ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಬದುಕಲ್ಲಿ ದೇವರ ಸಹಾಯಹಸ್ತವನ್ನು ನೋಡುತ್ತಿದ್ದೀರಾ?

ನಿಮ್ಮ ಬದುಕಲ್ಲಿ ದೇವರ ಸಹಾಯಹಸ್ತವನ್ನು ನೋಡುತ್ತಿದ್ದೀರಾ?

‘ಯೆಹೋವನು ತನ್ನ ಸೇವಕರ ಮೇಲೆ ಕೃಪಾಹಸ್ತವನ್ನು ವ್ಯಕ್ತಪಡಿಸುವನು.’ —ಯೆಶಾ. 66:14.

ಗೀತೆಗಳು: 65, 26

1, 2. ದೇವರ ಬಗ್ಗೆ ಬೇರೆಬೇರೆ ಜನರಿಗೆ ಯಾವ ಅಭಿಪ್ರಾಯವಿದೆ?

ನಾವೇನು ಮಾಡುತ್ತೇವೊ ಮಾಡುವುದಿಲ್ಲವೊ ಅದರ ಬಗ್ಗೆ ದೇವರೇನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅನೇಕರು ನೆನಸುತ್ತಾರೆ. ತಮಗೇನೇ ಆದರೂ ದೇವರಿಗೇನು ಚಿಂತೆಯಿಲ್ಲ ಎಂದು ಇನ್ನು ಕೆಲವರ ಅಭಿಪ್ರಾಯ. ಉದಾಹರಣೆಗೆ, ನವೆಂಬರ್‌ 2013ರಲ್ಲಿ ಫಿಲಿಪೀನ್ಸ್‌ಗೆ ಬಡಿದ ಹೈಯಾನ್‌ ಮಹಾ ತೂಫಾನಿನ ನಂತರ ಅಲ್ಲಿನ ಒಂದು ನಗರದ ಮೇಯರ್‌ ಹೀಗಂದರು: “ದೇವರು ಎಲ್ಲೋ ಹೋಗಿದ್ದ ಅನಿಸುತ್ತೆ!”

2 ನಾವೇನೇ ಮಾಡಿದರೂ ದೇವರಿಗೆ ಅದೇನು ಕಾಣಿಸುವುದಿಲ್ಲ ಎಂದು ಬೇರೆಯವರು ನೆನಸುತ್ತಾರೆ. (ಯೆಶಾ. 26:10, 11; 3 ಯೋಹಾ. 11) ಅಪೊಸ್ತಲ ಪೌಲನ ಸಮಯದಲ್ಲೂ ಕೆಲವರು ಹೀಗೆ ಯೋಚಿಸುತ್ತಿದ್ದರು. ಅವರ ಬಗ್ಗೆ ಪೌಲನು ಹೀಗಂದನು: “ಅವರು ದೇವರ ನಿಷ್ಕೃಷ್ಟ ಜ್ಞಾನವನ್ನು ಅಂಗೀಕರಿಸಲಿಲ್ಲ” ಅಂದರೆ ದೇವರನ್ನು ಅಂಗೀಕರಿಸಲಿಲ್ಲ. ಅವರಲ್ಲಿ ಅನೀತಿ, ದುಷ್ಟತನ, ದುರಾಶೆ, ಕೆಟ್ಟತನವಿತ್ತು.—ರೋಮ. 1:28, 29.

3. (ಎ) ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು? (ಬಿ) ಬೈಬಲಿನಲ್ಲಿ ದೇವರ “ಹಸ್ತ” ಯಾವುದಕ್ಕೆ ಸೂಚಿಸುತ್ತದೆ?

3 ನಮ್ಮ ಬಗ್ಗೆ ಏನು? ನಾವೇನೇ ಮಾಡಿದರೂ ಅದೆಲ್ಲವನ್ನೂ ಯೆಹೋವನು ನೋಡುತ್ತಾನೆಂದು ನಮಗೆ ಗೊತ್ತು. ಆದರೆ ಯೆಹೋವನಿಗೆ ನಮ್ಮ ಬಗ್ಗೆ ಆಸಕ್ತಿ ಇದೆ ಎಂದು ನಾವು ನಂಬುತ್ತೇವಾ? ನಮ್ಮ ಬದುಕಲ್ಲಿ ಆತನ ಸಹಾಯಹಸ್ತವನ್ನು ನೋಡುತ್ತಿದ್ದೇವಾ? ಬೈಬಲ್‍ನಲ್ಲಿ ದೇವರ “ಹಸ್ತ” ಎನ್ನುವುದು ಆತನು ಪ್ರಯೋಗಿಸುವ ಶಕ್ತಿಯನ್ನು ಸೂಚಿಸುತ್ತದೆ. ದೇವರು ತನ್ನ ಸೇವಕರಿಗೆ ಸಹಾಯ ಮಾಡಲು ಮತ್ತು ಶತ್ರುಗಳನ್ನು ಸೋಲಿಸಲು ತನ್ನ ಶಕ್ತಿಯನ್ನು ಬಳಸುತ್ತಾನೆ. (ಧರ್ಮೋಪದೇಶಕಾಂಡ 26:8 ಓದಿ.) ಯೇಸು ಒಮ್ಮೆ ಹೇಳಿದ್ದೇನೆಂದರೆ ಕೆಲವರು “ದೇವರನ್ನು ನೋಡುವರು.” (ಮತ್ತಾ. 5:8) ಅವರಲ್ಲಿ ನಾವು ಒಬ್ಬರಾ? ನಾವು ಹೇಗೆ ‘ದೇವರನ್ನು ನೋಡಬಹುದು?’ ತಮ್ಮ ಬದುಕಲ್ಲಿ ದೇವರ ಸಹಾಯಹಸ್ತವನ್ನು ನೋಡಿದ ಮತ್ತು ನೋಡದಿದ್ದವರ ಕೆಲವು ಬೈಬಲ್‌ ಉದಾಹರಣೆಗಳನ್ನು ನೋಡೋಣ. ದೇವರ ಸಹಾಯಹಸ್ತವನ್ನು ನೋಡಲು ನಂಬಿಕೆ ಹೇಗೆ ಸಹಾಯ ಮಾಡುತ್ತದೆಂದೂ ಕಲಿಯಲಿದ್ದೇವೆ.

ಅವರು ದೇವರ ಹಸ್ತವನ್ನು ನೋಡಲು ತಪ್ಪಿಹೋದರು

4. ಇಸ್ರಾಯೇಲ್ಯರ ಶತ್ರುಗಳು ದೇವರ ಹಸ್ತವನ್ನು ನೋಡಲು ಯಾಕೆ ತಪ್ಪಿಹೋದರು?

4 ಹಿಂದಿನ ಕಾಲದಲ್ಲಿ ದೇವರು ಇಸ್ರಾಯೇಲ್ಯರಿಗೆ ಸಹಾಯ ಮಾಡಿದ್ದನ್ನು ನೋಡಲು ಮತ್ತು ಅದರ ಕುರಿತು ಕೇಳಲು ಅನೇಕರಿಗೆ ಅವಕಾಶವಿತ್ತು. ಯೆಹೋವನು ಅದ್ಭುತಗಳನ್ನು ಮಾಡಿ ತನ್ನ ಜನರನ್ನು ಐಗುಪ್ತದಿಂದ ಬಿಡಿಸಿದನು ಮತ್ತು ವಾಗ್ದತ್ತ ದೇಶದಲ್ಲಿ ಅನೇಕ ರಾಜರನ್ನು ಸೋಲಿಸಿದನು. (ಯೆಹೋ. 9:3, 9, 10) ಯೆಹೋವನು ತನ್ನ ಜನರನ್ನು ರಕ್ಷಿಸಿದ್ದನ್ನು ಬೇರೆ ರಾಜರು ನೋಡಿದರೂ, ಕೇಳಿದರೂ ಅವರು “ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವದಕ್ಕೆ ಕೂಡಿಕೊಂಡರು.” (ಯೆಹೋ. 9:1, 2) ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದಾಗ ಆ ರಾಜರಿಗೆ ದೇವರ ಹಸ್ತವನ್ನು ನೋಡುವ ಅವಕಾಶವಿತ್ತು. ಉದಾಹರಣೆಗೆ, ಒಮ್ಮೆ ಯೆಹೋವನ ಮಹಾ ಶಕ್ತಿಯಿಂದಾಗಿ “ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿ ತೀರಿಸುವ ವರೆಗೆ ಸೂರ್ಯಚಂದ್ರರು ಹಾಗೆಯೇ ನಿಂತರು.” (ಯೆಹೋ. 10:13) ಇಸ್ರಾಯೇಲ್ಯರ ಶತ್ರುಗಳ ಹೃದಯಗಳು “ಕಠಿಣ”ವಾಗುವಂತೆ ಯೆಹೋವನು ಬಿಟ್ಟದ್ದರಿಂದ ಅವರು ಇಸ್ರಾಯೇಲ್ಯರೊಟ್ಟಿಗೆ ಯುದ್ಧ ಮಾಡಿದರು. (ಯೆಹೋ. 11:20) ಯೆಹೋವನೇ ಇಸ್ರಾಯೇಲ್ಯರಿಗಾಗಿ ಯುದ್ಧ ಮಾಡುತ್ತಿದ್ದಾನೆಂಬ ವಿಷಯವನ್ನು ಒಪ್ಪಿಕೊಳ್ಳಲು ಈ ಶತ್ರುಗಳು ತಪ್ಪಿಹೋದರು. ಹಾಗಾಗಿ ಯುದ್ಧ ಮಾಡಿ ಸೋತು ಹೋದರು.

5. ದುಷ್ಟ ರಾಜನಾದ ಆಹಾಬನು ಏನನ್ನು ನಂಬಲು ತಪ್ಪಿಹೋದನು?

5 ದುಷ್ಟ ರಾಜ ಆಹಾಬನಿಗೂ ದೇವರ ಹಸ್ತವನ್ನು ನೋಡುವ ಅವಕಾಶ ಅನೇಕ ಬಾರಿ ಇತ್ತು. ಎಲೀಯ ಅವನಿಗೆ ಹೀಗಂದನು: “ನಾನು ಸೂಚಿಸಿದ ಹೊರತು . . . ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ.” (1 ಅರ. 17:1) ಇದು ಸಾಧ್ಯವಾದದ್ದು ಯೆಹೋವನ ಹಸ್ತದಿಂದಲೇ. ಆದರೆ ಇದನ್ನು ನಂಬಲು ಆಹಾಬನು ತಪ್ಪಿಹೋದನು. ನಂತರ ಎಲೀಯ ಯೆಹೋವನಿಗೆ ಪ್ರಾರ್ಥನೆ ಮಾಡಿದಾಗ ಆಕಾಶದಿಂದ ಬೆಂಕಿಯನ್ನು ಕಳುಹಿಸುವ ಮೂಲಕ ಯೆಹೋವನು ಅವನ ಪ್ರಾರ್ಥನೆಗೆ ಉತ್ತರ ಕೊಟ್ಟನು. ಆಹಾಬ ಇದನ್ನು ಕಣ್ಣಾರೆ ಕಂಡನು. ನಂತರ ಕ್ಷಾಮವನ್ನು ನಿಲ್ಲಿಸಲಿಕ್ಕಾಗಿ ಯೆಹೋವನು ದೊಡ್ಡ ಮಳೆ ತರುವನೆಂದು ಎಲೀಯನು ಆಹಾಬನಿಗೆ ಹೇಳಿದನು. (1 ಅರ. 18:22-45) ಈ ಎಲ್ಲಾ ಅದ್ಭುತಗಳನ್ನು ಆಹಾಬ ನೋಡಿದರೂ ಇದಕ್ಕೆಲ್ಲಾ ಕಾರಣ ಯೆಹೋವನ ಶಕ್ತಿಯೆಂದು ನಂಬಲು ತಪ್ಪಿಹೋದನು. ಈ ಉದಾಹರಣೆಗಳಿಂದ ನಾವೇನು ಕಲಿಯಬಹುದು? ನಮ್ಮ ಬದುಕಿನಲ್ಲಿ ದೇವರ ಸಹಾಯಹಸ್ತ ಇರುವುದನ್ನು ಗ್ರಹಿಸಬೇಕು.

ಅವರು ಯೆಹೋವನ ಹಸ್ತವನ್ನು ನೋಡಿದರು

6, 7. ಗಿಬ್ಯೋನ್ಯರು ಮತ್ತು ರಾಹಾಬಳು ಏನನ್ನು ಗ್ರಹಿಸಿದರು?

6 ಗಿಬ್ಯೋನ್ಯರು ಯೆಹೋವನ ಹಸ್ತ ನೋಡಿದರು. ಹೀಗೆ ಅವರು ಸುತ್ತಮುತ್ತಲಿನ ಜನಾಂಗಗಳಿಗಿಂತ ಭಿನ್ನರಾಗಿದ್ದರು. ಇಸ್ರಾಯೇಲ್ಯರ ಜೊತೆ ಯುದ್ಧ ಮಾಡುವ ಬದಲು ಸಮಾಧಾನದಿಂದ ಇರಲು ಬಯಸಿದರು. ಯಾಕೆ? ಯೆಹೋವನ ಬಗ್ಗೆ ಮತ್ತು ಆತನು ಅವರಿಗೋಸ್ಕರ ಮಾಡಿರುವ ಎಲ್ಲಾ ವಿಷಯಗಳ ಬಗ್ಗೆ ಕೇಳಿದ್ದರಿಂದಲೇ ಎಂದು ಅವರು ಹೇಳಿದರು. (ಯೆಹೋ. 9:3, 9, 10) ಇಸ್ರಾಯೇಲ್ಯರಿಗಾಗಿ ಯೆಹೋವನೇ ಯುದ್ಧ ಮಾಡುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುವ ಮೂಲಕ ವಿವೇಕಿಗಳೆಂದು ತೋರಿಸಿದರು.

7 ರಾಹಾಬಳು ಕೂಡ ಯೆಹೋವನ ಹಸ್ತ ನೋಡಿದಳು. ಇವಳು ಇಸ್ರಾಯೇಲ್ಯಳು ಆಗಿರಲಿಲ್ಲ. ಆದರೆ ಯೆಹೋವನು ಐಗುಪ್ತದಿಂದ ತನ್ನ ಜನರನ್ನು ಬಿಡುಗಡೆ ಮಾಡಿದ್ದನ್ನು ಕೇಳಿದ್ದಳು. ಇಬ್ಬರು ಇಸ್ರಾಯೇಲ್ಯ ಗೂಢಚಾರರು ಅವಳ ಮನೆಗೆ ಬಂದಾಗ ಹೀಗಂದಳು: “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು ಬಲ್ಲೆನು.” ತನ್ನನ್ನು, ತನ್ನ ಕುಟುಂಬವನ್ನು ಯೆಹೋವನು ರಕ್ಷಿಸುವನೆಂಬ ನಂಬಿಕೆ ಅವಳಿಗಿತ್ತು. ಯೆಹೋವನ ಮೇಲೆ ನಂಬಿಕೆ ಇಟ್ಟರೆ ತನ್ನ ಸ್ವಂತ ಜನರಿಂದ ಅಪಾಯವಿದೆ ಎಂದು ಗೊತ್ತಿದ್ದರೂ ಅವಳು ಹೀಗೆ ಮಾಡಿದಳು.—ಯೆಹೋ. 2:9-13; 4:23, 24.

8. ಕೆಲವು ಇಸ್ರಾಯೇಲ್ಯರು ದೇವರ ಹಸ್ತ ನೋಡಿದ್ದು ಹೇಗೆ?

8 ಎಲೀಯನ ಪ್ರಾರ್ಥನೆಗೆ ಉತ್ತರವಾಗಿ ಆಕಾಶದಿಂದ ಬೆಂಕಿ ಬಂದದ್ದನ್ನು ಕೆಲವು ಇಸ್ರಾಯೇಲ್ಯರೂ ನೋಡಿದರು. ಆದರೆ ಅವರು ದುಷ್ಟ ರಾಜ ಆಹಾಬನಂತಿರದೆ ಇದನ್ನು ಮಾಡಿದವನು ದೇವರೇ ಎಂದು ಗ್ರಹಿಸಿದರು. “ಯೆಹೋವನೇ ದೇವರು” ಎಂದವರು ಕೂಗಿದರು. (1 ಅರ. 18:39) ಅವರು ಏನನ್ನು ನೋಡಿದರೊ ಅದು ದೇವರ ಶಕ್ತಿಯಿಂದಲೇ ನಡೆಯಿತೆಂದು ಅವರಿಗೆ ಸ್ಪಷ್ಟವಾಯಿತು.

9. ಯೆಹೋವನನ್ನು ಮತ್ತು ಆತನ ಹಸ್ತವನ್ನು ನಾವು ಹೇಗೆ ನೋಡಸಾಧ್ಯ?

9 “ದೇವರನ್ನು ನೋಡುವ” ಅಥವಾ ದೇವರ ಹಸ್ತವನ್ನು ನೋಡುವುದರ ಅರ್ಥವನ್ನು ತಿಳಿಯಲು ನಾವು ಒಳ್ಳೇ ಮತ್ತು ಕೆಟ್ಟ ಉದಾಹರಣೆಗಳನ್ನು ಇಲ್ಲಿವರೆಗೆ ಪರಿಗಣಿಸಿದ್ದೇವೆ. ಯೆಹೋವನ ಬಗ್ಗೆ ಮತ್ತು ಆತನ ಗುಣಗಳ ಬಗ್ಗೆ ತಿಳಿದಾಗ ನಾವು ಆತನ ಹಸ್ತವನ್ನು ‘ಹೃದಯದ ಕಣ್ಣುಗಳಿಂದ’ ನೋಡುತ್ತೇವೆ. (ಎಫೆ. 1:18) ಯೆಹೋವನು ತನ್ನ ಜನರಿಗೆ ಹೇಗೆ ಸಹಾಯ ಮಾಡಿದ್ದಾನೆಂದು ನೋಡಿರುವ ಹಿಂದಿನ ಕಾಲದ ಹಾಗೂ ಈಗಿನ ನಂಬಿಗಸ್ತ ವ್ಯಕ್ತಿಗಳನ್ನು ಅನುಕರಿಸುವಂತೆ ಇದು ನಮ್ಮನ್ನು ಪ್ರೇರಿಸುತ್ತದೆ. ಆದರೆ ದೇವರು ಇಂದು ಜನರಿಗೆ ಸಹಾಯ ಮಾಡುತ್ತಾನೆ ಎಂಬುದಕ್ಕೆ ನಿಜವಾಗಲೂ ಪುರಾವೆ ಇದೆಯಾ?

ಇಂದು ದೇವರ ಸಹಾಯ ಹಸ್ತದ ಪುರಾವೆ

10. ಯೆಹೋವನು ಇಂದು ತನ್ನ ಜನರಿಗೆ ಸಹಾಯ ಮಾಡುತ್ತಾನೆಂಬುದಕ್ಕೆ ಯಾವ ಪುರಾವೆ ಇದೆ? (ಲೇಖನದ ಆರಂಭದ ಚಿತ್ರ ನೋಡಿ.)

10 ಯೆಹೋವನು ಇಂದು ಸಹ ತನ್ನ ಜನರಿಗೆ ಸಹಾಯ ಮಾಡುತ್ತಾನೆಂಬುದಕ್ಕೆ ಅನೇಕ ಪುರಾವೆಗಳಿವೆ. ದೇವರ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿದ ಮತ್ತು ಅದಕ್ಕೆ ಉತ್ತರ ಪಡೆದ ಅನೇಕರ ಅನುಭವಗಳನ್ನು ನಾವು ಆಗಾಗ ಕೇಳುತ್ತೇವೆ. (ಕೀರ್ತ. 53:2) ಉದಾಹರಣೆಗೆ, ಆ್ಯಲನ್‌ ಎಂಬ ಸಹೋದರನು ಫಿಲಿಪೀನ್ಸ್‌ನ ಒಂದು ಚಿಕ್ಕ ದ್ವೀಪದಲ್ಲಿ ಸಾರುತ್ತಿದ್ದಾಗ ಒಬ್ಬ ಹೆಂಗಸನ್ನು ಭೇಟಿಯಾದನು. ಅವಳು ಸಹೋದರನನ್ನು ನೋಡಿದಾಗ ಅಳಲಾರಂಭಿಸಿದಳು. ಯಾಕೆಂದು ವಿವರಿಸುತ್ತಾ ಅವನು ಹೀಗನ್ನುತ್ತಾನೆ: “ಅವತ್ತು ಬೆಳಗ್ಗೆಯೇ ಅವಳು ಯೆಹೋವನಿಗೆ ಪ್ರಾರ್ಥನೆ ಮಾಡಿ ಆತನ ಸಾಕ್ಷಿಗಳು ತನ್ನನ್ನು ಭೇಟಿಯಾಗಲಿ ಎಂದು ಬೇಡಿಕೊಂಡಿದ್ದಳಂತೆ.” ಹದಿವಯಸ್ಸಿನಲ್ಲಿ ಸಾಕ್ಷಿಗಳೊಟ್ಟಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದ ಅವಳು ಮದುವೆ ನಂತರ ಈ ದ್ವೀಪಕ್ಕೆ ಬಂದದ್ದರಿಂದ ಅಧ್ಯಯನ ನಿಂತುಹೋಗಿತ್ತು. ದೇವರು ಅವಳ ಪ್ರಾರ್ಥನೆಗೆ ಇಷ್ಟು ಬೇಗ ಉತ್ತರ ಕೊಟ್ಟದ್ದನ್ನು ನೋಡಿ ಅವಳ ಹೃದಯ ತುಂಬಿ ಬಂದಿತು. ಒಂದೇ ವರ್ಷದಲ್ಲಿ ಯೆಹೋವನಿಗೆ ತನ್ನ ಬದುಕನ್ನು ಸಮರ್ಪಿಸಿದಳು.

ಯೆಹೋವನು ತನ್ನ ಜನರಿಗೆ ಸಹಾಯ ಮಾಡುತ್ತಿರುವುದನ್ನು ನೋಡುತ್ತಿದ್ದೀರಾ? (ಪ್ಯಾರ 11-13 ನೋಡಿ)

11, 12. (ಎ) ಯೆಹೋವನು ತನ್ನ ಸೇವಕರಿಗೆ ಹೇಗೆ ಸಹಾಯಮಾಡುತ್ತಿದ್ದಾನೆ? (ಬಿ) ಯೆಹೋವನು ಒಬ್ಬ ಸಹೋದರಿಗೆ ಹೇಗೆ ಸಹಾಯ ಮಾಡಿದನೆಂದು ವಿವರಿಸಿ.

11 ಯೆಹೋವನ ಅನೇಕ ಸೇವಕರು ಆತನ ಸಹಾಯ ಹಸ್ತವನ್ನು ನೋಡಿರುವುದು ತಮ್ಮ ಕೆಟ್ಟ ಚಟಗಳನ್ನು ನಿಲ್ಲಿಸಲು ಪ್ರಯತ್ನಿಸಿದಾಗ. ಕೆಟ್ಟ ಚಟಗಳೆಂದರೆ ಬೀಡಿ/ಸಿಗರೇಟ್‌, ಮಾದಕ ವಸ್ತುಗಳ ಸೇವನೆ, ಅಥವಾ ಅಶ್ಲೀಲ ಚಿತ್ರಗಳನ್ನು ನೋಡುವ ಚಟ. ಅವರು ತಾವಾಗಿಯೇ ಇದನ್ನು ನಿಲ್ಲಿಸಲು ಪ್ರಯತ್ನಪಟ್ಟರೂ ಆಗಲಿಲ್ಲ ಎನ್ನುತ್ತಾರೆ ಕೆಲವರು. ಆದರೆ ಯೆಹೋವನ ಸಹಾಯ ಕೇಳಿದಾಗ ಆತನು ಅವರಿಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಟ್ಟನು. ಹಾಗಾಗಿ ಕೊನೆಗೂ ಆ ಕೆಟ್ಟ ಚಟಗಳನ್ನು ನಿಲ್ಲಿಸಲು ಸಾಧ್ಯವಾಯಿತು.—2 ಕೊರಿಂ. 4:7; ಕೀರ್ತ. 37:23, 24.

12 ಯೆಹೋವನು ತನ್ನ ಸೇವಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸಲೂ ಸಹಾಯ ಮಾಡುತ್ತಾನೆ. ಉದಾಹರಣೆಗೆ ಎಮಿ ಎಂಬ ಸಹೋದರಿಯ ಬಗ್ಗೆ ನೋಡಿ. ಪೆಸಿಫಿಕ್‌ ಮಹಾಸಾಗರದ ಒಂದು ಚಿಕ್ಕ ದ್ವೀಪದಲ್ಲಿ ರಾಜ್ಯ ಸಭಾಗೃಹ ಮತ್ತು ಮಿಷನರಿ ಮನೆಯನ್ನು ಕಟ್ಟುವುದರಲ್ಲಿ ಸಹಾಯ ಮಾಡಲು ಎಮಿಗೆ ನೇಮಕ ಸಿಕ್ಕಿತು. ಅಲ್ಲಿನ ಸಂಸ್ಕೃತಿ ತುಂಬ ಭಿನ್ನವಾಗಿತ್ತು. ಜೊತೆಗೆ ಆಗಾಗ ಕರೆಂಟ್‌ ಹೋಗುತ್ತಿತ್ತು ಮತ್ತು ನೀರಿನ ಸಮಸ್ಯೆ ಇತ್ತು. ರಸ್ತೆಗಳಲ್ಲಿ ನೀರು ತುಂಬಿರುತ್ತಿತ್ತು. ಅವಳಿಗೆ ತನ್ನ ಕುಟುಂಬದ ನೆನಪು ಕಾಡುತ್ತಿತ್ತು. ಅವಳೊಂದು ಚಿಕ್ಕ ಹೋಟೆಲ್‌ ಕೋಣೆಯಲ್ಲಿ ವಾಸಮಾಡುತ್ತಿದ್ದಳು. ಒಮ್ಮೆ ಅವಳ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಸಹೋದರಿಯ ಮೇಲೆ ರೇಗಾಡಿದಳು. ‘ಛೇ ಹೀಗೆ ಮಾಡಿಬಿಟ್ಟೆನಲ್ಲಾ’ ಎಂದು ಎಮಿಗೆ ತುಂಬ ಬೇಜಾರಾಯಿತು. ಅವಳು ಕೋಣೆಗೆ ಹಿಂದಿರುಗಿದಾಗ ಕರೆಂಟ್‌ ಇರಲಿಲ್ಲ. ಕತ್ತಲಲ್ಲೇ ಯೆಹೋವನಿಗೆ ಪ್ರಾರ್ಥನೆ ಮಾಡಿ ಸಹಾಯಕ್ಕಾಗಿ ಬೇಡಿಕೊಂಡಳು. ಕರೆಂಟ್‌ ಬಂದಾಗ, ಕಾವಲಿನಬುರುಜುವಿನಿಂದ ಗಿಲ್ಯಡ್ ಪದವಿಪ್ರಾಪ್ತಿ ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಓದಿದಳು. ಅವಳು ಎದುರಿಸುತ್ತಿದ್ದ ಸಮಸ್ಯೆಗಳ ಕುರಿತೇ ಆ ಲೇಖನದಲ್ಲಿ ಚರ್ಚಿಸಲಾಗಿತ್ತು. ಅವಳು ಹೀಗಂದಳು: “ಯೆಹೋವನು ನನ್ನ ಹತ್ತಿರ ಮಾತಾಡುತ್ತಿದ್ದಾನೆ ಎಂದು ಆ ರಾತ್ರಿ ನನಗನಿಸಿತು. ನನ್ನ ನೇಮಕವನ್ನು ಮುಂದುವರಿಸಲು ಅದು ನನಗೆ ಸ್ಫೂರ್ತಿ ಕೊಟ್ಟಿತು.”—ಕೀರ್ತ. 44:25, 26; ಯೆಶಾ. 41:10, 13.

13. ಯೆಹೋವನ ಜನರಿಗೆ ಸಾರಲಿಕ್ಕಿರುವ ಹಕ್ಕನ್ನು ಸಮರ್ಥಿಸಲು ಆತನು ಸಹಾಯಮಾಡಿದ್ದಾನೆ ಎಂಬುದಕ್ಕೆ ಯಾವ ಪುರಾವೆ ಇದೆ?

13 ಸುವಾರ್ತೆಯನ್ನು ಸಮರ್ಥಿಸಿ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸಲಿಕ್ಕೂ ಯೆಹೋವನು ತನ್ನ ಜನರಿಗೆ ಸಹಾಯಮಾಡಿದ್ದಾನೆ. (ಫಿಲಿ. 1:7) ಉದಾಹರಣೆಗೆ, ಸಾರುವ ಕೆಲಸವನ್ನು ನಿಲ್ಲಿಸಲು ಕೆಲವು ಸರ್ಕಾರಗಳು ಪ್ರಯತ್ನಿಸಿದಾಗ ನ್ಯಾಯಾಲಯದ ಮೆಟ್ಟಲೇರಿದ್ದೇವೆ. ಬೇರೆಬೇರೆ ದೇಶಗಳ ಉಚ್ಚ ನ್ಯಾಯಾಲಯಗಳಲ್ಲಿ ಹತ್ತಿರಹತ್ತಿರ 268 ಕೇಸುಗಳನ್ನು ಗೆದ್ದಿದ್ದೇವೆ. ಇವುಗಳಲ್ಲಿ 24 ಕೇಸುಗಳನ್ನು ಇಸವಿ 2000ದಿಂದ ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯದಲ್ಲಿ ಗೆದ್ದೆವು. ದೇವರ ಸಹಾಯ ಹಸ್ತವನ್ನು ಯಾರೂ ತಡೆಯಲು ಆಗುವುದಿಲ್ಲವೆಂದು ಇದರಿಂದ ಸ್ಪಷ್ಟವಾಗುತ್ತದಲ್ಲವೇ!—ಯೆಶಾ. 54:17; ಯೆಶಾಯ 59:1 ಓದಿ.

14. ದೇವರು ಆತನ ಜನರೊಟ್ಟಿಗೆ ಇದ್ದಾನೆಂಬುದಕ್ಕೆ ಬೇರಾವ ಪುರಾವೆ ಇದೆ?

14 ಸಾರುವ ಕೆಲಸ ಲೋಕವ್ಯಾಪಕವಾಗಿ ನಡೆಯುತ್ತಿರುವುದು ಕೂಡ ಯೆಹೋವನ ಸಹಾಯಹಸ್ತದ ಪುರಾವೆಯಾಗಿದೆ. (ಮತ್ತಾ. 24:14; ಅ. ಕಾ. 1:8) ಬೇರೆಬೇರೆ ಜನಾಂಗಗಳಿಂದ ಬಂದಿರುವ ಯೆಹೋವನ ಸೇವಕರ ಮಧ್ಯೆ ಇರುವ ಐಕ್ಯವೂ ಯೆಹೋವನ ಸಹಾಯದಿಂದಲೇ ಸಾಧ್ಯ. ಈ ಐಕ್ಯ ಅಪೂರ್ವವಾದದ್ದು! ಇದನ್ನು ನೋಡಿ ಯೆಹೋವನನ್ನು ಆರಾಧಿಸದ ವ್ಯಕ್ತಿಗಳು ಸಹ “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ” ಎಂದು ಒಪ್ಪುತ್ತಾರೆ. (1 ಕೊರಿಂ. 14:25) ದೇವರು ಆತನ ಜನರೊಟ್ಟಿಗೆ ಇದ್ದಾನೆಂಬುದಕ್ಕೆ ಅನೇಕ ಪುರಾವೆಗಳಿವೆ. (ಯೆಶಾಯ 66:14 ಓದಿ.) ವೈಯಕ್ತಿಕವಾಗಿ ನಿಮ್ಮ ಬಗ್ಗೆ ಏನು? ನಿಮ್ಮ ಬದುಕಲ್ಲಿ ಯೆಹೋವನ ಸಹಾಯಹಸ್ತ ನೋಡುತ್ತಿದ್ದೀರಾ?

ಯೆಹೋವನ ಸಹಾಯಹಸ್ತವನ್ನು ನಿಮ್ಮ ಜೀವನದಲ್ಲಿ ನೋಡುತ್ತಿದ್ದೀರಾ?

15. ನಮ್ಮ ಜೀವನದಲ್ಲಿ ದೇವರ ಸಹಾಯಹಸ್ತವನ್ನು ಕೆಲವೊಮ್ಮೆ ನೋಡಲು ತಪ್ಪಿಹೋಗುತ್ತೇವೆ ಯಾಕೆ?

15 ನಮ್ಮ ಜೀವನದಲ್ಲಿ ದೇವರ ಸಹಾಯಹಸ್ತವಿದ್ದರೂ ಕೆಲವೊಮ್ಮೆ ನಾವದನ್ನು ನೋಡಲು ತಪ್ಪಿಹೋಗುತ್ತೇವೆ. ಯಾಕೆ? ನಮಗೆ ತುಂಬ ಸಮಸ್ಯೆಗಳಿರುವಾಗ ಈ ಮುಂಚೆ ಯೆಹೋವನು ಸಹಾಯ ಮಾಡಿದ್ದನ್ನೇ ಮರೆತುಬಿಡುತ್ತೇವೆ. ಎಲೀಯನಿಗೆ ಹೀಗಾಯಿತು. ಅವನು ತುಂಬ ಧೈರ್ಯಶಾಲಿಯಾಗಿದ್ದ. ಆದರೆ ರಾಣಿ ಈಜೆಬೆಲಳು ಅವನನ್ನು ಕೊಲ್ಲಬೇಕೆಂದಿದ್ದಾಗ ಅವನು ಹೆದರಿಹೋದ. ಯೆಹೋವನು ಅವನಿಗೆ ಮುಂಚೆ ಹೇಗೆ ಸಹಾಯ ಮಾಡಿದ್ದಾನೆ ಎಂಬುದನ್ನು ಒಂದು ಕ್ಷಣಕ್ಕೆ ಮರೆತು ಹೋದ. ಅವನಿಗೆ ಸಾಯಬೇಕೆಂದು ಅನಿಸಿತು ಎನ್ನುತ್ತದೆ ಬೈಬಲ್‌. (1 ಅರ. 19:1-4) ಎಲೀಯನು ಸಹಾಯ ಮತ್ತು ಧೈರ್ಯ ಎಲ್ಲಿಂದ ಪಡೆಯಬಹುದಿತ್ತು? ಅವನು ಯೆಹೋವನ ಕಡೆಗೆ ನೋಡಬೇಕಿತ್ತು!—1 ಅರ. 19:14-18.

16. ಸಮಸ್ಯೆಗಳು ಇರುವಾಗಲೂ ನಾವು ಹೇಗೆ ದೇವರನ್ನು ನೋಡಲು ಸಾಧ್ಯ?

16 ಯೋಬ ತನ್ನ ಸಮಸ್ಯೆಗಳಿಗೆ ಎಷ್ಟು ಗಮನ ಕೊಟ್ಟನೆಂದರೆ ವಿಷಯಗಳನ್ನು ಯೆಹೋವನು ನೋಡುವ ರೀತಿಯಲ್ಲಿ ಅವನು ನೋಡಲಿಲ್ಲ. (ಯೋಬ 42:3-6) ಕೆಲವೊಂದು ಸಾರಿ ನಮ್ಮ ಸಮಸ್ಯೆಗಳಿಂದಾಗಿ ನಮಗೂ ಯೆಹೋವನನ್ನು ನೋಡುವುದು ಕಷ್ಟವೆಂದು ಅನಿಸಬಹುದು. ದೇವರು ನಮಗೋಸ್ಕರ ಏನೇನು ಮಾಡಿದ್ದಾನೋ ಅದನ್ನು ನೋಡಲು ನಮಗೆ ಯಾವುದು ಸಹಾಯ ಮಾಡುತ್ತದೆ? ನಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟ ಬೈಬಲ್‌ ವೃತ್ತಾಂತಗಳ, ತತ್ವಗಳ ಕುರಿತು ನಾವು ಧ್ಯಾನಿಸಬೇಕು. ಆಗ ಯೆಹೋವನು ನಮಗೆ ಇನ್ನಷ್ಟು ನೈಜನಾಗುತ್ತಾನೆ. ಆಗ ಯೋಬನಂತೆ ನಾವೂ ಹೀಗನ್ನಬಹುದು: “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.”

ಬೇರೆಯವರು ಯೆಹೋವನನ್ನು ನೋಡಲು ಆತನು ನಿಮ್ಮನ್ನು ಬಳಸುತ್ತಿದ್ದಾನಾ? (ಪ್ಯಾರ 17, 18 ನೋಡಿ)

17, 18. (ಎ) ಯೆಹೋವನ ಸಹಾಯಹಸ್ತವನ್ನು ನಿಮ್ಮ ಬದುಕಲ್ಲಿ ಹೇಗೆ ನೋಡಸಾಧ್ಯ? (ಬಿ) ದೇವರು ಇಂದು ನಮಗೆ ಸಹಾಯಮಾಡುತ್ತಿದ್ದಾನೆ ಎಂದು ತೋರಿಸುವ ಒಂದು ಅನುಭವವನ್ನು ಹಂಚಿಕೊಳ್ಳಿ.

17 ನಿಮ್ಮ ಬದುಕಲ್ಲಿ ಯೆಹೋವನ ಸಹಾಯಹಸ್ತ ಹೇಗೆ ಕಂಡುಬಂದಿರಬಹುದು? ಐದು ಉದಾಹರಣೆಗಳನ್ನು ನೋಡೋಣ. ಮೊದಲು, ಸತ್ಯವನ್ನು ಕಂಡುಹಿಡಿಯಲು ಯೆಹೋವನೇ ನಿಮಗೆ ಸಹಾಯ ಮಾಡಿರಬಹುದು. ಎರಡು, ಕೂಟಗಳಿಗೆ ಹೋಗಿ ಒಂದು ಭಾಷಣ ಕೇಳಿದಾಗ ‘ನನಗೇನು ಬೇಕಿತ್ತೊ ಅದೇ ಈ ಭಾಷಣದಲ್ಲಿತ್ತು’ ಎಂದು ಅನಿಸಿರಬಹುದು. ಮೂರು, ನಿಮ್ಮ ಒಂದು ಪ್ರಾರ್ಥನೆಗೆ ಯೆಹೋವನು ಉತ್ತರಿಸಿದ ಅನುಭವ ನಿಮಗಾಗಿರಬಹುದು. ನಾಲ್ಕು, ಯೆಹೋವನಿಗಾಗಿ ಇನ್ನು ಹೆಚ್ಚನ್ನು ಮಾಡುವ ಬಯಕೆ ನಿಮಗಿದ್ದಾಗ ಆ ಗುರಿಯನ್ನು ಮುಟ್ಟಲು ಯೆಹೋವನು ನಿಮಗೆ ಸಹಾಯ ಮಾಡಿರಬಹುದು. ಐದು, ಯೆಹೋವನ ಸೇವೆಗಾಗಿ ಸಮಯ ಕೊಡದಿದ್ದ ಒಂದು ಕೆಲಸವನ್ನು ನೀವು ಬಿಟ್ಟಾಗ, “ನಾನು ಎಂದಿಗೂ ನಿನ್ನ ಕೈ ಬಿಡುವುದಿಲ್ಲ” ಎಂದು ಆತನು ಕೊಟ್ಟ ಮಾತನ್ನು ಉಳಿಸಿಕೊಂಡದ್ದನ್ನು ನೀವು ನೋಡಿರಬಹುದು. (ಇಬ್ರಿ. 13:5) ಯೆಹೋವನೊಟ್ಟಿಗೆ ನಮ್ಮ ಸಂಬಂಧ ಬಲವಾಗಿದ್ದರೆ ಆತನ ಸಹಾಯಹಸ್ತವನ್ನು ನಮ್ಮ ಜೀವನದಲ್ಲಿ ಸುಲಭವಾಗಿ ನೋಡಲು ಸಾಧ್ಯ.

18 ಕೀನ್ಯ ದೇಶದ ಸಹೋದರಿ ಸಾರಾ ಹೀಗನ್ನುತ್ತಾರೆ: “ನನ್ನ ಒಂದು ಬೈಬಲ್‌ ವಿದ್ಯಾರ್ಥಿಗೆ ಬೈಬಲ್‌ ಅಧ್ಯಯನದ ಬಗ್ಗೆ ಕೃತಜ್ಞತೆ ಇಲ್ಲವೆಂದು ನನಗನಿಸಿತು. ಅವಳ ಬಗ್ಗೆ ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ಅಧ್ಯಯನವನ್ನು ನಿಲ್ಲಿಸಬೇಕಾ ಎಂದು ಯೆಹೋವನಿಗೆ ಕೇಳಿದೆ. ‘ಆಮೆನ್‌’ ಹೇಳಿದ ಕೂಡಲೇ ನನ್ನ ಫೋನ್‌ ರಿಂಗ್‌ ಆಯ್ತು. ನೋಡಿದರೆ ಆ ವಿದ್ಯಾರ್ಥಿಯದ್ದೇ ಕಾಲ್‌ ಆಗಿತ್ತು. ನನ್ನ ಜೊತೆ ಕೂಟಗಳಿಗೆ ಬರಬಹುದಾ ಎಂದು ಕೇಳಿದಳು! ನಾನು ದಂಗಾಗಿ ಹೋದೆ.” ದೇವರು ನಮಗಾಗಿ ಏನು ಮಾಡುತ್ತಿದ್ದಾನೆ ಎಂಬುದಕ್ಕೆ ಗಮನ ಕೊಟ್ಟರೆ ನಾವು ಆತನ ಸಹಾಯಹಸ್ತವನ್ನು ನೋಡಬಹುದು. ಏಷ್ಯಾದ ರೋನಾ ಎಂಬ ಸಹೋದರಿ ಹೇಳುವುದೇನೆಂದರೆ ನಮ್ಮ ಬದುಕಿನಲ್ಲಿ ಯೆಹೋವನು ಹೇಗೆ ಸಹಾಯ ಮಾಡುತ್ತಾನೆಂದು ನೋಡಲು ಸಮಯ ಹಿಡಿಯುತ್ತದೆ. “ಆದರೆ ಅದನ್ನು ನೋಡಲು ಶುರುಮಾಡಿದಾಗ ಯೆಹೋವನಿಗೆ ನಮ್ಮ ಕಡೆಗಿರುವ ಕಾಳಜಿಯನ್ನು ಗ್ರಹಿಸಿ ವಿಸ್ಮಿತರಾಗುತ್ತೇವೆ” ಎಂದು ಕೂಡಿಸಿ ಹೇಳುತ್ತಾರೆ.

19. ದೇವರನ್ನು ನೋಡಲು ನಾವು ಇನ್ನೇನು ಮಾಡಬೇಕು?

19 ‘ದೇವರನ್ನು ನೋಡುವವರು’ “ಹೃದಯದಲ್ಲಿ ಶುದ್ಧ”ರಾಗಿರಬೇಕೆಂದು ಯೇಸು ಹೇಳಿದನು. (ಮತ್ತಾ. 5:8) ಅದರರ್ಥವೇನು? ನಾವು ನಮ್ಮ ಯೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಮತ್ತು ತಪ್ಪಾದದ್ದನ್ನು ಮಾಡುವುದನ್ನು ನಿಲ್ಲಿಸಬೇಕು. (2 ಕೊರಿಂಥ 4:2 ಓದಿ.) ದೇವರನ್ನು ನೋಡಬೇಕಾದರೆ ನಾವು ಆತನೊಟ್ಟಿಗಿರುವ ಸಂಬಂಧವನ್ನು ಬಲಪಡಿಸುತ್ತಾ ಇರಬೇಕೆಂದು ಈ ಲೇಖನದಲ್ಲಿ ಕಲಿತೆವು. ಯೆಹೋವನ ಸಹಾಯಹಸ್ತವನ್ನು ನಮ್ಮ ಜೀವನದಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣಲು ನಂಬಿಕೆ ಹೇಗೆ ಸಹಾಯಮಾಡುತ್ತದೆಂದು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ.