ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿದೆಯೋ?
ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿದೆಯೋ?
ದೇವರು ಪ್ರಾಣಿಗಳಿಂದ ಮಾನವರನ್ನು ರಚಿಸಲು ವಿಕಾಸದ ಪ್ರಕ್ರಿಯೆಯನ್ನು ಬಳಸಿರಬಹುದೋ? ಬ್ಯಾಕ್ಟೀರಿಯಾಗಳು ಮೀನುಗಳಾಗಿ, ನಂತರ ಸರೀಸೃಪಗಳು ಮತ್ತು ಸಸ್ತನಿಗಳಾಗಿ ವಿಕಾಸಗೊಂಡು ಕೊನೆಯಲ್ಲಿ ಮಂಗಗಳಾಗಿ, ಆ ಮಂಗಗಳು ಮಾನವರಾಗುವಂತೆ ದೇವರು ಮಾಡಿದನೋ? ಕೆಲವು ವಿಜ್ಞಾನಿಗಳು ಮತ್ತು ಧಾರ್ಮಿಕ ಮುಖಂಡರು ವಿಕಾಸವಾದ ಮತ್ತು ಬೈಬಲ್ ಎರಡನ್ನೂ ನಂಬುತ್ತೇವೆಂದು ಹೇಳುತ್ತಾರೆ. ಅವರು ಬೈಬಲ್‌ನ ಆದಿಕಾಂಡ ಪುಸ್ತಕವನ್ನು ಸಾಂಕೇತಿಕ ಕಥೆಯೆಂದು ಹೇಳುತ್ತಾರೆ. ಪ್ರಾಯಶಃ ನೀವು ಹೀಗೆ ಯೋಚಿಸಿರಬಹುದು: ‘ಮಾನವನು ಪ್ರಾಣಿಗಳಿಂದ ವಿಕಾಸಗೊಂಡನು ಎಂಬ ವಾದವು ಬೈಬಲಿನ ಸೃಷ್ಟಿಯ ವೃತ್ತಾಂತದೊಂದಿಗೆ ಹೊಂದಿಕೆಯಲ್ಲಿದೆಯೋ?’
ನಾವು ಯಾರು, ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಹೇಗೆ ಜೀವಿಸಬೇಕು ಎಂಬುದನ್ನು ತಿಳಿದುಕೊಳ್ಳಲು ನಾವು ಮೂಲತಃ ಎಲ್ಲಿಂದ ಬಂದೆವೆಂಬುದನ್ನು ತಿಳಿಯುವುದು ಅತಿ ಪ್ರಾಮುಖ್ಯ. ಮಾನವರ ಮೂಲವನ್ನು ತಿಳಿದುಕೊಳ್ಳುವ ಮೂಲಕವೇ, ದೇವರು ದುಷ್ಟತನವನ್ನು ಏಕೆ ಅನುಮತಿಸಿದ್ದಾನೆ ಮತ್ತು ಮಾನವರ ಭವಿಷ್ಯಕ್ಕಾಗಿ ಆತನ ಉದ್ದೇಶಗಳೇನು ಎಂಬದನ್ನು ನಾವು ಅರ್ಥಮಾಡಿಕೊಳ್ಳಬಹುದು. ದೇವರು ನಮ್ಮ ಸೃಷ್ಟಿಕರ್ತನೆಂದು ನಮಗೆ ನಿಶ್ಚಯವಿಲ್ಲದಿರುವಲ್ಲಿ ಆತನೊಂದಿಗೆ ಉತ್ತಮ ನಿಲುವನ್ನು ಹೊಂದಸಾಧ್ಯವಿಲ್ಲ. ಆದ್ದರಿಂದ ಮಾನವನ ಮೂಲ, ಅವನ ಸದ್ಯದ ಸ್ಥಿತಿ ಮತ್ತು ಅವನ ಭವಿಷ್ಯತ್ತಿನ ಕುರಿತು ಬೈಬಲ್ ಏನನ್ನುತ್ತದೆ ಎಂಬುದನ್ನು ಪರಿಗಣಿಸೋಣ. ನಂತರ, ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿದೆಯೋ ಎಂಬುದನ್ನು ನೋಡೋಣ.
ಒಬ್ಬನೇ ಮನುಷ್ಯನಿದ್ದಾಗ
ಒಮ್ಮೆ ಒಬ್ಬನೇ ಮನುಷ್ಯನಿದ್ದನು ಎಂಬುದನ್ನು ವಿಕಾಸವಾದಿಗಳು ನಿರಾಕರಿಸುತ್ತಾ ಸಾಮಾನ್ಯವಾಗಿ ವಾದಿಸುವುದೇನೆಂದರೆ ಪ್ರಾಣಿಗಳು ಕ್ರಮೇಣ ವಿಕಾಸಗೊಂಡು ಮಾನವರಾದವು. ಆದಾಗ್ಯೂ ಬೈಬಲ್ ಸಂಪೂರ್ಣವಾಗಿ ಭಿನ್ನವಾದ ಚಿತ್ರಣವನ್ನು ಒದಗಿಸುತ್ತದೆ. ಒಬ್ಬ ಮನುಷ್ಯನಾದ ಆದಾಮನಿಂದ ನಾವು ಅಸ್ತಿತ್ವಕ್ಕೆ ಬಂದೆವೆಂದು ಅದು ಹೇಳುತ್ತದೆ. ಬೈಬಲ್‌ನ ವೃತ್ತಾಂತಗಳು ಆದಾಮನನ್ನು ನೈಜ ವ್ಯಕ್ತಿಯಾಗಿ ತೋರಿಸುತ್ತವೆ. ಅದು ಅವನ ಹೆಂಡತಿಯ ಮತ್ತು ಕೆಲವು ಮಕ್ಕಳ ಹೆಸರುಗಳನ್ನು ಕೊಡುತ್ತದೆ. ಅವನು ಏನು ಮಾಡಿದನು, ಏನು ಹೇಳಿದನು, ಯಾವಾಗ ಜೀವಿಸಿದನು ಮತ್ತು ಯಾವಾಗ ಸತ್ತನು ಎಂಬುದನ್ನು ಅದು ಸವಿವರವಾಗಿ ತಿಳಿಸುತ್ತದೆ. ಯೇಸುವು ಆ ವೃತ್ತಾಂತವನ್ನು ಕೇವಲ ಅವಿದ್ಯಾವಂತ ಜನರಿಗಾಗಿರುವ ಕಥೆಯೋ ಎಂಬಂತೆ ಪರಿಗಣಿಸಲಿಲ್ಲ. ಉತ್ತಮ ವಿದ್ಯಾಭ್ಯಾಸವಿದ್ದ ಧಾರ್ಮಿಕ ನಾಯಕರನ್ನು ಸಂಬೋಧಿಸುವಾಗ ಆತನು ಹೇಳಿದ್ದು: ‘ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.’ (ಮತ್ತಾಯ 19:3-5) ಅನಂತರ ಯೇಸು ಆದಾಮಹವ್ವರ ಕುರಿತ ಆದಿಕಾಂಡ 2:24ರ ಮಾತುಗಳನ್ನು ಉದ್ಧರಿಸಿದನು.
ಬೈಬಲ್ ಲೇಖಕರಲ್ಲಿ ಒಬ್ಬನಾದ ಮತ್ತು ಶ್ರದ್ಧೆಯುಳ್ಳ ಇತಿಹಾಸಗಾರನಾದ ಲೂಕನು ಯೇಸುವಿನಂತೆ ಆದಾಮನನ್ನು ಒಬ್ಬ ನೈಜ ವ್ಯಕ್ತಿಯಾಗಿ ವಿವರಿಸಿದನು. ಪ್ರಥಮ ಮನುಷ್ಯನಾದ ಆದಾಮನ ತನಕದ ಯೇಸುವಿನ ವಂಶಾವಳಿಯನ್ನು ಲೂಕನು ಪಟ್ಟಿಮಾಡಿದ್ದಾನೆ. (ಲೂಕ 3:23-38) ಅಲ್ಲದೆ ಪ್ರಸಿದ್ಧ ಗ್ರೀಕ್ ಶಾಲೆಗಳಲ್ಲಿ ಶಿಕ್ಷಿತರಾದ ತತ್ತ್ವಜ್ಞಾನಿಗಳೂ ಇದ್ದ ಸಭಿಕರೊಂದಿಗೆ ಮಾತಾಡುವಾಗ ಅಪೊಸ್ತಲ ಪೌಲನು ಹೇಳಿದ್ದು: “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು . . . ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು. (ಅ. ಕೃತ್ಯಗಳು 17:24-26) ನಾವು “ಒಬ್ಬ” ಮನುಷ್ಯನಿಂದ ಹುಟ್ಟಿಬಂದ ವಂಶಜರೆಂದು ಬೈಬಲ್ ಸ್ಪಷ್ಟವಾಗಿ ಬೋಧಿಸುತ್ತದೆ. ಮನುಷ್ಯನ ಆರಂಭದ ಕುರಿತು ಬೈಬಲ್ ಹೇಳುವ ವಿಷಯವು ವಿಕಾಸವಾದದೊಂದಿಗೆ ಹೊಂದಿಕೆಯಲ್ಲಿದೆಯೋ?
ಮನುಷ್ಯನು ಪರಿಪೂರ್ಣತೆಯಿಂದ ಸರಿದದ್ದು
ಬೈಬಲಿಗನುಸಾರ ಯೆಹೋವನು ಪ್ರಥಮ ಮನುಷ್ಯನನ್ನು ಪರಿಪೂರ್ಣನಾಗಿ ಸೃಷ್ಟಿಸಿದನು. ದೇವರು ಯಾವುದನ್ನೇ ಅಪರಿಪೂರ್ಣವಾಗಿ ಆದಿಕಾಂಡ 1:27, 31) ಒಬ್ಬ ಮನುಷ್ಯನು ಹೇಗೆ ಪರಿಪೂರ್ಣನು?
ಮಾಡುವುದು ಅಸಾಧ್ಯ. ಸೃಷ್ಟಿಯ ವೃತ್ತಾಂತ ಹೇಳುವುದು: “ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು . . . ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಪರಿಪೂರ್ಣ ಮನುಷ್ಯನಿಗೆ ಇಚ್ಛಾಸ್ವಾತಂತ್ರ್ಯವಿದೆ ಮತ್ತು ಅವನು ದೇವರ ಗುಣಗಳನ್ನು ಪೂರ್ಣವಾಗಿ ಅನುಕರಿಸಲು ಶಕ್ತನಿರುತ್ತಾನೆ. ಬೈಬಲ್ ತಿಳಿಸುವುದು: “ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.” (ಪ್ರಸಂಗಿ 7:29) ದೇವರ ವಿರುದ್ಧ ದಂಗೆಯೇಳಲು ಆದಾಮನು ಆಯ್ಕೆಮಾಡಿದನು. ಆದಾಮನು ದಂಗೆಯೇಳುವುದರ ಮೂಲಕ ತನ್ನ ಹಾಗೂ ತನ್ನ ಸಂತತಿಯವರ ಪರಿಪೂರ್ಣತೆಯನ್ನು ಕಳೆದುಕೊಂಡನು. ಪರಿಪೂರ್ಣತೆಯಿಂದ ಮಾನವನ ಸರಿಯುವಿಕೆಯು ನಾವು ಸರಿಯಾದುದನ್ನು ಮಾಡಲು ಬಯಸುವುದಾದರೂ ಅನೇಕ ವೇಳೆ ಏಕೆ ತಪ್ಪಿಬೀಳುತ್ತೇವೆ ಎಂಬುದನ್ನು ವಿವರಿಸುತ್ತದೆ. ಅಪೊಸ್ತಲ ಪೌಲನು ಬರೆದದ್ದು: “ಯಾವದನ್ನು ಮಾಡಬೇಕೆಂದು ನಾನು ಇಚ್ಛೈಸುತ್ತೇನೋ ಅದನ್ನು ನಡಿಸದೆ ನನಗೆ ಅಸಹ್ಯವಾದದ್ದನ್ನು ಮಾಡುತ್ತೇನೆ.”—ರೋಮಾಪುರ 7:15.
ಬೈಬಲಿಗನುಸಾರ ಪರಿಪೂರ್ಣ ಮನುಷ್ಯನು ಪರಿಪೂರ್ಣ ಆರೋಗ್ಯದೊಂದಿಗೆ ಸದಾಕಾಲ ಜೀವಿಸಲಿದ್ದನು. ದೇವರು ಆದಾಮನಿಗೆ ಹೇಳಿದ ಮಾತುಗಳಿಂದ ತಿಳಿಯುವುದೇನಂದರೆ ಪ್ರಥಮ ಮನುಷ್ಯನು ಅವಿಧೇಯನಾಗದೇ ಇರುತ್ತಿದ್ದಲ್ಲಿ ಆತನು ಎಂದೂ ಸಾಯುತ್ತಿರಲಿಲ್ಲ. (ಆದಿಕಾಂಡ 2:16, 17; 3:22, 23) ಮನುಷ್ಯನಲ್ಲಿ ಅಸ್ವಸ್ಥನಾಗುವ ಇಲ್ಲವೇ ದಂಗೆಯೇಳುವ ಪ್ರವೃತ್ತಿ ಇರುತ್ತಿದ್ದಲ್ಲಿ ಮಾನವನ ಸೃಷ್ಟಿಯು “ಬಹು ಒಳ್ಳೇದಾಗಿತ್ತು” ಎಂದು ಯೆಹೋವನು ಹೇಳಲು ಸಾಧ್ಯವಿರಲಿಲ್ಲ. ಮಾನವ ಶರೀರವು ಅದ್ಭುತಕರವಾಗಿ ರಚಿಸಲ್ಪಟ್ಟಿರುವುದಾದರೂ ವಿಕೃತಿಗಳಿಗೆ ಮತ್ತು ರೋಗಗಳಿಗೆ ಒಳಗಾಗುವುದಕ್ಕೆ ಕಾರಣ ಪರಿಪೂರ್ಣತೆಯಿಂದ ಮಾನವನ ಸರಿಯುವಿಕೆಯೇ ಆಗಿದೆ. ಆದ್ದರಿಂದಲೇ ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿಲ್ಲ. ಅದು ಆಧುನಿಕ ಮಾನವನು ಉನ್ನತಿ ಹೊಂದುತ್ತಿರುವ ಪ್ರಾಣಿ ಎಂಬುದಾಗಿ ತೋರಿಸುತ್ತದೆ. ಬೈಬಲ್ ಆಧುನಿಕ ಮಾನವನನ್ನು ಒಬ್ಬ ಪರಿಪೂರ್ಣ ಮನುಷ್ಯನಿಂದ ಬಂದ ಅವನತಿಹೊಂದುತ್ತಿರುವ ಸಂತತಿ ಎಂದು ಪ್ರಸ್ತುತಪಡಿಸುತ್ತದೆ.
ಮನುಷ್ಯನನ್ನು ಸೃಷ್ಟಿಸಲು ದೇವರು ವಿಕಾಸವನ್ನು ಬಳಸಿದನು ಎಂಬ ಅಭಿಪ್ರಾಯವು ದೇವರ ವ್ಯಕ್ತಿತ್ವದ ಬಗ್ಗೆ ಬೈಬಲ್ ಏನನ್ನುತ್ತದೋ ಅದರೊಂದಿಗೂ ಹೊಂದಿಕೆಯಲ್ಲಿಲ್ಲ. ಒಂದುವೇಳೆ ವಿಕಾಸದ ಕಾರ್ಯವಿಧಾನವನ್ನು ದೇವರೇ ನಡೆಸಿರುವಲ್ಲಿ ಸದ್ಯದ ಅನಾರೋಗ್ಯ ಮತ್ತು ಸಂಕಟದ ಸ್ಥಿತಿಗೆ ಆತನೇ ಮಾನವಕುಲವನ್ನು ನಡೆಸಿದನೆಂದಾಗುತ್ತಿತ್ತು. ಆದರೆ ದೇವರ ಬಗ್ಗೆ ಬೈಬಲ್ ಹೇಳುವುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ. ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು.” (ಧರ್ಮೋಪದೇಶಕಾಂಡ 32:4, 5) ಆದ್ದರಿಂದ ಮಾನವಕುಲವು ಈಗ ಅನುಭವಿಸುತ್ತಿರುವ ಕಷ್ಟಾನುಭವಗಳು ದೇವರು ವಿಕಾಸವನ್ನು ನಡೆಸಿದ್ದರ ಫಲವಲ್ಲ. ಇದು ಒಬ್ಬ ಮನುಷ್ಯನು ದೇವರ ವಿರುದ್ಧ ದಂಗೆಯೇಳುವ ಮೂಲಕ ತನ್ನ ಮತ್ತು ತನ್ನ ಸಂತತಿಯವರ ಪರಿಪೂರ್ಣತೆಯನ್ನು ಕಳಕೊಂಡದ್ದರ ಪರಿಣಾಮವಾಗಿದೆ. ನಾವು ಆದಾಮನ ಬಗ್ಗೆ ಪರಿಗಣಿಸಿದೆವು; ಈಗ ಯೇಸುವಿನ ಕುರಿತು ತಿಳಿಯೋಣ. ಯೇಸುವಿನ ಕುರಿತು ಬೈಬಲ್ ಏನನ್ನುತ್ತದೋ ಅದರೊಂದಿಗೆ ವಿಕಾಸವಾದವು ಹೊಂದಿಕೆಯಲ್ಲಿದೆಯೋ?
ವಿಕಾಸವಾದ ಮತ್ತು ಕ್ರೈಸ್ತತ್ವ—ಎರಡನ್ನೂ ನೀವು ನಂಬಸಾಧ್ಯವೋ?
“ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು.” ನೀವು ಈಗಾಗಲೇ ತಿಳಿದಿರುವಂತೆ ಇದು ಕ್ರೈಸ್ತತ್ವದ ಮೂಲಭೂತ ಬೋಧನೆಗಳಲ್ಲೊಂದಾಗಿದೆ. (1 ಕೊರಿಂಥ 15:3; 1 ಪೇತ್ರ 3:18) ಈ ಹೇಳಿಕೆಯು ವಿಕಾಸವಾದದೊಂದಿಗೆ ಏಕೆ ಹೊಂದಿಕೆಯಲ್ಲಿಲ್ಲ ಎಂದು ತಿಳಿಯಲು ಮೊದಲಾಗಿ ಬೈಬಲ್ ನಮ್ಮನ್ನು ಪಾಪಿಗಳೆಂದು ಏಕೆ ಕರೆಯುತ್ತದೆ ಮತ್ತು ಪಾಪ ನಮಗೇನು ಮಾಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಪ್ರೀತಿ ಮತ್ತು ನ್ಯಾಯದಂಥ ದೇವರ ಮಹಿಮಾಯುತ ಗುಣಗಳನ್ನು ನಾವು ಪರಿಪೂರ್ಣವಾಗಿ ಅನುಕರಿಸಲಾರೆವು ಎಂಬರ್ಥದಲ್ಲಿ ನಾವೆಲ್ಲರೂ ಪಾಪಿಗಳಾಗಿದ್ದೇವೆ. ಆದ್ದರಿಂದ ಬೈಬಲ್ ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿದ್ದಾರೆ.” (ರೋಮಾಪುರ 3:23, NIBV) ಪಾಪವೇ ಮರಣಕ್ಕೆ ಕಾರಣವೆಂದು ಬೈಬಲ್ ಬೋಧಿಸುತ್ತದೆ. “ಮರಣದ ಕೊಂಡಿ ಪಾಪವೇ,” ಎನ್ನುತ್ತದೆ 1 ಕೊರಿಂಥ 15:56. ನಾವು ಬಾಧ್ಯತೆಯಾಗಿ ಪಡೆದಿರುವ ಪಾಪವು ಅಸ್ವಸ್ಥತೆಗೂ ಮುಖ್ಯ ಕಾರಣವಾಗಿದೆ. ಅಸ್ವಸ್ಥತೆ ಮತ್ತು ನಮ್ಮ ಪಾಪಪೂರ್ಣ ಸ್ಥಿತಿಯ ನಡುವೆ ಸಂಬಂಧವಿರುವುದಾಗಿ ಯೇಸು ತಿಳಿಸಿದನು. ಅವನು ಒಬ್ಬ ಪಾರ್ಶ್ವವಾಯು ರೋಗಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದಾಗ ಆ ಮನುಷ್ಯನು ಗುಣಮುಖನಾದನು.—ಮತ್ತಾಯ 9:2-7.
ಯೇಸುವಿನ ಮರಣ ನಮಗೆ ಹೇಗೆ ಸಹಾಯಮಾಡುತ್ತದೆ? ಆದಾಮ ಮತ್ತು ಯೇಸು ಕ್ರಿಸ್ತನ ನಡುವೆ ವ್ಯತ್ಯಾಸ ತೋರಿಸುತ್ತಾ ಬೈಬಲ್ ಹೇಳುವುದು: “ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.” (1 ಕೊರಿಂಥ 15:22) ಯೇಸು ತನ್ನ ಜೀವವನ್ನು ಬಲಿಕೊಡುವ ಮೂಲಕ ನಾವು ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಪಾಪಕ್ಕಾಗಿ ಬೆಲೆ ತೆತ್ತನು. ಹೀಗೆ ಯೇಸುವಿನ ಮೇಲೆ ನಂಬಿಕೆಯಿಡುವ ಮತ್ತು ವಿಧೇಯರಾಗುವ ಎಲ್ಲರೂ ಆದಾಮನು ಕಳೆದುಕೊಂಡಿರುವ ಆ ನಿತ್ಯಜೀವದ ಪ್ರತೀಕ್ಷೆಯನ್ನು ಹೊಂದುವರು.—ಯೋಹಾನ 3:16; ರೋಮಾಪುರ 6:23.
ವಿಕಾಸವಾದವು ಕ್ರೈಸ್ತತ್ವದೊಂದಿಗೆ ಹೊಂದಿಕೆಯಲ್ಲಿಲ್ಲವೆಂದು ನಿಮಗೆ ಈಗ ತೋರಿಬರುತ್ತದೋ? ‘ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರು’ ಎನ್ನುವುದನ್ನು ನಾವು ಸಂದೇಹಿಸುವಲ್ಲಿ, “ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು” ಎಂದು ನಾವು ಹೇಗೆ ನಿರೀಕ್ಷಿಸಸಾಧ್ಯ?
ವಿಕಾಸವಾದ ಏಕೆ ಜನರನ್ನು ಆಕರ್ಷಿಸುತ್ತದೆ?
ವಿಕಾಸವಾದದಂಥ ಬೋಧನೆಗಳು ಹೇಗೆ ಪ್ರಸಿದ್ಧವಾಗುತ್ತವೆ ಎಂಬುದನ್ನು ಬೈಬಲ್ ಪ್ರಕಟಪಡಿಸುತ್ತದೆ. ಅದು ಹೇಳುವುದು: “ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.” (2 ತಿಮೊಥೆಯ 4:3, 4) ವಿಕಾಸವಾದವನ್ನು ಸಾಮಾನ್ಯವಾಗಿ ವೈಜ್ಞಾನಿಕ ಭಾಷೆಯಲ್ಲಿ ಪ್ರಸ್ತುತಪಡಿಸಲಾಗಿದೆಯಾದರೂ ವಾಸ್ತವದಲ್ಲಿ ಅದೊಂದು ಧಾರ್ಮಿಕ ಬೋಧನೆಯಾಗಿದೆ. ಅದು, ಜೀವವನ್ನು ವೀಕ್ಷಿಸುವ ವಿಧ ಹಾಗೂ ದೇವರ ಕಡೆಗಿನ ದೃಷ್ಟಿಕೋನವನ್ನು ಪ್ರಭಾವಿಸುತ್ತದೆ. ಅದರ ಬೋಧನೆಗಳು ಮಾನವರ ಸ್ವಾರ್ಥಪರ ಹಾಗೂ ಸ್ವತಂತ್ರ ಪ್ರವೃತ್ತಿಗಳನ್ನು ನಯವಾಗಿ ಆಕರ್ಷಿಸುತ್ತವೆ. ವಿಕಾಸವಾದದಲ್ಲಿ ನಂಬಿಕೆಯಿಡುವ ಅನೇಕರು ತಾವು ದೇವರನ್ನೂ ನಂಬುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ದೇವರು ಸೃಷ್ಟಿಕರ್ತನಲ್ಲ, ಮಾನವ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ, ಅಲ್ಲದೇ ಆತನು ಜನರಿಗೆ ತೀರ್ಪುಮಾಡುವುದಿಲ್ಲ ಎಂದು ಅವರು ಮುಕ್ತವಾಗಿ ಯೋಚಿಸುತ್ತಾರೆ. ಇದು ಜನರ ಕಿವಿಗಳಿಗೆ ಇಂಪೆನಿಸುವ ಒಂದು ಸಿದ್ಧಾಂತ.
ವಿಕಾಸವನ್ನು ಪ್ರತಿಪಾದಿಸುವವರು ಹೆಚ್ಚಾಗಿ ನಿಜತ್ವಗಳಿಂದಲ್ಲ ಬದಲಾಗಿ ‘ತಮ್ಮ ದುರಾಶೆಗಳಿಂದ’ ಪ್ರೇರಿಸಲ್ಪಟ್ಟಿರುತ್ತಾರೆ. ವಿಕಾಸವು ಅಂಗೀಕೃತ ಸಿದ್ಧಾಂತವೆಂದು ಪರಿಗಣಿಸುವ ವೈಜ್ಞಾನಿಕ ಸಮುದಾಯದಿಂದ ಮೆಚ್ಚಿಗೆ ಪಡೆಯಬೇಕೆಂಬ ಆಶೆಯೂ ಪ್ರಾಯಶಃ ಅವರಲ್ಲಿರಬಹುದು. ಜೀವಕೋಶಗಳ ರಚನೆಯು ವಿಕಾಸದಿಂದಾಯಿತು ಎಂದು ಬೋಧಿಸುವವರ ಪ್ರತಿಪಾದನೆಗಳಿಗೆ ಯಾವುದೇ ಆಧಾರವಿಲ್ಲ ಎಂದು ಜೀವಕೋಶಗಳ ಸಂಕೀರ್ಣ ಆಂತರಿಕ ಕ್ರಿಯೆಗಳನ್ನು ಅಧ್ಯಯನ ಮಾಡುವುದರಲ್ಲಿ ತನ್ನ ಜೀವನದ ಹೆಚ್ಚಿನ ಸಮಯವನ್ನು ಕಳೆದ ಜೀವ ರಸಾಯನವಿಜ್ಞಾನದ ಪ್ರೊಫೆಸರ್ ಮೈಕಲ್ ಬೀಹೀ ವಿವರಿಸಿದರು. ಈ ಅತಿ ಸೂಕ್ಷ್ಮ ಅಣುವಿನ ಹಂತದಲ್ಲಿ ವಿಕಾಸವು ಸಂಭವಿಸಲು ಸಾಧ್ಯವೋ? ಅವರು ಬರೆದದ್ದು: “ಅಣುವಿನ ಹಂತದಲ್ಲಿ ವಿಕಾಸವು ನಡೆಯಿತೆಂಬ ಮಾತು ವೈಜ್ಞಾನಿಕ ಸಾಕ್ಷ್ಯಗಳ ಮೇಲೆ ಆಧರಿಸಿಲ್ಲ. ಯಾವುದೇ ನೈಜ, ಸಂಕೀರ್ಣ, ಜೀವರಸಾಯನ ವ್ಯವಸ್ಥೆಯ ವಿಕಾಸವು ಅಣುವಿನ ಹಂತದಲ್ಲಿ ಸಂಭವಿಸಿದ್ದ ಅಥವಾ ಸಂಭವಿಸಿರುವ ಸಾಧ್ಯತೆಯ ಬಗ್ಗೆ ವೈಜ್ಞಾನಿಕ ಸಾಹಿತ್ಯದ ಯಾವುದೇ ಪುಸ್ತಕಗಳಲ್ಲಿ—ಪ್ರಸಿದ್ಧ ಪತ್ರಿಕೆಗಳು, ವಿಶೇಷ ನಿಯತಕಾಲಿಕಗಳು ಅಥವಾ ಪುಸ್ತಕಗಳಲ್ಲಿ ವಿವರಿಸಲಾಗಿಲ್ಲ. . . . ಅಣುವಿನ ಹಂತದಲ್ಲಿ ವಿಕಾಸದ ಕುರಿತು ಡಾರ್ವಿನ್‌ವಾದದ ಪ್ರತಿಪಾದನೆ ಕೇವಲ ಬಡಾಯಿಯಾಗಿದೆ.”
ವಿಕಾಸವಾದಿಗಳಲ್ಲಿ ಸಾಕಷ್ಟು ರುಜುವಾತುಗಳಿಲ್ಲದಿರುವಾಗ ಅವರು ತಮ್ಮ ಅಭಿಪ್ರಾಯಗಳನ್ನು ಅಷ್ಟು ಬಲವಾಗಿ ಸಮರ್ಥಿಸುವುದೇಕೆ? ಬೀಹೀ ವಿವರಿಸುವುದು: “ಪ್ರಮುಖರಾದ ಹಾಗೂ ಗೌರವಾನ್ವಿತ ವಿಜ್ಞಾನಿಗಳನ್ನೂ ಸೇರಿಸಿ ಅನೇಕರಿಗೆ ಪ್ರಕೃತಿಯ ಆಚೆ ಇನ್ನೇನೂ ಇರುವುದು ಅವರಿಗೆ ಬೇಡವಾಗಿದೆ.”
ವಿಕಾಸದ ಬೋಧನೆಯು ಅನೇಕ ಪಾದ್ರಿಗಳನ್ನು ಆಕರ್ಷಿಸುತ್ತದೆ ಏಕೆಂದರೆ ಅವರು ಜ್ಞಾನಿಗಳೆಂದು ತೋರಿಸಿಕೊಳ್ಳಲು ಬಯಸುತ್ತಾರೆ. ಇವರು ಅಪೊಸ್ತಲ ಪೌಲನು ರೋಮ್‌ನ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ವರ್ಣಿಸಿದ ಜನರಂತಿದ್ದಾರೆ. ಅವನು ಬರೆದದ್ದು: ರೋಮಾಪುರ 1:19-22) ಸುಳ್ಳು ಬೋಧಕರಿಂದ ಮೋಸಗೊಳಿಸಲ್ಪಡುವುದನ್ನು ನಾವು ಹೇಗೆ ತಪ್ಪಿಸಬಹುದು?
“ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದದೆ . . . ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ. ಯಾಕಂದರೆ ದೇವರ ವಿಷಯವಾಗಿ ಅವರಿಗೆ ತಿಳುವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಘನಪಡಿಸಲಿಲ್ಲ; ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ವಿಚಾರ ಮಾಡಿಮಾಡಿ ಫಲಕಾಣಲಿಲ್ಲ; ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಯಿತು. ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು.” (ಸೃಷ್ಟಿಕರ್ತನಲ್ಲಿ ಸಾಕ್ಷ್ಯಾಧಾರಿತ ನಂಬಿಕೆ
ನಂಬಿಕೆಯನ್ನು ವರ್ಣಿಸುವಾಗ ಸಾಕ್ಷ್ಯಗಳ ಪ್ರಾಮುಖ್ಯತೆಯನ್ನು ಬೈಬಲ್ ಒತ್ತಿಹೇಳುತ್ತದೆ. ಅದು ಹೇಳುವುದು: “ನಂಬಿಕೆಯು ನಿರೀಕ್ಷಿತ ಸಂಗತಿಗಳ ನಿಶ್ಚಿತ ನಿರೀಕ್ಷಣೆಯೂ, ನಿಜತ್ವಗಳು ಕಾಣದಿರುವುದಾದರೂ ಅವುಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ.” (ಇಬ್ರಿಯ 11:1, NW) ದೇವರಲ್ಲಿ ನಿಜ ನಂಬಿಕೆಯು ಸೃಷ್ಟಿಕರ್ತನು ಇದ್ದಾನೆಂಬ ನಿಜತ್ವವನ್ನು ತೋರಿಸುವ ಪ್ರತ್ಯಕ್ಷ ಸಾಕ್ಷ್ಯಗಳ ಮೇಲಾಧರಿತವಾಗಿರಬೇಕು. ನೀವು ಆ ಸಾಕ್ಷ್ಯಗಳನ್ನು ಎಲ್ಲಿ ಕಂಡುಕೊಳ್ಳಬಲ್ಲಿರೆಂಬುದನ್ನು ಬೈಬಲ್ ತೋರಿಸಿಕೊಡುತ್ತದೆ.
ಪ್ರೇರಿತ ಬೈಬಲ್ ಲೇಖಕನಾದ ದಾವೀದನು ಬರೆದದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.” (ಕೀರ್ತನೆ 139:14) ನಾವು ಸಮಯವನ್ನು ತೆಗೆದುಕೊಂಡು ನಮ್ಮ ಸ್ವಂತ ದೇಹದ ಮತ್ತು ಇತರ ಜೀವಿಗಳ ವಿಸ್ಮಯಕರ ರಚನೆಯ ಕುರಿತು ಮನನಮಾಡುವಲ್ಲಿ ಸೃಷ್ಟಿಕರ್ತನ ವಿವೇಕದ ಕುರಿತು ನಮ್ಮಲ್ಲಿ ಭಯವಿಸ್ಮಯ ಉಂಟಾಗುತ್ತದೆ. ನಮ್ಮನ್ನು ಜೀವಂತವಾಗಿಡಲು ಸಹಕರಿಸುವ ಸಾವಿರಾರು ಅಂಗವ್ಯವಸ್ಥೆಗಳ ಪ್ರತಿಯೊಂದು ಭಾಗವೂ ಉತ್ಕೃಷ್ಟವಾಗಿ ವಿನ್ಯಾಸಿಸಲ್ಪಟ್ಟಿದೆ. ಭೌತಿಕ ವಿಶ್ವವು ನಿಷ್ಕೃಷ್ಟತೆ ಮತ್ತು ಕ್ರಮಬದ್ಧತೆಯ ಸಾಕ್ಷ್ಯವನ್ನು ಕೂಡ ಒದಗಿಸುತ್ತದೆ. ದಾವೀದನು ಬರೆದದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.”—ಕೀರ್ತನೆ 19:1.
ಬೈಬಲ್ ತಾನೇ ಸೃಷ್ಟಿಕರ್ತನ ಕುರಿತು ಹೇರಳ ಸಾಕ್ಷ್ಯಗಳ ಮೂಲವಾಗಿದೆ. ಅದರಲ್ಲಿರುವ 66 ಪುಸ್ತಕಗಳ ಭರವಸಾರ್ಹತೆ, ಅದರಲ್ಲಿನ ನೈತಿಕ ಮಟ್ಟಗಳ ಶ್ರೇಷ್ಠತೆ ಮತ್ತು ತಪ್ಪದೇ ನೆರವೇರಿರುವ ಪ್ರವಾದನೆಗಳನ್ನು ಪರೀಕ್ಷಿಸಲು ನೀವು ಸಮಯ ತೆಗೆದುಕೊಂಡರೆ ಸೃಷ್ಟಿಕರ್ತನೇ ಅದರ ಲೇಖಕನು ಎಂಬುದಕ್ಕೆ ಹೇರಳ ಸಾಕ್ಷ್ಯಗಳು ನಿಮಗೆ ಸಿಗುವವು. ಬೈಬಲ್‌ನ ಬೋಧನೆಗಳನ್ನು ತಿಳಿದುಕೊಳ್ಳುವುದು ಕೂಡ ಬೈಬಲ್ ನಿಶ್ಚಿತವಾಗಿ ಸೃಷ್ಟಿಕರ್ತನ ವಾಕ್ಯವಾಗಿದೆ ಎಂಬ ಭರವಸೆಯನ್ನು ನಿಮಗೆ ನೀಡುವುದು. ಉದಾಹರಣೆಗೆ, ಕಷ್ಟಾನುಭವಗಳಿಗೆ ಕಾರಣ, ದೇವರ ರಾಜ್ಯ, ಮಾನವಕುಲದ ಭವಿಷ್ಯತ್ತು ಮತ್ತು ಸಂತೋಷವನ್ನು ಕಂಡುಕೊಳ್ಳುವ ವಿಧ ಮುಂತಾದ ಬೈಬಲ್ ಬೋಧನೆಗಳನ್ನು ನೀವು ಅರ್ಥಮಾಡಿಕೊಂಡಾಗ ದೇವರ ವಿವೇಕವನ್ನು ಪ್ರತ್ಯಕ್ಷವಾಗಿ ನೋಡುವಿರಿ. ಆಗ ನಿಮಗೂ ಪೌಲನಿಗಾದ ಈ ಅನಿಸಿಕೆ ಆಗಬಹುದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!”—ರೋಮಾಪುರ 11:33.
ಸಾಕ್ಷ್ಯಗಳನ್ನು ಪರೀಕ್ಷಿಸುತ್ತಾ ಹೋದಂತೆ ನಿಮ್ಮ ನಂಬಿಕೆಯು ಬಲಗೊಳ್ಳುವುದು ಮತ್ತು ನೀವು ಬೈಬಲನ್ನು ಓದುತ್ತಿರುವಾಗ ಸ್ವತಃ ಸೃಷ್ಟಿಕರ್ತನಿಗೆ ಕಿವಿಗೊಡುತ್ತಿರುವ ಮನವರಿಕೆ ನಿಮಗಾಗುವುದು. ಆತನು ಹೇಳುವುದು: “ಭೂಲೋಕವನ್ನುಂಟುಮಾಡಿ ಅದರಲ್ಲಿನ ಮನುಷ್ಯರನ್ನು ಸೃಷ್ಟಿಸಿದವನು ನಾನೇ; ನನ್ನ ಕೈಗಳೇ ಆಕಾಶಮಂಡಲವನ್ನು ಹರಡಿದವು; ನಕ್ಷತ್ರಸೈನ್ಯಕ್ಕೆ ಅಪ್ಪಣೆಕೊಟ್ಟವನೂ ನಾನೇ.” (ಯೆಶಾಯ 45:12) ಯೆಹೋವನೇ ಎಲ್ಲಾದರ ಸೃಷ್ಟಿಕರ್ತನು ಎಂಬುದನ್ನು ಸ್ವತಃ ನಿಮಗೆ ಖಚಿತಪಡಿಸಲು ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಖಂಡಿತವಾಗಿ ನೀವೆಂದೂ ವಿಷಾದಪಡದಿರುವಿರಿ. (w08 1/1)
[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಪೊಸ್ತಲ ಪೌಲನು ವಿದ್ಯಾವಂತ ಗ್ರೀಕರಿಗೆ ಹೇಳಿದ್ದು: ‘ದೇವರು . . . ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿದನು’
[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿಕಾಸವಾದವು ಆಧುನಿಕ ಮಾನವನು ಉನ್ನತಿ ಹೊಂದುತ್ತಿರುವ ಪ್ರಾಣಿ ಎಂಬುದಾಗಿ ತೋರಿಸುತ್ತದೆ. ಬೈಬಲ್ ಆಧುನಿಕ ಮಾನವನನ್ನು ಒಬ್ಬ ಪರಿಪೂರ್ಣ ಮನುಷ್ಯನಿಂದ ಬಂದ ಅವನತಿಹೊಂದುತ್ತಿರುವ ಸಂತತಿ ಎಂದು ಪ್ರಸ್ತುತಪಡಿಸುತ್ತದೆ
[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಅಣುವಿನ ಹಂತದಲ್ಲಿ ವಿಕಾಸ ನಡೆಯಿತೆಂಬ ಮಾತು ವೈಜ್ಞಾನಿಕ ಸಾಕ್ಷ್ಯಗಳ ಮೇಲೆ ಆಧರಿಸಿಲ್ಲ”
[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]
ಜೀವಿಗಳ ವಿಸ್ಮಯಕರ ರಚನೆಯು ಸೃಷ್ಟಿಕರ್ತನ ವಿವೇಕದ ಕುರಿತು ನಮ್ಮಲ್ಲಿ ಭಯವಿಸ್ಮಯ ಉಂಟುಮಾಡುತ್ತದೆ