ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಿಯ ಓದುಗರೇ,

ಪ್ರಿಯ ಓದುಗರೇ,

ಪ್ರಿಯ ಓದುಗರೇ,

ಈ ಸಂಚಿಕೆಯಿಂದ ಆರಂಭಿಸಿ ಕಾವಲಿನಬುರುಜು ಪತ್ರಿಕೆಯ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ ಎಂಬುದನ್ನು ನಿಮಗೆ ತಿಳಿಸಲು ನಾವು ಸಂತೋಷಿಸುತ್ತೇವೆ. ಆ ಬದಲಾವಣೆಗಳೇನು ಎಂಬುದನ್ನು ತಿಳಿಯುವ ಮೊದಲು ಏನು ಬದಲಾಗುವುದಿಲ್ಲ ಎಂಬುದನ್ನು ನೋಡೋಣ.

ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಈ ಪತ್ರಿಕೆಯ ಹೆಸರು ಬದಲಾಗಿಲ್ಲ. ಹೀಗಾಗಿ, ಯೆಹೋವನನ್ನು ಸತ್ಯದೇವರೆಂದು ಮಹಿಮೆಪಡಿಸುವುದನ್ನು ಕಾವಲಿನಬುರುಜು ಪತ್ರಿಕೆಯು ಮುಂದುವರಿಸುತ್ತದೆ. ಅಲ್ಲದೆ ಆತನ ರಾಜ್ಯದ ಕುರಿತು ಸುವಾರ್ತೆಯನ್ನು ತಿಳಿಸುವ ಮೂಲಕ ತನ್ನ ಓದುಗರಿಗೆ ಮುಂದಕ್ಕೂ ಸಾಂತ್ವನವನ್ನು ನೀಡುತ್ತದೆ. ಈ ಸಂಚಿಕೆಯ 5ರಿಂದ 9ನೇ ಪುಟಗಳಲ್ಲಿರುವ ಲೇಖನಗಳು ಆ ರಾಜ್ಯವೇನಾಗಿದೆ ಮತ್ತು ಅದು ಯಾವಾಗ ಬರುವುದು ಎಂಬುದನ್ನು ಚರ್ಚಿಸುತ್ತದೆ. ಮಾತ್ರವಲ್ಲ, ಈ ಪತ್ರಿಕೆಯು ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ ಮಾಡುತ್ತಾ ಬಂದಿರುವಂತೆ ಯೇಸು ಕ್ರಿಸ್ತನಲ್ಲಿ ಓದುಗರ ನಂಬಿಕೆಯನ್ನು ಹೆಚ್ಚಿಸುತ್ತದೆ, ಬೈಬಲಿನ ಸತ್ಯಗಳನ್ನು ಸಮರ್ಥಿಸುತ್ತದೆ ಮತ್ತು ಬೈಬಲ್‌ ಪ್ರವಾದನೆಗಳ ಬೆಳಕಿನಲ್ಲಿ ಲೋಕ ಘಟನೆಗಳ ಮಹತ್ವಾರ್ಥವನ್ನು ವಿವರಿಸುತ್ತದೆ.

ಹಾಗಾದರೆ, ಈ ಪತ್ರಿಕೆಯಲ್ಲಾಗುವ ಬದಲಾವಣೆಗಳಾದರೂ ಯಾವುವು? ಈ ಪತ್ರಿಕೆಯ ಕನ್ನಡ ಭಾಷೆಯ ತ್ರೈಮಾಸಿಕ ಆವೃತ್ತಿಯಲ್ಲಿ ಮೂಡಿಬರುವ ರೋಮಾಂಚನಗೊಳಿಸುವ ಹೊಸ ವೈಶಿಷ್ಟ್ಯಗಳೇನೆಂದು ನಾವೀಗ ಸವಿವರವಾಗಿ ನೋಡೋಣ. *

ಕುತೂಹಲಕಾರಿಯಾದ ಹಲವಾರು ವೈಶಿಷ್ಟ್ಯಗಳು ಈ ಸಂಚಿಕೆಯಲ್ಲಿ ಮೂಡಿಬರಲಿವೆ. “ನಿಮಗೆ ತಿಳಿದಿತ್ತೋ?” ಎಂಬ ಲೇಖನವು ಬೈಬಲಿನಲ್ಲಿರುವ ಕೆಲವೊಂದು ವೃತ್ತಾಂತಗಳ ಅರ್ಥದ ಮೇಲೆ ಬೆಳಕನ್ನು ಚೆಲ್ಲುವ ಆಸಕ್ತಿಕರ ಹಿನ್ನೆಲೆ ಮಾಹಿತಿಗಳನ್ನು ಕೊಡುತ್ತದೆ. “ದೇವರ ಸಮೀಪಕ್ಕೆ ಬನ್ನಿರಿ” ಎಂಬ ಲೇಖನವು, ಬೈಬಲಿನ ನಿರ್ದಿಷ್ಟ ಭಾಗಗಳಿಂದ ಯೆಹೋವನ ಕುರಿತು ನಾವೇನನ್ನು ಕಲಿಯಬಹುದು ಎಂಬುದನ್ನು ಎತ್ತಿಹೇಳುತ್ತದೆ. “ನಮ್ಮ ಓದುಗರ ಪ್ರಶ್ನೆ,” ಇದು ಸಾಮಾನ್ಯವಾಗಿ ಬೈಬಲ್‌ ವಿಷಯಗಳ ಕುರಿತು ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಉದಾಹರಣೆಗೆ, “ದೇವರ ರಾಜ್ಯವು ನಿಮ್ಮ ಹೃದಯದಲ್ಲಿದೆಯೋ?” ಎಂಬುದರ ಕುರಿತು ಅನೇಕಾನೇಕ ಜನರು ಯೋಚಿಸುತ್ತಾರೆ. ಈ ಪ್ರಶ್ನೆಗೆ ಉತ್ತರವನ್ನು ನೀವು 13ನೇ ಪುಟದಲ್ಲಿ ಕಂಡುಕೊಳ್ಳುವಿರಿ.

ಕುಟುಂಬಗಳಿಗೆ ಪ್ರಯೋಜನವಾಗುವಂಥ ಅನೇಕ ಲೇಖನಗಳು ಈ ಸಂಚಿಕೆಯಲ್ಲಿ ಪ್ರಕಟಗೊಳ್ಳುವಂತೆ ಯೋಜಿಸಲಾಗಿದೆ. ಇದಕ್ಕಾಗಿ, “ಕುಟುಂಬ ಸಂತೋಷಕ್ಕೆ ಕೀಲಿಕೈಗಳು” ಎಂಬ ಲೇಖನವನ್ನು ಪ್ರಕಟಿಸಲಾಗುವುದು. ಇದು ನಿಜಜೀವನದಲ್ಲಿ ಎದುರಾದ ಕೌಟುಂಬಿಕ ಸಮಸ್ಯೆಗಳ ಸನ್ನಿವೇಶಗಳನ್ನು ತಿಳಿಸಿ, ಅವನ್ನು ನಿವಾರಿಸಲು ಬೈಬಲಿನ ಮೂಲತತ್ತ್ವಗಳು ಹೇಗೆ ಸಹಾಯಮಾಡಬಲ್ಲವು ಎಂಬುದನ್ನು ತೋರಿಸಿಕೊಡುತ್ತದೆ. “ನಿಮ್ಮ ಮಕ್ಕಳಿಗೆ ಕಲಿಸಿರಿ,” ಇದು ಹೆತ್ತವರು ತಮ್ಮ ಮಕ್ಕಳೊಂದಿಗೆ ಸೇರಿ ಓದಬೇಕಾಗಿರುವ ಲೇಖನವಾಗಿದೆ. “ನಮ್ಮ ಯುವ ಜನರಿಗಾಗಿ” ಎಂಬ ಮತ್ತೊಂದು ಸ್ವಾರಸ್ಯಕರ ಲೇಖನವು ತರುಣ ತರಣಿಯರ ಬೈಬಲ್‌ ಅಧ್ಯಯನದ ಪ್ರಾಜೆಕ್ಟ್‌ಗಾಗಿದೆ.

ಇದಲ್ಲದೆ ಬೇರೆ ಕೆಲವು ಲೇಖನಗಳು ಸಹ ಈ ತ್ರೈಮಾಸಿಕ ಪತ್ರಿಕೆಯಲ್ಲಿ ಮೂಡಿಬರಲಿವೆ. “ಅವರ ನಂಬಿಕೆಯನ್ನು ಅನುಕರಿಸಿರಿ” ಎಂಬ ಲೇಖನವು ಬೈಬಲಿನ ಒಬ್ಬ ವ್ಯಕ್ತಿಯ ಮಾದರಿಯನ್ನು ಅನುಸರಿಸುವಂತೆ ನಮ್ಮನ್ನು ಉತ್ತೇಜಿಸುವುದು. ಉದಾಹರಣೆಗೆ, ಈ ಸಂಚಿಕೆಯ ಪುಟ 18ರಿಂದ 21ರಲ್ಲಿ ಪ್ರವಾದಿ ಎಲೀಯನ ಹುರಿದುಂಬಿಸುವ ಮಾದರಿಯ ಕುರಿತು ಮತ್ತು ಅವನ ನಂಬಿಕೆಯನ್ನು ಹೇಗೆ ಅನುಕರಿಸಬಹುದು ಎಂಬುದರ ಕುರಿತು ನೀವು ಓದುವಿರಿ. ಲೋಕದ ವಿವಿದೆಡೆಗಳಲ್ಲಿರುವ ಮಿಷನೆರಿಗಳ ಮತ್ತು ಇತರ ಜನರ ವರದಿಗಳನ್ನು ತಿಳಿಸುವ ಲೇಖನವೂ ಪ್ರಕಟಗೊಳ್ಳುವುದು. “ಯೇಸುವಿನಿಂದ ನಾವು ಕಲಿಯುವ ಪಾಠ” ಎಂಬ ಲೇಖನವು ಬೈಬಲಿನ ಮೂಲಭೂತ ಬೋಧನೆಗಳನ್ನು ತುಂಬಾ ಸರಳವಾಗಿ ವಿವರಿಸುವುದು.

ಬೈಬಲನ್ನು ಗೌರವಿಸುವ ಮತ್ತು ಅದು ನಿಜವಾಗಿಯೂ ಏನನ್ನು ಕಲಿಸುತ್ತದೆ ಎಂಬುದನ್ನು ತಿಳಿಯಲಿಚ್ಛಿಸುವ ಎಲ್ಲ ಓದುಗರ ಮನಮೆಚ್ಚುವ ಪತ್ರಿಕೆಯಾಗಿ ಕಾವಲಿನಬುರುಜು ಮುಂದುವರಿಯುವುದೆಂಬ ನಂಬಿಕೆ ನಮಗಿದೆ. ಬೈಬಲ್‌ ಸತ್ಯಗಳನ್ನು ತಿಳಿದುಕೊಳ್ಳಲು ನಿಮಗಿರುವ ದಾಹವನ್ನು ಈ ಪತ್ರಿಕೆಯು ತಣಿಸುತ್ತದೆ ಎಂಬುದು ನಮ್ಮ ನಿರೀಕ್ಷೆ.

ಪ್ರಕಾಶಕರು (w08 1/1)

[ಪಾದಟಿಪ್ಪಣಿ]

^ ಪ್ಯಾರ. 4 ಕಾವಲಿನಬುರುಜು ಪತ್ರಿಕೆಯನ್ನು ಈಗ ಎರಡು ಆವೃತ್ತಿಗಳಾಗಿ ಮುದ್ರಿಸಲಾಗುತ್ತಿದೆ. ತ್ರೈಮಾಸಿಕ ಆವೃತ್ತಿಯು ಸಾಮಾನ್ಯವಾಗಿ ಸಾರ್ವಜನಿಕರಿಗಾಗಿದೆ. 15ನೇ ತಾರೀಖನ್ನು ಹೊಂದಿರುವ ಸಂಚಿಕೆಯನ್ನು ಯೆಹೋವನ ಸಾಕ್ಷಿಗಳು ತಮ್ಮ ಕೂಟಗಳಲ್ಲಿ ಅಧ್ಯಯನ ಮಾಡಲಿಕ್ಕಾಗಿ ಉಪಯೋಗಿಸುತ್ತಾರೆ. ಆದರೂ ಇದನ್ನು ಎಲ್ಲರೂ ಓದಬಹುದಾಗಿದೆ.