ಘರ್ಷಣೆಗಳನ್ನು ಬಗೆಹರಿಸುವುದು
ಕುಟುಂಬ ಸಂತೋಷಕ್ಕೆ ಕೀಲಿಕೈಗಳು
ಘರ್ಷಣೆಗಳನ್ನು ಬಗೆಹರಿಸುವುದು
ಗಂಡ: “ನಮ್ಮ ಮದುವೆಯ ಬಳಿಕ ನಾವಿಬ್ಬರೂ ನನ್ನ ತಂದೆತಾಯಿಯೊಂದಿಗೆ ವಾಸಿಸುತ್ತಿದ್ದೆವು. ಒಂದು ದಿನ ನಮ್ಮ ಮನೆಗೆ ಬಂದಿದ್ದ ನನ್ನ ತಮ್ಮನ ಸ್ನೇಹಿತೆಯು ಆಕೆಯ ಮನೆವರೆಗೆ ನಮ್ಮ ಕಾರಿನಲ್ಲಿ ಬಿಟ್ಟುಬರುವಂತೆ ಕೇಳಿಕೊಂಡಳು. ಅವಳಿಗೆ ಸಹಾಯಮಾಡುವ ಉದ್ದೇಶದಿಂದ ನಾನು ನಮ್ಮ ಚಿಕ್ಕ ಮಗನನ್ನು ಜೊತೆಗೆ ಕರಕೊಂಡು ಹೋದೆ. ಆದರೆ, ವಾಪಾಸ್ಸು ಬಂದು ಮನೆಯೊಳಗೆ ಕಾಲಿಟ್ಟಕೂಡಲೇ ನನ್ನ ಹೆಂಡತಿ ರೇಗಾಡತೊಡಗಿದಳು. ನಮ್ಮಿಬ್ಬರ ನಡುವೆ ದೊಡ್ಡ ವಾಗ್ವಾದವೇ ಶುರುವಾಯಿತು. ಅವಳು ಮನೆಯಲ್ಲಿ ಎಲ್ಲರ ಮುಂದೆ, ನಾನು ಹುಡುಗಿರ ಹಿಂದೆ ಹೋಗುವವನು ಎಂದು ಹೇಳಿಬಿಟ್ಟಳು. ನನಗೆ ಸಿಟ್ಟು ತಡಕೊಳ್ಳಲಿಕ್ಕಾಗಲಿಲ್ಲ, ಅವಳನ್ನು ಬೈಯಲಾರಂಭಿಸಿದೆ. ಇದರಿಂದ ಅವಳ ಕೋಪ ಮತ್ತಷ್ಟು ಕೆರಳಿತು.”
ಹೆಂಡತಿ: “ನಮ್ಮ ಮಗ ಯಾವಾಗಲೂ ಕಾಯಿಲೆ ಬೀಳುತ್ತಿರುತ್ತಾನೆ. ಆ ಸಮಯದಲ್ಲಿ ಹಣದ ತೊಂದರೆ ಸಹ ಇತ್ತು. ಇಂಥ ಪರಿಸ್ಥಿತಿಯಲ್ಲಿ ಅವರು ಮಗನನ್ನು ಕರಕೊಂಡು ಅವರ ತಮ್ಮನ ಸ್ನೇಹಿತೆಯೊಂದಿಗೆ ಕಾರಿನಲ್ಲಿ ಹೊರಟಾಗ ಅನೇಕ ಕಾರಣಗಳಿಂದ ನನಗೆ ತುಂಬಾ ರೇಗಿಹೋಯಿತು. ಅವರು ಮನೆಗೆ ಬಂದಾಗ ಮನಸ್ಸಿನಲ್ಲಿದ್ದದ್ದೆಲ್ಲವನ್ನು ಹೇಳಿಬಿಟ್ಟೆ. ಇಬ್ಬರೂ ಸಿಕ್ಕಾಪಟ್ಟೆ ಕಿರುಚಾಡಿ, ಕೆಟ್ಟಕೆಟ್ಟಮಾತುಗಳನ್ನು ಆಡಿಬಿಟ್ಟೆವು. ಆಮೇಲೆ ತುಂಬಾ ದುಃಖವಾಯಿತು.”
ದಂಪತಿಗಳ ನಡುವೆ ಇಂಥ ವಾಗ್ವಾದ ನಡೆದಾಗ, ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿಲ್ಲ ಎಂದು ಅರ್ಥವೋ? ಇಲ್ಲ! ಮೇಲೆ ತಿಳಿಸಲಾದ ದಂಪತಿ ಪರಸ್ಪರ ತುಂಬಾ ಗಾಢವಾಗಿ ಪ್ರೀತಿಸುತ್ತಾರೆ. ದಂಪತಿಗಳು ಎಷ್ಟೇ ಒಳ್ಳೆಯವರಾಗಿದ್ದರೂ ಕೆಲವೊಮ್ಮೆ ವಾಗ್ವಾದಗಳು ಹುಟ್ಟಿಕೊಳ್ಳುವುದು ಸಹಜ.
ವಾಗ್ವಾದಗಳು ಹುಟ್ಟಿಕೊಳ್ಳಲು ಕಾರಣವೇನು? ಅದು ನಿಮ್ಮ ದಾಂಪತ್ಯ ಜೀವನವನ್ನು ಹಾಳುಮಾಡದಂತೆ ನೀವು ಹೇಗೆ ನೋಡಿಕೊಳ್ಳಬಲ್ಲಿರಿ? ವಿವಾಹದ ಏರ್ಪಾಡನ್ನು ಮಾಡಿದಾತನು ದೇವರಾಗಿರುವುದರಿಂದ, ಇಂಥ ವಿಷಯಗಳ ಬಗ್ಗೆ ಆತನ ವಾಕ್ಯವಾದ ಬೈಬಲ್ ಏನು ಹೇಳುತ್ತದೆಂದು ಪರೀಕ್ಷಿಸುವುದು ಉಚಿತವಾಗಿದೆ.—ಆದಿಕಾಂಡ 2:21, 22; 2 ತಿಮೊಥೆಯ 3:16, 17.
ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು
ಹೆಚ್ಚಿನ ದಂಪತಿಗಳು ಪರಸ್ಪರ ಪ್ರೀತಿವಿಶ್ವಾಸ ತೋರಿಸಲು ಬಯಸುತ್ತಾರೆ. ಆದರೆ, ಬೈಬಲ್ ತಿಳಿಸುವ ಒಂದು ನಿಜ ಸಂಗತಿಯೇನೆಂದರೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಆದುದರಿಂದ, ಭಿನ್ನಾಭಿಪ್ರಾಯಗಳು ಏಳುವಾಗ ಭಾವನೆಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಮಾತ್ರವಲ್ಲ, ವಾಗ್ವಾದ ಆರಂಭವಾದಾಗ ಕಿರುಚಾಟ, ಬೈಯ್ಗುಳಕ್ಕೆ ಕಡಿವಾಣ ಹಾಕಲು ಕೆಲವರಿಗೆ ತುಂಬಾ ಕಷ್ಟವಾಗಬಹುದು. (ರೋಮಾಪುರ 7:21; ಎಫೆಸ 4:31) ಬೇರೆ ಯಾವ ವಿಷಯಗಳು ಸಹ ಒತ್ತಡ ತರುತ್ತವೆ?
ಅನೇಕವೇಳೆ ಗಂಡ-ಹೆಂಡತಿ ಮಾತಾಡುವ ಶೈಲಿ ಭಿನ್ನವಾಗಿರುತ್ತದೆ. ಮೀಚೀಕೋ * ಎಂಬಾಕೆ ಹೇಳುವುದನ್ನು ಕೇಳಿ: “ಮದುವೆಯಾದ ಹೊಸತರಲ್ಲಿ, ನಾವಿಬ್ಬರೂ ವಿಷಯಗಳನ್ನು ಚರ್ಚಿಸುವ ರೀತಿ ಬೇರೆಬೇರೆಯಾಗಿತ್ತೆಂದು ನಾನು ಕಂಡುಕೊಂಡೆ. ಏನು ನಡೆಯಿತೆಂದು ಮಾತ್ರವಲ್ಲ, ಯಾಕಾಯಿತು ಮತ್ತು ಹೇಗಾಯಿತು ಎಂದು ಹೇಳಲು ನಾನು ಇಷ್ಟಪಟ್ಟೆ. ಆದರೆ ನಮ್ಮವರಿಗೆ ಕೊನೆಗೇನಾಯಿತು ಎಂದಷ್ಟನ್ನೇ ತಿಳಿಯಲು ಆಸಕ್ತಿಯಿತ್ತೆಂದು ಕಾಣಿಸುತ್ತದೆ.”
ಮೀಚೀಕೋಗಿದ್ದಂಥ ರೀತಿಯ ಸಮಸ್ಯೆಯೇನೂ ಹೊಸತಲ್ಲ. ಅನೇಕ ದಂಪತಿಗಳಲ್ಲಿ, ಒಬ್ಬರು ಭಿನ್ನಾಭಿಪ್ರಾಯಗಳನ್ನು ಸವಿವರವಾಗಿ ಚರ್ಚಿಸಲು ಇಷ್ಟಪಟ್ಟರೆ, ಇನ್ನೊಬ್ಬರು ಅದರ ಬಗ್ಗೆ ಮಾತನ್ನೇ ಎತ್ತದಿರಲು ಬಯಸುತ್ತಾರೆ. ಕೆಲವೊಮ್ಮೆ ಆ ವಿಷಯದ ಕುರಿತು ಒಬ್ಬರು ಹೆಚ್ಚು ಮಾತಾಡಿದಷ್ಟೂ ಇನ್ನೊಬ್ಬರು ಅದರ ಬಗ್ಗೆ ಚಕಾರವೆತ್ತದೆ ದೂರವಿಡಲು ಪ್ರಯತ್ನಿಸುತ್ತಾರೆ. ಇದು ನಿಮ್ಮ ದಾಂಪತ್ಯ ಜೀವನದಲ್ಲಿಯೂ ನಡೆಯುತ್ತಿದೆಯೆಂದು ನಿಮಗನಿಸುತ್ತಿದೆಯೋ? ನಿಮ್ಮಲ್ಲಿ ಒಬ್ಬರು ಸವಿವರವಾದ ಚರ್ಚೆಯನ್ನು ಇಷ್ಟಪಟ್ಟರೆ, ಇನ್ನೊಬ್ಬರಿಗೆ ಅಂಥ ಚರ್ಚೆ ಬೇಡವೇ ಬೇಡವಾಗಿದೆಯೋ?
ಗಮನಿಸಬೇಕಾದ ಇನ್ನೊಂದು ವಿಷಯವೇನಂದರೆ, ದಂಪತಿಗಳ
ನಡುವಿನ ಮಾತುಕತೆ ಹೇಗಿರಬೇಕೆಂಬುದರ ಕುರಿತಾದ ಒಬ್ಬರ ತಿಳಿವಳಿಕೆಯ ಮೇಲೆ ಅವನ/ಳ ಕೌಟುಂಬಿಕ ಹಿನ್ನೆಲೆ ಪ್ರಭಾವ ಬೀರಬಹುದು. ವಿವಾಹವಾಗಿ ಐದು ವರ್ಷಗಳಾಗಿರುವ ಜಸ್ಟನ್ ಎಂಬಾತ ಹೇಳುವುದು: “ಹೆಚ್ಚು ಮಾತನಾಡದ ಸ್ವಭಾವವಿದ್ದ ಕುಟುಂಬದಲ್ಲಿ ನಾನು ಬೆಳೆದೆ. ಹಾಗಾಗಿ ನನ್ನ ಭಾವನೆಗಳನ್ನು ಮನಬಿಚ್ಚಿ ಹೇಳಲು ನನಗೆ ಕಷ್ಟ. ಇದರಿಂದ ನನ್ನ ಹೆಂಡತಿಗೆ ತುಂಬಾ ಇರಿಸುಮುರಿಸಾಗುತ್ತದೆ. ಅವಳ ಕುಟುಂಬದವರೆಲ್ಲರೂ ಮನಬಿಚ್ಚಿ ಮಾತಾಡುವವರಾಗಿದ್ದಾರೆ. ನನ್ನ ಹೆಂಡತಿ ಅವಳ ಭಾವನೆಗಳನ್ನು ನಿಮಿಷಮಾತ್ರದಲ್ಲಿ ಸುಲಭವಾಗಿ ಹೇಳಿಬಿಡುತ್ತಾಳೆ.”ಸಮಸ್ಯೆಗಳನ್ನು ಏಕೆ ಇಬ್ಬರೂ ಸೇರಿ ಪರಿಹರಿಸಬೇಕು?
ದಂಪತಿಗಳು ಎಷ್ಟು ಬಾರಿ ಪರಸ್ಪರ ಪ್ರೀತಿಸುತ್ತೇವೆಂದು ಹೇಳಿಕೊಳ್ಳುತ್ತಾರೆ ಎಂಬುದಷ್ಟೇ ಸಂತೋಷದ ವಿವಾಹ ಜೀವನಕ್ಕಿರುವ ಉತ್ತಮ ಸೂಚಕವಾಗಿರುವುದಿಲ್ಲವೆಂದು ಸಂಶೋಧಕರು ಕಂಡುಕೊಂಡಿದ್ದಾರೆ. ದಂಪತಿಗಳ ಮಧ್ಯೆಯಿರುವ ಲೈಂಗಿಕ ಆಕರ್ಷಣೆ ಮತ್ತು ಸಾಕಷ್ಟು ಹಣ ಹೊಂದಿರುವುದು ಸಹ ಅತಿ ಪ್ರಧಾನ ವಿಷಯವೆಂದು ಹೇಳಲಾಗದು. ಬದಲಿಗೆ, ಪತಿಪತ್ನಿಯರ ಮಧ್ಯೆ ತಲೆದೋರುವ ಘರ್ಷಣೆಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಯಶಸ್ವೀ ವಿವಾಹಕ್ಕಿರುವ ಅತ್ಯುತ್ತಮ ಸೂಚಕವಾಗಿದೆ.
ಅಲ್ಲದೆ, ಗಂಡು-ಹೆಣ್ಣು ವಿವಾಹವಾಗುವಾಗ ಆ ಬಾಂಧವ್ಯವನ್ನು ದೇವರು ಕೂಡಿಸುತ್ತಾನೆಯೇ ಹೊರತು ಮನುಷ್ಯರಾರು ಅಲ್ಲ ಎಂದು ಯೇಸು ಹೇಳಿದನು. (ಮತ್ತಾಯ 19:4-6) ಆದುದರಿಂದ ಸುಖೀ ದಾಂಪತ್ಯವು ದೇವರನ್ನು ಘನಪಡಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಗಂಡನೊಬ್ಬನು ತನ್ನ ಹೆಂಡತಿಗೆ ಪ್ರೀತಿ-ಪರಿಗಣನೆ ತೋರಿಸದಿದ್ದರೆ, ಯೆಹೋವ ದೇವರು ಅವನ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳನು. (1 ಪೇತ್ರ 3:7) ತದ್ರೀತಿ, ಹೆಂಡತಿಯು ತನ್ನ ಗಂಡನಿಗೆ ಗೌರವ ತೋರಿಸದಿದ್ದರೆ, ಗಂಡನನ್ನು ಕುಟುಂಬದ ತಲೆಯನ್ನಾಗಿ ನೇಮಿಸಿದ ಯೆಹೋವನಿಗೆ ಅವಳು ನಿಜವಾಗಿಯೂ ಗೌರವ ತೋರಿಸದಂತಾಗುತ್ತದೆ.—1 ಕೊರಿಂಥ 11:3.
ಯಶಸ್ಸಿನ ಕೀಲಿಕೈಗಳು— ಮನನೋಯಿಸುವ ಮಾತುಗಳನ್ನು ಆಡಬೇಡಿ
ನಿಮ್ಮ ಮಾತಿನ ಧಾಟಿ ಹೇಗೆಯೇ ಇರಲಿ ಅಥವಾ ನಿಮ್ಮ ಕುಟುಂಬದ ಹಿನ್ನೆಲೆ ಏನೇ ಆಗಿರಲಿ, ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿ ಘರ್ಷಣೆಗಳನ್ನು ಬಗೆಹರಿಸಬೇಕಾದರೆ ಮನನೋಯಿಸುವ ಮಾತುಗಳನ್ನು ಬಳಸಲೇಬಾರದು. ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ:
▪ ‘ಪ್ರತಿವಾದ ಮಾಡುವ ಪ್ರೇರಣೆಯನ್ನು ನಾನು ನಿಗ್ರಹಿಸುತ್ತೇನೋ?’ “ಮೂಗು ಹಿಂಡುವದರಿಂದ ರಕ್ತ, ಕೋಪಕಲಕುವದರಿಂದ ಜಗಳ” ಎಂದು ಒಂದು ಗಾದೆ ಹೇಳುತ್ತದೆ. (ಜ್ಞಾನೋಕ್ತಿ 30:33) ಏನಿದರ ಅರ್ಥ? ಈ ಉದಾಹರಣೆಯನ್ನು ಗಮನಿಸಿ. ಕುಟುಂಬದ ಖರ್ಚನ್ನು ಸರಿದೂಗಿಸುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯವು (“ನಮ್ಮ ಖರ್ಚನ್ನು ಸ್ವಲ್ಪ ಕಡಿಮೆ ಮಾಡಬೇಕು”) ಬೇಗನೆ ಒಬ್ಬರನ್ನೊಬ್ಬರು ದೂಷಿಸುವ ಸ್ವರೂಪ (“ನೀನು/ವು ತುಂಬಾ ಬೇಜವಾಬ್ದಾರಿಯವಳು/ರು”) ತಾಳಬಹುದು. ನಿಮ್ಮ ಸಂಗಾತಿಯು ನಿಮ್ಮ ವ್ಯಕ್ತಿತ್ವವನ್ನು ದೂಷಿಸುವ ಮೂಲಕ ‘ನಿಮ್ಮ ಮೂಗು ಹಿಂಡುವಾಗ,’ ತಿರುಗಿ “ಹಿಂಡುವ” ಪ್ರಚೋದನೆ ನಿಮಗೂ ಉಂಟಾಗಬಹುದು. ಆದರೆ, ಮಾತಿನ ತಿರುಗೇಟು ವಿಕೋಪಕ್ಕೆ ನಡೆಸಿ ಭಿನ್ನಾಭಿಪ್ರಾಯದ ಬಿರುಕನ್ನು ಇನ್ನಷ್ಟು ಅಗಲ ಮಾಡುತ್ತದೆ.
ಬೈಬಲ್ ಬರಹಗಾರ ಯಾಕೋಬನ ಎಚ್ಚರಿಕೆಯ ಮಾತನ್ನು ಗಮನಿಸಿ: “ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ. ನಾಲಿಗೆಯೂ ಕಿಚ್ಚೇ.” (ಯಾಕೋಬ 3:5, 6) ದಂಪತಿಗಳು ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಡದಿದ್ದರೆ, ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಸಹ ವ್ಯಗ್ರ ಘರ್ಷಣೆಗಳಾಗಿ ಉರಿಯಬಹುದು. ಅಲ್ಲದೆ, ದಾಂಪತ್ಯ ಜೀವನದಲ್ಲಿ ಇಂಥ ವಾಗ್ವಾದದ ಜ್ವಾಲೆ ಪದೇಪದೇ ತೋರಿಬರುವಲ್ಲಿ ಪ್ರೀತಿ ಅರಳಲು ಸಾಧ್ಯವಿಲ್ಲ.
ನೀವು ಮುಯ್ಯಿ ತೀರಿಸುವ ಬದಲು, ತನ್ನನ್ನು ನಿಂದಿಸಿದ ಜನರಿಗೆ ‘ಪ್ರತಿಯಾಗಿ ಬೈಯದ’ ಯೇಸುವನ್ನು ಅನುಕರಿಸಬಲ್ಲಿರೋ? (1 ಪೇತ್ರ 2:23) ವಾಗ್ವಾದದ ಜ್ವಾಲೆಯನ್ನು ನಂದಿಸಿಬಿಡುವ ಸುಲಭಮಾರ್ಗವೆಂದರೆ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಭಿನ್ನಾಭಿಪ್ರಾಯವು ಘರ್ಷಣೆಯಾಗಿ ಮಾರ್ಪಡಲು ನೀವು ನೀಡಿದ ಕುಮ್ಮಕ್ಕಿಗಾಗಿ ಕ್ಷಮೆಯಾಚಿಸುವುದಾಗಿದೆ.
ಇದನ್ನು ಪ್ರಯತ್ನಿಸಿ ನೋಡಿ: ಮುಂದಿನ ಸಲ ವಾಗ್ವಾದ ಆರಂಭವಾಗುವಾಗ ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ನನ್ನ ಸಂಗಾತಿಯ ಭಾವನೆಗಳನ್ನು ಒಪ್ಪಿಕೊಳ್ಳುವುದರಿಂದ ನನಗೇನಾದರೂ ನಷ್ಟವಾಗುತ್ತದೋ? ಸಮಸ್ಯೆ ಇಷ್ಟೊಂದು ಹದಗೆಟ್ಟಿದ್ದರಲ್ಲಿ ನನ್ನದೆಷ್ಟು ಪಾಲಿದೆ? ನನ್ನಿಂದಾದ ತಪ್ಪಿಗೆ ನಾನೇಕೆ ಇನ್ನೂ ಕ್ಷಮೆಕೋರುತ್ತಿಲ್ಲ?’
▪ ‘ನನ್ನ ಸಂಗಾತಿಯ ಭಾವನೆಗಳಿಗೆ ನಾನು ಬೆಲೆ ಕೊಡುತ್ತಿಲ್ಲವೇ ಅಥವಾ ಅದನ್ನು ಕಡೆಗಣಿಸುತ್ತೇನೋ?’ “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ” ಎಂದು ದೇವರ ವಾಕ್ಯ ಆಜ್ಞಾಪಿಸುತ್ತದೆ. (1 ಪೇತ್ರ 3:8) ಈ ಬುದ್ಧಿವಾದವನ್ನು ನೀವು ಅನ್ವಯಮಾಡಿಕೊಳ್ಳದಿರಲು ಎರಡು ಕಾರಣಗಳಿರಬಹುದು. ಒಂದು, ನೀವು ನಿಮ್ಮ ಸಂಗಾತಿಯ ಮನಸ್ಸನ್ನು ಮತ್ತು ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿರದೇ ಇರಬಹುದು. ಉದಾಹರಣೆಗೆ, ಯಾವುದಾದರೂ ಒಂದು ವಿಷಯದಲ್ಲಿ ನಿಮ್ಮ ಸಂಗಾತಿ ನಿಮಗಿಂತಲೂ ಹೆಚ್ಚು ಚಿಂತೆ ಮಾಡುತ್ತಿರುವಲ್ಲಿ, “ನೀನು ಸುಮ್ಮನೆ ತಲೆಕೆಡಿಸಿಕೊಳ್ಳುತ್ತಿಯಾ” ಎಂದು ನೀವು ಹೇಳಿಬಿಡಬಹುದು. ಅವರು ಸರಿಯಾದ ದೃಷ್ಟಿಕೋನದಿಂದ ಆ ಸಮಸ್ಯೆಯನ್ನು ನೋಡಲಿ ಎಂಬ ಉದ್ದೇಶದಿಂದಲೇ ನೀವು ಹೇಳಿರಬಹುದು. ಆದರೆ, ಅಂಥ ಮಾತು ಕೇವಲ ಕೆಲವರನ್ನು ಮಾತ್ರ ಸಂತೈಸುತ್ತದೆ. ಪತಿಪತ್ನಿಯರಿಬ್ಬರೂ ತಮ್ಮೊಲವಿನ ಸಂಗಾತಿ ತಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ಅರಿತಿರಬೇಕು.
ಮಿತಿಮೀರಿದ ಸ್ವಾಭಿಮಾನ ಸಹ ಸಂಗಾತಿಯ ಭಾವನೆಗಳನ್ನು ಕಡೆಗಣಿಸುವುದಕ್ಕೆ ಕಾರಣವಾಗಿರಬಹುದು. ಅಹಂಕಾರಿಯು ಇತರರನ್ನು ಕಡೆಗಣಿಸುತ್ತಾ ತನ್ನನ್ನೇ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಅವನು ಇತರರನ್ನು ಅವಹೇಳನ ಮಾಡಬಹುದು ಇಲ್ಲವೆ ತರವಲ್ಲದ ರೀತಿಯಲ್ಲಿ ಹೋಲಿಸಬಹುದು. ಉದಾಹರಣೆಗೆ, ಯೇಸುವಿನ ಕಾಲದಲ್ಲಿದ್ದ ಫರಿಸಾಯರು ಮತ್ತು ಶಾಸ್ತ್ರಿಗಳನ್ನು ತೆಗೆದುಕೊಳ್ಳಿ. ಅಹಂಭಾವದ ಫರಿಸಾಯರು ಅಥವಾ ಶಾಸ್ತ್ರಿಗಳು ತಾವು ಹೇಳಿದ ವಿಷಯಕ್ಕೆ ವ್ಯತಿರಿಕ್ತ ಅಭಿಪ್ರಾಯವನ್ನು ಬೇರೊಬ್ಬನಾಗಲಿ ಅಷ್ಟೇಕೆ, ಜೊತೆ ಫರಿಸಾಯನೇ ಆಗಲಿ ಹೇಳಿದರೆ, ಅವಮಾನದ ಮಾತುಗಳನ್ನು ಹೇಳುತ್ತಾ ನಿಂದಿಸುತ್ತಿದ್ದರು. (ಯೋಹಾನ 7:45-52) ಆದರೆ, ಯೇಸು ಇವರಿಗಿಂಥ ಭಿನ್ನನಾಗಿದ್ದನು. ಇತರರು ತಮ್ಮ ಭಾವನೆಗಳನ್ನು ಹಂಚಿಕೊಂಡಾಗ ಅವನು ಅದನ್ನು ಪೂರ್ಣವಾಗಿ ಅರ್ಥಮಾಡಿಕೊಂಡನು.—ಮತ್ತಾಯ 20:29-34; ಮಾರ್ಕ 5:25-34.
ನಿಮ್ಮ ಸಂಗಾತಿಯು ತನ್ನ ಭಾವನೆಗಳನ್ನು ತೋಡಿಕೊಳ್ಳುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಕುರಿತು ಯೋಚಿಸಿರಿ. ನಿಮ್ಮ ಮಾತು, ಸ್ವರ ಮತ್ತು ಮುಖಭಾವ ಪರಾನುಭೂತಿಯನ್ನು ಹೊರಸೂಸುತ್ತದೋ? ಅಥವಾ ನಿಮ್ಮ ಸಂಗಾತಿಯ ಭಾವನೆಗಳನ್ನು ಕೂಡಲೇ ತಳ್ಳಿಬಿಡುತ್ತೀರೋ?
ಇದನ್ನು ಪ್ರಯತ್ನಿಸಿ ನೋಡಿ: ಮುಂಬರುವ ವಾರಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡುತ್ತೀರಿ ಎಂಬುದರ ಮೇಲೆ ಗಮನವಿಡಿ. ಸಂಗಾತಿಯ ಮಾತಿಗೆ ಲಕ್ಷ್ಯಕೊಡದಿದ್ದರೆ ಅಥವಾ ಕೊಂಕು ಮಾತುಗಳನ್ನು ಆಡಿದರೆ ಆ ಕೂಡಲೇ ಕ್ಷಮೆಯಾಚಿಸಿ.
▪ ‘ನನ್ನ ಸಂಗಾತಿ ಸ್ವಾರ್ಥಿಯಾಗಿದ್ದಾಳೆ/ರೆ ಎಂದು ಆಗಾಗ ನನಗನಿಸುತ್ತದೋ?’ “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ.” (ಯೋಬ 1:9, 10) ಸೈತಾನನು ಈ ಮಾತುಗಳನ್ನು ಹೇಳುತ್ತಾ ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನ ಉದ್ದೇಶಗಳನ್ನು ಪ್ರಶ್ನಿಸಿದನು.
ದಂಪತಿಗಳು ಜಾಗರೂಕರಾಗಿಲ್ಲದಿರುವಲ್ಲಿ ಇಂಥ ಸ್ವಭಾವ ಅವರಲ್ಲೂ ನುಸುಳಬಹುದು. ಉದಾಹರಣೆಗೆ, ನಿಮಗೋಸ್ಕರ ನಿಮ್ಮ ಸಂಗಾತಿಯು ಏನಾದರೂ ಒಳ್ಳೆದನ್ನು ಮಾಡಿದರೆ, ಅದನ್ನು ಲಾಭದ ಉದ್ದೇಶದಿಂದಲೇ ಮಾಡಿರಬೇಕೆಂದು ನೀವು ಯೋಚಿಸುತ್ತೀರೋ? ಇಲ್ಲವೆ, ಯಾವುದೋ ವಿಷಯವನ್ನು ನಿಮ್ಮಿಂದ ಮರೆಮಾಚಲಿಕ್ಕಾಗಿ ಅದನ್ನು ಮಾಡಿರಬೇಕೆಂದು ನೀವು ಭಾವಿಸುತ್ತೀರೋ? ನಿಮ್ಮ ಸಂಗಾತಿ ಯಾವುದಾದರೊಂದು ತಪ್ಪು ಮಾಡುವುದಾದರೆ, ಅವರಿಗೆ ನಿಮ್ಮ ಮೇಲೆ ಸ್ವಲ್ಪವೂ ಒಲವಿಲ್ಲ ಅಥವಾ ಸ್ವಾರ್ಥಿಯಾಗಿದ್ದಾರೆ ಎಂಬುದಕ್ಕೆ ಅದನ್ನು ಸಾಕ್ಷ್ಯವೆಂದೆಣಿಸುತ್ತೀರೋ? ನೀವು ತಕ್ಷಣವೇ ತದ್ರೀತಿಯ ಹಿಂದಿನ ತಪ್ಪೊಂದನ್ನು ನೆನಪಿಗೆ ತಂದುಕೊಂಡು ಅದಕ್ಕೆ ಇದನ್ನು ಕೂಡಿಸುತ್ತೀರೋ?
ಇದನ್ನು ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿಯು ನಿಮಗೆಂದೇ ಮಾಡಿದ ಪ್ರಶಾಂಸಾರ್ಹ ವಿಷಯಗಳನ್ನು ಮತ್ತು ಅದರ ಹಿಂದಿನ ಸದುದ್ದೇಶವೇನೆಂದು ಪಟ್ಟಿಮಾಡಿರಿ.
ಅಪೊಸ್ತಲ ಪೌಲನು ಬರೆದದ್ದು: “ಪ್ರೀತಿ . . . ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” (1 ಕೊರಿಂಥ 13:4, 5) ನಿಜ ಪ್ರೀತಿಗೆ ಅಪರಿಪೂರ್ಣತೆ ಮತ್ತು ತಪ್ಪುಗಳು ಕಾಣಿಸುವುದಿಲ್ಲ ಎಂದಲ್ಲ. ಆದರೆ, ಅದು ಅವುಗಳನ್ನು ಎಂದಿಗೂ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಪ್ರೀತಿಯು “ಎಲ್ಲವನ್ನೂ ನಂಬುತ್ತದೆ” ಎಂದು ಪೌಲನು ಹೇಳಿದನು. (1 ಕೊರಿಂಥ 13:7) ಅಂದರೆ ಇಂಥ ಪ್ರೀತಿಯನ್ನು ಸುಲಭವಾಗಿ ವಂಚಿಸಬಹುದೆಂದಲ್ಲ, ಬದಲಿಗೆ ಅದು ನಂಬಲು ಸದಾ ಸಿದ್ಧವಾಗಿರುತ್ತದೆ. ಅದು ತಪ್ಪು ಹುಡುಕುವುದಿಲ್ಲ, ಸಂದೇಹವನ್ನೂ ಪಡುವುದಿಲ್ಲ. ಬೈಬಲ್ ಉತ್ತೇಜಿಸುವಂಥ ರೀತಿಯ ಪ್ರೀತಿಯು ಕ್ಷಮಿಸಲು ಮತ್ತು ಇತರರ ಉದ್ದೇಶ ಕೆಟ್ಟದಲ್ಲ, ಒಳ್ಳೆದಾಗಿದೆಯೆಂದು ಯೋಚಿಸಲು ಸಿದ್ಧವಾಗಿರುತ್ತದೆ. (ಕೀರ್ತನೆ 86:5; ಎಫೆಸ 4:32) ಸಂಗಾತಿಗಳು ಪರಸ್ಪರ ಇಂಥ ಪ್ರೀತಿಯನ್ನು ತೋರಿಸುವಲ್ಲಿ ಸುಖ ದಾಂಪತ್ಯದಲ್ಲಿ ಆನಂದಿಸುವರು. (w08 2/1)
ಹೀಗೆ ಕೇಳಿಕೊಳ್ಳಿ . . .
▪ ಈ ಲೇಖನದ ಆರಂಭದಲ್ಲಿ ತಿಳಿಸಲಾದ ದಂಪತಿಗಳು ಯಾವ ತಪ್ಪುಗಳನ್ನು ಮಾಡಿದರು?
▪ ಆ ತಪ್ಪುಗಳನ್ನು ನನ್ನ ದಾಂಪತ್ಯ ಜೀವನದಲ್ಲಿ ಹೇಗೆ ಮಾಡದಿರುವೆ?
▪ ಈ ಲೇಖನದಲ್ಲಿ ತಿಳಿಸಲಾಗಿರುವ ಯಾವೆಲ್ಲ ಸಲಹೆಗಳನ್ನು ನಾನು ಅನ್ವಯಿಸಿಕೊಳ್ಳಲೇಬೇಕಾಗಿದೆ?
[ಪಾದಟಿಪ್ಪಣಿ]
^ ಪ್ಯಾರ. 9 ಹೆಸರುಗಳನ್ನು ಬದಲಾಯಿಸಲಾಗಿದೆ.