ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

“ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

‘ನನ್ನ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡು.’ —ಮಾರ್ಕ 9:24.

ಗೀತೆಗಳು: 81, 135

1. ನಂಬಿಕೆ ಎಷ್ಟು ಮುಖ್ಯ? (ಲೇಖನದ ಆರಂಭದ ಚಿತ್ರ ನೋಡಿ.)

‘ಮಹಾ ಸಂಕಟದ ಸಮಯದಲ್ಲಿ ಯೆಹೋವನು ನನ್ನನ್ನು ನಿಜವಾಗಲೂ ಕಾಪಾಡುತ್ತಾನಾ?’ ಈ ಪ್ರಶ್ನೆ ಯಾವತ್ತಾದರೂ ನಿಮ್ಮ ಮನಸ್ಸಿಗೆ ಬಂದಿದೆಯಾ? ಪಾರಾಗಲು ನಮ್ಮಲ್ಲಿ ಇರಬೇಕಾದ ಅತೀ ಮುಖ್ಯವಾದ ಗುಣ ನಂಬಿಕೆ ಎಂದು ಅಪೊಸ್ತಲ ಪೌಲನು ಹೇಳಿದನು. ಅವನು ಹೇಳಿದ್ದು: “ನಂಬಿಕೆಯಿಲ್ಲದೆ ಆತನನ್ನು [ದೇವರನ್ನು] ಮೆಚ್ಚಿಸುವುದು ಅಸಾಧ್ಯ.” (ಇಬ್ರಿ. 11:6) ‘ಅಷ್ಟೇ ತಾನೇ, ನಂಬಿಕೆ ಬೆಳೆಸಿಕೊಂಡರೆ ಆಯ್ತು’ ಎಂದು ನಮಗನಿಸಬಹುದು. ಆದರೆ ನಿಜ ಏನೆಂದರೆ ‘ನಂಬಿಕೆಯು ಎಲ್ಲರ ಸೊತ್ತಲ್ಲ.’ (2 ಥೆಸ. 3:2) ನಂಬಿಕೆಯನ್ನು ಬಲಗೊಳಿಸುವುದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಳ್ಳಲು ಆ ಎರಡು ವಚನಗಳು ನಮಗೆ ಸಹಾಯ ಮಾಡುತ್ತವೆ.

2, 3. (ಎ) ನಮ್ಮ ನಂಬಿಕೆ ಎಷ್ಟು ಮುಖ್ಯ? (ಬಿ) ನಾವೀಗ ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

2 “ಪರೀಕ್ಷಿತ” ನಂಬಿಕೆಯ ಬಗ್ಗೆ ಅಪೊಸ್ತಲ ಪೇತ್ರನು ಮಾತಾಡಿದನು. (1 ಪೇತ್ರ 1:7 ಓದಿ.) ಮಹಾ ಸಂಕಟ ತುಂಬ ಹತ್ತಿರವಿರುವುದರಿಂದ “ಪ್ರಾಣವನ್ನು ಸಂರಕ್ಷಿಸುವ ನಂಬಿಕೆ” ನಮ್ಮಲ್ಲಿರಬೇಕು. (ಇಬ್ರಿ. 10:39) ಹಾಗಾಗಿ ನಮ್ಮ ನಂಬಿಕೆಯನ್ನು ಬಲಗೊಳಿಸಲು ತುಂಬ ಶ್ರಮಪಡಬೇಕು. ನಮ್ಮ ರಾಜನಾದ ಯೇಸು ಕ್ರಿಸ್ತನು ಪ್ರಕಟಗೊಂಡಾಗ ಯಾರಿಗೆ ಪ್ರತಿಫಲ ಕೊಡುತ್ತಾನೊ ಅವರಲ್ಲಿ ನಾವೂ ಒಬ್ಬರಾಗಿರಬೇಕು. ಅದಕ್ಕಾಗಿ ನಾವು ‘ನನ್ನ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡು’ ಎಂದು ಯೇಸು ಹತ್ತಿರ ಬೇಡಿಕೊಂಡ ಒಬ್ಬ ವ್ಯಕ್ತಿಯಂತೆ ಬೇಡಿಕೊಳ್ಳಬೇಕು. (ಮಾರ್ಕ 9:24) ಅಥವಾ ಅಪೊಸ್ತಲರಂತೆ “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಕೇಳಿಕೊಳ್ಳಬೇಕು.—ಲೂಕ 17:5.

3 ಈ ಲೇಖನದಲ್ಲಿ ನಾವು ಈ ಮೂರು ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ: ನಮ್ಮ ನಂಬಿಕೆಯನ್ನು ಹೇಗೆ ಬಲಗೊಳಿಸಬಹುದು? ನಮಗೆ ಬಲವಾದ ನಂಬಿಕೆಯಿದೆ ಎಂದು ತೋರಿಸುವುದು ಹೇಗೆ? ಹೆಚ್ಚು ನಂಬಿಕೆ ಕೊಡುವಂತೆ ದೇವರಿಗೆ ಬೇಡಿಕೊಂಡಾಗ ಆತನು ನಮ್ಮ ಪ್ರಾರ್ಥನೆ ಕೇಳುತ್ತಾನೆಂಬ ನಿಶ್ಚಯ ನಮಗಿದೆ ಏಕೆ?

ನಮ್ಮ ನಂಬಿಕೆಯನ್ನು ಬಲಗೊಳಿಸುವಾಗ ದೇವರಿಗೆ ಖುಷಿಯಾಗುತ್ತದೆ

4. ನಮ್ಮ ನಂಬಿಕೆಯನ್ನು ಬಲಗೊಳಿಸಲು ಯಾರ ಮಾದರಿಗಳು ನಮ್ಮನ್ನು ಪ್ರೇರಿಸಬಲ್ಲವು?

4 ನಂಬಿಕೆ ಇಷ್ಟೊಂದು ಮುಖ್ಯ ಆಗಿರುವುದರಿಂದಲೇ ಯೆಹೋವನು ಬೈಬಲ್‍ನಲ್ಲಿ ನಂಬಿಕೆಯ ಹಲವಾರು ಮಾದರಿಗಳನ್ನು ಕೊಟ್ಟಿದ್ದಾನೆ. ಅವುಗಳನ್ನು ‘ನಮ್ಮ ಉಪದೇಶಕ್ಕಾಗಿ ಬರೆಯಲಾಗಿದೆ.’ (ರೋಮ. 15:4) ಅಬ್ರಹಾಮ, ಸಾರಾ, ಇಸಾಕ, ಯಾಕೋಬ, ಮೋಶೆ, ರಾಹಾಬ, ಗಿದ್ಯೋನ, ಬಾರಾಕ ಮತ್ತು ಇತರರ ಮಾದರಿಗಳು ನಮ್ಮ ನಂಬಿಕೆಯನ್ನು ಬಲಗೊಳಿಸುವಂತೆ ನಮ್ಮನ್ನು ಪ್ರೇರಿಸುತ್ತವೆ. (ಇಬ್ರಿ. 11:32-35) ಹಿಂದಿನ ಕಾಲದ ಮಾದರಿಗಳ ಜೊತೆಗೆ ನಮ್ಮ ಕಾಲದ ಸಹೋದರ ಸಹೋದರಿಯರ ನಂಬಿಕೆಯ ಅದ್ಭುತಕರ ಮಾದರಿಗಳು ಸಹ ನಮಗಿವೆ. * (ಪಾದಟಿಪ್ಪಣಿ ನೋಡಿ.)

5. (ಎ) ಯೆಹೋವನ ಮೇಲೆ ತನಗೆ ಬಲವಾದ ನಂಬಿಕೆಯಿದೆ ಎಂದು ಎಲೀಯನು ಹೇಗೆ ತೋರಿಸಿದನು? (ಬಿ) ನಾವು ನಮ್ಮನ್ನೇ ಏನು ಕೇಳಿಕೊಳ್ಳಬೇಕು?

5 ಬೈಬಲಿನಲ್ಲಿರುವ ಒಂದು ಮಾದರಿ, ಪ್ರವಾದಿ ಎಲೀಯನದ್ದು. ಇವನ ಮಾದರಿಯ ಬಗ್ಗೆ ಧ್ಯಾನಿಸುತ್ತಾ ಹೋದಂತೆ ಯೆಹೋವನ ಮೇಲೆ ಅವನು ತುಂಬ ಭರವಸೆ ತೋರಿಸಿದ 5 ಸನ್ನಿವೇಶಗಳನ್ನು ನೋಡಿ. (1) ಯೆಹೋವನು ಕ್ಷಾಮವನ್ನು ತರಲಿದ್ದಾನೆ ಎಂದು ರಾಜ ಆಹಾಬನಿಗೆ ಹೇಳುತ್ತಾ ಎಲೀಯನು ದೃಢ ಭರವಸೆಯಿಂದ ‘ಯೆಹೋವನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರುಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ’ ಎಂದು ಘೋಷಿಸಿದನು. (1 ಅರ. 17:1) (2) ಕ್ಷಾಮದ ಸಮಯದಲ್ಲಿ ತನಗೆ ಮತ್ತು ಇತರರಿಗೆ ಅಗತ್ಯವಿರುವುದನ್ನೆಲ್ಲ ಯೆಹೋವನು ಒದಗಿಸುವನೆಂದು ಎಲೀಯನು ನಂಬಿದನು. (1 ಅರ. 17:4, 5, 13, 14) (3) ವಿಧವೆಯ ಮಗನನ್ನು ಯೆಹೋವನು ಪುನರುತ್ಥಾನ ಮಾಡುವನೆಂದು ಎಲೀಯನಿಗೆ ನಿಶ್ಚಯವಾಗಿ ಗೊತ್ತಿತ್ತು. (1 ಅರ. 17:21) (4) ಕರ್ಮೆಲ್‌ ಬೆಟ್ಟದಲ್ಲಿ ಯೆಹೋವನ ಕಡೆಯಿಂದ ಬೆಂಕಿ ಬಂದು ಯಜ್ಞವನ್ನು ದಹಿಸಿಬಿಡುತ್ತದೆ ಎಂಬ ವಿಷಯದಲ್ಲಿ ಎಲೀಯನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. (1 ಅರ. 18:24, 37) (5) ಮಳೆ ಬರುವ ಮುಂಚೆಯೇ ಆಹಾಬನಿಗೆ ಎಲೀಯನು ಈ ಭರವಸೆಯ ಮಾತುಗಳನ್ನು ನುಡಿದನು: “ನೀನು ಮೇಲೆ ಹೋಗಿ ಅನ್ನಪಾನಗಳನ್ನು ತೆಗೆದುಕೋ; ದೊಡ್ಡ ಮಳೆಯ ಶಬ್ದವು ಕೇಳಿಸುತ್ತದೆ.” (1 ಅರ. 18:41) ಈ ವಿಷಯಗಳನ್ನು ಪರಿಗಣಿಸಿದ ಮೇಲೆ ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ನನ್ನ ನಂಬಿಕೆಯು ಎಲೀಯನ ನಂಬಿಕೆಯಷ್ಟೆ ಬಲವಾಗಿದೆಯಾ?’

ನಂಬಿಕೆಯನ್ನು ಬಲಗೊಳಿಸಲು ನಾವೇನು ಮಾಡಬೇಕು?

6. ನಮ್ಮ ನಂಬಿಕೆಯನ್ನು ಬಲಗೊಳಿಸಲು ಯೆಹೋವನಿಂದ ನಾವೇನು ಪಡೆಯಬೇಕು?

6 ನಮ್ಮಷ್ಟಕ್ಕೇ ನಾವೇ ನಂಬಿಕೆಯನ್ನು ಬೆಳೆಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ನಮಗೆ ಪವಿತ್ರಾತ್ಮ ಕೊಡುವಂತೆ ಯೆಹೋವನನ್ನು ಕೇಳಬೇಕು. ಯಾಕೆ? ಯಾಕೆಂದರೆ ನಂಬಿಕೆ ಪವಿತ್ರಾತ್ಮದಿಂದ ಉಂಟಾಗುವ ಫಲದ ಒಂದು ಅಂಶವಾಗಿದೆ. (ಗಲಾ. 5:22) ಹೆಚ್ಚು ಪವಿತ್ರಾತ್ಮ ಕೊಡುವಂತೆ ಪ್ರಾರ್ಥಿಸಬೇಕೆಂಬ ಯೇಸುವಿನ ಸಲಹೆಯನ್ನು ನಾವು ಪಾಲಿಸುವುದು ವಿವೇಕಯುತ. ಯೆಹೋವನು ‘ತನ್ನನ್ನು ಕೇಳುವವರಿಗೆ ಪವಿತ್ರಾತ್ಮವನ್ನು ಕೊಡುವನು’ ಎಂದು ಯೇಸು ಮಾತು ಕೊಟ್ಟಿದ್ದಾನೆ.—ಲೂಕ 11:13.

7. ನಮ್ಮ ನಂಬಿಕೆಯನ್ನು ನಾವು ಹೇಗೆ ಬಲಗೊಳಿಸಬಹುದೆಂದು ವಿವರಿಸಿ.

7 ಒಂದು ಸಲ ದೇವರ ಮೇಲೆ ಬಲವಾದ ನಂಬಿಕೆ ಬೆಳೆಸಿಕೊಂಡರೆ ಅದನ್ನು ಉಳಿಸಿಕೊಳ್ಳಬೇಕು. ನಂಬಿಕೆಯನ್ನು ಬೆಂಕಿಗೆ ಹೋಲಿಸಬಹುದು. ಬೆಂಕಿ ಹೊತ್ತಿಸಿದ ಆರಂಭದಲ್ಲಿ ಜ್ವಾಲೆಗಳು ತುಂಬ ಜೋರು ಜೋರಾಗಿ ಉರಿಯುತ್ತಿರುತ್ತವೆ. ಆದರೆ ಆಗಾಗ ಸೌದೆ ಹಾಕದಿದ್ದರೆ ಮೆಲ್ಲಮೆಲ್ಲನೆ ಬೆಂಕಿ ಆರಿಹೋಗುತ್ತದೆ. ಕಡೆಗೆ ಸಿಗುವುದು ಬೂದಿ ಮಾತ್ರ. ನಂಬಿಕೆ ವಿಷಯದಲ್ಲೂ ಇದು ನಿಜ. ದೇವರ ವಾಕ್ಯವನ್ನು ದಿನಾಲೂ ಓದಿ ಅಧ್ಯಯನ ಮಾಡಿದರೆ ಬೈಬಲ್‌ ಮೇಲೆ ಮತ್ತು ಯೆಹೋವನ ಮೇಲೆ ನಮಗಿರುವ ಪ್ರೀತಿ ಬೆಳೆಯುತ್ತದೆ. ಇದರ ಫಲಿತಾಂಶವಾಗಿ ನಮ್ಮ ನಂಬಿಕೆ ಉಳಿಸಿಕೊಳ್ಳುತ್ತೇವೆ ಮತ್ತು ಅದು ಇನ್ನೂ ಬಲವಾಗುತ್ತದೆ.

8. ನಂಬಿಕೆಯನ್ನು ಬಲಗೊಳಿಸಲು ಮತ್ತು ಉಳಿಸಿಕೊಳ್ಳಲು ನಿಮಗೆ ಯಾವುದು ನೆರವಾಗುತ್ತದೆ?

8 ದೀಕ್ಷಾಸ್ನಾನಕ್ಕಿಂತ ಮುಂಚೆ ನೀವು ಎಷ್ಟು ವಿಷಯಗಳನ್ನು ಕಲಿತಿದ್ದೀರೊ ಅಷ್ಟೇ ಸಾಕು ಎಂದು ಸುಮ್ಮನಾಗಬೇಡಿ. (ಇಬ್ರಿ. 6:1, 2) ಈಗಾಗಲೇ ನೆರವೇರಿರುವ ಪ್ರವಾದನೆಗಳ ಬಗ್ಗೆ ಅಧ್ಯಯನ ಮಾಡಿ. ಇದು ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ಉಳಿಸಿಕೊಳ್ಳಲು ನೆರವಾಗುತ್ತದೆ. ನಿಮ್ಮ ನಂಬಿಕೆ ನಿಜವಾಗಲೂ ಬಲವಾಗಿದೆಯಾ ಎಂದು ನೋಡಲು ದೇವರ ವಾಕ್ಯವನ್ನು ಸಹ ಬಳಸಬಹುದು.—ಯಾಕೋಬ 1:25; 2:24, 26 ಓದಿ.

9, 10. (ಎ) ನಮ್ಮ ನಂಬಿಕೆ ಒಳ್ಳೇ ಸ್ನೇಹಿತರಿಂದ ಹೇಗೆ ಬಲಗೊಳ್ಳುತ್ತದೆ? (ಬಿ) ಸಭಾ ಕೂಟಗಳಿಂದ ಹೇಗೆ ಬಲಗೊಳ್ಳುತ್ತದೆ? (ಸಿ) ಸಾರುವ ಕೆಲಸದಿಂದ ಹೇಗೆ ಬಲಗೊಳ್ಳುತ್ತದೆ?

9 ಕ್ರೈಸ್ತರು ಒಬ್ಬರಿನ್ನೊಬ್ಬರ ನಂಬಿಕೆಯಿಂದ ‘ಉತ್ತೇಜನವನ್ನು ವಿನಿಮಯ ಮಾಡಿಕೊಳ್ಳಲು’ ಅಪೊಸ್ತಲ ಪೌಲನು ಹೇಳಿದನು. (ರೋಮ. 1:12) ಹಾಗೆಂದರೇನು? ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಸಮಯ ಕಳೆದಾಗ ಒಬ್ಬರಿನ್ನೊಬ್ಬರ ನಂಬಿಕೆಯನ್ನು ಬಲಗೊಳಿಸಬಹುದು. “ಪರೀಕ್ಷಿತ” ನಂಬಿಕೆಯಿರುವವರ ಜೊತೆ ಸಮಯ ಕಳೆದರೆ ಇದು ತುಂಬಾನೇ ನಿಜ. (ಯಾಕೋ. 1:3) ಕೆಟ್ಟ ಸ್ನೇಹಿತರು ನಮ್ಮ ನಂಬಿಕೆಯನ್ನು ಹಾಳು ಮಾಡಿಬಿಡುತ್ತಾರೆ. ಆದರೆ ಒಳ್ಳೇ ಸ್ನೇಹಿತರು ನಂಬಿಕೆಯನ್ನು ಕಟ್ಟುತ್ತಾರೆ. (1 ಕೊರಿಂ. 15:33) ಆದ್ದರಿಂದಲೇ ಯಾವಾಗಲೂ ಕೂಟಗಳಿಗೆ ಹಾಜರಾಗಬೇಕೆಂಬ ಸಲಹೆ ನಮಗಿದೆ. ಅಲ್ಲಿ ನಾವು ‘ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ’ ಇರಬಹುದು. (ಇಬ್ರಿಯ 10:24, 25 ಓದಿ.) ಜೊತೆಗೆ ಕೂಟಗಳಲ್ಲಿ ನಮಗೆ ಕಲಿಸಲಾಗುವ ವಿಷಯಗಳು ಸಹ ನಂಬಿಕೆಯನ್ನು ಬಲಗೊಳಿಸುತ್ತವೆ. ಬೈಬಲ್‌ ಹೀಗನ್ನುತ್ತದೆ: “ಕೇಳಿಸಿಕೊಂಡ ವಿಷಯದಿಂದ ನಂಬಿಕೆಯು ಬರುತ್ತದೆ.” (ರೋಮ. 10:17) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ತಪ್ಪದೆ ಕೂಟಗಳಿಗೆ ಹಾಜರಾಗುತ್ತೇನಾ?’

10 ಬೈಬಲ್‍ನಲ್ಲಿರುವ ಸುವಾರ್ತೆಯನ್ನು ಸಾರುವಾಗ ಮತ್ತು ಕಲಿಸುವಾಗ ಸಹ ನಮ್ಮ ನಂಬಿಕೆಯನ್ನು ನಾವು ಬಲಗೊಳಿಸುತ್ತೇವೆ. ಆರಂಭದ ಕ್ರೈಸ್ತರಂತೆ ನಾವು ಯೆಹೋವನ ಮೇಲೆ ಭರವಸೆಯಿಡಲು ಮತ್ತು ಎಂಥದ್ದೇ ಸನ್ನಿವೇಶದಲ್ಲಿ ಧೈರ್ಯದಿಂದ ಮಾತಾಡಲು ಕಲಿಯುತ್ತೇವೆ.—ಅ. ಕಾ. 4:17-20; 13:46.

11. (ಎ) ಯೆಹೋಶುವ ಕಾಲೇಬರಿಗೆ ಏಕೆ ಬಲವಾದ ನಂಬಿಕೆಯಿತ್ತು? (ಬಿ) ನಾವು ಹೇಗೆ ಅವರಂತೆ ಇರಬಹುದು?

11 ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ, ಪ್ರಾರ್ಥನೆಗಳಿಗೆ ಹೇಗೆ ಉತ್ತರಿಸುತ್ತಾನೆ ಎನ್ನುವುದನ್ನು ನೋಡಿ ನಮ್ಮ ನಂಬಿಕೆ ಬಲವಾಗುತ್ತದೆ. ಯೆಹೋಶುವ ಕಾಲೇಬರಿಗೆ ಹೀಗೇ ಆಯಿತು. ವಾಗ್ದತ್ತ ದೇಶವನ್ನು ಸಂಚರಿಸಿ ನೋಡಲು ಹೋದಾಗ ಅವರು ಯೆಹೋವನಲ್ಲಿ ನಂಬಿಕೆ ತೋರಿಸಿದರು. ಸಮಯ ಕಳೆದಂತೆ ಯೆಹೋವನು ಹೇಗೆಲ್ಲಾ ತಮಗೆ ಸಹಾಯ ಮಾಡುತ್ತಿದ್ದಾನೆಂದು ನೋಡಿದಾಗಲೆಲ್ಲ ಅವರ ನಂಬಿಕೆ ಹೆಚ್ಚುತ್ತಾ ಹೋಯಿತು. ಹಾಗಾಗಿ ದೃಢ ಭರವಸೆಯಿಂದ ಯೆಹೋಶುವನು ಇಸ್ರಾಯೇಲ್ಯರಿಗೆ ಹೀಗನ್ನಲು ಸಾಧ್ಯವಾಯಿತು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ.” ಅವನು ನಂತರ ಹೇಳಿದ್ದು: “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ; ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ. . . . ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” (ಯೆಹೋ. 23:14; 24:14, 15) ಯೆಹೋವನ ಮೇಲೆ ಭರವಸೆಯಿಟ್ಟು ಆತನು ವೈಯಕ್ತಿಕವಾಗಿ ನಮಗೆ ಹೇಗೆ ಸಹಾಯ ಮಾಡುತ್ತಾನೆಂದು ಅನುಭವಿಸಿದಾಗ ನಮ್ಮ ನಂಬಿಕೆ ಇನ್ನೂ ಬಲವಾಗುತ್ತದೆ.—ಕೀರ್ತ. 34:8.

ನಮ್ಮ ನಂಬಿಕೆಯನ್ನು ಹೇಗೆ ತೋರಿಸಬಹುದು?

12. ನಮಗೆ ಬಲವಾದ ನಂಬಿಕೆಯಿದೆ ಎಂದು ಹೇಗೆ ತೋರಿಸಬಹುದು?

12 ನಮಗೆ ಬಲವಾದ ನಂಬಿಕೆಯಿದೆ ಎಂದು ಹೇಗೆ ತೋರಿಸಬಹುದು? ಶಿಷ್ಯ ಯಾಕೋಬನು ಹೀಗಂದನು: “ನನ್ನ ಕ್ರಿಯೆಗಳ ಮೂಲಕ ನನ್ನ ನಂಬಿಕೆಯನ್ನು ತೋರಿಸುತ್ತೇನೆ.” (ಯಾಕೋ. 2:18) ನಮಗೆ ಬಲವಾದ ನಂಬಿಕೆಯಿದೆ ಎಂದು ನಮ್ಮ ಕ್ರಿಯೆಗಳು ತೋರಿಸುತ್ತವೆ. ಹೇಗೆಂದು ನೋಡೋಣ.

ಸೇವೆಯಲ್ಲಿ ತಮ್ಮಿಂದಾದ ಎಲ್ಲವನ್ನೂ ಮಾಡುವವರು ತಮಗಿರುವ ಬಲವಾದ ನಂಬಿಕೆಯನ್ನು ತೋರಿಸುತ್ತಾರೆ (ಪ್ಯಾರ 13 ನೋಡಿ)

13. ನಮ್ಮ ನಂಬಿಕೆಯನ್ನು ಸಾರುವ ಕೆಲಸದ ಮೂಲಕ ಹೇಗೆ ತೋರಿಸುತ್ತೇವೆ?

13 ನಮ್ಮ ನಂಬಿಕೆ ತೋರಿಸುವ ಒಂದು ಅತ್ಯುತ್ತಮ ವಿಧ ಸಾರುವ ಕೆಲಸದಲ್ಲಿ ತೊಡಗುವುದೇ. ಏಕೆ? ಅದನ್ನು ಮಾಡುವಾಗ ಅಂತ್ಯ ಹತ್ತಿರವಿದೆ, ಅದು “ಬಂದೇ ಬರುವದು” ತಡವಾಗದು ಎಂಬ ವಿಷಯವನ್ನು ನಂಬುತ್ತೇವೆಂದು ತೋರಿಸುತ್ತೇವೆ. (ಹಬ. 2:3) ನಮ್ಮ ನಂಬಿಕೆ ಬಲವಾಗಿದೆಯಾ ಇಲ್ಲವಾ ಎಂದು ತಿಳಿಯಲು ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ಸಾರುವ ಕೆಲಸವನ್ನು ನಾನೆಷ್ಟು ಮುಖ್ಯವೆಂದು ಎಣಿಸುತ್ತೇನೆ? ದೇವರ ಬಗ್ಗೆ ಬೇರೆಯವರಿಗೆ ತಿಳಿಸಲು ನನ್ನಿಂದಾದ ಎಲ್ಲವನ್ನೂ ಮಾಡುತ್ತೇನಾ? ಯೆಹೋವನ ಸೇವೆಯಲ್ಲಿ ಇನ್ನಷ್ಟನ್ನು ಮಾಡಲು ಬೇರೆಬೇರೆ ವಿಧಗಳಿಗಾಗಿ ಹುಡುಕುತ್ತೇನಾ?’ (2 ಕೊರಿಂ. 13:5) ‘ರಕ್ಷಣೆಗಾಗಿ ಬಹಿರಂಗ ಪ್ರಕಟನೆ’ ಮಾಡುವ ಮೂಲಕ ಅಂದರೆ ಸುವಾರ್ತೆ ಸಾರುವ ಮೂಲಕ ನಮ್ಮ ನಂಬಿಕೆ ಎಷ್ಟು ಬಲವಾಗಿದೆ ಎಂದು ತೋರಿಸೋಣ.—ರೋಮನ್ನರಿಗೆ 10:10 ಓದಿ.

14, 15. (ಎ) ನಮ್ಮ ನಂಬಿಕೆಯನ್ನು ದಿನನಿತ್ಯದ ಜೀವನದಲ್ಲಿ ಹೇಗೆ ತೋರಿಸಬಹುದು? (ಬಿ) ಬಲವಾದ ನಂಬಿಕೆಯು ಕ್ರಿಯೆಯಲ್ಲಿ ತೋರಿಬಂದ ಅನುಭವವೊಂದನ್ನು ಹೇಳಿ.

14 ದಿನನಿತ್ಯದ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನು ಸಹಿಸುವಾಗಲೂ ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸುತ್ತೇವೆ. ಅನಾರೋಗ್ಯ, ನಿರುತ್ತೇಜನ, ಖಿನ್ನತೆ, ಬಡತನ ಅಥವಾ ಬೇರಾವುದೇ ಸಮಸ್ಯೆಗಳು ಬಂದಾಗ ಯೆಹೋವ ಮತ್ತು ಯೇಸು “ಸಮಯೋಚಿತವಾದ ಸಹಾಯ” ಕೊಡುತ್ತಾರೆಂಬ ನಂಬಿಕೆ ನಮ್ಮಲ್ಲಿರಬೇಕು. (ಇಬ್ರಿ. 4:16) ಸಹಾಯಕ್ಕಾಗಿ ಯೆಹೋವನನ್ನು ಬೇಡಿಕೊಂಡಾಗ ಆತನಲ್ಲಿ ನಮಗೆ ನಂಬಿಕೆಯಿದೆ ಎಂದು ತೋರಿಸುತ್ತೇವೆ. “ಅನುದಿನದ ಆಹಾರವನ್ನು ಪ್ರತಿದಿನ” ಕೊಡುವಂತೆ ಯೆಹೋವನನ್ನು ಕೇಳಬಹುದೆಂದು ಯೇಸು ನಮಗೆ ಹೇಳಿದ್ದಾನೆ. (ಲೂಕ 11:3) ನಮಗೆ ಅಗತ್ಯವಿರುವ ವಿಷಯಗಳನ್ನು ಯೆಹೋವನು ಕೊಡುತ್ತಾನೆಂದು ಬೈಬಲ್‍ನಲ್ಲಿರುವ ವೃತ್ತಾಂತಗಳು ಸಾಬೀತುಪಡಿಸುತ್ತವೆ. ಉದಾಹರಣೆಗೆ ಇಸ್ರಾಯೇಲಿನಲ್ಲಿ ಭೀಕರ ಕ್ಷಾಮ ಬಂದಾಗ ಎಲೀಯನಿಗೆ ಆತನು ಆಹಾರ, ನೀರನ್ನು ದಯಪಾಲಿಸಿದನು. “ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ, ಮಾಂಸ ಇವುಗಳನ್ನು ತಂದುಕೊಡುತ್ತಿದ್ದವು. . . . ಹಳ್ಳದ ನೀರು ಅವನಿಗೆ ಪಾನವಾಗಿತ್ತು” ಎನ್ನುತ್ತದೆ ಬೈಬಲ್‌. (1 ಅರ. 17:3-6) ಅಗತ್ಯವಿರುವ ವಿಷಯಗಳನ್ನು ಯೆಹೋವನು ನಮಗೂ ಕೊಡುತ್ತಾನೆಂಬ ನಂಬಿಕೆ ನಮಗಿದೆ.

ದಿನನಿತ್ಯದ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆಗಳನ್ನು ಸಹಿಸುವಾಗ ಯೆಹೋವನ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸುತ್ತೇವೆ (ಪ್ಯಾರ 14 ನೋಡಿ)

15 ಬೈಬಲ್‌ ತತ್ವಗಳನ್ನು ಅನ್ವಯಿಸಿದಾಗ ನಮ್ಮ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳಲು ನಮ್ಮಿಂದಾಗುತ್ತದೆ ಎಂಬ ದೃಢ ಭರವಸೆ ನಮಗಿದೆ. ಏಷ್ಯದಲ್ಲಿರುವ ರೆಬೆಕ್ಕ ಎಂಬ ವಿವಾಹಿತ ಸಹೋದರಿಯ ಅನುಭವ ನೋಡಿ. ಅವರು ಮತ್ತು ಅವರ ಕುಟುಂಬ ಹೇಗೆ ಮತ್ತಾಯ 6:33, ಜ್ಞಾನೋಕ್ತಿ 10:4 ರ ತತ್ವಗಳನ್ನು ಅನ್ವಯಿಸಿದರೆಂದು ತಿಳಿಸುತ್ತಾರೆ. ಅವರ ಗಂಡ ಮಾಡುತ್ತಿದ್ದ ಉದ್ಯೋಗದಿಂದ ಯೆಹೋವನೊಟ್ಟಿಗಿನ ಸಂಬಂಧಕ್ಕೆ ಹಾನಿ ಇದೆ ಎಂದು ತಿಳಿದುಬಂದಾಗ ಅವರದನ್ನು ಬಿಟ್ಟುಬಿಟ್ಟರು ಎನ್ನುತ್ತಾರೆ ರೆಬೆಕ್ಕ. ಅವರಿಗೆ ನಾಲ್ಕು ಮಂದಿ ಮಕ್ಕಳು. ಹಾಗಾಗಿ ಹೊಟ್ಟೆಪಾಡಿಗೋಸ್ಕರ ಗಂಡಹೆಂಡತಿ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುವ ಕೆಲಸವನ್ನು ಆರಂಭಿಸಿದರು. ಇವರು ಶ್ರಮಪಟ್ಟು ಮಾಡಿದ ಈ ಕೆಲಸದಿಂದಾಗಿ ತಮ್ಮ ಕುಟುಂಬವನ್ನು ನೋಡಿಕೊಳ್ಳಲು ಎಷ್ಟು ಹಣ ಬೇಕೊ ಅಷ್ಟನ್ನು ಸಂಪಾದಿಸಲು ಅವರಿಂದ ಆಗುತ್ತಿತ್ತು. ರೆಬೆಕ್ಕ ಹೀಗನ್ನುತ್ತಾರೆ: “ಯೆಹೋವನು ಯಾವತ್ತೂ ನಮ್ಮ ಕೈಬಿಟ್ಟಿಲ್ಲ ಎಂದು ನಮಗೆ ಗೊತ್ತಾಯಿತು. ಒಂದು ದಿನವೂ ಊಟ ಇಲ್ಲದೆ ಇದ್ದ ಪರಿಸ್ಥಿತಿ ಬರಲಿಲ್ಲ.” ನಿಮ್ಮ ನಂಬಿಕೆಯನ್ನು ಬಲಗೊಳಿಸಿರುವ ಇಂಥ ಅನುಭವ ನಿಮಗೂ ಆಗಿದೆಯಾ?

16. ದೇವರಲ್ಲಿ ಭರವಸೆಯಿಟ್ಟರೆ ಏನಾಗುತ್ತದೆ?

16 ಯೆಹೋವನ ಮಾರ್ಗದರ್ಶನದ ಪ್ರಕಾರ ನಡೆಯುವುದಾದರೆ ಆತನು ನಮಗೆ ಸಹಾಯ ಮಾಡುತ್ತಾನಾ ಎಂದು ನಾವು ಯಾವತ್ತೂ ಸಂಶಯಪಡಬಾರದು. ಹಬಕ್ಕೂಕನ ಮಾತುಗಳನ್ನು ಉಲ್ಲೇಖಿಸುತ್ತಾ ಪೌಲನು ಹೀಗಂದನು: “ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.” (ಗಲಾ. 3:11; ಹಬ. 2:4) ಆದ್ದರಿಂದಲೇ ನಮ್ಮನ್ನು ನಿಜವಾಗಿಯೂ ಸಹಾಯ ಮಾಡಲು ಶಕ್ತನಾಗಿರುವವನ ಮೇಲೆ ನಮಗೆ ಬಲವಾದ ನಂಬಿಕೆಯಿರಬೇಕು. ದೇವರು “ನಮ್ಮಲ್ಲಿ ಕಾರ್ಯನಡಿಸುತ್ತಿರುವ ತನ್ನ ಶಕ್ತಿಗನುಸಾರ ನಾವು ಬೇಡುವುದಕ್ಕಿಂತಲೂ ಗ್ರಹಿಸುವುದಕ್ಕಿಂತಲೂ ಎಷ್ಟೋ ಮಿಗಿಲಾದದ್ದನ್ನು ಅತ್ಯಧಿಕವಾಗಿ ಮಾಡಶಕ್ತನಾಗಿ”ದ್ದಾನೆ ಎಂದು ಪೌಲನು ನೆನಪುಹುಟ್ಟಿಸಿದನು. (ಎಫೆ. 3:20) ಯೆಹೋವನ ಚಿತ್ತವನ್ನು ಮಾಡಲು ತಮ್ಮಿಂದಾದ ಎಲ್ಲವನ್ನೂ ಆತನ ಸೇವಕರು ಮಾಡುತ್ತಾರೆ. ಜೊತೆಗೆ ಅವರು ತಮ್ಮ ಇತಿಮಿತಿಗಳನ್ನು ಸಹ ಮನಸ್ಸಿನಲ್ಲಿಡುತ್ತಾರೆ. ನಮ್ಮೆಲ್ಲಾ ಪರಿಶ್ರಮವನ್ನು ದೇವರು ಆಶೀರ್ವದಿಸುತ್ತಾನೆ ಎಂಬುದಕ್ಕೆ ನಾವೆಷ್ಟು ಕೃತಜ್ಞರಲ್ಲವೇ!

ನಂಬಿಕೆಗಾಗಿ ಕೇಳಿಕೊಂಡಾಗ ಬಂದ ಉತ್ತರ

17. (ಎ) ಯೇಸು ತನ್ನ ಅಪೊಸ್ತಲರಿಗೆ ಹೇಗೆ ಉತ್ತರಿಸಿದನು? (ಬಿ) ಹೆಚ್ಚಿನ ನಂಬಿಕೆಗಾಗಿ ನಾವು ಬೇಡಿಕೊಂಡಾಗ ಯೆಹೋವನು ಉತ್ತರಿಸುತ್ತಾನೆಂದು ನಾವು ಹೇಗೆ ಹೇಳಬಹುದು?

17 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಅಪೊಸ್ತಲರು ಯೇಸುವಿಗೆ ಕೇಳಿದಂತೆ ಇಲ್ಲಿ ವರೆಗೆ ಕಲಿತ ಎಲ್ಲಾ ವಿಷಯಗಳಿಂದ ನಾವೂ ಹೆಚ್ಚು ನಂಬಿಕೆಗಾಗಿ ಕೇಳಬೇಕೆಂದು ಅನಿಸಬಹುದು. (ಲೂಕ 17:5) ತನ್ನ ಅಪೊಸ್ತಲರು ಕೇಳಿಕೊಂಡದ್ದಕ್ಕೆ ಕ್ರಿ.ಶ. 33 ಪಂಚಾಶತ್ತಮದಂದು ಯೇಸು ವಿಶೇಷ ರೀತಿಯಲ್ಲಿ ಉತ್ತರಿಸಿದನು. ಅವರು ಪವಿತ್ರಾತ್ಮವನ್ನು ಪಡೆದಾಗ ದೇವರ ಉದ್ದೇಶದ ಬಗ್ಗೆ ಆಳವಾದ ಅರ್ಥವನ್ನು ಗ್ರಹಿಸಲು ಶಕ್ತರಾದರು. ಇದರಿಂದಾಗಿ ಅವರ ನಂಬಿಕೆ ಬಲಗೊಂಡಿತು. ಫಲಿತಾಂಶ? ಅವರ ಸಮಯದ ವರೆಗೆ ನಡೆದದ್ದರಲ್ಲೇ ಬೃಹತ್‌ ಸಾರುವ ಅಭಿಯಾನವನ್ನು ಆರಂಭಿಸಿದರು. (ಕೊಲೊ. 1:23) ಹೆಚ್ಚು ನಂಬಿಕೆ ಕೊಡುವಂತೆ ನಾವು ಕೇಳಿಕೊಳ್ಳುವಾಗ ನಮ್ಮ ಬಿನ್ನಹವನ್ನೂ ಉತ್ತರಿಸಲಾಗುವುದು ಎಂದು ನಾವು ಎದುರುನೋಡಬಹುದಾ? ‘ತನ್ನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ನಮಗೆ ಕಿವಿಗೊಡುತ್ತಾನೆ’ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ.—1 ಯೋಹಾ. 5:14.

18. ತಮ್ಮ ನಂಬಿಕೆಯನ್ನು ಬಲಗೊಳಿಸುವವರನ್ನು ಯೆಹೋವನು ಹೇಗೆ ಆಶೀರ್ವದಿಸುತ್ತಾನೆ?

18 ಯೆಹೋವನ ಮೇಲೆ ನಮಗೆ ಸಂಪೂರ್ಣ ಭರವಸೆ ಇರುವಾಗ ಆತನಿಗೆ ನಮ್ಮ ಬಗ್ಗೆ ತುಂಬ ಖುಷಿಯಾಗುತ್ತದೆ. ಹೆಚ್ಚಿನ ನಂಬಿಕೆಗಾಗಿ ನಾವು ಕೇಳಿಕೊಂಡಾಗ ಆತನು ದಯಪಾಲಿಸುತ್ತಾನೆ. ಇದರಿಂದಾಗಿ ನಮ್ಮ ನಂಬಿಕೆ ಬಲಗೊಳ್ಳುತ್ತದೆ ಮತ್ತು ‘ದೇವರ ರಾಜ್ಯಕ್ಕೆ ಯೋಗ್ಯರಾಗಿ ಎಣಿಸಲ್ಪಡುತ್ತೇವೆ.’—2 ಥೆಸ. 1:3, 5.

^ ಪ್ಯಾರ. 4 ಈ ಜೀವನ ಕಥೆಗಳನ್ನು ಓದಿ: ಫಾರೆಸ್ಟ್‌ ಲೀ (ಮಾರ್ಚ್ 1, 2001 ಕಾವಲಿನಬುರುಜು), ಅರೀಸ್ಟಾಟಲೀಸ್‌ ಅಪೊಸ್ಟೋಲೀಡೀಸ್‌ (ಫೆಬ್ರವರಿ 1, 2002 ಕಾವಲಿನಬುರುಜು), ಮತ್ತು ಎನ್‌ಲೆಸ್‌ ಮಸ್ಯಾ೦ಗ್‌ (ಸೆಪ್ಟೆಂಬರ್‌ 1, 2003 ಕಾವಲಿನಬುರುಜು), ಜ್ಯಾಕ್‌ ಯೋಹಾನ್ಸನ್‌ (ನವೆಂಬರ್‌ 8, 1998 ಎಚ್ಚರ!)