ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಮುಂತಿಳಿಸುವ ಸಂಗತಿಗಳು ಸತ್ಯವಾಗಿ ನೆರವೇರುತ್ತವೆ

ಯೆಹೋವನು ಮುಂತಿಳಿಸುವ ಸಂಗತಿಗಳು ಸತ್ಯವಾಗಿ ನೆರವೇರುತ್ತವೆ

ಯೆಹೋವನು ಮುಂತಿಳಿಸುವ ಸಂಗತಿಗಳು ಸತ್ಯವಾಗಿ ನೆರವೇರುತ್ತವೆ

“ನಾನೇ ದೇವರು, ಇನ್ನೂ ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.” (ಯೆಶಾಯ 46:9, 10) ಹೀಗೆಂದು ಭವಿಷ್ಯತ್ತನ್ನು ಚಾಚೂತಪ್ಪದೆ ಮುಂತಿಳಿಸಲು ಸಮರ್ಥನಾದ ಯೆಹೋವನು ನುಡಿಯುತ್ತಾನೆ.

ಭವಿಷ್ಯತ್ತನ್ನು ನಿಷ್ಕೃಷ್ಟವಾಗಿ ಮುಂತಿಳಿಸಲು ಮನುಷ್ಯನಿಗಿರುವ ಅಸಾಮರ್ಥ್ಯ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದು, ಪ್ರವಾದನೆಯ ಗ್ರಂಥವಾದ ಬೈಬಲಿನ ಗ್ರಂಥಕರ್ತನು ದೇವರೇ ಆಗಿದ್ದಾನೆಂಬ ವಿಷಯವನ್ನು ತನಿಖೆಮಾಡಲು ಸತ್ಯಾನ್ವೇಷಕರನ್ನು ಹುರಿದುಂಬಿಸತಕ್ಕದ್ದು. ಈಗಾಗಲೇ ಸತ್ಯವಾಗಿ ನೆರವೇರಿರುವ ಕೆಲವು ಬೈಬಲ್‌ ಪ್ರವಾದನೆಗಳನ್ನು ನಾವೀಗ ಪರಿಗಣಿಸೋಣ.

ಪುರಾತನ ನಾಗರಿಕತೆಗಳು

ಬಾಬೆಲ್‌ ಶಾಶ್ವತವಾಗಿ ನಾಶವಾಗಲಿರುವುದು ಮತ್ತು ಏದೋಮ್‌, ಮೋವಾಬ್‌ ಮತ್ತು ಅಮ್ಮೋನ್‌ ಜನಾಂಗಗಳು ಸಹ ಎಂದಿಗೂ ಇಲ್ಲದಂತೆ ನಿರ್ಮೂಲವಾಗುವವು ಎಂದು ದೇವರು ಮುಂತಿಳಿಸಿದ್ದನು. (ಯೆರೆಮೀಯ 48:42; 49:17, 18; 51:24-26; ಓಬದ್ಯ 8, 18; ಚೆಫನ್ಯ 2:8, 9) ವಿಶಿಷ್ಟ ಜನಾಂಗಗಳಾಗಿದ್ದ ಈ ಜನರು ಅಳಿದುಹೋಗಿರುವುದು ದೇವರ ಪ್ರವಾದನಾತ್ಮಕ ವಾಕ್ಯದ ನಿಷ್ಕೃಷ್ಟತೆಗೆ ಸಾಕ್ಷಿನೀಡುತ್ತದೆ.

ಒಂದು ಜನಾಂಗ ಎಷ್ಟೇ ಬಲಾಢ್ಯವಾಗಿದ್ದರೂ, ಕ್ರಮೇಣ ಇಲ್ಲದೆ ಹೋಗುತ್ತದೆಂದು ಯಾರು ಬೇಕಾದರೂ ಮುನ್ನುಡಿಯಬಹುದೆಂದು ಒಬ್ಬನು ವಾದಿಸಬಹುದು ನಿಜ. ಆದರೆ ಹಾಗೆ ವಾದಿಸುವವರು, ಆ ಜನಾಂಗಗಳ ನಾಶನದ ಕುರಿತು ಬೈಬಲ್‌ ಮುಂತಿಳಿಸಿದಾಗ ಹೆಚ್ಚು ವಿವರಗಳನ್ನು ಕೊಟ್ಟಿದೆಯೆಂಬ ಮಹತ್ವಪೂರ್ಣ ನಿಜತ್ವವನ್ನು ಅಲಕ್ಷ್ಯಮಾಡುತ್ತಾರೆ. ಉದಾಹರಣೆಗೆ, ಬಾಬೆಲ್‌ ನಿಷ್ಕೃಷ್ಟವಾಗಿ ಹೇಗೆ ಪತನ ಹೊಂದುತ್ತದೆಂಬ ವಿವರಗಳನ್ನು ಬೈಬಲ್‌ ಒದಗಿಸಿತ್ತು. ಈ ನಗರವನ್ನು ಮೇದ್ಯರು ಸೋಲಿಸುವರೆಂದು ಬೈಬಲ್‌ ಮುಂತಿಳಿಸಿತು. ಮಾತ್ರವಲ್ಲ, ಮುತ್ತಿಗೆಹಾಕುವ ಸೈನಿಕರಿಗೆ ಕೋರೆಷನು ನಾಯಕನಾಗಿರುವನೆಂದೂ ಆ ನಗರಕ್ಕೆ ರಕ್ಷಣೆಯನ್ನು ಒದಗಿಸುವ ನದಿಗಳು ಬತ್ತಿಹೋಗುವುವೆಂದೂ ಅದು ವಿವರವಾಗಿ ತಿಳಿಸಿತು.—ಯೆಶಾಯ 13:17-19; 44:27–45:1.

ಸೋಲಿಸಲ್ಪಟ್ಟ ಜನಾಂಗಗಳಾಗಲಿ ಜನರಾಗಲಿ ಎಂದೆಂದಿಗೂ ಇಲ್ಲದೆ ಅಳಿದುಹೋಗುವರೆಂದು ಬೈಬಲ್‌ ಎಲ್ಲ ಸಂದರ್ಭಗಳಲ್ಲೂ ಮುಂತಿಳಿಸಿರುವುದಿಲ್ಲ. ಉದಾಹರಣೆಗೆ, ಯೆರೂಸಲೇಮ್‌ ನಗರವು ಬಾಬೆಲಿನವರಿಂದ ಪತನಗೊಳ್ಳುವುದೆಂದು ದೇವರು ಮುಂತಿಳಿಸಿದಾಗ ಆ ನಗರವು ಪುನಸ್ಸ್ಥಾಪಿಸಲ್ಪಡುವುದು ಎಂದು ಸಹ ಆತನು ತಿಳಿಸಿದನು. ಇದು, ತಮ್ಮ ಸೆರೆವಾಸಿಗಳನ್ನು ಎಂದಿಗೂ ಬಿಡುಗಡೆಮಾಡದಿರುವ ಬಾಬೆಲಿನ ರಾಜ್ಯನೀತಿಗೆ ತದ್ವಿರುದ್ಧವಾಗಿತ್ತು. (ಯೆರೆಮೀಯ 24:4-7; 29:10; 30:18, 19) ಹೀಗಿದ್ದರೂ, ದೇವರು ಮುಂತಿಳಿಸಿದ ಪುನಸ್ಥಾಪನೆಯ ಮಾತು ತಪ್ಪದೆ ನೆರವೇರಿತು ಮತ್ತು ಯೆಹೂದ್ಯರ ವಂಶಸ್ಥರು ಈ ದಿನದ ವರೆಗೂ ಪ್ರತ್ಯೇಕ ಜನರಾಗಿ ಬಾಳುತ್ತಿದ್ದಾರೆ.

ಇದಲ್ಲದೆ, ಲೋಕಶಕ್ತಿಯಾದ ಈಜಿಪ್ಟ್‌ (ಐಗುಪ್ತ) ಪತನಗೊಳ್ಳುವುದೆಂದೂ, ಆದರೆ “ಅನಂತರ ಅಲ್ಲಿ ಪೂರ್ವಕಾಲದ ಹಾಗೆ ಜನರು ವಾಸಿಸುವರು” ಎಂದು ಯೆಹೋವನು ಮುಂತಿಳಿಸಿದನು. ಕಾಲಾನಂತರ, ಈ ಪುರಾತನ ಲೋಕಶಕ್ತಿಯು “ನಿಕೃಷ್ಟ ರಾಜ್ಯ”ವಾಗಿ ಕನಿಷ್ಠವಾಗಲಿತ್ತು. (ಯೆರೆಮೀಯ 46:25, 26; ಯೆಹೆಜ್ಕೇಲ 29:14, 15) ಇದೂ ಸತ್ಯವಾಯಿತು. ಅಷ್ಟಲ್ಲದೆ, ಗ್ರೀಸ್‌ ಲೋಕಶಕ್ತಿಯು ಕೆಡವಲ್ಪಡುವುದೆಂದು ಯೆಹೋವನು ಮುಂತಿಳಿಸಿದನು. ಆದರೆ, ಅದು ಸಂಪೂರ್ಣವಾಗಿ ಅಳಿದುಹೋಗುವುದೆಂದು ಆತನು ಎಂದೂ ಹೇಳಲಿಲ್ಲ. ವಿನಾಶಗೊಳ್ಳುವವೆಂದು ಯೆಹೋವ ದೇವರು ಮುಂತಿಳಿಸಿದ ನಾಗರಿಕತೆಗಳು ಅಳಿದುಹೋದ ವಿಷಯದಿಂದ ಮತ್ತು ಹಾಗೆ ಮುಂತಿಳಿಸದಿದ್ದ ನಾಗರಿಕತೆಗಳು ಉಳಿದಿರುವ ವಿಷಯದಿಂದ ನಾವೇನು ಕಲಿಯುತ್ತೇವೆ? ದೇವರ ವಾಕ್ಯದಲ್ಲಿ ಯಥಾರ್ಥವೂ ಭರವಸಾರ್ಹವೂ ಆದ ಪ್ರವಾದನೆಗಳಿವೆ ಎಂದು ನಾವು ಕಲಿಯುತ್ತೇವೆ.

ಸೋಜಿಗಗೊಳಿಸುವ ವಿವರ

ಮೇಲೆ ತಿಳಿಸಿರುವಂತೆ, ಬಾಬೆಲ್‌ ಹೇಗೆ ಪತನಗೊಳ್ಳುವುದು ಎಂಬುದರ ಕುರಿತು ಯೆಹೋವನು ಅನೇಕ ವಿವರಗಳನ್ನು ಕೊಟ್ಟನು. ಅದೇ ರೀತಿ, ತೂರಿನ ವಿನಾಶದ ಕುರಿತು ಮುಂತಿಳಿಸಿದಾಗ ಅದರ ಕಲ್ಲು, ಮರ, ಮಣ್ಣನ್ನು ‘ನೀರಿನಲ್ಲಿ ಹಾಕಲಾಗುವುದೆಂದು’ ಯೆಹೆಜ್ಕೇಲನ ಪುಸ್ತಕವು ಹೇಳಿತು. (ಯೆಹೆಜ್ಕೇಲ 26:4, 5, 12, NIBV) ಮಹಾ ಅಲೆಗ್ಸಾಂಡರನು ಸಾ.ಶ.ಪೂ. 332ರಲ್ಲಿ ತೂರ್‌ ನಗರದ ಭೂಭಾಗವನ್ನು ಸೋಲಿಸಿ ಅದರ ಅಳಿದುಳಿದ ವಸ್ತುಗಳನ್ನು ತನ್ನ ಸೈನ್ಯವನ್ನುಪಯೋಗಿಸಿ ತೂರಿನ ದ್ವೀಪಭಾಗಕ್ಕೆ ದಂಡೆದಾರಿಯನ್ನು ನಿರ್ಮಿಸಲು ಬಳಿಸಿದಾಗ ಈ ಪ್ರವಾದನೆಯು ನೆರೆವೇರಿತು. ಮಾತ್ರವಲ್ಲ ಆ ದ್ವೀಪವನ್ನು ಸಹ ಅವನು ವಶಪಡಿಸಿಕೊಂಡನು.

ದಾನಿಯೇಲ 8:5-8, 21, 22 ಮತ್ತು 11:3, 4ರಲ್ಲಿ ದಾಖಲೆಯಾಗಿರುವ ಪ್ರವಾದನೆಯು ಅಸಾಧಾರಣವಾದ ಮಹಾ ‘ಗ್ರೀಸ್‌ ರಾಜನ’ ಬಗ್ಗೆಯೂ ಪುಳಕಿತಗೊಳಿಸುವ ವಿವರಗಳನ್ನು ಕೊಟ್ಟಿತು. ಆ ರಾಜನು ತನ್ನ ಅಧಿಕಾರ ಶಿಖರದಲ್ಲಿದ್ದಾಗ ಸಾಯಲಿದ್ದನು ಮತ್ತು ಅವನ ರಾಜ್ಯವು ನಾಲ್ಕು ಭಾಗಗಳಾಗಿ ವಿಭಜನೆ ಹೊಂದಿದರೂ ಅದು ಅವನ ವಂಶಸ್ಥರ ಮಧ್ಯೆಯಲ್ಲ ಎಂದು ಆ ಪ್ರವಾದನೆಯು ತೋರಿಸಿತು. ಈ ಪ್ರವಾದನೆ ಬರೆಯಲ್ಪಟ್ಟು 200ಕ್ಕೂ ಹೆಚ್ಚು ವರ್ಷಗಳ ಬಳಿಕ ಮಹಾ ಅಲೆಗ್ಸಾಂಡರನು ಆ ಪರಾಕ್ರಮಿ ರಾಜನಾಗಿ ರುಜುವಾದನು. ಐಹಿಕ ಇತಿಹಾಸ ನಮಗೆ ತಿಳಿಸುವಂತೆ ಅವನು ಅಕಾಲಿಕ ಮರಣವನ್ನು ಹೊಂದಿದನು ಮತ್ತು ಕ್ರಮೇಣ ಅವನ ವಂಶಸ್ಥರಲ್ಲ ಬದಲಾಗಿ ಅವನ ನಾಲ್ಕು ಮಂದಿ ಸೇನಾಪತಿಗಳು ಸಾಮ್ರಾಜ್ಯವನ್ನು ವಿಭಾಗಿಸಿಕೊಂಡರು.

ಈ ಪ್ರವಾದನೆಯು ಅದು ಸಂಭವಿಸಿದ ಅನಂತರ ಬರೆಯಲ್ಪಟ್ಟಿರಬೇಕೆಂದು ಠೀಕಾಕಾರರು ವಾದಿಸಿದ್ದಾರೆ. ಆದರೆ ಈ ಹಿಂದೆ ತಿಳಿಸಿರುವ ದಾನಿಯೇಲ ಪುಸ್ತಕದ ವೃತ್ತಾಂತವನ್ನು ಪುನಃ ಗಮನಿಸಿ. ಪ್ರವಾದನೆಯ ದೃಷ್ಟಿಕೋನದಿಂದ ನೋಡುವಾಗ ಅದರ ವಿವರಗಳು ಗಮನಾರ್ಹವೇ ಸರಿ. ಆದರೆ ಪ್ರವಾದನೆಯಂತೆ ತೋರುವ ಇತಿಹಾಸದ ದೃಷ್ಟಿಯಲ್ಲಿ ನೋಡುವಾಗ, ಗಮನಾರ್ಹ ವಿವರಗಳು ಬಿಟ್ಟುಹೋಗಿರುವಂತೆ ತೋರುವುದಿಲ್ಲವೆ? ಅಲೆಗ್ಸಾಂಡರನ ಕಾಲದ ಬಳಿಕ ಇದ್ದ ವಂಚಕನೊಬ್ಬನು ಊಹಿತ ಪ್ರವಾದನೆಯೊಂದರಿಂದ ಓದುಗರನ್ನು ಪ್ರಭಾವಿಸಲು ಪ್ರಯತ್ನಿಸುತ್ತಿದ್ದರೆ, ಅಲೆಗ್ಸಾಂಡರನು ಮರಣಪಟ್ಟ ಕೂಡಲೆ ಅವನ ಇಬ್ಬರು ಪುತ್ರರು ತಮ್ಮ ರಾಜತ್ವವನ್ನು ಸ್ಥಾಪಿಸಲು ಪ್ರಯತ್ನಿಸುವರು ಮತ್ತು ಅವರು ಹತ್ಯೆಗೊಳಗಾಗುವರು ಎಂಬ ವಿವರಗಳನ್ನು ಏಕೆ ಸೇರಿಸಲಿಲ್ಲ? ಅನಂತರ, ಅನೇಕ ವರ್ಷಗಳ ಬಳಿಕವೇ ಅಲೆಗ್ಸಾಂಡರನ ನಾಲ್ಕು ಸೇನಾಪತಿಗಳು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಳ್ಳುವರೆಂದು ಅವನೇಕೆ ತಿಳಿಸಲಿಲ್ಲ? ಅದರಂತೆಯೇ, ಆ ಮಹಾ ಅರಸನ ಮತ್ತು ಅವನ ನಾಲ್ಕು ಸೇನಾಪತಿಗಳ ಹೆಸರುಗಳನ್ನು ಅವನೇಕೆ ತಿಳಿಸಲಿಲ್ಲ?

ಬೈಬಲ್‌ ಪ್ರವಾದನೆಯನ್ನು ಸತ್ಯ ಘಟನೆಗಳು ಸಂಭವಿಸಿದ ಬಳಿಕ ಬರೆಯಲಾಯಿತು ಎಂಬುದು ದೀರ್ಘಕಾಲದಿಂದಿರುವ ಆದರೆ ಸಾಕ್ಷ್ಯಾಧಾರವಿಲ್ಲದ ಪ್ರತಿಪಾದನೆಯಾಗಿದೆ. ಭವಿಷ್ಯತ್ತನ್ನು ಮುಂತಿಳಿಸುವುದು ಅಸಾಧ್ಯವೆಂದು ನಿರ್ಣಯಿಸಿರುವವರು ರುಜುವಾತನ್ನು ಪರೀಕ್ಷಿಸುವ ಮೊದಲೇ ಮಾಡಿರುವ ಪ್ರತಿಪಾದನೆ ಅದಾಗಿದೆ. ಅವರು ಬೈಬಲನ್ನು ದೇವರ ವಾಕ್ಯವೆಂದು ಒಪ್ಪದಿರುವ ಕಾರಣ ಎಲ್ಲವನ್ನೂ ಕೇವಲ ಮಾನವ ದೃಷ್ಟಿಕೋನದಿಂದ ವಿವರಿಸುವ ನಿರ್ಬಂಧಕ್ಕೊಳಗಾಗುತ್ತಾರೆ. ಆದರೂ, ದೇವರು ತಾನೇ ಬೈಬಲಿನ ಗ್ರಂಥಕರ್ತನೆಂದು ದೃಢೀಕರಿಸಲು ಎಷ್ಟು ಬೇಕೊ ಅಷ್ಟೇ ಪ್ರವಾದನಾತ್ಮಕ ವಿವರಗಳನ್ನು ವಿವೇಕದಿಂದ ಒದಗಿಸಿದ್ದಾನೆ. *

ನಿರ್ದಿಷ್ಟ ಬೈಬಲ್‌ ಪ್ರವಾದನೆಗಳು ಮತ್ತು ಅವುಗಳ ನೆರವೇರಿಕೆಗಳ ಕುರಿತು ಧ್ಯಾನಿಸಲು ನೀವು ಸಮಯವನ್ನು ತೆಗೆದುಕೊಳ್ಳುವಲ್ಲಿ ಅವು ನಿಮ್ಮ ನಂಬಿಕೆಯನ್ನು ಬಲಪಡಿಸಬಲ್ಲವು. ಹಾಗಾದರೆ ನೀವೇಕೆ ಬೈಬಲ್‌ ಪ್ರವಾದನೆಗಳನ್ನು ಅಧ್ಯಯನ ಮಾಡಬಾರದು? ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 200ರಲ್ಲಿರುವ ಚಾರ್ಟ್‌ ನಿಮಗೆ ಈ ವಿಷಯದಲ್ಲಿ ನೆರವು ನೀಡುತ್ತದೆ. * ಈ ಅಧ್ಯಯನವನ್ನು ನಿಮ್ಮ ನಂಬಿಕೆ ವರ್ಧಿಸುವ ಉದ್ದೇಶದಿಂದ ಮಾಡಿರಿ. ಅವಸರ ಅವಸರದಿಂದ ವಿಷಯಭಾಗವನ್ನು ಓದಿ ಮುಗಿಸಬೇಡಿ. ಯೆಹೋವನು ಏನನ್ನೇ ಮುಂತಿಳಿಸಲಿ ಅದು ಚಾಚೂತಪ್ಪದೆ ನೆರವೇರುತ್ತದೆಂಬ ನಿಜತ್ವವನ್ನು ಮಾನ್ಯತೆಯಿಂದ ಧ್ಯಾನಿಸಿರಿ. (w08 1/1)

[ಪಾದಟಿಪ್ಪಣಿಗಳು]

^ ಪ್ಯಾರ. 13 ಬೈಬಲ್‌ ಪ್ರವಾದನೆಯು ಘಟನೆಗಳು ಸಂಭವಿಸಿದ ಬಳಿಕ ಬರೆಯಲ್ಪಟ್ಟಿತೆಂಬ ವಾದವನ್ನು ತಪ್ಪೆಂದು ತೋರಿಸಿಕೊಡಲು ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ, ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕದ ಪುಟ 106-11ನ್ನು ನೋಡಿ.

^ ಪ್ಯಾರ. 14 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 24ರಲ್ಲಿರುವ ಚೌಕ/ಚಿತ್ರ]

ಬದುಕಿನ ಮೂಲತತ್ತ್ವಗಳು

ಧ್ಯಾನಿಸಲು ಮತ್ತೊಂದು ವಿಷಯ ಇಲ್ಲಿದೆ. ಲೋಕಶಕ್ತಿಗಳ ಏಳುಬೀಳುಗಳನ್ನು ನಿಷ್ಕೃಷ್ಟವಾಗಿ ಮುಂತಿಳಿಸಿದ ದೇವರು ಬೈಬಲಿನಲ್ಲಿರುವ ಬದುಕಿನ ಮೂಲತತ್ತ್ವಗಳ ಮೂಲನೂ ಆಗಿದ್ದಾನೆ. ಇವುಗಳಲ್ಲಿ ಕೆಲವು ಹೀಗಿವೆ:

ನೀವು ಬಿತ್ತಿದ್ದನ್ನೇ ಕೊಯ್ಯುವಿರಿ.ಗಲಾತ್ಯ 6:7.

ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷ.ಅ. ಕೃತ್ಯಗಳು 20:35.

ಸಂತೋಷವು ಆಧ್ಯಾತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸುವುದರ ಮೇಲೆ ಹೊಂದಿಕೊಂಡಿದೆ.ಮತ್ತಾಯ 5:3.

ಈ ಮೂಲತತ್ತ್ವಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವಲ್ಲಿ ಸಂತೋಷ ಹಾಗೂ ಯಶಸ್ಸನ್ನು ಪಡೆಯುವಿರಿ ಎಂಬ ಭರವಸೆ ನಿಮಗಿರಲಿ.

[ಪುಟ 22, 23ರಲ್ಲಿರುವ ಚಿತ್ರಗಳು]

ಈ ನಾಗರಿಕತೆಗಳ ಶಾಶ್ವತ ಅಂತ್ಯವನ್ನು ದೇವರ ವಾಕ್ಯ ಮುಂತಿಳಿಸಿತು. . .

ಏದೋಮ್‌

ಬಾಬೆಲ್‌

. . . ಆದರೆ ಇವುಗಳದ್ದನ್ನಲ್ಲ

ಗ್ರೀಸ್‌

ಈಜಿಪ್ಟ್‌

[ಕೃಪೆ]

Pictorial Archive (Near Eastern History) Est.

WHO photo by Edouard Boubat

[ಪುಟ 23ರಲ್ಲಿರುವ ಚಿತ್ರ]

ಮಹಾ ಅಲೆಗ್ಸಾಂಡರ್‌