ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹರ್ಷಕರ ಮಾತುಗಳಿಂದ’ ನಿಮ್ಮ ಕುಟುಂಬವನ್ನು ಬಲಪಡಿಸಿರಿ

‘ಹರ್ಷಕರ ಮಾತುಗಳಿಂದ’ ನಿಮ್ಮ ಕುಟುಂಬವನ್ನು ಬಲಪಡಿಸಿರಿ

‘ಹರ್ಷಕರ ಮಾತುಗಳಿಂದ’ ನಿಮ್ಮ ಕುಟುಂಬವನ್ನು ಬಲಪಡಿಸಿರಿ

ಕಾರ್‌ನಲ್ಲಿ ಕುಳಿತು ಹೆಂಡತಿಗಾಗಿ ಕಾಯುತ್ತಿದ್ದ ಡೇವಿಡ್‌ಗೆ ಒಂದೊಂದು ಕ್ಷಣವೂ ಒಂದೊಂದು ಯುಗದಂತಿತ್ತು. ಅವನು ಪದೇಪದೇ ತನ್ನ ಗಡಿಯಾರ ನೋಡುತ್ತಾ ಇದ್ದನು. ಅವನ ಸಿಟ್ಟು ನೆತ್ತಿಗೇರುತ್ತಿತ್ತು. ಕೊನೆಗೂ ಅವನ ಹೆಂಡತಿ ಡಯಾನಾ ಮನೆಯಿಂದ ಹೊರಗೆ ಕಾಲಿಟ್ಟಾಗ, ಅವನಿಗೆ ತನ್ನ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ.

“ಏನಿದು? ನಿನಗಾಗಿ ಎಷ್ಟು ಹೊತ್ತು ಕಾಯಬೇಕು? ಯಾವಾಗಲೂ ತಡಮಾಡುತ್ತೀ! ಒಂದು ಸಲವಾದರೂ ಸಮಯಕ್ಕೆ ಸರಿಯಾಗಿ ರೆಡಿ ಆಗ್ಬಾರ್ದಾ?” ಎಂದು ಅವನು ಅಬ್ಬರಿಸಿದನು.

ಇದರಿಂದ ಮನನೊಂದ ಡಯಾನಾ ಅಳುತ್ತಾ ವಾಪಸ್‌ ಮನೆಯೊಳಗೆ ಓಡಿಹೋದಳು. ಆ ಕೂಡಲೇ ಡೇವಿಡ್‌ಗೆ ತನ್ನ ತಪ್ಪಿನ ಅರಿವಾಯಿತು. ಅವನು ಸಿಟ್ಟಿನಿಂದ ಒದರಿಬಿಟ್ಟ ಮಾತುಗಳು ಸನ್ನಿವೇಶವನ್ನು ಮತ್ತಷ್ಟು ಕೆಡಿಸಿದ್ದವು. ಅವನೀಗ ಏನು ಮಾಡಾನು? ಅವನು ಕಾರ್‌ ಇಂಜಿನ್‌ ಆಫ್‌ ಮಾಡಿ, ದೀರ್ಘ ನಿಟ್ಟುಸಿರುಬಿಟ್ಟು ಹೆಂಡತಿಯನ್ನು ಹಿಂಬಾಲಿಸುತ್ತಾ ನಿಧಾನವಾಗಿ ಮನೆಯೊಳಗೆ ಹೋದನು.

ಈ ದೃಷ್ಟಾಂತವು ನಿಜ ಜೀವನದಲ್ಲಾಗುವ ಸನ್ನಿವೇಶದಂತಿದೆ ಅಲ್ಲವೇ? ನಿಮಗೆಂದಾದರೂ, ‘ನಾನು ಹಾಗೆ ಮಾತಾಡಬಾರದಿತ್ತು’ ಎಂದು ಅನಿಸಿದೆಯೋ? ಹೆಚ್ಚಾಗಿ, ನಾವು ಯೋಚಿಸದೇ ಮಾತಾಡುವಲ್ಲಿ ಆಮೇಲೆ ವಿಷಾದಿಸಬೇಕಾಗುತ್ತದೆ. ಸಕಾರಣದಿಂದಲೇ ಬೈಬಲ್‌ ಹೇಳುವುದು: “ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ.”—ಜ್ಞಾನೋಕ್ತಿ 15:28, NIBV.

ಆದರೆ ನಾವು ಸಿಟ್ಟುಗೊಂಡಾಗ, ಹೆದರಿದಾಗ, ಇಲ್ಲವೆ ಮನನೊಂದಾಗ ಯೋಚಿಸಿ ಮಾತಾಡುವುದು ತುಂಬ ಕಷ್ಟ. ವಿಶೇಷವಾಗಿ ಅತ್ಯಾಪ್ತ ಕುಟುಂಬ ಸದಸ್ಯರಿಗೆ ನಮ್ಮ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವಾಗಲಂತೂ, ಅವರನ್ನು ದೂರುವುದು ಇಲ್ಲವೇ ಟೀಕಿಸುವುದು ತುಂಬ ಸುಲಭ. ಆದರೆ ಅದರಿಂದ ಅವರ ಮನಸ್ಸಿಗೆ ನೋವಾಗುತ್ತದೆ ಇಲ್ಲವೇ ಮಾತಿನ ಚಕಮಕಿ ಶುರುವಾಗುತ್ತದೆ.

ಉತ್ತಮ ಪರಿಣಾಮಗಳನ್ನು ಪಡೆಯಲಿಕ್ಕಾಗಿ ನಾವೇನು ಮಾಡಬಹುದು? ನಮ್ಮ ಭಾವನೆಗಳನ್ನು ಅಂಕೆಯಲ್ಲಿಡಲು ನಾವೇನು ಮಾಡಬಲ್ಲೆವು? ಈ ವಿಷಯದಲ್ಲಿ ನಾವು ಬೈಬಲ್‌ ಲೇಖಕ ಸೊಲೊಮೋನನಿಂದ ಸಹಾಯಕಾರಿ ಬುದ್ಧಿವಾದವನ್ನು ಕಂಡುಕೊಳ್ಳಬಲ್ಲೆವು.

ಏನು ಹೇಳಬೇಕು, ಹೇಗೆ ಹೇಳಬೇಕು—ಮೊದಲು ಯೋಚಿಸಿ

ಬೈಬಲಿನ ಪ್ರಸಂಗಿ ಪುಸ್ತಕದಲ್ಲಿ ಲೇಖಕ ಸೊಲೊಮೋನನು ಜೀವನದ ವ್ಯರ್ಥತೆಯನ್ನು ಪ್ರಕಟಪಡಿಸಿದಾಗ ಅವನಿಗೆ ಕಟು ಭಾವನೆಗಳಿದ್ದವೆಂಬುದು ಸುಸ್ಪಷ್ಟ. “ಜೀವವೇ ಅಸಹ್ಯವಾಗಿ ತೋರಿತು” ಎಂದವನು ಹೇಳಿದನು. ಒಂದು ಹಂತದಲ್ಲಿ ಅದನ್ನು “ವ್ಯರ್ಥವೇ ವ್ಯರ್ಥ” ಎಂದು ಕರೆದನು. (ಪ್ರಸಂಗಿ 2:17; 12:9) ಆದರೆ, ಪ್ರಸಂಗಿ ಪುಸ್ತಕವು ಸೊಲೊಮೋನನ ನಿರಾಶೆಗಳ ಒಂದು ಪಟ್ಟಿಯಂತೆ ಇಲ್ಲ. ಏಕೆಂದರೆ ಜೀವನದ ನಕಾರಾತ್ಮಕ ವಾಸ್ತವಿಕತೆಗಳನ್ನು ಮಾತ್ರ ಹೇಳಿದರೆ ಸಾಕೆಂದು ನೆನಸದೇ “ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ [“ಹರ್ಷಕರ,” NW] ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು” ಎಂದು ತನ್ನ ಪುಸ್ತಕದ ಸಮಾಪ್ತಿಯಲ್ಲಿ ಅವನು ಹೇಳುತ್ತಾನೆ. (ಪ್ರಸಂಗಿ 12:10) ಇನ್ನೊಂದು ಭಾಷಾಂತರವು, ಅವನು “ಈ ವಿಷಯಗಳನ್ನು ಅತ್ಯುತ್ತಮ ಹಾಗೂ ಅತಿ ನಿಷ್ಕೃಷ್ಟ ಧಾಟಿಯಲ್ಲಿ ವಿವರಿಸಲು ಪ್ರಯತ್ನಿಸಿದನು” ಎಂದು ಹೇಳುತ್ತದೆ.—ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ಸೊಲೊಮೋನನು ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು ಎಂಬುದನ್ನು ಗ್ರಹಿಸಿದ್ದು ವ್ಯಕ್ತ. ಅವನು ತನ್ನನ್ನು ಕಾರ್ಯತಃ ಹೀಗೆ ಕೇಳಿಕೊಂಡನು: ‘ನಾನೇನು ಹೇಳಲು ಯೋಜಿಸುತ್ತಿದ್ದೇನೊ ಅದು ನಿಜವಾಗಿ ಸತ್ಯ ಇಲ್ಲವೇ ನಿಖರವಾಗಿದೆಯೊ? ನಾನು ಈ ಮಾತುಗಳನ್ನು ಬಳಸಿದರೆ, ಅವು ಇತರರಿಗೆ ಹರ್ಷಕರವೂ ಸ್ವೀಕರಣೀಯವೂ ಆಗಿರುವವೋ?’ ತನ್ನ ಭಾವನೆಗಳು ತನ್ನ ವಿಚಾರಧಾರೆಯನ್ನು ಮಬ್ಬುಗೊಳಿಸದಂತೆ ಸೊಲೊಮೋನನು “ಹರ್ಷಕರ ಮಾತು”ಗಳಿಗಾಗಿ ಹುಡುಕಿದನು.

ಇದರ ಫಲಿತಾಂಶವಾಗಿ ಉತ್ಪನ್ನವಾದ ಪುಸ್ತಕವು ಒಂದು ಸಾಹಿತ್ಯಿಕ ಮೇರುಕೃತಿ ಆಗಿದೆ ಮಾತ್ರವಲ್ಲ, ಅದು ಜೀವನದ ಅರ್ಥದ ಬಗ್ಗೆ ದೇವಪ್ರೇರಿತ ವಿವೇಕದ ಬುಗ್ಗೆಯೂ ಆಗಿದೆ. (2 ತಿಮೊಥೆಯ 3:16, 17) ತುಂಬ ಭಾವೋದ್ರೇಕಗೊಳಿಸುವಂಥ ವಿಚಾರವನ್ನು ಚರ್ಚಿಸುವಾಗ ಸೊಲೊಮೋನನು ಬಳಸಿದ ಧಾಟಿಯು, ನಮ್ಮ ಪ್ರಿಯ ಜನರೊಂದಿಗೆ ನಾವು ಹೆಚ್ಚು ಉತ್ತಮ ರೀತಿಯಲ್ಲಿ ಸಂವಾದಮಾಡುವಂತೆ ಸಹಾಯ ಮಾಡಬಲ್ಲದೋ? ಒಂದು ಉದಾಹರಣೆ ಪರಿಗಣಿಸಿರಿ.

ನಿಮ್ಮ ಭಾವನೆಗಳನ್ನು ಅಂಕೆಯಲ್ಲಿಡಲು ಕಲಿಯಿರಿ

ದೃಷ್ಟಾಂತಕ್ಕಾಗಿ, ಒಬ್ಬ ಹುಡುಗನು ಶಾಲೆಯಿಂದ ತನ್ನ ರಿಪೋರ್ಟ್‌ ಕಾರ್ಡನ್ನು ಮನೆಗೆ ತರುತ್ತಾನೆ. ಅವನ ಮುಖ ಕಳೆಗುಂದಿದೆ. ಅವನ ತಂದೆ ಆ ಕಾರ್ಡ್‌ನಲ್ಲಿ ಸಬ್ಜೆಕ್ಟ್‌ಗಳ ಪಟ್ಟಿ ನೋಡಿ, ಒಂದು ಸಬ್ಜೆಕ್ಟ್‌ನಲ್ಲಿ ತೀರ ಕಡಿಮೆ ಅಂಕ ಪಡೆದಿರುವುದನ್ನು ಗಮನಿಸುತ್ತಾನೆ. ತಂದೆಗೆ ಕೂಡಲೇ ಸಿಟ್ಟುಬರುತ್ತದೆ. ಮಗನು ತನ್ನ ಹೋಮ್‌ವರ್ಕ್‌ ಮಾಡದಿದ್ದ ಅನೇಕ ಸಂದರ್ಭಗಳು ಅವನ ನೆನಪಿಗೆ ಬರುತ್ತವೆ. “ನೀನೊಬ್ಬ ಶುದ್ಧ ಸೋಮಾರಿ! ಹೀಗೆ ಮಾಡುತ್ತಾ ಇದ್ದರೆ, ಜೀವನದಲ್ಲಿ ನೀನೆಂದೂ ಸಫಲನಾಗುವುದಿಲ್ಲ!” ಎಂಬ ಮಾತುಗಳು ಅವನ ನಾಲಿಗೆ ತುದಿ ವರೆಗೂ ಬಂದು ನಿಲ್ಲುತ್ತವೆ.

ಆದರೆ ಸಿಟ್ಟಿನ ಭಾವನೆಗಳು ತನ್ನ ಪ್ರತಿಕ್ರಿಯೆಯನ್ನು ಬಾಧಿಸದಂತೆ ಈ ತಂದೆ ತನ್ನನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನಾನೇನು ಯೋಚಿಸುತ್ತಿದ್ದೇನೋ ಅದು ನಿಜವೋ ಇಲ್ಲವೇ ಸರಿಯೋ?’ ಈ ಪ್ರಶ್ನೆಯು, ಅವನ ಭಾವನೆಗಳು ವಾಸ್ತವಾಂಶಗಳನ್ನು ಮಬ್ಬುಗೊಳಿಸದಂತೆ ತಡೆಯಬಲ್ಲದು. (ಜ್ಞಾನೋಕ್ತಿ 17:27) ಮಗನು ಒಂದೇ ಒಂದು ಸಬ್ಜೆಕ್ಟ್‌ನಲ್ಲಿ ನಾಪಾಸಾದ ಮಾತ್ರಕ್ಕೆ ಅವನು ನಿಜವಾಗಿಯೂ ಜೀವನಪೂರ್ತಿ ಸೋಲುಣ್ಣುವನೋ? ಅವನು ಎಲ್ಲಾದ್ದರಲ್ಲೂ ಸೋಮಾರಿಯೋ, ಇಲ್ಲವೇ ಅವನಿಗೆ ಕೆಲವೊಂದು ವಿಷಯಗಳು ಅರ್ಥವಾಗದೇ ಇದ್ದದರಿಂದ ಹೋಮ್‌ವರ್ಕ್‌ ಮಾಡದೇ ಇರುತ್ತಿದ್ದನೋ? ವಿಷಯಗಳನ್ನು ನ್ಯಾಯಸಮ್ಮತ ಹಾಗೂ ವಾಸ್ತವಿಕ ನೋಟದಿಂದ ವೀಕ್ಷಿಸುವುದರ ಮೌಲ್ಯವನ್ನು ಬೈಬಲ್‌ ಪದೇ ಪದೇ ಒತ್ತಿಹೇಳುತ್ತದೆ. (ತೀತ 3:2; ಯಾಕೋಬ 3:17) ಮಕ್ಕಳನ್ನು ಬಲಗೊಳಿಸಲಿಕ್ಕಾಗಿ ಹೆತ್ತವರು “ಸತ್ಯದ ಮಾತುಗಳನ್ನು” ಆಡಬೇಕು.

ಸರಿಯಾದ ಮಾತುಗಳನ್ನು ಹುಡುಕುವುದು

ಮಗನಿಗೆ ಏನು ಹೇಳಬೇಕೆಂದು ತಂದೆ ಯೋಚಿಸಿದ ಬಳಿಕ ತನ್ನನ್ನೇ ಹೀಗೆ ಕೇಳಿಕೊಳ್ಳಬಹುದು: ‘ಇದನ್ನು ಹರ್ಷಕರ ಹಾಗೂ ಸ್ವೀಕರಣೀಯ ಮಾತುಗಳಲ್ಲಿ ನನ್ನ ಮಗನಿಗೆ ಹೇಗೆ ಹೇಳಬಹುದು?’ ಸರಿಯಾದ ಪದಗಳನ್ನು ಹುಡುಕುವುದು ಸುಲಭವಲ್ಲ ಎಂಬುದು ಒಪ್ಪತಕ್ಕದ್ದೇ. ಆದರೆ ಹೆತ್ತವರು ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ, ಹರೆಯದವರಿಗೆ ತಾವು ಎಲ್ಲದ್ದರಲ್ಲೂ ಪರಿಪೂರ್ಣರಾಗಿರಬೇಕು, ಇಲ್ಲದಿದ್ದಲ್ಲಿ ತಾವು ನಿಷ್ಪ್ರಯೋಜಕರೆಂದು ಯೋಚಿಸುವ ಪ್ರವೃತ್ತಿ ಇದೆ. ತಮ್ಮ ಯಾವುದೇ ಒಂದು ದೌರ್ಬಲ್ಯ ಇಲ್ಲವೇ ವೈಫಲ್ಯವನ್ನೇ ಗಂಭೀರವಾಗಿ ತೆಗೆದುಕೊಂಡು, ಅವರು ತಮ್ಮ ಬಗ್ಗೆ ಇರುವ ದೃಷ್ಟಿಕೋನವನ್ನೇ ಬದಲಾಯಿಸಿಕೊಳ್ಳಬಹುದು. ತಂದೆ ಅಥವಾ ತಾಯಿ ಅವರ ತಪ್ಪಿಗೆ ವಿಪರೀತ ಪ್ರತಿಕ್ರಿಯೆ ತೋರಿಸುವಲ್ಲಿ ಅದು ಮಕ್ಕಳ ನಕಾರಾತ್ಮಕ ಯೋಚನಾಧಾಟಿಯನ್ನು ಹೆಚ್ಚಿಸುವುದು. ಕೊಲೊಸ್ಸೆ 3:21 ತಿಳಿಸುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”

“ನೀನು ಯಾವಾಗಲೂ . . .” ಮತ್ತು “ನೀನೆಂದೂ . . . ” ಎಂಬ ಮಾತುಗಳು ವಾಸ್ತವಾಂಶಗಳನ್ನು ತಿಳಿಸುವುದಿಲ್ಲ ಇಲ್ಲವೇ ಅವುಗಳನ್ನು ಉತ್ಪ್ರೇಕ್ಷಿಸುತ್ತವೆ. ಹೆತ್ತವರೊಬ್ಬರು ತನ್ನ ಮಗನಿಗೆ “ನೀನು ಎಂದೂ ಪ್ರಯೋಜನಕ್ಕೆ ಬರುವವನಲ್ಲ” ಎಂದು ಹೇಳುವಾಗ ಆ ಮಗನು ತನ್ನ ಪ್ರತಿಷ್ಠೆಯನ್ನು ಹೇಗೆ ಉಳಿಸ್ಯಾನು? ಜೀವನದ ಅನೇಕ ಸನ್ನಿವೇಶಗಳನ್ನು ಅಂಥ ಟೀಕಾತ್ಮಕ ಮಾತುಗಳಿಂದ ಖಂಡಿಸುವಲ್ಲಿ, ತಾನು ನಿಷ್ಪ್ರಯೋಜಕನು ಎಂದು ಮಗನಿಗೆ ಅನಿಸಬಹುದು. ಅದು ನಿರುತ್ತೇಜಿಸುವಂಥದ್ದು ಮಾತ್ರವಲ್ಲ ಅಸತ್ಯವೂ ಆಗಿದೆ ಎಂಬುದು ನಿಜ.

ಅದಕ್ಕಿಂತಲೂ, ಯಾವುದೇ ಸನ್ನಿವೇಶದ ಸಕಾರಾತ್ಮಕ ಅಂಶಗಳಿಗೆ ಒತ್ತುನೀಡುವುದು ಹೆಚ್ಚು ಉತ್ತಮ. ನಮ್ಮ ದೃಷ್ಟಾಂತದಲ್ಲಿನ ತಂದೆಯು ಹೀಗೇನಾದರೂ ಅನ್ನಬಹುದು: “ನಿನ್ನ ಕಡಿಮೆ ಅಂಕಗಳಿಂದಾಗಿ ನಿನಗೆ ತುಂಬ ದುಃಖವಾಗಿದೆ ಅಂತ ನನಗೆ ಕಾಣ್ತದೆ ಮಗ. ಸಾಮಾನ್ಯವಾಗಿ ನಿನ್ನ ಹೋಮ್‌ವರ್ಕ್‌ ಅನ್ನು ತುಂಬ ಶ್ರದ್ಧೆಯಿಂದ ಮಾಡುತ್ತೀಯೆಂದು ನನಗೆ ಗೊತ್ತು. ಆದ್ದರಿಂದ ಈ ಸಬ್ಜೆಕ್ಟ್‌ ಬಗ್ಗೆ ಸ್ವಲ್ಪ ಮಾತಾಡೋಣ, ಮತ್ತು ನಿನಗಿರಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗ ಕಂಡುಹಿಡಿಯೋಣ.” ತನ್ನ ಮಗನಿಗೆ ಅತ್ಯುತ್ತಮ ರೀತಿಯಲ್ಲಿ ನೆರವಾಗಲಿಕ್ಕಾಗಿ ತಂದೆಯು, ಯಾವುದೇ ಮೂಲ ಸಮಸ್ಯೆಗಳಿವೆಯೋ ಎಂಬುದನ್ನು ನೋಡಲು ನಿರ್ದಿಷ್ಟ ಪ್ರಶ್ನೆಗಳನ್ನು ಸಹ ಕೇಳಬಹುದು.

ಅಂಥ ದಯಾಪರ ಹಾಗೂ ಯೋಚಿಸಿ ನುಡಿಯುವ ಮಾತುಗಳು, ಭಾವೋದ್ರೇಕದಿಂದ ಏನೇನೋ ಒದರಿಬಿಡುವ ನುಡಿಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿರುವ ಸಾಧ್ಯತೆಯಿದೆ. “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ” ಎಂದು ಬೈಬಲ್‌ ನಮಗೆ ಆಶ್ವಾಸನೆ ಕೊಡುತ್ತದೆ. (ಜ್ಞಾನೋಕ್ತಿ 16:24) ಹಾಗಾಗಿ ಸಮಾಧಾನಭರಿತ, ಪ್ರೀತಿಯ ವಾತಾವರಣದಲ್ಲಿ ಮಕ್ಕಳು ಮತ್ತು ಕುಟುಂಬದ ಎಲ್ಲ ಸದಸ್ಯರು ಸಹ ಏಳಿಗೆಹೊಂದುತ್ತಾರೆ.

“ಹೃದಯದಲ್ಲಿ ತುಂಬಿರುವದೇ” ಹೊರಗೆ ಬರುವುದು

ಲೇಖನದ ಆರಂಭದಲ್ಲಿ ತಿಳಿಸಲಾದ ಗಂಡನ ಕುರಿತಾಗಿ ಪುನಃ ಯೋಚಿಸಿರಿ. ಹೆಂಡತಿಯ ಮೇಲೆ ತನ್ನ ಹತಾಶೆಯನ್ನು ತೋರಿಸುವ ಮಾತುಗಳನ್ನು ಒದರಿಬಿಡುವ ಬದಲು ಸತ್ಯವಾದ “ಹರ್ಷಕರ ಮಾತುಗಳ” ಕುರಿತು ಯೋಚಿಸಲು ಸಮಯ ತೆಗೆದುಕೊಳ್ಳುತ್ತಿದ್ದಲ್ಲಿ ಒಳ್ಳೇದಿತ್ತಲ್ಲವೇ? ಅಂಥ ಸನ್ನಿವೇಶದಲ್ಲಿರುವ ಒಬ್ಬ ಗಂಡನು, ಸ್ವತಃ ತನಗೆ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನನ್ನ ಹೆಂಡತಿ ಸಮಯಕ್ಕೆ ಸರಿಯಾಗಿ ಬರುವ ವಿಷಯದಲ್ಲಿ ಸುಧಾರಣೆಮಾಡಬೇಕೆಂಬುದು ನಿಜವಾದರೂ, ಅವಳು ಯಾವಾಗಲೂ ತಡಮಾಡುತ್ತಾಳೆ ಎಂಬ ಮಾತು ನಿಜವೋ? ಈ ವಿಷಯವನ್ನು ಪ್ರಸ್ತಾಪಿಸಲು ಇದು ಸೂಕ್ತ ಸಮಯವೋ? ಸಿಟ್ಟಿನ, ಟೀಕಾತ್ಮಕ ಮಾತುಗಳು ಅವಳು ಸುಧಾರಿಸುವಂತೆ ಮಾಡುವವೋ?’ ಸ್ವಲ್ಪ ನಿಂತು ಇಂಥ ಪ್ರಶ್ನೆಗಳನ್ನು ನಮಗೇ ಕೇಳಿಕೊಂಡರೆ, ನಮ್ಮ ಪ್ರಿಯರನ್ನು ಅರಿವಿಲ್ಲದೆ ನೋಯಿಸದಿರಲು ಸಾಧ್ಯವಾಗುವುದು.—ಜ್ಞಾನೋಕ್ತಿ 29:11.

ಆದರೆ ನಮ್ಮ ಕುಟುಂಬ ಚರ್ಚೆಗಳು ಪದೇ ಪದೇ ದೊಡ್ಡ ಜಗಳಗಳಾಗಿ ಬಿಡುವಲ್ಲಿ ಆಗೇನು? ನಾವು ಇನ್ನೂ ಆಳಕ್ಕೆ ನೋಡಬೇಕಾದೀತು, ಅಂದರೆ ನಮ್ಮ ಮಾತುಗಳ ಹಿಂದಿರುವ ಭಾವನೆಗಳನ್ನು ಪರಿಗಣಿಸಬೇಕಾದೀತು. ನಾವು ತುಂಬ ಸಂಕಟದಲ್ಲಿರುವಾಗ ಇಲ್ಲವೇ ಒತ್ತಡದ ಕೆಳಗಿರುವಾಗ ಏನು ಹೇಳುತ್ತೇವೋ ಅದು ನಾವು ನಿಜವಾಗಿ ಆಂತರ್ಯದಲ್ಲಿ ಏನಾಗಿದ್ದೇವೆಂಬುದರ ಬಗ್ಗೆ ಬಹಳಷ್ಟನ್ನು ಬಯಲುಪಡಿಸಬಹುದು. ಯೇಸು ಹೇಳಿದ್ದು: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಮತ್ತಾಯ 12:34) ಬೇರೆ ಮಾತಿನಲ್ಲಿ ಹೇಳುವುದಾದರೆ, ಅನೇಕವೇಳೆ ನಮ್ಮ ಮಾತುಗಳು ನಮ್ಮ ಗೂಢಾಲೋಚನೆ, ಅಪೇಕ್ಷೆ ಮತ್ತು ಮನೋಭಾವಗಳ ಕೈಗನ್ನಡಿಯಾಗಿವೆ.

ಜೀವನದ ಕುರಿತಾದ ನಮ್ಮ ಹೊರನೋಟವು ನೈಜವೂ, ಆಶಾವಾದದಿಂದ ಕೂಡಿದ್ದೂ, ನಿರೀಕ್ಷೆಯುಕ್ತವೂ ಆಗಿದೆಯೋ? ಹಾಗಿರುವಲ್ಲಿ, ನಮ್ಮ ಸ್ವರ ಹಾಗೂ ಸಂಭಾಷಣೆಗಳ ವಿಷಯವು ಇದನ್ನು ಪ್ರತಿಬಿಂಬಿಸಬಹುದು. ನಾವು ಜಗ್ಗದವರೂ, ನಕಾರಾತ್ಮಕರೂ, ಟೀಕೆಮಾಡುವ ಪ್ರವೃತ್ತಿಯವರೋ? ಹಾಗಿರುವಲ್ಲಿ, ನಾವೇನು ಹೇಳುತ್ತೇವೋ ಇಲ್ಲವೇ ಅದನ್ನು ಹೇಗೆ ಹೇಳುತ್ತೇವೋ ಅದರಿಂದ ಇತರರನ್ನು ನಿರುತ್ತೇಜಿಸುತ್ತಿರಬಹುದು. ನಮ್ಮ ಆಲೋಚನಾಧಾಟಿ ಇಲ್ಲವೇ ಮಾತು ಎಷ್ಟು ನಕಾರಾತ್ಮಕ ಆಗಿದೆಯೆಂದು ನಮಗೆ ಅರಿವಾಗಲಿಕ್ಕಿಲ್ಲ. ವಿಷಯಗಳ ಕುರಿತಾದ ನಮ್ಮ ಅಭಿಪ್ರಾಯವು ಸರಿಯೆಂದೂ ನಾವು ನೆನಸುತ್ತಿರಬಹುದು. ಆದರೆ ಈ ಆತ್ಮವಂಚನೆಯ ವಿಷಯದಲ್ಲಿ ನಾವು ಎಚ್ಚರವಿರಬೇಕು.—ಜ್ಞಾನೋಕ್ತಿ 14:12.

ನಮ್ಮ ಬಳಿ ದೇವರ ವಾಕ್ಯ ಇರುವುದಕ್ಕಾಗಿ ನಾವು ಆಭಾರಿಗಳು. ನಮ್ಮ ಆಲೋಚನೆಗಳನ್ನು ಪರೀಕ್ಷಿಸಿ, ಯಾವುದು ಸರಿ, ಯಾವುದನ್ನು ಸರಿಹೊಂದಿಸಬೇಕು ಎಂಬುದನ್ನು ಗೊತ್ತುಮಾಡಲು ಬೈಬಲ್‌ ನಮಗೆ ಸಹಾಯಮಾಡಬಲ್ಲದು. (ಇಬ್ರಿಯ 4:12; ಯಾಕೋಬ 1:25) ನಮ್ಮ ಹುಟ್ಟುಸ್ವಭಾವ ಏನೇ ಆಗಿರಲಿ ಇಲ್ಲವೇ ನಾವು ಬೆಳೆಸಲ್ಪಟ್ಟಿರುವ ರೀತಿ ಯಾವುದೇ ಆಗಿರಲಿ, ನಾವೆಲ್ಲರೂ ನಮ್ಮ ಯೋಚನಾ ಹಾಗೂ ವರ್ತನಾ ರೀತಿಯನ್ನು ಮನಸ್ಸಿದ್ದಲ್ಲಿ ಬದಲಾಯಿಸಬಹುದು.—ಎಫೆಸ 4:23, 24.

ಬೈಬಲನ್ನು ಉಪಯೋಗಿಸುವುದಲ್ಲದೆ, ನಮ್ಮ ಸಂವಾದದ ಶೈಲಿಯನ್ನು ಪರೀಕ್ಷಿಸಲಿಕ್ಕಾಗಿ ನಾವು ಇನ್ನೊಂದು ಸಂಗತಿಯನ್ನು ಮಾಡಬಹುದು. ಬೇರೆಯವರಿಗೆ ಕೇಳಿ ನೋಡಿ. ಉದಾಹರಣೆಗೆ, ನಿಮ್ಮ ವಿವಾಹ ಸಂಗಾತಿ ಇಲ್ಲವೇ ಮಕ್ಕಳಿಗೆ ಈ ವಿಷಯವನ್ನು ಪ್ರಾಮಾಣಿಕವಾಗಿ ತಿಳಿಸುವಂತೆ ವಿನಂತಿಸಿರಿ. ನಿಮ್ಮ ಚಿರಪರಿಚಿತ ಪ್ರೌಢ ಸ್ನೇಹಿತರೊಂದಿಗೆ ಮಾತಾಡಿ ನೋಡಿ. ಅವರೇನು ಹೇಳುವರೋ ಅದನ್ನು ಸ್ವೀಕರಿಸಿ, ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಲಿಕ್ಕಾಗಿ ದೀನಭಾವವು ಬೇಕಾಗಿರುವುದು.

ಮಾತಾಡುವ ಮುಂಚೆ ಯೋಚಿಸಿ!

ಕೊನೆಯಲ್ಲಿ ಹೇಳುವುದಾದರೆ, ನಮ್ಮ ಮಾತಿನಿಂದ ಇತರರನ್ನು ನೋಯಿಸದಿರಲು ನಮಗೆ ನಿಜವಾಗಿಯೂ ಮನಸ್ಸಿದ್ದರೆ ಜ್ಞಾನೋಕ್ತಿ 16:23 ಏನು ಹೇಳುತ್ತದೋ ಅದನ್ನು ಮಾಡಬೇಕು: “ಬುದ್ಧಿವಂತರು [ಅಂದರೆ ವಿವೇಕಿಗಳು] ಮಾತಾಡುವ ಮುಂಚೆ ಯೋಚಿಸುತ್ತಾರೆ; ಆಗ ಅವರಾಡುವ ಮಾತು ಹೆಚ್ಚು ಮನವೊಲಿಸುವಂಥದ್ದಾಗಿರುತ್ತದೆ.” (ಟುಡೇಸ್‌ ಇಂಗ್ಲಿಷ್‌ ವರ್ಷನ್‌) ನಮ್ಮ ಭಾವನೆಗಳನ್ನು ಹದ್ದುಬಸ್ತಿನಲ್ಲಿಡುವುದು ಯಾವಾಗಲೂ ಸುಲಭ ಆಗಿರಲಿಕ್ಕಿಲ್ಲ. ಆದರೂ, ಇತರರನ್ನು ಆರೋಪಿಸುವ ಇಲ್ಲವೇ ಕೀಳಾಗಿ ಕಾಣುವ ಬದಲಿಗೆ ನಾವು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಆಗ ಮಾತಾಡಲು ಸರಿಯಾದ ನುಡಿಗಳನ್ನು ಕಂಡುಕೊಳ್ಳುವುದು ಹೆಚ್ಚು ಸುಲಭ.

ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ ನಿಜ. (ಯಾಕೋಬ 3:2) ಕೆಲವೊಮ್ಮೆ ನಾವೆಲ್ಲರೂ ಯೋಚಿಸದೇ ಮಾತಾಡುತ್ತೇವೆ. (ಜ್ಞಾನೋಕ್ತಿ 12:18) ಆದರೆ ದೇವರ ವಾಕ್ಯದ ಸಹಾಯದಿಂದ, ನಾವು ಮಾತಾಡುವ ಮುಂಚೆ ಯೋಚಿಸಲು ಮತ್ತು ನಮ್ಮ ಸ್ವಂತ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಇತರರ ಭಾವನೆಗಳಿಗೂ ಅಭಿರುಚಿಗಳಿಗೂ ಬೆಲೆಕೊಡಲು ಕಲಿಯಬಲ್ಲೆವು. (ಫಿಲಿಪ್ಪಿ 2:4) ಸತ್ಯದ “ಹರ್ಷಕರ ಮಾತು”ಗಳನ್ನು ಹುಡುಕಲು ನಾವು ದೃಢನಿರ್ಧಾರ ಮಾಡೋಣ. ಇದನ್ನು ವಿಶೇಷವಾಗಿ ಕುಟುಂಬ ಸದಸ್ಯರೊಂದಿಗೆ ಮಾತಾಡುವಾಗ ಮಾಡೋಣ. ಆಗ ನಮ್ಮ ಮಾತು ನೋಯಿಸುವಂಥದ್ದೂ ಇಲ್ಲವೇ ಕೆಡಹುವಂಥದ್ದು ಆಗಿರುವುದಿಲ್ಲ ಬದಲಾಗಿ ನಮ್ಮ ಪ್ರಿಯ ಜನರಿಗೆ ವಾಸಿಕಾರಕವೂ ಬಲವರ್ಧಕವೂ ಆಗಿರುವುದು.—ರೋಮಾಪುರ 14:19. (w08 1/1)

[ಪುಟ 12ರಲ್ಲಿರುವ ಚಿತ್ರ]

ವಿಷಾದಪಡಬೇಕಾದ ಮಾತುಗಳನ್ನಾಡುವುದರಿಂದ ನೀವು ಹೇಗೆ ದೂರವಿರಬಲ್ಲಿರಿ?