ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಪ್ರೀತಿಯ ದೇವರು

ಯೆಹೋವನು ಪ್ರೀತಿಯ ದೇವರು

“ದೇವರು ಪ್ರೀತಿಯಾಗಿದ್ದಾನೆ.”—1 ಯೋಹಾನ 4:8, 16.

ಗೀತೆಗಳು: 18, 91

1. (ಎ) ದೇವರ ಮುಖ್ಯ ಗುಣ ಯಾವುದು? (ಬಿ) ಇದನ್ನು ತಿಳಿದಾಗ ನಿಮಗೆ ಹೇಗೆ ಅನಿಸುತ್ತದೆ?

“ದೇವರು ಪ್ರೀತಿಯಾಗಿದ್ದಾನೆ” ಎನ್ನುತ್ತದೆ ಬೈಬಲ್‌. (1 ಯೋಹಾ. 4:8) ಆದರೆ ನಿಜವಾಗಿಯೂ ಇದರ ಅರ್ಥವೇನು? ಯೆಹೋವನಿಗಿರುವ ಬೇರೆಲ್ಲ ಸುಂದರ ಗುಣಗಳ ಹಾಗೆ ಪ್ರೀತಿ ಸಹ ಒಂದು ಅಷ್ಟೇ ಎಂದು ಹೇಳಲಿಕ್ಕಾಗುವುದಿಲ್ಲ. ಯಾಕೆಂದರೆ ಅದು ಆತನ ಅತೀ ಮುಖ್ಯ ಗುಣವಾಗಿದೆ. ಆತನಿಗೆ ಪ್ರೀತಿ ಇದೆ ಅಷ್ಟೇ ಅಲ್ಲ. ಆತನೇ ಪ್ರೀತಿಯಾಗಿದ್ದಾನೆ. ಆತನು ಏನೇ ಮಾಡಿದರೂ ಅದಕ್ಕೆ ಕಾರಣ ಪ್ರೀತಿಯೇ. ಇಡೀ ವಿಶ್ವ ಮತ್ತು ಎಲ್ಲಾ ಜೀವಿಗಳನ್ನು ಸೃಷ್ಟಿ ಮಾಡುವಂತೆ ಪ್ರೇರಿಸಿದ್ದು ಆತನ ಪ್ರೀತಿಯೇ. ಇದಕ್ಕಾಗಿ ನಾವೆಷ್ಟು ಆಭಾರಿಗಳಲ್ಲವೇ!

2. ದೇವರ ಪ್ರೀತಿ ನಮ್ಮಲ್ಲಿ ಯಾವ ಭರವಸೆ ಮೂಡಿಸುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

2 ಯೆಹೋವನಿಗೆ ತನ್ನ ಸೃಷ್ಟಿಯ ಕಡೆಗೆ ದಯೆ ಮತ್ತು ಕೋಮಲ ಭಾವನೆಗಳಿವೆ. ಮಾನವಕುಲಕ್ಕಾಗಿ ಆತನಿಗಿರುವ ಪ್ರೀತಿ ನಮ್ಮಲ್ಲಿ ಈ ಭರವಸೆ ಮೂಡಿಸುತ್ತದೆ: ಮಾನವರಿಗಾಗಿ ತನ್ನ ಉದ್ದೇಶವನ್ನು ಯೆಹೋವನು ಇರುವುದರಲ್ಲೇ ಅತ್ಯುತ್ತಮ ವಿಧದಲ್ಲಿ ಖಂಡಿತ ನೆರವೇರಿಸುವನು. ಅದು ನೆರವೇರುವಾಗ ವಿಧೇಯ ಜನರಿಗೆ ನಿಜ ಸಂತೋಷ ಸಿಗಲಿದೆ. ಉದಾಹರಣೆಗೆ, ಯೆಹೋವನಿಗೆ ಪ್ರೀತಿ ಇರುವುದರಿಂದಲೇ ಆತನು “ನೇಮಿಸಿರುವ ಒಬ್ಬ ಮನುಷ್ಯ” ಅಂದರೆ ಯೇಸು ಕ್ರಿಸ್ತನ ಮೂಲಕ ‘ನಿವಾಸಿತ ಭೂಮಿಗೆ ನೀತಿಗನುಸಾರ ನ್ಯಾಯತೀರಿಸಲಿಕ್ಕಾಗಿ ಒಂದು ದಿನವನ್ನು ಗೊತ್ತುಮಾಡಿದ್ದಾನೆ.’ (ಅ. ಕಾ. 17:31) ಈ ನ್ಯಾಯತೀರ್ಪು ಖಂಡಿತ ನಡೆಯಲಿದೆಯೆಂದು ನಮಗೆ ಪೂರ್ಣ ಭರವಸೆ ಇದೆ. ಇದರಿಂದಾಗಿ ವಿಧೇಯ ಮನುಷ್ಯರಿಗೆ ನಿತ್ಯಕ್ಕೂ ಬಾಳುವ ಸುಂದರ ಭವಿಷ್ಯ ಸಿಗಲಿದೆ.

ಇತಿಹಾಸ ಏನು ತೋರಿಸಿದೆ?

3. ದೇವರು ಮಾನವಕುಲವನ್ನು ಪ್ರೀತಿಸಿರದಿದ್ದರೆ ಭವಿಷ್ಯ ಹೇಗಿರುತ್ತಿತ್ತು?

3 ಪ್ರೀತಿಯು ದೇವರ ಮುಖ್ಯ ಗುಣವಾಗಿರದಿದ್ದರೆ ಮಾನವಕುಲದ ಭವಿಷ್ಯ ಹೇಗಿರುತ್ತಿತ್ತು? ತುಂಬ ಭಯಂಕರವಾಗಿರುತ್ತಿತ್ತು. ಮನುಷ್ಯರ ಆಳ್ವಿಕೆ ನಿಂತುಹೋಗುತ್ತಿರಲಿಲ್ಲ. ಜೊತೆಗೆ, ಪ್ರೀತಿಯಿಲ್ಲದ ಮತ್ತು ದ್ವೇಷ ತುಂಬಿದ ದೇವನಾದ ಸೈತಾನನ ಪ್ರಭಾವದ ಕೆಳಗೇ ಮನುಷ್ಯರು ಇರುತ್ತಿದ್ದರು.—2 ಕೊರಿಂ. 4:4; 1 ಯೋಹಾ. 5:19; ಪ್ರಕಟನೆ 12:9, 12 ಓದಿ.

4. ಯೆಹೋವನು ತನ್ನ ಆಳ್ವಿಕೆಯ ವಿರುದ್ಧದ ದಂಗೆ ಮುಂದುವರಿಯುವಂತೆ ಏಕೆ ಅನುಮತಿಸಿದ್ದಾನೆ?

4 ದೇವರ ಆಳ್ವಿಕೆಯ ವಿರುದ್ಧ ಸೈತಾನನು ದಂಗೆ ಎದ್ದಾಗ ನಮ್ಮ ಮೊದಲ ಹೆತ್ತವರೂ ದಂಗೆ ಏಳುವಂತೆ ಅವರನ್ನು ಪ್ರಭಾವಿಸಿದನು. ದೇವರಿಗೆ ವಿಶ್ವದ ಪರಮಾಧಿಕಾರಿಯಾಗಿರಲು ಇರುವ ಹಕ್ಕನ್ನು ಸೈತಾನನು ಪ್ರಶ್ನಿಸಿದನು. ಇನ್ನೊಂದು ಮಾತಿನಲ್ಲಿ ದೇವರ ಆಳ್ವಿಕೆಗಿಂತ ತನ್ನ ಆಳ್ವಿಕೆಯೇ ಉತ್ತಮ ಆಗಿರುತ್ತದೆಂದು ಅವನು ಹೇಳಿಕೊಂಡನು. (ಆದಿ. 3:1-5) ಸೈತಾನನು ತನ್ನ ಮಾತನ್ನು ನಿಜ ಎಂದು ಸಾಬೀತುಪಡಿಸಲು ಯೆಹೋವನು ಸಮಯ ಕೊಟ್ಟನು. ಹೀಗೆ ವಿವೇಕಯುತ ತೀರ್ಮಾನ ಮಾಡಿದನು. ಮನುಷ್ಯರಿಂದಾಗಲಿ ಸೈತಾನನಿಂದಾಗಲಿ ಒಳ್ಳೇ ಆಳ್ವಿಕೆ ಸಾಧ್ಯವಿಲ್ಲ ಎಂದು ಇದರ ಫಲಿತಾಂಶ ಸ್ಪಷ್ಟವಾಗಿ ತೋರಿಸಿಕೊಡುತ್ತಿದೆ.

5. ಮಾನವರ ಇತಿಹಾಸ ಏನನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ?

5 ಇಂದು ಲೋಕದ ಕೆಟ್ಟತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಕಳೆದ 100 ವರ್ಷಗಳಲ್ಲಿ 10 ಕೋಟಿಗಿಂತ ಹೆಚ್ಚು ಜನರು ಯುದ್ಧಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. “ಕಡೇ ದಿವಸಗಳ” ಬಗ್ಗೆ ಬೈಬಲ್‌ ಹೀಗನ್ನುತ್ತದೆ: “ದುಷ್ಟರೂ ವಂಚಕರೂ . . . ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುವರು.” (2 ತಿಮೊ. 3:1, 13) ಬೈಬಲ್‌ ಹೀಗೂ ಅನ್ನುತ್ತದೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆ. 10:23) ಇತಿಹಾಸ ಈ ಮಾತುಗಳು ಸತ್ಯವೆಂದು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಯೆಹೋವನು ಮನುಷ್ಯರನ್ನು ಸೃಷ್ಟಿಸಿದಾಗ ಅವರಿಗೆ ತಮ್ಮನ್ನೇ ಆಳುವ ಸಾಮರ್ಥ್ಯವನ್ನಾಗಲಿ, ತನ್ನ ಮಾರ್ಗದರ್ಶನವಿಲ್ಲದೆ ಆಳುವ ಹಕ್ಕನ್ನಾಗಲಿ ಕೊಡಲಿಲ್ಲ.

6. ದೇವರು ಏಕೆ ದುಷ್ಟತನವನ್ನು ಅನುಮತಿಸಿದ್ದಾನೆ?

6 ದುಷ್ಟತನವನ್ನು ಒಂದಿಷ್ಟು ಸಮಯದ ವರೆಗೆ ಅನುಮತಿಸುವ ಮೂಲಕ ಯೆಹೋವನು ತನ್ನ ಆಳ್ವಿಕೆ ಮಾತ್ರ ಯಶಸ್ವಿ ಆಗಬಲ್ಲದೆಂದೂ ಸಾಬೀತುಪಡಿಸಿದ್ದಾನೆ. ಭವಿಷ್ಯದಲ್ಲಿ ದೇವರು ದುಷ್ಟ ಜನರನ್ನೆಲ್ಲ ನಾಶಮಾಡುವನು. ಮುಂದಕ್ಕೆ ಯಾರಾದರೂ ಆತನು ಪ್ರೀತಿಯಿಂದ ಆಳುವ ವಿಧದ ಬಗ್ಗೆ ಸವಾಲೆಬ್ಬಿಸಿದರೆ ಆತನು ಅವರಿಗೆ ಅದನ್ನು ಸಾಬೀತುಪಡಿಸಲು ಅವಕಾಶ ಕೊಡಬೇಕಾಗಿಲ್ಲ. ಅವರನ್ನು ತಕ್ಷಣ ನಾಶಮಾಡುವನು. ದೇವರು ಹೀಗೆ ಮಾಡುವುದು ಸರಿನಾ? ಎಂದು ಯಾರಾದರೂ ಕೇಳಿದರೆ, ಈ ಹಿಂದೆ ಮಾನವ ಆಳ್ವಿಕೆಯಿಂದ ತುಂಬ ಕಷ್ಟ ನೋವು ಆಗಿದೆಯೆಂದು ಈ ಪುರಾವೆಯ ಆಧಾರದ ಮೇಲೆ ಆತನು ಹೇಳಬಹುದು. ಆತನು ಮತ್ತೆಂದೂ ದುಷ್ಟತನಕ್ಕೆ ಅವಕಾಶ ಕೊಡುವುದಿಲ್ಲ.

ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ?

7, 8. ಯೆಹೋವನು ಹೇಗೆಲ್ಲ ಆತನ ಪ್ರೀತಿಯನ್ನು ತೋರಿಸಿದ್ದಾನೆ?

7 ಯೆಹೋವನು ತನ್ನ ಮಹಾ ಪ್ರೀತಿಯನ್ನು ಅನೇಕ ವಿಧಗಳಲ್ಲಿ ತೋರಿಸಿದ್ದಾನೆ. ನಮ್ಮ ವಿಶ್ವದ ಗಾತ್ರ ಮತ್ತು ಸೊಬಗಿನ ಬಗ್ಗೆ ಸ್ವಲ್ಪ ಯೋಚಿಸಿ. ಅದರಲ್ಲಿ ಬಿಲಿಯಗಟ್ಟಲೆ ತಾರಾಸಮೂಹಗಳು ಇವೆ. ಪ್ರತಿಯೊಂದು ತಾರಾಸಮೂಹದಲ್ಲಿ ಬಿಲಿಯಗಟ್ಟಲೆ ನಕ್ಷತ್ರಗಳು, ಗ್ರಹಗಳು ಇವೆ. ನಮ್ಮ ಕ್ಷೀರಪಥದಲ್ಲಿರುವ ನಕ್ಷತ್ರಗಳಲ್ಲಿ ಸೂರ್ಯನು ಒಂದು ನಕ್ಷತ್ರ. ಸೂರ್ಯನಿಲ್ಲದೆ ಭೂಮಿಯಲ್ಲಿ ಜೀವಿಗಳು ಬದುಕಲು ಸಾಧ್ಯವೇ ಇಲ್ಲ. ಈ ಎಲ್ಲಾ ಸೃಷ್ಟಿಗಳು ಯೆಹೋವನೇ ಸೃಷ್ಟಿಕರ್ತ ಎಂದು ತೋರಿಸುತ್ತವೆ. ಅವುಗಳಲ್ಲಿ ಆತನ ಗುಣಗಳು ಉದಾಹರಣೆಗೆ, ಶಕ್ತಿ, ವಿವೇಕ, ಪ್ರೀತಿ ತೋರಿಬರುತ್ತವೆ. ಹೌದು, ದೇವರ “ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.”—ರೋಮ. 1:20.

8 ಜೀವವನ್ನು ಪೋಷಿಸಲಿಕ್ಕಾಗಿ ಬೇಕಾಗಿರುವ ಎಲ್ಲವನ್ನು ಯೆಹೋವನು ಭೂಮಿಯಲ್ಲಿ ಇಟ್ಟನು. ಅದರಲ್ಲಿರುವ ಎಲ್ಲದ್ದರಿಂದ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಬದುಕಲು ದೇವರು ಒಂದು ಸುಂದರ ತೋಟವನ್ನು ಮನುಷ್ಯರಿಗಾಗಿ ಉಂಟುಮಾಡಿದನು. ಅವರಿಗೆ ಪರಿಪೂರ್ಣ ಮನಸ್ಸು ಮತ್ತು ದೇಹ ಕೊಟ್ಟು ಶಾಶ್ವತಕ್ಕೂ ಬದುಕುವ ಹಾಗೆ ರಚಿಸಿದನು. (ಪ್ರಕಟನೆ 4:11 ಓದಿ.) ಅದರ ಜೊತೆಗೆ ‘ಎಲ್ಲಾ ಜೀವಿಗಳಿಗೂ ಆಹಾರಕೊಡುತ್ತಾನೆ. ಆತನ ಕೃಪೆಯು [“ನಿಷ್ಠಾವಂತ ಪ್ರೀತಿ,” ನೂತನ ಲೋಕ ಭಾಷಾಂತರ] ಶಾಶ್ವತವಾದದ್ದು.’—ಕೀರ್ತ. 136:25.

9. ಯೆಹೋವನು ಪ್ರೀತಿಯ ದೇವರಾಗಿದ್ದರೂ ಆತನು ಏನನ್ನು ದ್ವೇಷಿಸುತ್ತಾನೆ?

9 ಯೆಹೋವನು ಪ್ರೀತಿಯ ದೇವರಾಗಿದ್ದರೂ ಆತನು ಕೆಟ್ಟದ್ದನ್ನು ದ್ವೇಷಿಸುತ್ತಾನೆ. ಉದಾಹರಣೆಗೆ, ಕೀರ್ತನೆ 5:4-6 ಯೆಹೋವನ ಬಗ್ಗೆ ಹೀಗನ್ನುತ್ತದೆ: “ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ . . . ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ.” ಆತನು ‘ನರಹತ್ಯಮಾಡುವವರನ್ನು ಕಪಟಿಗಳನ್ನು’ ಸಹ ದ್ವೇಷಿಸುತ್ತಾನೆ.

ದುಷ್ಟತನದ ಕೊನೆ ಹತ್ತಿರವಿದೆ

10, 11. (ಎ) ದುಷ್ಟ ಜನರಿಗೆ ಏನಾಗಲಿದೆ? (ಬಿ) ವಿಧೇಯ ಮನುಷ್ಯರಿಗೆ ಯೆಹೋವನು ಯಾವ ಬಹುಮಾನ ಕೊಡುತ್ತಾನೆ?

10 ಯೆಹೋವನು ಸರಿಯಾದ ಸಮಯಕ್ಕೆ ದುಷ್ಟತನವನ್ನು ಇಡೀ ವಿಶ್ವದಿಂದ ತೆಗೆದುಹಾಕಲಿದ್ದಾನೆ ಏಕೆಂದರೆ ಆತನು ಪ್ರೀತಿಯ ದೇವರಾಗಿದ್ದಾನೆ ಮತ್ತು ಕೆಟ್ಟದ್ದನ್ನು ದ್ವೇಷಿಸುತ್ತಾನೆ. ದೇವರ ವಾಕ್ಯ ಹೀಗೆ ಮಾತು ಕೊಡುತ್ತದೆ: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು.” ಯೆಹೋವನ ಶತ್ರುಗಳು “ಹಬೆಯಂತೆ ತೋರಿ ಅಡಗಿಹೋಗುವರು.”—ಕೀರ್ತ. 37:9, 10, 20.

11 ದೇವರ ವಾಕ್ಯ ಹೀಗೂ ಮಾತು ಕೊಟ್ಟಿದೆ: ನಂಬಿಗಸ್ತ ಮನುಷ್ಯರು “ಬಹಳ ಸಮಾಧಾನದಲ್ಲಿ ಆನಂದಪಡುವರು.” “ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.” (ಕೀರ್ತ. 37:11, 29, ಪವಿತ್ರ ಗ್ರಂಥ ಭಾಷಾಂತರ) ಇದು ಖಂಡಿತ ನಡೆಯುತ್ತದೆ ಏಕೆಂದರೆ ನಮ್ಮ ಪ್ರೀತಿಯ ದೇವರು ತನ್ನ ನಂಬಿಗಸ್ತ ಸೇವಕರಿಗೆ ಯಾವಾಗಲೂ ಒಳ್ಳೇದನ್ನೇ ಮಾಡುತ್ತಾನೆ. ಬೈಬಲ್‌ ಹೀಗನ್ನುತ್ತದೆ: “ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” (ಪ್ರಕ. 21:4) ದೇವರ ಪ್ರೀತಿಗೆ ಬೆಲೆ ಕೊಡುವ ವಿಧೇಯ ಮನುಷ್ಯರಿಗೆ ಎಂಥ ಅದ್ಭುತ ಭವಿಷ್ಯ ಅಲ್ಲವೇ!

12. “ನಿರ್ದೋಷಿ” ಯಾರು?

12 ಬೈಬಲ್‌ ಹೀಗನ್ನುತ್ತದೆ: “ನಿರ್ದೋಷಿಯನ್ನು ಗಮನಿಸು, ಯಥಾರ್ಥನನ್ನು ನೋಡು; ಸಮಾಧಾನಕ್ಕೆ ಭವಿಷ್ಯವಿದೆ. ಆದರೆ ಅಪರಾಧಿಗಳೆಲ್ಲರೂ ನಾಶವಾಗುವರು; ದುಷ್ಟರ ಗತಿ ಕಡಿದುಹಾಕಲ್ಪಡುವುದು.” (ಕೀರ್ತ. 37:37, 38, ಪವಿತ್ರ ಗ್ರಂಥ ಭಾಷಾಂತರ) ಯೆಹೋವನ ಬಗ್ಗೆ, ಆತನ ಮಗನ ಬಗ್ಗೆ ತಿಳಿದುಕೊಳ್ಳುವವನು ಮತ್ತು ವಿಧೇಯತೆಯಿಂದ ದೇವರ ಚಿತ್ತ ಮಾಡುವವನೇ ನಿರ್ದೋಷಿ. (ಯೋಹಾನ 17:3 ಓದಿ.) “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎಂಬ ಮಾತನ್ನು ನಿಜವಾಗಲೂ ನಂಬುತ್ತಾನೆ. (1 ಯೋಹಾ. 2:17) ಲೋಕದ ಅಂತ್ಯ ಹತ್ತಿರವಿರುವುದರಿಂದ ನಾವು ‘ಯೆಹೋವನನ್ನು ನಿರೀಕ್ಷಿಸಿ ಆತನ ಮಾರ್ಗವನ್ನು ಅನುಸರಿಸುವುದು’ ತುರ್ತಿನದ್ದಾಗಿದೆ.—ಕೀರ್ತ. 37:34.

ದೇವರು ಪ್ರೀತಿ ತೋರಿಸಿದ ಅತೀ ಶ್ರೇಷ್ಠ ವಿಧ

13. ದೇವರು ಪ್ರೀತಿಯನ್ನು ತೋರಿಸಿದ ಅತೀ ಶ್ರೇಷ್ಠ ವಿಧ ಯಾವುದು?

13 ನಾವು ಅಪರಿಪೂರ್ಣರಾಗಿದ್ದರೂ ದೇವರಿಗೆ ವಿಧೇಯರಾಗಬಹುದು. ಯೆಹೋವನ ಜೊತೆ ಆಪ್ತ ಸಂಬಂಧವನ್ನೂ ಇಟ್ಟುಕೊಳ್ಳಬಹುದು. ಇದು ಸಾಧ್ಯವಾಗುವುದು ದೇವರು ಪ್ರೀತಿ ತೋರಿಸಿದ ಅತೀ ಶ್ರೇಷ್ಠ ವಿಧವಾದ ವಿಮೋಚನಾ ಮೌಲ್ಯದ ಮೂಲಕ. ಯೆಹೋವನು ಒದಗಿಸಿದ ಈ ವಿಮೋಚನಾ ಮೌಲ್ಯದಿಂದಾಗಿ ವಿಧೇಯ ಮನುಷ್ಯರು ಪಾಪಮರಣದಿಂದ ಬಿಡುಗಡೆ ಪಡೆಯಲು ಸಾಧ್ಯ. (ರೋಮನ್ನರಿಗೆ 5:12; 6:23 ಓದಿ.) ಯೇಸು ಲೆಕ್ಕವಿಲ್ಲದಷ್ಟು ಯುಗಗಳ ವರೆಗೆ ಸ್ವರ್ಗದಲ್ಲಿದ್ದಾಗ ದೇವರಿಗೆ ನಂಬಿಗಸ್ತನಾಗಿದ್ದನು. ಹಾಗಾಗಿ ಅವನು ಭೂಮಿಯಲ್ಲೂ ನಂಬಿಗಸ್ತನಾಗಿ ಇರುವನೆಂಬ ಭರವಸೆ ಯೆಹೋವನಿಗಿತ್ತು. ತನ್ನ ಮಗನ ಜೊತೆ ಜನರು ಕೆಟ್ಟದ್ದಾಗಿ ನಡಕೊಂಡದ್ದನ್ನು ನೋಡಿ ಪ್ರೀತಿಯ ತಂದೆಯಾಗಿದ್ದ ಯೆಹೋವನಿಗೆ ತುಂಬ ಸಂಕಟವಾಯಿತು. ಯೇಸು ಇಷ್ಟೊಂದು ನೋವನ್ನು ಅನುಭವಿಸಿದರೂ ಆಳಲಿಕ್ಕೆ ಯೆಹೋವನಿಗಿರುವ ಹಕ್ಕನ್ನು ನಂಬಿಗಸ್ತಿಕೆಯಿಂದ ಬೆಂಬಲಿಸಿದನು. ತುಂಬ ಕಷ್ಟಕರ ಸನ್ನಿವೇಶಗಳಲ್ಲೂ ಒಬ್ಬ ಪರಿಪೂರ್ಣ ಮನುಷ್ಯನು ದೇವರಿಗೆ ನಂಬಿಗಸ್ತಿಕೆಯಿಂದ ಉಳಿಯಲು ಸಾಧ್ಯ ಎಂದು ಯೇಸು ತೋರಿಸಿಕೊಟ್ಟನು.

ಸಿದ್ಧಮನಸ್ಸು ತೋರಿಸಿದ ತನ್ನ ಮಗನನ್ನು ದೇವರು ಪ್ರೀತಿಯಿಂದ ಭೂಮಿಗೆ ಕಳುಹಿಸಿದನು (ಪ್ಯಾರ 13 ನೋಡಿ)

14, 15. ಯೇಸುವಿನ ಸಾವಿನಿಂದ ಮಾನವಕುಲಕ್ಕೆ ಏನು ಸಾಧ್ಯವಾಯಿತು?

14 ಯೇಸು ತುಂಬ ಕಠಿಣವಾದ ಕಷ್ಟಗಳ ಮಧ್ಯೆಯೂ ದೇವರಿಗೆ ನಿಷ್ಠನಾಗಿ ಉಳಿದನು ಮತ್ತು ಆಳಲು ಯೆಹೋವನಿಗಿರುವ ಹಕ್ಕನ್ನು ಬೆಂಬಲಿಸಿದನು. ತನ್ನ ಮರಣದ ಮೂಲಕ ಯೇಸು ವಿಮೋಚನಾ ಮೌಲ್ಯವನ್ನು ಕೊಟ್ಟದ್ದಕ್ಕಾಗಿ ನಾವು ಕೃತಜ್ಞರಾಗಿರಬೇಕು. ಇದರಿಂದಾಗಿ ದೇವರ ಹೊಸ ಲೋಕದಲ್ಲಿ ಮಾನವರಿಗೆ ನಿತ್ಯಕ್ಕೂ ಬದುಕುವ ಅವಕಾಶ ಸಿಗಲಿದೆ. ಅದಕ್ಕಾಗಿ ನಾವು ಆಭಾರಿಗಳಾಗಿರಬೇಕು. ವಿಮೋಚನಾ ಮೌಲ್ಯದ ಮೂಲಕ ಯೆಹೋವನು ಮತ್ತು ಯೇಸು ತೋರಿಸಿದ ಪ್ರೀತಿಯನ್ನು ಅಪೊಸ್ತಲ ಪೌಲನು ಹೀಗೆ ವರ್ಣಿಸಿದನು: “ವಾಸ್ತವದಲ್ಲಿ ನಾವು ಇನ್ನೂ ಬಲಹೀನರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನ ಜನರಿಗೋಸ್ಕರ ಸತ್ತನು. ಒಬ್ಬ ನೀತಿವಂತನಿಗೋಸ್ಕರ ಯಾರಾದರೂ ಸಾಯುವುದು ಅಪರೂಪವೇ; ವಾಸ್ತವದಲ್ಲಿ ಒಬ್ಬ ಒಳ್ಳೆಯ ಮನುಷ್ಯನಿಗಾಗಿ ಯಾವನಾದರೂ ಸಾಯಲು ಒಂದುವೇಳೆ ಧೈರ್ಯಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ.” (ರೋಮ. 5:6-8) ಅಪೊಸ್ತಲ ಯೋಹಾನ ಹೀಗೆ ಬರೆದನು: “ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಆತನು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ ಕಳುಹಿಸಿಕೊಟ್ಟದ್ದರಲ್ಲಿ ಪ್ರೀತಿ ಏನೆಂಬುದು ತೋರಿಬಂತು.”—1 ಯೋಹಾ. 4:9, 10.

15 ಯೇಸು ಹೀಗಂದನು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಅರ್ಪಿಸುವುದು ಯೆಹೋವನ ಮನಸ್ಸಿಗೆ ತುಂಬ ನೋವು ತಂದಿತು. ಆದರೂ ಅರ್ಪಿಸಿದನು. ಮನುಷ್ಯರನ್ನು ಆತನು ಎಷ್ಟು ಪ್ರೀತಿಸುತ್ತಾನೆಂದು ಇದೇ ತೋರಿಸುತ್ತದೆ. ಈ ಪ್ರೀತಿ ಶಾಶ್ವತವಾದದ್ದು. ಪೌಲನು ಹೀಗೆ ಬರೆದನು: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ಸರಕಾರಗಳಾಗಲಿ ಇಂದಿನ ಸಂಗತಿಗಳಾಗಲಿ ಮುಂದೆ ಬರಲಿರುವ ಸಂಗತಿಗಳಾಗಲಿ ಶಕ್ತಿಗಳಾಗಲಿ ಎತ್ತರವಾಗಲಿ ಆಳವಾಗಲಿ ಬೇರೆ ಯಾವುದೇ ಸೃಷ್ಟಿಯಾಗಲಿ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾರದೆಂಬ ಖಾತ್ರಿ ನನಗಿದೆ.”—ರೋಮ. 8:38, 39.

ದೇವರ ರಾಜ್ಯ ಈಗ ಆಳುತ್ತಿದೆ

16. (ಎ) ಮೆಸ್ಸೀಯ ರಾಜ್ಯ ಎಂದರೇನು? (ಬಿ) ಆ ರಾಜ್ಯದ ರಾಜನಾಗಿ ಯೆಹೋವನು ಯಾರನ್ನು ನೇಮಿಸಿದ್ದಾನೆ?

16 ದೇವರ ಸರ್ಕಾರವಾಗಿರುವ ಮೆಸ್ಸೀಯ ರಾಜ್ಯ ಕೂಡ ಮಾನವಕುಲದ ಮೇಲೆ ಯೆಹೋವನಿಗಿರುವ ಪ್ರೀತಿಯ ಪುರಾವೆಯಾಗಿದೆ. ಹೇಗೆ? ಆ ರಾಜ್ಯದ ರಾಜನಾಗಿ ಆತನು ಈಗಾಗಲೇ ನೇಮಿಸಿರುವ ಯೇಸು ಕ್ರಿಸ್ತನು ಮಾನವಕುಲವನ್ನು ಪ್ರೀತಿಸುತ್ತಾನೆ ಮತ್ತು ಆಳಲು ಅವನಿಗೆ ಯೋಗ್ಯತೆ ಇದೆ. (ಜ್ಞಾನೋ. 8:31) ಕ್ರಿಸ್ತನೊಟ್ಟಿಗೆ ಸ್ವರ್ಗದಲ್ಲಿ ಆಳಲು ದೇವರು 1,44,000 ಮಾನವರನ್ನು ಆಯ್ಕೆ ಮಾಡಿದ್ದಾನೆ. ಇವರಿಗೆ ಪುನರುತ್ಥಾನವಾದಾಗ ಮನುಷ್ಯರಾಗಿ ಅವರಿಗಾದ ಅನುಭವವನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗುತ್ತಾರೆ. (ಪ್ರಕ. 14:1) ಯೇಸು ಭೂಮಿಯಲ್ಲಿದ್ದಾಗ ಮುಖ್ಯವಾಗಿ ಕಲಿಸಿದ್ದು ಈ ದೇವರ ರಾಜ್ಯದ ಬಗ್ಗೆಯೇ. ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥನೆ ಮಾಡಲೂ ಕಲಿಸಿಕೊಟ್ಟನು: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾ. 6:9, 10) ದೇವರ ರಾಜ್ಯ ಮಾನವಕುಲಕ್ಕಾಗಿ ಅನೇಕ ಆರ್ಶೀವಾದಗಳನ್ನು ಕೊಡುವ ಸಮಯದಲ್ಲಿ ಇಂಥ ಪ್ರಾರ್ಥನೆಗಳು ನೆರವೇರಲಿವೆ. ಇದಕ್ಕಾಗಿ ನಾವು ಕಾಯುತ್ತಾ ಇದ್ದೇವೆ.

17. ಯೇಸುವಿನ ಆಳ್ವಿಕೆ ಮತ್ತು ಮನುಷ್ಯರ ಆಳ್ವಿಕೆಯ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

17 ಯೇಸುವಿನ ಪ್ರೀತಿಯ ಆಳ್ವಿಕೆಗೂ ಮಾನವನ ಆಳ್ವಿಕೆಗೂ ತುಂಬ ವ್ಯತ್ಯಾಸಗಳಿವೆ. ಮಾನವನ ಆಳ್ವಿಕೆಯಿಂದಾಗಿ ನಡೆದಿರುವ ಯುದ್ಧಗಳಿಗೆ ಕೋಟಿಗಟ್ಟಲೆ ಜನರು ಬಲಿಯಾಗಿದ್ದಾರೆ. ಆದರೆ ನಮ್ಮ ರಾಜ ಯೇಸು ನಿಜವಾಗಲೂ ನಮ್ಮನ್ನು ಪ್ರೀತಿಸುತ್ತಾನೆ ಮತ್ತು ದೇವರ ಸುಂದರ ಗುಣಗಳನ್ನು, ವಿಶೇಷವಾಗಿ ಆತನ ಪ್ರೀತಿಯನ್ನು ತೋರಿಸುತ್ತಾನೆ. (ಪ್ರಕ. 7:10, 16, 17) ಯೇಸು ಹೀಗಂದನು: “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.” (ಮತ್ತಾ. 11:28-30) ಎಂಥ ಪ್ರೀತಿಯ ಆಶ್ವಾಸನೆ!

18. (ಎ) 1914ರಿಂದ ಏನು ನಡೆಯುತ್ತಾ ಇದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

18 ದೇವರ ರಾಜ್ಯ ಸ್ವರ್ಗದಲ್ಲಿ 1914ರಲ್ಲಿ ಆಳ್ವಿಕೆ ಶುರುಮಾಡಿದೆ ಎಂದು ಬೈಬಲ್‌ ತೋರಿಸುತ್ತದೆ. ಅಂದಿನಿಂದ ಯೇಸುವಿನ ಜೊತೆ ಸ್ವರ್ಗದಲ್ಲಿ ಆಳಲಿಕ್ಕಿರುವವರ ಕೊನೇ ಸದಸ್ಯರ ಒಟ್ಟುಗೂಡಿಸುವಿಕೆ ನಡೆಯುತ್ತಿದೆ. ಲೋಕದ ಅಂತ್ಯ ಪಾರಾಗಿ ಹೊಸ ಲೋಕಕ್ಕೆ ಪ್ರವೇಶಿಸುವ “ಮಹಾ ಸಮೂಹ”ದ ಒಟ್ಟುಗೂಡಿಸುವಿಕೆಯೂ ನಡೆಯುತ್ತಿದೆ. (ಪ್ರಕ. 7:9, 13, 14) ಮಹಾ ಸಮೂಹ ಇಂದು ಎಷ್ಟು ದೊಡ್ಡದಾಗಿದೆ? ದೇವರು ಈ ಮಹಾ ಸಮೂಹದಿಂದ ಏನು ಬಯಸುತ್ತಾನೆ? ಮುಂದಿನ ಲೇಖನ ಈ ಪ್ರಶ್ನೆಗಳನ್ನು ಉತ್ತರಿಸುತ್ತದೆ.