ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪಕರ್ಷಿತರಾಗದೆ ಯೆಹೋವನ ಸೇವೆ ಮಾಡಿ

ಅಪಕರ್ಷಿತರಾಗದೆ ಯೆಹೋವನ ಸೇವೆ ಮಾಡಿ

‘ಮರಿಯಳು . . . ಯೇಸುವಿನ ಮಾತಿಗೆ ಕಿವಿಗೊಡುತ್ತಾ ಇದ್ದಳು. ಮಾರ್ಥಳು ಅನೇಕ ಕೆಲಸಗಳನ್ನು ಮಾಡುತ್ತಾ ಅಪಕರ್ಷಿತಳಾಗಿದ್ದಳು.’—ಲೂಕ 10:39, 40.

ಗೀತೆಗಳು: 94, 134

1, 2. (ಎ) ಯೇಸುವಿಗೆ ಯಾಕೆ ಮಾರ್ಥಳ ಮೇಲೆ ಪ್ರೀತಿ ಇತ್ತು? (ಬಿ) ಅವಳು ಮಾಡಿದ ಯಾವ ತಪ್ಪು ಅವಳು ಪರಿಪೂರ್ಣ ವ್ಯಕ್ತಿ ಅಲ್ಲವೆಂದು ತೋರಿಸಿತು?

ಲಾಜರನ ಸಹೋದರಿ ಮಾರ್ಥಳ ಬಗ್ಗೆ ಯೋಚಿಸುವಾಗ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಮಾರ್ಥಳು ಯೇಸುವಿನ ಒಳ್ಳೇ ಸ್ನೇಹಿತೆಯಾಗಿದ್ದಳು ಮತ್ತು ಅವನಿಗೆ ಅವಳ ಮೇಲೆ ಪ್ರೀತಿ ಇತ್ತೆಂದು ಬೈಬಲ್‌ ಹೇಳುತ್ತದೆ. ಯೇಸು ಪ್ರೀತಿಸಿದ ಮತ್ತು ಗೌರವಿಸಿದ ಸ್ತ್ರೀ ಇವಳೊಬ್ಬಳೇ ಆಗಿರಲಿಲ್ಲ. ಉದಾಹರಣೆಗೆ ಮಾರ್ಥಳ ಸಹೋದರಿ ಮರಿಯಳು ಸಹ ಅವನ ಆಪ್ತ ಸ್ನೇಹಿತೆಯಾಗಿದ್ದಳು. ಯೇಸುವಿಗೆ ತನ್ನ ಅಮ್ಮ ಮರಿಯಳ ಮೇಲೂ ಪ್ರೀತಿ ಇತ್ತು. (ಯೋಹಾ. 11:5; 19:25-27) ಆದರೆ ಅವನಿಗೆ ಮಾರ್ಥಳ ಮೇಲೆ ಯಾಕೆ ಪ್ರೀತಿ ಇತ್ತು?

2 ಯೇಸುವಿಗೆ ಮಾರ್ಥಳ ಮೇಲೆ ಪ್ರೀತಿ ಇತ್ತು ಏಕೆಂದರೆ ಅವಳು ಧಾರಾಳ ಮನಸ್ಸಿನವಳು, ದಯಾಪರಳು, ಶ್ರಮಜೀವಿ ಆಗಿದ್ದಳು. ಎಲ್ಲಕ್ಕಿಂತ ಮಿಗಿಲಾಗಿ ಅವಳಿಗೆ ಬಲವಾದ ನಂಬಿಕೆ ಇತ್ತು. ಯೇಸು ಕಲಿಸಿದ ಎಲ್ಲಾ ವಿಷಯಗಳನ್ನು ಅವಳು ನಂಬಿದಳು. ಅವನೇ ವಾಗ್ದತ್ತ ಮೆಸ್ಸೀಯನು ಎಂಬುದರ ಬಗ್ಗೆ ಅವಳಿಗೆ ಕಿಂಚಿತ್ತು ಸಂಶಯವಿರಲಿಲ್ಲ. (ಯೋಹಾ. 11:21-27) ಆದರೆ ಮಾರ್ಥಳೇನು ಪರಿಪೂರ್ಣ ವ್ಯಕ್ತಿಯಾಗಿರಲಿಲ್ಲ. ನಮ್ಮೆಲ್ಲರಂತೆ ಅವಳೂ ತಪ್ಪುಗಳನ್ನು ಮಾಡಿದಳು. ಉದಾಹರಣೆಗೆ, ಒಮ್ಮೆ ಯೇಸು ಅವರನ್ನು ಭೇಟಿಯಾಗಲು ಹೋದಾಗ ಮಾರ್ಥಳಿಗೆ ಅವಳ ಸಹೋದರಿ ಮರಿಯಳ ಮೇಲೆ ಸಿಟ್ಟು ಬಂತು. “ಕರ್ತನೇ, ನಾನೊಬ್ಬಳೇ ಎಲ್ಲ ಕೆಲಸಗಳನ್ನು ಮಾಡುವಂತೆ ನನ್ನ ಸಹೋದರಿಯು ಬಿಟ್ಟಿರುವುದಕ್ಕೆ ನಿನಗೆ ಚಿಂತೆಯಿಲ್ಲವೆ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳು” ಅಂದಳು. (ಲೂಕ 10:38-42 ಓದಿ.) ಮಾರ್ಥಳು ಯಾಕೆ ಹಾಗೆ ಹೇಳಿದಳು? ಅವಳಿಗೆ ಯೇಸು ಕೊಟ್ಟ ಉತ್ತರದಿಂದ ನಾವೇನು ಕಲಿಯಬಹುದು?

ಮಾರ್ಥಳು ಅಪಕರ್ಷಿತಳಾದಳು

3, 4. (ಎ) ಮರಿಯಳು ಮಾಡಿದ ಯಾವ ವಿಷಯವನ್ನು ಯೇಸು ಮೆಚ್ಚಿದನು? (ಬಿ) ಮಾರ್ಥಳು ಏನನ್ನು ಕಲಿತಳು? (ಲೇಖನದ ಆರಂಭದ ಚಿತ್ರ ನೋಡಿ.)

3 ಮಾರ್ಥ ಮತ್ತು ಮರಿಯ ಯೇಸುವನ್ನು ಮನೆಗೆ ಕರೆದದ್ದಕ್ಕೆ ಅವನಿಗೆ ತುಂಬ ಖುಷಿಯಾಯಿತು. ಆ ಸಮಯವನ್ನು ಅವರಿಗೆ ಅಮೂಲ್ಯ ಸತ್ಯಗಳನ್ನು ಕಲಿಸಲು ಬಳಸಬೇಕೆಂದಿದ್ದನು. ಮರಿಯಳು ಅವನ ಬಳಿ ಕುಳಿತುಕೊಂಡು “ಅವನ ಮಾತಿಗೆ ಕಿವಿಗೊಡುತ್ತಾ ಇದ್ದಳು.” ಮಹಾ ಬೋಧಕನಿಂದ ಏನೆಲ್ಲಾ ಕಲಿಯಲಿಕ್ಕೆ ಆಗುತ್ತದೊ ಅದೆಲ್ಲವನ್ನು ಕಲಿಯುವ ಮನಸ್ಸು ಅವಳಿಗಿತ್ತು. ಮಾರ್ಥಳು ಕೂಡ ಯೇಸುವಿಗೆ ಕಿವಿಗೊಡುವ ಆಯ್ಕೆ ಮಾಡಬಹುದಿತ್ತು. ತನ್ನ ಕೆಲಸವನ್ನು ಬಿಟ್ಟು ಯೇಸುವಿನ ಮಾತಿಗೆ ಗಮನ ಕೊಟ್ಟು ಕೂರುತ್ತಿದ್ದರೆ ಅವಳನ್ನು ಯೇಸು ಖಂಡಿತ ಶ್ಲಾಘಿಸುತ್ತಿದ್ದನು.

4 ಆದರೆ ಮಾರ್ಥ ಅಪಕರ್ಷಿತಳಾದಳು. ಯೇಸುವಿಗಾಗಿ ವಿಶೇಷ ಅಡುಗೆ ಮಾಡುವುದರಲ್ಲಿ ಮತ್ತು ಅವನು ತಮ್ಮ ಮನೆಯಲ್ಲಿ ಇರುವವರೆಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದರಲ್ಲೇ ಮುಳುಗಿದ್ದಳು. ಮರಿಯಳು ತನಗೆ ಸಹಾಯ ಮಾಡದಿದ್ದ ಕಾರಣ ಮಾರ್ಥಳಿಗೆ ಕಿರಿಕಿರಿ ಆಯಿತು. ಅದರ ಬಗ್ಗೆ ಯೇಸುವಿಗೆ ದೂರಿದಳು. ಮಾರ್ಥಳು ತನಗಾಗಿ ತುಂಬ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ಯೇಸುವಿಗೆ ಗೊತ್ತಾಯಿತು. ಆದ್ದರಿಂದ ಅವನು ದಯೆಯಿಂದ ಹೀಗಂದನು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳ ಬಗ್ಗೆ ಚಿಂತಿತಳಾಗಿದ್ದಿ ಮತ್ತು ಗಲಿಬಿಲಿಗೊಂಡಿದ್ದಿ.” ಬಗೆಬಗೆಯ ಊಟ ಬೇಡ, ಯಾವುದಾದರೂ ಒಂದು ಸಾಕು ಎಂದೂ ಯೇಸು ಹೇಳಿದನು. ತನ್ನ ಮಾತಿಗೆ ಗಮನ ಕೊಟ್ಟದ್ದರಿಂದ ಮರಿಯಳನ್ನು ಯೇಸು ಹೊಗಳಿದನು. ಅವನು ಹೀಗಂದನು: “ಮರಿಯಳಾದರೋ ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಮತ್ತು ಅದು ಅವಳಿಂದ ತೆಗೆಯಲ್ಪಡುವುದಿಲ್ಲ.” ಮರಿಯಳಿಗೆ ಅವತ್ತು ಏನು ಊಟ ಮಾಡಿದಳೆಂದು ನೆನಪಿರಲಿಕ್ಕಿಲ್ಲ. ಆದರೆ ಯೇಸುವಿನಿಂದ ಕಲಿತ ವಿಷಯಗಳನ್ನು ಮತ್ತು ಅವನು ತನ್ನನ್ನು ಶ್ಲಾಘಿಸಿದ ರೀತಿಯನ್ನು ಅವಳು ಯಾವತ್ತೂ ಮರೆತಿರಲಿಕ್ಕಿಲ್ಲ. 60ಕ್ಕಿಂತ ಹೆಚ್ಚು ವರ್ಷಗಳ ನಂತರ ಅಪೊಸ್ತಲ ಯೋಹಾನನು ಹೀಗೆ ಬರೆದನು: ‘ಯೇಸುವಿಗೆ ಮಾರ್ಥ ಮತ್ತು ಅವಳ ಸಹೋದರಿಯ ಮೇಲೆ ಪ್ರೀತಿ ಇತ್ತು.’ (ಯೋಹಾ. 11:5) ಈ ಪ್ರೇರಿತ ಮಾತುಗಳು ಯೇಸು ಪ್ರೀತಿಯಿಂದ ಕೊಟ್ಟ ತಿದ್ದುಪಾಟನ್ನು ಮಾರ್ಥಳು ಸ್ವೀಕರಿಸಿ ತನ್ನ ಉಳಿದ ಜೀವನವನ್ನು ಯೆಹೋವನ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಕಳೆದಳು ಎಂದು ತೋರಿಸುತ್ತವೆ.

5. (ಎ) ಹೆಚ್ಚು ಮುಖ್ಯವಾದ ವಿಷಯಗಳ ಮೇಲೆಯೇ ಇಂದು ಗಮನ ಕೇಂದ್ರೀಕರಿಸುವುದು ಯಾಕೆ ವಿಶೇಷವಾಗಿ ಕಷ್ಟವಾಗಿದೆ? (ಬಿ) ಯಾವ ಪ್ರಶ್ನೆಗೆ ಉತ್ತರ ಸಿಗಲಿದೆ?

5 ಯೆಹೋವನ ಸೇವೆಯಿಂದ ನಮ್ಮನ್ನು ಅಪಕರ್ಷಿಸಲು ಬೈಬಲ್‌ ಕಾಲಕ್ಕಿಂತ ಇಂದು ಅನೇಕ ವಿಷಯಗಳಿವೆ ಎಂದು ನಮಗೆ ತಿಳಿದಿದೆ. ತಂತ್ರಜ್ಞಾನವು ನಿಮ್ಮನ್ನು ಯೆಹೋವನ ಸೇವೆಯಿಂದ ಅಪಕರ್ಷಿಸಲು ಬಿಡಬೇಡಿ ಎನ್ನುವುದರ ಬಗ್ಗೆ ಸೆಪ್ಟೆಂಬರ್‌ 15, 1958ರ ಇಂಗ್ಲಿಷ್‌ ಕಾವಲಿನಬುರುಜು ಎಚ್ಚರಿಸಿತು. ಆಗಿನ ಕಾಲದಲ್ಲೇ ಪ್ರತಿದಿನ ಹೊಸಹೊಸ ವಸ್ತುಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ತೋರುತ್ತಿತ್ತು. ರೇಡಿಯೋ, ಸಿನೆಮಾ, ಟಿ.ವಿ., ಥಳಕುಪಳಕಿನ ಪತ್ರಿಕೆಗಳು ಇವೆಲ್ಲಾ ತುಂಬ ಜನಪ್ರಿಯವಾದವು. ಲೋಕದ ಅಂತ್ಯಕ್ಕೆ ನಾವು ಹತ್ತಿರವಾಗುತ್ತಾ ಇದ್ದಂತೆ “ಅಪಕರ್ಷಣೆಗಳು ಹೆಚ್ಚಾಗಲಿಕ್ಕಿವೆ” ಎಂದು ಆ ಕಾವಲಿನಬುರುಜು ಹೇಳಿತು. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ನಮ್ಮನ್ನು ಅಪಕರ್ಷಿಸಲು ಅನೇಕ ವಿಷಯಗಳಿವೆ. ಮರಿಯಳಂತೆ ಆಗುತ್ತಾ ಯೆಹೋವನ ಆರಾಧನೆಯಿಂದ ನಮ್ಮ ಗಮನ ಸರಿಯದಂತೆ ನಾವೇನು ಮಾಡಬೇಕು?

ಲೋಕವನ್ನು ಪೂರ್ತಿಯಾಗಿ ಬಳಸಬೇಡಿ

6. ಯೆಹೋವನ ಜನರು ತಂತ್ರಜ್ಞಾನವನ್ನು ಹೇಗೆ ಬಳಸಿದ್ದಾರೆ?

6 ಸುವಾರ್ತೆ ಸಾರಲು ಯೆಹೋವನ ಜನರು ಲೋಕದ ತಂತ್ರಜ್ಞಾನವನ್ನು ಬಳಸಿದ್ದಾರೆ. ಉದಾಹರಣೆಗೆ ಮೊದಲನೇ ಮಹಾ ಯುದ್ಧದ ಮುಂಚೆ ಮತ್ತು ಅದು ನಡೆಯುತ್ತಿದ್ದ ಅವಧಿಯಲ್ಲಿ “ಫೋಟೋ-ಡ್ರಾಮ ಆಫ್‌ ಕ್ರಿಯೇಷನ್‌” ತೋರಿಸಿದರು. ವರ್ಣರಂಜಿತ ಮತ್ತು ಧ್ವನಿಯಿಂದ ಕೂಡಿದ ಸ್ಲೈಡ್ಗಳನ್ನು ಮತ್ತು ಕಡಿಮೆ ಅವಧಿಯ ಚಲನಚಿತ್ರಗಳನ್ನು ಬಳಸಿ ಮಿಲ್ಯಾಂತರ ಜನರಿಗೆ ಸಾರಲು ಅದು ಸಹಾಯಮಾಡಿತು. ಯೇಸು ಕ್ರಿಸ್ತನು ಭೂಮಿಯನ್ನು ಆಳುವಾಗ ಇರುವ ಶಾಂತಿಯ ಪರಿಸ್ಥಿತಿಗಳ ಬಗ್ಗೆ “ಫೋಟೋ-ಡ್ರಾಮ”ದ ಕೊನೆಯಲ್ಲಿ ವರ್ಣಿಸಲಾಗುತ್ತಿತ್ತು. ನಂತರ ಯೆಹೋವನ ಜನರು ರೇಡಿಯೋ ಬಳಸಿ ರಾಜ್ಯ ಸಂದೇಶವನ್ನು ಲೋಕವ್ಯಾಪಕವಾಗಿ ಮಿಲ್ಯಾಂತರ ಜನರಿಗೆ ಪ್ರಸಾರ ಮಾಡಿದರು. ಇಂದು ಜನರು ಎಲ್ಲೇ ಇರಲಿ, ಎಷ್ಟೇ ದೂರದ ಪ್ರದೇಶದಲ್ಲಿರಲಿ ಅವರಿಗೆ ಸುವಾರ್ತೆ ತಲುಪಿಸಲು ನಾವು ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಬಳಸುತ್ತೇವೆ.

ಅನಗತ್ಯ ವಿಷಯಗಳು ನಿಮ್ಮನ್ನು ಯೆಹೋವನ ಆರಾಧನೆಯಿಂದ ಅಪಕರ್ಷಿಸುವಂತೆ ಬಿಡಬೇಡಿ (ಪ್ಯಾರ 7 ನೋಡಿ)

7. (ಎ) ಲೋಕವನ್ನು ಪೂರ್ತಿಯಾಗಿ ಬಳಸುವುದು ಯಾಕೆ ಅಪಾಯಕಾರಿಯಾಗಿದೆ? (ಬಿ) ಯಾವುದರ ಬಗ್ಗೆ ನಾವು ತುಂಬ ಜಾಗ್ರತೆ ವಹಿಸಬೇಕು? (ಪಾದಟಿಪ್ಪಣಿ ನೋಡಿ.)

7 ಲೋಕವನ್ನು ಪೂರ್ತಿಯಾಗಿ ಅನುಭೋಗಿಸಬೇಡಿ ಅಂದರೆ ಬಳಸಬೇಡಿ ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. ಇದರಲ್ಲಿ ಲೋಕವು ನಮ್ಮ ಮುಂದಿಡುವ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವುದು ಸೇರಿದೆ. (1 ಕೊರಿಂಥ 7:29-31 ಓದಿ.) ಕೆಲವೊಂದು ವಿಷಯಗಳು ತಪ್ಪಲ್ಲದಿದ್ದರೂ ತುಂಬ ಸಮಯ ತಿಂದುಹಾಕುತ್ತವೆ. ಉದಾಹರಣೆಗೆ, ಹವ್ಯಾಸಗಳು, ಪುಸ್ತಕಗಳನ್ನು ಓದುವುದು, ಟಿವಿ ನೋಡುವುದು, ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡುವುದು, ಶಾಪಿಂಗ್‌, ನವನವೀನ ಎಲೆಕ್ಟ್ರಾನಿಕ್‌ ಉಪಕರಣಗಳು ಅಥವಾ ದುಬಾರಿಯಾದ ಅನಗತ್ಯ ವಸ್ತುಗಳಿಗಾಗಿ ಹುಡುಕುವುದು, ಆನ್‌ಲೈನ್‌ ಚಾಟ್‌ ಮಾಡುವುದು, ಟೆಕ್ಸ್ಟ್ ಮೆಸೆಜ್‌ ಮತ್ತು ಈ-ಮೇಲ್‌ ಕಳುಹಿಸುವುದು, ವಾರ್ತೆ ಮತ್ತು ಕ್ರೀಡಾ ಸುದ್ದಿಗಳಿಗಾಗಿ ಆಗಾಗ ನೋಡುವುದು. ಸಮಸ್ಯೆಯೇನೆಂದರೆ ಇವೆಲ್ಲ ಕೆಲವರಿಗೆ ಚಟವಾಗಿ ಬಿಡುತ್ತದೆ. * (ಪಾದಟಿಪ್ಪಣಿ ನೋಡಿ.) (ಪ್ರಸಂ. 3:1, 6) ಪ್ರಾಮುಖ್ಯವಲ್ಲದ ವಿಷಯಗಳಲ್ಲಿ ನಾವು ಬಹಳಷ್ಟು ಸಮಯ ಕಳೆದರೆ ಅತೀ ಪ್ರಾಮುಖ್ಯವಾದ ವಿಷಯಕ್ಕೆ ಅಂದರೆ ಯೆಹೋವನ ಆರಾಧನೆಗೆ ನಾವು ಸಾಕಷ್ಟು ಗಮನ ಕೊಡದೇ ಇರಬಹುದು.—ಎಫೆಸ 5:15-17 ಓದಿ.

8. ಲೋಕದ ವಿಷಯಗಳನ್ನು ಪ್ರೀತಿಸದೇ ಇರುವುದು ಏಕೆ ತುಂಬ ಮುಖ್ಯ?

8 ಲೋಕದಲ್ಲಿರುವ ವಿಷಯಗಳ ಕಡೆಗೆ ನಮ್ಮನ್ನು ಆಕರ್ಷಿಸಿ ಯೆಹೋವನ ಸೇವೆಯಿಂದ ಅಪಕರ್ಷಿಸಲು ಏನೆಲ್ಲಾ ಮಾಡಬಹುದೊ ಅದನ್ನೆಲ್ಲಾ ಸೈತಾನನು ಮಾಡುತ್ತಾನೆ. ಅವನು ಇದನ್ನು ಪ್ರಥಮ ಶತಮಾನದಲ್ಲಿ ಮಾಡಿದನು. ಇಂದು ಇನ್ನು ಹೆಚ್ಚಾಗಿ ಮಾಡುತ್ತಾನೆ. (2 ತಿಮೊ. 4:10) ಹಾಗಾಗಿ ಲೋಕದಲ್ಲಿರುವ ವಿಷಯಗಳ ಕಡೆಗೆ ನಮ್ಮ ಮನೋಭಾವ ಏನಾಗಿದೆಯೆಂದು ಆಗಾಗ ಪರೀಕ್ಷಿಸುತ್ತಾ, ಅದರಲ್ಲಿ ಬೇಕಾದ ಹೊಂದಾಣಿಕೆಗಳನ್ನು ಮಾಡಬೇಕು. ಲೋಕದ ವಿಷಯಗಳನ್ನು ಪ್ರೀತಿಸಬಾರದೆಂದು ಬೈಬಲ್‌ ನಮಗೆ ಹೇಳುತ್ತದೆ. ಯೆಹೋವನ ಮೇಲಿರುವ ನಮ್ಮ ಪ್ರೀತಿಯನ್ನು ಬಲವಾಗಿ ಇಟ್ಟುಕೊಳ್ಳಬೇಕು. ಹಾಗೆ ಮಾಡಿದರೆ ಯೆಹೋವನಿಗೆ ವಿಧೇಯರಾಗಲು ಮತ್ತು ಆತನಿಗೆ ಹತ್ತಿರವಾಗಿರಲು ಹೆಚ್ಚು ಸುಲಭವಾಗುತ್ತದೆ.—1 ಯೋಹಾ. 2:15-17.

ತುಂಬ ಮುಖ್ಯವಾದ ವಿಷಯಗಳ ಮೇಲೆ ಗಮನವಿಡಿ

9. (ಎ) ತನ್ನ ಶಿಷ್ಯರು ಯಾವುದರ ಮೇಲೆ ಗಮನವಿಡಲು ಯೇಸು ಕಲಿಸಿಕೊಟ್ಟನು? (ಬಿ) ಈ ವಿಷಯದಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?

9 ಅನೇಕ ವಿಷಯಗಳಿಂದ ಅಪಕರ್ಷಿತಳಾಗಬೇಡ ಎಂದು ಯೇಸು ಮಾರ್ಥಳಿಗೆ ದಯೆಯಿಂದ ಕಲಿಸಿದ್ದನ್ನೇ ತನ್ನ ಶಿಷ್ಯರಿಗೂ ಕಲಿಸಿದನು. ಯೆಹೋವನ ಸೇವೆ ಮತ್ತು ಆತನ ರಾಜ್ಯದ ಮೇಲೆ ನಮ್ಮ ಗಮನವಿಡುವಂತೆ ಯೇಸು ಅವರನ್ನು ಉತ್ತೇಜಿಸಿದನು. (ಮತ್ತಾಯ 6:22, 33 ಓದಿ.) ಈ ವಿಷಯದಲ್ಲಿ ಯೇಸುವೇ ಉತ್ತಮ ಮಾದರಿಯಿಟ್ಟನು. ಅವನ ಬಳಿ ತುಂಬ ವಸ್ತುಗಳೇನು ಇರಲಿಲ್ಲ. ಅವನು ಸ್ವಂತ ಮನೆಯಾಗಲಿ ಜಮೀನಾಗಲಿ ಮಾಡಿಕೊಳ್ಳಲಿಲ್ಲ.—ಲೂಕ 9:58; 19:33-35.

10. ಯೇಸು ನಮಗೆ ಯಾವ ಒಳ್ಳೇ ಮಾದರಿಯನ್ನಿಟ್ಟನು?

10 ಯಾವುದೇ ಸಂಗತಿ ತನ್ನನ್ನು ಸಾರುವ ಕೆಲಸದಿಂದ ಅಪಕರ್ಷಿಸುವಂತೆ ಯೇಸು ಬಿಡಲಿಲ್ಲ. ಉದಾಹರಣೆಗೆ, ಅವನು ಕಪೆರ್ನೌಮ್ ನಗರದಲ್ಲಿ ಜನರಿಗೆ ಕಲಿಸಿ, ಅದ್ಭುತಗಳನ್ನು ಮಾಡಿದ ನಂತರ ಅಲ್ಲಿಂದ ಹೋಗಬೇಡ ಎಂದು ಜನರು ಅವನನ್ನು ಬೇಡಿಕೊಂಡರು. ಆಗ ಯೇಸು ಏನು ಮಾಡಿದನು? ತನ್ನ ಕೆಲಸದ ಮೇಲೆ ಗಮನವಿಟ್ಟನು. ಅವನು ಹೀಗಂದನು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:42-44) ಆದಷ್ಟು ಹೆಚ್ಚು ಜನರಿಗೆ ಸುವಾರ್ತೆ ಸಾರಲು ಮತ್ತು ಕಲಿಸಲು ಯೇಸು ತುಂಬ ದೂರ ದೂರದ ವರೆಗೆ ನಡೆದನು. ಅವನೊಬ್ಬ ಪರಿಪೂರ್ಣ ಮನುಷ್ಯನಾಗಿದ್ದರೂ ಅವನಿಗೆ ಆಯಾಸವಾಗುತ್ತಿತ್ತು. ಅವನು ತುಂಬ ಶ್ರಮಪಟ್ಟು ಕೆಲಸ ಮಾಡುತ್ತಿದ್ದದ್ದರಿಂದಲೇ ಸ್ವಲ್ಪ ವಿಶ್ರಾಂತಿ ತಕ್ಕೊಳ್ಳುತ್ತಿದ್ದನು.—ಲೂಕ 8:23; ಯೋಹಾ. 4:6.

11 ಮುಂದೊಂದು ಸಮಯದಲ್ಲಿ, ಯೇಸು ತನ್ನ ಶಿಷ್ಯರಿಗೆ ಮಹತ್ವದ ವಿಷಯವನ್ನು ಕಲಿಸುತ್ತಿದ್ದಾಗ ಒಬ್ಬ ವ್ಯಕ್ತಿ ಮಧ್ಯ ಬಾಯಿಹಾಕಿ ಹೀಗಂದನು: “ಬೋಧಕನೇ, ಪಿತ್ರಾರ್ಜಿತ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಸಹೋದರನಿಗೆ ಹೇಳು.” ಆದರೆ ಯೇಸು ಈ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಲು ಹೋಗಲಿಲ್ಲ. ಇದಕ್ಕೋಸ್ಕರ ಆತನು ತನ್ನ ಶಿಷ್ಯರಿಗೆ ಕಲಿಸುವುದನ್ನು ನಿಲ್ಲಿಸಲಿಲ್ಲ. ಹೀಗೆ ಅಪಕರ್ಷಿತನಾಗಲಿಲ್ಲ. ಈ ಸಂದರ್ಭವನ್ನು ಬಳಸಿ ಅವನು ಶಿಷ್ಯರಿಗೆ ಒಂದು ಪಾಠ ಕಲಿಸಿದನು. ಅದೇನೆಂದರೆ ಅವರು ಅನೇಕ ವಸ್ತುಗಳನ್ನು ಪಡೆಯುವುದರ ಮೇಲೆಯೇ ಗಮನವಿಟ್ಟರೆ ಅಪಕರ್ಷಿತರಾಗಿ ದೇವರ ಸೇವೆ ಮಾಡುವುದನ್ನು ಬಿಡುವರು.—ಲೂಕ 12:13-15.

12, 13. (ಎ) ಯೆರೂಸಲೇಮಿನಲ್ಲಿ ಕೆಲವು ಗ್ರೀಕರಿಗೆ ಯೇಸು ಮಾಡಿದ ಯಾವ ಕೆಲಸ ನೋಡಿ ಆಶ್ಚರ್ಯವಾಯಿತು? (ಬಿ) ಆ ಜನರನ್ನು ಭೇಟಿಯಾಗಲು ಫಿಲಿಪ್ಪನು ಹೇಳಿದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು?

12 ಯೇಸು ಮನುಷ್ಯನಾಗಿ ಕಳೆದ ಕೊನೆಯ ಕೆಲವು ದಿವಸಗಳಲ್ಲಿ ಆತನಿಗೆ ತುಂಬ ಒತ್ತಡವಿತ್ತು. (ಮತ್ತಾ. 26:38; ಯೋಹಾ. 12:27) ನರಳಾಟದಿಂದ ತುಂಬಿದ ಭಯಂಕರವಾದ ಸಾವು ತನಗಾಗಿ ಕಾದಿದೆ ಎಂದು ಯೇಸುವಿಗೆ ಗೊತ್ತಿತ್ತು. ಸಾಯುವ ಮುಂಚೆ ತನಗೆ ಮಾಡಲು ತುಂಬ ಕೆಲಸವಿದೆ ಎಂದೂ ಅವನಿಗೆ ಗೊತ್ತಿತ್ತು. ಉದಾಹರಣೆಗೆ, ನೈಸಾನ್‌ 9 ಭಾನುವಾರದಂದು ಯೇಸು ಯೆರೂಸಲೇಮಿಗೆ ಕತ್ತೆಯ ಮೇಲೆ ಕುಳಿತು ಬಂದನು. ಅಲ್ಲಿ ಜನಸಮೂಹಗಳು ಅವನನ್ನು ರಾಜನಾಗಿ ಸ್ವಾಗತಿಸಿದವು. (ಲೂಕ 19:38) ಮಾರನೇ ದಿನ, ಆಲಯದಲ್ಲಿ ತುಂಬ ಬೆಲೆಗೆ ವಸ್ತುಗಳನ್ನು, ಪ್ರಾಣಿಪಕ್ಷಿಗಳನ್ನು ಮಾರಿ ಜನರನ್ನು ದೋಚುತ್ತಿದ್ದ ಅತಿಯಾಸೆಯ ವ್ಯಾಪಾರಿಗಳನ್ನು ಯೇಸು ಧೈರ್ಯದಿಂದ ಹೊರಗಟ್ಟಿದನು.—ಲೂಕ 19:45, 46.

13 ಪಸ್ಕ ಹಬ್ಬಕ್ಕೆ ಯೆರೂಸಲೇಮಿಗೆ ಬಂದಿದ್ದ ಕೆಲವು ಗ್ರೀಕರು ಯೇಸು ಮಾಡಿದ ಈ ಕೆಲಸವನ್ನು ನೋಡಿ ಆಶ್ಚರ್ಯಪಟ್ಟರು. ಹಾಗಾಗಿ ಅಪೊಸ್ತಲ ಫಿಲಿಪ್ಪನ ಹತ್ತಿರ ಯೇಸುವನ್ನು ಭೇಟಿಯಾಗಬಹುದಾ ಎಂದು ಕೇಳಿದರು. ಆದರೆ ತನ್ನನ್ನು ಬೆಂಬಲಿಸಲಿಕ್ಕಾಗಿ ಮತ್ತು ಶತ್ರುಗಳಿಂದ ಸಂರಕ್ಷಿಸಲಿಕ್ಕಾಗಿ ಯೇಸುವಿಗೆ ಇಂಥ ಜನಮನ್ನಣೆ ಬೇಕಾಗಿರಲಿಲ್ಲ. ಯಾವುದು ಹೆಚ್ಚು ಮುಖ್ಯವೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ತನಗಾಗಿ ಯೆಹೋವನ ಚಿತ್ತ ಏನಿತ್ತೊ ಅದರ ಮೇಲೆ ಅಂದರೆ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸುವುದರ ಮೇಲೆ ಗಮನವಿಟ್ಟನು. ಹಾಗಾಗಿ ಅವನು ತನ್ನ ಶಿಷ್ಯರಿಗೆ ತಾನು ಬೇಗ ಸಾಯಲಿದ್ದೇನೆ ಮತ್ತು ತನ್ನನ್ನು ಹಿಂಬಾಲಿಸುವ ಎಲ್ಲರೂ ತಮ್ಮ ಜೀವವನ್ನು ತ್ಯಾಗಮಾಡಲು ಸಿದ್ಧರಾಗಿರಬೇಕೆಂದು ಹೇಳಿದನು. ಅವನು ಹೀಗಂದನು: “ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ನಾಶಮಾಡಿಕೊಳ್ಳುತ್ತಾನೆ, ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಪಾಡಿಕೊಳ್ಳುವನು.” ತನ್ನ ಹಿಂಬಾಲಕರನ್ನು “ತಂದೆಯು . . . ಗೌರವಿಸುವನು” ಮತ್ತು ನಿತ್ಯಜೀವ ಕೊಡುವನೆಂದೂ ಯೇಸು ಮಾತುಕೊಟ್ಟನು. ಗ್ರೀಕ್‌ ಜನರಿಗೆ ಈ ಉತ್ತೇಜನ ತುಂಬಿದ ಸಂದೇಶವನ್ನು ಫಿಲಿಪ್ಪನು ಕೊಟ್ಟನು.—ಯೋಹಾ. 12:20-26.

14. ಯೇಸು ತನ್ನ ಜೀವನದಲ್ಲಿ ಸಾರುವ ಕೆಲಸಕ್ಕೆ ಪ್ರಥಮ ಸ್ಥಾನಕೊಟ್ಟನಾದರೂ ಇನ್ನೇನನ್ನೂ ಮಾಡಿದನು?

14 ಯೇಸು ಭೂಮಿಯಲ್ಲಿದ್ದಾಗ ಅವನ ಮುಖ್ಯ ಕೆಲಸ ಸುವಾರ್ತೆ ಸಾರುವುದೇ ಆಗಿತ್ತು. ತನ್ನ ಜೀವನ ಅದರ ಸುತ್ತ ಹೆಣೆದಿತ್ತಾದರೂ ಯಾವಾಗಲೂ ಬರೀ ಸಾರುವುದರ ಬಗ್ಗೆ ಯೋಚಿಸುತ್ತಿರಲಿಲ್ಲ. ಅವನು ಕಡಿಮೆಪಕ್ಷ ಒಂದು ಮದುವೆಗೆ ಹೋಗಿದ್ದರ ಬಗ್ಗೆ ದಾಖಲೆ ಇದೆ. ಅಲ್ಲಿ ನೀರನ್ನು ದ್ರಾಕ್ಷಾಮದ್ಯವನ್ನಾಗಿ ಮಾಡಿದನು. (ಯೋಹಾ. 2:2, 6-10) ತನ್ನ ಸ್ನೇಹಿತರ ಮನೆಗಳಲ್ಲಿ ಮತ್ತು ಸುವಾರ್ತೆಯಲ್ಲಿ ಆಸಕ್ತಿ ತೋರಿಸಿದವರ ಮನೆಗಳಲ್ಲಿ ಊಟವನ್ನೂ ಮಾಡಿದನು. (ಲೂಕ 5:29; ಯೋಹಾ. 12:2) ಇದಕ್ಕಿಂತಲೂ ಮುಖ್ಯವಾಗಿ, ಪ್ರಾರ್ಥನೆ ಮಾಡಲು, ಧ್ಯಾನಿಸಲು, ಹಾಗೂ ವಿಶ್ರಾಂತಿ ಪಡೆಯಲು ಆಗಾಗ ಸಮಯ ಮಾಡಿಕೊಂಡನು.—ಮತ್ತಾ. 14:23; ಮಾರ್ಕ 1:35; 6:31, 32.

‘ಎಲ್ಲ ಭಾರವನ್ನು ತೆಗೆದುಹಾಕಿ’

15. (ಎ) ಕ್ರೈಸ್ತರು ಏನು ಮಾಡಬೇಕೆಂದು ಅಪೊಸ್ತಲ ಪೌಲನು ಹೇಳಿದನು? (ಬಿ) ಅವನು ಹೇಗೆ ಒಳ್ಳೇ ಮಾದರಿಯನ್ನಿಟ್ಟನು?

15 ಕ್ರೈಸ್ತರು ಓಟಗಾರರಂತಿದ್ದಾರೆ ಮತ್ತು ಓಟ ಮುಗಿಸಬೇಕಾದರೆ ತಮ್ಮ ವೇಗವನ್ನು ಕಡಿಮೆಮಾಡುವ ಇಲ್ಲವೇ ಓಡುವುದನ್ನು ನಿಲ್ಲಿಸುವಂತೆ ಮಾಡುವ ಯಾವುದೇ ವಿಷಯವನ್ನು ತೆಗೆದುಹಾಕಬೇಕೆಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 12:1, 2 ಓದಿ.) ಸ್ವತಃ ಅವನೇ ಈ ವಿಷಯದಲ್ಲಿ ಒಳ್ಳೇ ಮಾದರಿಯಿಟ್ಟನು. ಯೆಹೂದಿ ಧರ್ಮಗುರು ಆಗಿದ್ದುಕೊಂಡು ಅವನು ತುಂಬ ಹಣ, ಪ್ರಸಿದ್ಧಿಯನ್ನು ಗಳಿಸಬಹುದಿತ್ತು. ಆದರೆ ಅವನು “ಹೆಚ್ಚು ಪ್ರಮುಖವಾದ ವಿಷಯಗಳ” ಮೇಲೆ ಗಮನವಿಡಲು ಆ ಜೀವನವೃತ್ತಿಯನ್ನು ಬಿಟ್ಟುಬಿಟ್ಟನು. ಅವನು ಸಾರುವ ಕೆಲಸದಲ್ಲಿ ಶ್ರಮಪಟ್ಟು ದುಡಿದನು. ಸಿರಿಯ, ಏಷಿಯಾ ಮೈನರ್‌, ಮಕೆದೋನ್ಯ, ಯೂದಾಯ ಹೀಗೆ ಹಲವಾರು ಸ್ಥಳಗಳಿಗೆ ಪ್ರಯಾಣಿಸಿದನು. ಸ್ವರ್ಗದಲ್ಲಿನ ನಿತ್ಯಜೀವ ಎಂಬ ತನ್ನ ಬಹುಮಾನಕ್ಕಾಗಿ ಎದುರುನೋಡಿದನು. ಅವನಂದದ್ದು: “ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ, . . . ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ.” (ಫಿಲಿ. 1:10; 3:8, 13, 14) ಪೌಲನು ವಿವಾಹಿತನಾಗಿರಲಿಲ್ಲ. ಇದು ಅವನಿಗೆ “ಅಪಕರ್ಷಣೆಯಿಲ್ಲದೆ ಸತತವಾಗಿ ಕರ್ತನ ಸೇವೆಮಾಡುವಂತೆ” ಸಹಾಯಮಾಡಿತು.—1 ಕೊರಿಂ. 7:32-35.

16, 17. (ಎ) ಮದುವೆಯಾಗಿರಲಿ, ಇಲ್ಲದಿರಲಿ ನಾವೆಲ್ಲರೂ ಹೇಗೆ ಪೌಲನ ಮಾದರಿಯನ್ನು ಅನುಸರಿಸಬಲ್ಲೆವು? (ಬಿ) ಮಾರ್ಕ್‌ ಮತ್ತು ಕ್ಲಾರ್‌ ಇದನ್ನು ಹೇಗೆ ಮಾಡಿದರು?

16 ಪೌಲನಂತೆ ಇಂದು ಯೆಹೋವನ ಸೇವಕರಲ್ಲಿ ಕೆಲವರು ಆತನ ಸೇವೆಯಲ್ಲಿ ಹೆಚ್ಚನ್ನು ಮಾಡಲಿಕ್ಕಾಗಿ ಮದುವೆಯಾಗದೇ ಇರುವ ನಿರ್ಣಯ ಮಾಡುತ್ತಾರೆ. (ಮತ್ತಾ. 19:11, 12) ಮದುವೆ ಆಗಿಲ್ಲದವರಿಗೆ, ಮದುವೆಯಾದವರಿಗೆ ಇರುವಷ್ಟು ಕುಟುಂಬ ಜವಾಬ್ದಾರಿಗಳು ಇರುವುದಿಲ್ಲ. ಆದರೆ ಮದುವೆಯಾಗಿರಲಿ, ಇಲ್ಲದಿರಲಿ ಯೆಹೋವನ ಸೇವೆಯಿಂದ ಅಪಕರ್ಷಿಸುವಂಥ ‘ಎಲ್ಲ ಭಾರವನ್ನು ತೆಗೆದುಹಾಕುವುದು’ ನಮ್ಮೆಲ್ಲರಿಗೂ ಸಾಧ್ಯ. ಸಮಯ ಹಾಳುಮಾಡುವುದನ್ನು ನಿಲ್ಲಿಸಿ, ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲಿಕ್ಕಾಗಿ ನಮ್ಮ ರೂಢಿ, ಅಭ್ಯಾಸಗಳನ್ನೇ ನಾವು ಬದಲಾಯಿಸಬೇಕಾದೀತು.

17 ವೇಲ್ಸ್ ದೇಶದಲ್ಲಿ ಹುಟ್ಟಿ ಬೆಳೆದ ಮಾರ್ಕ್‌ ಮತ್ತು ಕ್ಲಾರ್‌ ಎಂಬವರ ಉದಾಹರಣೆ ನೋಡಿ. ಇವರಿಬ್ಬರೂ ಶಾಲಾ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಪಯನೀಯರ್‌ ಸೇವೆ ಆರಂಭಿಸಿ ಮದುವೆ ನಂತರವೂ ಅದನ್ನು ಮುಂದುವರಿಸಿದರು. ಆದರೆ ಅವರಿಗೆ ಇನ್ನೂ ಹೆಚ್ಚನ್ನು ಮಾಡಲು ಮನಸ್ಸಿತ್ತು. ಮಾರ್ಕ್‌ ಹೀಗೆ ವಿವರಿಸುತ್ತಾರೆ: “ನಮ್ಮ ಜೀವನವನ್ನು ಇನ್ನಷ್ಟು ಸರಳ ಮಾಡಲಿಕ್ಕಾಗಿ ಮೂರು ಬೆಡ್‍ರೂಮ್‌ಗಳಿದ್ದ ಮನೆಯನ್ನು ಮಾರಿದೆವು. ಅರೆಕಾಲಿಕ ಕೆಲಸವನ್ನು ಬಿಟ್ಟುಬಿಟ್ಟೆವು. ಹೀಗೆ ನಾವು ಅಂತಾರಾಷ್ಟ್ರೀಯ ನಿರ್ಮಾಣ ಕಾರ್ಯದಲ್ಲಿ ತೊಡಗಲು ಸಾಧ್ಯವಾಯಿತು.” ಕಳೆದ 20 ವರ್ಷಗಳಿಂದ ಅವರು ರಾಜ್ಯ ಸಭಾಗೃಹಗಳ ನಿರ್ಮಾಣ ಕೆಲಸದಲ್ಲಿ ಸಹಾಯಮಾಡಲು ಆಫ್ರಿಕದ ಅನೇಕ ಸ್ಥಳಗಳಿಗೆ ಹೋಗಿದ್ದಾರೆ. ಒಮ್ಮೊಮ್ಮೆ ಅವರ ಹತ್ತಿರ ತೀರ ಕಡಿಮೆ ಹಣ ಇರುತ್ತಿತ್ತು. ಆದರೆ ಯೆಹೋವನು ಯಾವಾಗಲೂ ಅವರನ್ನು ನೋಡಿಕೊಂಡನು. ಕ್ಲಾರ್‌ ಹೀಗನ್ನುತ್ತಾರೆ: “ಯೆಹೋವನ ಸೇವೆಯಲ್ಲಿ ಕಳೆಯುವ ಒಂದೊಂದು ದಿನವೂ ನಮಗೆ ತುಂಬ ತೃಪ್ತಿ ತರುತ್ತದೆ. ಈ ಎಲ್ಲ ವರ್ಷಗಳಲ್ಲಿ ಹಲವಾರು ಸ್ನೇಹಿತರನ್ನು ಮಾಡಿಕೊಂಡಿದ್ದೇವೆ. ಯಾವುದರ ಕೊರತೆಯೂ ನಮಗಾಗಿಲ್ಲ. ಪೂರ್ಣ ಸಮಯ ಯೆಹೋವನ ಸೇವೆ ಮಾಡುವುದರಿಂದ ಬರುವ ಸಂತೋಷಕ್ಕೆ ಹೋಲಿಸಿದರೆ ನಾವು ಮಾಡಿದ ತ್ಯಾಗಗಳು ಏನೂ ಅಲ್ಲ.” ಪೂರ್ಣ ಸಮಯದ ಅನೇಕ ಸೇವಕರಿಗೆ ಇದೇ ರೀತಿ ಅನಿಸುತ್ತದೆ. *—ಪಾದಟಿಪ್ಪಣಿ ನೋಡಿ.

18. ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು?

18 ಯೆಹೋವನ ಸೇವೆಯನ್ನು ನೀವು ಇನ್ನೂ ಉತ್ಸಾಹದಿಂದ ಮಾಡಬಹುದೆಂದು ನಿಮಗನಿಸುತ್ತದಾ? ಹೆಚ್ಚು ಪ್ರಮುಖವಾದ ವಿಷಯಗಳಿಂದ ನಿಮ್ಮನ್ನು ಅಪಕರ್ಷಿಸುವಂಥದ್ದು ಏನಾದರೂ ಇದೆಯಾ? ಹಾಗಿದ್ದರೆ ಏನು ಮಾಡಬಲ್ಲಿರಿ? ಬೈಬಲನ್ನು ಓದುವ ಮತ್ತು ಅಧ್ಯಯನ ಮಾಡುವ ವಿಧವನ್ನು ನೀವು ಉತ್ತಮಗೊಳಿಸಬಹುದು. ಹೇಗೆಂದು ಮುಂದಿನ ಲೇಖನ ವಿವರಿಸುವುದು.

^ ಪ್ಯಾರ. 17ಯಾವುದು ಸರಿ ಎಂದು ತಿಳಿದು ಅದನ್ನು ಮಾಡುವುದು” (ಕಾವಲಿನಬುರುಜು ಮಾರ್ಚ್ 1, 2006) ಎಂಬ ಲೇಖನದಲ್ಲಿ ಹೇಡನ್‌ ಮತ್ತು ಮೆಲಡೀ ಸ್ಯಾನ್‌ಡರ್‌ಸನ್‍ರವರ ಜೀವನ ಕಥೆ ಸಹ ಓದಿ. ಆಸ್ಟ್ರೇಲಿಯದಲ್ಲಿ ಅವರ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಪೂರ್ಣ ಸಮಯ ಸೇವೆಯಲ್ಲಿ ತೊಡಗಲಿಕ್ಕಾಗಿ ಅದನ್ನು ಬಿಟ್ಟರು. ಅವರು ಭಾರತದಲ್ಲಿ ಮಿಷನರಿಗಳಾಗಿ ಸೇವೆಮಾಡುತ್ತಿದ್ದ ಸಮಯದಲ್ಲಿ ಅವರ ಹಣವೆಲ್ಲಾ ಖಾಲಿಯಾದಾಗ ಏನಾಯಿತೆಂದು ಓದಿ.