ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯ ಯಾವಾಗ ಬರುತ್ತದೆ?

ದೇವರ ರಾಜ್ಯ ಯಾವಾಗ ಬರುತ್ತದೆ?

ದೇವರ ರಾಜ್ಯ ಯಾವಾಗ ಬರುತ್ತದೆ?

“ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್‌ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” (ಅ. ಕೃತ್ಯಗಳು 1:6) ಯೇಸು ತನ್ನ ರಾಜ್ಯವನ್ನು ಯಾವಾಗ ಸ್ಥಾಪಿಸುವನೆಂದು ತಿಳಿಯಲು ಅಪೊಸ್ತಲರು ಕೌತುಕದಿಂದಿದ್ದರು. ಸುಮಾರು 2,000 ವರ್ಷಗಳ ಬಳಿಕ, ಈಗಲೂ ಜನರು ದೇವರ ರಾಜ್ಯ ಯಾವಾಗ ಬರುತ್ತದೆ ಎಂದು ತಿಳಿಯಲು ಕಾತರದಿಂದಿದ್ದಾರೆ.

ಯೇಸುವಿನ ಸಾರುವಿಕೆಯ ಮುಖ್ಯ ವಿಷಯವು ರಾಜ್ಯವಾಗಿದ್ದರಿಂದ ಆ ಪ್ರಶ್ನೆಯ ಕುರಿತು ಅವನು ಚರ್ಚಿಸಿದ್ದಿರಬೇಕು ಎಂದು ನಿಮಗೆ ಅನಿಸಬಹುದು. ಹೌದು, ಅವನು ಅದರ ಬಗ್ಗೆ ಚರ್ಚಿಸಿದ್ದಾನೆ! ಯೇಸು ತನ್ನ “ಪ್ರತ್ಯಕ್ಷತೆ” ಎಂದು ಕರೆದ ಒಂದು ನಿರ್ದಿಷ್ಟ ಸಮಯಾವಧಿಯ ಕುರಿತು ಅನೇಕ ಸಲ ಮಾತಾಡಿದನು. (ಮತ್ತಾಯ 24:37) ಆ ಪ್ರತ್ಯಕ್ಷತೆಗೂ ಮೆಸ್ಸೀಯ ರಾಜ್ಯದ ಸ್ಥಾಪನೆಗೂ ನಿಕಟ ಸಂಬಂಧವಿದೆ. ಹಾಗಾದರೆ ಆ ಪ್ರತ್ಯಕ್ಷತೆಯು ಏನಾಗಿದೆ? ಕ್ರಿಸ್ತನ ಪ್ರತ್ಯಕ್ಷತೆಯ ಕುರಿತು ಬೈಬಲ್‌ ತಿಳಿಸುವ ನಾಲ್ಕು ವಾಸ್ತವಾಂಶಗಳನ್ನು ನಾವು ಪರಿಗಣಿಸೋಣ.

1. ಕ್ರಿಸ್ತನ ಪ್ರತ್ಯಕ್ಷತೆಯು ಅವನು ಸತ್ತು ದೀರ್ಘ ಸಮಯದ ಅನಂತರ ಆರಂಭಗೊಳ್ಳುವುದು. ಯೇಸು ಒಂದು ಸಾಮ್ಯದಲ್ಲಿ, “ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬರಬೇಕೆಂದು ದೂರದೇಶಕ್ಕೆ ಹೊರಟ” ಒಬ್ಬಾನೊಬ್ಬ ಮನುಷ್ಯನಿಗೆ ತನ್ನನ್ನು ಹೋಲಿಸಿದನು. (ಲೂಕ 19:12) ಆ ಪ್ರವಾದನಾರೂಪದ ದೃಷ್ಟಾಂತವು ಹೇಗೆ ನೆರವೇರಿತು? ಹೇಗೆಂದರೆ, ಯೇಸು ಸತ್ತು ಪುನರುತ್ಥಾನಗೊಂಡ ಬಳಿಕ “ದೂರದೇಶಕ್ಕೆ” ಅಂದರೆ, ಪರಲೋಕಕ್ಕೆ ಹೋದನು. ತದ್ರೀತಿಯ ಸಾಮ್ಯವೊಂದರಲ್ಲಿ ಯೇಸು ಮುಂತಿಳಿಸಿದಂತೆ ಅವನು ‘ಬಹುಕಾಲದ ಮೇಲೆಯೇ’ ರಾಜ್ಯಾಧಿಕಾರದೊಂದಿಗೆ ಹಿಂತಿರುಗಿ ಬರಲಿದ್ದನು.—ಮತ್ತಾಯ 25:19.

ಯೇಸುವಿನ ಸ್ವರ್ಗಾರೋಹಣದ ಕೆಲವು ವರ್ಷಗಳ ತರುವಾಯ ಅಪೊಸ್ತಲ ಪೌಲನು ಬರೆದದ್ದು: “ಈ ಯಾಜಕನು [ಯೇಸು] ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು. ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಹಾಕಲ್ಪಡುವ ತನಕ ಆತನು ಕಾದಿರುವನು.” (ಇಬ್ರಿಯ 10:12, 13) ಹಾಗಾದರೆ ಯೇಸು ಪರಲೋಕಕ್ಕೇರಿ ಹೋದ ಬಳಿಕ ದೀರ್ಘಾವಧಿಯ ವರೆಗೆ ಕಾಯಬೇಕಾಗಿತ್ತು. ಕೊನೆಗೆ, ಯೆಹೋವ ದೇವರು ತನ್ನ ಮಗನನ್ನು ಸುದೀರ್ಘಕಾಲದಿಂದ ವಾಗ್ದನಮಾಡಿದ ಮೆಸ್ಸೀಯ ರಾಜ್ಯದ ರಾಜನನ್ನಾಗಿ ಮಾಡಿದಾಗ ಆ ಕಾಯುವ ಕಾಲವು ತೀರಿತು. ಆ ಸಮಯದಲ್ಲೇ ಕ್ರಿಸ್ತನ ಪ್ರತ್ಯಕ್ಷತೆಯು ಆರಂಭಗೊಂಡಿತು. ಈ ಮಹತ್ವಪೂರ್ಣ ಘಟನೆಯನ್ನು ಭೂಮಿಯಲ್ಲಿದ್ದ ಜನರು ನೋಡಸಾಧ್ಯವಿತ್ತೋ?

2. ಕ್ರಿಸ್ತನ ಪ್ರತ್ಯಕ್ಷತೆಯು ಮಾನವ ಕಣ್ಣಿಗೆ ಅಗೋಚರವಾಗಿದೆ. ಯೇಸು ತನ್ನ ಪ್ರತ್ಯಕ್ಷತೆಯ ಸೂಚನೆಯ ಕುರಿತು ಚರ್ಚಿಸಿದ್ದನ್ನು ನಿಮ್ಮ ನೆನಪಿಗೆ ತನ್ನಿ. (ಮತ್ತಾಯ 24:3) ಅವನ ಪ್ರತ್ಯಕ್ಷತೆಯನ್ನು ಮನುಷ್ಯರು ಕಣ್ಣಾರೆ ನೋಡಸಾಧ್ಯವಿತ್ತಾದರೆ ಅದಕ್ಕೆ ಸೂಚನೆಯನ್ನು ಕೊಡುವ ಅಗತ್ಯವಿರುತ್ತಿತ್ತೇ? ದೃಷ್ಟಾಂತಕ್ಕಾಗಿ, ನೀವು ಸಮುದ್ರವನ್ನು ನೋಡಲು ಹೋಗುತ್ತಿದ್ದೀರೆಂದು ಇಟ್ಟುಕೊಳ್ಳಿ. ದಾರಿ ತೋರಿಸುವ ಸೂಚನಾ ಫಲಕಗಳನ್ನು ನೀವು ಅಲ್ಲಲ್ಲಿ ಕಾಣಬಹುದು. ಆದರೆ ಸಮುದ್ರದಂಚಿಗೆ ತಲಪಿ ದಿಗಂತದಂಚಿನವರೆಗೂ ವಿಶಾಲವಾಗಿ ಹರಡಿಕೊಂಡಿರುವ ನೀರನ್ನು ನೋಡಿದ ಮೇಲೆಯೂ “ಇದು ಸಮುದ್ರ” ಎಂಬ ದಪ್ಪ ಅಕ್ಷರಗಳ ಒಂದು ಸೂಚನಾ ಫಲಕಕ್ಕಾಗಿ ನೀವು ಹುಡುಕುವಿರೋ? ಖಂಡಿತವಾಗಿಯೂ ಇಲ್ಲ! ನೀವು ಕಣ್ಣಾರೆ ನೋಡಿ ಸುಲಭವಾಗಿ ಗುರುತಿಸಬಹುದಾದ ವಿಷಯಕ್ಕೆ ಸೂಚನಾ ಫಲಕದ ಅಗತ್ಯವೇಕೆ?

ಯೇಸು ತನ್ನ ಪ್ರತ್ಯಕ್ಷತೆಯ ಸೂಚನೆಯನ್ನು ಕೊಟ್ಟದ್ದು, ಮನುಷ್ಯರು ಕಣ್ಣಾರೆ ಕಾಣಸಾಧ್ಯವಿರುವ ಸಂಗತಿಗಳನ್ನು ಗುರುತಿಸಲು ಅಲ್ಲ. ಬದಲಿಗೆ ಪರಲೋಕದಲ್ಲಿ ನಡೆಯುವ ಸಂಗತಿಗಳನ್ನು ಗ್ರಹಿಸಲು ನೆರವಾಗುವುದಕ್ಕಾಗಿಯೇ. ಆದ್ದರಿಂದ ಯೇಸು ಹೇಳಿದ್ದು: “ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು [ದೇವರ ರಾಜ್ಯವು] ಬರುವುದಿಲ್ಲ.” (ಲೂಕ 17:20, ಪರಿಶುದ್ಧ ಬೈಬಲ್‌) * ಹಾಗಿರುವಲ್ಲಿ, ಕ್ರಿಸ್ತನ ಪ್ರತ್ಯಕ್ಷತೆಯು ಆರಂಭಗೊಂಡಿದೆ ಎಂಬುದನ್ನು ಭೂಮಿಯಲ್ಲಿರುವವರು ಆ ಸೂಚನೆಯ ಮೂಲಕ ಹೇಗೆ ತಿಳಿದುಕೊಳ್ಳಲಿದ್ದರು?

3. ಯೇಸುವಿನ ಪ್ರತ್ಯಕ್ಷತೆಯಾಗುವಾಗ ಭೂಮಿಯಲ್ಲಿ ವಿಪರೀತ ಕಷ್ಟತೊಂದರೆಗಳಿರುವವು. ತಾನು ಪರಲೋಕದ ರಾಜನಾಗಿ ಪ್ರತ್ಯಕ್ಷನಾಗುವಾಗ ಭೂಮಿಯಲ್ಲಿ ಯುದ್ಧ, ಬರಗಾಲ, ಭೂಕಂಪ, ವ್ಯಾಧಿ ಮತ್ತು ಅಧರ್ಮ ನಡೆಯುವುದೆಂದು ಯೇಸು ಹೇಳಿದನು. (ಮತ್ತಾಯ 24:7-12; ಲೂಕ 21:10, 11) ಈ ಸಂಕಟಗಳಿಗೆಲ್ಲ ಕಾರಣವಾದರೂ ಏನು? ಬೈಬಲ್‌ ವಿವರಿಸುವುದು, “ಇಹಲೋಕಾಧಿಪತಿ”ಯಾದ ಸೈತಾನನು ಮಹಾ ರೌದ್ರವುಳ್ಳವನಾಗಿದ್ದಾನೆ. ಏಕೆಂದರೆ ರಾಜನಾಗಿ ಕ್ರಿಸ್ತನ ಪ್ರತ್ಯಕ್ಷತೆಯು ಈಗಾಗಲೆ ಆರಂಭಗೊಂಡಿದ್ದರಿಂದ ತನಗೆ ಉಳಿದಿರುವ ಸಮಯವು ಕೊಂಚವೇ ಎಂದು ಅವನಿಗೆ ತಿಳಿದಿದೆ. (ಯೋಹಾನ 12:31; ಪ್ರಕಟನೆ 12:9, 12) ಸೈತಾನನ ರೋಷ ಹಾಗೂ ಕ್ರಿಸ್ತನ ಪ್ರತ್ಯಕ್ಷತೆಯ ಕಣ್ಣಿಗೆಕಾಣುವ ಇಂಥ ಪುರಾವೆಗಳು ನಮ್ಮ ಕಾಲದಲ್ಲಿ ಬೇಕಾದಷ್ಟಿವೆ. 1914ರಿಂದ ಈ ಪುರಾವೆಯು ಗಮನಾರ್ಹವಾಗಿ ಭೌಗೋಳಿಕ ಪ್ರಮಾಣದಲ್ಲಿ ತೋರಿಬಂದಿದೆ. ಈ ವರ್ಷವು ಒಂದು ತಿರುಗುಬಿಂದು ಆಗಿದೆಯೆಂದು ಇತಿಹಾಸಗಾರರು ಸಹ ಗುರುತಿಸುತ್ತಾರೆ.

ಅವೆಲ್ಲವು ಕೆಟ್ಟ ಸುದ್ದಿಯಂತಿರಬಹುದು ಆದರೆ ಅದು ಕೆಟ್ಟದ್ದಲ್ಲ. ಮೆಸ್ಸೀಯ ರಾಜ್ಯವು ಈಗ ಪರಲೋಕದಲ್ಲಿ ಆಳುತ್ತಿದೆ ಎಂಬುದನ್ನು ಅವು ಸಾರಿಹೇಳುತ್ತವೆ. ಅತಿ ಬೇಗನೆ, ಆ ಸರಕಾರವು ಈ ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ. ಆದರೆ ಜನರು ಆ ರಾಜ್ಯದ ಪ್ರಭುತ್ವವನ್ನು ಅಂಗೀಕರಿಸಿ ಅದರ ಪ್ರಜೆಗಳಾಗಿರಲು ಅದರ ಕುರಿತು ತಿಳಿದುಕೊಳ್ಳುವುದಾದರೂ ಹೇಗೆ?

4. ಯೇಸುವಿನ ಪ್ರತ್ಯಕ್ಷತೆಯನ್ನು ಭೌಗೋಳಿಕ ಸಾರುವ ಕೆಲಸದಿಂದ ಗುರುತಿಸಲಾಗುತ್ತದೆ. “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ” ತನ್ನ ಪ್ರತ್ಯಕ್ಷತೆಯು ಇರುವುದೆಂದು ಯೇಸು ಹೇಳಿದನು. * (ಮತ್ತಾಯ 24:37-39) ನೋಹನು ದೇವರ ಸೇವಕನಾಗಿದ್ದನು. ಅವನ ದಿನಗಳಲ್ಲಿ, ದುಷ್ಟರನ್ನು ನಾಶಮಾಡಲು ಜಲಪ್ರಳಯವನ್ನು ತರುವೆನೆಂದು ದೇವರು ಹೇಳಿದನು. ಆ ನಾಶನವನ್ನು ಪಾರಾಗಲು ನೋಹನು ಒಂದು ನಾವೆಯನ್ನು ಕಟ್ಟುವಂತೆ ದೇವರು ತಿಳಿಸಿದನು. ನೋಹ ನಾವೆಯನ್ನು ಕಟ್ಟಿದ್ದು ಮಾತ್ರವಲ್ಲ ‘ಸುನೀತಿಯನ್ನು ಸಾರಿದನು’ ಸಹ. (2 ಪೇತ್ರ 2:5) ದೇವರು ಬೇಗನೆ ನಾಶನ ತರಲಿದ್ದಾನೆಂದು ನೋಹನು ಜನರಿಗೆ ಎಚ್ಚರಿಸಿದನು. ಯೇಸು, ತನ್ನ ಪ್ರತ್ಯಕ್ಷತೆಯ ಸಮಯದಲ್ಲಿ ಭೂಮಿಯಲ್ಲಿರುವ ತನ್ನ ಹಿಂಬಾಲಕರೂ ಅದನ್ನೇ ಮಾಡುವರೆಂದು ಹೇಳಿದನು. ಅವನು ಪ್ರವಾದಿಸಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.

ಹಿಂದಿನ ಲೇಖನದಲ್ಲಿ ನೋಡಿದಂತೆ ದೇವರ ರಾಜ್ಯವು ಈ ಲೋಕದ ಎಲ್ಲ ಸರಕಾರಗಳನ್ನು ನಾಶಪಡಿಸುವುದು. ಈ ಸ್ವರ್ಗೀಯ ಸರಕಾರವು ಬೇಗನೆ ಕ್ರಮಕೈಗೊಳ್ಳಲಿದೆ ಎಂಬದಾಗಿ ಸಾರುವ ಕೆಲಸವು ಜನರನ್ನು ಎಚ್ಚರಿಸುತ್ತದೆ. ಜೊತೆಗೆ, ಬರಲಿರುವ ನಾಶನದಿಂದ ತಪ್ಪಿಸಿಕೊಳ್ಳುವಂತೆ ಹಾಗೂ ಆ ರಾಜ್ಯದ ಪ್ರಜೆಗಳಾಗುವಂತೆ ಜನರಿಗೆ ಅವಕಾಶವನ್ನು ಕೊಡುತ್ತದೆ. ಹಾಗಾದರೆ, ನೀವು ಹೇಗೆ ಪ್ರತಿಕ್ರಿಯೆ ತೋರಿಸುವಿರಿ ಎಂಬುದು ಈಗ ಏಳುವ ಪ್ರಾಮುಖ್ಯ ಪ್ರಶ್ನೆಯಾಗಿದೆ.

ದೇವರ ರಾಜ್ಯವು ನಿಮಗೆ ಶುಭ ಸಮಾಚಾರವಾಗಿರುವುದೋ?

ಯೇಸು ಸಾರಿದ ನಿರೀಕ್ಷೆಯ ಸಂದೇಶಕ್ಕೆ ಸರಿಸಾಟಿಯಾದ ಸಂದೇಶ ಮತ್ತೊಂದಿಲ್ಲ. ಸಾವಿರಾರು ವರ್ಷಗಳ ಹಿಂದೆ, ಆದಾಮನು ದಂಗೆಯೆದ್ದಾಗಲೇ ಯೆಹೋವ ದೇವರು ಒಂದು ಸರಕಾರವನ್ನು ಸ್ಥಾಪಿಸಲು ಉದ್ದೇಶಿಸಿದನು. ಅದು ಎಲ್ಲವನ್ನು ಸುಸ್ಥಿತಿಗೆ ತಂದು, ಪ್ರಾರಂಭದಲ್ಲಿ ಮಾನವರಿಗಾಗಿ ದೇವರು ಉದ್ದೇಶಿಸಿದ್ದನ್ನು ಕೈಗೂಡಿಸುವುದು. ಅಂದರೆ, ನಂಬಿಗಸ್ತ ಮಾನವರು ಪರದೈಸ ಭೂಮಿಯಲ್ಲಿ ಸದಾಕಾಲ ಜೀವಿಸುವಂತೆ ಸಾಧ್ಯಮಾಡುವುದು. ಸುದೀರ್ಘ ಸಮಯದ ಹಿಂದೆ ವಾಗ್ದಾನಿಸಲಾದ ಈ ಸರಕಾರವು ಈಗ ಪರಲೋಕದಲ್ಲಿ ಆಳುತ್ತಿದೆಯೆಂದು ತಿಳಿಯುವುದಕ್ಕಿಂತ ಹೆಚ್ಚು ರೋಮಾಂಚಕ ಸಂಗತಿ ಬೇರೊಂದಿಲ್ಲ, ಅಲ್ಲವೇ? ಅದೊಂದು ಅಮೂರ್ತ ಕಲ್ಪನೆಯಲ್ಲ ಬದಲಿಗೆ ನಡೆಯುತ್ತಿರುವ ನಿಜಾಂಶ ಆಗಿದೆ!

ಈಗ ದೇವರ ನೇಮಿತ ರಾಜನು ತನ್ನ ವೈರಿಗಳ ಮಧ್ಯೆ ದೊರೆತನಮಾಡುತ್ತಿದ್ದಾನೆ. (ಕೀರ್ತನೆ 110:2) ದೇವರಿಂದ ದೂರ ಸರಿದಿರುವ ಭ್ರಷ್ಟ ಲೋಕದಲ್ಲಿ, ದೇವರ ಬಗ್ಗೆ ತಿಳಿದು ಆತನನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸ” ಬಯಸುವವರೆಲ್ಲರನ್ನು ಹುಡುಕುವ ತನ್ನ ತಂದೆಯ ಚಿತ್ತವನ್ನು ಮೆಸ್ಸೀಯನು ಈಡೇರಿಸುತ್ತಿದ್ದಾನೆ. (ಯೋಹಾನ 4:24) ದೇವರ ರಾಜ್ಯದಾಳಿಕೆಯಲ್ಲಿ ಸದಾಕಾಲಕ್ಕೆ ಜೀವಿಸುವ ನಿರೀಕ್ಷೆಯು ಎಲ್ಲ ಜನಾಂಗಗಳ, ವಯಸ್ಸಿನ ಮತ್ತು ಸಾಮಾಜಿಕ ಹಿನ್ನೆಲೆಯ ಜನರಿಗೆ ಲಭ್ಯವಿದೆ. (ಅ. ಕೃತ್ಯಗಳು 10:34, 35) ನಿಮ್ಮೆದುರಿಗಿರುವ ಈ ಭವ್ಯ ಅವಕಾಶವನ್ನು ಸದುಪಯೋಗಿಸಿಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ದೇವರ ರಾಜ್ಯದ ಕುರಿತು ಈಗ ಕಲಿಯಿರಿ. ಈ ಮೂಲಕ ಅದರ ನೀತಿಯ ಆಳ್ವಿಕೆಯಲ್ಲಿ ನೀವು ಸದಾ ಜೀವಿಸಲು ಸಾಧ್ಯವಾಗುವುದು!—1 ಯೋಹಾನ 2:17. (w08 1/1)

[ಪಾದಟಿಪ್ಪಣಿಗಳು]

^ ಪ್ಯಾರ. 7 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 10 “ಪ್ರತ್ಯಕ್ಷತೆ” ಎಂಬ ಪದಕ್ಕೆ ಕೆಲವು ಬೈಬಲ್‌ ಭಾಷಾಂತರಗಳು ಕೊಟ್ಟಿರುವ ತಪ್ಪಾದ ಅರ್ಥವನ್ನು ಸರಿಪಡಿಸಲು ಯೇಸುವಿನ ಹೇಳಿಕೆಯು ಸಹಾಯಮಾಡುತ್ತದೆ. ಕೆಲವು ಭಾಷಾಂತರಗಳು “ಬರೋಣ” “ಆಗಮನ” ಅಥವಾ “ಹಿಂತಿರುಗಿ ಬರುವುದು” ಎಂಬಂಥ ಪದಗಳನ್ನು ಉಪಯೋಗಿಸಿವೆ. ಈ ಪದಗಳು ಕೇವಲ ಕ್ಷಣಮಾತ್ರದ ಅವಧಿಯನ್ನು ಸೂಚಿಸುತ್ತವೆ. ಯೇಸು ತನ್ನ ಪ್ರತ್ಯಕ್ಷತೆಯನ್ನು ನೋಹನ ದಿನದ ಜಲಪ್ರಳಯಕ್ಕೆ ಇಲ್ಲವೆ ಒಂದು ನಿರ್ದಿಷ್ಟ ಸಂದರ್ಭದಲ್ಲಾಗುವ ಒಂದು ಘಟನೆಗೆ ಹೋಲಿಸದೆ ‘ನೋಹನ ದಿವಸಗಳ’ ಒಂದು ನಿರ್ಧಾರಾತ್ಮಕ ಕಾಲವಧಿಗೆ ಹೋಲಿಸಿದನು ಎಂಬದನ್ನು ಗಮನಿಸಿ. ಆ ಪುರಾತನ ಸಮಯದಂತೆ ಕ್ರಿಸ್ತನ ಪ್ರತ್ಯಕ್ಷತೆಯ ಸಮಯದಲ್ಲಿ ಜನರು ತಮ್ಮ ದೈನಂದಿನ ಆಗುಹೋಗುಗಳಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆಂದರೆ ಕೊಡಲ್ಪಡುವ ಎಚ್ಚರಿಕೆಗೆ ಅವರು ಸ್ಪಂದಿಸುವುದೇ ಇಲ್ಲ.

[ಪುಟ 8, 9ರಲ್ಲಿರುವ ಚಿತ್ರಗಳು]

ನಾವು ಪ್ರತಿದಿನ ಕೇಳುವ ಕೆಟ್ಟ ವಾರ್ತೆಯು ಬೇಗನೆ ಬರಲಿರುವ ಒಳ್ಳೇ ಸಂಗತಿಗಳ ರುಜುವಾತಾಗಿವೆ

[ಕೃಪೆ]

Antiaircraft gun: U.S. Army photo