ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ

ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ

‘ದೇವರ ವಾಕ್ಯ ಸಜೀವವಾದದ್ದು.’—ಇಬ್ರಿ. 4:12.

ಗೀತೆಗಳು: 37, 116

1. (ಎ) ದೇವರು ಆದಾಮನಿಗೆ ಯಾವ ನೇಮಕವನ್ನು ಕೊಟ್ಟನು? (ಬಿ) ಭಾಷೆ ಎಂಬ ವರವನ್ನು ಅಂದಿನಿಂದ ದೇವರ ಜನರು ಹೇಗೆ ಬಳಸಿದ್ದಾರೆ?

ಯೆಹೋವ ದೇವರು ಭಾಷೆ ಎಂಬ ವರವನ್ನು ಮನುಷ್ಯರಿಗೆ ಕೊಟ್ಟನು. ಏದೆನ್‌ ತೋಟದಲ್ಲಿ ಎಲ್ಲಾ ಪ್ರಾಣಿಗಳಿಗೆ ಹೆಸರಿಡುವ ಕೆಲಸವನ್ನು ದೇವರು ಆದಾಮನಿಗೆ ಕೊಟ್ಟನು. ಪ್ರತಿಯೊಂದು ಪ್ರಾಣಿಗೆ ಆದಾಮ ಅರ್ಥಭರಿತ ಹೆಸರಿಟ್ಟನು. ಹೀಗೆ ಈ ಕೆಲಸದಲ್ಲಿ ಭಾಷೆಯು ಒಳಗೂಡಿತ್ತು. (ಆದಿ. 2:19, 20) ಆಗಿನಿಂದ ದೇವರು ಕೊಟ್ಟ ಆ ವರವನ್ನು ದೇವಜನರು ಆತನನ್ನು ಸ್ತುತಿಸಲು, ಆತನ ಬಗ್ಗೆ ಇತರರಿಗೆ ತಿಳಿಸಲು ಬಳಸುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವರ ಜನರು ಆತನು ಕೊಟ್ಟ ಆ ವರವನ್ನು ಬೈಬಲ್‌ ಭಾಷಾಂತರಿಸಲು ಬಳಸಿದ್ದಾರೆ. ಯೆಹೋವನ ಬಗ್ಗೆ ಕಲಿಯಲು ಇದು ಹೆಚ್ಚು ಜನರಿಗೆ ಸಹಾಯ ಮಾಡುತ್ತಿದೆ.

2. (ಎ) ನೂತನ ಲೋಕ ಬೈಬಲ್‌ ಭಾಷಾಂತರ ಸಮಿತಿಯವರು ಯಾವ ತತ್ವಗಳನ್ನು ತಮ್ಮ ಕೆಲಸದಲ್ಲಿ ಪಾಲಿಸಿದರು? (ಬಿ) ಈ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

2 ಇಂದು ಸಾವಿರಾರು ಬೈಬಲ್‌ ಭಾಷಾಂತರಗಳಿವೆ. ಕೆಲವು ಭಾಷಾಂತರಗಳು ಕೆಲವು ವಿಷಯಗಳನ್ನು ನಿಖರವಾಗಿ ತಿಳಿಸುತ್ತವೆ. ಆದರೆ ಇಡೀ ಬೈಬಲನ್ನು ನಿಖರವಾಗಿ ಭಾಷಾಂತರಿಸಲು 1940ರ ದಶಕದಲ್ಲಿ ನೂತನ ಲೋಕ ಬೈಬಲ್‌ ಭಾಷಾಂತರ ಸಮಿತಿ ಮುಂದಿನ ಮೂರು ಮೂಲತತ್ವಗಳನ್ನು ಪಾಲಿಸುವ ನಿರ್ಣಯ ಮಾಡಿತು: (1) ಮೂಲ ಹಸ್ತಪ್ರತಿಗಳಲ್ಲಿ ದೇವರ ಹೆಸರನ್ನು ಬಳಸಿರುವಷ್ಟು ಸಲ ಭಾಷಾಂತರದಲ್ಲಿಯೂ ಬಳಸಬೇಕು. ಹೀಗೆ ದೇವರ ಹೆಸರನ್ನು ಪವಿತ್ರೀಕರಿಸಬೇಕು. (ಮತ್ತಾಯ 6:9 ಓದಿ.) (2) ಎಲ್ಲೆಲ್ಲಿ ಸಾಧ್ಯವೊ ಅಲ್ಲಲ್ಲಿ ಪದಕ್ಕೆ ಪದ ಭಾಷಾಂತರಿಸಿ ಎಲ್ಲಿ ಸಾಧ್ಯವಿಲ್ಲವೊ ಅಲ್ಲಿ ಸರಿಯಾದ ಅರ್ಥವನ್ನು ಭಾಷಾಂತರಿಸಬೇಕು. (3) ಓದಲು, ಅರ್ಥಮಾಡಿಕೊಳ್ಳಲು ಸುಲಭ ವಾಕ್ಯ ರಚನೆ ಮತ್ತು ಪದಗಳನ್ನು ಬಳಸಬೇಕು. * (ಪಾದಟಿಪ್ಪಣಿ ನೋಡಿ.) (ನೆಹೆಮಿಾಯ 8:8 ಓದಿ.) ನೂತನ ಲೋಕ ಭಾಷಾಂತರವನ್ನು 130ಕ್ಕಿಂತ ಹೆಚ್ಚು ಭಾಷೆಗಳಿಗೆ ಭಾಷಾಂತರಿಸುವಾಗ ಅದರ ಭಾಷಾಂತರಕಾರರು ಈ ಮೂರು ತತ್ವಗಳನ್ನು ಪಾಲಿಸಿದ್ದಾರೆ. 2013ರ ಪರಿಷ್ಕೃತ ನೂತನ ಲೋಕ ಭಾಷಾಂತರದಲ್ಲಿ ಮತ್ತು ಬೇರೆ ಭಾಷೆಗಳ ಅನುವಾದದಲ್ಲಿ ಈ ಮೂರು ತತ್ವಗಳನ್ನು ಹೇಗೆ ಅನ್ವಯಿಸಲಾಗಿದೆ ಎಂದು ಈ ಲೇಖನದಲ್ಲಿ ನೋಡೋಣ.

ದೇವರ ಹೆಸರನ್ನು ಗೌರವಿಸುವ ಬೈಬಲ್‌

3, 4. (ಎ) ಚತುರಕ್ಷರಿಗಳು ಎಲ್ಲಿ ಕಂಡುಬರುತ್ತವೆ? (ಬಿ) ಅನೇಕ ಬೈಬಲ್‌ ಭಾಷಾಂತರಗಳು ದೇವರ ಹೆಸರನ್ನು ಏನು ಮಾಡಿವೆ?

3 ದೇವರ ಹೆಸರನ್ನು ನಾಲ್ಕು ಹೀಬ್ರು ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಇದನ್ನು ಚತುರಕ್ಷರಿ ಎಂದು ಕರೆಯುತ್ತಾರೆ. ಅನೇಕ ಹಳೆಯ ಹೀಬ್ರು ಹಸ್ತಪ್ರತಿಗಳಲ್ಲಿ, ಉದಾಹರಣೆಗೆ ಮೃತ ಸಮುದ್ರ ಸುರುಳಿಗಳಲ್ಲಿ ಈ ಚತುರಕ್ಷರಿ ಕಂಡುಬರುತ್ತದೆ. ಗ್ರೀಕ್‌ ಸೆಪ್ಟೂಅಜಂಟ್‌ನ ಕೆಲವು ಪ್ರತಿಗಳಲ್ಲೂ ಇದು ಸಿಗುತ್ತದೆ. ಈ ಪ್ರತಿಗಳನ್ನು ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 1ನೇ ಶತಮಾನದ ವರೆಗಿನ ಸಮಯದಲ್ಲಿ ಮಾಡಲಾಯಿತು. ಹಳೆಯ ಹಸ್ತಪ್ರತಿಗಳಲ್ಲಿ ತುಂಬ ಸಲ ದೇವರ ಹೆಸರು ಇರುವುದನ್ನು ನೋಡಿ ಅನೇಕರು ವಿಸ್ಮಯಪಡುತ್ತಾರೆ.

4 ದೇವರ ಹೆಸರು ಬೈಬಲಿನಲ್ಲಿ ಇರಲೇಬೇಕೆಂದು ಇದರಿಂದ ಗೊತ್ತಾಗುತ್ತದೆ. ಆದರೂ ಅನೇಕ ಭಾಷಾಂತರಗಳು ದೇವರ ಹೆಸರನ್ನು ಬಳಸುವುದೇ ಇಲ್ಲ. ಉದಾಹರಣೆಗೆ, ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಷನ್‌ ಅನ್ನು ತಕ್ಕೊಳ್ಳಿ. ಇದನ್ನು 1901ರಲ್ಲಿ ಬಿಡುಗಡೆ ಮಾಡಿದಾಗ ದೇವರ ಹೆಸರು ಅದರಲ್ಲಿತ್ತು. ಆದರೆ 1952ರಲ್ಲಿ (ಕ್ರೈಸ್ತ ಗ್ರೀಕ್‌ ಶಾಸ್ತ್ರದ ನೂತನ ಲೋಕ ಭಾಷಾಂತರ 1950ರಲ್ಲಿ ಇಂಗ್ಲಿಷ್‍ನಲ್ಲಿ ಬಿಡುಗಡೆಯಾಯಿತು) ಇದರ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ದೇವರ ಹೆಸರು ಇರಲಿಲ್ಲ. ಏಕೆ? ಏಕೆಂದರೆ ಅದನ್ನು ಬಳಸುವುದು “ಸ್ವಲ್ಪವೂ ಸರಿಯಲ್ಲ” ಎಂದು ಅದರ ಭಾಷಾಂತರಕಾರರಿಗೆ ಅನಿಸಿತು. ಇಂಗ್ಲಿಷ್‌ ಮತ್ತು ಇತರ ಭಾಷೆಗಳ ಬೈಬಲ್‌ ಭಾಷಾಂತರಗಳು ಸಹ ಇದನ್ನೇ ಮಾಡಿವೆ.

5. ಬೈಬಲಿನಲ್ಲಿ ದೇವರ ಹೆಸರನ್ನು ಬಳಸುವುದು ಏಕೆ ಮುಖ್ಯ?

5 ಭಾಷಾಂತರಕಾರರು ದೇವರ ಹೆಸರನ್ನು ಬಳಸಲಿ ಬಳಸದಿರಲಿ ಏನಾದರೂ ವ್ಯತ್ಯಾಸ ಆಗುತ್ತದಾ? ಹೌದು! ಬೈಬಲ್‍ನ ಲೇಖಕನಾದ ಯೆಹೋವನು ಜನರು ತನ್ನ ಹೆಸರನ್ನು ತಿಳಿಯಬೇಕೆಂದು ಬಯಸುತ್ತಾನೆ. ಒಬ್ಬ ಒಳ್ಳೇ ಭಾಷಾಂತರಕಾರನಿಗೆ ಲೇಖಕನು ಏನು ಬಯಸುತ್ತಾನೆ ಎಂದು ಗೊತ್ತಿರುತ್ತದೆ ಮತ್ತು ಅದು ಅವನು ಮಾಡುವ ಭಾಷಾಂತರಕ್ಕೆ ಸಂಬಂಧಪಟ್ಟ ನಿರ್ಣಯಗಳನ್ನು ಪ್ರಭಾವಿಸುತ್ತದೆ. ಅನೇಕ ಬೈಬಲ್‌ ವಚನಗಳು ದೇವರ ಹೆಸರು ತುಂಬ ಮುಖ್ಯವಾದದ್ದು ಮತ್ತು ಅದಕ್ಕೆ ಗೌರವ ಸಲ್ಲಬೇಕು ಎಂದು ತೋರಿಸುತ್ತವೆ. (ವಿಮೋ. 3:15; ಕೀರ್ತ. 83:18; 148:13; ಯೆಶಾ. 42:8; 43:10; ಯೋಹಾ. 17:6, 26; ಅ. ಕಾ. 15:14) ಪುರಾತನ ಹಸ್ತಪ್ರತಿಗಳಲ್ಲಿ ತನ್ನ ಹೆಸರನ್ನು ಸಾವಿರಾರು ಬಾರಿ ಬರೆಯುವಂತೆ ಯೆಹೋವನು ಬೈಬಲ್‌ ಬರಹಗಾರರನ್ನು ಪ್ರೇರಿಸಿದನು. (ಯೆಹೆಜ್ಕೇಲ 38:23 ಓದಿ.) ಹಾಗಾಗಿ ಭಾಷಾಂತರಕಾರರು ದೇವರ ಹೆಸರನ್ನು ಬಳಸದಿರುವಾಗ ಅವರು ಯೆಹೋವನಿಗೆ ಅಗೌರವ ತೋರಿಸುತ್ತಿದ್ದಾರೆ.

6. ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಆರು ಕಡೆ ದೇವರ ಹೆಸರನ್ನು ಸೇರಿಸಲಾಗಿದೆ ಏಕೆ?

6 ಯೆಹೋವನ ಹೆಸರನ್ನು ನಾವು ಬಳಸಬೇಕು ಎನ್ನುವುದಕ್ಕೆ ಇಂದು ಇನ್ನಷ್ಟು ಪುರಾವೆ ಸಹ ಇದೆ. 2013ರ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿ ದೇವರ ಹೆಸರನ್ನು 7,216 ಬಾರಿ ಬಳಸಿದೆ. ಅಂದರೆ ಮುಂಚೆ ಇದ್ದ ಆವೃತ್ತಿಯಲ್ಲಿ ಇದ್ದದ್ದಕ್ಕಿಂತ ಆರು ಸಲ ಹೆಚ್ಚು. ಇದರಲ್ಲಿ ಐದನ್ನು, ಇತ್ತೀಚಿಗೆ ಹೊರತರಲಾದ ಮೃತ ಸಮುದ್ರ ಸುರುಳಿಗಳಲ್ಲಿ ದೇವರ ಹೆಸರು ಕಂಡುಬಂದದ್ದರಿಂದ ಸೇರಿಸಲಾಗಿದೆ. * (ಪಾದಟಿಪ್ಪಣಿ ನೋಡಿ.) ಆ ವಚನಗಳು ಯಾವುವೆಂದರೆ: 1 ಸಮುವೇಲ 2:25; 6:3; 10:26; 23:14, 16. ಆರನೇ ವಚನ ನ್ಯಾಯಸ್ಥಾಪಕರು 19:18. ಭರವಸಾರ್ಹ ಪುರಾತನ ಬೈಬಲ್‌ ಹಸ್ತಪ್ರತಿಗಳ ಹೆಚ್ಚಿನ ಅಧ್ಯಯನದಿಂದಾಗಿ ದೇವರ ಹೆಸರನ್ನು ಇಲ್ಲೂ ಸೇರಿಸಬೇಕೆಂದು ತಿಳಿದುಬಂತು.

7, 8. ಯೆಹೋವನ ಹೆಸರಿನ ಅರ್ಥವೇನು?

7 ದೇವರ ಹೆಸರಿನ ಪೂರ್ತಿ ಅರ್ಥವನ್ನು ತಿಳಿಯುವುದು ಮುಖ್ಯವೆಂದು ನಿಜ ಕ್ರೈಸ್ತರಿಗೆ ಗೊತ್ತು. ಆತನ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. * (ಪಾದಟಿಪ್ಪಣಿ ನೋಡಿ.) ಹಿಂದೆ ನಮ್ಮ ಸಾಹಿತ್ಯ ವಿಮೋಚನಕಾಂಡ 3:14 (ನೂತನ ಲೋಕ ಭಾಷಾಂತರ) ಬಳಸಿ ದೇವರ ಹೆಸರಿನ ಅರ್ಥವನ್ನು ವಿವರಿಸುತ್ತಿತ್ತು. “ನಾನು ಏನಾಗಿ ಪರಿಣಮಿಸುತ್ತೇನೊ ಅದಾಗಿ ಪರಿಣಮಿಸುತ್ತೇನೆ” ಎಂದು ಆ ವಚನದಲ್ಲಿದೆ. 1984ರ ಪರಿಷ್ಕೃತ ಆವೃತ್ತಿಯಲ್ಲಿ ತನ್ನ ವಾಗ್ದಾನಗಳನ್ನು ಪೂರೈಸಲು ಏನಾಗಿ ಪರಿಣಮಿಸಬೇಕೊ ಯೆಹೋವನು ಅದಾಗುತ್ತಾನೆ ಎಂಬ ವಿವರಣೆ ಕೊಟ್ಟಿತ್ತು. * (ಪಾದಟಿಪ್ಪಣಿ ನೋಡಿ.) ಆದರೆ 2013ರ ಪರಿಷ್ಕೃತ ಆವೃತ್ತಿ ಹೀಗೆ ವಿವರಿಸುತ್ತದೆ: “ಈ ಅಂಶವು ಯೆಹೋವನ ಹೆಸರಿನ ಅರ್ಥದಲ್ಲಿ ಒಳಗೂಡಿರುವುದಾದರೂ ಆ ಹೆಸರಿನ ಅರ್ಥ ಇಷ್ಟು ಮಾತ್ರವೇ ಅಲ್ಲ. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ತಾನು ಏನಾಗಬೇಕೋ ಹಾಗೆ ಆಗುವುದು ಮಾತ್ರವಲ್ಲ ತನ್ನ ಸೃಷ್ಟಿಯನ್ನು ಕೂಡ ತಾನು ಹೇಗೆ ಬಯಸುತ್ತಾನೋ ಹಾಗೆ ಆಗುವಂತೆ ಮಾಡುತ್ತಾನೆ.” (ಬೈಬಲಿನ ಅಧ್ಯಯನ ಕೈಪಿಡಿ ಪುಸ್ತಿಕೆಯ ಪುಟ 5 ನೋಡಿ.)

8 ತನ್ನ ಸೃಷ್ಟಿ ಸಹ ಏನಾಗಿ ಪರಿಣಮಿಸಬೇಕೆಂದು ಯೆಹೋವನು ಬಯಸುತ್ತಾನೊ ಅದಾಗುವಂತೆ ಯೆಹೋವನು ಮಾಡುತ್ತಾನೆ. ಉದಾಹರಣೆಗೆ ನೋಹನನ್ನು ನಾವೆ ಕಟ್ಟುವವನಾಗಿ, ಬೆಚಲೇಲನನ್ನು ಕುಶಲ ಶಿಲ್ಪಿಯಾಗಿ, ಗಿದ್ಯೋನನನ್ನು ಮಹಾ ರಣವೀರನಾಗಿ, ಪೌಲನನ್ನು ಮಿಷನರಿಯಾಗಿ ಮಾಡಿದ್ದು ಯೆಹೋವನೇ. ದೇವರ ಹೆಸರು ಆತನ ಜನರಿಗೆ ತುಂಬ ಅರ್ಥಪೂರ್ಣವಾಗಿದೆ. ಆದ್ದರಿಂದಲೇ ನೂತನ ಲೋಕ ಭಾಷಾಂತರ ಸಮಿತಿ ತಮ್ಮ ಭಾಷಾಂತರದಿಂದ ದೇವರ ಹೆಸರನ್ನು ತೆಗೆಯದೆ ಅದನ್ನು ಹಾಗೇ ಉಳಿಸಿತು.

9. ಬೈಬಲನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಕೆಲಸಕ್ಕೆ ಏಕೆ ಆದ್ಯತೆ ನೀಡಲಾಗುತ್ತಿದೆ?

9 ಅನೇಕ ಭಾಷಾಂತರಗಳು ದೇವರ ಸ್ವಂತ ಹೆಸರನ್ನು ತೆಗೆದುಬಿಡುತ್ತವೆ. ಅದರ ಸ್ಥಾನದಲ್ಲಿ “ಕರ್ತನು” ಎಂಬ ಬಿರುದನ್ನು ಅಥವಾ ಸ್ಥಳೀಯ ದೇವರುಗಳ ಹೆಸರನ್ನು ಹಾಕುತ್ತವೆ. ಈ ಮುಖ್ಯ ಕಾರಣದಿಂದಲೇ ಎಲ್ಲಾ ಭಾಷೆಗಳ ಜನರ ಹತ್ತಿರ ದೇವರ ಹೆಸರನ್ನು ಗೌರವಿಸುವ ಬೈಬಲ್‌ ಇರುವುದು ಮಹತ್ವದ್ದೆಂದು ಆಡಳಿತ ಮಂಡಲಿ ಎಣಿಸುತ್ತದೆ. (ಮಲಾಕಿಯ 3:16 ಓದಿ.) ಇಲ್ಲಿವರೆಗೆ 130ಕ್ಕಿಂತ ಹೆಚ್ಚಿನ ಭಾಷೆಗಳ ನೂತನ ಲೋಕ ಭಾಷಾಂತರ ಬೈಬಲಿನಲ್ಲಿ ಯೆಹೋವನ ಹೆಸರನ್ನು ಬಳಸಿ ಗೌರವಿಸಲಾಗುತ್ತಿದೆ.

ಸ್ಪಷ್ಟ, ನಿಖರ ಭಾಷಾಂತರ

10, 11. ನೂತನ ಲೋಕ ಭಾಷಾಂತರವನ್ನು ಬೇರೆ ಭಾಷೆಗಳಿಗೆ ಭಾಷಾಂತರ ಮಾಡುವಾಗ ಯಾವೆಲ್ಲ ಸಮಸ್ಯೆಗಳು ಎದುರಾಗಿವೆ?

10 ನೂತನ ಲೋಕ ಭಾಷಾಂತರವನ್ನು ಇಂಗ್ಲಿಷ್‍ನಿಂದ ಬೇರೆ ಭಾಷೆಗೆ ಭಾಷಾಂತರ ಮಾಡುವಾಗ ಕೆಲವು ಸಮಸ್ಯೆಗಳು ಎದುರಾದವು. ಉದಾಹರಣೆಗೆ, ಇಂಗ್ಲಿಷ್‍ನಲ್ಲಿ ಪ್ರಸಂಗಿ 9:10 ಮತ್ತು ಇತರ ವಚನಗಳಲ್ಲಿ “ಷೀಓಲ್‌” ಎಂಬ ಹೀಬ್ರು ಪದವನ್ನು ಬಳಸಲಾಗಿತ್ತು. ಈ ಪದವನ್ನು ಸಾಮಾನ್ಯವಾಗಿ ಬೇರೆ ಇಂಗ್ಲಿಷ್‌ ಬೈಬಲ್‌ಗಳಲ್ಲೂ ಬಳಸಲಾಗಿದೆ. ಆದರೆ ಅನೇಕ ಭಾಷೆಗಳಲ್ಲಿ ಇದನ್ನು ಭಾಷಾಂತರ ಮಾಡಲು ಆಗಲಿಲ್ಲ. ಏಕೆಂದರೆ ಆ ಭಾಷೆಗಳನ್ನಾಡುವ ಅನೇಕರಿಗೆ ಈ ಹೀಬ್ರು ಪದ ಗೊತ್ತಿರಲಿಲ್ಲ. ಅವರ ಶಬ್ದಕೋಶಗಳಲ್ಲಿ ಈ ಪದ ಇರಲಿಲ್ಲ. ಜೊತೆಗೆ “ಷೀಓಲ್‌” ಎಂದರೆ ಒಂದು ಜಾಗ ಎಂದೂ ಅನೇಕರು ನೆನಸಿದರು. ಹಾಗಾಗಿ “ಷೀಓಲ್‌” ಎಂಬ ಹೀಬ್ರು ಪದ ಮತ್ತು “ಹೇಡೀಸ್‌” ಎಂಬ ಗ್ರೀಕ್‌ ಪದವನ್ನು “ಸಮಾಧಿ” ಎಂದು ಭಾಷಾಂತರಿಸಲು ಅನುಮತಿ ನೀಡಲಾಯಿತು. ಇದು ನಿಖರವಾದ ಭಾಷಾಂತರವಾಗಿದ್ದು ವಿಷಯವನ್ನು ಸ್ಪಷ್ಟ ಮಾಡುತ್ತದೆ.

11 “ಆತ್ಮ” ಎಂಬ ಪದಕ್ಕೆ ಇರುವ ಹೀಬ್ರು ಮತ್ತು ಗ್ರೀಕ್‌ ಪದಗಳು ಸಹ ಕೆಲವು ಭಾಷೆಗಳಲ್ಲಿ ಭಾಷಾಂತರಿಸಲು ತುಂಬ ಕಷ್ಟವಾಯಿತು. ಈ ಭಾಷೆಗಳಲ್ಲಿ “ಆತ್ಮ” ಎಂಬ ಪದಕ್ಕೆ ಸಾಮಾನ್ಯವಾಗಿ ಭೂತ ಅಥವಾ ಸತ್ತ ನಂತರ ದೇಹ ಬಿಟ್ಟು ಹೋಗುವಂಥದ್ದು ಎಂಬ ಅರ್ಥ ಇದೆ. ಈ ತಪ್ಪರ್ಥ ಬರದಂತೆ “ಆತ್ಮ” ಎಂಬ ಪದ ಬಂದಾಗಲೆಲ್ಲ ಪೂರ್ವಾಪರ ಮಾಹಿತಿಯನ್ನು ಮನಸ್ಸಲ್ಲಿಟ್ಟು ಭಾಷಾಂತರ ಮಾಡಲು ಅನುಮತಿಸಲಾಯಿತು. “ಆತ್ಮ” ಎಂಬ ಪದದ ಬೇರೆಬೇರೆ ಅರ್ಥಗಳನ್ನು ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿತ್‌ ರೆಫರೆನ್ಸ್‌ನ ಪರಿಶಿಷ್ಟದಲ್ಲಿ ಕೊಡಲಾಗಿದೆ. 2013ರ ಪರಿಷ್ಕೃತ ಬೈಬಲಿನ ಪಾದಟಿಪ್ಪಣಿಗಳಲ್ಲಿ ಹೀಬ್ರು ಮತ್ತು ಗ್ರೀಕ್‌ ಪದಗಳ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ. ಇದರಿಂದಾಗಿ ಬೈಬಲನ್ನು ಸುಲಭವಾಗಿ ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.

12. ಯಾವ ಬದಲಾವಣೆಗಳನ್ನು 2013ರ ಆವೃತ್ತಿಯಲ್ಲಿ ಮಾಡಲಾಗಿದೆ? (ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಆವೃತ್ತಿ” ಎಂಬ ಲೇಖನ ನೋಡಿ.)

12 ತಪ್ಪರ್ಥ ಬರಬಹುದಾದ ಇನ್ನಷ್ಟು ವಿಷಯಗಳು ಬೆಳಕಿಗೆ ಬಂದದ್ದು, ಭಾಷಾಂತರಕಾರರು ಕೇಳಿದ ಪ್ರಶ್ನೆಗಳನ್ನು ಪರಿಶೀಲಿಸಿದಾಗ. ಹಾಗಾಗಿ ಸೆಪ್ಟೆಂಬರ್‌ 2007ರಲ್ಲಿ ಆಡಳಿತ ಮಂಡಲಿ ಇಂಗ್ಲಿಷ್‌ ಬೈಬಲನ್ನು ಪರಿಷ್ಕರಿಸಲು ಅನುಮತಿ ನೀಡಿತು. ಬೈಬಲ್‌ ಭಾಷಾಂತರಕಾರರು ಕೇಳಿದ ಸಾವಿರಾರು ಪ್ರಶ್ನೆಗಳನ್ನು ಭಾಷಾಂತರ ಸಮಿತಿಯು ಪರಿಶೀಲಿಸಿತು. ಹಳೆಯ ಇಂಗ್ಲಿಷ್‌ ಪದಗಳನ್ನು ಆಧುನಿಕ ಪದಗಳೊಂದಿಗೆ ಬದಲಿಸಲಾಯಿತು. ಹೀಗೆ ಮಾಡಿದ್ದರಿಂದ ವಿಷಯವನ್ನು ಸುಲಭವಾಗಿ ಓದಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಅದು ನಿಖರವೂ ಆಗಿತ್ತು. ಇತ್ತೀಚೆಗೆ ಬೇರೆ ಭಾಷೆಗಳಲ್ಲಿ ಬೈಬಲ್‌ ಭಾಷಾಂತರವಾಗಿದ್ದರಿಂದ ಇದೂ ಇಂಗ್ಲಿಷ್‌ ಬೈಬಲಿನಲ್ಲಿದ್ದ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯಮಾಡಿತು.—ಜ್ಞಾನೋ. 27:17.

ಮೆಚ್ಚುಗೆಯ ಮಹಾಪೂರ

13. ಅನೇಕರಿಗೆ 2013ರ ಪರಿಷ್ಕೃತ ಆವೃತ್ತಿಯ ಬಗ್ಗೆ ಹೇಗನಿಸುತ್ತದೆ?

13 ಇಂಗ್ಲಿಷ್‌ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಗೆ ಯಾವ ಪ್ರತಿಕ್ರಿಯೆ ಬಂದಿದೆ? ನಮ್ಮ ಸಹೋದರ ಸಹೋದರಿಯರಿಂದ ಮೆಚ್ಚುಗೆ ಸೂಚಿಸುವ ಸಾವಿರಾರು ಪತ್ರಗಳು ಬ್ರೂಕ್ಲಿನ್‍ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯಕ್ಕೆ ಬಂದಿವೆ. ಒಬ್ಬ ಸಹೋದರಿಗೆ ಅನಿಸಿದ ಹಾಗೆ ಅನೇಕರಿಗೆ ಅನಿಸುತ್ತದೆ. ಅವರು ಹೀಗಂದರು: “ಬೈಬಲನ್ನು ಬೆಲೆಬಾಳುವ ರತ್ನಮಣಿಗಳಿಂದ ತುಂಬಿರುವ ಪೆಟ್ಟಿಗೆಗೆ ಹೋಲಿಸಬಹುದು. 2013ರ ಪರಿಷ್ಕೃತ ಬೈಬಲಿನಿಂದ ಯೆಹೋವನ ಮಾತುಗಳನ್ನು ಸ್ಪಷ್ಟವಾಗಿ ಓದಲು ಸಾಧ್ಯವಾಗುತ್ತಿರುವುದನ್ನು ಒಂದೊಂದು ರತ್ನಮಣಿಯನ್ನು ಪರಿಶೀಲಿಸುತ್ತಾ ಅದರ ಅನೇಕ ಕೋನಗಳನ್ನು, ಸ್ಪಷ್ಟತೆಯನ್ನು, ಬಣ್ಣವನ್ನು ಮತ್ತು ಸೌಂದರ್ಯವನ್ನು ಮೆಚ್ಚುವುದಕ್ಕೆ ಹೋಲಿಸಬಹುದು. ವಚನಗಳು ಸರಳ ಭಾಷೆಯಲ್ಲಿವೆ. ಇದರಿಂದಾಗಿ ನಾನು ಯೆಹೋವನ ಬಗ್ಗೆ ಹೆಚ್ಚನ್ನು ತಿಳಿಯಲು ಸಹಾಯವಾಗಿದೆ. ತಂದೆಯಂತಿರುವ ಯೆಹೋವನು ನನ್ನನ್ನು ತಬ್ಬಿಕೊಂಡು ತನ್ನ ಮಾತುಗಳನ್ನು ನನಗೆ ಓದಿ ಹೇಳುತ್ತಿರುವಂತೆ ಅನಿಸುತ್ತದೆ.”

14, 15. ಬೇರೆ ಭಾಷೆಗಳಲ್ಲಿರುವ ನೂತನ ಲೋಕ ಭಾಷಾಂತರ ಬೈಬಲ್‌ ಬಗ್ಗೆ ಜನರಿಗೆ ಯಾವ ಅಭಿಪ್ರಾಯವಿದೆ?

14 ಇಂಗ್ಲಿಷ್‌ ಅಲ್ಲದೆ ಬೇರೆ ಭಾಷೆಗಳನ್ನು ಮಾತಾಡುವವರೂ ನೂತನ ಲೋಕ ಭಾಷಾಂತರ ಬೈಬಲ್‌ಗಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಬಲ್ಗೇರಿಯ ದೇಶದ ಸೊಫಿಯ ಎಂಬ ಸ್ಥಳದಲ್ಲಿನ ವೃದ್ಧ ವ್ಯಕ್ತಿಯೊಬ್ಬರು ಬಲ್ಗೇರಿಯನ್‌ ಆವೃತ್ತಿ ಬಗ್ಗೆ ಹೀಗನ್ನುತ್ತಾರೆ: “ನಾನು ತುಂಬ ವರ್ಷಗಳಿಂದ ಬೈಬಲ್‌ ಓದಿದ್ದೇನೆ. ಆದರೆ ಇಷ್ಟು ಸುಲಭವಾಗಿ ಅರ್ಥವಾಗುವ, ನೇರವಾಗಿ ಹೃದಯ ಮುಟ್ಟುವ ಹಾಗೆ ಭಾಷಾಂತರವಾಗಿರುವ ಬೈಬಲನ್ನು ಯಾವತ್ತೂ ಓದಿರಲಿಲ್ಲ.” ಅಲ್ಬೇನಿಯ ದೇಶದ ಒಬ್ಬ ಸಹೋದರಿ ಸಹ ಹೀಗೆ ಬರೆದಳು: “ಅಲ್ಬೇನಿಯ ಭಾಷೆಯಲ್ಲಿ ದೇವರ ವಾಕ್ಯವನ್ನು ಕೇಳಿಸಿಕೊಳ್ಳಲು ಎಷ್ಟು ಚೆನ್ನಾಗಿದೆ! ನಮ್ಮ ಸ್ವಂತ ಭಾಷೆಯಲ್ಲಿ ಯೆಹೋವನು ನಮ್ಮ ಜೊತೆ ಮಾತಾಡುವುದು ಎಂಥ ಸೌಭಾಗ್ಯ!”

15 ಅನೇಕ ದೇಶಗಳಲ್ಲಿ ಬೈಬಲ್‌ ಸಿಗುವುದು ತುಂಬ ಕಷ್ಟ. ಸಿಕ್ಕಿದರೂ ತುಂಬ ದುಬಾರಿ. ಹಾಗಾಗಿ ಪ್ರತಿಯೊಬ್ಬರಿಗೆ ತಮ್ಮದೇ ಆದ ಸ್ವಂತ ಬೈಬಲ್‌ ಸಿಕ್ಕಿದರೆ ಅದು ನಿಜವಾಗಲೂ ಒಂದು ಆಶೀರ್ವಾದ! ರುವಾಂಡ ದೇಶದ ವರದಿ ನೋಡಿ: “ನಮ್ಮ ಸಹೋದರರು ಯಾರೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದರೊ ತುಂಬ ಸಮಯದ ವರೆಗೆ ಅವರು ಪ್ರಗತಿ ಮಾಡುತ್ತಿರಲಿಲ್ಲ. ಏಕೆಂದರೆ ಅವರದ್ದೂ ಅಂತ ಸ್ವಂತ ಬೈಬಲ್‌ ಅವರಿಗಿರಲಿಲ್ಲ. ಸ್ಥಳೀಯ ಚರ್ಚ್ನ ಒಂದು ಆವೃತ್ತಿ ಪಡೆಯೋಣ ಎಂದರೆ ತುಂಬ ಬೆಲೆ ಬೇರೆ! ಅದೂ ಅಲ್ಲದೆ ಕೆಲವು ವಚನಗಳನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಈ ಕಾರಣಗಳಿಂದಾಗಿ ಪ್ರಗತಿಗೆ ಹೊಡೆತ ಬೀಳುತ್ತಿತ್ತು.” ನೂತನ ಲೋಕ ಭಾಷಾಂತರ ಅಲ್ಲಿನ ಭಾಷೆಯಲ್ಲಿ ಸಿಕ್ಕಿದ ಮೇಲೆ ಏನಾಯಿತು ಗೊತ್ತಾ? ರುವಾಂಡದಲ್ಲಿ, ಹದಿಪ್ರಾಯದ ನಾಲ್ಕು ಮಂದಿ ಮಕ್ಕಳಿರುವ ಒಂದು ಕುಟುಂಬ ಹೀಗನ್ನುತ್ತದೆ: “ಈ ಬೈಬಲನ್ನು ನಮಗೆ ಕೊಟ್ಟದ್ದಕ್ಕೆ ಯೆಹೋವನಿಗೆ ಮತ್ತು ನಂಬಿಗಸ್ತನೂ ವಿವೇಚನೆಯುಳ್ಳ ಆಳಿಗೆ ತುಂಬ ಧನ್ಯವಾದ ಹೇಳುತ್ತೇವೆ. ನಾವು ತುಂಬ ಬಡವರು. ಮನೆಯಲ್ಲಿರುವ ಎಲ್ಲರಿಗೆ ಒಂದೊಂದು ಬೈಬಲ್‌ ತಕ್ಕೊಳ್ಳುವಷ್ಟು ದುಡ್ಡು ನಮ್ಮ ಹತ್ತಿರ ಇಲ್ಲ. ಆದರೆ ಈಗ ನಮ್ಮಲ್ಲಿ ಒಬ್ಬೊಬ್ಬರಿಗೂ ಒಂದೊಂದು ಬೈಬಲ್‌ ಇದೆ. ಯೆಹೋವನಿಗೆ ಕೃತಜ್ಞತೆ ತೋರಿಸಲು ನಾವು ಕುಟುಂಬವಾಗಿ ಕೂತು ದಿನಾಲೂ ಬೈಬಲ್‌ ಓದುತ್ತೇವೆ.”

16, 17. (ಎ) ಯೆಹೋವನು ತನ್ನ ಜನರಿಗಾಗಿ ಏನು ಬಯಸುತ್ತಾನೆ? (ಬಿ) ಏನು ಮಾಡುವ ದೃಢಮನಸ್ಸು ನಮಗಿರಬೇಕು?

16 ಭವಿಷ್ಯದಲ್ಲಿ ಇನ್ನೂ ಹೆಚ್ಚು ಭಾಷೆಗಳಲ್ಲಿ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿ ಲಭ್ಯವಾಗಲಿದೆ. ಈ ಕೆಲಸವನ್ನು ಸೈತಾನನು ತಡೆಯಲು ಪ್ರಯತ್ನಿಸುತ್ತಿದ್ದಾನೆ ಖಂಡಿತ. ಆದರೆ ಸ್ಪಷ್ಟವಾದ, ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ತನ್ನ ಮಾತುಗಳನ್ನು ತನ್ನ ಜನರೆಲ್ಲರೂ ಕೇಳಬೇಕೆಂಬ ಬಯಕೆ ಯೆಹೋವನದ್ದು ಎಂದು ನಮಗೆ ಗೊತ್ತು. (ಯೆಶಾಯ 30:21 ಓದಿ.) “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿ”ಕೊಳ್ಳುವ ಸಮಯ ಬೇಗನೆ ಬರಲಿದೆ.—ಯೆಶಾ. 11:9.

17 ಯೆಹೋವನು ನಮಗೆ ಅನೇಕ ಉಡುಗೊರೆಗಳನ್ನು ಕೊಟ್ಟಿದ್ದಾನೆ. ಇವುಗಳಲ್ಲೊಂದು, ಆತನ ಹೆಸರನ್ನು ಗೌರವಿಸುವ ಭಾಷಾಂತರ. ಇದನ್ನು ಚೆನ್ನಾಗಿ ಬಳಸುವ ದೃಢಮನಸ್ಸು ನಮಗಿರಲಿ. ಯೆಹೋವನು ತನ್ನ ವಾಕ್ಯದ ಮೂಲಕ ನಿಮ್ಮ ಹತ್ತಿರ ದಿನಾಲೂ ಮಾತಾಡಲಿ. ನಮ್ಮೆಲ್ಲರ ಪ್ರಾರ್ಥನೆಗಳನ್ನು ಆತನು ಕಿವಿಗೊಟ್ಟು ಕೇಳುತ್ತಾನೆ. ಇಂಥ ಸಂವಾದದಿಂದ ಯೆಹೋವನನ್ನು ಇನ್ನಷ್ಟು ಹೆಚ್ಚು ತಿಳಿಯುತ್ತೇವೆ ಮತ್ತು ಆತನಿಗಾಗಿ ನಮಗಿರುವ ಪ್ರೀತಿ ಹೆಚ್ಚುತ್ತಾ ಹೋಗುತ್ತದೆ.—ಯೋಹಾ. 17:3.

“ನಮ್ಮ ಸ್ವಂತ ಭಾಷೆಯಲ್ಲಿ ಯೆಹೋವನು ನಮ್ಮ ಜೊತೆ ಮಾತಾಡುವುದು ಎಂಥ ಸೌಭಾಗ್ಯ!”

^ ಪ್ಯಾರ. 2 ಇಂಗ್ಲಿಷ್‌ ನೂತನ ಲೋಕ ಭಾಷಾಂತರ ಪರಿಷ್ಕೃತ ಆವೃತ್ತಿಯ ಪರಿಶಿಷ್ಟ A1 ಮತ್ತು ಒಳ್ಳೇ ಬೈಬಲ್‌ ಭಾಷಾಂತರವನ್ನು ಆಯ್ಕೆ ಮಾಡುವುದು ಹೇಗೆಂದು ಇಂಗ್ಲಿಷ್‌ ಕಾವಲಿನಬುರುಜು ಮೇ 1, 2008 ಪುಟ 18 ನೋಡಿ.

^ ಪ್ಯಾರ. 6 ಮೃತ ಸಮುದ್ರ ಸುರುಳಿಗಳು ಹೀಬ್ರು ಮ್ಯಾಸರೆಟಿಕ್‌ ಗ್ರಂಥಪಾಠಕ್ಕಿಂತ 1,000 ವರ್ಷ ಹಳೆಯದು. ಇದನ್ನೇ ನೂತನ ಲೋಕ ಭಾಷಾಂತರಕ್ಕಾಗಿ ಆಧಾರವಾಗಿ ಬಳಸಲಾಯಿತು.

^ ಪ್ಯಾರ. 7 ಕೆಲವು ಕೃತಿಗಳು ಈ ವಿವರಣೆ ಕೊಡುವುದಾದರೂ ಎಲ್ಲಾ ತಜ್ಞರು ಅದನ್ನು ಒಪ್ಪುವುದಿಲ್ಲ.

^ ಪ್ಯಾರ. 7 ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿತ್‌ ರೆಫರೆನ್ಸ್‌, ಪರಿವಿಡಿ 1A “ಹೀಬ್ರು ಶಾಸ್ತ್ರಗ್ರಂಥದಲ್ಲಿ ದೇವರ ಹೆಸರು,” ಪುಟ 1561 ನೋಡಿ.