ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಆವೃತ್ತಿ

ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಆವೃತ್ತಿ

ಹಲವಾರು ವರ್ಷಗಳಿಂದ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ಬೈಬಲನ್ನು ಅನೇಕ ಸಲ ಪರಿಷ್ಕರಿಸಲಾಗಿದೆ. ಆದರೆ 2013ರ ಆವೃತ್ತಿಯಲ್ಲಿ ದೊಡ್ಡ ಪ್ರಮಾಣದ ಪರಿಷ್ಕರಣೆ ಮಾಡಲಾಯಿತು. ಉದಾಹರಣೆಗೆ ಈ ಬೈಬಲ್‍ನಲ್ಲಿ ಮುಂಚೆಗಿಂತ 10 ಶೇಕಡದಷ್ಟು ಕಡಿಮೆ ಇಂಗ್ಲಿಷ್‌ ಪದಗಳಿವೆ. ಕೆಲವು ಬೈಬಲ್‌ ಪದಗಳನ್ನು ಪರಿಷ್ಕರಿಸಲಾಗಿದೆ. ಕೆಲವು ಅಧ್ಯಾಯಗಳನ್ನು ಕಾವ್ಯ-ಪಂಕ್ತಿ ರೂಪಕ್ಕೆ ಬದಲಾಯಿಸಲಾಗಿದೆ. ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸುವ ಪಾದಟಿಪ್ಪಣಿಗಳನ್ನು ರೆಗ್ಯುಲರ್‌ ಗಾತ್ರದ ಬೈಬಲ್‌ಗಳಲ್ಲಿ ಸೇರಿಸಲಾಗಿದೆ. ಮಾಡಲಾದ ಎಲ್ಲಾ ಬದಲಾವಣೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗದಿದ್ದರೂ ಕೆಲವು ಮುಖ್ಯ ಬದಲಾವಣೆಗಳನ್ನು ನೋಡೋಣ.

ಯಾವ ಬೈಬಲ್‌ ಪದಗಳನ್ನು ಬದಲಾಯಿಸಲಾಗಿದೆ? ಹಿಂದಿನ ಲೇಖನದಲ್ಲಿ ನೋಡಿದಂತೆ “ಷೀಓಲ್‌,” “ಹೇಡೀಸ್‌,” “ಆತ್ಮ” ಎಂಬ ಪದಗಳನ್ನು ಪರಿಷ್ಕರಿಸಲಾಯಿತು. ಇನ್ನೂ ಅನೇಕ ಪದಗಳನ್ನು ಪರಿಷ್ಕರಿಸಲಾಗಿದೆ.

ಉದಾಹರಣೆಗೆ “ಸಡಿಲು ನಡತೆ” ಎಂಬ ಪದದ ಬದಲು “ಭಂಡ ನಡತೆ” ಎಂಬ ಪದವನ್ನು ಹಾಕಲಾಗಿದೆ. ಏಕೆಂದರೆ ಈ ಪದದ ಮೂಲ ಗ್ರೀಕ್‌ ಪದದಲ್ಲಿರುವ ಸೊಕ್ಕಿನ ಮನೋಭಾವ ಎಂಬ ಅರ್ಥವನ್ನು ಹೊರತರುತ್ತದೆ. “ದೀರ್ಘ ಸಹನೆ” ಬದಲು “ತಾಳ್ಮೆ” ಎಂಬ ಪದ ಹಾಕಲಾಗಿದೆ. ಏಕೆಂದರೆ “ದೀರ್ಘ ಸಹನೆ” ಎನ್ನುವುದು, ದೀರ್ಘ ಸಮಯದ ವರೆಗೆ ಕಷ್ಟ ಸಹಿಸುವುದು ಎಂಬ ಅರ್ಥ ಕೊಡುತ್ತಿತ್ತು. (ಗಲಾ. 5:19-22) “ಪ್ರೀತಿಪೂರ್ವಕ ದಯೆ” ಎಂಬ ಪದಕ್ಕೆ ಬದಲಾಗಿ “ನಿಷ್ಠಾವಂತ ಪ್ರೀತಿ” ಎಂಬ ಪದವನ್ನು ಬಳಸಲಾಗಿದೆ. ಈ ಪದವು ನಂಬಿಗಸ್ತಿಕೆ ಎಂಬ ಪದದೊಟ್ಟಿಗೆ ಹೆಚ್ಚಾಗಿ ಬಳಸಲಾಗುವ ಒಂದು ಬೈಬಲ್‌ ಪದದ ಅರ್ಥವನ್ನು ಕೊಡುತ್ತದೆ.—ಕೀರ್ತ. 36:5; 89:1.

ಕೆಲವು ಹೀಬ್ರು ಮತ್ತು ಗ್ರೀಕ್‌ ಪದಗಳನ್ನು ಎಲ್ಲಾ ಕಡೆ ಒಂದೇ ರೀತಿ ಭಾಷಾಂತರಿಸಲಾಗುತ್ತಿತ್ತು. ಆದರೆ ಈಗ ಅವುಗಳ ಪೂರ್ವಾಪರ ನೋಡಿ ಭಾಷಾಂತರಿಸಲಾಗುತ್ತದೆ. ಉದಾಹರಣೆಗೆ ಹೀಬ್ರುವಿನ ‘ಓಹ್‌-ಲಾಮ್‌’ ಎಂಬ ಪದವನ್ನು ಮುಂಚೆ “ಅನಿಶ್ಚಿತ ಸಮಯದಿಂದ ಅನಿಶ್ಚಿತ ಸಮಯದ ವರೆಗೆ” ಎಂದು ಭಾಷಾಂತರಿಸಲಾಗಿತ್ತು. ಆದರೆ ಅದಕ್ಕೆ “ಎಂದೆಂದಿಗೂ” ಎಂಬ ಅರ್ಥ ಸಹ ಇದೆ. ಈ ಅರ್ಥವು, ಕೀರ್ತನೆ 90:2 ಮತ್ತು ಮೀಕ 5:2 ರಂಥ ವಚನಗಳ ಭಾಷಾಂತರದ ಮೇಲೆ ಹೇಗೆ ಪರಿಣಾಮ ಬೀರಿದೆಯೆಂದು ಇಂಗ್ಲಿಷ್‌ ಬೈಬಲ್‍ನಲ್ಲಿ ಹೋಲಿಸಿ ನೋಡಿ.

“ಬೀಜ” ಎಂದು ಭಾಷಾಂತರಿಸಲಾಗಿರುವ ಹೀಬ್ರು ಮತ್ತು ಗ್ರೀಕ್‌ ಪದ ತುಂಬ ಬಾರಿ ಬೈಬಲ್‍ನಲ್ಲಿದೆ. ಕೃಷಿಗೆ ಸಂಬಂಧಪಟ್ಟ ವಿಷಯಗಳನ್ನು ಹೇಳುವಾಗ ಇದನ್ನು ಬಳಸಲಾಗಿದೆ. ಜೊತೆಗೆ “ಸಂತಾನ” ಎಂಬ ಆಲಂಕಾರಿಕ ಅರ್ಥ ಕೂಡ ಅದಕ್ಕಿದೆ. ಹಿಂದಿನ ಇಂಗ್ಲಿಷ್‌ ನೂತನ ಲೋಕ ಭಾಷಾಂತರ “ಬೀಜ” ಎಂಬ ಪದವನ್ನೇ ಬಳಸಿತ್ತು. ಆದರೆ 2013ರ ಆವೃತ್ತಿಯಲ್ಲಿ “ಸಂತಾನ” ಎಂಬ ಪದವನ್ನು ಬಳಸಲಾಗಿದೆ. ಏಕೆಂದರೆ “ಬೀಜ” ಎಂಬ ಪದವನ್ನು ಇಂಗ್ಲಿಷ್‍ನಲ್ಲಿ “ಸಂತಾನ”ವನ್ನು ಸೂಚಿಸಲು ಅಷ್ಟಾಗಿ ಬಳಸಲಾಗುವುದಿಲ್ಲ. ಹಾಗಾಗಿ ಪರಿಷ್ಕೃತ ಇಂಗ್ಲಿಷ್‌ ಬೈಬಲಿನಲ್ಲಿ ಆದಿಕಾಂಡ 3:15 ಮತ್ತು ಇತರ ವಚನಗಳಲ್ಲಿ “ಸಂತಾನ” ಎಂಬ ಪದವನ್ನೇ ಬಳಸಲಾಗಿದೆ. (ಆದಿ. 22:17, 18; ಪ್ರಕ. 12:17) ಇತರ ವಚನಗಳನ್ನು ಅವುಗಳ ಪೂರ್ವಾಪರ ಮನಸ್ಸಲ್ಲಿಟ್ಟು ಭಾಷಾಂತರ ಮಾಡಲಾಗಿದೆ.—ಆದಿ. 1:11; ಕೀರ್ತ. 22:30; ಯೆಶಾ. 57:3.

ಅಕ್ಷರಾರ್ಥವಿರುವ ಅನೇಕ ಪದಗಳನ್ನು ಯಾಕೆ ಬದಲಾಯಿಸಲಾಗಿದೆ? 2013ರ ಪರಿಷ್ಕೃತ ಆವೃತ್ತಿಯ ಪರಿಶಿಷ್ಟ ಎ1 ಹೀಗನ್ನುತ್ತದೆ: ‘ಅಕ್ಷರಶಃ ಪದಕ್ಕೆ ಪದ ಭಾಷಾಂತರ ಮಾಡಿದರೆ ಎಲ್ಲೆಲ್ಲಿ ತಪ್ಪಾದ ಅರ್ಥ ಬರುವ ಸಾಧ್ಯತೆ ಇದೆಯೊ ಅಲ್ಲೆಲ್ಲ ಒಂದು ಒಳ್ಳೇ ಬೈಬಲ್‌ ಭಾಷಾಂತರವು ಮೂಲ ಪದ ಅಥವಾ ಪದಗುಚ್ಛದ ಸರಿಯಾದ ಅರ್ಥವನ್ನು ಹಾಕುತ್ತದೆ.’ ಮೂಲ ಭಾಷೆಯಲ್ಲಿ ಬಳಸಲಾಗಿರುವ ನುಡಿಗಟ್ಟುಗಳು ಬೇರೆ ಭಾಷೆಗಳಲ್ಲಿ ಸರಿಯಾದ ಅರ್ಥ ಕೊಟ್ಟಾಗೆಲ್ಲ ಅದನ್ನು ಇದ್ದ ಹಾಗೇ ಭಾಷಾಂತರಿಸಲಾಗುತ್ತದೆ. ಇದನ್ನೇ ಪ್ರಕಟನೆ 2:23 ರಲ್ಲಿ ಮಾಡಲಾಗಿದೆ. “ಹೃದಯಗಳನ್ನು ಪರಿಶೋಧಿಸುವವನು” ಎಂಬ ಅಭಿವ್ಯಕ್ತಿ ಅನೇಕ ಭಾಷೆಗಳಲ್ಲಿ ಸರಿಯಾದ ಅರ್ಥ ಕೊಡುತ್ತದೆ. ಆದರೆ ಅದೇ ವಚನದಲ್ಲಿ “ಮೂತ್ರಪಿಂಡಗಳನ್ನು ಪರಿಶೋಧಿಸುವವನು” ಎಂಬ ಪದಗುಚ್ಛವೂ ಇದೆ. ಇದನ್ನು ಪದಕ್ಕೆ ಪದ ಭಾಷಾಂತರಿಸಿದರೆ ಸರಿಯಾದ ಅರ್ಥ ಬರುವುದಿಲ್ಲ. ಹಾಗಾಗಿ ಮೂಲ ಭಾಷೆಯಲ್ಲಿ “ಮೂತ್ರಪಿಂಡಗಳು” ಎಂದು ಕೊಡಲಾದ ಪದವನ್ನು “ಅಂತರಾಳದ ಯೋಚನೆಗಳು” ಎಂದು ಭಾಷಾಂತರಿಸಲಾಗಿದೆ. ಹೀಗೆ ಮೂಲ ಭಾಷೆಯ ಸರಿಯಾದ ಅರ್ಥವನ್ನು ಭಾಷಾಂತರಿಸಲಾಗಿದೆ. ಧರ್ಮೋಪದೇಶಕಾಂಡ 32:14 ರಲ್ಲಿ ಸಹ ಮೂಲ ಭಾಷೆಯಲ್ಲಿ “ಗೋದಿಯ ಕೊಬ್ಬಿದ ಮೂತ್ರಪಿಂಡ” ಎಂಬ ಅಕ್ಷರಾರ್ಥ ನುಡಿಗಟ್ಟಿದೆ. ಇದು ಸ್ಪಷ್ಟವಾಗಿ ಅರ್ಥವಾಗಲು “ಅತೀ ಶ್ರೇಷ್ಠವಾದ ಗೋದಿ” ಎಂದು ಭಾಷಾಂತರಿಸಲಾಗಿದೆ. “ನಾನು ತುಟಿಯಲ್ಲಿ ಸುನ್ನತಿ ಆಗಿಲ್ಲದವನು” ಎಂಬ ಪದಗಳು ಅನೇಕ ಭಾಷೆಗಳಲ್ಲಿ ಅರ್ಥವೇ ಆಗುವುದಿಲ್ಲ. ಹಾಗಾಗಿ “ನನಗೆ ಸ್ಪಷ್ಟವಾಗಿ ಮಾತಾಡಲು ಬರುವುದಿಲ್ಲ” ಎಂದು ಭಾಷಾಂತರಿಸಲಾಗಿದೆ.—ವಿಮೋ. 6:12.

“ಇಸ್ರಾಯೇಲಿನ ಪುತ್ರರು” ಮತ್ತು “ತಂದೆಯಿಲ್ಲದ ಹುಡುಗರು” ಎಂಬ ಅಭಿವ್ಯಕ್ತಿಗಳನ್ನು ಈಗ “ಇಸ್ರಾಯೇಲ್ಯರು” ಮತ್ತು “ತಂದೆಯಿಲ್ಲದ ಮಕ್ಕಳು” ಎಂದು ಭಾಷಾಂತರ ಮಾಡಿರುವುದೇಕೆ? ಹೀಬ್ರುವಿನಲ್ಲಿ ಸಾಮಾನ್ಯವಾಗಿ ಪುರುಷನ ಬಗ್ಗೆ ಹೇಳುವಾಗ ಪುಲ್ಲಿಂಗ, ಸ್ತ್ರೀ ಬಗ್ಗೆ ಹೇಳುವಾಗ ಸ್ತ್ರೀಲಿಂಗವನ್ನು ಬಳಸಲಾಗುತ್ತದೆ. ಆದರೆ ಕೆಲವು ಪುಲ್ಲಿಂಗ ಪದಗಳು, ಪುರುಷರು ಮತ್ತು ಸ್ತ್ರೀಯರು ಇಬ್ಬರನ್ನೂ ಒಳಗೂಡಿಸುತ್ತದೆ. ಉದಾಹರಣೆಗೆ “ಇಸ್ರಾಯೇಲಿನ ಪುತ್ರರು” ಎಂಬ ಅಭಿವ್ಯಕ್ತಿಯ ಪೂರ್ವಾಪರ ನೋಡಿದರೆ ಅದು ಸ್ತ್ರೀಪುರುಷರಿಬ್ಬರ ಬಗ್ಗೆಯೂ ಹೇಳುತ್ತಿದೆಯೆಂದು ಗೊತ್ತಾಗುತ್ತದೆ. ಹಾಗಾಗಿ ಅದನ್ನು ಸಾಮಾನ್ಯವಾಗಿ ಈಗ “ಇಸ್ರಾಯೇಲ್ಯರು” ಎಂದು ಭಾಷಾಂತರಿಸಲಾಗಿದೆ.—ವಿಮೋ. 1:7; 35:29; 2 ಅರ. 8:12.

ಹಾಗೆಯೇ ಹಿಂದಿನ ನೂತನ ಲೋಕ ಭಾಷಾಂತರ ಆವೃತ್ತಿಗಳಲ್ಲಿ ಆದಿಕಾಂಡ 3:16 ರಲ್ಲಿರುವ “ಪುತ್ರರು” ಎಂಬ ಹೀಬ್ರು ಪುಲ್ಲಿಂಗ ಪದವನ್ನು “ಮಕ್ಕಳು” ಎಂದು ಭಾಷಾಂತರಿಸಲಾಗಿತ್ತು. ಆದರೆ ವಿಮೋಚನಕಾಂಡ 22:24 ರಲ್ಲಿ ಇದೇ ಪದವನ್ನು ಮುಂಚೆ “ಪುತ್ರರು” ಎಂದೇ ಭಾಷಾಂತರಿಸಲಾಗಿತ್ತು. ಈಗ ಅದನ್ನು “ನಿಮ್ಮ ಮಕ್ಕಳು [ಹೀಬ್ರುವಿನಲ್ಲಿ, “ಪುತ್ರರು”] ತಂದೆಯಿಲ್ಲದವರಾಗುವರು” ಎಂದು ಭಾಷಾಂತರಿಸಲಾಗಿದೆ. ಈ ತತ್ವವನ್ನು ಬಳಸಿ ಎಲ್ಲೆಲ್ಲಿ “ತಂದೆಯಿಲ್ಲದ ಹುಡುಗ” ಎಂದು ಇದೆಯೊ ಅಲ್ಲಿ “ತಂದೆಯಿಲ್ಲದ ಮಗು” ಅಥವಾ “ತಬ್ಬಲಿ” ಎಂದು ಭಾಷಾಂತರಿಸಲಾಗಿದೆ. (ಧರ್ಮೋ. 10:18; ಯೋಬ 6:27) ಗ್ರೀಕ್‌ ಸೆಪ್ಟೂಅಜಂಟ್‌ನಲ್ಲಿ ಸಹ ಹೀಗೇ ಇದೆ. ಈ ಕಾರಣಕ್ಕೇ ಪ್ರಸಂಗಿ 12:1 ರಲ್ಲಿ “ನಿನ್ನ ಯೌವನದ ಗಂಡಸುತನದ ದಿನಗಳು” ಎಂದು ಇದ್ದದ್ದನ್ನು “ನಿನ್ನ ಯೌವನದ ದಿನಗಳು” ಎಂದು ಭಾಷಾಂತರಿಸಲಾಗಿದೆ.

ಅನೇಕ ಹೀಬ್ರು ಕ್ರಿಯಾಪದಗಳನ್ನು ಸರಳ ಮಾಡಲಾಗಿದೆ ಏಕೆ? ಹೀಬ್ರು ಭಾಷೆಯಲ್ಲಿ ಎರಡು ಮುಖ್ಯ ಕ್ರಿಯಾಪದಗಳಿವೆ. ಒಂದು, ಕ್ರಿಯೆ ಇನ್ನೂ ನಡೆಯುತ್ತಿದೆ, ಮುಗಿದಿಲ್ಲ ಎಂದು ಸೂಚಿಸುವ ಅಪೂರ್ಣವಾಚಕ ಕ್ರಿಯಾಪದ. ಇನ್ನೊಂದು, ಪೂರ್ಣಗೊಂಡಿರುವ ಕಾರ್ಯವನ್ನು ಸೂಚಿಸುವ ಪೂರ್ಣವಾಚಕ ಕ್ರಿಯಾಪದ. ನೂತನ ಲೋಕ ಭಾಷಾಂತರದ ಹಿಂದಿನ ಆವೃತ್ತಿಗಳಲ್ಲಿ ಅಪೂರ್ಣವಾಚಕ ಕ್ರಿಯಾಪದಗಳನ್ನು ಭಾಷಾಂತರಿಸಲು ಕ್ರಿಯಾಪದಗಳನ್ನು ಮತ್ತು “ಮುಂದುವರಿಸುತ್ತಾ” ಅಥವಾ “ಹೇಳುತ್ತಾ ಮುಂದುವರಿಸಿದ್ದು” ಎಂಬ ಸಹಾಯಕ ಪದಗಳನ್ನು ಬಳಸಲಾಗಿತ್ತು. ಇದು ಮುಂದುವರಿಯುವ ಕ್ರಿಯೆಯನ್ನು ಅಥವಾ ಪದೇಪದೇ ಮಾಡಲಾದ ಕ್ರಿಯೆಯನ್ನು ಸೂಚಿಸುತ್ತದೆ. * ಒತ್ತುಕೊಡುವ ಪದಗಳನ್ನು ಅಂದರೆ “ನಿಶ್ಚಯವಾಗಿಯೂ,” “ಖಂಡಿತ,” “ಮಾಡಲೇಬೇಕು” ಎಂಬ ಪದಗಳನ್ನು ಮುಗಿದ ಕ್ರಿಯೆಯನ್ನು ಸೂಚಿಸುವ ಪೂರ್ಣವಾಚಕ ಕ್ರಿಯಾಪದಗಳಿಗೆ ಬಳಸಲಾಗಿತ್ತು.

ಅರ್ಥವನ್ನು ಸ್ಪಷ್ಟಗೊಳಿಸಲಿಕ್ಕಾಗಿ ಮಾತ್ರ 2013ರ ಪರಿಷ್ಕೃತ ಬೈಬಲ್‍ನಲ್ಲಿ ಇಂಥ ಸಹಾಯಕ ಪದಗಳನ್ನು ಬಳಸಲಾಗಿದೆ. ಉದಾಹರಣೆಗೆ, “ಬೆಳಕು ಉಂಟಾಗಲಿ” ಎಂಬ ಮಾತುಗಳನ್ನು ದೇವರು ಪದೇಪದೇ ಹೇಳಿದನೆಂದು ಒತ್ತುಕೊಡುವ ಅಗತ್ಯವಿಲ್ಲ. ಹಾಗಾಗಿ 2013ರ ಬೈಬಲಿನಲ್ಲಿ ಅಪೂರ್ಣವಾಚಕ ಕ್ರಿಯಾಪದವಾದ “ಹೇಳು” ಎಂಬ ಪದವನ್ನು ಕ್ರಿಯೆ ಮುಂದುವರಿಯುತ್ತಾ ಇರುವ ಧಾಟಿಯಲ್ಲಿ ಕೊಡಲಾಗಿಲ್ಲ. (ಆದಿ. 1:3) ಆದರೆ ಆದಿಕಾಂಡ 3:9 ರಲ್ಲಿ ಯೆಹೋವನು ಆದಾಮನನ್ನು ಪದೇಪದೇ ಕರೆದದ್ದರಿಂದ ಅಲ್ಲಿ ಮಾತ್ರ “ಕರೆಯುತ್ತಾ ಇದ್ದನು” ಎಂದೇ ಹೇಳಲಾಗಿದೆ. ಒಟ್ಟಾರೆ ನೋಡುವುದಾದರೆ ಕ್ರಿಯಾಪದಗಳನ್ನು ಸರಳವಾಗಿ ಭಾಷಾಂತರಿಸಲಾಗಿದೆ. ಹೀಗೆ, ಹೀಬ್ರುವಿನಲ್ಲಿರುವಂತೆ ಒಂದು ಕ್ರಿಯೆ ಪೂರ್ಣವಾಚಕ ಅಥವಾ ಅಪೂರ್ಣವಾಚಕ ಆಗಿದೆಯಾ ಎಂಬುದಕ್ಕೆ ಗಮನ ಕೊಡುವ ಬದಲು ಕೇವಲ ಕ್ರಿಯೆಗೆ ಗಮನ ಕೊಡಲಾಗಿದೆ. ಹೀಗೆ ಮಾಡುವುದರಿಂದ ಹೀಬ್ರುವಿನಲ್ಲಿ ಇರುವ ಹಾಗೆ ಚಿಕ್ಕಚಿಕ್ಕ ವಾಕ್ಯಗಳನ್ನು ಹಾಕಲು ತಕ್ಕಮಟ್ಟಿಗೆ ಸಾಧ್ಯವಾಗಿದೆ.

ಮೂಲ ಗ್ರಂಥಪಾಠದಲ್ಲಿದ್ದ ಕಾವ್ಯಾತ್ಮಕ ಶೈಲಿಯನ್ನು ತೋರಿಸಲಿಕ್ಕಾಗಿ ಈಗ ಹೆಚ್ಚಿನ ಅಧ್ಯಾಯಗಳನ್ನು ಕಾವ್ಯ-ಪಂಕ್ತಿ ರೂಪದಲ್ಲಿ ಇಡಲಾಗಿದೆ

ಪರಿಷ್ಕೃತ ಬೈಬಲಿನಲ್ಲಿ ಹಿಂದಿಗಿಂತ ಹೆಚ್ಚು ಅಧ್ಯಾಯಗಳು ಏಕೆ ಕಾವ್ಯ-ಪಂಕ್ತಿ ರೂಪದಲ್ಲಿವೆ? ಬೈಬಲಿನ ಅನೇಕ ಭಾಗಗಳನ್ನು ಮೊದಲಾಗಿ ಬರೆದದ್ದು ಕಾವ್ಯಾತ್ಮಕವಾಗಿ. ಇಂದಿನ ಭಾಷೆಗಳ ಕಾವ್ಯದಲ್ಲಿ ಹೆಚ್ಚಾಗಿ ಪ್ರಾಸ ಇರುತ್ತದೆ. ಆದರೆ ಹೀಬ್ರು ಕಾವ್ಯಗಳಲ್ಲಿ ಸಮಾನತೆ ಮತ್ತು ವಿರುದ್ಧ ಅರ್ಥ ಬರುವ ಪದಗಳನ್ನು ಬಳಸಲಾಗಿದೆ. ತಾಳಕ್ಕಾಗಿ ಪ್ರಾಸ ಪದಗಳನ್ನು ಬಳಸದೆ ವಿಷಯಗಳನ್ನು ತರ್ಕಬದ್ಧ ಕ್ರಮದಲ್ಲಿ ಹಾಕಲಾಗಿದೆ.

ನೂತನ ಲೋಕ ಭಾಷಾಂತರದ ಹಿಂದಿನ ಆವೃತ್ತಿಗಳಲ್ಲಿ ಯೋಬ ಮತ್ತು ಕೀರ್ತನೆ ಪುಸ್ತಕಗಳನ್ನು ಕಾವ್ಯ-ಪಂಕ್ತಿ ರೂಪದಲ್ಲಿ ರಚಿಸಲಾಗಿತ್ತು. ಇದರಲ್ಲಿರುವ ವಿಷಯಗಳನ್ನು ಮೂಲತಃ ಹಾಡುವ ಅಥವಾ ಪಠಿಸುವ ರೀತಿಯಲ್ಲಿ ಬರೆಯಲಾಗಿತ್ತೆಂದು ತೋರಿಸಲಿಕ್ಕಾಗಿ ಹೀಗೆ ಮಾಡಲಾಯಿತು. ಈ ರೀತಿಯ ಕಾವ್ಯ-ಪಂಕ್ತಿ ರೂಪವು ಒತ್ತುಕೊಡುವಂಥ ಕಾವ್ಯಾತ್ಮಕ ಅಂಶಗಳನ್ನು ಎತ್ತಿತೋರಿಸುತ್ತದೆ ಮತ್ತು ನೆನಪಿಟ್ಟುಕೊಳ್ಳಲು ಸಹಾಯವಾಗುತ್ತದೆ. 2013ರ ಪರಿಷ್ಕೃತ ಆವೃತ್ತಿಯಲ್ಲಿ ಜ್ಞಾನೋಕ್ತಿ, ಪರಮಗೀತ ಮತ್ತು ಪ್ರವಾದನಾ ಪುಸ್ತಕಗಳಲ್ಲಿನ ಅನೇಕ ಅಧ್ಯಾಯಗಳು ಸಹ ಈಗ ಕಾವ್ಯ-ಪಂಕ್ತಿ ರೂಪದಲ್ಲಿವೆ. ಇವುಗಳನ್ನು ಮೂಲತಃ ಕಾವ್ಯರೂಪದಲ್ಲಿ ಬರೆಯಲಾಗಿತ್ತೆಂದು ತೋರಿಸಲು ಮತ್ತು ಅದರಲ್ಲಿರುವ ಸಮಾನತೆ ಮತ್ತು ವಿರುದ್ಧ ಅರ್ಥ ಬರುವ ಪದಗಳನ್ನು ಎತ್ತಿ ತೋರಿಸಲು ಇದನ್ನು ಮಾಡಲಾಯಿತು. ಉದಾಹರಣೆಗೆ ಯೆಶಾಯ 24:2 ರ ಪ್ರತಿ ಸಾಲಿನಲ್ಲಿ ವಿರುದ್ಧ ಅರ್ಥವಿರುವ ಪದಗಳಿವೆ. ಅದರಲ್ಲಿರುವ ಪ್ರತಿ ಸಾಲು ಹಿಂದಿನ ಸಾಲಿನಲ್ಲಿರುವ ವಿಷಯಕ್ಕೆ ಕೂಡಿಸುತ್ತಾ ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳಲಾರರು ಎನ್ನುವುದಕ್ಕೆ ಒತ್ತುಕೊಡುತ್ತದೆ. ಇಂಥ ಭಾಗಗಳು ಕಾವ್ಯರೂಪದಲ್ಲಿ ಇರುವುದನ್ನು ನೋಡುವಾಗ ಅದರ ಲೇಖಕನು ಬರೆದದ್ದನ್ನೇ ಪುನಃ ಪುನಃ ಬರೆದದ್ದಲ್ಲ, ಬದಲಾಗಿ ದೇವರ ಸಂದೇಶಕ್ಕೆ ಒತ್ತು ಕೊಡಲು ಕಾವ್ಯಾತ್ಮಕ ಶೈಲಿ ಬಳಸುತ್ತಿದ್ದನೆಂದು ಓದುಗರಿಗೆ ತಿಳಿಯಲು ಸಹಾಯ ಮಾಡುತ್ತದೆ.

ಹೀಬ್ರು ಗದ್ಯಭಾಗ ಮತ್ತು ಕಾವ್ಯಭಾಗದಲ್ಲಿ ಇರುವ ವ್ಯತ್ಯಾಸ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಹಾಗಾಗಿ ಬೇರೆಬೇರೆ ಭಾಷಾಂತರಗಳಲ್ಲಿ ಗದ್ಯ ಅಥವಾ ಕಾವ್ಯರೂಪವಾಗಿ ಕೊಡಲಾಗಿರುವ ಭಾಗಗಳಲ್ಲಿ ಭಿನ್ನತೆ ಇದೆ. ಯಾವ ಭಾಗ ಕಾವ್ಯರೂಪದಲ್ಲಿ ಮುದ್ರಿಸಬೇಕು ಎನ್ನುವುದನ್ನು ಭಾಷಾಂತರಕಾರರು ನಿರ್ಧರಿಸಿದ್ದಾರೆ. ಕೆಲವು ಭಾಷಾಂತರಗಳಲ್ಲಿ ಗದ್ಯ ಭಾಗಗಳಲ್ಲಿ ಕಾವ್ಯಾತ್ಮಕ ಪದಗಳನ್ನು ಬಳಸಲಾಗಿದೆ. ಅವುಗಳಲ್ಲಿ ಚಿತ್ರಾತ್ಮಕ ಭಾಷೆ, ಪದಗಳ ಆಸಕ್ತಿಕರ ಪ್ರಯೋಗ ಮತ್ತು ಸಮಾನತೆಯನ್ನು ಬಳಸಿ ನಿರ್ದಿಷ್ಟ ವಿಷಯಕ್ಕೆ ಒತ್ತುಕೊಡಲಾಗಿದೆ.

‘ಒಳವಿಷಯಗಳ ಹೊರಮೇರೆ’ ಎಂಬ ಹೊಸ ವೈಶಿಷ್ಟ್ಯ ಪರಿಷ್ಕೃತ ಬೈಬಲಿನಲ್ಲಿದೆ. ಪ್ರಾಚೀನ ಕಾವ್ಯಗಳಲ್ಲಿ ವಿಶೇಷವಾಗಿ ಪರಮಗೀತ ಪುಸ್ತಕದಲ್ಲಿ ಯಾರು ಮಾತಾಡುತ್ತಿದ್ದಾರೆ ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ.

ಮೂಲ ಭಾಷೆಯ ಹಸ್ತಪ್ರತಿಗಳ ಅಧ್ಯಯನ ಪರಿಷ್ಕೃತ ಆವೃತ್ತಿಗೆ ಹೇಗೆ ಸಹಾಯವಾಗಿದೆ? ಮೂಲ ನೂತನ ಲೋಕ ಭಾಷಾಂತರ, ಹೀಬ್ರು ಮ್ಯಾಸರೆಟಿಕ್‌ ಗ್ರಂಥಪಾಠ ಮತ್ತು ತುಂಬ ಮಾನ್ಯತೆ ಇರುವ ವೆಸ್ಟ್‌ಕಾಟ್‌ ಹಾಗೂ ಹೊರ್ಟ್ರ ಗ್ರೀಕ್‌ ಗ್ರಂಥಪಾಠದ ಮೇಲೆ ಆಧರಿತವಾಗಿತ್ತು. ಪ್ರಾಚೀನ ಬೈಬಲ್‌ ಹಸ್ತಪ್ರತಿಗಳ ಅಧ್ಯಯನ ಇನ್ನೂ ಮುಂದುವರಿದಿದೆ. ಇದು ಕೆಲವು ನಿರ್ದಿಷ್ಟ ಬೈಬಲ್‌ ವಚನಗಳ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಿದೆ. ಮೃತ ಸಮುದ್ರ ಸುರುಳಿಗಳ ಹೆಚ್ಚಿನ ಪ್ರತಿಗಳು ಲಭ್ಯವಾಗಿವೆ. ಇನ್ನಷ್ಟು ಗ್ರೀಕ್‌ ಹಸ್ತಪ್ರತಿಗಳ ಅಧ್ಯಯನ ನಡೆದಿದೆ. ಹಸ್ತಪ್ರತಿಗಳ ಸದ್ಯೋಚಿತ ಪುರಾವೆ ಇಂದು ಕಂಪ್ಯೂಟರ್‌ನಲ್ಲೂ ಲಭ್ಯ. ಇದರ ನೆರವಿನಿಂದ ಹಸ್ತಪ್ರತಿಗಳಲ್ಲಿನ ವ್ಯತ್ಯಾಸಗಳನ್ನು ಸುಲಭವಾಗಿ ಪರಿಶೀಲಿಸಿ ಯಾವ ಹೀಬ್ರು ಅಥವಾ ಗ್ರೀಕ್‌ ಗ್ರಂಥಪಾಠ ಹೆಚ್ಚು ಉತ್ತಮವೆಂದು ಕಂಡುಹಿಡಿಯಬಹುದು. ನೂತನ ಲೋಕ ಬೈಬಲ್‌ ಭಾಷಾಂತರ ಸಮಿತಿ ಇವೆಲ್ಲದರ ಸಹಾಯ ಪಡೆದು ನಿರ್ದಿಷ್ಟ ವಚನಗಳ ಅಧ್ಯಯನ ಮಾಡಿ ಬದಲಾವಣೆಗಳನ್ನು ಮಾಡಿದೆ.

ಉದಾಹರಣೆಗೆ ಗ್ರೀಕ್‌ ಸೆಪ್ಟೂಅಜಂಟ್‌ನಲ್ಲಿ 2 ಸಮುವೇಲ 13:21 ಹೀಗಿದೆ: “ಅವನು ತನ್ನ ಮಗನಾದ ಅಮ್ನೋನನ ಮನಸ್ಸಿಗೆ ನೋವು ಮಾಡುತ್ತಿರಲಿಲ್ಲ. ಏಕೆಂದರೆ ಅಮ್ನೋನನು ಅವನ ಮೊದಲ ಮಗನಾಗಿದ್ದನು ಮತ್ತು ಅವನನ್ನು ಪ್ರೀತಿಸುತ್ತಿದ್ದನು.” ಹಿಂದಿನ ನೂತನ ಲೋಕ ಭಾಷಾಂತರದ ಆವೃತ್ತಿಗಳಲ್ಲಿ ಈ ಪದಗಳಿರಲಿಲ್ಲ. ಕಾರಣ ಅವು ಮ್ಯಾಸರೆಟಿಕ್‌ ಗ್ರಂಥಪಾಠದಲ್ಲಿ ಇರಲಿಲ್ಲ. ಆದರೆ ಮೃತ ಸಮುದ್ರ ಸುರುಳಿಗಳಲ್ಲಿ ಈ ಪದಗಳು ಇರುವುದರಿಂದ 2013ರ ಪರಿಷ್ಕೃತ ಆವೃತ್ತಿಯಲ್ಲಿ ಇವುಗಳನ್ನು ಸೇರಿಸಲಾಗಿದೆ. ಈ ಕಾರಣಕ್ಕೇ ದೇವರ ಹೆಸರನ್ನು ಐದು ಬಾರಿ ಮೊದಲನೇ ಸಮುವೇಲ ಪುಸ್ತಕದಲ್ಲಿ ಸೇರಿಸಲಾಗಿದೆ. ಗ್ರೀಕ್‌ ಗ್ರಂಥಪಾಠಗಳ ಅಧ್ಯಯನದಿಂದ ಮತ್ತಾಯ 21:29-31 ರಲ್ಲಿ ವಿಷಯಗಳ ಕ್ರಮದಲ್ಲಿಯೂ ಬದಲಾವಣೆ ಮಾಡಲಾಗಿದೆ. ಹೀಗೆ ಒಂದೇ ಗ್ರೀಕ್‌ ಗ್ರಂಥಪಾಠಕ್ಕೆ ಅಂಟಿಕೊಂಡಿರುವ ಬದಲು ಹಲವಾರು ಹಸ್ತಪ್ರತಿಗಳ ಪುರಾವೆಯ ಮೇರೆಗೆ ಕೆಲವು ಬದಲಾವಣೆಗಳನ್ನು ಮಾಡಲಾಯಿತು.

ಮಾಡಲಾದ ಬದಲಾವಣೆಗಳಲ್ಲಿ ಇವು ಕೆಲವೇ. ಇವುಗಳಿಂದಾಗಿ ನೂತನ ಲೋಕ ಭಾಷಾಂತರವನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಈ ಭಾಷಾಂತರವನ್ನು ಅನೇಕರು, ಸಂವಾದ ಮಾಡುವ ದೇವರಿಂದ ಬಂದ ಒಂದು ಉಡುಗೊರೆ ಎಂದೆಣಿಸುತ್ತಾರೆ.

^ ಪ್ಯಾರ. 10 ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿತ್‌ ರೆಫರೆನ್ಸ್‌ನ ಪರಿಶಿಷ್ಟ 3ಸಿಯಲ್ಲಿ “ಮುಂದುವರಿಯುವ ಅಥವಾ ನಡೆಯುತ್ತಿರುವ ಕ್ರಿಯೆ ಸೂಚಿಸುವ ಹೀಬ್ರು ಕ್ರಿಯಾಪದಗಳು” ನೋಡಿ.