ದೇವರ ಮಕ್ಕಳಲ್ಲಿ ಒಬ್ಬರಾಗುವುದು
ದೇವರ ಮಕ್ಕಳಲ್ಲಿ ಒಬ್ಬರಾಗುವುದು
ಕೊರಿಯನ್ ಯುದ್ಧದ ಸಮಯದಲ್ಲಿ ಕಳೆದುಹೋದ ಜನರನ್ನು ಪತ್ತೆಹಚ್ಚುವಂತೆ ಸುಮಾರು 30 ವರ್ಷಗಳ ಬಳಿಕ ‘ಕೊರಿಯನ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್’ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಇದರ ಫಲಿತಾಂಶ? 11,000ಕ್ಕಿಂತ ಹೆಚ್ಚು ಮಂದಿ ತಮ್ಮ ಪ್ರಿಯ ಕುಟುಂಬ ಸದಸ್ಯರನ್ನು ತಬ್ಬಿಕೊಳ್ಳುತ್ತಾ, ಕೇಕೆಹಾಕುತ್ತಾ, ಆನಂದಾಶ್ರುಗಳನ್ನು ಸುರಿಸುತ್ತಾ ಅವರೊಂದಿಗೆ ಮತ್ತೆ ಒಂದಾದರು. ಕೊರಿಯ ಟೈಮ್ಸ್ ವಾರ್ತಾಪತ್ರಿಕೆಯು ವರದಿಸಿದ್ದು: “ಇತಿಹಾಸದಲ್ಲಿ ಹಿಂದೆಂದೂ ಕೊರಿಯದ ಜನರು ಒಮ್ಮೆಲೆ ಇಷ್ಟೊಂದು ಆನಂದಬಾಷ್ಪ ಹರಿಸಿದ್ದಿಲ್ಲ.”
ಬ್ರಸಿಲ್ ದೇಶದ ಸೇಜಾರ್ನ ತಂದೆ ತನ್ನ ಸಾಲ ತೀರಿಸಲಿಕ್ಕಾಗಿ ಅವನನ್ನು ಚಿಕ್ಕ ಮಗುವಾಗಿದ್ದಾಗಲೇ ಮಾರಿಬಿಟ್ಟಿದ್ದರು. ಸುಮಾರು ಹತ್ತು ವರ್ಷಗಳ ಬಳಿಕ, ಅವನಿಗೆ ತನ್ನ ಹೆತ್ತತಾಯಿ ಸಿಕ್ಕಿದಾಗ ಎಷ್ಟು ಸಂತೋಷವಾಯಿತೆಂದರೆ ಆಕೆಯೊಂದಿಗಿರಲು, ಧನಿಕರಾಗಿದ್ದ ತನ್ನ ಸಾಕು ತಂದೆತಾಯಿಯನ್ನು ಬಿಟ್ಟುಬಂದನು.
ಕುಟುಂಬದಿಂದ ಬೇರ್ಪಟ್ಟ ಸದಸ್ಯರು ಪುನಃ ಒಂದಾಗುವಾಗ ಎಷ್ಟೊಂದು ಹರ್ಷಿಸುತ್ತಾರೆ! ಮಾನವರು ದೇವರ ಕುಟುಂಬದಿಂದ ಬೇರ್ಪಟ್ಟದ್ದು ಹೇಗೆಂಬ ದುಃಖಭರಿತ ಸಂಗತಿಯನ್ನು ಬೈಬಲು ವರ್ಣಿಸುತ್ತದೆ. ಈಗ ಅವರು ಹೇಗೆ ದೇವರೊಂದಿಗೆ ಪುನಃ ಒಂದಾಗುತ್ತಿದ್ದಾರೆ ಎಂಬುದನ್ನೂ ಅದು ತಿಳಿಸುತ್ತದೆ. ಇದು ಹೇಗಾಯಿತು? ಈ ಆನಂದವನ್ನು ನೀವು ಹೇಗೆ ಅನುಭವಿಸಬಲ್ಲಿರಿ?
ದೇವರ ಕುಟುಂಬವು ಬೇರ್ಪಟ್ಟದ್ದು ಹೇಗೆ?
ಸೃಷ್ಟಿಕರ್ತನಾದ ಯೆಹೋವ ದೇವರ ಕುರಿತಾಗಿ ಕೀರ್ತನೆಗಾರನು ಹೇಳಿದ್ದು: ‘ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟು.’ (ಕೀರ್ತನೆ 36:9) ಯೆಹೋವನು, ನಂಬಿಗಸ್ತ ಬುದ್ಧಿಶಾಲಿ ಜೀವಿಗಳ ಒಂದು ವಿಶ್ವವ್ಯಾಪಿ ಕುಟುಂಬದ ತಂದೆ ಆಗಿದ್ದಾನೆ. ಈ ಕುಟುಂಬದ ಸ್ವರ್ಗೀಯ ಭಾಗದಲ್ಲಿ ಆತನ ಆತ್ಮಜೀವಿ ಪುತ್ರರಾದ ದೇವದೂತರಿದ್ದಾರೆ ಮತ್ತು ಭೂಭಾಗದಲ್ಲಿ, ಆತನ ಭೌಮಿಕ ಮಕ್ಕಳಾಗಲಿರುವ ಮಾನವರಿದ್ದಾರೆ.
ಹಿಂದಿನ ಲೇಖನದಲ್ಲಿ ವಿವರಿಸಲಾದಂತೆ, ದೇವರ ಪ್ರಪ್ರಥಮ ಮಾನವ ಪುತ್ರನಾದ ಆದಾಮನು ದಂಗೆಯೆದ್ದಾಗ, ಪ್ರೀತಿಯ ತಂದೆ ಹಾಗೂ ಸೃಷ್ಟಿಕರ್ತನಿಂದ ಮಾನವಕುಲವು ಬೇರ್ಪಟ್ಟಿತು. (ಲೂಕ 3:38) ಇದೊಂದು ದುಃಖದ ಸಂಗತಿಯಾಗಿತ್ತು ಯಾಕೆಂದರೆ ಆದಾಮನು ದಂಗೆಯೇಳುವ ಮೂಲಕ ತನಗೂ ಇನ್ನೂ ಜನಿಸಿರದ ತನ್ನ ಸಂತಾನಕ್ಕೂ ದೇವರ ಮಕ್ಕಳಾಗುವ ಸದವಕಾಶವನ್ನು ಕಳೆದುಕೊಂಡನು. ಇದೆಲ್ಲದ್ದರ ಫಲಿತಾಂಶಗಳನ್ನು ವರ್ಣಿಸುತ್ತಾ ದೇವರು ತನ್ನ ಸೇವಕನಾದ ಮೋಶೆಯ ಮುಖಾಂತರ ಹೇಳಿದ್ದು: “ಅವರು ದ್ರೋಹಿಗಳೇ” ದೇವರ “ಮಕ್ಕಳಲ್ಲ; ಇದು ಅವರ ದೋಷವು.” ಈ “ದೋಷ” ಅಥವಾ ಪಾಪಪೂರ್ಣ ಸ್ವಭಾವವು, ಪ್ರತಿಯೊಂದು ವಿಧದಲ್ಲೂ ಪರಿಶುದ್ಧನೂ ಪರಿಪೂರ್ಣನೂ ಆದ ದೇವರಿಂದ ಮಾನವರನ್ನು ಬೇರ್ಪಡಿಸಿತು. (ಧರ್ಮೋಪದೇಶಕಾಂಡ 32:4, 5; ಯೆಶಾಯ 6:3) ಹೀಗೆ ಮಾನವಕುಲವು ಒಂದರ್ಥದಲ್ಲಿ ಬೇರ್ಪಟ್ಟು, ತಂದೆ ಇಲ್ಲದಂತಾಯಿತು.—ಎಫೆಸ 2:12.
ದೇವರ ಕುಟುಂಬದ ಹೊರಗಿರುವವರನ್ನು ಬೈಬಲ್, ‘ವೈರಿಗಳು’ ಎಂದು ಕರೆಯುವ ಮೂಲಕ ಮಾನವಕುಲವು ಎಷ್ಟರ ಮಟ್ಟಿಗೆ ದೇವರಿಂದ ಬೇರ್ಪಟ್ಟಿದೆ ಎಂಬುದನ್ನು ಒತ್ತಿಹೇಳುತ್ತದೆ. (ರೋಮಾಪುರ 5:8, 10) ದೇವರಿಂದ ಬೇರ್ಪಟ್ಟ ಮಾನವಕುಲವು, ಸೈತಾನನ ಕ್ರೂರ ಆಳ್ವಿಕೆಯ ಹಾಗೂ ಬಾಧ್ಯತೆಯಾಗಿ ಬಂದಿರುವ ಪಾಪ ಮತ್ತು ಅಪರಿಪೂರ್ಣತೆಯ ಮಾರಕ ಪರಿಣಾಮಗಳಿಂದ ಕಷ್ಟವನ್ನನುಭವಿಸಿದೆ. (ರೋಮಾಪುರ 5:12; 1 ಯೋಹಾನ 5:19) ಪಾಪಿ ಮಾನವರು ದೇವರ ಕುಟುಂಬದ ಭಾಗವಾಗಬಲ್ಲರೋ? ಅಪರಿಪೂರ್ಣ ಜೀವಿಗಳಿಗೆ ಪೂರ್ಣ ಅರ್ಥದಲ್ಲಿ ದೇವರ ಮಕ್ಕಳಾಗಲು ಅಂದರೆ ಆದಾಮಹವ್ವರು ಪಾಪಮಾಡುವ ಮುಂಚೆ ಇದ್ದಂತೆ ಆಗಲು ಸಾಧ್ಯವಿದೆಯೋ?
ಬೇರ್ಪಟ್ಟ ಮಕ್ಕಳನ್ನು ಒಟ್ಟುಗೂಡಿಸುವುದು
ಯೆಹೋವನು, ತನ್ನನ್ನು ಪ್ರೀತಿಸುವ ಅಪರಿಪೂರ್ಣ ಜನರ ಪ್ರಯೋಜನಾರ್ಥವಾಗಿ ಪ್ರೀತಿಯಿಂದ ಏರ್ಪಾಡುಗಳನ್ನು ಮಾಡಿದನು. (1 ಕೊರಿಂಥ 2:9) ಅಪೊಸ್ತಲ ಪೌಲನು ವಿವರಿಸುವುದು: “ದೇವರು ಮನುಷ್ಯರ ಅಪರಾಧಗಳನ್ನು ಲೆಕ್ಕಿಸದೆ ಕ್ರಿಸ್ತಯೇಸುವಿನಲ್ಲಿ ಇಡೀ ಜಗತ್ತನ್ನೇ ತನ್ನೊಡನೆ ಸಂಧಾನಪಡಿಸುತ್ತಿದ್ದಾನೆ.” (2 ಕೊರಿಂಥ 5:19, NIBV) ಹಿಂದಿನ ಲೇಖನದಲ್ಲಿ ವಿವರಿಸಲಾದಂತೆ, ಯೆಹೋವ ದೇವರು ನಮ್ಮ ಪಾಪಗಳಿಗೋಸ್ಕರ ಯೇಸು ಕ್ರಿಸ್ತನನ್ನು ವಿಮೋಚನಾ ಮೌಲ್ಯ ಯಜ್ಞವಾಗಿ ಕೊಟ್ಟನು. (ಮತ್ತಾಯ 20:28; ಯೋಹಾನ 3:16) ಇದಕ್ಕಾಗಿ ಕೃತಜ್ಞತೆಯಿಂದ ಅಪೊಸ್ತಲ ಪೌಲನು ಬರೆದದ್ದು: “ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ.” (1 ಯೋಹಾನ 3:1) ಹೀಗೆ, ವಿಧೇಯ ಮಾನವರು ಪುನಃ ಒಮ್ಮೆ ಯೆಹೋವನ ಕುಟುಂಬದ ಭಾಗವಾಗಲು ದಾರಿಯನ್ನು ತೆರೆಯಲಾಯಿತು.
ದೇವರ ಕುಟುಂಬದೊಳಗೆ ಒಟ್ಟುಗೂಡಿಸಲಾಗುವ ಎಲ್ಲ ಮಾನವರು ತಮ್ಮ ಸ್ವರ್ಗೀಯ ತಂದೆಯ ಆರೈಕೆಯಡಿ ಐಕ್ಯರಾಗುತ್ತಾರಾದರೂ, ಅವರನ್ನು ಎರಡು ಪ್ರತ್ಯೇಕ ಗುಂಪುಗಳಾಗಿ ಒಟ್ಟುಗೂಡಿಸಲಾಗುವುದು. ಈ ಗುಂಪುಗಳನ್ನು ಬೈಬಲ್ ಹೇಗೆ ವಿವರಿಸುತ್ತದೆಂಬುದಕ್ಕೆ ಗಮನಕೊಡಿ: “ತಾನು [ದೇವರು] ಕಾಲವು ಪರಿಪೂರ್ಣವಾದಾಗ ನಿರ್ವಹಿಸಬೇಕಾದ ಒಂದು ಕೃಪೆಯುಳ್ಳ ಸಂಕಲ್ಪವನ್ನು ಆತನು ಕ್ರಿಸ್ತನಲ್ಲಿ ಮೊದಲೇ ನಿಷ್ಕರ್ಷೆಮಾಡಿಕೊಂಡಿದ್ದನು. ಅದೇನಂದರೆ ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದಾಗಿ ಕೂಡಿಸಬೇಕೆಂಬದೇ.” (ಎಫೆಸ 1:9, 10) ಆದರೆ ದೇವರು ವಿಷಯಗಳನ್ನು ಈ ವಿಧದಲ್ಲಿ ಏಕೆ ನಿರ್ವಹಿಸುತ್ತಾನೆ?
ಯೆಹೋವನು ತನ್ನ ಮಕ್ಕಳನ್ನು ಎರಡು ಗುಂಪುಗಳಲ್ಲಿ ಸಂಘಟಿಸುವುದು, ಅನೈಕ್ಯವನ್ನುಂಟುಮಾಡುವ ಬದಲು ತನ್ನ ಕುಟುಂಬದ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೇನಲ್ಲ. ದೇವರ ಕುಟುಂಬವು ಎಷ್ಟು ದೊಡ್ಡದೆಂದರೆ ಅದನ್ನು ಒಂದು ರಾಷ್ಟ್ರಕ್ಕೆ ಹೋಲಿಸಸಾಧ್ಯವಿದೆ. ಯಾವುದೇ ರಾಷ್ಟ್ರದಲ್ಲಿ ಸರಕಾರವನ್ನು ರಚಿಸಲಿಕ್ಕಾಗಿ ಕೇವಲ ಕೆಲವೇ ಮಂದಿಯನ್ನು ಆರಿಸಲಾಗುತ್ತದೆ. ಹೀಗೆ ಕಾನೂನು ಹಾಗೂ ಶಿಸ್ತು ಇರುವುದರಿಂದ ಉಳಿದ ಜನತೆಗೆ ಶಾಂತಿಯಿಂದ ಜೀವಿಸಲು ಸಾಧ್ಯವಾಗುತ್ತದೆ. ಆದರೆ ಯಾವುದೇ ಮಾನವ ಸರಕಾರವು ನಿಜ ಶಾಂತಿಯನ್ನು ತಂದಿಲ್ಲವೆಂಬುದು ಇನ್ನೊಂದು ಮಾತು. ದೇವರಾದರೋ ತನ್ನ ಕುಟುಂಬಕ್ಕಾಗಿ ಒಂದು ಪರಿಪೂರ್ಣ ಸರಕಾರವನ್ನು ಒದಗಿಸುತ್ತಾನೆ. ಮೊದಲನೇ ಗುಂಪು ಅಂದರೆ ‘ಪರಲೋಕದಲ್ಲಿರುವವುಗಳು,’ ಸ್ವರ್ಗದಲ್ಲಿ ಒಂದು ಸರಕಾರ ಅಥವಾ ರಾಜ್ಯದ ರಚನೆಗಾಗಿ ಯೆಹೋವನು ಆರಿಸುವ ಆತನ ಮಕ್ಕಳಿಂದ ಕೂಡಿರುತ್ತದೆ. ಇವರು ಸ್ವರ್ಗದಿಂದ “ಭೂಮಿಯ ಮೇಲೆ ಆಳುವರು.”—ಪ್ರಕಟನೆ 5:10.
ಭೂಮಿ ಮೇಲೆ ದೇವರ ಮಕ್ಕಳು
ಯೆಹೋವನು ‘ಭೂಮಿಯಲ್ಲಿರುವ ಸಮಸ್ತವನ್ನೂ’ ಅಂದರೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು, ಅವರು ಕಟ್ಟಕಡೆಗೆ ತನ್ನ ಭೌಮಿಕ ಮಕ್ಕಳಾಗುವಂತೆ ಒಟ್ಟುಗೂಡಿಸುತ್ತಿದ್ದಾನೆ. ದಯಾಪರ ತಂದೆಯಾಗಿರುವ ಆತನು, ಅವರಿಗೆ ತನ್ನ ಪ್ರೀತಿಯ ಮಾರ್ಗಗಳನ್ನು ಕಲಿಸುತ್ತಾನೆ. ಅವರು ಅನೇಕ ರಾಷ್ಟ್ರಗಳಿಂದ ಬಂದವರಾಗಿದ್ದರೂ ಸಾಮರಸ್ಯ ಹಾಗೂ ಐಕ್ಯದಿಂದಿರುವುದು ಈ ಕಾರಣದಿಂದಲೇ. ಹಿಂಸಾತ್ಮಕರೂ, ಸ್ವಾರ್ಥಿಗಳೂ, ಅನೈತಿಕರೂ, ದೇವರಿಗೆ ಅವಿಧೇಯರಾಗಿರುವವರೂ ‘ಆತನೊಂದಿಗೆ ಸಂಧಾನಮಾಡಿಕೊಳ್ಳುವಂತೆ’ ಆಮಂತ್ರಿಸಲಾಗುತ್ತಿದೆ.—2 ಕೊರಿಂಥ 5:20, NIBV.
ಆದರೆ ತನ್ನೊಂದಿಗೆ ಸಂಧಾನಮಾಡಿ ತನ್ನ ಮಕ್ಕಳಾಗುವಂತೆ ದೇವರು ನೀಡುವ ಆಮಂತ್ರಣವನ್ನು ತಿರಸ್ಕರಿಸುವವರ ಕುರಿತೇನು? ತನ್ನ ಕುಟುಂಬದ ಶಾಂತಿಸಾಮರಸ್ಯವನ್ನು ಕಾಪಾಡಲಿಕ್ಕೋಸ್ಕರ ಯೆಹೋವನು ಕಠಿನ ಕ್ರಮಗಳನ್ನು ಕೈಗೊಳ್ಳುವನು. “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನ”ವೊಂದಿರುವುದು. (2 ಪೇತ್ರ 3:7) ದೇವರು ಭೂಮಿಯಿಂದ ದಂಗೆಕೋರರನ್ನು ತೆಗೆದುಹಾಕುವನು. ಇದರಿಂದ ವಿಧೇಯ ಜನರಿಗೆ ಎಷ್ಟು ಉಪಶಮನ ಸಿಗುವುದು!—ಕೀರ್ತನೆ 37:10, 11.
ಆ ಬಳಿಕ, ಶಾಂತಿಯಿರುವ ಸಾವಿರ ವರ್ಷಗಳು ಬರುವವು. ಆ ಸಮಯದಲ್ಲಿ ದೇವರ ಪ್ರೀತಿಗೆ ಸ್ಪಂದಿಸುವವರೆಲ್ಲರನ್ನು, ಆದಾಮನು ಕಳೆದುಕೊಂಡಿದ್ದ ಪರಿಪೂರ್ಣ ಜೀವಕ್ಕೆ ಕ್ರಮೇಣ ಪುನಃಸ್ಥಾಪಿಸಲಾಗುವುದು. ಅಲ್ಲದೆ, ಸತ್ತವರು ಮತ್ತೆ ಜೀವಿಸುವಂತೆ ಅವರನ್ನು ಎಬ್ಬಿಸಲಾಗುವುದು. (ಯೋಹಾನ 5:28, 29; ಪ್ರಕಟನೆ 20:6; 21:3, 4) ಹೀಗೆ ದೇವರು ತನ್ನ ಈ ವಾಗ್ದಾನವನ್ನು ನೆರವೇರಿಸುವನು: ‘ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದು.’—ರೋಮಾಪುರ 8:21.
ನಿಮ್ಮ ತಂದೆಯೊಂದಿಗೆ ಮತ್ತೆ ಒಂದಾಗುವುದು
ಈ ಲೇಖನದ ಆರಂಭದಲ್ಲಿ ತಿಳಿಸಲಾಗಿರುವ ಸೇಜಾರ್ ಮತ್ತು ಸಾವಿರಾರು ಮಂದಿ ಕೊರಿಯನರು ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗಲು ಕ್ರಿಯೆಗೈಯಬೇಕಾಗಿತ್ತು. ಕೊರಿಯದ ಜನರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿತ್ತು; ಸೇಜಾರ್ ತನ್ನ ಸಾಕು ತಂದೆತಾಯಿಯನ್ನು ಬಿಟ್ಟುಬರಬೇಕಾಯಿತು. ಅದೇ ರೀತಿಯಲ್ಲಿ ನಿಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರೊಂದಿಗೆ ಸಂಧಾನಮಾಡಿಕೊಂಡು, ಆತನ ಕುಟುಂಬದ ಭಾಗವಾಗಲಿಕ್ಕಾಗಿ ನೀವು ನಿರ್ಣಾಯಕ ಕ್ರಮಕೈಗೊಳ್ಳಬೇಕಾದೀತು. ಅದರಲ್ಲಿ ಏನು ಸೇರಿದೆ?
ನಿಮ್ಮ ತಂದೆಯಾದ ದೇವರಿಗೆ ಹತ್ತಿರವಾಗಲು, ನೀವಾತನ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡಬೇಕು. ಆಗ ನೀವು ಆತನಲ್ಲೂ ಆತನ ವಾಗ್ದಾನಗಳಲ್ಲೂ ಬಲವಾದ ನಂಬಿಕೆಯನ್ನು ಬೆಳೆಸಶಕ್ತರಾಗುವಿರಿ. ನೀವೇನು ಮಾಡುವಂತೆ ದೇವರು ಹೇಳುತ್ತಾನೋ ಅದು ನಿಮ್ಮ ಪ್ರಯೋಜನಕ್ಕಾಗಿದೆಯೆಂದು ಭರವಸೆಯಿಡಲು ಕ್ರಮೇಣ ಕಲಿಯುವಿರಿ. ದೇವರ ತಿದ್ದುಪಾಟು ಮತ್ತು ಶಿಸ್ತನ್ನೂ ನೀವು ಸ್ವೀಕರಿಸಬೇಕಾದೀತು. “ದೇವರು ನಿಮ್ಮನ್ನು ಮಕ್ಕಳೆಂದು ನಡಿಸುತ್ತಾನೆ. ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿ?” ಎಂದು ಬೈಬಲು ಕ್ರೈಸ್ತರಿಗೆ ಹೇಳುತ್ತದೆ.—ಇಬ್ರಿಯ 12:7.
ಇಂಥ ಹೆಜ್ಜೆಗಳನ್ನಿಡುವಾಗ ನಿಮ್ಮ ಇಡೀ ಜೀವನರೀತಿ ಬದಲಾಗುವುದು. ಬೈಬಲನ್ನುವುದು: “ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ . . . ನಿರ್ಮಿಸಲ್ಪಟ್ಟಿದೆ.” (ಎಫೆಸ 4:23, 24) ತದನಂತರ ಅಪೊಸ್ತಲ ಪೇತ್ರನ ಈ ಬುದ್ಧಿವಾದವನ್ನು ಪಾಲಿಸಿರಿ: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ, . . . ವಿಧೇಯರಾದ ಮಕ್ಕಳಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ.”—1 ಪೇತ್ರ 1:14, 15, NIBV.
ನಿಮ್ಮ ನಿಜವಾದ ಕುಟುಂಬವನ್ನು ಕಂಡುಕೊಳ್ಳುವುದು
ಸೇಜಾರ್ಗೆ ತನ್ನ ಹೆತ್ತತಾಯಿ ಸಿಕ್ಕಿದಾಗ, ತನಗೆ ಒಡಹುಟ್ಟಿದ ಅಣ್ಣ ಹಾಗೂ ಅಕ್ಕ ಇದ್ದಾರೆಂದು ತಿಳಿದು ಪರಮಾನಂದವಾಯಿತು. ಅದೇ ರೀತಿಯಲ್ಲಿ ನೀವು ನಿಮ್ಮ ಸ್ವರ್ಗೀಯ ತಂದೆಗೆ ಆಪ್ತರಾದಂತೆ, ಕ್ರೈಸ್ತ ಸಭೆಯಲ್ಲಿ ನಿಮಗೆ ಹಲವಾರು ಸಹೋದರಸಹೋದರಿಯರು ಇದ್ದಾರೆಂದು ತಿಳಿದುಬರುವುದು. ನೀವು ಅವರೊಂದಿಗೆ ಸಹವಾಸಮಾಡಲಾರಂಭಿಸುವಾಗ, ಅವರು ನಿಮ್ಮ ಸ್ವಂತ ಕುಟುಂಬದ ಸದಸ್ಯರಿಗಿಂತ ಹೆಚ್ಚು ಆಪ್ತರಾಗುವುದನ್ನು ನೋಡುವಿರಿ.—ಅ. ಕೃತ್ಯಗಳು 28:14, 15; ಇಬ್ರಿಯ 10:24, 25.
ನಿಮ್ಮ ನಿಜವಾದ ತಂದೆ ಹಾಗೂ ಸಹೋದರ ಸಹೋದರಿಯರೊಂದಿಗೆ ಒಂದಾಗಲು ನಿಮ್ಮನ್ನು ಆಮಂತ್ರಿಸಲಾಗುತ್ತಿದೆ. ಅವರೊಂದಿಗಿನ ಪುನರ್ಮಿಲನವು ನಿಮಗೆ, ಸೇಜಾರ್ ಮತ್ತು ಕೊರಿಯದಲ್ಲಿರುವ ಸಾವಿರಾರು ಮಂದಿಗಾದಷ್ಟೇ ಅಪಾರ ಆನಂದವನ್ನು ತರುವುದು. (w08 3/1)
[ಪುಟ 26ರಲ್ಲಿರುವ ಚಿತ್ರ]
19ರ ಪ್ರಾಯದಲ್ಲಿ ಸೇಜಾರ್ ತಾಯಿಯೊಂದಿಗೆ
[ಪುಟ 28ರಲ್ಲಿರುವ ಚಿತ್ರಗಳು]
ದೇವರ ಸಮೀಪಕ್ಕೆ ಬರಲು ಹೆಜ್ಜೆಗಳನ್ನಿಡಿ