ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ?

ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ?

ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ?

ಇದಕ್ಕೆ ಉತ್ತರ ಪ್ರಾಮುಖ್ಯ ಏಕೆ? ಭೂಮಿಯಲ್ಲಿ ಜೀವರಾಶಿಯ ಆರಂಭ ಆಕಸ್ಮಿಕವಾಗಿ ಸಂಭವಿಸಿತೆಂದು ಅನೇಕ ಜನರಿಗೆ ಕಲಿಸಲಾಗಿದೆ. ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕ ಸಾಮರ್ಥ್ಯಗಳುಳ್ಳ ಮಾನವಜಾತಿಯು ಆಕಸ್ಮಿಕ ಘಟನೆಗಳ ಸರಮಾಲೆಯ ಮೂಲಕ ವಿಕಾಸಗೊಂಡಿತೆಂದು ಹೇಳಲಾಗುತ್ತದೆ.

ತುಸು ಯೋಚಿಸಿರಿ: ಒಂದುವೇಳೆ ಮಾನವಜಾತಿಯು ಜೀವವಿಕಾಸದಿಂದ ಅಸ್ತಿತ್ವಕ್ಕೆ ಬಂದಿದ್ದು, ಸೃಷ್ಟಿಕರ್ತನೇ ಇಲ್ಲದಿದ್ದಲ್ಲಿ ನಾವೆಲ್ಲರೂ ಒಂದರ್ಥದಲ್ಲಿ ತಬ್ಬಲಿಗಳಾಗಿರುತ್ತಿದ್ದೆವು. ಸಲಹೆ ಕೇಳಲು ಮಾನವನಿಗಿಂತಲೂ ಶ್ರೇಷ್ಠ ಬುದ್ಧಿಯ ಉಗಮವೂ ಇಲ್ಲ, ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕೊಡುವವರೂ ಇಲ್ಲ ಎಂದಾಗುತ್ತಿತ್ತು. ಪರಿಸರೀಯ ವಿಪತ್ತುಗಳನ್ನು ತಪ್ಪಿಸಲು, ರಾಜಕೀಯ ಕಚ್ಚಾಟಗಳನ್ನು ಬಗೆಹರಿಸಲು, ವೈಯಕ್ತಿಕ ಸಮಸ್ಯೆಗಳೇಳುವಾಗ ಮಾರ್ಗದರ್ಶನ ಪಡೆಯಲು ನಾವು ಬರೀ ಮಾನವ ಬುದ್ಧಿಯ ಮೇಲೆ ಅವಲಂಬಿಸಬೇಕಾಗುತ್ತಿತ್ತು.

ಇದೆಲ್ಲ ಯೋಚಿಸುವಾಗ ನಿಮಗೆ ಖಂಡಿತ ನೆಮ್ಮದಿ ಸಿಗಲಾರದು. ಆದುದರಿಂದ, ಶ್ರೇಷ್ಠ ಬುದ್ಧಿಯ ಉಗಮದ ಕುರಿತು ಆಲೋಚಿಸಬಾರದೇಕೆ? ಈ ವಿಚಾರವು ಹೆಚ್ಚು ಆಕರ್ಷಕವೂ ಹೆಚ್ಚು ತರ್ಕಸಂಗತವೂ ಆಗಿದೆ.

ಬೈಬಲ್‌ ಏನನ್ನುತ್ತದೆ?

ಮಾನವರನ್ನು ದೇವರು ನೇರವಾಗಿ ಸೃಷ್ಟಿಸಿದನೆಂದು ಬೈಬಲ್‌ ಬೋಧಿಸುತ್ತದೆ. ಭಾವರಹಿತ, ಬುದ್ಧಿಯಿಲ್ಲದ ವಿಕಾಸ-ಪ್ರಕ್ರಿಯೆಯ ಉತ್ಪನ್ನ ನಾವಲ್ಲ, ಬದಲಾಗಿ ಪ್ರೀತಿಪರನೂ ಬುದ್ಧಿವಂತನೂ ಆದ ತಂದೆಯೊಬ್ಬನ ಮಕ್ಕಳಾಗಿದ್ದೇವೆ. ಬೈಬಲ್‌ನಲ್ಲಿರುವ ಈ ಸ್ಪಷ್ಟ ಹೇಳಿಕೆಗಳನ್ನು ಗಮನಿಸಿರಿ.

ಆದಿಕಾಂಡ 1:27. “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.”

ಕೀರ್ತನೆ 139:14. “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”

ಮತ್ತಾಯ 19:4-6. “ಮನುಷ್ಯರನ್ನು ನಿರ್ಮಾಣಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ—ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”

ಅ. ಕೃತ್ಯಗಳು 17:24, 25. “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ.”

ಪ್ರಕಟನೆ 4:11. “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”

ಬೈಬಲಿನ ಉತ್ತರದಿಂದ ಹೇಗೆ ನಿಜ ನೆಮ್ಮದಿ ಸಿಗುತ್ತದೆ?

ದೇವರಿಂದಲೇ “ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿದೆ” ಎಂಬ ಅರಿವು ಇತರರ ಕುರಿತು ನಮಗಿರುವ ಅಭಿಪ್ರಾಯವನ್ನು ಬದಲಾಯಿಸುತ್ತದೆ. (ಎಫೆಸ 3:14, 15, NIBV) ಅಲ್ಲದೆ, ಸ್ವತಃ ನಮ್ಮ ಹಾಗೂ ನಮ್ಮ ಸಮಸ್ಯೆಗಳ ಬಗೆಗಿನ ದೃಷ್ಟಿಕೋನವನ್ನೂ ಅದು ಪ್ರಭಾವಿಸುತ್ತದೆ. ನಮ್ಮ ಆಲೋಚನೆಗಳು ಈ ಮುಂದಿನ ವಿಧಗಳಲ್ಲಿ ಪ್ರಭಾವಿಸಲ್ಪಡುವವು.

ಕಷ್ಟಕರ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಪರಸ್ಪರ ವ್ಯತಿರಿಕ್ತವಾದ ಮಾನವ ಅಭಿಪ್ರಾಯಗಳಿಂದ ನಾವು ಗೊಂದಲಕ್ಕೀಡಾಗುವುದಿಲ್ಲ. ಬದಲಾಗಿ ದೃಢವಿಶ್ವಾಸದಿಂದ ಬೈಬಲ್‌ ಸಲಹೆಯನ್ನು ಅವಲಂಬಿಸುತ್ತೇವೆ. ಯಾಕೆ? ಯಾಕೆಂದರೆ “ಪವಿತ್ರ ಗ್ರಂಥವೆಲ್ಲವೂ ದೇವರಿಂದ ಪ್ರೇರಿತವಾದದ್ದು. ಅದು ಎಲ್ಲಾ ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ. ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17, NIBV.

ಬೈಬಲಿನ ಸಲಹೆಯನ್ನು ಅನ್ವಯಿಸಲು ಪ್ರಯತ್ನ ಮತ್ತು ಸ್ವಶಿಸ್ತು ಅಗತ್ಯ ನಿಜ. ಅದರ ಮಾರ್ಗದರ್ಶನವನ್ನು ಪಾಲಿಸಲು, ಕೆಲವೊಮ್ಮೆ ನಮ್ಮ ಮನಸ್ಸಂಕಲ್ಪಕ್ಕೆ ವಿರುದ್ಧವಾಗಿರುವಂತೆ ತೋರುವ ವಿಧಗಳಲ್ಲಿ ಕ್ರಿಯೆಗೈಯಬೇಕಾಗಬಹುದು. (ಆದಿಕಾಂಡ 8:21) ಆದರೆ, ಸ್ವರ್ಗದಲ್ಲಿರುವ ಒಬ್ಬ ಪ್ರೀತಿಯ ತಂದೆಯು ನಮ್ಮನ್ನು ಸೃಷ್ಟಿಸಿದ್ದಾನೆಂದು ನಾವು ಒಪ್ಪಿಕೊಳ್ಳುವಲ್ಲಿ, ಆತನ ಮಾರ್ಗವೇ ನಮಗೆ ಅತ್ಯುತ್ತಮವಾದದ್ದು ಎಂಬ ತರ್ಕಬದ್ಧ ತೀರ್ಮಾನಕ್ಕೆ ಬರುವೆವು. (ಯೆಶಾಯ 55:9) ಆದುದರಿಂದ ಆತನ ವಾಕ್ಯವು ನಮಗನ್ನುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಆ ಸಲಹೆಯನ್ನು ಅನ್ವಯಿಸುವಲ್ಲಿ ನಾವು ಸವಾಲುಗಳನ್ನು ಎದುರಿಸುವಾಗ ಹಾಗೂ ನಿರ್ಣಯಗಳನ್ನು ಮಾಡುವಾಗ ಉಂಟಾಗುವ ವ್ಯಾಕುಲತೆ ಕಡಿಮೆಯಾಗುವುದು.

ಪೂರ್ವಾಗ್ರಹಕ್ಕೆ ಗುರಿಯಾಗುವಾಗ ನಾವು ಇನ್ನೊಂದು ಜಾತಿ ಇಲ್ಲವೇ ಸಂಸ್ಕೃತಿಯ ಜನರಿಗಿಂತ ಕೆಳಮಟ್ಟದವರೆಂದು ನೆನಸುತ್ತಾ ಕೀಳರಿಮೆಯ ಭಾವನೆಗಳಡಿ ಹೂತುಹೋಗುವುದಿಲ್ಲ. ಅದಕ್ಕೆ ಬದಲಾಗಿ, ನಾವು ಸೂಕ್ತಪ್ರಮಾಣದಲ್ಲಿ ಸ್ವಗೌರವದ ಪ್ರಜ್ಞೆಯನ್ನು ಬೆಳೆಸಿಕೊಳ್ಳುವೆವು. ಏಕೆ? ಏಕೆಂದರೆ ನಮ್ಮ ತಂದೆಯಾದ ಯೆಹೋವ ದೇವರು “ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.

ಈ ಪರಿಜ್ಞಾನ ಬೇರೆಯವರ ಕಡೆಗಿನ ನಮ್ಮ ಮನೋಭಾವವು ಪೂರ್ವಾಗ್ರಹದಿಂದ ವಿಕೃತವಾಗದಂತೆಯೂ ತಡೆಯುವುದು. ಬೇರೊಂದು ಜಾತಿಯ ಜನರಿಗಿಂತ ನಾವು ಶ್ರೇಷ್ಠರೆಂದು ನೆನಸಲು ಯಾವ ಕಾರಣವೂ ಇಲ್ಲ ಯಾಕೆಂದರೆ ದೇವರು ‘ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿದನು.’—ಅ. ಕೃತ್ಯಗಳು 17:26.

ಹಾಗಾದರೆ, ನಮ್ಮನ್ನು ಸೃಷ್ಟಿಸಲಾಗಿದೆ ಮತ್ತು ನಮ್ಮ ಸೃಷ್ಟಿಕರ್ತನು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆ ಎಂದು ತಿಳಿದಿರುವುದು ನಿಜ ನೆಮ್ಮದಿಗೆ ಅಸ್ತಿವಾರವೆಂಬುದು ನಿಶ್ಚಯ. ಆದರೆ ಈ ನೆಮ್ಮದಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಹೆಚ್ಚಿನದ್ದು ಅಗತ್ಯ. (w08 2/1)

[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮಾನವರು ವಿಕಾಸ-ಪ್ರಕ್ರಿಯೆಯಿಂದ ಅಸ್ತಿತ್ವಕ್ಕೆ ಬಂದರೋ?

[ಪುಟ 5ರಲ್ಲಿರುವ ಚಿತ್ರ]

ಸೃಷ್ಟಿಕರ್ತನು ನಮ್ಮ ಬಗ್ಗೆ ಕಾಳಜಿವಹಿಸುತ್ತಾನೆಂಬ ಅರಿವಿನಿಂದ ನೆಮ್ಮದಿ ಸಿಗಬಲ್ಲದು