ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ

ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ

‘ಯೆಹೋವನೇ ನನ್ನ ಮಾತುಗಳು ನಿನಗೆ ಸಮರ್ಪಕವಾಗಿರಲಿ.’—ಕೀರ್ತ. 19:14.

ಗೀತೆಗಳು: 82, 77

1, 2. ಮಾತಾಡಲು ನಮಗಿರುವ ಸಾಮರ್ಥ್ಯವನ್ನು ಬೈಬಲಿನಲ್ಲಿ ಬೆಂಕಿಗೆ ಹೋಲಿಸಿರುವುದೇಕೆ?

ಇಸವಿ 1871. ಅಮೆರಿಕದ ವಿಸ್ಕಾನ್ಸಿನ್‌ ರಾಜ್ಯದ ಒಂದು ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಹಬ್ಬಲು ಹೆಚ್ಚು ಸಮಯ ಹಿಡಿಯಲಿಲ್ಲ. ಸುಮಾರು 200 ಕೋಟಿ ಮರಗಳು ಸುಟ್ಟು ಭಸ್ಮವಾದವು. 1,200ಕ್ಕಿಂತ ಹೆಚ್ಚು ಜನರು ಸತ್ತು ಹೋದರು. ಅಮೆರಿಕದಲ್ಲಿ ಆಗಿರುವ ಯಾವುದೇ ಬೆಂಕಿ ದುರಂತಗಳಲ್ಲಿ ಇಷ್ಟೊಂದು ಪ್ರಾಣ ನಷ್ಟ ಆಗಿಲ್ಲ. ಕಾಡಿನ ಪಕ್ಕದಲ್ಲೇ ಚಲಿಸುತ್ತಿದ್ದ ರೈಲುಗಳಿಂದ ಹಾರಿ ಬಂದ ಕಿಡಿಗಳಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತದೆ. ಈ ಘಟನೆ, “ಎಷ್ಟೋ ದೊಡ್ಡ ಕಾಡನ್ನು ಸುಟ್ಟುಬಿಡಲು ಎಷ್ಟು ಚಿಕ್ಕ ಬೆಂಕಿ ಸಾಕಾಗುತ್ತದೆ ಎಂದು ನೋಡಿ!” ಎಂಬ ಬೈಬಲ್‌ ವಚನವನ್ನು ನಮ್ಮ ನೆನಪಿಗೆ ತರುತ್ತದಲ್ಲವಾ? (ಯಾಕೋ. 3:5) ಬೈಬಲ್‌ ಬರಹಗಾರನಾದ ಯಾಕೋಬನು ಏಕೆ ಹಾಗಂದನು?

2 ಅವನೇ ವಿವರಿಸುತ್ತಾನೆ ನೋಡಿ: “ನಾಲಿಗೆಯು ಬೆಂಕಿಯಾಗಿದೆ.” (ಯಾಕೋ. 3:6) “ನಾಲಿಗೆಯು” ಮಾತಾಡಲು ನಮಗಿರುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಬೆಂಕಿ ಹಾನಿ ತರುವಂತೆ, ನಾವಾಡುವ ಮಾತುಗಳಿಂದಲೂ ತುಂಬ ಹಾನಿಯಾಗಬಹುದು. ಅದು ಬೇರೆಯವರ ಮೇಲೆ ತುಂಬ ಪ್ರಭಾವಬೀರುತ್ತದೆ. ನಾವು ಹೇಳುವ ಮಾತುಗಳು ಒಬ್ಬ ವ್ಯಕ್ತಿಗೆ ಜೀವ ಅಥವಾ ಮರಣ ಕೊಡಬಲ್ಲದೆಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 18:21) ಹಾಗಂತ, ‘ಏನೊ ಹೇಳಲಿಕ್ಕೆ ಹೋಗಿ ಇನ್ನೇನನ್ನೊ ಹೇಳಿಬಿಟ್ಟರೆ’ ಅನ್ನೊ ಭಯದಿಂದ ಮಾತೇ ಆಡದಿರುವುದು ಸರಿನಾ? ಖಂಡಿತವಾಗಿ ಇಲ್ಲ ಅಲ್ಲವೇ. ಬೆಂಕಿಯಿಂದ ಸುಡುತ್ತೆ ಎಂದಮಾತ್ರಕ್ಕೆ ನಾವದನ್ನು ಬಳಸುವುದನ್ನೇ ನಿಲ್ಲಿಸಿಬಿಡುತ್ತೇವಾ? ಅದನ್ನು ಬಳಸುವುದರಲ್ಲಿ ಎಚ್ಚರಿಕೆ ವಹಿಸುತ್ತೇವೆ. ಉದಾಹರಣೆಗೆ ಬೆಂಕಿಯನ್ನು ಬೆಳಕಿಗಾಗಿ, ಅಡುಗೆ ಮಾಡಲಿಕ್ಕಾಗಿ, ಚಳಿ ಕಾಯಿಸಲಿಕ್ಕಾಗಿ ಬಳಸುತ್ತೇವೆ. ಹಾಗೆಯೇ ನಾವು ಹೇಗೆ ಮಾತಾಡಬೇಕೆಂಬ ವಿಷಯದಲ್ಲಿ ಎಚ್ಚರಿಕೆ ವಹಿಸಿದರೆ ನಮಗಿರುವ ಈ ಸಾಮರ್ಥ್ಯವನ್ನು ಯೆಹೋವನನ್ನು ಘನಪಡಿಸಲು ಮತ್ತು ಇತರರ ಪ್ರಯೋಜನಕ್ಕಾಗಿ ಬಳಸಬಹುದು.—ಕೀರ್ತ. 19:14.

3. ನಮ್ಮ ಮಾತಿನಿಂದ ಇತರರಿಗೆ ಪ್ರೋತ್ಸಾಹ ಸಿಗಬೇಕಾದರೆ ಯಾವ ಮೂರು ವಿಷಯಗಳು ನಮಗೆ ಗೊತ್ತಿರಬೇಕು?

3 ನಮ್ಮ ಯೋಚನೆಗಳನ್ನು, ಭಾವನೆಗಳನ್ನು ಇತರರಿಗೆ ಹೇಳುವ ಸಾಮರ್ಥ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಇದನ್ನು ನಾವು ಮಾತಾಡುವ ಮೂಲಕ ಇಲ್ಲವೆ ಕೈಗಳಿಂದ ಸನ್ನೆ ಮಾಡುವ ಮೂಲಕ ಮಾಡುತ್ತೇವೆ. ಇತರರನ್ನು ಪ್ರೋತ್ಸಾಹಿಸಲು ಈ ಸುಂದರ ಉಡುಗೊರೆಯನ್ನು ಹೇಗೆ ಬಳಸಬೇಕು? (ಯಾಕೋಬ 3:9, 10 ಓದಿ.) ನಮಗೆ ಈ ವಿಷಯಗಳು ಗೊತ್ತಿರಬೇಕು: ಯಾವಾಗ ಮಾತಾಡಬೇಕು? ಏನು ಮಾತಾಡಬೇಕು? ಅದನ್ನು ಹೇಗೆ ಹೇಳಬೇಕು?

ಯಾವಾಗ ಮಾತಾಡಬೇಕು?

4. ನಾವು ಯಾವಾಗ ಸುಮ್ಮನಿರಬೇಕು?

4 ಕೆಲವು ಸಲ ಏನೂ ಮಾತಾಡದೆ ಇರುವುದೇ ಒಳ್ಳೇದು. “ಸುಮ್ಮನಿರುವ ಸಮಯ” ಇದೆ ಎಂದು ಬೈಬಲ್‌ ಹೇಳುತ್ತದೆ. (ಪ್ರಸಂ. 3:7) ಉದಾಹರಣೆಗೆ, ಬೇರೆಯವರು ಮಾತಾಡುತ್ತಿರುವಾಗ ನಾವು ಸುಮ್ಮನಿದ್ದರೆ ನಾವು ಅವರಿಗೆ ಗೌರವ ತೋರಿಸುತ್ತೇವೆ ಎಂದರ್ಥ. (ಯೋಬ 6:24) ಕೆಲವು ಖಾಸಗಿ ವಿಷಯಗಳ ಬಗ್ಗೆ ಮತ್ತು ಇತರರಿಗೆ ಗೊತ್ತಾಗಬಾರದ ವಿಷಯಗಳ ಬಗ್ಗೆಯೂ ನಾವು ಮಾತಾಡುವುದಿಲ್ಲ. (ಜ್ಞಾನೋ. 20:19) ಯಾರಾದರೂ ನಮಗೆ ಕೋಪ ಬರಿಸಿದರೆ, ಏನೂ ಹೇಳದೆ ತಣ್ಣಗಿರುವುದೇ ಬುದ್ಧಿವಂತರ ಲಕ್ಷಣ.—1 ಪೇತ್ರ 3:10, 11.

5. ಮಾತಾಡುವ ಸಾಮರ್ಥ್ಯ ಕೊಟ್ಟದ್ದಕ್ಕೆ ಯೆಹೋವನಿಗೆ ಕೃತಜ್ಞರೆಂದು ನಾವು ಹೇಗೆ ತೋರಿಸಬಹುದು?

5 ಆದರೆ ಕೆಲವು ಸನ್ನಿವೇಶಗಳಲ್ಲಿ ಮಾತಾಡುವುದು ಒಳ್ಳೇದು. (ಪ್ರಸಂ. 3:7) ಯೆಹೋವನನ್ನು ಸ್ತುತಿಸಲು, ಇತರರನ್ನು ಪ್ರೋತ್ಸಾಹಿಸಲು, ನಮ್ಮ ಭಾವನೆಗಳನ್ನು ಇತರರಿಗೆ ವ್ಯಕ್ತಪಡಿಸಲು ಮತ್ತು ನಮ್ಮ ಅಗತ್ಯಗಳ ಬಗ್ಗೆ ಇತರರಿಗೆ ಹೇಳಲು ಸಮಯ ಇದೆ. (ಕೀರ್ತ. 51:15) ಮಾತಾಡುವ ನಮ್ಮ ಸಾಮರ್ಥ್ಯವನ್ನು ಇದೆಲ್ಲದಕ್ಕಾಗಿ ಬಳಸಿದರೆ ಅದನ್ನು ಕೊಟ್ಟಿರುವುದಕ್ಕೆ ಯೆಹೋವನಿಗೆ ಕೃತಜ್ಞರಾಗಿದ್ದೇವೆಂದು ತೋರಿಸುತ್ತೇವೆ. ಒಬ್ಬ ಸ್ನೇಹಿತ ತುಂಬ ಚೆನ್ನಾಗಿರುವ ಉಡುಗೊರೆ ಕೊಟ್ಟರೆ ಅದನ್ನು ಆದಷ್ಟು ಒಳ್ಳೇ ರೀತಿಯಲ್ಲಿ ಬಳಸುತ್ತೇವಲ್ಲವಾ? ಇದು ಕೂಡ ಹಾಗೇ.

6. ಮಾತಾಡಲು ಸರಿಯಾದ ಸಮಯವನ್ನು ಏಕೆ ಆಯ್ಕೆಮಾಡಬೇಕು?

6 ಸರಿಯಾದ ಸಮಯ ಆಯ್ಕೆ ಮಾಡಿ ಮಾತಾಡಬೇಕು ಏಕೆ? ಜ್ಞಾನೋಕ್ತಿ 25:11 ಹೀಗನ್ನುತ್ತದೆ: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” ಬಂಗಾರದ ಹಣ್ಣುಗಳು ನೋಡಲಿಕ್ಕೆ ಚೆಂದ. ಅದರ ಹಿನ್ನೆಲೆಯಲ್ಲಿ ಬೆಳ್ಳಿಯ ಕೆತ್ತನೆ ಇದ್ದರಂತೂ ನೋಡಲು ಇನ್ನೂ ಚೆಂದ. ಹಾಗೆಯೇ, ಒಬ್ಬ ವ್ಯಕ್ತಿಗೆ ನಾವು ಏನೋ ಒಳ್ಳೇ ವಿಷಯ ಹೇಳಲಿಕ್ಕಿರಬಹುದು. ಆದರೆ ಅದನ್ನು ಹೇಳಲು ನಾವು ಸರಿಯಾದ ಸಮಯವನ್ನು ಆರಿಸಿಕೊಂಡರೆ ಅದರಿಂದ ಆ ವ್ಯಕ್ತಿಗೆ ಹೆಚ್ಚು ಸಹಾಯವಾಗುವುದು. ಇದನ್ನು ಮಾಡುವುದು ಹೇಗೆ?

7, 8. ಜಪಾನಿನಲ್ಲಿರುವ ನಮ್ಮ ಸಹೋದರರು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಿದರು?

7 ಒಂದು ವಿಷಯವನ್ನು ತಪ್ಪಾದ ಸಮಯದಲ್ಲಿ ಹೇಳಿದರೆ ಅದು ಜನರಿಗೆ ಅರ್ಥವಾಗಲಿಕ್ಕಿಲ್ಲ ಅಥವಾ ಅವರದನ್ನು ಸ್ವೀಕರಿಸಲಿಕ್ಕಿಲ್ಲ. (ಜ್ಞಾನೋಕ್ತಿ 15:23 ಓದಿ.) ಉದಾಹರಣೆಗೆ, ಮಾರ್ಚ್ 2011ರಲ್ಲಿ ಜಪಾನಿನ ಪೂರ್ವ ಭಾಗದಲ್ಲಾದ ಭೂಕಂಪ ಹಾಗೂ ಸುನಾಮಿಯಿಂದಾಗಿ ಅನೇಕ ನಗರಗಳು ನೆಲಸಮವಾದವು. 15,000ಕ್ಕಿಂತಲೂ ಹೆಚ್ಚು ಜನರು ಸತ್ತುಹೋದರು. ಯೆಹೋವನ ಸಾಕ್ಷಿಗಳಲ್ಲೂ ಅನೇಕರು ತಮ್ಮ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು ಕಳೆದುಕೊಂಡರು. ಹಾಗಿದ್ದರೂ, ತಮ್ಮಂಥ ಕಷ್ಟದ ಪರಿಸ್ಥಿತಿಯಲ್ಲಿದ್ದ ಬೇರೆ ಜನರಿಗೆ ಬೈಬಲಿನಿಂದ ಸಾಂತ್ವನ ಕೊಡಲು ಇಷ್ಟಪಟ್ಟರು. ಆದರೆ ಆ ಜನರಲ್ಲಿ ಹೆಚ್ಚಿನವರು ಬೌದ್ಧಮತದವರು, ಬೈಬಲ್‌ ಬಗ್ಗೆ ಅಷ್ಟೇನೂ ಗೊತ್ತಿಲ್ಲದವರೆಂದು ಈ ಸಾಕ್ಷಿಗಳಿಗೆ ತಿಳಿದಿತ್ತು. ಹಾಗಾಗಿ ಆ ಸಮಯದಲ್ಲಿ ಅವರಿಗೆ ಪುನರುತ್ಥಾನದ ಬಗ್ಗೆ ಹೇಳುವ ಬದಲು ಅವರೊಟ್ಟಿಗೆ ಸಮಾಧಾನದ ಒಂದೆರಡು ಮಾತುಗಳನ್ನಾಡಿ, ಒಳ್ಳೇ ಜನರಿಗೆ ಯಾಕೆ ಇಂಥ ಕಷ್ಟಗಳು ಬರುತ್ತವೆಂದು ವಿವರಿಸಿದರು.

8 ಹೀಗೆ ಆ ಸಹೋದರರು ಯೇಸುವನ್ನು ಅನುಕರಿಸಿದರು. ಆತನಿಗೆ ಯಾವಾಗ ಸುಮ್ಮನಿರಬೇಕೆಂದು ಗೊತ್ತಿತ್ತು. ಯಾವಾಗ ಮಾತಾಡಬೇಕೆಂದೂ ಗೊತ್ತಿತ್ತು. (ಯೋಹಾ. 18:33-37; 19:8-11) ತನ್ನ ಶಿಷ್ಯರಿಗೆ ನಿರ್ದಿಷ್ಟ ವಿಷಯಗಳನ್ನು ಕಲಿಸಲು ಸರಿಯಾದ ಸಮಯಕ್ಕಾಗಿ ಕಾದನು. (ಯೋಹಾ. 16:12) ಜಪಾನಿನಲ್ಲಿದ್ದ ಸಹೋದರರು ಪುನರುತ್ಥಾನದ ಬಗ್ಗೆ ಜನರಿಗೆ ಹೇಳುವ ಸರಿಯಾದ ಸಮಯಕ್ಕಾಗಿ ಕಾದರು. ಸುನಾಮಿಯಾದ ಎರಡೂವರೆ ವರ್ಷಗಳ ನಂತರ ಅವರು ಜನರಿಗೆ, ಸತ್ತವರು ಮತ್ತೆ ಬದುಕಿ ಬರುತ್ತಾರಾ? ಎಂಬ ಕರಪತ್ರ ನೀಡಿದರು. ಅನೇಕ ಜನರು ಅದನ್ನು ಸ್ವೀಕರಿಸಿ, ಓದಿ ಸಮಾಧಾನ ಪಡೆದುಕೊಂಡರು. ಹಾಗೆಯೇ ನಾವೂ ನಮ್ಮ ಸೇವಾಕ್ಷೇತ್ರದಲ್ಲಿನ ಜನರ ಸಂಸ್ಕೃತಿ, ನಂಬಿಕೆಗಳ ಬಗ್ಗೆ ಯೋಚಿಸಬೇಕು. ಆಗ ಅವರೊಟ್ಟಿಗೆ ಮಾತಾಡಲು ಸರಿಯಾದ ಸಮಯ ಯಾವುದೆಂದು ತಿಳಿದುಕೊಳ್ಳಲಿಕ್ಕೆ ಆಗುತ್ತದೆ.

9. ಮಾತಾಡಲು ಸರಿಯಾದ ಸಮಯಕ್ಕಾಗಿ ಕಾಯಬೇಕಾದ ಇನ್ಯಾವ ಸನ್ನಿವೇಶಗಳಿವೆ?

9 ಮಾತಾಡಲು ಸರಿಯಾದ ಸಮಯಕ್ಕಾಗಿ ಕಾಯಬೇಕಾದ ಇನ್ಯಾವ ಸನ್ನಿವೇಶಗಳಿವೆ? ನಮ್ಮ ಮನಸ್ಸನ್ನು ನೋಯಿಸುವ ಹಾಗೆ ಯಾರಾದರೂ ಮಾತಾಡಿದ್ದಾರೆ ಎಂದಿಟ್ಟುಕೊಳ್ಳಿ. ಆಗ ತಟ್ಟನೆ ಉತ್ತರ ಕೊಟ್ಟು, ಬಾಯಿಗೆ ಬಂದದ್ದನ್ನು ಹೇಳುವ ಬದಲು ಸ್ವಲ್ಪ ನಿಂತು ಹೀಗೆ ಯೋಚಿಸುವುದೇ ವಿವೇಕದ ಸಂಗತಿ: ‘ನನ್ನನ್ನು ನೋಯಿಸಬೇಕೆಂಬ ಉದ್ದೇಶದಿಂದಲೇ ಅದನ್ನು ಹೇಳಿದರಾ? ಇದರ ಬಗ್ಗೆ ಅವರ ಜೊತೆ ಮಾತಾಡಲೇಬೇಕಾ?’ ಏನೂ ಹೇಳದೇ ಇರುವುದೇ ಒಳ್ಳೇದು. ಆದರೆ ಅದರ ಬಗ್ಗೆ ಅವರ ಜೊತೆ ಮಾತಾಡಲೇಬೇಕಂತ ಅನಿಸಿದರೆ ನಮ್ಮ ಮನಸ್ಸು ಶಾಂತವಾಗುವ ವರೆಗೂ ಕಾಯಬೇಕು. (ಜ್ಞಾನೋಕ್ತಿ 15:28 ಓದಿ.) ಇನ್ನೊಂದು ಸನ್ನಿವೇಶ ತಕ್ಕೊಳ್ಳಿ. ಇನ್ನೂ ಸಾಕ್ಷಿಗಳಾಗಿರದ ನಮ್ಮ ಕುಟುಂಬ ಸದಸ್ಯರಿಗೆ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಪ್ರೋತ್ಸಾಹ ಕೊಡಬೇಕೆಂಬ ಆಸೆ ನಮಗಿರಬಹುದು. ಆದರೆ ನಾವು ತಾಳ್ಮೆ ತೋರಿಸಬೇಕು. ಹೇಳಬೇಕೆಂದಿರುವ ವಿಷಯದ ಬಗ್ಗೆ ಚೆನ್ನಾಗಿ ಯೋಚಿಸಬೇಕು. ಯಾವ ಸಮಯದಲ್ಲಿ ಅವರು ನಮ್ಮ ಮಾತು ಕೇಳಲು ಸಿದ್ಧರಿರುತ್ತಾರೆಂದು ನಾವು ಕಂಡುಕೊಳ್ಳಬೇಕು.

ನಾವೇನು ಹೇಳಬೇಕು?

10. (ಎ) ಮಾತಾಡುವಾಗ ನಾವು ಬಳಸುವ ಪದಗಳ ಬಗ್ಗೆ ಏಕೆ ಜಾಗ್ರತೆವಹಿಸಬೇಕು? (ಬಿ) ನಾವು ಯಾವ ರೀತಿ ಮಾತಾಡಬಾರದು?

10 ನಾವಾಡುವ ಮಾತುಗಳು ಒಬ್ಬರ ಮನಸ್ಸಿನ ಮೇಲೆ ಬರೆ ಹಾಕಬಹುದು ಅಥವಾ ಮದ್ದು ಆಗಿರಬಹುದು. (ಜ್ಞಾನೋಕ್ತಿ 12:18 ಓದಿ.) ಸೈತಾನನ ಲೋಕದಲ್ಲಿ ಅನೇಕ ಜನರು “ವಿಷವಚನ” ಅಂದರೆ ಕ್ರೂರ ಮಾತುಗಳನ್ನು “ಬಾಣ”ಗಳಂತೆ ಇಲ್ಲವೆ “ಕತ್ತಿ”ಯಂತೆ ಬಳಸುತ್ತಾರೆ. ಅವರ ಉದ್ದೇಶ ಬೇರೆಯವರ ಮನನೋಯಿಸಿ, ನೆಮ್ಮದಿ ಕೆಡಿಸುವುದೇ ಆಗಿರುತ್ತದೆ. (ಕೀರ್ತ. 64:3) ಈ ರೀತಿ ಮಾತಾಡಲು ಅನೇಕರು ಕಲಿಯುವುದು ಅವರು ನೋಡುವ ಸಿನೆಮಾ ಮತ್ತು ಟಿವಿ ಕಾರ್ಯಕ್ರಮಗಳಿಂದ. ಆದರೆ ಕ್ರೈಸ್ತರು ಇನ್ನೊಬ್ಬರೊಟ್ಟಿಗೆ ಮಾತಾಡುವಾಗ ಕಠೋರ, ನಿರ್ದಯವಾದ ಪದಗಳನ್ನು ಬಳಸಬಾರದು. ನಗುಬರಿಸುವಂಥ ವಿಧದಲ್ಲೂ ಅದನ್ನು ಹೇಳಬಾರದು. ಹಾಸ್ಯ ಎನ್ನುವುದು ಒಳ್ಳೇದು. ನಮ್ಮ ಮಾತನ್ನು ಹೆಚ್ಚು ಆಸಕ್ತಿಕರವಾಗಿ ಮಾಡುತ್ತದೆ. ಆದರೆ ಅದನ್ನು ಕೊಂಕು ಮಾತಾಡಲು ಬಳಸಬಾರದು. ಅಂದರೆ ಬೇರೆಯವರನ್ನು ನಗಿಸಲಿಕ್ಕೆಂದು ಒಬ್ಬರನ್ನು ಮುಜುಗರಕ್ಕೀಡು ಮಾಡಬಾರದು ಇಲ್ಲವೆ ಹೀನೈಸಬಾರದು. ಕ್ರೈಸ್ತರು “ನಿಂದಾತ್ಮಕ ಮಾತುಗಳನ್ನು” ಅಂದರೆ ಬೈಗುಳದ ಮಾತುಗಳನ್ನು ಬಳಸಬಾರದೆಂದು ಬೈಬಲ್‌ ಆಜ್ಞಾಪಿಸುತ್ತದೆ. ಅದು ಹೀಗೂ ಹೇಳುತ್ತದೆ: “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು.”—ಎಫೆ. 4:29, 31.

11. ಸರಿಯಾದ ಪದಗಳನ್ನು ಆಯ್ಕೆಮಾಡಲು ನಮಗೆ ಯಾವುದು ನೆರವಾಗುತ್ತದೆ?

11 “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ” ಎಂದು ಯೇಸು ಕಲಿಸಿದನು. (ಮತ್ತಾ. 12:34) ಇದರರ್ಥ ನಾವಾಡುವ ಮಾತು ನಮ್ಮ ಮನಸ್ಸಿನಲ್ಲಿ ನಿಜವಾಗಿಯೂ ಏನಿದೆ ಎಂದು ತೋರಿಸಿಕೊಡುತ್ತದೆ. ಹಾಗಾಗಿ ನಮಗೆ ಬೇರೆಯವರ ಮೇಲೆ ನಿಜವಾಗಿ ಪ್ರೀತಿ, ಕಾಳಜಿಯಿದ್ದರೆ, ಅವರ ಜೊತೆ ಮಾತಾಡುವಾಗ ಸರಿಯಾದ ಪದಗಳನ್ನೇ ಬಳಸುತ್ತೇವೆ. ನಾವಾಡುವ ಮಾತುಗಳು ಸಕಾರಾತ್ಮಕವೂ, ಪ್ರೋತ್ಸಾಹದಾಯಕವೂ ಆಗಿರುತ್ತವೆ.

12. ಸರಿಯಾದ ಪದಗಳ ಆಯ್ಕೆ ಮಾಡಲು ನಮಗೆ ಬೇರಾವ ವಿಷಯಗಳು ಸಹಾಯ ಮಾಡುತ್ತವೆ?

12 ಸರಿಯಾದ ಪದಗಳ ಆಯ್ಕೆ ಮಾಡಬೇಕೆಂದರೆ ಅದಕ್ಕೆ ಪ್ರಯತ್ನ ಅಗತ್ಯ. ರಾಜ ಸೊಲೊಮೋನನು ತುಂಬ ಬುದ್ಧಿವಂತನಾಗಿದ್ದನು. ಹಾಗಿದ್ದರೂ, ಅವನು ಏನು ಬರೆಯಬೇಕೆಂದಿದ್ದನೊ ಅದರ ಬಗ್ಗೆ ಮೊದಲು ‘ಧ್ಯಾನಿಸಿ ಪರೀಕ್ಷಿಸಿದನು.’ ಏಕೆಂದರೆ ಅದು ಸರಿಯಾಗಿರಬೇಕಿತ್ತು, ಓದಲು ಚೆನ್ನಾಗಿರಬೇಕಿತ್ತು. (ಪ್ರಸಂ. 12:9, 10) ಏನು ಮಾತಾಡಬೇಕೆಂದು ನಮಗೆ ತಿಳಿಯಲು ಯಾವುದು ಸಹಾಯ ಮಾಡುತ್ತದೆ? ನಾವೇನು ಹೇಳಬೇಕೊ ಅದನ್ನು ಹೊಸಹೊಸ ರೀತಿಯಲ್ಲಿ ವ್ಯಕ್ತಪಡಿಸಲು ಬೈಬಲಿನ ಮತ್ತು ನಮ್ಮ ಸಾಹಿತ್ಯದ ನೆರವು ಪಡೆಯಬಹುದು. ನಮಗೆ ಅರ್ಥವಾಗದ ಪದಗಳ ಅರ್ಥ ಕಲಿಯಬಹುದು. ಇತರರಿಗೆ ಸಹಾಯವಾಗುವ ರೀತಿಯಲ್ಲಿ ಹೇಗೆ ಮಾತಾಡಬೇಕೆಂದು ತಿಳಿಯಲು ಯೇಸುವಿನ ಮಾದರಿಯ ಬಗ್ಗೆಯೂ ಕಲಿಯಬಹುದು. ಏನು ಮಾತಾಡಬೇಕೆಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಯೆಹೋವನು ಅವನಿಗೆ “ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ” ಕಲಿಸಿದ್ದನು. (ಯೆಶಾ. 50:4) ನಮ್ಮ ಮಾತುಗಳು ಇತರರ ಮೇಲೆ ಯಾವ ಪರಿಣಾಮಬೀರುತ್ತದೆ ಎಂದು ಯೋಚಿಸುವುದು ಸಹ ತುಂಬ ಮುಖ್ಯ. (ಯಾಕೋ. 1:19) ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಬಳಸಲಿಕ್ಕಿರುವ ಪದಗಳು ನಾನು ಹೇಳಬೇಕೆಂದಿರುವ ವಿಷಯವನ್ನು ಸರಿಯಾಗಿ ವ್ಯಕ್ತಪಡಿಸುತ್ತವಾ? ಅವು ಎದುರಿಗಿರುವ ವ್ಯಕ್ತಿಯ ಮೇಲೆ ಯಾವ ಪರಿಣಾಮ ಬೀರಬಹುದು?’

13. ಸುಲಭವಾಗಿ ಅರ್ಥವಾಗುವಂಥ ರೀತಿಯಲ್ಲಿ ನಾವು ಮಾತಾಡಬೇಕು ಏಕೆ?

13 ಇಸ್ರಾಯೇಲ್‍ನಲ್ಲಿ ಸೂಚನೆಗಳನ್ನು ಕೊಡಲು ತುತೂರಿಯನ್ನು ಊದಲಾಗುತ್ತಿತ್ತು. ಒಂದು ರೀತಿಯ ತುತೂರಿ ಶಬ್ದ ಕೇಳಿದಾಗ ಎಲ್ಲರೂ ಕೂಡಿಬರಬೇಕೆಂದು ಗೊತ್ತಾಗುತ್ತಿತ್ತು. ಇನ್ನೊಂದು ರೀತಿಯ ಶಬ್ದ ಕೇಳಿದಾಗ ಸೈನಿಕರು ಆಕ್ರಮಣ ಮಾಡಬೇಕಿತ್ತು. ಒಂದುವೇಳೆ ತುತೂರಿಯನ್ನು ಸರಿಯಾಗಿ ಊದಲಿಲ್ಲವಾದರೆ ಕಥೆ ಏನಾಗುತ್ತಿತ್ತು ಸ್ವಲ್ಪ ಯೋಚನೆ ಮಾಡಿ! ಸ್ಪಷ್ಟವಾಗಿ ಕೇಳಿಬರುವ ತುತೂರಿಯ ಶಬ್ದವನ್ನು ಬೈಬಲ್‌, ಸುಲಭವಾಗಿ ಅರ್ಥವಾಗುವ ಮಾತುಗಳಿಗೆ ಹೋಲಿಸುತ್ತದೆ. ನಾವು ಹೇಳಬೇಕೆಂದಿರುವ ವಿಷಯಗಳನ್ನು ಸ್ಪಷ್ಟವಾಗಿ ಹೇಳದಿದ್ದರೆ ಜನರಿಗೆ ಗಲಿಬಿಲಿಯಾಗಬಹುದು ಅಥವಾ ತಪ್ಪುದಾರಿಗೆ ನಡೆಸಬಹುದು. ನಾವು ಹೇಳುತ್ತಿರುವ ವಿಷಯವನ್ನು ಸ್ಪಷ್ಟವಾಗಿ ಹೇಳಬೇಕಿದ್ದರೂ ಅದನ್ನು ಒರಟಾಗಿ ಅಥವಾ ಅಗೌರವದಿಂದ ಹೇಳದಂತೆ ಜಾಗ್ರತೆ ವಹಿಸಬೇಕು.—1 ಕೊರಿಂಥ 14:8, 9 ಓದಿ.

14. ಯೇಸು ಸುಲಭವಾಗಿ ಅರ್ಥವಾಗುವಂಥ ರೀತಿಯಲ್ಲಿ ಮಾತಾಡಿದನು ಎನ್ನುವುದಕ್ಕೆ ಯಾವ ಉದಾಹರಣೆ ಇದೆ?

14 ಸುಲಭವಾಗಿ ಅರ್ಥವಾಗುವ ಮಾತುಗಳನ್ನು ಯೇಸು ಆಯ್ಕೆ ಮಾಡಿದ್ದರ ಉತ್ತಮ ಉದಾಹರಣೆ ಮತ್ತಾಯ 5-7 ಅಧ್ಯಾಯಗಳಲ್ಲಿ ಸಿಗುತ್ತದೆ. ಅವನು ಕೊಟ್ಟ ಆ ಭಾಷಣದಲ್ಲಿ, ಕಷ್ಟಕರವಾದ, ಅನಗತ್ಯ ಪದಗಳನ್ನು ಬಳಸಿ ಜನರ ಮನಸ್ಸು ಗೆಲ್ಲಲು ಪ್ರಯತ್ನಿಸಲಿಲ್ಲ. ಯಾರಿಗೂ ನೋವಾಗುವಂಥ ಯಾವುದನ್ನೂ ಹೇಳಲಿಲ್ಲ. ತುಂಬ ಮುಖ್ಯವಾದ, ಆಳವಾದ ಅರ್ಥವಿದ್ದ ವಿಷಯಗಳನ್ನು ಕಲಿಸಿದರೂ ಅವನ್ನು ಸುಲಭವಾಗಿ ಅರ್ಥವಾಗುವಂಥ ರೀತಿಯಲ್ಲಿ ಹೇಳಿದನು. ಉದಾಹರಣೆಗೆ, ತನ್ನ ಶಿಷ್ಯರು ಪ್ರತಿ ದಿನದ ಆಹಾರದ ಬಗ್ಗೆ ಅತಿಯಾಗಿ ಯೋಚಿಸುವ ಅಗತ್ಯವಿಲ್ಲ ಎಂದು ಯೇಸು ಧೈರ್ಯ ತುಂಬಿಸಲು ಬಯಸಿದನು. ಯೆಹೋವನು ಪಕ್ಷಿಗಳಿಗೆ ಆಹಾರ ಒದಗಿಸುತ್ತಾನೆ ಎಂದು ವಿವರಿಸಿದನು. ನಂತರ “ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” ಎಂದು ಕೇಳಿದನು. (ಮತ್ತಾ. 6:26) ಹೀಗೆ ಸುಲಭವಾಗಿ ಅರ್ಥವಾಗುವ ಪದಗಳನ್ನು ಬಳಸುವ ಮೂಲಕ ಮುಖ್ಯವಾದ ಪಾಠ ಕಲಿಸಿ ಅವರನ್ನು ಪ್ರೋತ್ಸಾಹಿಸಿದನು.

ಹೇಗೆ ಮಾತಾಡಬೇಕು?

15. ನಾವೇಕೆ ದಯೆಯಿಂದ ಮಾತಾಡಬೇಕು?

15 ನಾವೇನು ಮಾತಾಡುತ್ತೇವೊ ಅದು ಮಾತ್ರವಲ್ಲ, ಹೇಗೆ ಮಾತಾಡುತ್ತೇವೆ ಎನ್ನುವುದೂ ಮುಖ್ಯ. ಯೇಸು ಮಾತಾಡುವುದನ್ನು ಕೇಳಿಸಿಕೊಳ್ಳಲು ಜನರಿಗೆ ತುಂಬ ಖುಷಿ ಆಗುತ್ತಿತ್ತು. ಅವನು “ಮನವೊಲಿಸುವ” ಅಥವಾ ಮಧುರ ಮಾತುಗಳಿಂದ ಮಾತಾಡಿದನು. (ಲೂಕ 4:22) ಅಂದರೆ ಕರುಣೆಯಿಂದ ಮಾತಾಡಿದನು. ನಾವೂ ದಯೆಯಿಂದ ಮಾತಾಡಿದಾಗ ಜನ ನಾವು ಮಾತಾಡುವುದನ್ನು ಕೇಳಲು ತುಂಬ ಇಷ್ಟಪಡುತ್ತಾರೆ. ನಾವು ಹೇಳಿದ್ದನ್ನು ಒಪ್ಪಿಕೊಳ್ಳಲೂಬಹುದು. (ಜ್ಞಾನೋ. 25:15) ನಮಗೆ ಇತರರ ಬಗ್ಗೆ ಗೌರವ ಇರುವಾಗ, ಅವರ ಭಾವನೆಗಳಿಗೆ ಬೆಲೆಕೊಡುವಾಗ ಅವರೊಟ್ಟಿಗೆ ದಯೆಯಿಂದ ಮಾತಾಡಲು ಆಗುತ್ತದೆ. ಯೇಸು ಇದನ್ನೇ ಮಾಡಿದನು. ಉದಾಹರಣೆಗೆ, ಅವನ ಮಾತುಗಳನ್ನು ಕೇಳಲು ತುಂಬ ಶ್ರಮಪಟ್ಟು ಬಂದಿದ್ದ ಒಂದು ಗುಂಪಿನ ಜೊತೆ ಸಮಯ ಕಳೆದು ಅವರಿಗೆ ಕಲಿಸಲು ಸಂತೋಷಪಟ್ಟನು. (ಮಾರ್ಕ 6:34) ಜನರು ಅವನನ್ನು ಹೀಯಾಳಿಸಿದಾಗಲೂ ಅವನು ಅವರನ್ನು ಹೀಯಾಳಿಸಲಿಲ್ಲ.—1 ಪೇತ್ರ 2:23.

16, 17. (ಎ) ನಮ್ಮ ಕುಟುಂಬ, ಸ್ನೇಹಿತರೊಟ್ಟಿಗೆ ಮಾತಾಡುವಾಗ ಯೇಸುವನ್ನು ಹೇಗೆ ಅನುಕರಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ತಾಯಿಯೊಬ್ಬಳು ದಯೆಯಿಂದ ಮಾತಾಡಿದ್ದರಿಂದ ಹೇಗೆ ಒಳ್ಳೇದಾಯಿತು?

16 ನಮ್ಮ ಕುಟುಂಬವನ್ನು, ಸ್ನೇಹಿತರನ್ನು ನಾವು ಪ್ರೀತಿಸುತ್ತೇವೆ. ಅವರ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಂತ ನಾವು ಅವರ ಹತ್ತಿರ ಹೇಗೆ ಬೇಕೊ ಹಾಗೆ ಮಾತಾಡುತ್ತಿರಬಹುದು. ನಮ್ಮ ಮಾತಿನ ಮೇಲೆ ನಿಗಾ ಇಡಬೇಕಾಗಿಲ್ಲ ಎಂದು ನಮಗನಿಸಬಹುದು. ಆದರೆ ಯೇಸು ತನ್ನ ಸ್ನೇಹಿತರ ಜೊತೆ ಮಾತಾಡಿದಾಗ ಯಾವತ್ತೂ ದಯೆ ಇಲ್ಲದೆ ಮಾತಾಡಲಿಲ್ಲ. ತಮ್ಮಲ್ಲಿ ಯಾರು ದೊಡ್ಡವನೆಂದು ಅವನ ಶಿಷ್ಯರಲ್ಲಿ ಕೆಲವರು ವಾಗ್ವಾದ ಮಾಡುತ್ತಿದ್ದಾಗ ಅವರ ಯೋಚನೆಯನ್ನು ಬದಲಾಯಿಸಲು ಚಿಕ್ಕ ಮಗುವಿನ ಉದಾಹರಣೆ ಬಳಸಿ ದಯೆಯಿಂದ ಮಾತಾಡಿದನು. (ಮಾರ್ಕ 9:33-37) ಇತರರಿಗೆ ಸಲಹೆ, ಬುದ್ಧಿವಾದವನ್ನು ದಯೆಯಿಂದ ಕೊಡುವ ಮೂಲಕ ಹಿರಿಯರು ಯೇಸುವಿನ ಮಾದರಿಯನ್ನು ಅನುಕರಿಸಬಲ್ಲರು.—ಗಲಾ. 6:1.

17 ಯಾರಾದರೂ ನಮ್ಮ ಮನಸ್ಸಿಗೆ ನೋವಾಗುವಂತೆ ಮಾತಾಡಿದರೂ ನಾವು ದಯೆಯಿಂದ ಮಾತಾಡಿದರೆ ತುಂಬ ಒಳ್ಳೇ ಫಲಿತಾಂಶ ಸಿಗುತ್ತದೆ. (ಜ್ಞಾನೋ. 15:1) ಉದಾಹರಣೆಗೆ ಒಂಟಿ ಹೆತ್ತವಳ ಹದಿಪ್ರಾಯದ ಮಗನೊಬ್ಬ ಕೆಟ್ಟ ವಿಷಯಗಳನ್ನು ಮಾಡುತ್ತಿದ್ದ. ಅದೇ ಸಮಯ ಯೆಹೋವನ ಸೇವೆ ಮಾಡುತ್ತಿರುವಂತೆ ನಾಟಕವಾಡುತ್ತಾ ಇಬ್ಬಗೆಯ ಜೀವನ ನಡೆಸುತ್ತಿದ್ದ. ಈ ವಿಷಯದ ಬಗ್ಗೆ ಸಭೆಯಲ್ಲಿನ ಒಬ್ಬ ಸಹೋದರಿ ಬೇಜಾರು ಮಾಡಿಕೊಂಡು ಆ ಹುಡುಗನ ತಾಯಿಗೆ ಹೀಗಂದಳು: “ಛೇ, ನಿಮ್ಮ ಮಗನಿಗೆ ನೀವು ಸರಿಯಾಗಿ ತರಬೇತಿ ಕೊಟ್ಟಿಲ್ಲ.” ಈ ಒಂಟಿ ಹೆತ್ತವಳು ಒಂದು ಕ್ಷಣ ಯೋಚಿಸಿ ಶಾಂತವಾಗಿ ದಯೆಯಿಂದ ಹೀಗಂದಳು: “ಸದ್ಯಕ್ಕೆ ಯಾವ ವಿಷಯನೂ ಸರಿಯಾಗಿಲ್ಲ ನಿಜ. ಅವನ ತರಬೇತಿ ಇನ್ನು ಮುಗಿದಿಲ್ಲವಲ್ಲ, ನಡೀತಾ ಇದೆ! ಅರ್ಮಗೆದೋನ್‌ ನಂತರ ಮಾತಾಡೋಣ. ಯಾಕೆಂದರೆ ನಿಜವಾಗಲೂ ವಿಷಯ ಏನಂತ ನಮಗೆ ಆವಾಗಲೇ ಗೊತ್ತಾಗೋದು.” ಆ ಸಹೋದರಿಯ ಸೌಮ್ಯ ಉತ್ತರದಿಂದಾಗಿ ಅವರಿಬ್ಬರ ನಡುವಿನ ಸ್ನೇಹ ಮುಂದುವರಿಯಿತು. ತಾಯಿಯ ಮಾತುಗಳು ಮಗನ ಕಿವಿಗೆ ಬಿತ್ತು. ತಾನು ಬದಲಾಗುತ್ತೇನೆಂದು ಅಮ್ಮ ಎಷ್ಟೊಂದು ನಂಬಿಕೆ ಇಟ್ಟಿದ್ದಾರೆ ಎಂದು ಅರಿತ. ಕೆಟ್ಟ ಸ್ನೇಹಿತರ ಸಹವಾಸ ಬಿಟ್ಟ, ದೀಕ್ಷಾಸ್ನಾನ ಪಡೆದ, ನಂತರ ಬೆತೆಲ್‍ನಲ್ಲಿ ಸೇವೆ ಮಾಡಿದ. ನಾವು ನಮ್ಮ ಸಹೋದರರೊಟ್ಟಿಗೆ, ಕುಟುಂಬದವರೊಟ್ಟಿಗೆ ಅಥವಾ ನಮ್ಮ ಪರಿಚಯ ಇಲ್ಲದ ಜನರೊಟ್ಟಿಗೆ ಮಾತಾಡಿದರೂ, ನಮ್ಮ ಮಾತು ಯಾವಾಗಲೂ “ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ” ಇರಬೇಕು.—ಕೊಲೊ. 4:6.

18. ನಾವು ಮಾತಾಡುವ ವಿಧದಲ್ಲಿ ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು?

18 ನಮ್ಮ ಯೋಚನೆಗಳನ್ನು, ಭಾವನೆಗಳನ್ನು ಇತರರಿಗೆ ಹೇಳುವ ಸಾಮರ್ಥ್ಯ ಯೆಹೋವನು ಕೊಟ್ಟಿರುವ ಒಂದು ಅದ್ಭುತ ವರ. ಯೇಸುವಿನ ಮಾದರಿಯನ್ನು ಅನುಕರಿಸಿದರೆ ಮಾತಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡುತ್ತೇವೆ, ಏನು ಹೇಳುತ್ತೇವೊ ಅದರ ಬಗ್ಗೆ ಜಾಗ್ರತೆ ವಹಿಸುತ್ತೇವೆ ಮತ್ತು ಯಾವಾಗಲೂ ದಯೆಯಿಂದ ಮಾತಾಡಲು ಪ್ರಯತ್ನಿಸುತ್ತೇವೆ. ನಮ್ಮ ಮಾತಿನಿಂದ ಇತರರನ್ನು ಪ್ರೋತ್ಸಾಹಿಸೋಣ, ಯೆಹೋವನನ್ನು ಸಂತೋಷಪಡಿಸೋಣ!