ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಳಿ ಜೀವಕೊಡುವಾತನು

ಮರಳಿ ಜೀವಕೊಡುವಾತನು

ದೇವರ ಸಮೀಪಕ್ಕೆ ಬನ್ನಿರಿ

ಮರಳಿ ಜೀವಕೊಡುವಾತನು

ಲೂಕ 7:11-15

ನಿಮ್ಮ ಆಪ್ತರಲ್ಲಿ ಯಾರಾದರೂ ಸಾವನ್ನಪ್ಪಿದ್ದಾರೋ? ಹಾಗಿರುವಲ್ಲಿ ಬದುಕಿನಲ್ಲಾಗುವ ಅತಿ ನೋವಿನ ಅನುಭವ ನಿಮಗಾಗಿದೆ. ಸೃಷ್ಟಿಕರ್ತನಿಗೆ ನಿಮ್ಮ ಅಳಲು ಅರ್ಥವಾಗುತ್ತದೆ ಮಾತ್ರವಲ್ಲ, ಮರಣದ ಪರಿಣಾಮಗಳನ್ನು ಆತನು ಅಳಿಸಿಯೂ ಹಾಕಬಲ್ಲನು. ತಾನು ಜೀವ ಕೊಡುವಾತನು ಮಾತ್ರವಲ್ಲ ಮರಳಿ ಜೀವಕೊಡುವಾತನೂ ಆಗಿದ್ದೇನೆಂದು ರುಜುಪಡಿಸಲಿಕ್ಕಾಗಿ ಹಿಂದಿನ ಕಾಲದಲ್ಲಿ ನಡೆದಂಥ ಪುನರುತ್ಥಾನಗಳನ್ನು ಆತನು ಬೈಬಲಿನಲ್ಲಿ ದಾಖಲಿಸಿಟ್ಟಿದ್ದಾನೆ. * ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ಆತನು ಮಾಡಿದ ಒಂದು ಪುನರುತ್ಥಾನವನ್ನು ನಾವೀಗ ಪರಿಶೀಲಿಸೋಣ. ಈ ಅದ್ಭುತದ ವೃತ್ತಾಂತವು ಲೂಕ 7:11-15ರಲ್ಲಿದೆ.

ಇಸವಿ ಸಾ.ಶ. 31 ಆಗಿತ್ತು. ಗಲಿಲಾಯದ ನಾಯಿನೆಂಬ ಊರಿಗೆ ಯೇಸು ಹೊರಟಿದ್ದನು. (ವಚನ 11) ಊರಿನ ಹೊರವಲಯಕ್ಕೆ ಬರುವಷ್ಟರಲ್ಲಿ ಸಂಜೆಯಾಗಿದ್ದಿರಬಹುದು. ಬೈಬಲ್‌ ವರದಿಸುವುದು: “ಆತನು ಊರಬಾಗಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊರಗೆ ತರುತ್ತಿದ್ದರು. ಇವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ಗಂಡಸತ್ತವಳಾಗಿದ್ದಳು. ಆಕೆಯ ಸಂಗಡ ಗ್ರಾಮಸ್ಥರು ಅನೇಕರಿದ್ದರು.” (ವಚನ 12) ವಿಧವೆ ಆಗಿದ್ದ ಆ ತಾಯಿಯ ಸಂಕಟವನ್ನು ನೀವು ಊಹಿಸಬಲ್ಲಿರಾ? ತನ್ನ ಜೀವನಕ್ಕೆ ಆಸರೆಯಾಗಿದ್ದವರನ್ನು ಆಕೆ ಕಳೆದುಕೊಳ್ಳುವುದು ಇದು ಎರಡನೆಯ ಬಾರಿ.

ದುಃಖಿಸುತ್ತಿರುವ ಆ ತಾಯಿಯ ಕಡೆ ಯೇಸು ದೃಷ್ಟಿಹರಿಸುತ್ತಾನೆ. ಆಕೆ ತನ್ನ ಮಗನನ್ನು ಹೊತ್ತಿರುವ ಚಟ್ಟದ ಬದಿಯಲ್ಲೇ ನಡೆಯುತ್ತಿದ್ದಿರಬೇಕು. ವೃತ್ತಾಂತವು ಮುಂದುವರಿಸುವುದು: ‘ಸ್ವಾಮಿಯು ಆಕೆಯನ್ನು ಕಂಡು ಕನಿಕರಿಸಿ—ಅಳಬೇಡ ಎಂದು ಆಕೆಗೆ ಹೇಳಿದನು.’ (ವಚನ 13) ಆ ವಿಧವೆಯ ದುರವಸ್ಥೆಯನ್ನು ಕಂಡು ಯೇಸುವಿಗೆ ಕನಿಕರ ಹುಟ್ಟಿತು. ಅವನಿಗೆ ಆಗ ತನ್ನ ತಾಯಿಯ ನೆನಪು ಬಂದಿರಬೇಕು ಏಕೆಂದರೆ ಆ ಸಮಯದಷ್ಟಕ್ಕೆ ಆಕೆಯು ಪ್ರಾಯಶಃ ವಿಧವೆಯಾಗಿದ್ದಳು. ಅವನ ತಾಯಿಯೂ ಅವನಿಗಾಗಿ ಗೋಳಾಡುವ ಸಮಯ ಸ್ವಲ್ಪದರಲ್ಲೇ ಬರಲಿತ್ತು.

ತರುವಾಯ ಯೇಸು ಅವರ ಹತ್ತಿರಕ್ಕೆ ಬರುತ್ತಾನೆ, ಆದರೆ ಆ ಶವಯಾತ್ರೆ ಸೇರಲು ಅಲ್ಲ. ಅಧಿಕಾರಯುತ ಧಾಟಿಯಲ್ಲಿ ಅವನು ‘ಚಟ್ಟವನ್ನು ಮುಟ್ಟಿದಾಗ’ ಅದನ್ನು ಹೊತ್ತುಕೊಂಡವರೂ ಉಳಿದವರೆಲ್ಲರೂ ನಿಂತುಬಿಟ್ಟರು. ಮೃತ್ಯುವಿನ ಮೇಲೆ ಅಧಿಕಾರಹೊಂದಿದವನ ಸ್ವರದಿಂದ, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.” (ವಚನ 14, 15) ಸತ್ತಾಗ ಆ ಯೌವನಸ್ಥನು ತನ್ನ ತಾಯಿಯನ್ನು ಅಗಲಿದ್ದನು. ಹಾಗಾಗಿ, ಯೇಸು ‘ಅವನನ್ನು ಅವನ ತಾಯಿಗೆ ಕೊಟ್ಟಾಗ’ ಅವರಿಬ್ಬರೂ ಪುನಃ ಕುಟುಂಬವಾಗಿ ಒಂದಾದರು. ದುಃಖದ ಕಣ್ಣೀರು ಆನಂದಬಾಷ್ಪವಾಗಿ ಮಾರ್ಪಟ್ಟಿತು.

ಮೃತಪಟ್ಟಿರುವ ನಿಮ್ಮ ಆಪ್ತರು ಮರಳಿ ಜೀವಪಡೆಯುವಾಗ ಅವರೊಂದಿಗಿರಲು ನಿಮ್ಮ ಹೃದಯ ತುಡಿಯುತ್ತಿದೆಯೇ? ನಿಮ್ಮ ಭಾವನೆಗಳನ್ನು ದೇವರು ಅರ್ಥಮಾಡಿಕೊಳ್ಳುತ್ತಾನೆ ಎಂಬ ಖಾತ್ರಿ ನಿಮಗಿರಲಿ. ಯೇಸು, ದೇವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದ್ದನು. ಆ ವಿಧವೆಗೆ ಅವನು ತೋರಿಸಿದ ಸಹಾನುಭೂತಿಯು ದೇವರ ಕರುಣೆಯ ಪ್ರತಿಬಿಂಬವಾಗಿತ್ತು. (ಯೋಹಾನ 14:9) ದೇವರ ಸ್ಮರಣೆಯಲ್ಲಿರುವ ಎಲ್ಲ ಮೃತ ಜನರನ್ನು ಪುನಃ ಬದುಕಿಸಲು ಆತನು ಹಂಬಲಿಸುತ್ತಾನೆಂದು ಬೈಬಲ್‌ ಬೋಧಿಸುತ್ತದೆ. (ಯೋಬ 14:14, 15) ಆತನ ವಾಕ್ಯವಾದ ಬೈಬಲ್‌ ನಮಗೊಂದು ಪ್ರಜ್ವಲ ನಿರೀಕ್ಷೆ ನೀಡುತ್ತದೆ. ಪರದೈಸ್‌ ಭೂಮಿಯಲ್ಲಿ ಜೀವಿಸುವ ಮತ್ತು ಮೃತಪಟ್ಟಿರುವ ನಮ್ಮ ಆಪ್ತರನ್ನು ಕಾಣುವ ಪ್ರತೀಕ್ಷೆಯೇ ಅದಾಗಿದೆ. (ಲೂಕ 23:43; ಯೋಹಾನ 5:28, 29) ಮರಳಿ ಜೀವಕೊಡುವಾತನ ಕುರಿತು ಹಾಗೂ ಪುನರುತ್ಥಾನದ ನಿರೀಕ್ಷೆಯ ಕುರಿತು ನೀವೇಕೆ ಹೆಚ್ಚನ್ನು ಕಲಿಯಬಾರದು? (w08 3/1)

[ಪಾದಟಿಪ್ಪಣಿ]

^ ಪ್ಯಾರ. 4 ಪುನರುತ್ಥಾನ ಎಂದರೆ ಸತ್ತ ವ್ಯಕ್ತಿಯೊಬ್ಬನನ್ನು ಪುನಃ ಜೀವಕ್ಕೆ ತರುವುದು.

[ಪುಟ 11ರಲ್ಲಿರುವ ಚಿತ್ರ]

“ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು”