ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ನಿಮಗೆ ತಿಳಿದಿತ್ತೋ?

ಜೋಯಿಸರು ಯೇಸುವನ್ನು ಸಂದರ್ಶಿಸಿದ್ದು ಯಾವಾಗ?

“ಮೂಡಣದೇಶದ ಜೋಯಿಸರು” ಕಾಣಿಕೆಗಳೊಂದಿಗೆ ಯೇಸುವನ್ನು ನೋಡಲು ಬಂದಿದ್ದರು ಎಂದು ಮತ್ತಾಯನ ಸುವಾರ್ತೆಯು ನಮಗೆ ತಿಳಿಸುತ್ತದೆ. (ಮತ್ತಾಯ 2:1-12) ಆದರೆ ಎಷ್ಟು ಮಂದಿ ಜೋಯಿಸರು ಅಥವಾ “ಮೇಜೈ,” ಮಗುವಾಗಿದ್ದ ಯೇಸುವನ್ನು ಸಂದರ್ಶಿಸಲು ಬಂದರೆಂದು ತಿಳಿಸಲಾಗಿಲ್ಲ. ಅವರು ಮೂವರಿದ್ದರೆಂಬ ಅನೇಕರ ಸಾಂಪ್ರದಾಯಿಕ ಪರಿಕಲ್ಪನೆಗೆ ಖಚಿತ ಆಧಾರಗಳೂ ಇಲ್ಲ. ಬೈಬಲ್‌ ವೃತ್ತಾಂತದಲ್ಲಿ ಅವರ ಹೆಸರುಗಳನ್ನೂ ಕೊಡಲಾಗಿಲ್ಲ.

ಮತ್ತಾಯ 2:11ರ ಕುರಿತು ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌ ಸ್ಟಡಿ ಬೈಬಲ್‌ ಹೀಗೆ ಹೇಳುತ್ತದೆ: “ಜನರ ಪರಿಕಲ್ಪನೆಗೆ ವ್ಯತಿರಿಕ್ತವಾಗಿ, ಯೇಸು ಜನಿಸಿದ ರಾತ್ರಿಯಂದು ಕುರುಬರು ಗೋದಲಿಯಲ್ಲಿದ್ದ ಅವನನ್ನು ನೋಡಲು ಹೋದಂತೆ ಜೋಯಿಸರು ಅವನನ್ನು ನೋಡಲು ಹೋಗಿರಲಿಲ್ಲ. ಅವರು ‘ಮಗು’ವಾಗಿದ್ದ ಯೇಸುವನ್ನು ಅವನ ‘ಮನೆ’ಯಲ್ಲಿ ಭೇಟಿಯಾದದ್ದು ಕೆಲವು ತಿಂಗಳ ನಂತರವೇ.” ಇದನ್ನು ಒಂದು ವಾಸ್ತವಾಂಶವೂ ದೃಢೀಕರಿಸುತ್ತದೆ. ಅದೇನೆಂದರೆ, ಎಳೆ ಮಗುವಾಗಿದ್ದ ಯೇಸುವನ್ನು ಕೊಲ್ಲುವ ಪ್ರಯತ್ನದಲ್ಲಿ ರಾಜ ಹೆರೋದನು ಬೇತ್ಲೆಹೇಮ್‌ ಮತ್ತು ಅದರ ನೆರೆಹೊರೆ ಹಳ್ಳಿಗಳಲ್ಲಿರುವ ಎರಡು ವರ್ಷದೊಳಗಿನ ಎಲ್ಲಾ ಗಂಡುಕೂಸುಗಳನ್ನು ವಧಿಸಲು ಆಜ್ಞಾಪಿಸಿದನು. ಅವನು “ಜೋಯಿಸರಿಂದ ತಿಳುಕೊಂಡ ಕಾಲಕ್ಕೆ ಸರಿಯಾಗಿ” ಲೆಕ್ಕಿಸಿದರಿಂದ ಆ ನಿರ್ದಿಷ್ಟ ವಯೋಮಿತಿಯ ಮಕ್ಕಳನ್ನೇ ಆರಿಸಿದ್ದನು.—ಮತ್ತಾಯ 2:16.

ಯೇಸು ಜನಿಸಿ 40 ದಿನಗಳಾದ ಮೇಲೆ ಮರಿಯಳು ಅವನನ್ನು ಯೆರೂಸಲೇಮ್‌ ದೇವಾಲಯದಲ್ಲಿ ಸಮರ್ಪಿಸಲು ಹೋದಾಗ ಕೇವಲ ಎರಡು ಹಕ್ಕಿಗಳನ್ನು ಅರ್ಪಿಸಿದಳು. ಒಂದುವೇಳೆ ಜೋಯಿಸರು ಯೇಸು ಜನಿಸಿದ ರಾತ್ರಿಯಂದೇ ಅವನನ್ನು ಭೇಟಿಯಾಗಿ ಚಿನ್ನ, ಮತ್ತಿತರ ಬೆಲೆಬಾಳುವ ಕೊಡುಗೆಗಳನ್ನು ಕೊಟ್ಟಿದ್ದಲ್ಲಿ, ಮರಿಯಳು ಕೇವಲ ಎರಡೇ ಹಕ್ಕಿಗಳನ್ನು ಅರ್ಪಿಸುತ್ತಿದ್ದಳೆಂಬುದು ಅಸಂಭಾವ್ಯ. (ಲೂಕ 2:22-24) ಈ ರೀತಿ ಹಕ್ಕಿಗಳನ್ನು ಅರ್ಪಿಸುವುದು, ಕುರಿಯನ್ನು ಅರ್ಪಿಸಲು ಅನುಕೂಲವಿಲ್ಲದಂಥ ಬಡವರಿಗಾಗಿ ಧರ್ಮಶಾಸ್ತ್ರದಲ್ಲಿ ತಿಳಿಸಲಾದ ಏರ್ಪಾಡಾಗಿತ್ತು. (ಯಾಜಕಕಾಂಡ 12:6-8) ಜೋಯಿಸರು ಕೊಟ್ಟ ಆ ಬೆಲೆಬಾಳುವ ಉಡುಗೊರೆಗಳು, ಯೇಸುವಿನ ಕುಟುಂಬಕ್ಕೆ ಐಗುಪ್ತದಲ್ಲಿ ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಲಿಕ್ಕಾಗಿ ಸಕಾಲದ ಹಾಗೂ ಉಪಯುಕ್ತವಾದ ನೆರವು ನೀಡಿರಬಹುದು.—ಮತ್ತಾಯ 2:13-15.

ಲಾಜರನ ಸಮಾಧಿಯ ಬಳಿ ತಲಪಲು ಯೇಸುವಿಗೆ ನಾಲ್ಕು ದಿನಗಳು ಹಿಡಿದದ್ದೇಕೆ?

ಲಾಜರನ ಸಮಾಧಿಯ ಬಳಿ ಯೇಸು ಬೇಕುಬೇಕೆಂದೇ ತಡವಾಗಿ ಬರಲು ಮೂಲತಃ ಅವನೇ ಯೋಜಿಸಿದಂತೆ ತೋರುತ್ತದೆ. ಇದನ್ನು ನಾವು ಹೇಗೆ ಹೇಳಬಲ್ಲೆವು? ಯೋಹಾನ 11ನೇ ಅಧ್ಯಾಯದಲ್ಲಿ ದಾಖಲಾದ ವೃತ್ತಾಂತವನ್ನು ಸ್ವಲ್ಪ ಪರಿಗಣಿಸೋಣ.

ಬೇಥಾನ್ಯದಲ್ಲಿ ವಾಸಿಸುತ್ತಿದ್ದ ಲಾಜರನು ಯೇಸುವಿನ ಸ್ನೇಹಿತನಾಗಿದ್ದನು. ಒಮ್ಮೆ ಅವನು ಗಂಭೀರವಾಗಿ ಅಸ್ವಸ್ಥನಾದಾಗ ಅವನ ಸಹೋದರಿಯರು ಯೇಸುವಿಗೆ ಹೇಳಿಕಳುಹಿಸಿದರು. (ವಚನಗಳು 1-3) ಆ ಸಮಯದಲ್ಲಿ ಯೇಸು ಯೊರ್ದನ್‌ಹೊಳೆಯ ಆಚೆಕಡೆ ಇದ್ದನು. ಈ ಸ್ಥಳ ಬೇಥಾನ್ಯದಿಂದ ಸುಮಾರು ಎರಡು ದಿನಗಳ ಪ್ರಯಾಣದಷ್ಟು ದೂರದಲ್ಲಿತ್ತು. (ಯೋಹಾನ 10:40) ಯೇಸುವಿಗೆ ಸುದ್ದಿ ಸಿಕ್ಕಿದ ಸಮಯದಷ್ಟಕ್ಕೆ ಲಾಜರನು ಮೃತಪಟ್ಟನೆಂಬುದು ವ್ಯಕ್ತ. ಆಗ ಯೇಸು ಏನು ಮಾಡಿದನು? ಅವನು ‘ಎರಡು ದಿನ ತಾನಿದ್ದ ಸ್ಥಳದಲ್ಲೇ ನಿಂತು’ ಅನಂತರ ಬೇಥಾನ್ಯಕ್ಕೆ ಹೊರಟನು. (ವಚನಗಳು 6, 7) ಹೀಗೆ ಅವನು ಎರಡು ದಿನಗಳ ತನಕ ಕಾದು, ಮತ್ತೆರಡು ದಿನಗಳ ಪ್ರಯಾಣ ಮಾಡಿ ಸಮಾಧಿಯ ಬಳಿ ಬರುವುದರೊಳಗೆ ಲಾಜರನು ಸತ್ತು ನಾಲ್ಕು ದಿನಗಳಾಗಿದ್ದವು.—ವಚನ 17.

ಈ ಮೊದಲು ಯೇಸು ಎರಡು ಪುನರುತ್ಥಾನಗಳನ್ನು ನಡೆಸಿದ್ದನು. ಅದರಲ್ಲಿ ಒಂದನ್ನು ವ್ಯಕ್ತಿಯು ಮರಣಪಟ್ಟ ಕೂಡಲೇ ನಡೆಸಲಾಗಿತ್ತು. ಮತ್ತೊಂದನ್ನು ವ್ಯಕ್ತಿಯು ಸತ್ತ ದಿನದಂದು ಸ್ವಲ್ಪ ಸಮಯದ ನಂತರ ನಡೆಸಿದ್ದಿರಬಹುದು. (ಲೂಕ 7:11-17; 8:49-55) ಆದರೆ ಸತ್ತು ನಾಲ್ಕು ದಿನಗಳಾಗಿ ದೇಹವು ಆಗಲೇ ಕೊಳೆಯಲಾರಂಭಿಸಿದ್ದ ಯಾರಾದರೊಬ್ಬನನ್ನು ಯೇಸು ಪುನರುತ್ಥಾನಗೊಳಿಸಸಾಧ್ಯವೋ? (ವಚನ 39) ಆಸಕ್ತಿಕರವಾಗಿ, ಯೆಹೂದ್ಯರ ನಂಬಿಕೆಯ ಬಗ್ಗೆ ಒಂದು ಬೈಬಲ್‌ ಪರಾಮರ್ಶೆ ಕೃತಿ ಹೇಳುವುದೇನೆಂದರೆ “ಸತ್ತು ನಾಲ್ಕು ದಿನಗಳಾದ ಒಬ್ಬ ವ್ಯಕ್ತಿಗೆ” ಯಾವುದೇ ನಿರೀಕ್ಷೆಯಿರುವ ಸಾಧ್ಯತೆ ಇರಲಿಲ್ಲ. “ಯಾಕೆಂದರೆ ಆ ವ್ಯಕ್ತಿಯ ದೇಹವು ಅಷ್ಟರೊಳಗೆ ಕೊಳೆತಿರುತ್ತದೆ ಮಾತ್ರವಲ್ಲ ಮೂರು ದಿನಗಳ ತನಕ ಶವದ ಸುತ್ತಲೂ ಸುಳಿದಾಡುತ್ತದೆಂದು ನೆನಸಲಾಗುವ ಅವನ ಆತ್ಮವು ಅವನನ್ನು ಬಿಟ್ಟುಹೋಗಿರುತ್ತದೆ.”

ಸಮಾಧಿಯ ಬಳಿ ನೆರೆದಿದ್ದವರಲ್ಲಿ ಯಾರಿಗಾದರೂ ಸಂಶಯವಿದ್ದಲ್ಲಿ ಯೇಸುವಿಗೆ ಮರಣದ ಮೇಲೆ ಅಧಿಕಾರವಿದೆ ಎಂಬುದನ್ನು ಅವರು ಆಗ ಕಣ್ಣಾರೆ ನೋಡಲಿದ್ದರು. ಏಕೆಂದರೆ ಯೇಸು ತೆರೆದ ಸಮಾಧಿಯ ಮುಂದೆ ನಿಂತು, “ಲಾಜರನೇ, ಹೊರಗೆ ಬಾ!” ಎಂದು ಕೂಗಿ ಹೇಳಿದನು. ಆಗ “ಸತ್ತಿದ್ದವನು ಹೊರಗೆ ಬಂದನು.” (ವಚನ 43, 44) ಆದುದರಿಂದ ಸತ್ತವರಿಗಿರುವ ನಿಜ ನಿರೀಕ್ಷೆಯು ಪುನರುತ್ಥಾನವೇ ಹೊರತು ಸತ್ತಮೇಲೆ ಆತ್ಮ ಬದುಕುತ್ತದೆ ಎಂದು ಅನೇಕರು ನೆನಸುವಂಥ ಮಿಥ್ಯಕಲ್ಪನೆಯಲ್ಲ.—ಯೋಹಾನ 11:25. (w08 1/1)