಾಡಿಕೊಳ್ಳುವುದು ಹೇಗೆ?

17. ಧ್ಯಾನಿಸಲಿಕ್ಕಾಗಿ ನೀವು ಹೇಗೆ ಸಮಯ ಮಾಡಿಕೊಳ್ಳುತ್ತೀರಿ?

17 ಕೆಲವರು ಬೆಳಗ್ಗೆ ಬೇಗ ಎದ್ದು ಓದುತ್ತಾರೆ, ಧ್ಯಾನಿಸುತ್ತಾರೆ, ಪ್ರಾರ್ಥಿಸುತ್ತಾರೆ. ಇತರರು ಮಧ್ಯಾಹ್ನದ ವಿರಾಮದ ಸಮಯದಲ್ಲಿ ಇದನ್ನು ಮಾಡುತ್ತಾರೆ. ಬಹುಶಃ ನಿಮಗೆ ಸಾಯಂಕಾಲದ ಹೊತ್ತು ಇಲ್ಲವೆ ಮಲಗುವ ಮುಂಚಿನ ಸಮಯ ಸೂಕ್ತ ಅನಿಸಬಹುದು. ಕೆಲವರು ಬೈಬಲನ್ನು ಬೆಳಗ್ಗೆಯೂ ಓದಿ, ರಾತ್ರಿ ಮಲಗುವ ಮುಂಚೆಯೂ ಓದುತ್ತಾರೆ. (ಯೆಹೋ. 1:8) ಆದರೆ ಮುಖ್ಯ ವಿಷಯವೇನೆಂದರೆ, ಸಮಯವನ್ನು ಉತ್ತಮವಾಗಿ ಬಳಸಬೇಕು. ಅಂದರೆ ಅಷ್ಟೇನೂ ಮುಖ್ಯವಲ್ಲದ ಕೆಲಸಗಳಿಂದ ಸಮಯ ತಕ್ಕೊಂಡು ದೇವರ ವಾಕ್ಯದ ಬಗ್ಗೆ ದಿನಾಲೂ ಧ್ಯಾನಿಸಬೇಕು.—ಎಫೆ. 5:15, 16.

18. ದೇವರ ವಾಕ್ಯವನ್ನು ದಿನಾಲೂ ಧ್ಯಾನಿಸಿ, ಕಲಿತದ್ದನ್ನು ಅನ್ವಯಿಸುವವರಿಗೆ ಬೈಬಲ್‌ ಯಾವ ಮಾತು ಕೊಡುತ್ತದೆ?

18 ತನ್ನ ವಾಕ್ಯವನ್ನು ಧ್ಯಾನಿಸಿ, ಅದರಿಂದ ಕಲಿತದ್ದನ್ನು ಅನ್ವಯಿಸಲು ಶ್ರಮಪಡುವವರನ್ನು ಯೆಹೋವನು ಆಶೀರ್ವದಿಸುವನೆಂದು ಬೈಬಲ್‌ ಮಾತುಕೊಡುತ್ತದೆ. (ಕೀರ್ತನೆ 1:1-3 ಓದಿ.) “ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದನು ಯೇಸು. (ಲೂಕ 11:28) ಆದರೆ ಯೆಹೋವನ ವಾಕ್ಯವನ್ನು ಪ್ರತಿದಿನ ಧ್ಯಾನಿಸುವುದರಿಂದ ನಾವು ಆತನಿಗೆ ಗೌರವ ತರುವಂಥ ವಿಧದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇದೇ ಎಲ್ಲಕ್ಕಿಂತಲೂ ಮುಖ್ಯ ಸಂಗತಿ. ನಾವಿದನ್ನು ಮಾಡುವಾಗ ಯೆಹೋವನು ನಮಗೆ ಬಹುಮಾನವಾಗಿ ಈಗ ಸಂತೋಷ ಮತ್ತು ಹೊಸ ಲೋಕದಲ್ಲಿ ನಿತ್ಯಜೀವ ಕೊಡುವನು.—ಯಾಕೋ. 1:25; ಪ್ರಕ. 1:3.

^ ಪ್ಯಾರ. 11 ಡಿಸೆಂಬರ್‌ 1, 2006 ಇಂಗ್ಲಿಷ್‌ ಕಾವಲಿನಬುರುಜುವಿನಲ್ಲಿ “ಆಧ್ಯಾತ್ಮಿಕವಾಗಿ ಬಲಶಾಲಿಗಳಾಗಿ ಉಳಿಯಲು ನಮ್ಮ ಹೋರಾಟ” ಎಂಬ ಲೇಖನ ನೋಡಿ.