ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಮರಣ ನಿಮ್ಮನ್ನು ಹೇಗೆ ರಕ್ಷಿಸಬಲ್ಲದು?

ಯೇಸುವಿನ ಮರಣ ನಿಮ್ಮನ್ನು ಹೇಗೆ ರಕ್ಷಿಸಬಲ್ಲದು?

ಯೇಸುವಿನ ಮರಣ ನಿಮ್ಮನ್ನು ಹೇಗೆ ರಕ್ಷಿಸಬಲ್ಲದು?

ಸುಮಾರು 2,000 ವರ್ಷಗಳ ಹಿಂದೆ, ಸಾ.ಶ 33ರ ಯೆಹೂದಿ ಪಸ್ಕಹಬ್ಬದಂದು ಒಬ್ಬ ಅಮಾಯಕ ವ್ಯಕ್ತಿಯು ಎಲ್ಲರೂ ಬದುಕಶಕ್ತರಾಗುವಂತೆ ತನ್ನ ಜೀವಕೊಟ್ಟನು. ಆ ವ್ಯಕ್ತಿ ಯಾರು? ಅವನು ನಜರೇತಿನ ಯೇಸುವೇ. ಅವನ ಆ ಉದಾತ್ತ ಕೃತ್ಯದಿಂದ ಯಾರು ಪ್ರಯೋಜನ ಹೊಂದಸಾಧ್ಯವಿದೆ? ಇಡೀ ಮಾನವಕುಲ. ಈ ಜೀವರಕ್ಷಕ ಯಜ್ಞದ ಕುರಿತು ಬೈಬಲಿನ ಸುಪರಿಚಿತ ವಚನವೊಂದು ಹೀಗೆ ಹೇಳುತ್ತದೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.

ಈ ವಚನದ ಪರಿಚಯ ಅನೇಕರಿಗಿರುವುದಾದರೂ ಕೆಲವರಿಗೆ ಮಾತ್ರ ಅದರ ಅರ್ಥ ನಿಜವಾಗಿಯೂ ತಿಳಿದಿದೆ. ಇಂಥವರು ಹೀಗೆ ಆಲೋಚಿಸುತ್ತಾರೆ: ‘ಕ್ರಿಸ್ತನ ಯಜ್ಞ ನಮಗೇಕೆ ಬೇಕು? ಕೇವಲ ಒಬ್ಬ ವ್ಯಕ್ತಿಯ ಮರಣ ಇಡೀ ಮಾನವಕುಲವನ್ನು ನಿತ್ಯಮರಣದಿಂದ ಹೇಗೆ ರಕ್ಷಿಸಬಲ್ಲದು?’ ಈ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ತೃಪ್ತಿಕರ ಉತ್ತರಗಳನ್ನು ಬೈಬಲ್‌ ಒದಗಿಸುತ್ತದೆ.

ಮಾನವಕುಲದ ಮೇಲೆ ಮರಣ ಹೇಗೆ ಬಂತು?

ಮಾನವರು ಭೂಮಿಯ ಮೇಲೆ ಅಲ್ಪಕಾಲ ಜೀವಿಸಲು, ಕಷ್ಟಗಳನ್ನು ಅನುಭವಿಸಲು, ಕೆಲವೊಂದು ಸಂತೋಷದ ಕ್ಷಣಗಳಲ್ಲಿ ಆನಂದಿಸಲು, ನಂತರ ಸತ್ತು ಉತ್ತಮವಾದ ಬೇರೊಂದು ಸ್ಥಳಕ್ಕೆ ಹೋಗಲು ಸೃಷ್ಟಿಸಲ್ಪಟ್ಟಿದ್ದರು ಎಂದು ಕೆಲವರು ನಂಬುತ್ತಾರೆ. ಈ ಯೋಚನಾಧಾಟಿಗನುಸಾರ ಮಾನವರಿಗಾಗಿರುವ ದೇವರ ಉದ್ದೇಶದಲ್ಲಿ ಮರಣವೂ ಸೇರಿರುತ್ತದೆ. ಆದರೆ ಮಾನವರ ಮೇಲೆ ಬಂದೆರಗುವ ಮರಣಕ್ಕೆ ಬೇರೊಂದು ಕಾರಣವನ್ನು ಬೈಬಲ್‌ ಕೊಡುತ್ತದೆ. ಅದು ಹೇಳುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಜನರು ಪಾಪದ ಕಾರಣದಿಂದಲೇ ಸಾಯುತ್ತಾರೆಂದು ಈ ವಚನ ತೋರಿಸುತ್ತದೆ. ಮಾನವಕುಲದ ಮೇಲೆ ಪಾಪದ ಮಾರಣಾಂತಿಕ ಪರಿಣಾಮಗಳನ್ನು ತಂದೊಡ್ಡಿದ ಆ ‘ಒಬ್ಬ ಮನುಷ್ಯನು’ ಯಾರು?

ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯಕ್ಕನುಸಾರ, ಎಲ್ಲಾ ಮಾನವರು ಒಂದೇ ಮೂಲದಿಂದ ಬಂದವರೆಂದು ಹೆಚ್ಚಿನ ವಿಜ್ಞಾನಿಗಳು ನಂಬುತ್ತಾರೆ. ಆ ಒಂದೇ ಮೂಲವು ‘ಒಬ್ಬ ಮನುಷ್ಯನು’ ಎಂದು ಬೈಬಲ್‌ ಸ್ಪಷ್ಟವಾಗಿ ಗುರುತಿಸುತ್ತದೆ. ಆದಿಕಾಂಡ 1:27ರಲ್ಲಿ ನಾವು ಓದುವುದು: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” ಈ ಪ್ರಥಮ ಮಾನವಜೋಡಿಯು ಸರ್ವಶಕ್ತ ದೇವರ ಭೂ-ಸೃಷ್ಟಿಗೆ ಭವ್ಯ ಭೂಷಣವಾಗಿತ್ತು ಎಂದು ಬೈಬಲ್‌ ತಿಳಿಸುತ್ತದೆ.

ಯೆಹೋವ ದೇವರು ಪ್ರಥಮ ಮಾನವನನ್ನು ಸೃಷ್ಟಿಮಾಡಿದ ನಂತರ ಮಾನವ ಜೀವನ ಹೇಗಿತ್ತೆಂಬುದರ ಕುರಿತು ಆದಿಕಾಂಡದಲ್ಲಿರುವ ವೃತ್ತಾಂತವು ಹೆಚ್ಚಿನ ವಿವರಗಳನ್ನು ಕೊಡುತ್ತದೆ. ಗಮನಾರ್ಹವಾದ ಸಂಗತಿಯೇನಂದರೆ, ಅವರು ಅವಿಧೇಯರಾದರೆ ಮಾತ್ರ ಮರಣ ಬರುವುದೆಂದು ಹೇಳಿದ್ದನ್ನು ಬಿಟ್ಟರೆ ಆ ಇಡೀ ವೃತ್ತಾಂತದಲ್ಲಿ ದೇವರು ಮರಣದ ಬಗ್ಗೆ ಬೇರೆಲ್ಲೂ ಪ್ರಸ್ತಾಪಿಸಿಲ್ಲ. (ಆದಿಕಾಂಡ 2:16, 17) ಮಾನವರು ಸುಂದರ ಪರದೈಸ್‌ ಭೂಮಿಯಲ್ಲಿ ಆರೋಗ್ಯವಂತರಾಗಿ ನೆಮ್ಮದಿಯಿಂದ ಸದಾಕಾಲವೂ ಜೀವಿಸಬೇಕೆಂದು ಆತನು ಬಯಸಿದ್ದನು. ಅವರು ವೃದ್ಧಾಪ್ಯದ ಪರಿಣಾಮಗಳನ್ನು ಅನುಭವಿಸಿ ಕ್ರಮೇಣ ಸಾಯುವುದನ್ನು ಆತನು ಬಯಸಲಿಲ್ಲ. ಹಾಗಾದರೆ ಮರಣವು ಎಲ್ಲ ಮಾನವರ ಮೇಲೆ ಹೇಗೆ ಹತೋಟಿ ಸಾಧಿಸಿತು?

ಆದಿಕಾಂಡ ಪುಸ್ತಕದ 3ನೆಯ ಅಧ್ಯಾಯ ದಾಖಲಿಸುವಂತೆ ಪ್ರಥಮ ಮಾನವ ಜೋಡಿಯು ಬೇಕುಬೇಕೆಂದೇ ತಮ್ಮ ಜೀವದಾತನಾದ ಯೆಹೋವ ದೇವರಿಗೆ ಅವಿಧೇಯರಾಗುವ ಆಯ್ಕೆ ಮಾಡಿದರು. ಆದುದರಿಂದಲೇ ದೇವರು ತಾನು ಅವರಿಗೆ ಮೊದಲೇ ತಿಳಿಯಪಡಿಸಿದ್ದ ದಂಡನೆಯನ್ನು ಜಾರಿಗೆ ತಂದನು. ದೇವರು ಆ ಪುರುಷನಿಗೆ ಹೇಳಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದಿ.” (ಆದಿಕಾಂಡ 3:19) ದೇವರ ಮಾತುಗಳಿಗನುಸಾರವಾಗಿಯೇ ಅವಿಧೇಯರಾದ ಆ ಇಬ್ಬರು ಮಾನವರು ಕ್ರಮೇಣ ಸತ್ತರು.

ಹಾನಿಯಾದದ್ದು ಆ ಪ್ರಥಮ ಮಾನವ ಜೋಡಿಗೆ ಮಾತ್ರ ಅಲ್ಲ. ಅವರ ಅವಿಧೇಯತೆಯು ಅವರ ಸಂತತಿ ಆನಂದಿಸಸಾಧ್ಯವಿದ್ದ ಪರಿಪೂರ್ಣ ಜೀವನದ ಪ್ರತೀಕ್ಷೆಯನ್ನು ಸಹ ಭಗ್ನಗೊಳಿಸಿತು. ಇನ್ನೂ ಹುಟ್ಟಿರದ ಆ ಮಾನವರನ್ನೂ ಒಳಗೂಡಿಸಿ ಯೆಹೋವನು ಆದಾಮಹವ್ವರಿಗೆ ತನ್ನ ಈ ಉದ್ದೇಶವನ್ನು ಹೇಳಿದ್ದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಕಾಲಕ್ರಮೇಣ ಮಾನವ ಕುಟುಂಬವು ಭೂಮಿಯಲ್ಲಿ ತುಂಬಿಕೊಳ್ಳಬಹುದಿತ್ತು ಮತ್ತು ಮರಣವಿಲ್ಲದ ಜೀವನದಲ್ಲಿ ಅಪರಿಮಿತ ಸಂತೋಷವನ್ನು ಅನುಭವಿಸಬಹುದಿತ್ತು. ಆದರೆ ಅವರ ಪೂರ್ವಜನಾದ ಆದಾಮನು—ಆ ‘ಒಬ್ಬ ಮನುಷ್ಯನು’—ಅವರನ್ನು ಪಾಪಕ್ಕೆ ದಾಸರಾಗಿ ಮಾರಿಬಿಟ್ಟನು ಮತ್ತು ಮರಣವು ತಪ್ಪಿಸಲಾಗದ ಅಂತ್ಯಫಲವಾಯಿತು. ಪ್ರಥಮ ಮಾನವನ ವಂಶಜನಾದ ಅಪೊಸ್ತಲ ಪೌಲನು ಬರೆದದ್ದು: ‘ನಾನು ಪಾಪದ ಸ್ವಾಧೀನದಲ್ಲಿರುವದಕ್ಕೆ ಮಾರಲ್ಪಟ್ಟವನು ಆಗಿದ್ದೇನೆ.’—ರೋಮಾಪುರ 7:14.

ಇತ್ತೀಚಿನ ದಿನಗಳಲ್ಲಿ ವಿಧ್ವಂಸಕರು ಬಹುಮೂಲ್ಯ ಕಲಾಕೃತಿಗಳನ್ನು ಕೆಡಿಸಿರುವಂತೆಯೇ ಆದಾಮನು ಪಾಪಮಾಡುವ ಮೂಲಕ ದೇವರ ಅದ್ಭುತ ಸೃಷ್ಟಿಯಾದ ಮಾನವರಿಗೆ ಅತೀವ ಹಾನಿಯನ್ನುಂಟುಮಾಡಿದನು. ಆದಾಮನ ಮಕ್ಕಳಿಗೆ ಮಕ್ಕಳು, ಮೊಮ್ಮಕ್ಕಳು ಹುಟ್ಟಿದರು ಮತ್ತು ಹೀಗೆ ಮುಂದುವರಿಯುತ್ತಾ ಹೋಯಿತು. ಮುಂದೆ ಬಂದಂಥ ಪ್ರತಿಯೊಂದು ಪೀಳಿಗೆಯು ಹುಟ್ಟಿ ಬೆಳೆದು ಸಂತಾನ ಹುಟ್ಟಿಸಿ ನಂತರ ಸತ್ತು ಹೋಯಿತು. ಅವರೆಲ್ಲರೂ ಏಕೆ ಸತ್ತರು? ಏಕೆಂದರೆ ಅವರೆಲ್ಲರೂ ಆದಾಮನ ಸಂತತಿಯವರಾಗಿದ್ದರು. ಬೈಬಲ್‌ ಹೇಳುವುದು: ‘ಒಬ್ಬನ ಅಪರಾಧದಿಂದ ಎಲ್ಲಾ ಮನುಷ್ಯರು ಸತ್ತರು.’ (ರೋಮಾಪುರ 5:15) ಕಾಯಿಲೆ, ವೃದ್ಧಾಪ್ಯ, ಕೆಟ್ಟದ್ದನ್ನು ಮಾಡುವ ಪ್ರವೃತ್ತಿ, ಮರಣ ಇವೆಲ್ಲವೂ ಆದಾಮನು ತನ್ನ ಕುಟುಂಬಕ್ಕೆ ದ್ರೋಹಬಗೆದದ್ದರ ಘೋರ ಪರಿಣಾಮಗಳಾಗಿವೆ. ಆ ಕುಟುಂಬದಲ್ಲಿ ನಾವೆಲ್ಲರೂ ಒಳಗೂಡಿದ್ದೇವೆ.

ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಸಂಬೋಧಿಸಿದ ಪತ್ರದಲ್ಲಿ ಅಪೊಸ್ತಲ ಪೌಲನು ತನ್ನನ್ನೂ ಕೂಡಿಸುತ್ತಾ ಎಲ್ಲಾ ಅಪರಿಪೂರ್ಣ ಮಾನವರ ಶೋಚನೀಯ ಸ್ಥಿತಿ ಮತ್ತು ಪಾಪದ ಪರಿಣಾಮಗಳ ವಿರುದ್ಧದ ನಿರಾಶೆಗೊಳಿಸುವ ಹೋರಾಟದ ಕುರಿತು ಬರೆದನು. ಅವನು ಉದ್ಗರಿಸಿದ್ದು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” ಇದೊಂದು ಸೂಕ್ತ ಪ್ರಶ್ನೆ ಅಲ್ಲವೊ? ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆಗಾಗಿ ಹಾತೊರೆಯುತ್ತಿರುವ ಪೌಲ ಹಾಗೂ ಇನ್ನಿತರರೆಲ್ಲರಿಗೆ ಯಾರು ರಕ್ಷಣೆ ಒದಗಿಸಬಲ್ಲರು? ಪೌಲನೇ ಇದನ್ನು ಉತ್ತರಿಸುತ್ತಾ ಹೇಳುವುದು: “ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:14-25) ಹೌದು, ನಮ್ಮ ಸೃಷ್ಟಿಕರ್ತನು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ನಮ್ಮ ಬಿಡುಗಡೆಗಾಗಿ ಏರ್ಪಾಡನ್ನು ಮಾಡಿದ್ದಾನೆ.

ಮಾನವಕುಲದ ರಕ್ಷಣೆಗಾಗಿರುವ ದೇವರ ಏರ್ಪಾಡಿನಲ್ಲಿ ಯೇಸುವಿನ ಪಾತ್ರ

ಯೇಸು, ಪಾಪದ ಮರಣಕರ ದಾಸತ್ವದಿಂದ ಮಾನವಕುಲವನ್ನು ರಕ್ಷಿಸುವುದರಲ್ಲಿ ತನ್ನ ಪಾತ್ರವೇನೆಂಬದನ್ನು ವಿವರಿಸಿದನು. ಆತನು ಹೇಳಿದ್ದು: ‘ಮನುಷ್ಯಕುಮಾರನು ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೆ ಬಂದನು.’ (ಮತ್ತಾಯ 20:28) ಯೇಸುವಿನ ಪ್ರಾಣ ಹೇಗೆ ಈಡನ್ನು ಅಥವಾ ವಿಮೋಚನಾ ಮೌಲ್ಯವನ್ನು ಒದಗಿಸುತ್ತದೆ? ಆತನ ಮರಣ ನಮಗೆ ಹೇಗೆ ಪ್ರಯೋಜನದಾಯಕವಾಗಿದೆ?

ಯೇಸುವನ್ನು ‘ಪಾಪರಹಿತನೂ,’ “ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ” ಎಂದು ಬೈಬಲ್‌ ವರ್ಣಿಸುತ್ತದೆ. ಯೇಸು ತನ್ನ ಜೀವನದಾದ್ಯಂತ ದೇವರ ನಿಯಮಗಳಿಗೆ ಪೂರ್ತಿಯಾಗಿ ವಿಧೇಯನಾದನು. (ಇಬ್ರಿಯ 4:15; 7:26) ಆದ್ದರಿಂದ ಯೇಸು ಸತ್ತದ್ದು, ಆದಾಮನಂತೆ ಪಾಪ ಮತ್ತು ಅವಿಧೇಯತೆಯಿಂದಾಗಿ ಅಲ್ಲ. (ಯೆಹೆಜ್ಕೇಲ 18:4) ಮಾನವಕುಲವನ್ನು ಪಾಪ ಮತ್ತು ಮರಣದಿಂದ ರಕ್ಷಿಸಬೇಕೆಂಬ ತನ್ನ ತಂದೆಯ ಚಿತ್ತವನ್ನು ಪೂರೈಸಲು ಯೇಸು ಮರಣಕ್ಕೆ ಅರ್ಹನಲ್ಲದಿದ್ದರೂ ಅದಕ್ಕೆ ಶರಣನಾದನು. ಈಗಾಗಲೇ ಹೇಳಲ್ಪಟ್ಟಂತೆ ಯೇಸು ಮನಃಪೂರ್ವಕವಾಗಿ ‘ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡಲು’ ಬಂದನು. ಇತಿಹಾಸದಾದ್ಯಂತ ಇನ್ಯಾರಲ್ಲೂ ಇರದ ಎಣೆಯಿಲ್ಲದ ಪ್ರೀತಿಯಿಂದ ಪ್ರಚೋದಿತನಾದ ಯೇಸು ಮನಃಪೂರ್ವಕವಾಗಿ ‘ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದನು.’—ಇಬ್ರಿಯ 2:9.

ಯೇಸು ಯಜ್ಞಾರ್ಪಿಸಿದ ಜೀವವು ಆದಾಮನು ಪಾಪ ಮಾಡಿದಾಗ ಕಳೆದುಕೊಂಡ ಜೀವಕ್ಕೆ ಸರಿಸಮಾನವಾದದ್ದಾಗಿತ್ತು. ಯೇಸುವಿನ ಮರಣದ ಫಲಿತಾಂಶವೇನಾಗಿತ್ತು? ಯೆಹೋವನು ಆ ಯಜ್ಞವನ್ನು “ಎಲ್ಲರ ವಿಮೋಚನಾರ್ಥವಾಗಿ” ಸ್ವೀಕರಿಸಿದನು. (1 ತಿಮೊಥೆಯ 2:6) ಯೆಹೋವನು, ಪಾಪ ಮತ್ತು ಮರಣದ ದಾಸತ್ವದಲ್ಲಿದ್ದ ಮಾನವಕುಲವನ್ನು ಪುನಃ ಕೊಂಡುಕೊಳ್ಳಲು ಅಥವಾ ಬಿಡುಗಡೆಮಾಡಲು ಯೇಸುವಿನ ಜೀವದ ಮೌಲ್ಯವನ್ನು ಉಪಯೋಗಿಸಿದನು.

ಮಾನವರ ಸೃಷ್ಟಿಕರ್ತನ ಈ ಪ್ರೀತಿಭರಿತ ಮಹಾನ್‌ ಕೃತ್ಯವನ್ನು ಬೈಬಲ್‌ ಮತ್ತೆಮತ್ತೆ ಹೇಳುತ್ತದೆ. “ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು” ಎಂದು ಪೌಲನು ಕ್ರೈಸ್ತರಿಗೆ ನೆನಪುಹುಟ್ಟಿಸಿದನು. (1 ಕೊರಿಂಥ 6:20; 7:23) ದೇವರು ಮಾನವರನ್ನು ಮರಣಾಧೀನ ಜೀವನದಿಂದ ವಿಮೋಚಿಸಲು ಬೆಳ್ಳಿಬಂಗಾರಗಳನ್ನಲ್ಲ ಬದಲಾಗಿ ತನ್ನ ಮಗನ ರಕ್ತವನ್ನು ಉಪಯೋಗಿಸಿದನೆಂದು ಪೇತ್ರನು ಕ್ರೈಸ್ತರಿಗೆ ಬರೆದನು. (1 ಪೇತ್ರ 1:18, 19) ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಮೂಲಕ ಯೆಹೋವನು ಮಾನವಕುಲವನ್ನು ನಿತ್ಯ ಮರಣವೆಂಬ ಅಂತ್ಯಫಲದಿಂದ ರಕ್ಷಿಸಲು ಏರ್ಪಾಡು ಮಾಡಿದನು.

ಕ್ರಿಸ್ತನ ವಿಮೋಚನಾ ಮೌಲ್ಯದಿಂದ ನೀವು ಪ್ರಯೋಜನ ಪಡೆಯುವಿರೋ?

ಕ್ರಿಸ್ತನ ವಿಮೋಚನಾ ಮೌಲ್ಯದ ಹೆಚ್ಚು ವ್ಯಾಪಕವಾದ ಪ್ರಯೋಜನಗಳ ಕುರಿತು ಅಪೊಸ್ತಲ ಯೋಹಾನನು ಬರೆದದ್ದು: “ಆತನು [ಯೇಸು ಕ್ರಿಸ್ತನು] ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:2) ಹೌದು, ಕ್ರಿಸ್ತನ ವಿಮೋಚನಾ ಮೌಲ್ಯವು ಇಡೀ ಮಾನವಕುಲಕ್ಕೆ ಲಭ್ಯವಿದೆ. ಇದರರ್ಥ ಈ ಬೆಲೆಕಟ್ಟಲಾಗದ ಏರ್ಪಾಡಿನ ಪ್ರಯೋಜನಗಳು ತನ್ನಷ್ಟಕ್ಕೆ ಎಲ್ಲರಿಗೆ ಒದಗಿಬರುತ್ತವೆಂದೋ? ಇಲ್ಲ. ಇದನ್ನು ದೃಷ್ಟಾಂತಿಸಲಿಕ್ಕಾಗಿ ಒಂದು ರಕ್ಷಣಾ ಕಾರ್ಯಾಚರಣೆಯ ಕುರಿತು ಯೋಚಿಸಿರಿ. ಕೆಲವು ಗಣಿಗಾರರು ಗಣಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ರಕ್ಷಿಸಲಿಕ್ಕಾಗಿ ಪಂಜರದಂಥ ಪೆಟ್ಟಿಗೆಯನ್ನು ಕೆಳಕ್ಕಿಳಿಸಲಾಗುತ್ತದೆ. ಅಲ್ಲಿಂದ ರಕ್ಷಿಸಲ್ಪಡಬೇಕಾದರೆ ಸಿಕ್ಕಿಬಿದ್ದ ಪ್ರತಿಯೊಬ್ಬರೂ ಅದರೊಳಗೆ ಬರಬೇಕು. ಅದೇ ರೀತಿಯಲ್ಲಿ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಿಂದ ಪ್ರಯೋಜನ ಪಡೆಯಲು ಬಯಸುವವರು ದೇವರ ಆಶೀರ್ವಾದಕ್ಕಾಗಿ ಸುಮ್ಮನೆ ಕಾಯುತ್ತಾ ಕುಳಿತಿರಬಾರದು. ಅವರು ಕ್ರಿಯೆಗೈಯಲೇಬೇಕು.

ಯಾವ ಕ್ರಿಯೆಯನ್ನು ದೇವರು ಕೇಳಿಕೊಳ್ಳುತ್ತಾನೆ? ಯೋಹಾನ 3:36 ತಿಳಿಸುವುದು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.” ಕ್ರಿಸ್ತನ ಯಜ್ಞದಲ್ಲಿ ನಾವು ನಂಬಿಕೆಯಿಡುವಂತೆ ದೇವರು ಕೇಳಿಕೊಳ್ಳುತ್ತಾನೆ. ಇನ್ನೂ ಹೆಚ್ಚಿನದ್ದರ ಅವಶ್ಯಕತೆಯಿದೆ. “ನಾವು ಆತನ [ಯೇಸುವಿನ] ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳುಕೊಳ್ಳುತ್ತೇವೆ.” (1 ಯೋಹಾನ 2:3) ಹಾಗಾದರೆ ಪಾಪ ಮತ್ತು ಮರಣದಿಂದ ರಕ್ಷಣೆಗಾಗಿ ಕ್ರಿಸ್ತನ ಯಜ್ಞದಲ್ಲಿ ನಂಬಿಕೆ ಹಾಗೂ ಆತನ ಆಜ್ಞೆಗಳಿಗೆ ವಿಧೇಯತೆ ಮಹತ್ವದ್ದಾಗಿದೆ.

ಯೇಸುವಿನ ವಿಮೋಚನಾ ಮೌಲ್ಯಕ್ಕೆ ಕೃತಜ್ಞತೆ ತೋರಿಸುವ ಒಂದು ಪ್ರಮುಖ ವಿಧ ಆತನು ಆಜ್ಞಾಪಿಸಿದಂತೆ ಆತನ ಮರಣವನ್ನು ಸ್ಮರಿಸುವುದಾಗಿದೆ. ಯೇಸು ತನ್ನ ಮರಣಕ್ಕೆ ಮುಂಚೆ ನಂಬಿಗಸ್ತ ಅಪೊಸ್ತಲರೊಂದಿಗೆ ಸಾಂಕೇತಿಕ ಸೂಚಿತಾರ್ಥವಿದ್ದ ಭೋಜನ ಮಾಡಿದನು. ಆತನು ಅವರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಯೆಹೋವನ ಸಾಕ್ಷಿಗಳು ದೇವರ ಮಗನೊಂದಿಗಿನ ಸ್ನೇಹವನ್ನು ಬಹಳ ಅಮೂಲ್ಯವೆಂದೆಣಿಸುವುದರಿಂದ ಈ ಆಜ್ಞೆಗೆ ವಿಧೇಯರಾಗುತ್ತಾರೆ. ಈ ವರ್ಷ ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಮಾರ್ಚ್‌ 22ರ ಶನಿವಾರ ಸೂರ್ಯಾಸ್ತದ ನಂತರ ಆಚರಿಸಲಾಗುವುದು. ಯೇಸುವಿನ ಆಜ್ಞೆಗೆ ವಿಧೇಯತೆಯಲ್ಲಿ ಈ ವಿಶೇಷ ಕೂಟಕ್ಕೆ ಹಾಜರಾಗುವಂತೆ ನಾವು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ. ಈ ವಿಶೇಷ ಕೂಟದ ಸಮಯ ಮತ್ತು ಸ್ಥಳದ ಕುರಿತು ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ತಿಳಿಸುವರು. ಆದಾಮನ ಪಾಪದಿಂದ ಉಂಟಾದ ಮಾರಣಾಂತಿಕ ಪರಿಣಾಮಗಳಿಂದ ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವು ನಿಮಗೆ ಬಿಡುಗಡೆ ಕೊಡಬೇಕಾದರೆ ನೀವೇನು ಮಾಡಬೇಕು? ಇದರ ಕುರಿತು ಜ್ಞಾಪಕಾಚರಣೆಯ ಸಮಯದಲ್ಲಿ ನೀವು ಹೆಚ್ಚನ್ನು ಕಲಿಯಲಿರುವಿರಿ.

ಮಾನವರನ್ನು ನಾಶನದಿಂದ ರಕ್ಷಿಸಲಿಕ್ಕಾಗಿ ಸೃಷ್ಟಿಕರ್ತನು ಮತ್ತು ಆತನ ಮಗನು ಮಾಡಿರುವ ಮಹಾನ್‌ ತ್ಯಾಗದ ಪೂರ್ಣ ತಿಳುವಳಿಕೆ ಇಂದು ಅನೇಕರಿಗಿಲ್ಲ. ಯಾರು ಆ ಯಜ್ಞದಲ್ಲಿ ನಂಬಿಕೆಯನ್ನಿಡುತ್ತಾರೋ ಅವರಿಗೆ ಇದು ವಿಶೇಷ ಸಂತೋಷದ ಮೂಲವಾಗಿದೆ. ಅಪೊಸ್ತಲ ಪೇತ್ರನು ಜೊತೆ ಕ್ರೈಸ್ತರ ಕುರಿತು ಬರೆದದ್ದು: “ಆತನಲ್ಲಿ [ಯೇಸುವಿನಲ್ಲಿ] ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.” (1 ಪೇತ್ರ 1:8, 9) ಯೇಸು ಕ್ರಿಸ್ತನಿಗಾಗಿ ಪ್ರೀತಿ ಮತ್ತು ಆತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವ ಮೂಲಕ ಈಗ ನಿಮ್ಮ ಜೀವನದಲ್ಲಿ ಸಂತೋಷವನ್ನು ತುಂಬಿಸಬಹುದು. ಅಲ್ಲದೆ, ಪಾಪ ಮತ್ತು ಮರಣದಿಂದ ರಕ್ಷಿಸಲ್ಪಡುವುದನ್ನೂ ನೀವು ಮುನ್ನೋಡಬಹುದು. (w08 3/1)