ಕಟ್ಟುಪಾಡಿಲ್ಲದ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು
ಕಟ್ಟುಪಾಡಿಲ್ಲದ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು
ತಂದೆ “ಬೇಡ” ಎಂದು ಹೇಳಿದರೂ, ಆಟದ ಸಾಮಾನನ್ನು ಕೊಡಿಸುವಂತೆ ಮಗು ಅಂಗಲಾಚುವುದನ್ನು ನೀವೆಂದಾದರೂ ನೋಡಿದ್ದೀರೋ? ಅಥವಾ “ಸುಮ್ಮನೆ ಕೂತಿರು” ಎಂದು ತಾಯಿ ಗದರಿಸಿದಾಗಲೂ ಓಡಿ ಆಡಲು ಬಯಸುವ ಮಗುವನ್ನು ಗಮನಿಸಿದ್ದೀರೋ? ಆ ರೀತಿ ಹೆತ್ತವರು ಮಕ್ಕಳಿಗೆ ಹೇಳುವುದು ಅವರ ಒಳ್ಳೆಯದಕ್ಕಾಗಿಯೇ ಎಂಬುದು ನಮಗೆ ಗೊತ್ತಿದೆ. ಆದರೂ, ಹೆಚ್ಚಿನ ವೇಳೆ ಮಗು ಕೇಳಿದ್ದನ್ನು ಅವರು ಕೊಡಿಸುತ್ತಾರೆ ಇಲ್ಲವೆ ಮಗುವಿನ ಇಷ್ಟದಂತೆ ಮಾಡಲು ಬಿಡುತ್ತಾರೆ. ಹೌದು, ಮಕ್ಕಳು ಗೋಳುಗರೆದಾಗ ಮುಂಚೆ ‘ಬೇಡ’ ಎಂದು ಹೇಳಿದರೂ ನಂತರ ಹೆತ್ತವರು ‘ಆಯ್ತು’ ಎಂದು ಹೇಳುತ್ತಾರೆ.
ತಮ್ಮ ಮಕ್ಕಳು ಕೇಳಿದ್ದೆಲ್ಲದಕ್ಕೆ ಸಮ್ಮತಿಸುವುದೇ ಒಳ್ಳೇ ಹೆತ್ತವರ ಲಕ್ಷಣವೆಂದು ಅನೇಕ ಹೆತ್ತವರು ನೆನಸುತ್ತಾರೆ. ಉದಾಹರಣೆಗೆ, ಅಮೆರಿಕಾದಲ್ಲಿ 12 ರಿಂದ 17 ವಯೋಮಾನದ 750 ಮಕ್ಕಳ ಸಮೀಕ್ಷೆಯೊಂದನ್ನು ನಡೆಸಲಾಯಿತು. ತಾವು ಕೇಳಿದ್ದನ್ನು ಹೆತ್ತವರು ಬೇಡವೆಂದಾಗ ಹೇಗೆ ಪ್ರತಿಕ್ರಿಯಿಸುವರೆಂದು ಆ ಮಕ್ಕಳನ್ನು ಕೇಳಲಾಯಿತು. ಸುಮಾರು 60 ಪ್ರತಿಶತ ಮಕ್ಕಳು ತಾವು ಹಠಹಿಡಿದು ಕೇಳುತ್ತೇವೆಂದು ಉತ್ತರಿಸಿದರು. ಮಾತ್ರವಲ್ಲ, ಅವರಲ್ಲಿ ಸುಮಾರು 55 ಪ್ರತಿಶತ ಮಕ್ಕಳು ತಮ್ಮ ಈ ತಂತ್ರ ಹೆಚ್ಚಾಗಿ ಫಲಿಸಿದೆಯೆಂದು ಹೇಳಿದರು. ಈ ರೀತಿ ಕಟ್ಟುಪಾಡಿಲ್ಲದೆ ಬೆಳೆಸುವ ಮೂಲಕ ತಾವು ಮಕ್ಕಳಿಗೆ ಪ್ರೀತಿಯನ್ನು ತೋರಿಸುತ್ತೇವೆಂದು ಆ ಹೆತ್ತವರು ನೆನಸಬಹುದು. ಆದರೆ ಅದು ನಿಜವೋ?
ಈ ಹಳೆಯ ನಾಣ್ಣುಡಿಯೊಂದನ್ನು ಕೇಳಿರಿ: “ಆಳನ್ನು ಚಿಕ್ಕತನದಿಂದ ಕೋಮಲವಾಗಿ ಸಾಕಿದರೆ ತರುವಾಯ ಅವನು ಎದುರುಬೀಳುವನು.” (ಜ್ಞಾನೋಕ್ತಿ 29:21) ಮಗುವಿಗೂ ಆಳಿಗೂ ವ್ಯತ್ಯಾಸವಿದೆಯೆಂಬುದು ನಿಜ. ಹಾಗಿದ್ದರೂ ಆ ಸೂತ್ರವು ಮಕ್ಕಳನ್ನು ಬೆಳೆಸುವ ವಿಷಯಕ್ಕೂ ಅನ್ವಯಿಸುತ್ತದೆಂದು ನೀವು ಒಪ್ಪುವುದಿಲ್ಲವೇ? ಮಕ್ಕಳನ್ನು ಬಹಳವಾಗಿ ಮುದ್ದಿಸುವುದರಿಂದ ಮತ್ತು ಕೇಳಿದ್ದೆಲ್ಲವನ್ನು ಕೊಡುವುದರಿಂದ, ಅವರು ಬೆಳೆದಾಗ ‘ಎದುರುಬೀಳಬಹುದು’ ಅಂದರೆ ಕೆಟ್ಟವರೂ ಮೊಂಡರೂ ಕೃತಘ್ನರೂ ಆಗಬಹುದು.
ಇದಕ್ಕೆ ವ್ಯತಿರಿಕ್ತವಾಗಿ ಹೆತ್ತವರಿಗೆ ಬೈಬಲ್ ಸಲಹೆ ನೀಡುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು.” (ಜ್ಞಾನೋಕ್ತಿ 22:6) ವಿವೇಕಿಗಳಾದ ಹೆತ್ತವರು ಈ ಸಲಹೆಯನ್ನು ಪಾಲಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಸ್ಪಷ್ಟವಾದ, ಸ್ಥಿರವಾದ ಮತ್ತು ಯೋಗ್ಯವಾದ ನಿಯಮಗಳನ್ನು ವಿಧಿಸುತ್ತಾರೆ. ಅವರು ಮಕ್ಕಳಿಗೆ ಪ್ರೀತಿ ತೋರಿಸುವುದನ್ನು ಕಟ್ಟುಪಾಡಿಲ್ಲದೆ ಬೆಳೆಸುವುದರೊಂದಿಗೆ ತಪ್ಪರ್ಥ ಮಾಡಿಕೊಳ್ಳುವುದಿಲ್ಲ. ಅಥವಾ ತಮ್ಮ ಮಕ್ಕಳು ಅತ್ತುಕಾಡಿ ರಗಳೆಮಾಡಿದಾಗ ಕರಗಿ ನೀರಾಗುವುದಿಲ್ಲ. ಬದಲಿಗೆ, “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ” ಎಂಬ ಯೇಸುವಿನ ಸುಜ್ಞಾನದ ಮಾತನ್ನು ಅನುಸರಿಸುತ್ತಾರೆ. (ಮತ್ತಾಯ 5:37) ಹಾಗಾದರೆ, ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ? ಈ ಪ್ರಬಲ ದೃಷ್ಟಾಂತವನ್ನು ಗಮನಿಸಿ.
“ಕೈಯಲ್ಲಿರುವ ಅಂಬುಗಳಂತಿದ್ದಾರೆ”
ತಂದೆತಾಯಿ ಹಾಗೂ ಮಗುವಿನ ಸಂಬಂಧವನ್ನು ಬೈಬಲ್ ಒಂದು ದೃಷ್ಟಾಂತದ ಮೂಲಕ ಚಿತ್ರಿಸುತ್ತದೆ. ಅದು ಮಗುವಿಗೆ ಹೆತ್ತವರ ಪರಿಪಾಲನೆ ಎಷ್ಟು ಅತ್ಯಗತ್ಯವೆಂಬುದನ್ನು ಎತ್ತಿಹೇಳುತ್ತದೆ. ಕೀರ್ತನೆ 127:4, 5 ಹೇಳುವುದು: “ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ; ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು.” ಇಲ್ಲಿ ಮಕ್ಕಳನ್ನು ಅಂಬು ಅಥವಾ ಬಾಣದಂತೆಯೂ ಹೆತ್ತವರನ್ನು ಯುದ್ಧವೀರರಂತೆಯೂ ಚಿತ್ರಿಸಲಾಗಿದೆ. ಗೊತ್ತುಗುರಿಯಿಲ್ಲದೆ ಬಿಟ್ಟ ಬಾಣ ಗುರಿ ತಲಪದೆಂದು ಬಿಲ್ಲುಗಾರನಿಗೆ ಹೇಗೆ ತಿಳಿದಿರುತ್ತದೋ ಹಾಗೆಯೇ ಮಕ್ಕಳನ್ನು ಬೆಳೆಸುವುದು ಸಹ ಕಟ್ಟುಪಾಡಿಲ್ಲದ ಕೆಲಸವಲ್ಲವೆಂದು ಪ್ರೀತಿಪರ ಹೆತ್ತವರು ತಿಳಿದಿರುತ್ತಾರೆ. ತಮ್ಮ ಮಕ್ಕಳು ಜವಾಬ್ದಾರಿಯುತ ವ್ಯಕ್ತಿಗಳಾಗಿ ಸಂತೋಷದ ಜೀವನ ನಡೆಸುವ “ಗುರಿ”ಯನ್ನು ಮುಟ್ಟುವಂತೆ ಅವರು ಬಯಸುತ್ತಾರೆ. ತಮ್ಮ ಮಕ್ಕಳು ಸರಿಯಾದ ಆಯ್ಕೆ ಮಾಡಬೇಕು, ಬುದ್ಧಿವಂತರಾಗಿ ಅನಾವಶ್ಯಕ ತೊಂದರೆಗಳಿಂದ ದೂರವಿರಬೇಕು, ಪ್ರತಿಫಲದಾಯಕ ಗುರಿಗಳನ್ನು ಸಾಧಿಸಬೇಕು ಎಂಬದೇ ಅವರ ಅಪೇಕ್ಷೆ. ಆದರೆ ಅಷ್ಟನ್ನು ಬಯಸಿದರೆ ಸಾಕಾಗದು.
ಒಂದು ಬಾಣವು ತಪ್ಪದೆ ಗುರಿ ಮುಟ್ಟಬೇಕಾದರೆ ಏನು ಮಾಡಬೇಕು? ಅದನ್ನು ಸರಿಯಾಗಿ ಸಿದ್ಧಗೊಳಿಸಬೇಕು, ಸುರಕ್ಷಿತವಾಗಿರಿಸಬೇಕು ಮತ್ತು ಗುರಿ ಮುಟ್ಟುವಂತೆ ಬಲವಾಗಿ ನಿರ್ದೇಶಿಸಬೇಕು. ಅದೇ ರೀತಿಯಲ್ಲಿ ಮಕ್ಕಳು ಯಶಸ್ವಿಯಾದ ಪ್ರೌಢ ಜೀವನಕ್ಕೆ ಅಡಿಯಿಡಬೇಕಾದರೆ, ಅವರನ್ನು ಸಹ ಸಿದ್ಧಗೊಳಿಸಬೇಕು, ಸುರಕ್ಷಿತವಾಗಿರಿಸಬೇಕು ಮತ್ತು ನಿರ್ದೇಶಿಸಬೇಕು. ಮಕ್ಕಳನ್ನು ಬೆಳೆಸುವುದರಲ್ಲಿನ ಈ ಮೂರು ಅಂಶಗಳನ್ನು ನಾವೀಗ ಒಂದೊಂದಾಗಿ ಪರಿಗಣಿಸೋಣ.
ಅಂಬನ್ನು ಸರಿಯಾಗಿ ಸಿದ್ಧಗೊಳಿಸುವುದು
ಬೈಬಲ್ ಸಮಯಗಳಲ್ಲಿ ಬಿಲ್ಲುಗಾರರು ಬಳಸುತ್ತಿದ್ದ ಬಾಣಗಳನ್ನು ತುಂಬ ಶ್ರಮವಹಿಸಿ ಸಿದ್ಧಗೊಳಿಸುತ್ತಿದ್ದರು. ಬಾಣದ ದಂಡನ್ನು ಬಹುಶಃ ಹಗುರಾದ ಮರಗಳಿಂದ ತಯಾರಿಸಲಾಗುತ್ತಿತ್ತು. ಅದು ಸಾಧ್ಯವಾದಷ್ಟು ನೆಟ್ಟಗಿರುವಂತೆ ಕೈಗಳಿಂದ ಕೆತ್ತುತ್ತಿದ್ದರು. ಅದರ ತುದಿ ಚೂಪಾಗಿರಬೇಕಿತ್ತು. ಬಾಣವು ಗಾಳಿಯಲ್ಲಿ ಸರಿಯಾದ ದಿಕ್ಕಿಗೆ ಹೋಗುವಂತೆ ಮಾಡಲು ದಂಡದ ಇನ್ನೊಂದು ತುದಿಗೆ ಗರಿಗಳನ್ನು ಜೋಡಿಸುತ್ತಿದ್ದರು.
ತಮ್ಮ ಮಕ್ಕಳು ಸಹ ಆ ನೇರವಾದ ಬಾಣಗಳ ಹಾಗೆ ಇರುವಂತೆ ಅಂದರೆ ಅಡ್ಡಹಾದಿ ಹಿಡಿಯದೆ ನೇರ ನಡತೆಯುಳ್ಳವರಾಗಿರುವಂತೆ ತಂದೆತಾಯಿ ಬಯಸುತ್ತಾರೆ. ಆದುದರಿಂದ, ವಿವೇಕಿಗಳಾದ ಹೆತ್ತವರು ತಮ್ಮ ಮಕ್ಕಳು ಗಂಭೀರ ತಪ್ಪನ್ನು ಮಾಡುವಾಗ ಅದನ್ನು ನಿರ್ಲಕ್ಷ್ಯಿಸುವುದಿಲ್ಲ. ಬದಲಿಗೆ, ಅಂಥ ತಪ್ಪನ್ನು ತಿದ್ದಿ ಸರಿಪಡಿಸಿಕೊಳ್ಳುವಂತೆ ಪ್ರೀತಿಯಿಂದ ಸಹಾಯಮಾಡುತ್ತಾರೆ. ಮಕ್ಕಳೆಲ್ಲರಲ್ಲಿಯೂ ತಿದ್ದಬೇಕಾದ ಅನೇಕ ವಿಷಯಗಳಿರುತ್ತವೆ. ಏಕೆಂದರೆ, “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ.” (ಜ್ಞಾನೋಕ್ತಿ 22:15) ಆ ಕಾರಣದಿಂದಲೇ ಹೆತ್ತವರು ತಮ್ಮ ಮಕ್ಕಳನ್ನು ಶಿಸ್ತುಗೊಳಿಸುವಂತೆ ಬೈಬಲ್ ಬುದ್ಧಿವಾದ ನೀಡುತ್ತದೆ. (ಎಫೆಸ 6:4) ಮಗುವಿನ ಮನಸ್ಸು ಮತ್ತು ಸ್ವಭಾವಗಳನ್ನು ತಿದ್ದಿ ರೂಪಿಸುವುದರಲ್ಲಿ ಶಿಸ್ತಿಗೆ ಒಂದು ಪ್ರಧಾನ ಪಾತ್ರವಿದೆ.
ಅದಕ್ಕಾಗಿಯೇ ಜ್ಞಾನೋಕ್ತಿ 13:24ರಲ್ಲಿ ನಾವು ಹೀಗೆ ಓದುತ್ತೇವೆ: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.” ಇಲ್ಲಿ ತಿಳಿಸಲಾದ ಬೆತ್ತವು ತಿದ್ದುಪಾಟನ್ನು ಸೂಚಿಸುತ್ತದೆ. ಅದನ್ನು ವಿವಿಧ ವಿಧಾನಗಳಲ್ಲಿ ನೀಡಬಹುದು. ಪ್ರೀತಿಪರ ಶಿಸ್ತನ್ನು ನೀಡುವ ಮೂಲಕ ಹೆತ್ತವರು ಮಗುವಿನ ತಪ್ಪುಗಳನ್ನು ಸರಿಪಡಿಸುತ್ತಾರೆ. ಇಲ್ಲವಾದರೆ, ಅವು ಆಳವಾಗಿ ಬೇರೂರಿ ಮಗುವಿನ ಭವಿಷ್ಯತ್ತನ್ನು ದುರವಸ್ಥೆಗೆ ತಳ್ಳಬಹುದು. ಹೌದು, ಮಗುವಿಗೆ ತಿದ್ದುಪಾಟನ್ನು ಕೊಡುವುದು ಪ್ರೀತಿಯ ಲಕ್ಷಣ, ಕೊಡದಿರುವುದು ಪ್ರೀತಿಯ ಕೊರತೆ.
ಪ್ರೀತಿಯುಳ್ಳ ಹೆತ್ತವರು ತಿದ್ದುಪಾಟಿನ ಹಿಂದಿರುವ ಕಾರಣಗಳನ್ನು ಸಹ ಮಗುವಿಗೆ ತಿಳಿಸುತ್ತಾರೆ. ಹಾಗಾಗಿ, ಶಿಸ್ತಿನಲ್ಲಿ ಆಜ್ಞಾಪನೆಗಳು ಮತ್ತು ಶಿಕ್ಷೆಗಳು ಮಾತ್ರವಲ್ಲ, ಮಗುವನ್ನು ವಿವೇಕಕ್ಕೆ ನಡೆಸುವಂಥ ತಿಳಿವಳಿಕೆಯೂ ಸೇರಿದೆ. “ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು” ಎಂದು ಬೈಬಲ್ ಹೇಳುತ್ತದೆ.—ಜ್ಞಾನೋಕ್ತಿ 28:7.
ಬಿಲ್ಲುಗಾರನು ತನ್ನ ಬಾಣಕ್ಕೆ ಜೋಡಿಸಿದ ಗರಿಗಳು, ಬಾಣವು ನೇರವಾಗಿ ಚಲಿಸಿ ಗುರಿಮುಟ್ಟುವಂತೆ ಸಹಾಯಮಾಡುತ್ತವೆ. ತದ್ರೀತಿಯಲ್ಲಿ, ಕುಟುಂಬದ ಏರ್ಪಾಡಿನ ಮೂಲನಾದ ದೇವರು ಬೈಬಲ್‌ನಲ್ಲಿ ತಿಳಿಸಿರುವ ಉಪದೇಶಗಳು, ಮಕ್ಕಳು ದೊಡ್ಡವರಾದ ಮೇಲೂ ಜೀವಮಾನವಿಡೀ ಉಳಿದು ಪ್ರಯೋಜನಕಾರಿಯಾಗಬಲ್ಲವು. (ಎಫೆಸ 3:14, 15) ಅಂಥ ಉಪದೇಶಗಳು ಮಕ್ಕಳ ಹೃದಯದಲ್ಲಿ ಉಳಿಯುವಂತೆ ಹೆತ್ತವರು ಏನು ಮಾಡಬಲ್ಲರು?
ಮೋಶೆಯ ದಿನಗಳಲ್ಲಿದ್ದ ಹೆತ್ತವರಿಗೆ ದೇವರು ನೀಡಿದ ಸಲಹೆಯನ್ನು ಗಮನಿಸಿ: ‘ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಬೇಕು.’ (ಧರ್ಮೋಪದೇಶಕಾಂಡ 6:6, 7) ಆದುದರಿಂದ, ಹೆತ್ತವರಿಗೆ ಎರಡು ವಿಷಯಗಳನ್ನು ಮಾಡಲಿಕ್ಕಿದೆ. ಮೊದಲು, ಅವರು ಸ್ವತಃ ದೇವರ ವಾಕ್ಯವನ್ನು ಪ್ರೀತಿಸಿ ಕಲಿತು ಅದನ್ನು ಅನ್ವಯಿಸಬೇಕು. (ಕೀರ್ತನೆ 119:97) ಅನಂತರವೇ, ಅವರು ಆ ಸಲಹೆಯ ಎರಡನೆಯ ಭಾಗವನ್ನು ಅನ್ವಯಿಸಶಕ್ತರಾಗುವರು. ಅದೇನಂದರೆ, ದೇವರ ನಿಯಮಗಳನ್ನು ತಮ್ಮ ಮಕ್ಕಳಿಗೆ ಅಭ್ಯಾಸಮಾಡಿಸುವುದೇ. ಅಂದರೆ, ಪರಿಣಾಮಕಾರಿಯಾಗಿ ಬೋಧಿಸುವ ಮತ್ತು ಆಗಿಂದಾಗ್ಗೆ ಪುನರಾವರ್ತಿಸುವ ಮೂಲಕ ತಮ್ಮ ಮಕ್ಕಳ ಹೃದಯದಲ್ಲಿ ಅಂಥ ನಿಯಮಗಳ ಮೌಲ್ಯವನ್ನು ಅಚ್ಚೊತ್ತಬೇಕು.
ಮಕ್ಕಳಿಗೆ ಬೈಬಲಿನ ಮೂಲತತ್ತ್ವಗಳನ್ನು ಬೋಧಿಸುವುದು ಮತ್ತು ಅವರ ಗಂಭೀರ ತಪ್ಪುಗಳನ್ನು ಸರಿಪಡಿಸಲು ಪ್ರೀತಿಪರ ಶಿಸ್ತನ್ನು ನೀಡುವುದು ಈ ಆಧುನಿಕ ಯುಗದಲ್ಲೂ ಪ್ರಯೋಜನಕರ.
ಆ ಅಮೂಲ್ಯ ‘ಅಂಬುಗಳು’ ತೊಡಕಿಲ್ಲದೆ ಪ್ರೌಢಾವಸ್ಥೆಗೆ ಮುಂದುವರಿಯಲು ಈ ವಿಧಾನಗಳು ಪ್ರಾಮುಖ್ಯ.ಅಂಬನ್ನು ಸುರಕ್ಷಿತವಾಗಿರಿಸುವುದು
ಕೀರ್ತನೆ 127:4, 5ರಲ್ಲಿನ ದೃಷ್ಟಾಂತಕ್ಕೆ ನಾವು ಪುನಃ ಹಿಂದಿರುಗೋಣ. ಆ ಬಿಲ್ಲುಗಾರನು ತನ್ನ ಬಾಣಗಳನ್ನು ‘ಬತ್ತಳಿಕೆಯಲ್ಲಿ ತುಂಬಿದನೆಂದು’ ನೆನಪಿಸಿಕೊಳ್ಳಿರಿ. ಒಮ್ಮೆ ಸಿದ್ಧಗೊಳಿಸಿದ ಬಾಣಗಳನ್ನು ಸುರಕ್ಷಿತವಾಗಿರಿಸಬೇಕಿತ್ತು. ಆದುದರಿಂದಲೇ, ಬಿಲ್ಲುಗಾರನು ಅವುಗಳನ್ನು ತನ್ನ ಬತ್ತಳಿಕೆಯಲ್ಲಿ ಒಯ್ಯುತ್ತಾನೆ. ಏಕೆಂದರೆ, ಅಲ್ಲಿ ಅವು ಮುರಿದು ಹೋಗದೆ ಸುರಕ್ಷಿತವಾಗಿರುತ್ತವೆ. ಕುತೂಹಲಕರವಾಗಿ, ಮೆಸ್ಸೀಯ ಅಂದರೆ ಯೇಸುವನ್ನು ಅವನ ತಂದೆಯು ಒಂದು ಚೂಪಾದ ಬಾಣವನ್ನಾಗಿ ರೂಪಿಸಿ “ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ” ಎಂದು ಬೈಬಲ್ ಪ್ರವಾದನಾ ರೂಪವಾಗಿ ಹೇಳುತ್ತದೆ. (ಯೆಶಾಯ 49:2) ಅತ್ಯಂತ ಪ್ರೀತಿಪರ ತಂದೆಯಾದ ಯೆಹೋವ ದೇವರು ತನ್ನ ಪ್ರಿಯ ಮಗನಾದ ಯೇಸುವನ್ನು ಸುರಕ್ಷಿತವಾಗಿಟ್ಟನು. ಎಷ್ಟರ ಮಟ್ಟಿಗೆಂದರೆ, ಯೇಸುವಿನ ನೇಮಿತ ಮರಣದ ಸಮಯದ ವರೆಗೂ ಎಲ್ಲ ರೀತಿಯ ಹಾನಿಯಿಂದ ಕಾಪಾಡಿದನು. ಅವನು ಮರಣಪಟ್ಟಾಗಲೂ ಅವನನ್ನು ಮತ್ತೆ ಸ್ವರ್ಗಕ್ಕೆ ಸುರಕ್ಷಿತವಾಗಿ ಬರಮಾಡಿ ಶಾಶ್ವತವಾಗಿ ಜೀವಿಸುವಂತೆ ದೇವರು ನೋಡಿಕೊಂಡನು. ಹೀಗೆ ಸಾವಿನಿಂದ ಅವನಿಗೆ ಶಾಶ್ವತ ಹಾನಿಯಾಗದಂತೆ ಕಾಪಾಡಿದನು.
ಅದೇ ರೀತಿ, ಒಳ್ಳೇ ಹೆತ್ತವರು ತಮ್ಮ ಮಕ್ಕಳನ್ನು ನೀತಿಭ್ರಷ್ಟ ಲೋಕದ ಅಪಾಯಗಳಿಂದ ಸುರಕ್ಷಿತವಾಗಿಡಲು ಚಿಂತಿಸುತ್ತಾರೆ. ಮಕ್ಕಳನ್ನು ಅಪಾಯಕಾರಿ ಪ್ರಭಾವಗಳಿಗೆ ಅನಾವಶ್ಯಕವಾಗಿ ಒಡ್ಡುವ ಕೆಲವೊಂದು ಚಟುವಟಿಕೆಗಳನ್ನು ಹೆತ್ತವರು ನಿಷೇದಿಸಬಹುದು. ಉದಾಹರಣೆಗೆ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂಬ ಮೂಲತತ್ತ್ವವನ್ನು ವಿವೇಕಿಗಳಾದ ಹೆತ್ತವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (1 ಕೊರಿಂಥ 15:33) ಬೈಬಲಿನ ನೈತಿಕ ಮಟ್ಟಗಳನ್ನು ಪಾಲಿಸದವರೊಂದಿಗೆ ಸಹವಾಸ ಮಾಡದಂತೆ ಮಕ್ಕಳನ್ನು ಸಂರಕ್ಷಿಸುವ ಮೂಲಕ ಹಲವಾರು ಘೋರವಾದ, ಜೀವವನ್ನು ಅಪಾಯಕ್ಕೊಡ್ಡುವಂಥ ತಪ್ಪುಗಳನ್ನು ಮಾಡುವುದರಿಂದ ತಮ್ಮ ಮಕ್ಕಳನ್ನು ಅವರು ಸಂರಕ್ಷಿಸುತ್ತಾರೆ.
ಹೆತ್ತವರು ನೀಡುವ ಸಂರಕ್ಷಣೆಯನ್ನು ಮಕ್ಕಳು ಯಾವಾಗಲೂ ಗಣ್ಯಮಾಡಲಿಕ್ಕಿಲ್ಲ. ಮಕ್ಕಳನ್ನು ಸುರಕ್ಷಿತವಾಗಿಡಲಿಕ್ಕಾಗಿ ಹೆತ್ತವರು ಕೆಲವೊಂದು ವಿಷಯಗಳಿಗೆ ‘ಬೇಡ’ ಎನ್ನಬೇಕಾಗಿರುವುದರಿಂದ ಅವರು ಸಿಟ್ಟಾಗಲೂಬಹುದು. ಮಕ್ಕಳ ಪರಿಪಾಲನೆಯ ವಿಷಯದಲ್ಲಿ ಒಬ್ಬ ಗಣ್ಯ ಲೇಖಕಿ ಈ ರೀತಿ ಹೇಳುತ್ತಾರೆ: “ಮಕ್ಕಳು ಗಣ್ಯತೆಯನ್ನು ವ್ಯಕ್ತಪಡಿಸದಿದ್ದರೂ ಅಥವಾ ಧನ್ಯವಾದ ಹೇಳದಿದ್ದರೂ ಹೆತ್ತವರು ತಮಗೆ ಒಂದು ಸುರಕ್ಷಿತವಾದ ರಚನಾತ್ಮಕ ಭವಿಷ್ಯವನ್ನು ಒದಗಿಸುವಂತೆ ಅವರು ಖಂಡಿತವಾಗಿ ಬಯಸುತ್ತಾರೆ. ಮಕ್ಕಳ ವರ್ತನೆಯ ಮೇಲೆ ಪರಿಮಿತಿಯನ್ನಿಡುವ ಶಿಸ್ತು ಪಾಲಕ ಹೆತ್ತವರಾಗಿರುವ ಮೂಲಕ ನಾವಿದನ್ನು ಮಾಡಬಹುದು.”
ಮಕ್ಕಳ ಮನಶ್ಯಾಂತಿ, ಮುಗ್ಧತೆ ಮತ್ತು ದೇವರೊಂದಿಗಿನ ಅವರ ಆಪ್ತ ಸಂಬಂಧವನ್ನು ಅಪಹರಿಸಬಹುದಾದ ಯಾವುದೇ ವಿಷಯದಿಂದ ಅವರನ್ನು ಸಂರಕ್ಷಿಸುವುದು, ಹೆತ್ತವರಾದ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ತೋರಿಸುವ ಅತ್ಯುತ್ತಮ
ಮಾರ್ಗವಾಗಿದೆ. ತಕ್ಕ ಸಮಯದಲ್ಲಿ, ಅವರು ನಿಮ್ಮ ಶಿಸ್ತಿನ ಕಾರಣಗಳನ್ನು ಅರಿತುಕೊಂಡು ನಿಮ್ಮ ಪ್ರೀತಿಪರ ಸಂರಕ್ಷಣೆಯನ್ನು ಗಣ್ಯಮಾಡುವರು.ಅಂಬನ್ನು ನಿರ್ದೇಶಿಸುವುದು
ಕೀರ್ತನೆ 127:4, 5 ಹೆತ್ತವರನ್ನು ಒಬ್ಬ ‘ಯುದ್ಧವೀರನಿಗೆ’ ಹೋಲಿಸುತ್ತದೆ ಎಂಬುದನ್ನು ಗಮನಿಸಿ. ಅಂದರೆ, ಹೆತ್ತವರ ಪಾತ್ರವನ್ನು ತಂದೆಯೊಬ್ಬನೇ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲನು ಎಂದು ಇದರ ಅರ್ಥವೋ? ಖಂಡಿತವಾಗಿ ಅಲ್ಲ. ಈ ದೃಷ್ಟಾಂತದ ಮೂಲತತ್ತ್ವವು ತಂದೆ-ತಾಯಿ ಇಬ್ಬರಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಒಂಟಿ ಹೆತ್ತವರಿಗೂ ಅನ್ವಯಿಸುತ್ತದೆ. (ಜ್ಞಾನೋಕ್ತಿ 1:8) “ಯುದ್ಧವೀರ” ಎಂಬ ಪದವು ಬಿಲ್ಲನ್ನು ಎಳೆದು ಬಾಣ ಬಿಡಲು ತುಂಬ ಬಲದ ಆವಶ್ಯಕತೆಯಿದೆ ಎಂಬುದನ್ನು ಸೂಚಿಸುತ್ತದೆ. ಪುರಾತನ ಕಾಲದಲ್ಲಿ, ಬಿಲ್ಲಿಗೆ ತಾಮ್ರದ ಕವಚವನ್ನು ಹೊದಿಸಲಾಗುತ್ತಿತ್ತು ಮತ್ತು ಸೈನಿಕರು “ಬಿಲ್ಲನ್ನು ಬೊಗ್ಗಿಸಿ” ಬಾಣಬಿಡುತ್ತಿದ್ದರು. ಅಂದರೆ ಬಹುಶಃ ಅವರು ಕಾಲಿನಿಂದ ಬಿಲ್ಲನ್ನು ಅದುಮಿ ಹಿಡಿದು ಅದನ್ನು ಬಗ್ಗಿಸಿ ದಾರವನ್ನು ಬಿಗಿಯಬೇಕಿತ್ತು. (ಯೆರೆಮೀಯ 50:14, 29) ಆ ಬಿಗಿಯಾದ ದಾರವನ್ನು ಸೆಳೆದು ಬಾಣವನ್ನು ಗುರಿತಪ್ಪದಂತೆ ಹೊಡೆಯಲು ಅವರಿಗೆ ಬಹಳಷ್ಟು ಶಕ್ತಿ ಮತ್ತು ಪ್ರಯತ್ನ ಅಗತ್ಯವಿತ್ತೆಂಬುದು ಸ್ಪಷ್ಟ.
ತದ್ರೀತಿಯಲ್ಲಿ, ಮಕ್ಕಳನ್ನು ಬೆಳೆಸುವುದಕ್ಕೆ ಗಮನಾರ್ಹ ಪ್ರಯತ್ನ ಅಗತ್ಯ. ಬಾಣವು ಹೇಗೆ ತನ್ನಷ್ಟಕ್ಕೆ ತಾನೇ ಹಾರಿ ಹೋಗಿ ಗುರಿ ಮುಟ್ಟುವುದಿಲ್ಲವೋ ಹಾಗೆಯೇ ಮಕ್ಕಳು ತಮ್ಮಷ್ಟಕ್ಕೆ ತಾವೇ ಸರಿಯಾದ ಮಾರ್ಗದಲ್ಲಿ ಬೆಳೆಯುವುದಿಲ್ಲ. ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಲು ಬೇಕಾದ ಪ್ರಯತ್ನವನ್ನು ಮಾಡದಿರುವದು ಶೋಚನೀಯವೇ ಸರಿ. ಅವರು ಸುಲಭವಾದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಸರಿತಪ್ಪುಗಳನ್ನು, ನೈತಿಕತೆ ಮತ್ತು ಲೈಂಗಿಕ ವಿಷಯವನ್ನು ಕಲಿಸುವ ಕೆಲಸವನ್ನು ಅವರು ಟಿವಿ, ಶಾಲೆ ಮತ್ತು ಸಮವಯಸ್ಕರಿಗೆ ಬಿಟ್ಟುಕೊಡುತ್ತಾರೆ. ಇಷ್ಟಬಂದಂತೆ ವರ್ತಿಸಲು ಮಕ್ಕಳನ್ನು ಬಿಟ್ಟುಬಿಟ್ಟು, ಕೊನೆಗೆ ‘ಬೇಡ’ ಎಂದು ಹೇಳುವುದು ತುಂಬ ಕಷ್ಟವಾಗುವಾಗ ಆಯ್ತು ಎಂದು ಸುಮ್ಮನೆ ತಲೆ ಅಲ್ಲಾಡಿಸುತ್ತಾರೆ. ಕಾರಣ, ತಮ್ಮ ಮಕ್ಕಳ ಮನನೋಯಿಸಲು ತಮಗೆ ಇಷ್ಟವಿಲ್ಲವೆಂದು ಹೇಳುತ್ತಾರೆ. ಆದರೆ ನಿಜವಾಗಿ ಹೇಳುವುದಾದರೆ ಮಕ್ಕಳಿಗೆ ಶಾಶ್ವತ ಹಾನಿಯನ್ನು ತರುವಂಥದ್ದು ಹೆತ್ತವರು ಕಟ್ಟುಪಾಡಿಲ್ಲದೆ ಅವರನ್ನು ಬಿಡುವುದೇ ಆಗಿದೆ.
ಮಕ್ಕಳನ್ನು ಬೆಳೆಸುವುದು ಕಷ್ಟದ ಕೆಲಸ. ಆ ಕೆಲಸವನ್ನು ದೇವರ ವಾಕ್ಯದ ಮಾರ್ಗದರ್ಶನದೊಂದಿಗೆ ಮನಃಪೂರ್ವಕವಾಗಿ ಮಾಡುವುದಕ್ಕೆ ಹೆಚ್ಚಿನ ಪ್ರಯತ್ನ ಅವಶ್ಯ. ಆದರೆ, ಅದರ ಪ್ರತಿಫಲವಾದರೋ ಬೆಲೆಕಟ್ಟಲಾಗದಷ್ಟು ಅಮೂಲ್ಯವಾಗಿರುತ್ತದೆ. ಪೇರೆಂಟ್ಸ್ ಪತ್ರಿಕೆ ತಿಳಿಸಿದ್ದು: “ಪ್ರೀತಿಪರ ಮತ್ತು ಶಿಸ್ತು ಪಾಲಕ ಹೆತ್ತವರ ಅಂದರೆ ತಮ್ಮ ಮಕ್ಕಳನ್ನು ಬೆಂಬಲಿಸುವ ಹಾಗೂ ಕಟ್ಟುನಿಟ್ಟಿನಿಂದ ಬೆಳೆಸುವ ಹೆತ್ತವರ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರವೀಣರು, ಸಾಮಾಜಿಕ ಕೌಶಲಗಳಲ್ಲಿ ಚತುರರು, ಆತ್ಮವಿಶ್ವಾಸವುಳ್ಳವರು ಆಗಿರುತ್ತಾರೆ. ಅತೀ ಕಟ್ಟುನಿಟ್ಟಿನ ಇಲ್ಲವೆ ತೀರಾ ಹೆಚ್ಚು ಸಲಿಗೆಯ ಹೆತ್ತವರಿಂದ ಬೆಳೆಸಲ್ಪಟ್ಟ ಮಕ್ಕಳಿಗಿಂತಲೂ ಇವರು ಹೆಚ್ಚು ಸಂತುಷ್ಟರಾಗಿರುತ್ತಾರೆ ಎಂದು . . . ಅಧ್ಯಯನವು ತೋರಿಸುತ್ತದೆ.”
ಇದಕ್ಕಿಂತಲೂ ಹೆಚ್ಚು ಉತ್ತಮವಾದ ಬೇರೊಂದು ಪ್ರತಿಫಲವಿದೆ. “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು” ಎಂಬ ಜ್ಞಾನೋಕ್ತಿ 22:6ರ ಮಾತನ್ನು ನಾವು ಈ ಮೊದಲು ಪರಿಗಣಿಸಿದ್ದೆವು. ಆ ವಚನ ಮುಂದುವರಿಸುತ್ತಾ ಈ ಹೃದಯ ಸ್ಪರ್ಶಿಸುವ ಮಾತನ್ನು ತಿಳಿಸುತ್ತದೆ: “[ಅವನು] ಮುಪ್ಪಿನಲ್ಲಿಯೂ ಓರೆಯಾಗನು.” ದೇವರ ಪ್ರೇರಣೆಯಿಂದ ಬರೆಯಲ್ಪಟ್ಟ ಈ ಜ್ಞಾನೋಕ್ತಿ ಯಶಸ್ಸಿನ ಭರವಸೆಯನ್ನು ಕೊಡುತ್ತದೋ? ಕೊಡಲೇಬೇಕೆಂದಿಲ್ಲ. ನಿಮ್ಮ ಮಗುವಿಗೆ ಇಚ್ಛಾಸ್ವಾತಂತ್ರ್ಯ ಹಾಗೂ ಬೆಳೆದಾಗ ತನ್ನ ಸ್ವಂತ ತೀರ್ಮಾನಮಾಡುವ ಹಕ್ಕು ಇದೆ. ಆದರೆ, ಈ ವಚನವು ಹೆತ್ತವರಿಗೆ ಒಂದು ಪ್ರೀತಿಪರ ಭರವಸೆಯನ್ನು ನೀಡುತ್ತದೆ. ಅದೇನು?
ನಿಮ್ಮ ಮಕ್ಕಳನ್ನು ಬೈಬಲಿನ ಬುದ್ಧಿವಾದಕ್ಕೆ ಅನುಸಾರವಾಗಿ ತರಬೇತು ನೀಡುತ್ತಾ ಬೆಳೆಸುವುದಾದರೆ, ಅದ್ಭುತಕರವಾದ ಪ್ರತಿಫಲ ತರುವ ಅತ್ಯಂತ ಹಿತಕರ ಪರಿಸ್ಥಿತಿಯನ್ನು ನೀವು ನಿರ್ಮಿಸುತ್ತಾ ಇದ್ದೀರಿ. ಅಂದರೆ, ನಿಮ್ಮ ಮಕ್ಕಳು ಆನಂದಿತ, ಸಂತುಷ್ಟ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯುವುದನ್ನು ನೀವು ಕಾಣುವಿರಿ. (ಜ್ಞಾನೋಕ್ತಿ 23:24) ಆದುದರಿಂದ, ಆ ಅಮೂಲ್ಯ ‘ಅಂಬುಗಳನ್ನು’ ಸಿದ್ಧಗೊಳಿಸಿರಿ, ಸುರಕ್ಷಿತವಾಗಿಡಿ ಮತ್ತು ಅವರನ್ನು ಸರಿಯಾಗಿ ನಿರ್ದೇಶಿಸಲು ಸರ್ವಪ್ರಯತ್ನವನ್ನು ಮಾಡಿರಿ. ಅದಕ್ಕಾಗಿ ನೀವೆಂದೂ ವಿಷಾದಿಸಲಾರಿರಿ. (w08 4/1)
[ಪುಟ 13ರಲ್ಲಿರುವ ಚಿತ್ರ]
ಮಕ್ಕಳು ಕೇಳುವುದನ್ನೆಲ್ಲ ಹೆತ್ತವರು ಕೊಡುವುದು ನಿಜ ಪ್ರೀತಿಯೋ?
[ಪುಟ 15ರಲ್ಲಿರುವ ಚಿತ್ರ]
ಪ್ರೀತಿಪರ ಹೆತ್ತವರು ಕುಟುಂಬದಲ್ಲಿ ತಾವಿಡುವ ನಿಯಮಗಳ ಹಿಂದಿರುವ ಕಾರಣಗಳನ್ನು ತಿಳಿಸುತ್ತಾರೆ
[ಪುಟ 15ರಲ್ಲಿರುವ ಚಿತ್ರ]
ಒಳ್ಳೇ ಹೆತ್ತವರು ತಮ್ಮ ಮಕ್ಕಳನ್ನು ಈ ನೀತಿಭ್ರಷ್ಟ ಲೋಕದ ಅಪಾಯಗಳಿಂದ ಸಂರಕ್ಷಿಸುತ್ತಾರೆ
[ಪುಟ 16ರಲ್ಲಿರುವ ಚಿತ್ರ]
ಮಕ್ಕಳನ್ನು ಬೆಳೆಸುವುದು ಕಷ್ಟದ ಕೆಲಸ, ಆದರೆ ಸಿಗುವ ಪ್ರತಿಫಲಗಳಿಗಾದರೋ ಬೆಲೆಕಟ್ಟಲಾಗದು