ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ—ಮನುಷ್ಯರೊಟ್ಟಿಗೆ ಸಂವಾದ ಮಾಡುವ ದೇವರು

ಯೆಹೋವ—ಮನುಷ್ಯರೊಟ್ಟಿಗೆ ಸಂವಾದ ಮಾಡುವ ದೇವರು

“ದಯೆಮಾಡಿ ಕೇಳು, ನಾನೇ ಮಾತಾಡುವೆನು.”—ಯೋಬ 42:4.

ಗೀತೆಗಳು: 113, 114

1-3. (ಎ) ದೇವರ ಯೋಚನೆಗಳು, ಭಾಷಾ ಕೌಶಲಗಳು ಮನುಷ್ಯರದಕ್ಕಿಂತ ಉನ್ನತ ಮಟ್ಟದ್ದೆಂದು ಏಕೆ ಹೇಳಬಹುದು? (ಬಿ) ಈ ಲೇಖನದಲ್ಲಿ ಏನು ಕಲಿಯಲಿದ್ದೇವೆ?

ಯೆಹೋವನು ಜೀವ ಮತ್ತು ಸಂತೋಷವನ್ನು ಹಂಚಿಕೊಳ್ಳಲು ಬಯಸುವ ದೇವರು. ಹಾಗಾಗಿ ಅವನು ದೇವದೂತರನ್ನು, ನಂತರ ಮನುಷ್ಯರನ್ನು ಸೃಷ್ಟಿಸಿದನು. (ಕೀರ್ತ. 36:9; 1 ತಿಮೊ. 1:11) ಆದರೆ ಅಪೊಸ್ತಲ ಯೋಹಾನ “ವಾಕ್ಯ” ಎಂದು ಕರೆದವನೇ ಯೆಹೋವನ ಮೊದಲ ಸೃಷ್ಟಿ. (ಯೋಹಾ. 1:1; ಪ್ರಕ. 3:14) ಇವನಿಗೆ ಅಂದರೆ ಯೇಸುವಿಗೆ ತನ್ನ ಯೋಚನೆಗಳನ್ನು ಮತ್ತು ಭಾವನೆಗಳನ್ನು ಯೆಹೋವನು ವ್ಯಕ್ತಪಡಿಸಿದನು. (ಯೋಹಾ. 1:14, 17; ಕೊಲೊ. 1:15) ದೇವದೂತರು ಸಹ ತಮ್ಮ ಭಾಷೆಯಲ್ಲಿ ಮಾತಾಡುತ್ತಾರೆ ಎಂದು ಅಪೊಸ್ತಲ ಪೌಲ ಹೇಳಿದನು. ಆ ಭಾಷೆ ಮನುಷ್ಯರ ಭಾಷೆಗಿಂತ ಭಿನ್ನವಾಗಿದೆ.—1 ಕೊರಿಂ. 13:1.

2 ಯೆಹೋವನಿಗೆ ತಾನು ಸೃಷ್ಟಿಮಾಡಿರುವ ಬಿಲ್ಯಾಂತರ ದೇವದೂತರು ಮತ್ತು ಮನುಷ್ಯರ ಬಗ್ಗೆ ಎಲ್ಲವೂ ಗೊತ್ತು. ಕೋಟಿಗಟ್ಟಲೆ ಜನರು ಮಾಡುವ ಪ್ರಾರ್ಥನೆಗಳನ್ನು ಒಂದೇ ಸಮಯದಲ್ಲಿ ಕಿವಿಗೊಡಲು ಅವನಿಂದಾಗುತ್ತದೆ. ಅವರು ಯಾವುದೇ ಭಾಷೆಯಲ್ಲಿ ಪ್ರಾರ್ಥನೆ ಮಾಡಿದರೂ ಆತನಿಗೆ ಅರ್ಥವಾಗುತ್ತದೆ. ಆ ಪ್ರಾರ್ಥನೆಗಳಿಗೆಲ್ಲ ಕಿವಿಗೊಡುತ್ತಿರುವ ಸಮಯದಲ್ಲೇ ಯೆಹೋವನು ದೇವದೂತರಿಗೆ ನಿರ್ದೇಶನಗಳನ್ನೂ ಕೊಡುತ್ತಿರುತ್ತಾನೆ. ಇವೆಲ್ಲವನ್ನು ಯೆಹೋವನು ಮಾಡಬೇಕಾದರೆ ಆತನ ಯೋಚನೆಗಳು ಮತ್ತು ಭಾಷಾ ಕೌಶಲಗಳು ಮನುಷ್ಯರ ಯೋಚನೆಗಳು, ಭಾಷೆಗಳಿಗಿಂತ ಎಷ್ಟೋ ಉನ್ನತ ಮಟ್ಟದ್ದಾಗಿರಲೇಬೇಕು. (ಯೆಶಾಯ 55:8, 9 ಓದಿ.) ಹಾಗಾಗಿ ಯೆಹೋವನು ಮನುಷ್ಯರೊಟ್ಟಿಗೆ ಸಂವಾದ ಮಾಡುವಾಗ ಅಂದರೆ ತನ್ನ ಯೋಚನೆಗಳನ್ನು ವ್ಯಕ್ತಪಡಿಸುವಾಗ ತನ್ನ ಸಂದೇಶವನ್ನು ಅವರು ಅರ್ಥಮಾಡಿಕೊಳ್ಳುವಂತೆ ಸರಳ ಮಾಡುತ್ತಾನೆ.

3 ಯೆಹೋವನು ಮನುಷ್ಯರೊಟ್ಟಿಗೆ ಹೇಗೆ ಸ್ಪಷ್ಟವಾಗಿ ಸಂವಾದ ಮಾಡುತ್ತಾನೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಸಂವಾದ ಮಾಡುವ ತನ್ನ ಮಾಧ್ಯಮವನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ಹೇಗೆ ಬದಲಾಯಿಸುತ್ತಾನೆಂದೂ ಕಲಿಯಲಿದ್ದೇವೆ.

ದೇವರು ಮನುಷ್ಯರೊಟ್ಟಿಗೆ ಸಂವಾದ ಮಾಡುತ್ತಾನೆ

4. (ಎ) ಮೋಶೆ, ಸಮುವೇಲ, ದಾವೀದರ ಜೊತೆ ಮಾತಾಡಿದಾಗ ಯೆಹೋವನು ಯಾವ ಭಾಷೆ ಬಳಸಿದನು? (ಬಿ) ಬೈಬಲಿನಲ್ಲಿ ಏನೆಲ್ಲಾ ದಾಖಲಿಸಲಾಗಿದೆ?

4 ಯೆಹೋವನು ಏದೆನ್‌ ತೋಟದಲ್ಲಿ ಮೊದಲ ಮನುಷ್ಯನಾದ ಆದಾಮನೊಟ್ಟಿಗೆ ಬಹುಶಃ ಪುರಾತನ ಹೀಬ್ರು ಭಾಷೆಯಲ್ಲಿ ಮಾತಾಡಿದನು. ನಂತರ ಯೆಹೋವನು ಮೋಶೆ, ಸಮುವೇಲ, ದಾವೀದರೊಟ್ಟಿಗೂ ಮಾತಾಡಿದನು. ಇವರು ಹೀಬ್ರು ಭಾಷೆ ಮಾತಾಡುತ್ತಿದ್ದರು. ದೇವರ ಯೋಚನೆಗಳನ್ನು ಹೀಬ್ರುವಿನಲ್ಲಿ ಬರೆದಿಟ್ಟರು. ಇದನ್ನು ತಮ್ಮ ಸ್ವಂತ ಮಾತುಗಳಲ್ಲಿ ಮತ್ತು ಶೈಲಿಗಳಲ್ಲಿ ಬರೆದರು. ಯೆಹೋವನು ನೇರವಾಗಿ ನುಡಿದ ಮಾತುಗಳನ್ನು ಮತ್ತು ಆತನು ತನ್ನ ಜನರೊಟ್ಟಿಗೆ ವ್ಯವಹರಿಸಿದ್ದರ ಬಗ್ಗೆಯೂ ಬರೆದರು. ದೇವರ ಮೇಲೆ ಆತನ ಜನರಿಗಿದ್ದ ಪ್ರೀತಿ, ನಂಬಿಕೆಯನ್ನು ಬೈಬಲಿನಲ್ಲಿ ದಾಖಲಿಸಿದರು. ಅವರು ತಮ್ಮ ಸ್ವಂತ ತಪ್ಪುಗಳು ಮತ್ತು ಅಪನಂಬಿಗಸ್ತಿಕೆಯ ಬಗ್ಗೆಯೂ ಹೇಳಿದರು. ಈ ಎಲ್ಲಾ ಮಾಹಿತಿ ನಮ್ಮ ಪ್ರಯೋಜನಕ್ಕಾಗಿ ಇದೆ.—ರೋಮ. 15:4.

5. ಮನುಷ್ಯರೊಟ್ಟಿಗೆ ಮಾತಾಡಲು ದೇವರು ಹೀಬ್ರು ಭಾಷೆ ಮಾತ್ರ ಬಳಸುತ್ತಿದ್ದನಾ? ವಿವರಿಸಿ.

5 ಯೆಹೋವನು ಯಾವಾಗಲೂ ಮನುಷ್ಯರೊಟ್ಟಿಗೆ ಹೀಬ್ರುವಿನಲ್ಲಿ ಮಾತಾಡಲಿಲ್ಲ. ಇಸ್ರಾಯೇಲ್ಯರು ಬಾಬೆಲಿನಿಂದ ಬಿಡುಗಡೆಯಾದ ಸಮಯದಷ್ಟಕ್ಕೆ ಕೆಲವರು ಅರಮಾಯ (ಆರಮೇಯಿಕ್‌) ಭಾಷೆಯನ್ನು ತಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ಬಳಸುತ್ತಿದ್ದರು. ಈ ಕಾರಣಕ್ಕೇ ದಾನಿಯೇಲ, ಯೆರೆಮೀಯ, ಎಜ್ರರು ಬೈಬಲಿನ ಕೆಲವು ಭಾಗಗಳನ್ನು ಅರಮಾಯ ಭಾಷೆಯಲ್ಲಿ ಬರೆದರು. *—ಪಾದಟಿಪ್ಪಣಿ ನೋಡಿ.

6. ಹೀಬ್ರು ಶಾಸ್ತ್ರಗ್ರಂಥವನ್ನು ಯಾಕೆ ಗ್ರೀಕ್‍ಗೆ ಭಾಷಾಂತರ ಮಾಡಲಾಯಿತು?

6 ಮುಂದಕ್ಕೆ ಮಹಾ ಅಲೆಗ್ಸಾಂಡರನು ಲೋಕದ ಅನೇಕ ಭಾಗಗಳನ್ನು ಜಯಿಸಿದನು. ಕೊಯಿನೆ ಅಂದರೆ ಸಾಮಾನ್ಯ ಗ್ರೀಕ್‌ ಭಾಷೆ ಅಂತಾರಾಷ್ಟ್ರೀಯ ಭಾಷೆಯಾಯಿತು. ಅನೇಕ ಯೆಹೂದ್ಯರು ಗ್ರೀಕ್‌ ಮಾತಾಡಲು ಆರಂಭಿಸಿದರು. ಹಾಗಾಗಿ ಹೀಬ್ರು ಶಾಸ್ತ್ರಗ್ರಂಥವನ್ನು ಗ್ರೀಕ್‍ಗೆ ಭಾಷಾಂತರಿಸಲಾಯಿತು. ಈ ಭಾಷಾಂತರವನ್ನು ಸೆಪ್ಟೂಅಜಂಟ್‌ ಎಂದು ಕರೆಯಲಾಗುತ್ತದೆ. ಇದು ಬೈಬಲಿನ ಮೊದಲ ಭಾಷಾಂತರ. ಅತೀ ಮುಖ್ಯವಾದ ಭಾಷಾಂತರಗಳಲ್ಲಿ ಒಂದು. 72 ಮಂದಿ ಈ ಭಾಷಾಂತರ ಮಾಡಿದ್ದರೆಂದು ತಜ್ಞರು ನಂಬುತ್ತಾರೆ. * (ಪಾದಟಿಪ್ಪಣಿ ನೋಡಿ.) ಕೆಲವರು ಹೀಬ್ರು ಶಾಸ್ತ್ರಗ್ರಂಥವನ್ನು ಶಬ್ದಾನುವಾದ ಮಾಡಿದರು. ಇನ್ನು ಕೆಲವರು ಹಾಗೆ ಮಾಡದೆ ಅರ್ಥವನ್ನು ಭಾಷಾಂತರಿಸಿದರು. ಹಾಗಿದ್ದರೂ ಗ್ರೀಕ್‌ ಮಾತಾಡುವ ಯೆಹೂದ್ಯರು ಮತ್ತು ಕ್ರೈಸ್ತರು ಸೆಪ್ಟೂಅಜಂಟ್‌ ಅನ್ನು ದೇವರ ವಾಕ್ಯ ಎಂದು ನಂಬುತ್ತಿದ್ದರು.

7. ಯೇಸು ತನ್ನ ಶಿಷ್ಯರಿಗೆ ಯಾವ ಭಾಷೆಯಲ್ಲಿ ಕಲಿಸಿದನು?

7 ಯೇಸು ಭೂಮಿಯಲ್ಲಿದ್ದಾಗ ಬಹುಶಃ ಹೀಬ್ರು ಭಾಷೆ ಮಾತಾಡಿರಬೇಕು. (ಯೋಹಾ. 19:20; 20:16; ಅ. ಕಾ. 26:14) ಆ ಕಾಲದಲ್ಲಿ ಸಾಮಾನ್ಯವಾಗಿದ್ದ ಕೆಲವು ಅರಮಾಯ ಪದಗಳನ್ನು ಸಹ ಅವನು ಬಳಸಿರಬಹುದು. ಆದರೆ ಅವನಿಗೆ ಮೋಶೆ ಮತ್ತು ಪ್ರವಾದಿಗಳು ಮಾತಾಡುತ್ತಿದ್ದ ಪುರಾತನ ಹೀಬ್ರು ಭಾಷೆ ಸಹ ಗೊತ್ತಿತ್ತು. ಅವರ ಬರಹಗಳನ್ನು ಸಭಾಮಂದಿರಗಳಲ್ಲಿ ಪ್ರತಿ ವಾರ ಓದಲಾಗುತ್ತಿತ್ತು. (ಲೂಕ 4:17-19; 24:44, 45; ಅ. ಕಾ. 15:21) ಯೇಸುವಿನ ಕಾಲದಲ್ಲಿ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳನ್ನು ಮಾತಾಡಲಾಗುತ್ತಿತ್ತು. ಆದರೆ ಯೇಸು ಆ ಭಾಷೆಗಳನ್ನು ಮಾತಾಡಿದನೋ ಎಂಬುದರ ಬಗ್ಗೆ ಬೈಬಲಿನಲ್ಲಿ ಯಾವುದೇ ಮಾಹಿತಿ ಇಲ್ಲ.

8, 9. (ಎ) ಬೈಬಲಿನ ಕೆಲವು ಪುಸ್ತಕಗಳನ್ನು ಯಾಕೆ ಗ್ರೀಕ್‌ ಭಾಷೆಯಲ್ಲಿ ಬರೆಯಲಾಯಿತು? (ಬಿ) ಇದು ಯೆಹೋವನ ಬಗ್ಗೆ ನಮಗೇನು ಕಲಿಸುತ್ತದೆ?

8 ಯೇಸುವಿನ ಮೊದಲ ಹಿಂಬಾಲಕರು ಹೀಬ್ರು ಮಾತಾಡಿದರು. ಆದರೆ ಅವನ ಮರಣದ ನಂತರ ಶಿಷ್ಯರು ಬೇರೆ ಭಾಷೆಗಳನ್ನೂ ಮಾತಾಡಿದರು. (ಅಪೊಸ್ತಲರ ಕಾರ್ಯಗಳು 6:1 ಓದಿ.) ಕ್ರೈಸ್ತರು ಸುವಾರ್ತೆಯನ್ನು ಹಬ್ಬಿಸುತ್ತಾ ಹೋದಂತೆ ಅವರು ಹೀಬ್ರು ಬದಲು ಗ್ರೀಕ್‌ ಭಾಷೆಯನ್ನೇ ಹೆಚ್ಚು ಮಾತಾಡಲು ಶುರುಮಾಡಿದರು. ಎಲ್ಲರೂ ಗ್ರೀಕ್‌ ಭಾಷೆ ಮಾತಾಡುತ್ತಿದ್ದ ಕಾರಣ ಮತ್ತಾಯ, ಮಾರ್ಕ, ಲೂಕ, ಯೋಹಾನ ಪುಸ್ತಕಗಳನ್ನು ಗ್ರೀಕ್‍ನಲ್ಲಿ ವಿತರಿಸಲಾಗಿತ್ತು. * (ಪಾದಟಿಪ್ಪಣಿ ನೋಡಿ.) ಅಪೊಸ್ತಲ ಪೌಲನ ಪತ್ರಗಳು ಮತ್ತು ಇತರ ಬೈಬಲ್‌ ಪುಸ್ತಕಗಳನ್ನು ಸಹ ಗ್ರೀಕ್‍ನಲ್ಲಿ ಬರೆಯಲಾಯಿತು.

9 ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ಬರಹಗಾರರು ಹೀಬ್ರು ಶಾಸ್ತ್ರಗ್ರಂಥದಿಂದ ಮಾತುಗಳನ್ನು ಉಲ್ಲೇಖಿಸಿದ್ದರು. ಈ ಮಾತುಗಳನ್ನು ಅವರು ಹೆಚ್ಚಾಗಿ ಸೆಪ್ಟೂಅಜಂಟ್‌ ನಿಂದ ತೆಗೆದುಕೊಂಡ ಸಂಗತಿ ಆಸಕ್ತಿಕರ. ಕೆಲವೊಮ್ಮೆ ಈ ಮಾತುಗಳು ಮೂಲ ಹೀಬ್ರು ಗ್ರಂಥದಲ್ಲಿದ್ದ ಮಾತುಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತಿತ್ತು. ಹೀಗೆ ಅಪರಿಪೂರ್ಣ ಭಾಷಾಂತರಕಾರರ ಕೆಲಸ ಇಂದು ನಮ್ಮ ಕೈಯಲ್ಲಿರುವ ಬೈಬಲಿನ ಭಾಗವಾಯಿತು. ಇದರಿಂದ ನಮಗೇನು ಗೊತ್ತಾಗುತ್ತದೆಂದರೆ ಯಾವುದೇ ಒಂದು ಭಾಷೆ ಅಥವಾ ಸಂಸ್ಕೃತಿ ಇನ್ನೊಂದಕ್ಕಿಂತ ಉತ್ತಮವೆಂದು ಯೆಹೋವನು ಎಣಿಸುವುದಿಲ್ಲ.—ಅಪೊಸ್ತಲರ ಕಾರ್ಯಗಳು 10:34 ಓದಿ.

10. ಯೆಹೋವನು ಮನುಷ್ಯರೊಟ್ಟಿಗೆ ಸಂವಾದ ಮಾಡಿದ ರೀತಿಯಿಂದ ನಾವೇನು ಕಲಿತೆವು?

10 ಇಲ್ಲಿ ತನಕ ನಾವು ಕಲಿತಿರುವುದೇನೆಂದರೆ ಯೆಹೋವನು ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಮನುಷ್ಯರೊಟ್ಟಿಗೆ ಸಂವಾದ ಮಾಡಿದನು. ಆತನ ಬಗ್ಗೆ, ಆತನ ಉದ್ದೇಶದ ಬಗ್ಗೆ ತಿಳಿಯಬೇಕಾದರೆ ಒಂದು ನಿರ್ದಿಷ್ಟ ಭಾಷೆ ಕಲಿಯಬೇಕೆಂದು ಯೆಹೋವನು ನಮ್ಮಿಂದ ಕೇಳಿಕೊಳ್ಳುವುದಿಲ್ಲ. (ಜೆಕರ್ಯ 8:23; ಪ್ರಕಟನೆ 7:9, 10 ಓದಿ.) ಆತನು ಬೈಬಲ್‌ ಬರಹಗಾರರನ್ನು ಪ್ರೇರಿಸಿದನಾದರೂ ತನ್ನ ಯೋಚನೆಗಳನ್ನು ಅವರ ಸ್ವಂತ ಮಾತುಗಳಲ್ಲಿ ಬರೆಯಲು ಬಿಟ್ಟನು.

ದೇವರು ತನ್ನ ವಾಕ್ಯವನ್ನು ಸಂರಕ್ಷಿಸಿದನು

11. ಮನುಷ್ಯರು ಅನೇಕ ಭಾಷೆಗಳನ್ನು ಮಾತಾಡುವುದಾದರೂ ಯೆಹೋವನಿಗೆ ಅದೊಂದು ಸಮಸ್ಯೆ ಅಲ್ಲವೇಕೆ?

11 ಮನುಷ್ಯರು ಅನೇಕ ಭಾಷೆಗಳನ್ನು ಮಾತಾಡುವುದಾದರೂ ಯೆಹೋವನಿಗೆ ಇದು ಸಮಸ್ಯೆ ಅಲ್ಲ. ನಮಗೆ ಹೇಗೆ ಗೊತ್ತು? ಯೇಸು ಬಳಸಿದ ಮೂಲ ಭಾಷೆಯ ಪದಗಳಲ್ಲಿ ಕೆಲವೊಂದನ್ನು ಮಾತ್ರ ಬೈಬಲಿನಲ್ಲಿ ದಾಖಲಿಸಲಾಗಿದೆ. (ಮತ್ತಾ. 27:46; ಮಾರ್ಕ 5:41; 7:34) ಆತನ ಸಂದೇಶ ಗ್ರೀಕ್‌ ಭಾಷೆಯಲ್ಲಿ ಇರುವಂತೆ, ಕಾಲಾನಂತರ ಇತರ ಭಾಷೆಗಳಿಗೂ ಭಾಷಾಂತರವಾಗುವಂತೆ ಯೆಹೋವನು ನೋಡಿಕೊಂಡನು. ಯೆಹೂದ್ಯರು ಮತ್ತು ಕ್ರೈಸ್ತರು ದೇವರ ವಾಕ್ಯದ ಅನೇಕ ನಕಲು ಪ್ರತಿಗಳನ್ನು ಮಾಡಿದ್ದರಿಂದ ದೇವರ ವಾಕ್ಯ ಸಂರಕ್ಷಿಸಲ್ಪಟ್ಟಿತು. ಈ ಪ್ರತಿಗಳನ್ನು ನಂತರ ಬೇರೆ ಅನೇಕ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಕ್ರಿ.ಶ. 4ನೇ ಅಥವಾ 5ನೇ ಶತಮಾನದಷ್ಟಕ್ಕೆ ಇದ್ದ ಒಬ್ಬ ಲೇಖಕ ಹೇಳಿದ್ದೇನೆಂದರೆ, ಯೇಸುವಿನ ಬೋಧನೆಗಳನ್ನು ಅರಾಮ್ಯ, ಐಗುಪ್ತ, ಭಾರತೀಯ, ಪಾರಸಿಯ, ಕೂಷ್ಯ ಮತ್ತು ಇತರ ಭಾಷೆಗಳಿಗೂ ಭಾಷಾಂತರಿಸಲಾಗಿದೆ.

12. ಬೈಬಲ್‌ ಮೇಲೆ ಯಾವ ದಾಳಿ ನಡೆದಿದೆ?

12 ಇತಿಹಾಸದುದ್ದಕ್ಕೂ ಬೈಬಲ್‌ ಮೇಲೆ ಮತ್ತು ಅದನ್ನು ಭಾಷಾಂತರಿಸಿದವರ, ವಿತರಿಸಿದವರ ಮೇಲೆ ಅನೇಕ ದಾಳಿಗಳು ನಡೆದಿವೆ. ಯೇಸು ಹುಟ್ಟಿ ಸುಮಾರು 300 ವರ್ಷಗಳ ನಂತರ ರೋಮನ್‌ ಚಕ್ರವರ್ತಿ ಡಯಕ್ಲೀಷನ್‌ ಬೈಬಲಿನ ಎಲ್ಲಾ ಪ್ರತಿಗಳನ್ನು ನಾಶ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಇದಾಗಿ ಸುಮಾರು 1,200 ವರ್ಷಗಳ ನಂತರ ವಿಲ್ಯಮ್‌ ಟಿಂಡೆಲ್‌ ಬೈಬಲನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಲಾರಂಭಿಸಿದರು. ದೇವರು ತನಗೆ ಆಯುಸ್ಸನ್ನು ಕೊಟ್ಟರೆ, ನೇಗಿಲು ಹೊಡೆಯುವ ಹುಡುಗನೊಬ್ಬನು ಒಬ್ಬ ಪಾದ್ರಿಗಿಂತ ಉತ್ತಮವಾಗಿ ಬೈಬಲನ್ನು ತಿಳಿಯುವಂತೆ ಮಾಡುವೆನೆಂದು ಹೇಳಿದರು. ಬೈಬಲನ್ನು ಭಾಷಾಂತರಿಸಿ ಮುದ್ರಿಸಲಿಕ್ಕಾಗಿ ಟಿಂಡೆಲ್‌ ತುಂಬ ಹಿಂಸೆಯನ್ನು ಎದುರಿಸಬೇಕಾಯಿತು. ಹಾಗಾಗಿ ಇಂಗ್ಲೆಂಡ್ನಿಂದ ಯೂರೋಪ್‌ ಖಂಡಕ್ಕೆ ಓಡಿಹೋದರು. ಕ್ರೈಸ್ತ ಪಾದ್ರಿಗಳು ತಮ್ಮ ಕೈಗೆ ಸಿಕ್ಕಿದ ಎಲ್ಲಾ ನಕಲು ಪ್ರತಿಗಳನ್ನು ಸುಟ್ಟುಹಾಕಿದರು. ಹಾಗಿದ್ದರೂ ಟಿಂಡೆಲ್‌ರವರ ಭಾಷಾಂತರ ಅನೇಕರಿಗೆ ಈಗಾಗಲೇ ವಿತರಣೆ ಆಗಿಹೋಗಿತ್ತು. ಸಮಯಾನಂತರ ಟಿಂಡೆಲ್‌ರನ್ನು ಹಿಡಿದು ಕತ್ತು ಹಿಸುಕಿ, ಕಂಬಕ್ಕೆ ಕಟ್ಟಿ ಸುಟ್ಟುಹಾಕಲಾಯಿತು. ಆದರೂ ಅವರ ಭಾಷಾಂತರ ಪಾದ್ರಿಗಳ ದಾಳಿಗಳನ್ನು ಪಾರಾಗಿ ಉಳಿಯಿತು. ಈ ಭಾಷಾಂತರವನ್ನೇ ಬಳಸಿ ಮುಂದಕ್ಕೆ ಕಿಂಗ್‌ ಜೇಮ್ಸ್ ವರ್ಷನ್‌ ಎಂಬ ಬೈಬಲ್‌ ಭಾಷಾಂತರವನ್ನು ತಯಾರಿಸಲಾಯಿತು.—2 ತಿಮೊಥೆಯ 2:9 ಓದಿ.

13. ಹಳೆಯ ಬೈಬಲ್‌ ಹಸ್ತಪ್ರತಿಗಳ ಅಧ್ಯಯನ ಏನು ತೋರಿಸಿಕೊಟ್ಟಿದೆ?

13 ಬೈಬಲಿನ ತುಂಬ ಹಳೆಯ ಪ್ರತಿಗಳಲ್ಲಿ ಸಣ್ಣಪುಟ್ಟ ತಪ್ಪುಗಳು, ವ್ಯತ್ಯಾಸಗಳು ಇವೆ ನಿಜ. ಹಾಗಿದ್ದರೂ ಬೈಬಲ್‌ ತಜ್ಞರು ಸಾವಿರಾರು ಹಸ್ತಪ್ರತಿಗಳನ್ನು, ಹಸ್ತಪ್ರತಿಗಳ ಭಾಗಗಳನ್ನು, ಬೈಬಲಿನ ಹಳೆಯ ಭಾಷಾಂತರಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಇವನ್ನೆಲ್ಲಾ ಹೋಲಿಸಿದ ನಂತರ ಕೆಲವೇ ವಚನಗಳಲ್ಲಿರುವ ವ್ಯತ್ಯಾಸಗಳು ಚಿಕ್ಕಪುಟ್ಟದ್ದೆಂದು ಕಂಡುಹಿಡಿದರು. ಆದರೆ ಬೈಬಲಿನ ಸಂದೇಶ ಬದಲಾಗಿಲ್ಲ. ಅವರು ಈ ರೀತಿಯ ಅಧ್ಯಯನ ಮಾಡಿದ್ದರಿಂದ ಇಂದು ತಮ್ಮ ಕೈಯಲ್ಲಿರುವ ಬೈಬಲ್‌ ಯೆಹೋವನ ಪ್ರೇರಿತ ವಾಕ್ಯವೇ ಎಂದು ಯಥಾರ್ಥ ಮನಸ್ಸಿನ ಬೈಬಲ್‌ ವಿದ್ಯಾರ್ಥಿಗಳಿಗೆ ಪೂರ್ತಿ ಮನವರಿಕೆ ಇದೆ.—ಯೆಶಾ. 40:8. * (ಪಾದಟಿಪ್ಪಣಿ ನೋಡಿ.)

14. ಬೈಬಲು ಇಂದು ಎಷ್ಟರ ಮಟ್ಟಿಗೆ ಲಭ್ಯವಿದೆ?

14 ಬೈಬಲಿನ ಮೇಲೆ ಅನೇಕ ದಾಳಿಗಳಾಗಿದ್ದರೂ ಅದನ್ನು 2,800ಕ್ಕಿಂತಲೂ ಹೆಚ್ಚು ಭಾಷೆಗಳಿಗೆ ಭಾಷಾಂತರ ಮಾಡಲಾಗಿದೆ. ಬೇರಾವುದೇ ಪುಸ್ತಕ ಇಷ್ಟು ಭಾಷೆಗಳಲ್ಲಿ ಭಾಷಾಂತರವಾಗಿಲ್ಲ. ಅನೇಕರಿಗೆ ದೇವರ ಮೇಲೆ ನಂಬಿಕೆ ಇಲ್ಲವಾದರೂ ಆತನ ವಾಕ್ಯವಾದ ಬೈಬಲ್‌, ಇತಿಹಾಸದಲ್ಲೇ ಹೆಚ್ಚು ವಿತರಣೆಯಾಗಿರುವ ಪುಸ್ತಕವಾಗಿದೆ. ಕೆಲವು ಬೈಬಲ್‌ ಭಾಷಾಂತರಗಳು ಓದಲು ಸುಲಭವಾಗಿಲ್ಲ, ಅಷ್ಟೇನು ನಿಖರವೂ ಆಗಿಲ್ಲ. ಆದರೆ ಅವೆಲ್ಲವೂ ನಿರೀಕ್ಷೆ ಮತ್ತು ನಿತ್ಯಜೀವದ ಸರಳ ಸಂದೇಶವನ್ನು ಕೊಡುತ್ತವೆ.

ಒಂದು ಹೊಸ ಭಾಷಾಂತರದ ಅಗತ್ಯ

15. (ಎ) ಇಸವಿ 1919ರಿಂದ ನಮ್ಮ ಬೈಬಲ್‌ ಸಾಹಿತ್ಯ ಹೇಗೆ ಬದಲಾವಣೆಯಾಗಿದೆ? (ಬಿ) ನಮ್ಮ ಸಾಹಿತ್ಯ ಯಾಕೆ ಮೊದಲು ಇಂಗ್ಲಿಷ್‍ನಲ್ಲಿ ತಯಾರಾಗುತ್ತದೆ?

15 ಇಸವಿ 1919ರಲ್ಲಿ ಬೈಬಲ್‌ ವಿದ್ಯಾರ್ಥಿಗಳ ಒಂದು ಚಿಕ್ಕ ಗುಂಪನ್ನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಾಗಿ’ ನೇಮಿಸಲಾಯಿತು. ಈ ಆಳು ದೇವರ ಜನರೊಟ್ಟಿಗೆ ಸಂವಾದ ಮಾಡಲು ಹೆಚ್ಚಾಗಿ ಇಂಗ್ಲಿಷ್‌ ಭಾಷೆಯನ್ನು ಬಳಸುತ್ತಿತ್ತು. (ಮತ್ತಾ. 24:45) ಆದರೆ ಇಂದು ಬೈಬಲ್‌ ಸಾಹಿತ್ಯ ಸುಮಾರು 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯ. ಹೇಗೆ ಹಿಂದಿನ ಕಾಲದಲ್ಲಿ ಗ್ರೀಕ್‌ ಸಾಮಾನ್ಯ ಭಾಷೆಯಾಗಿತ್ತೊ ಹಾಗೇ ಇಂಗ್ಲಿಷ್‌ ಭಾಷೆ ಇಂದು ವ್ಯಾಪಾರದ ಕ್ಷೇತ್ರದಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಭಾಷೆ ಸಹ. ಹಾಗಾಗಿ ನಮ್ಮ ಸಾಹಿತ್ಯ ಮೊದಲು ಇಂಗ್ಲಿಷ್‍ನಲ್ಲಿ ತಯಾರಾಗುತ್ತದೆ, ನಂತರ ಬೇರೆ ಭಾಷೆಗಳಿಗೆ ಭಾಷಾಂತರಿಸಲಾಗುತ್ತದೆ.

16, 17. (ಎ) ದೇವರ ಜನರಿಗೆ ಯಾವುದರ ಅಗತ್ಯವಿತ್ತು? (ಬಿ) ಆ ಅಗತ್ಯವನ್ನು ಹೇಗೆ ಪೂರೈಸಲಾಯಿತು? (ಸಿ) ಸಹೋದರ ನಾರ್‌ರ ಆಸೆ ಏನಾಗಿತ್ತು?

16 ನಮ್ಮ ಎಲ್ಲಾ ಸಾಹಿತ್ಯ ಬೈಬಲ್‌ ಆಧಾರಿತ. ಆರಂಭದಲ್ಲಿ ದೇವರ ಜನರು 1611ರಲ್ಲಿ ಸಿದ್ಧವಾದ ಕಿಂಗ್‌ ಜೇಮ್ಸ್ ವರ್ಷನ್‌ ಭಾಷಾಂತರವನ್ನು ಬಳಸುತ್ತಿದ್ದರು. ಆದರೆ ಅದರಲ್ಲಿ ಬಳಸಲಾದ ಇಂಗ್ಲಿಷ್‌ ಭಾಷೆಯು ಹಳೇ ಶೈಲಿಯದ್ದಾಗಿತ್ತು, ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಹಳೇ ಹಸ್ತಪ್ರತಿಗಳಲ್ಲಿ ದೇವರ ಹೆಸರು ಸಾವಿರಾರು ಬಾರಿ ಇದ್ದರೂ ಈ ಭಾಷಾಂತರದಲ್ಲಿ ದೇವರ ಹೆಸರನ್ನು ಕೆಲವೇ ಬಾರಿ ಬಳಸಲಾಗಿತ್ತು. ಭಾಷಾಂತರ ತಪ್ಪುಗಳಿದ್ದವು ಮತ್ತು ಹಳೆಯ ಹಸ್ತಪ್ರತಿಗಳಲ್ಲಿ ಇಲ್ಲದಿದ್ದ ಹೆಚ್ಚಿನ ವಚನಗಳನ್ನೂ ಸೇರಿಸಲಾಗಿತ್ತು. ಬೇರೆ ಇಂಗ್ಲಿಷ್‌ ಬೈಬಲ್‌ ಭಾಷಾಂತರಗಳಲ್ಲೂ ಇಂಥದ್ದೇ ಸಮಸ್ಯೆಗಳಿದ್ದವು.

17 ಸುಲಭವಾಗಿ ಅರ್ಥವಾಗುವ ಮತ್ತು ನಿಖರವಾದ ಬೈಬಲ್‌ ಭಾಷಾಂತರದ ಅಗತ್ಯ ದೇವರ ಜನರಿಗಿತ್ತು. ಹಾಗಾಗಿ ನೂತನ ಲೋಕ ಬೈಬಲ್‌ ಭಾಷಾಂತರದ ಸಮಿತಿ ರೂಪಗೊಂಡಿತು. ಈ ಸಮಿತಿಯಲ್ಲಿರುವ ಸಹೋದರರು 1950ರಿಂದ 1960ರ ತನಕ ಬೈಬಲನ್ನು ಆರು ಸಂಪುಟಗಳಾಗಿ ಬಿಡುಗಡೆ ಮಾಡಿದರು. ಮೊದಲ ಸಂಪುಟವನ್ನು ಆಗಸ್ಟ್‌ 2, 1950ರಲ್ಲಿ ನಡೆದ ಅಧಿವೇಶನದಲ್ಲಿ ಬಿಡುಗಡೆ ಮಾಡಲಾಯಿತು. ಸುಲಭವಾಗಿ ಅರ್ಥವಾಗುವ, ನಿಖರವಾದ, ಸತ್ಯವನ್ನು ಹೆಚ್ಚು ಸ್ಪಷ್ಟವಾಗಿ ಕಲಿಯಲು ನೆರವಾಗುವ ಆಧುನಿಕ ಬೈಬಲ್‌ ಭಾಷಾಂತರದ ಅಗತ್ಯ ದೇವರ ಜನರಿಗಿತ್ತೆಂದು ಆ ಅಧಿವೇಶನದಲ್ಲಿ ಸಹೋದರ ನಾರ್‌ ಹೇಳಿದರು. ಕ್ರಿಸ್ತನ ಶಿಷ್ಯರ ಮೂಲ ಬರಹಗಳಷ್ಟೇ ಸುಲಭವಾಗಿ ಓದಬಹುದಾದ ಮತ್ತು ಅರ್ಥಮಾಡಿಕೊಳ್ಳಬಹುದಾದ ಭಾಷಾಂತರದ ಅಗತ್ಯವಿತ್ತು ಎಂದೂ ಹೇಳಿದರು. ಈ ಎಲ್ಲಾ ಅಗತ್ಯಗಳನ್ನು ಪೂರೈಸುವ ನೂತನ ಲೋಕ ಭಾಷಾಂತರವು ಕೋಟಿಗಟ್ಟಲೆ ಜನರಿಗೆ ಯೆಹೋವನ ಬಗ್ಗೆ ತಿಳಿಯಲು ಸಹಾಯಮಾಡಲಿದೆ ಎಂದು ಸಹೋದರ ನಾರ್‌ ಆಸೆ ವ್ಯಕ್ತಪಡಿಸಿದರು.

18. ಬೈಬಲಿನ ಭಾಷಾಂತರಕ್ಕೆ ಯಾವುದು ಸಹಾಯಮಾಡಿದೆ?

18 ಇಸವಿ 1963ರಷ್ಟಕ್ಕೆ ಸಹೋದರ ನಾರ್‌ರ ಕನಸು ನನಸಾಯಿತು. ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಇಟ್ಯಾಲಿಯನ್‌, ಜರ್ಮನ್‌, ಡಚ್‌, ಪೋರ್ಚುಗೀಸ್‌, ಫ್ರೆಂಚ್‌, ಸ್ಪ್ಯಾನಿಷ್‌ ಭಾಷೆಗಳಲ್ಲಿ ಲಭ್ಯವಾಯಿತು. 1989ರಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಬೈಬಲ್‌ ಭಾಷಾಂತರಕಾರರ ಸಹಾಯಕ್ಕೆಂದು ಮುಖ್ಯ ಕಾರ್ಯಾಲಯದಲ್ಲಿ ಒಂದು ಹೊಸ ಡಿಪಾರ್ಟ್‍ಮೆಂಟನ್ನು ರೂಪಿಸಿತು. ಈಗಾಗಲೇ ಕಾವಲಿನಬುರುಜು ಲಭ್ಯವಿದ್ದ ಭಾಷೆಗಳಲ್ಲಿ ಬೈಬಲನ್ನು ಭಾಷಾಂತರ ಮಾಡಲು 2005ರಲ್ಲಿ ಅನುಮತಿ ಕೊಡಲಾಯಿತು. ಅದರ ಫಲಿತಾಂಶವಾಗಿ ನೂತನ ಲೋಕ ಭಾಷಾಂತರ ಈಗ 130ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಲಭ್ಯ. ಕೆಲವು ಭಾಷೆಗಳಲ್ಲಿ ಅದು ಪೂರ್ತಿಯಾಗಿ ಇನ್ನೂ ಕೆಲವುಗಳಲ್ಲಿ ಅದರ ಒಂದು ಭಾಗ ಲಭ್ಯ.

19. (ಎ) ಇಸವಿ 2013ರಲ್ಲಿ ಯಾವ ಮುಖ್ಯ ಘಟನೆ ನಡೆಯಿತು? (ಬಿ) ಮುಂದಿನ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

19 ನೂತನ ಲೋಕ ಭಾಷಾಂತರದ ಮೊದಲನೇ ಆವೃತ್ತಿ ಬಿಡುಗಡೆ ಆದಾಗಿನಿಂದ ಇಂಗ್ಲಿಷ್‌ ಭಾಷೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಹಾಗಾಗಿ ಆ ಭಾಷಾಂತರದಲ್ಲಿ ಪದಗಳನ್ನು ಪರಿಷ್ಕರಿಸಿ ಹೊಸದನ್ನಾಗಿ ಮಾಡಬೇಕಿತ್ತು. 2013 ಅಕ್ಟೋಬರ್‌ 5, 6ರ ವಾರಾಂತ್ಯದಲ್ಲಿ ನಡೆದ ವಾಚ್‍ಟವರ್‌ ಬೈಬಲ್‌ ಆ್ಯಂಡ್ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 129ನೇ ವಾರ್ಷಿಕ ಕೂಟಕ್ಕೆ 14,13,676 ಮಂದಿ 31 ದೇಶಗಳಿಂದ ಹಾಜರಾಗಿದ್ದರು ಅಥವಾ ಕನೆಕ್ಟ್‌ ಆಗಿದ್ದರು. ಆಡಳಿತ ಮಂಡಲಿಯ ಸದಸ್ಯರೊಬ್ಬರು ಇಂಗ್ಲಿಷ್‌ ಭಾಷೆಯಲ್ಲಿ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಸಭಿಕರಿಗೆ ರೋಮಾಂಚನವಾಯಿತು. ತಮ್ಮತಮ್ಮ ಬೈಬಲ್‌ ಪ್ರತಿ ಕೈಗೆ ಸಿಕ್ಕಿದ್ದಾಗ ಅನೇಕರ ಕಣ್ಣಲ್ಲಿ ನೀರು ಬಂತು. ಎಲ್ಲ ಭಾಷಣಕಾರರು ಪರಿಷ್ಕೃತ ಆವೃತ್ತಿಯಿಂದ ವಚನಗಳನ್ನು ಓದುತ್ತಿದ್ದಾಗ ಸಭಿಕರಿಗೆಲ್ಲ ಅದು ಓದಲು, ಅರ್ಥಮಾಡಿಕೊಳ್ಳಲು ಸುಲಭವೆಂದು ಸ್ಪಷ್ಟವಾಯಿತು. ಮುಂದಿನ ಲೇಖನದಲ್ಲಿ ಈ ಪರಿಷ್ಕೃತ ಆವೃತ್ತಿಯ ಬಗ್ಗೆ ಹೆಚ್ಚನ್ನು ಕಲಿಯಲಿದ್ದೇವೆ. ಜೊತೆಗೆ ಅದನ್ನು ಬೇರೆ ಭಾಷೆಗಳಿಗೆ ಹೇಗೆ ಭಾಷಾಂತರ ಮಾಡಲಾಗುತ್ತಿದೆ ಎನ್ನುವುದನ್ನು ತಿಳಿಯಲಿದ್ದೇವೆ.

^ ಪ್ಯಾರ. 5 ಎಜ್ರ 4:8–6:18, 7:12-26; ಯೆರೆಮಿಾಯ 10:11 ಮತ್ತು ದಾನಿಯೇಲ 2:4ಬಿ–7:28 ನ್ನು ಅರಮಾಯ ಭಾಷೆಯಲ್ಲಿ ಬರೆಯಲಾಗಿತ್ತು.

^ ಪ್ಯಾರ. 6 ಸೆಪ್ಟೂಅಜಂಟ್‌ ಅಂದರೆ “ಎಪ್ಪತ್ತು.” ಭಾಷಾಂತರವು ಕ್ರಿಸ್ತ ಹುಟ್ಟುವುದಕ್ಕಿಂತ ಸುಮಾರು 300 ವರ್ಷಗಳ ಮುಂಚೆ ಶುರುವಾಗಿ 150 ವರ್ಷಗಳ ನಂತರ ಮುಗಿಯಿತು. ಇಂದಿಗೂ ಈ ಭಾಷಾಂತರ ಮುಖ್ಯ ಏಕೆಂದರೆ ಕಷ್ಟವಾದ ಹೀಬ್ರು ಪದಗಳನ್ನು ಅಥವಾ ಪೂರ್ತಿ ವಚನಗಳನ್ನು ಅರ್ಥಮಾಡಿಕೊಳ್ಳಲು ತಜ್ಞರಿಗೆ ಇದು ಸಹಾಯ ಮಾಡುತ್ತದೆ.

^ ಪ್ಯಾರ. 8 ಮತ್ತಾಯನು ತನ್ನ ಪುಸ್ತಕವನ್ನು ಮೊದಲು ಹೀಬ್ರುವಿನಲ್ಲಿ ಬರೆದನು. ನಂತರ ಅವನೇ ಅದನ್ನು ಗ್ರೀಕ್‍ಗೆ ಭಾಷಾಂತರ ಮಾಡಿದನೆಂಬುದು ಕೆಲವರ ಅನಿಸಿಕೆ.

^ ಪ್ಯಾರ. 13 ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯ ಪರಿಶಿಷ್ಟ A3 (ಇಂಗ್ಲಿಷ್‌) ಮತ್ತು ಸಕಲ ಜನರಿಗಾಗಿ ಒಂದು ಗ್ರಂಥ, ಪುಟ 7-9ರಲ್ಲಿ, “ಈ ಗ್ರಂಥ ಹೇಗೆ ಪಾರಾಗಿ ಉಳಿಯಿತು?” ಲೇಖನ ನೋಡಿ.