ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರಾಶೆಯ ಮಧ್ಯೆಯೂ ಸಂತೋಷ

ನಿರಾಶೆಯ ಮಧ್ಯೆಯೂ ಸಂತೋಷ

ನಿರಾಶೆಯ ಮಧ್ಯೆಯೂ ಸಂತೋಷ

ನಿರಾಶೆ ಅನುಭವಿಸದವರು ಯಾರಾದರೂ ಇದ್ದಾರೆಯೇ? ಅಷ್ಟೇಕೆ, ನಮ್ಮ ಸ್ವರ್ಗೀಯ ಪಿತನಾದ ಯೆಹೋವ ದೇವರು ತಾನೇ ನಿರಾಶೆಯ ನೋವನ್ನು ಅನುಭವಿಸಿದ್ದಾನೆ. ಉದಾಹರಣೆಗೆ, ಆತನು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಹೊರತಂದು ಹೇರಳವಾಗಿ ಆಶೀರ್ವದಿಸಿದರೂ ಅವರು “ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು” ಇಲ್ಲವೇ ನೋಯಿಸಿದರು ಎಂದು ಬೈಬಲ್‌ ತಿಳಿಸುತ್ತದೆ. (ಕೀರ್ತನೆ 78:41) ಹೀಗಾದರೂ ಯೆಹೋವನು ‘ಸಂತೋಷದ ದೇವರಾಗಿ’ ಉಳಿದಿದ್ದಾನೆ.—1 ತಿಮೊಥೆಯ 1:11, NW.

ನಿರಾಶೆಗೆ ನಡೆಸುವ ಕಾರಣಗಳು ಹತ್ತುಹಲವು. ಆದರೆ ಅವು ನಮ್ಮ ಸಂತೋಷವನ್ನು ಕಸಿದುಕೊಳ್ಳದಂತೆ ನಾವೇನು ಮಾಡಬಲ್ಲೆವು? ನಿರಾಶಾದಾಯಕ ಸನ್ನಿವೇಶಗಳನ್ನು ಯೆಹೋವ ದೇವರು ನಿಭಾಯಿಸಿದ ವಿಧಗಳಿಂದ ನಾವೇನನ್ನು ಕಲಿಯಬಲ್ಲೆವು?

ನಿರಾಶೆಗೊಳಿಸುವ ವಿಷಯಗಳು

“ಸಮಯಕ್ಕೂ ಮುಂಗಾಣದ ಘಟನೆಗೂ ಎಲ್ಲರೂ ಗುರಿಯಾಗುತ್ತಾರೆ” ಎಂದು ದೇವರ ವಾಕ್ಯ ತಿಳಿಸುತ್ತದೆ. (ಪ್ರಸಂಗಿ 9:11, NW) ಅನಿರೀಕ್ಷಿತವಾದ ಅಪರಾಧ, ಅಪಘಾತ ಅಥವಾ ಕಾಯಿಲೆಯು ಕಡುಸಂಕಟ ಮತ್ತು ನಿರಾಶೆಯನ್ನು ತರಬಲ್ಲದು. ಅಲ್ಲದೆ ಬೈಬಲ್‌ ಹೇಳುವುದು: “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು.” (ಜ್ಞಾನೋಕ್ತಿ 13:12) ಯಾವುದೇ ಒಳ್ಳೇ ವಿಷಯಕ್ಕಾಗಿ ಆತುರದಿಂದ ಕಾಯುವಾಗ ನಮಗೆ ತುಂಬ ಆನಂದವಾಗುತ್ತದೆ. ಆದರೆ ಅದು ಸಿಗಲು ತಡವಾದರೆ ನಾವು ಮನಗುಂದಿ ತುಂಬ ನಿರಾಶರಾಗಬಹುದು. ಮಿಷನೆರಿಯಾಗಬೇಕೆಂಬ ಕಡುಬಯಕೆಯಿದ್ದ ಡೆನ್ಕೆನ್‌ ಎಂಬವರ ಉದಾಹರಣೆಯನ್ನು ತೆಗೆದುಕೊಳ್ಳಿ. ಮಿಷನೆರಿ ಸೇವೆಯಲ್ಲಿ ಹಲವಾರು ವರ್ಷಗಳನ್ನು ಕಳೆದ ಬಳಿಕ ಅವನಿಗೆ ತನ್ನ ಪತ್ನಿಯೊಂದಿಗೆ ಸ್ವದೇಶಕ್ಕೆ ತೆರಳಬೇಕಾಗಿ ಬಂತು. ಅವನು ಹೇಳಿದ್ದು: “ನಾನು ಜೀವನದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟಿದ್ದು ಇದೇ ಮೊದಲು. ನನಗಾಗ ಯಾವ ಗುರಿಗಳೂ ಇರಲಿಲ್ಲ, ಯಾವುದರಲ್ಲೂ ಆಸಕ್ತಿ ಇರಲಿಲ್ಲ.” ಕೆಲವು ವಿದ್ಯಮಾನಗಳಲ್ಲಿ ನಿರಾಶೆಯ ನೋವು ದೀರ್ಘಸಮಯದ ವರೆಗೆ ಉಳಿಯಬಲ್ಲದು. * ಕ್ಲೆರ್‌ ಎಂಬವರಿಗೆ ಹೀಗೆಯೇ ಆಯಿತು. ಆಕೆ ವಿವರಿಸುವುದು: “ನಾನು ಏಳು ತಿಂಗಳ ಬಸುರಿಯಾಗಿದ್ದಾಗ ಗರ್ಭಸ್ರಾವದಿಂದಾಗಿ ನನ್ನ ಮಗುವನ್ನು ಕಳೆದುಕೊಂಡೆ. ಅದಾಗಿ ವರ್ಷಗಳೇ ದಾಟಿವೆ. ಆದರೆ ಇವತ್ತಿಗೂ, ಗಂಡುಮಕ್ಕಳು ವೇದಿಕೆಯ ಮೇಲೆ ನಿಂತು ಭಾಷಣ ಕೊಡುತ್ತಿರುವಾಗ, ‘ನನ್ನ ಮಗನಿರುತ್ತಿದ್ದರೆ ಇಷ್ಟು ದೊಡ್ಡವನಾಗಿರುತ್ತಿದ್ದ’ ಎಂಬ ಯೋಚನೆ ಮನಸ್ಸಿಗೆ ಬಂದೇ ಬರುತ್ತದೆ.”

ಆತ್ಮೀಯ ವ್ಯಕ್ತಿಯೊಬ್ಬರು ನಿರಾಶೆಗೊಳಿಸಿದಾಗಲೂ ನಿಮಗೆ ತುಂಬ ನೋವಾಗಬಲ್ಲದು. ವಿಶೇಷವಾಗಿ, ನೀವು ಮದುವೆಯಾಗಲಿದ್ದ ವ್ಯಕ್ತಿ ನಿಮ್ಮನ್ನು ತೊರೆದಾಗ, ವಿವಾಹವು ಮುರಿದುಬಿದ್ದಾಗ, ಮಕ್ಕಳು ದಂಗೆಯೆದ್ದಾಗ, ಆಪ್ತ ಸ್ನೇಹಿತರೊಬ್ಬರು ದ್ರೋಹ ಬಗೆದಾಗ ಅಥವಾ ಕೃತಘ್ನರಾದಾಗಲಂತೂ ಆಗುವ ನೋವು ಹೇಳತೀರದು. ನಾವು ಕಠಿನಕಾಲದಲ್ಲಿ ಅಪರಿಪೂರ್ಣ ಜನರ ಮಧ್ಯೆ ಜೀವಿಸುತ್ತಿರುವುದರಿಂದ ನಿರಾಶೆಗೆ ನಡೆಸಬಲ್ಲ ಕಾರಣಗಳಿಗೆ ಕೊನೆಯೇ ಇರುವುದಿಲ್ಲ.

ಅದೇ ರೀತಿ ನಮ್ಮ ಸ್ವಂತ ವೈಫಲ್ಯಗಳು ನಿರಾಶೆಗೆ ಕಾರಣಗಳಾಗಿರಬಲ್ಲವು. ದೃಷ್ಟಾಂತಕ್ಕೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಉದ್ಯೋಗ ಗಿಟ್ಟಿಸಿಕೊಳ್ಳಲು ಅಥವಾ ಇಷ್ಟಪಟ್ಟವನನ್ನು/ಳನ್ನು ಒಲಿಸಿಕೊಳ್ಳಲು ಸೋತರೆ ಅಯೋಗ್ಯತೆಯ ಅನಿಸಿಕೆ ನಮ್ಮಲ್ಲಿ ಮೂಡಬಹುದು. ನಮ್ಮ ಪ್ರೀತಿಪಾತ್ರರೊಬ್ಬರು ಆಧ್ಯಾತ್ಮಿಕ ಪ್ರಗತಿಮಾಡದಿರುವಾಗಲೂ ನಮಗೆ ನಿರಾಶೆಯಾಗಬಹುದು. ಮೇರಿ ಎಂಬವಳು ಹೇಳುವುದು: “ನನ್ನ ಮಗಳು ತುಂಬ ಹುರುಪಿನ ಕ್ರೈಸ್ತಳಂತೆ ತೋರಿದಳು. ನಾನವಳಿಗೆ ಅತ್ಯುತ್ತಮ ಮಾದರಿಯನ್ನಿಟ್ಟಿದ್ದೆ ಎಂದು ನಾನೆಣಿಸಿದ್ದೆ. ಆದರೆ ಅವಳು ಯೆಹೋವ ದೇವರಿಗೆ ಬೆನ್ನುಹಾಕಿದಾಗ ಮತ್ತು ನಮ್ಮ ಕುಟುಂಬದ ಮಾನವನ್ನು ಬೀದಿಗೆಳೆದಾಗ, ಸಂಪೂರ್ಣವಾಗಿ ಸೋತುಹೋಗಿರುವ ಅನುಭವ ನನಗಾಯಿತು. ಜೀವನದಲ್ಲಿ ನಾನು ಗಳಿಸಿದ ಬೇರೆಲ್ಲಾ ಯಶಸ್ಸುಗಳು ಈ ವೈಫಲ್ಯದ ಎದುರು ಶೂನ್ಯವಾಗಿ ಕಂಡವು. ನನಗೆ ತುಂಬ ನಿರುತ್ಸಾಹವಾಯಿತು.”

ಇಂಥ ನಿರಾಶಾದಾಯಕ ಸನ್ನಿವೇಶಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು? ಉತ್ತರಕ್ಕಾಗಿ, ನಿರಾಶೆಯನ್ನು ನಿಭಾಯಿಸುವುದರಲ್ಲಿ ಯೆಹೋವನು ಇಟ್ಟಿರುವ ಮಾದರಿಯನ್ನು ಪರಿಗಣಿಸಿರಿ.

ಪರಿಹಾರದ ಮೇಲೆ ಗಮನ ಕೇಂದ್ರೀಕರಿಸಿರಿ

ಪ್ರಥಮ ಮಾನವ ದಂಪತಿಗಳಿಗೆ ಯೆಹೋವ ದೇವರು ಪ್ರೀತಿಯಿಂದ ಎಲ್ಲವನ್ನೂ ಒದಗಿಸಿದನು. ಆದರೆ ಅವರು ಅಪಕಾರಿಗಳಾಗಿ ಆತನಿಗೆ ತಿರುಗಿಬಿದ್ದರು. (ಆದಿಕಾಂಡ ಅಧ್ಯಾಯ 2 ಮತ್ತು 3) ತದನಂತರ ಅವರ ಮಗನಾದ ಕಾಯಿನನಲ್ಲಿ ಕೆಟ್ಟ ಮನೋಭಾವ ಚಿಗುರಲಾರಂಭಿಸಿತು. ಯೆಹೋವನ ಎಚ್ಚರಿಕೆಯನ್ನು ಕಡೆಗಣಿಸಿ ಅವನು ತನ್ನ ಸ್ವಂತ ತಮ್ಮನನ್ನು ಕೊಂದನು. (ಆದಿಕಾಂಡ 4:1-8) ಆಗ ಯೆಹೋವನಿಗಾದ ನಿರಾಶೆಯನ್ನು ನೀವು ಊಹಿಸಬಲ್ಲಿರಾ?

ಆ ನಿರಾಶೆಯು ಯೆಹೋವನ ಸಂತೋಷವನ್ನು ಏಕೆ ಕಸಿದುಕೊಳ್ಳಲಿಲ್ಲ? ಯಾಕೆಂದರೆ, ಈ ಭೂಮಿಯನ್ನು ಪರಿಪೂರ್ಣ ಮಾನವರಿಂದ ತುಂಬಿಸಬೇಕೆಂದು ಯೆಹೋವನು ಆರಂಭದಲ್ಲೇ ಉದ್ದೇಶಿಸಿದನು ಮತ್ತು ಆ ಉದ್ದೇಶದ ನೆರವೇರಿಕೆಗಾಗಿ ಕೆಲಸಮಾಡುವುದನ್ನು ಮುಂದುವರಿಸಿದನು. (ಯೋಹಾನ 5:17) ಅದಕ್ಕೆಂದು ಆತನು ವಿಮೋಚನಾ ಯಜ್ಞವನ್ನೂ ತನ್ನ ರಾಜ್ಯವನ್ನೂ ಏರ್ಪಡಿಸಿದನು. (ಮತ್ತಾಯ 6:9, 10; ರೋಮಾಪುರ 5:18, 19) ಸಮಸ್ಯೆಯ ಕುರಿತು ತಲೆಕೆಡಿಸಿಕೊಳ್ಳುವ ಬದಲು ಯೆಹೋವ ದೇವರು ಪರಿಹಾರದ ಮೇಲೆ ಗಮನ ಕೇಂದ್ರೀಕರಿಸಿದನು.

ಹಿಂದೆ ಏನು ಆಗಬೇಕಾಗಿತ್ತೋ ಅಥವಾ ನಾವೇನು ಮಾಡಬೇಕಾಗಿತ್ತೋ ಆ ಕುರಿತು ಯೋಚಿಸುವ ಬದಲು ಸಕಾರಾತ್ಮಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅದು ಹೇಳುವುದು: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.”—ಫಿಲಿಪ್ಪಿ 4:8.

ನಿರಾಶೆಯ ಕಡೆಗಿನ ಯೋಗ್ಯ ನೋಟ

ಕೆಲವೊಂದು ಘಟನೆಗಳು ನಮ್ಮ ಜೀವನವನ್ನು ಹಠಾತ್ತನೆ ಬದಲಾಯಿಸಬಹುದು. ಉದಾಹರಣೆಗೆ, ದಿನ ಬೆಳಗಾಗುವುದರೊಳಗೆ ನಮ್ಮ ಕೆಲಸ ಹೋಗಬಹುದು, ನಮ್ಮ ಬಾಳಸಂಗಾತಿ ಸಾವನ್ನಪ್ಪಬಹುದು ಅಥವಾ ನಮಗಿದ್ದ ಸಭಾ ಜವಾಬ್ದಾರಿಗಳನ್ನು ಕಳೆದುಕೊಳ್ಳಬಹುದು. ನಾವು ನಮ್ಮ ಆರೋಗ್ಯ, ಮನೆ ಅಥವಾ ಸ್ನೇಹಿತರನ್ನು ಕಳೆದುಕೊಳ್ಳಬಹುದು. ಇಂಥ ಬದಲಾವಣೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು?

ಸರಿಯಾದ ಆದ್ಯತೆಗಳನ್ನಿಡುವುದು ಸಹಾಯಕಾರಿ ಎಂದು ಕೆಲವರು ಕಂಡುಕೊಂಡಿದ್ದಾರೆ. ಈ ಲೇಖನದಲ್ಲಿ ಈಗಾಗಲೇ ಉಲ್ಲೇಖಿಸಲಾದ ಡೆನ್ಕೆನ್‌ ಹೇಳುವುದು: “ಮಿಷನೆರಿ ಸೇವೆಗೆ ನಾವು ಇನ್ನೆಂದೂ ಹೋಗಲಾರೆವೆಂದು ನನಗೂ ನನ್ನ ಪತ್ನಿಗೂ ತಿಳಿದುಬಂದಾಗ ನಮ್ಮ ಕನಸುಗಳು ನುಚ್ಚುನೂರಾದವು. ಆದರೆ ಸಮಯ ದಾಟಿದಂತೆ ನಾವು ಎರಡು ಆದ್ಯತೆಗಳನ್ನು ಇಟ್ಟೆವು; ಮೊದಲನೆಯದು, ನನ್ನ ತಾಯಿಯನ್ನು ನೋಡಿಕೊಳ್ಳುವುದು ಮತ್ತು ಎರಡನೆಯದು, ಸಾಧ್ಯವಾಗುವಲ್ಲಿ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದುವರಿಸುವುದು. ಯಾವುದೇ ನಿರ್ಣಯಮಾಡುವಾಗ ಅದು ಈ ಆದ್ಯತೆಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬದನ್ನು ನಾವು ಪರಿಗಣಿಸುತ್ತೇವೆ. ಇದರಿಂದಾಗಿ, ಸರಿಯಾದ ನಿರ್ಣಯಗಳನ್ನು ಮಾಡುವುದು ನಮಗೆ ಹೆಚ್ಚು ಕಷ್ಟಕರವಾಗಿರುವುದಿಲ್ಲ.”

ನಿರಾಶರಾದಾಗ ನಕಾರಾತ್ಮಕ ವಿಷಯಗಳನ್ನು ದೊಡ್ಡದು ಮಾಡುವ ಪ್ರವೃತ್ತಿ ನಮ್ಮಲ್ಲಿ ಹೆಚ್ಚಿನವರಿಗೆ ಇರುವುದು ಸಾಮಾನ್ಯ. ಉದಾಹರಣೆಗೆ ಮಕ್ಕಳನ್ನು ಬೆಳೆಸಲು ನಾವು ಪಡುವ ಪ್ರಯಾಸದಲ್ಲಿ, ಉದ್ಯೋಗ ಗಿಟ್ಟಿಸಿಕೊಳ್ಳಲು ಅರ್ಹತೆ ಗಳಿಸುವುದರಲ್ಲಿ ಅಥವಾ ಬೇರೊಂದು ಭಾಷೆಯ ಪ್ರದೇಶಕ್ಕೆ ಹೋಗಿ ಸುವಾರ್ತೆ ಸಾರುವುದರಲ್ಲಿ ನಾವು ನಿರೀಕ್ಷಿಸಿದಂಥ ಫಲಿತಾಂಶಗಳು ಸಿಗಲಿಕ್ಕಿಲ್ಲ. ‘ನಾನು ಸೋತುಹೋದೆ’ ಎಂದು ನಿಮಗನಿಸಬಹುದು. ಆದರೆ, ಮಾನವಕುಲದ ನಿರಾಶಾಭರಿತ ಆರಂಭವು ಯೆಹೋವನು ಸೋತುಹೋಗಿದ್ದಾನೆಂದು ಹೇಗೆ ಸೂಚಿಸಲಿಲ್ಲವೋ ಹಾಗೆಯೇ ನಮ್ಮ ಪ್ರಯತ್ನಗಳು ತಕ್ಷಣ ಯಶಸ್ಸು ಕಾಣದಿರುವುದು ನಾವು ಸೋತು ಹೋಗಿದ್ದೇವೆಂಬದನ್ನು ಸೂಚಿಸುವುದಿಲ್ಲ.—ಧರ್ಮೋಪದೇಶಕಾಂಡ 32:4, 5.

ಜನರು ನಮ್ಮನ್ನು ನಿರಾಶೆಗೊಳಿಸುವಾಗ ಮುನಿಸಿಕೊಳ್ಳುವುದು ಸುಲಭ. ಆದರೆ ಯೆಹೋವನು ಹಾಗೆ ನಡೆದುಕೊಳ್ಳುವುದಿಲ್ಲ. ರಾಜ ದಾವೀದನು ಹಾದರಮಾಡಿ ತದನಂತರ ಆ ಸ್ತ್ರೀಯ ಗಂಡನನ್ನು ಕೊಲ್ಲಿಸಿದಾಗ ಯೆಹೋವನಿಗೆ ಅವನ ವಿಷಯವಾಗಿ ತುಂಬ ನಿರಾಶೆಯಾಯಿತು. ಹಾಗಿದ್ದರೂ, ಯೆಹೋವನು ದಾವೀದನ ನಿಜ ಪಶ್ಚಾತ್ತಾಪವನ್ನು ಗುರುತಿಸಿ ಅವನನ್ನು ತನ್ನ ಸೇವಕನಾಗಿ ಉಪಯೋಗಿಸುವುದನ್ನು ಮುಂದುವರಿಸಿದನು. ತದ್ರೀತಿಯಲ್ಲಿ, ನಂಬಿಗಸ್ತ ಅರಸನಾದ ಯೆಹೋಷಾಫಾಟನು, ದೇವರ ವೈರಿಗಳೊಂದಿಗೆ ಮೈತ್ರಿ ಮಾಡುವ ಮೂಲಕ ತಪ್ಪು ಮಾಡಿದನು. ಯೆಹೋವನ ಪ್ರವಾದಿ ಹೇಳಿದ್ದು: “ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ. ಆದರೂ . . . ನಿನ್ನಲ್ಲಿ ಸುಶೀಲತೆಯೂ ಉಂಟೆಂದು ತಿಳಿದು ಬಂತು.” (2 ಪೂರ್ವಕಾಲವೃತ್ತಾಂತ 19:2, 3) ಯೆಹೋಷಾಫಾಟನು ತನ್ನನ್ನು ಸಂಪೂರ್ಣವಾಗಿ ತೊರೆದಿರಲಿಲ್ಲ ಎಂಬದನ್ನು ಯೆಹೋವನು ಮನಗಂಡನು. ಅದೇ ರೀತಿ, ಸ್ನೇಹಿತರು ತಪ್ಪುಮಾಡಿದಾಗ ಮನಸ್ಸಿಗೆ ಹಚ್ಚಿಕೊಳ್ಳದೆ ಅಥವಾ ವಿಪರೀತ ಸಿಟ್ಟುತೋರಿಸದೆ ಇದ್ದರೆ ನಾವು ನಮ್ಮ ಸ್ನೇಹಿತರನ್ನು ಕಳಕೊಳ್ಳೆವು. ನಮ್ಮನ್ನು ನಿರಾಶೆಗೊಳಿಸುವ ಸ್ನೇಹಿತರಲ್ಲೂ ಒಳ್ಳೇ ಗುಣಗಳಿರಬಲ್ಲವು.—ಕೊಲೊಸ್ಸೆ 3:13.

ಯಶಸ್ಸಿನ ಹಾದಿಯಲ್ಲಿ ನಿರಾಶೆ ಅನಿವಾರ್ಯ ಎಂಬ ನೋಟ ನಮಗಿರಬೇಕು. ನಾವೊಂದು ಪಾಪ ಬಗೆದಾಗ ನಮಗೆ ನಮ್ಮ ಕುರಿತೇ ನಿರಾಶೆಯಾಗಬಹುದು. ಹಾಗಿದ್ದರೂ ದೃಢಮನಸ್ಸಿನಿಂದ ಸೂಕ್ತ ಕ್ರಮಗೈಯುತ್ತಾ ಮುನ್ನಡೆದರೆ ಇಂಥ ನಿರಾಶೆಯಿಂದ ನಾವು ಚೇತರಿಸಿಕೊಳ್ಳಸಾಧ್ಯವಿದೆ. ರಾಜ ದಾವೀದನಿಗೆ ಸ್ವತಃ ತನ್ನ ಕುರಿತು ತುಂಬ ನಿರಾಶೆಯಾದಾಗ ಅವನು ಬರೆದದ್ದು: “ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು. . . . ನನ್ನ ದೋಷವನ್ನು ತಿಳಿಸಿದೆನು. ನೀನು [ಯೆಹೋವನು] ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಕೀರ್ತನೆ 32:3-5) ದೇವರು ನಮ್ಮಿಂದ ನಿರೀಕ್ಷಿಸುವುದನ್ನು ನಾವು ಮಾಡಿಲ್ಲ ಎಂದು ತಿಳಿದುಬಂದಾಗ, ನಾವು ದೇವರ ಕ್ಷಮೆಯನ್ನು ಕೋರಬೇಕು, ನಮ್ಮ ನಡತೆಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಇನ್ನು ಮುಂದೆ ದೇವರ ಸಲಹೆಗಳನ್ನು ಹೆಚ್ಚು ನಿಕಟವಾಗಿ ಪಾಲಿಸುವೆವೆಂಬ ದೃಢನಿಶ್ಚಯ ಮಾಡಿಕೊಳ್ಳಬೇಕು.—1 ಯೋಹಾನ 2:1, 2.

ನಿರಾಶೆಯನ್ನು ಎದುರಿಸಲು ಈಗ ಅಣಿಗೊಳ್ಳಿ

ಒಂದಲ್ಲ ಒಂದು ರೀತಿಯ ನಿರಾಶೆಯನ್ನು ನಾವೆಲ್ಲರೂ ಅನುಭವಿಸಲೇಬೇಕಾಗುತ್ತದೆ. ಅದಕ್ಕೆ ಸಿದ್ಧರಾಗಿರಲು ನಾವೇನು ಮಾಡಬಲ್ಲೆವು? ಈ ನಿಟ್ಟಿನಲ್ಲಿ ಬ್ರೂನೋ ಎಂಬ ವೃದ್ಧ ಕ್ರೈಸ್ತನ ಮಾತುಗಳು ಸ್ವಾರಸ್ಯಕರ. ಅವನಿಗಾದ ಒಂದು ನಿರಾಶಾದಾಯಕ ಘಟನೆಯು ಅವನ ಜೀವನವನ್ನೇ ಬದಲಾಯಿಸಿತು. ಅವನು ಹೇಳಿದ್ದು: “ನನಗಾದ ನಿರಾಶೆಯನ್ನು ನಿಭಾಯಿಸಲು ನೆರವಾದ ಒಂದು ವಿಷಯ, ನನ್ನ ಆಧ್ಯಾತ್ಮಿಕತೆಯನ್ನು ಬಲಪಡಿಸಲು ನಾನು ಹಿಂದೆ ಏನನ್ನು ಮಾಡುತ್ತಿದ್ದೆನೋ ಅದನ್ನು ಮುಂದುವರಿಸಿದ್ದೇ ಆಗಿತ್ತು. ಈ ಕ್ರೂರ ವಿಷಯ ವ್ಯವಸ್ಥೆಯನ್ನು ಯೆಹೋವನು ಏಕೆ ಅನುಮತಿಸಿದ್ದಾನೆ ಎಂಬದನ್ನು ನಾನು ಕಲಿತಿದ್ದೆ. ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಸೆಯಲು ನಾನು ಹಲವಾರು ವರ್ಷಗಳ ಶ್ರಮ ವ್ಯಯಿಸಿದ್ದೆ. ನಾನು ಹೀಗೆ ಮಾಡಿದ್ದು ತುಂಬ ಒಳ್ಳೇದಾಯಿತು. ಏಕೆಂದರೆ, ನಾನು ಖಿನ್ನನಾದಾಗ ಆತನು ನನ್ನೊಟ್ಟಿಗೆ ಇದ್ದಾನೆಂಬ ಅರಿವೇ ನನಗೆ ತಾಳಿಕೊಳ್ಳಲು ಸಹಾಯಮಾಡಿತು.”

ಭವಿಷ್ಯತ್ತನ್ನು ಎದುರುನೋಡುತ್ತಿರುವಾಗ ಒಂದು ವಿಷಯದಲ್ಲಂತೂ ನಮಗೆ ಪೂರ್ಣ ಖಾತ್ರಿಯಿರಬಲ್ಲದು. ಅದೇನೆಂದರೆ, ಸ್ವತಃ ನಮ್ಮಿಂದಾಗಿ ಅಥವಾ ಇತರರ ದೆಸೆಯಿಂದಾಗಿ ನಮಗೆ ನಿರಾಶೆಯಾಗುವುದಾದರೂ ದೇವರೆಂದಿಗೂ ನಮ್ಮನ್ನು ನಿರಾಶೆಗೂಳಿಸನು. ಆತನೇ ಹೇಳಿರುವುದೇನೆಂದರೆ, ಯೆಹೋವ ಎಂಬ ತನ್ನ ಹೆಸರಿನ ಅರ್ಥ “ನಾನು ಏನಾಗಿ ಪರಿಣಮಿಸುವೆನೋ ಅದಾಗಿಯೇ ಪರಿಣಮಿಸುತ್ತೇನೆ.” (ವಿಮೋಚನಕಾಂಡ 3:14, NW) ಇದು, ತನ್ನ ವಾಗ್ದಾನಗಳನ್ನು ನೆರವೇರಿಸಲು ಆತನು ಏನು ಆಗಬೇಕೋ ಅದಾಗಿ ಪರಿಣಮಿಸುತ್ತಾನೆ ಎಂಬ ಭರವಸೆಯನ್ನು ನಮಗೆ ಕೊಡುತ್ತದೆ. ತನ್ನ ರಾಜ್ಯದ ಮುಖಾಂತರ ತನ್ನ ಚಿತ್ತವು ‘ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವುದು’ ಎಂದು ಮಾತುಕೊಟ್ಟಿದ್ದಾನೆ. ಅದಕ್ಕೋಸ್ಕರವೇ ಅಪೊಸ್ತಲ ಪೌಲನು ಬರೆದದ್ದು: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ . . . ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.”—ಮತ್ತಾಯ 6:10; ರೋಮಾಪುರ 8:38, 39.

ಪ್ರವಾದಿ ಯೆಶಾಯನು ನುಡಿದ ದೇವರ ಈ ವಾಗ್ದಾನವು ನಿಶ್ಚಯವಾಗಿ ನೆರವೇರುವುದನ್ನು ನಾವು ಮುನ್ನೋಡಸಾಧ್ಯವಿದೆ: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17) ನಿರಾಶಾದಾಯಕ ಘಟನೆಗಳ ಕಹಿನೆನಪುಗಳೆಲ್ಲವು ಅಳಿದು ಹೋಗುವ ಸಮಯ ಹತ್ತಿರವಿದೆ ಎಂಬದು ಎಷ್ಟು ಉಜ್ವಲ ಪ್ರತೀಕ್ಷೆ! (w08 3/1)

[ಪಾದಟಿಪ್ಪಣಿ]

^ ಪ್ಯಾರ. 5 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಮ್ಮ ಪ್ರಯತ್ನಗಳು ತಕ್ಷಣ ಯಶಸ್ಸು ಕಾಣದಿರುವುದು ನಾವು ಸೋತು ಹೋಗಿದ್ದೇವೆಂಬದನ್ನು ಸೂಚಿಸುವುದಿಲ್ಲ

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ಹಿಂದೆ ಏನು ಆಗಬೇಕಾಗಿತ್ತೋ ಆ ಕುರಿತು ಯೋಚಿಸುವ ಬದಲು ಸಕಾರಾತ್ಮಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆ

[ಪುಟ 31ರಲ್ಲಿರುವ ಚಿತ್ರಗಳು]

ಮಾನವರು ತನ್ನನ್ನು ನಿರಾಶೆಗೊಳಿಸಿದರೂ ದೇವರು ಸಂತೋಷಿತನಾಗಿದ್ದಾನೆ ಏಕೆಂದರೆ ತನ್ನ ಉದ್ದೇಶ ನೆರವೇರುವ ಖಾತ್ರಿ ಆತನಿಗಿದೆ

[ಪುಟ 32ರಲ್ಲಿರುವ ಚಿತ್ರ]

ಆಧ್ಯಾತ್ಮಿಕ ಆದ್ಯತೆಗಳನ್ನಿಡುವ ಮೂಲಕ ನಿರಾಶೆಯನ್ನು ನಿಭಾಯಿಸಬಹುದು