ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯ ಏನಾಗಿದೆ?

ದೇವರ ರಾಜ್ಯ ಏನಾಗಿದೆ?

ದೇವರ ರಾಜ್ಯ ಏನಾಗಿದೆ?

ಯೇಸುವಿನ ಸಾರುವಿಕೆಯ ಮುಖ್ಯವಿಷಯ ಏನಾಗಿತ್ತು? ಆತನೇ ಹೇಳಿದಂತೆ ಅದು ದೇವರ ರಾಜ್ಯವಾಗಿತ್ತು. (ಲೂಕ 4:43) ಯೇಸು ಜನರೊಂದಿಗೆ ಮಾತಾಡುವಾಗ ಆ ರಾಜ್ಯದ ಕುರಿತು ಅನೇಕ ಸಲ ಪ್ರಸ್ತಾಪಿಸಿದನು. ಅವರು ಅದರಿಂದ ದಿಗ್ಭ್ರಮೆಗೊಂಡರೋ? ಆ ರಾಜ್ಯ ಏನಾಗಿದೆಯೆಂದು ಅವರು ಪ್ರಶ್ನಿಸಿದರೋ? ಇಲ್ಲ. ಯೇಸುವಿನ ಜೀವನ ಮತ್ತು ಚಟುವಟಿಕೆಗಳ ಕುರಿತ ಬೈಬಲ್‌ ದಾಖಲೆಗಳಲ್ಲಿ ಇಂಥ ಪ್ರಶ್ನೆಗಳು ಎಲ್ಲೂ ಕಂಡುಬರುವುದಿಲ್ಲ. ಹಾಗಾದರೆ ದೇವರ ರಾಜ್ಯವು ಆ ಜನರಿಗೆ ಸುಪರಿಚಿತವಾಗಿತ್ತೋ?

ವಾಸ್ತವವೇನೆಂದರೆ ಯೆಹೂದ್ಯರು ಪವಿತ್ರವೆಂದು ಮಾನ್ಯಮಾಡುತ್ತಿದ್ದ ಪುರಾತನ ಗ್ರಂಥವು, ಆ ರಾಜ್ಯ ಏನಾಗಿದೆ ಮತ್ತು ಅದೇನನ್ನು ಸಾಧಿಸುತ್ತದೆ ಎಂಬದನ್ನು ಸ್ಪಷ್ಟ ಹಾಗೂ ನಿಶ್ಚಿತ ಮಾತುಗಳಿಂದ ವರ್ಣಿಸಿತ್ತು. ಯೆಹೂದ್ಯರಂತೆ ಇಂದು ನಾವು ಸಹ ಬೈಬಲಿನ ಮೂಲಕ ಆ ರಾಜ್ಯದ ಕುರಿತು ಇನ್ನೂ ಹೆಚ್ಚಿನದ್ದನ್ನು ಕಲಿಯಬಲ್ಲೆವು. ದೇವರ ರಾಜ್ಯದ ಕುರಿತು ಬೈಬಲ್‌ ಕಲಿಸುವ ಏಳು ವಾಸ್ತವಾಂಶಗಳನ್ನು ನಾವೀಗ ಪರಿಗಣಿಸೋಣ. ಇವುಗಳಲ್ಲಿ ಮೊದಲ ಮೂರು ಅಂಶಗಳು ಯೇಸುವಿನ ಸಮಯದ ಯೆಹೂದ್ಯರಿಗೂ ಅದಕ್ಕಿಂತ ಮುಂಚಿನವರಿಗೂ ಸುಲಭವಾಗಿ ಲಭ್ಯವಿದ್ದವು. ತದನಂತರದ ಮೂರು ಅಂಶಗಳನ್ನು ಮೊದಲನೆಯ ಶತಮಾನದಲ್ಲಿ ಕ್ರಿಸ್ತನು ಇಲ್ಲವೆ ಅವನ ಅಪೊಸ್ತಲರು ತಿಳಿಯಪಡಿಸಿದರು. ಕೊನೆಯ ಅಂಶವು ನಮ್ಮ ದಿನಗಳಲ್ಲಿ ಸ್ಪಷ್ಟವಾಗಿದೆ.

1. ದೇವರ ರಾಜ್ಯವು ನಿಜ ಸರಕಾರವಾಗಿದ್ದು ಸದಾಕಾಲಕ್ಕೂ ಇರುವುದು. ಬೈಬಲಿನ ಮೊತ್ತಮೊದಲ ಪ್ರವಾದನೆಯು, ದೇವರು ನಂಬಿಗಸ್ತ ಮಾನವರನ್ನು ವಿಮೋಚಿಸಲು ಒಬ್ಬ ರಕ್ಷಕನನ್ನು ಕಳುಹಿಸುವನು ಎಂಬದನ್ನು ತಿಳಿಯಪಡಿಸಿತು. “ಸಂತಾನ” ಎಂದು ಕರೆಯಲ್ಪಟ್ಟ ಈತನು ಆದಾಮ, ಹವ್ವ ಮತ್ತು ಸೈತಾನನ ದಂಗೆಯಿಂದ ಉದ್ಭವಿಸಿದ ಎಲ್ಲ ಸಮಸ್ಯೆಗಳನ್ನು ಅಳಿಸಿಬಿಡುವನು. (ಆದಿಕಾಂಡ 3:15) ಕಾಲಾನಂತರ ನಂಬಿಗಸ್ತ ರಾಜ ದಾವೀದನಿಗೆ ಆ “ಸಂತಾನ” ಅಥವಾ ಮೆಸ್ಸೀಯನ ಕುರಿತು ರೋಮಾಂಚಕ ವಿಷಯವನ್ನು ತಿಳಿಸಲಾಯಿತು. ಅವನು ಒಂದು ರಾಜ್ಯದ ರಾಜನಾಗಲಿದ್ದನು. ಈ ಸರಕಾರವು ಎಲ್ಲಾ ಸರಕಾರಗಳಿಂದ ಭಿನ್ನವಾಗಿರುವುದು. ಅದು ನಿರಂತರವಾಗಿ ಇರುವುದು.—2 ಸಮುವೇಲ 7:12-14.

2. ದೇವರ ರಾಜ್ಯವು ಎಲ್ಲ ಮಾನವ ಸರಕಾರಗಳನ್ನು ನಿರ್ನಾಮಮಾಡುವುದು. ಪ್ರವಾದಿ ದಾನಿಯೇಲನು ತಾನು ನೋಡಿದ ದರ್ಶನದಲ್ಲಿ, ಒಂದರ ಹಿಂದೆ ಒಂದರಂತೆ ಇತಿಹಾಸವನ್ನೆಲ್ಲ ಆವರಿಸಿ ನಮ್ಮ ದಿನದವರೆಗಿನ ಲೋಕಶಕ್ತಿಗಳ ಸರಣಿಯನ್ನೇ ನೋಡಿದನು. ಆ ದರ್ಶನದ ಪುಳಕಿತಗೊಳಿಸುವ ಸಮಾಪ್ತಿಯನ್ನು ಗಮನಿಸಿರಿ: “ಆ ರಾಜರ [ಕೊನೆಯ ಮಾನವ ರಾಜರ] ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಹಾಗಾದರೆ ಈ ಲೋಕದ ಎಲ್ಲ ರಾಜ್ಯಗಳು ಅಥವಾ ಸರಕಾರಗಳು ಅವುಗಳ ಯುದ್ಧ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ಸಮೇತ ಶಾಶ್ವತವಾಗಿ ನಿರ್ನಾಮವಾಗುವವು. ದಾನಿಯೇಲನ ಪ್ರವಾದನೆಯು ತೋರಿಸುವಂತೆ ದೇವರ ರಾಜ್ಯವು ಶೀಘ್ರದಲ್ಲೇ ಇಡೀ ಭೂಮಿಯನ್ನು ಆಳಲಿದೆ. (ದಾನಿಯೇಲ 2:44, 45) ಅದು ನೈಜವಾಗಿರುವುದಷ್ಟೇ ಅಲ್ಲ ಭೂಮಿಯನ್ನು ಅಳಲು ಕೇವಲ ಆ ಒಂದೇ ಸರಕಾರವು ಉಳಿಯುವುದು. *

3. ದೇವರ ರಾಜ್ಯವು ಯುದ್ಧ, ರೋಗ, ಕ್ಷಾಮ ಮತ್ತು ಮರಣವನ್ನು ಸಹ ಕೊನೆಗಾಣಿಸುವುದು. ನವಿರೇಳಿಸುವ ಬೈಬಲ್‌ ಪ್ರವಾದನೆಗಳು, ದೇವರ ರಾಜ್ಯವು ಈ ಭೂಮಿಯಲ್ಲಿ ಏನನ್ನು ಮಾಡಲಿದೆ ಎಂಬದನ್ನು ತಿಳಿಯಪಡಿಸುತ್ತವೆ. ಆ ಸರಕಾರವು, ಮಾನವ ಸಂಘಟನೆಗಳು ಈ ವರೆಗೆ ಮಾಡಿರದ ಮತ್ತು ಇನ್ನು ಮುಂದೆಯೂ ಮಾಡಲಾರದ ವಿಷಯಗಳನ್ನು ಸಾಧಿಸುವುದು. ಎಲ್ಲ ಯುದ್ಧಾಸ್ತ್ರಗಳ ಸರ್ವನಾಶವನ್ನು ತುಸು ಯೋಚಿಸಿ! ದೇವರು ‘ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಡುತ್ತಾನೆ.’ (ಕೀರ್ತನೆ 46:9) ವೈದ್ಯರು, ಆಸ್ಪತ್ರೆಗಳು ಅಥವಾ ಯಾವುದೇ ವಿಧದ ಕಾಯಿಲೆಗಳು ಇನ್ನಿರವು. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಇನ್ನು ಮುಂದೆ ಕ್ಷಾಮ, ಆಹಾರದ ಅಭಾವ, ನ್ಯೂನಪೋಷಣೆ ಅಥವಾ ಹೊಟ್ಟೆಗಿಲ್ಲದೆ ನರಳುವ ಪರಿಸ್ಥಿತಿ ಇರದು. ಏಕೆಂದರೆ, ಭೂಮಿಯಲ್ಲಿ ‘ಬೆಳೆಯು ಸಮೃದ್ಧವಾಗಿರುವುದು.’ (ಕೀರ್ತನೆ 72:16) ಸಾವು, ಉತ್ತರಕ್ರಿಯೆ, ಸ್ಮಶಾನ, ಶವಾಗಾರ ಅಥವಾ ಇದಕ್ಕೆ ಸಂಬಂಧಪಟ್ಟ ಎಲ್ಲ ವೇದನೆಯು ಕಣ್ಮರೆಯಾಗುವುದು. ಕಾರಣ ಮರಣವೆಂಬ ನಿಷ್ಕರುಣಿಯಾದ ನಮ್ಮ ಶತ್ರು ಕೊನೆಗೂ ಹೇಳಹೆಸರಿಲ್ಲದೆ ಹೋಗುವುದು. ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.

4. ದೇವರ ರಾಜ್ಯದ ಅರಸನನ್ನು ಸ್ವತಃ ದೇವರೇ ನೇಮಿಸಿದ್ದಾನೆ. ಮೆಸ್ಸೀಯನು ಸ್ವ-ನೇಮಿತ ಅರಸನೂ ಅಲ್ಲ ಅವನನ್ನು ಅಪರಿಪೂರ್ಣ ಮನುಷ್ಯರು ಆರಿಸುವುದೂ ಇಲ್ಲ. ಅವನನ್ನು ಸ್ವತಃ ಯೆಹೋವ ದೇವರೇ ಆರಿಸಿದ್ದಾನೆ. ಮೆಸ್ಸೀಯ ಮತ್ತು ಕ್ರಿಸ್ತ ಎಂಬ ಬಿರುದುಗಳು ತಾನೇ ಇದನ್ನು ಸೂಚಿಸುತ್ತವೆ. ಮೂಲ ಭಾಷೆಗಳಲ್ಲಿ ಈ ಎರಡೂ ಪದಗಳು “ಅಭಿಷೇಕಿಸಲ್ಪಟ್ಟವನು” ಎಂಬ ಅರ್ಥವನ್ನು ಕೊಡುತ್ತವೆ. ಹಾಗಾಗಿ ಈ ಅರಸನನ್ನು ವಿಶೇಷ ನೇಮಕಕ್ಕೆ ನೇಮಿಸಿದವನು ಯೆಹೋವನು ಎಂಬುವುದು ಸ್ಪಟಿಕ ಸ್ಪಷ್ಟ. ದೇವರು ಅವನ ಬಗ್ಗೆ ಹೇಳುವುದು: “ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ; ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ; ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.” (ಯೆಶಾಯ 42:1; ಮತ್ತಾಯ 12:17,18) ನಮಗೆ ಯಾವ ರೀತಿಯ ಅರಸನ ಅಗತ್ಯವಿದೆ ಎಂದು ನಮ್ಮ ಸೃಷ್ಟಿಕರ್ತನ ಹೊರತು ಇನ್ನಾರಿಗೆ ಹೆಚ್ಚು ಉತ್ತಮವಾಗಿ ತಿಳಿದೀತು?

5. ದೇವರ ರಾಜ್ಯದ ಅರಸನು ತನ್ನ ಅರ್ಹತೆಯನ್ನು ಇಡೀ ಮಾನವಕುಲಕ್ಕೆ ತೋರಿಸಿದ್ದಾನೆ. ನಜರೇತಿನ ಯೇಸುವೇ ಮುಂತಿಳಿಸಲ್ಪಟ್ಟ ಮೆಸ್ಸೀಯನೆಂದು ರುಜುವಾದನು. ಯೆಹೋವನು ಗೊತ್ತುಪಡಿಸಿದ ವಂಶಾವಳಿಯಲ್ಲೇ ಅವನು ಹುಟ್ಟಿಬಂದನು. (ಆದಿಕಾಂಡ 22:18; 1 ಪೂರ್ವಕಾಲವೃತ್ತಾಂತ 17:11; ಮತ್ತಾಯ 1:1) ಶತಮಾನಗಳ ಹಿಂದೆ ದಾಖಲಾಗಿದ್ದ ಅನೇಕಾನೇಕ ಮೆಸ್ಸೀಯ ಸಂಬಂಧಿತ ಪ್ರವಾದನೆಗಳನ್ನು ಅವನು ಭೂಮಿಯಲ್ಲಿದ್ದಾಗ ನೆರೆವೇರಿಸಿದನು. ಪರಲೋಕದಿಂದ ಸಹ ಅವನನ್ನು ಮೆಸ್ಸೀಯನೆಂದು ಗುರುತಿಸಲಾಯಿತು. ಹೇಗೆ? ದೇವರು ಪರಲೋಕದಿಂದ ಮಾತಾಡಿ ಅವನನ್ನು ತನ್ನ ಸ್ವಂತ ಮಗನೆಂದು ಗುರುತಿಸಿದನು. ಮುಂತಿಳಿಸಲಾದ ಮೆಸ್ಸೀಯನು ಯೇಸುವೇ ಎಂದು ದೇವದೂತರು ಅವನಿಗೆ ಬೊಟ್ಟುಮಾಡಿದರು. ಅಲ್ಲದೆ ಅವನು ಅದ್ಭುತಗಳನ್ನು ನಡೆಸಿದ್ದನ್ನು ಕಣ್ಣಾರೆಕಂಡ ನೂರಾರು, ಅಷ್ಟೇಕೆ ಸಾವಿರಾರು ಜನರಿಗೆ ಅವನದನ್ನು ದೇವರ ಶಕ್ತಿಯಿಂದಲೇ ಮಾಡಿದನೆಂಬದು ಸ್ಪಷ್ಟವಾಗಿತ್ತು. * ಯೇಸು ತಾನು ಯಾವ ರೀತಿಯ ಅರಸನಾಗಿರುವೆನೆಂದು ಆಗಾಗ್ಗೆ ತೋರಿಸಿಕೊಟ್ಟನು. ಜನರಿಗೆ ಸಹಾಯಮಾಡುವ ಶಕ್ತಿ ಅವನಿಗಿತ್ತು ಮಾತ್ರವಲ್ಲ ಹಾಗೆ ಮಾಡುವ ಮನಸ್ಸೂ ಅವನಿಗಿತ್ತು. (ಮತ್ತಾಯ 8:1-3) ಅವನು ನಿಸ್ವಾರ್ಥಿಯೂ ಕರುಣಾಮಯಿಯೂ ಧೀರನೂ ದೀನನೂ ಆಗಿದ್ದನು. ಬೈಬಲಿನಲ್ಲಿ ಅವನ ಭೂಜೀವನದ ಕುರಿತ ವೃತ್ತಾಂತವು ನಮಗೆಲ್ಲರಿಗೆ ಓದಲು ಲಭ್ಯವಿದೆ.

6. ದೇವರ ರಾಜ್ಯದಲ್ಲಿ ಯೇಸುವಿನೊಂದಿಗೆ 1,44,000 ಮಂದಿ ಜೊತೆ ಅರಸರಿದ್ದಾರೆ. ತನ್ನ ಅಪೊಸ್ತಲರನ್ನು ಸೇರಿಸಿ ಇನ್ನಿತರರೂ ಪರಲೋಕದಲ್ಲಿ ತನ್ನೊಟ್ಟಿಗೆ ಆಳುವರೆಂದು ಯೇಸು ಹೇಳಿದನು. ಈ ಗುಂಪನ್ನು ‘ಚಿಕ್ಕ ಹಿಂಡು’ ಎಂದು ಅವನು ಕರೆದನು. (ಲೂಕ 12:32) ತದನಂತರ ಅಪೊಸ್ತಲ ಯೋಹಾನನಿಗೆ ಈ ಚಿಕ್ಕ ಹಿಂಡಿನಲ್ಲಿ ಒಟ್ಟು 1,44,000 ಮಂದಿ ಇರುವರೆಂದು ತಿಳಿಸಲಾಯಿತು. ಪರಲೋಕದಲ್ಲಿ ಕ್ರಿಸ್ತನೊಂದಿಗೆ ರಾಜರಾಗಿ ಆಳುವ ಮತ್ತು ಯಾಜಕರಾಗಿ ಸೇವೆಸಲ್ಲಿಸುವ ರೊಮಾಂಚಕ ನೇಮಕ ಅವರಿಗಿರುವುದು.—ಪ್ರಕಟನೆ 5:9, 10; 14:1, 3.

7. ದೇವರ ರಾಜ್ಯವು ಪರಲೋಕದಲ್ಲಿ ಈಗ ಆಳುತ್ತಿದೆ, ಅದರ ಆಳ್ವಿಕೆಯನ್ನು ಇಡೀ ಭೂಮಿಯಲ್ಲಿ ಸ್ಥಾಪಿಸಲು ಸಿದ್ಧವಾಗಿದೆ. ನಾವು ಕಲಿಯುವುದರಲ್ಲಿ ಅತ್ಯಂತ ರೋಮಾಂಚಕವಾದದ್ದು ಈ ಕೊನೆಯ ಸತ್ಯಾಂಶವಾಗಿದೆ. ಪರಲೋಕದಲ್ಲಿ ಯೇಸುವಿಗೆ ರಾಜನಾಗಿರುವ ಅಧಿಕಾರ ಸಿಕ್ಕಿದೆ ಎಂಬದಕ್ಕೆ ಬೈಬಲ್‌ ಸಾಕಷ್ಟು ಪುರಾವೆಗಳನ್ನು ಕೊಡುತ್ತದೆ. ಅವನೀಗ ಅಲ್ಲಿ ಆಳುತ್ತಿದ್ದಾನೆ ಮತ್ತು ಶೀಘ್ರದಲ್ಲೇ ತನ್ನ ಆಡಳಿತವನ್ನು ಭೂಮಿಗೂ ವಿಸ್ತರಿಸಿ, ನಾವು ಈಗಾಗಲೇ ತಿಳಿಸಿದಂಥ ಮಹತ್ತಾದ ಪ್ರವಾದನೆಗಳನ್ನು ನೆರವೇರಿಸುವನು. ಆದರೆ ದೇವರ ರಾಜ್ಯವು ಈಗ ಆಳುತ್ತಿದೆ ಎಂದು ನಮಗೆ ಹೇಗೆ ಗೊತ್ತು? ಅಲ್ಲದೆ ಅದು ಭೂಮಿಯ ಮೇಲೆ ಯಾವಾಗ ಆಳಲು ಆರಂಭಿಸುವುದು? (w08 1/1)

[ಪಾದಟಿಪ್ಪಣಿಗಳು]

^ ಪ್ಯಾರ. 5 ಇಂಥ ಪ್ರವಾದನೆಗಳು, ಅನೇಕರಿಗೆ ಕಲಿಸಲಾಗುತ್ತಿರುವಂತೆ ದೇವರ ರಾಜ್ಯವು ನಮ್ಮ ಹೃದಯದಲ್ಲಿ ಇಲ್ಲ ಎಂಬದನ್ನು ತೋರಿಸುತ್ತವೆ. 13ನೇ ಪುಟದಲ್ಲಿರುವ “ನಮ್ಮ ಓದುಗರ ಪ್ರಶ್ನೆ” ಎಂಬ ಲೇಖನವನ್ನು ನೋಡಿ.