ಕ್ಷಮಿಸಲು ಸಿದ್ಧನಾಗಿರುವ ದೇವರು
ದೇವರ ಸಮೀಪಕ್ಕೆ ಬನ್ನಿರಿ
ಕ್ಷಮಿಸಲು ಸಿದ್ಧನಾಗಿರುವ ದೇವರು
‘ಯೆಹೋವನೇ, ನೀನು ಒಳ್ಳೆಯವನೂ ಕ್ಷಮಿಸುವವನೂ ಆಗಿದ್ದೀಯಲ್ಲಾ.’ (ಕೀರ್ತನೆ 86:5) ಈ ಮನಸ್ಪರ್ಶಿಸುವ ಮಾತುಗಳೊಂದಿಗೆ, ಯೆಹೋವನು ಉದಾರವಾಗಿ ಕ್ಷಮಿಸುತ್ತಾನೆಂದು ಬೈಬಲ್ ಭರವಸೆ ನೀಡುತ್ತದೆ. ಅಪೊಸ್ತಲ ಪೇತ್ರನ ಜೀವನದಲ್ಲಾದ ಒಂದು ಘಟನೆಯು ಯೆಹೋವನು “ಮಹಾಕೃಪೆಯಿಂದ ಕ್ಷಮಿಸುವನು” ಎಂದು ಸ್ಪಷ್ಟವಾಗಿ ತೋರಿಸುತ್ತದೆ.—ಯೆಶಾಯ 55:7.
ಪೇತ್ರನು ಯೇಸುವಿನ ಅತ್ಯಾಪ್ತ ಸಂಗಡಿಗರಲ್ಲಿ ಒಬ್ಬನಾಗಿದ್ದನು. ಹಾಗಿದ್ದರೂ ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯಂದು ಪೇತ್ರನು ಮನುಷ್ಯ ಭಯದಿಂದಾಗಿ ಒಂದು ಘೋರ ಪಾಪಗೈದನು. ಯೇಸುವನ್ನು ನ್ಯಾಯವಿರುದ್ಧವಾಗಿ ವಿಚಾರಣೆಗೊಳಪಡಿಸಲಾದ ಸ್ಥಳಕ್ಕೆ ಹತ್ತಿರವಿದ್ದ ಅಂಗಳದಲ್ಲಿ ಪೇತ್ರನು ಯೇಸುವನ್ನು ಅಲ್ಲಗಳೆದನು. ಅದೂ ಒಂದು ಬಾರಿಯಲ್ಲ ಮೂರು ಬಾರಿ! ಅವನು ಮೂರನೇ ಬಾರಿ ಕಂಠೋಕ್ತವಾಗಿ ಅಲ್ಲಗಳೆದಾಗ ಯೇಸು “ಹಿಂತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು.” (ಲೂಕ 22:55-61) ಯೇಸು ಅವನನ್ನು ದೃಷ್ಟಿಸಿ ನೋಡಿದಾಗ ಪೇತ್ರನಿಗೆ ಹೇಗನಿಸಿತ್ತೆಂದು ನೀವು ಊಹಿಸಬಲ್ಲಿರೋ? ತನ್ನ ಘೋರ ಪಾಪವನ್ನು ಅರಿತವನಾಗಿ ಪೇತ್ರನು ವ್ಯಥೆಪಟ್ಟು “ಅತ್ತನು.” (ಮಾರ್ಕ 14:72) ಹೀಗೆ ಪಶ್ಚಾತ್ತಾಪಪಟ್ಟ ಅಪೊಸ್ತಲ ಪೇತ್ರನು ತಾನು ಯೇಸುವನ್ನು ಮೂರು ಬಾರಿ ಅಲ್ಲಗಳೆದ ಕಾರಣ ತನಗೆ ದೇವರ ಕ್ಷಮಾಪಣೆ ದೊರೆಯುವುದೋ ಇಲ್ಲವೋ ಎಂದು ನೆನಸಿದ್ದಿರಬಹುದು.
ಯೇಸು ಪುನರುತ್ಥಾನಗೊಂಡ ಬಳಿಕ ಪೇತ್ರನೊಂದಿಗೆ ಮಾತಾಡಿದ ಸಂಗತಿಯು ಪೇತ್ರನು ಕ್ಷಮಿಸಲ್ಪಟ್ಟನೋ ಇಲ್ಲವೋ ಎಂಬ ವಿಷಯದಲ್ಲಿದ್ದ ಎಲ್ಲ ಸಂಶಯಗಳನ್ನು ನಿವಾರಿಸಿತು. ಯೇಸು ಅವನನ್ನು ಗದರಿಸಲಿಲ್ಲ, ಖಂಡಿಸಲೂ ಇಲ್ಲ. ಬದಲಿಗೆ ಅವನು ಪೇತ್ರನನ್ನು “ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ”? ಎಂದು ಕೇಳಿದನು. ಅದಕ್ಕೆ ಪೇತ್ರನು “ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ” ಅಂದನು. ಯೇಸು ಪ್ರತಿಯಾಗಿ ಹೇಳಿದ್ದು: “ನನ್ನ ಕುರಿಮರಿಗಳನ್ನು ಮೇಯಿಸು.” ಯೇಸು ಎರಡನೇ ಬಾರಿ ಅದೇ ಪ್ರಶ್ನೆಯನ್ನು ಕೇಳಿದಾಗ ಪೇತ್ರನು ಪ್ರಾಯಶಃ ಒತ್ತಿಹೇಳುತ್ತಾ ಅದೇ ಉತ್ತರ ಕೊಟ್ಟನು. ಅದಕ್ಕೆ ಯೇಸು “ನನ್ನ ಕುರಿಗಳನ್ನು ಕಾಯಿ” ಎಂದು ಹೇಳಿದನು. ಮತ್ತೆ ಯೇಸು ಅದೇ ಪ್ರಶ್ನೆಯನ್ನು ಮೂರನೆಯ ಸಾರಿ ಕೇಳುತ್ತಾ “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ” ಎಂದು ಕೇಳಿದನು. ಆಗ “ಪೇತ್ರನು ದುಃಖಪಟ್ಟು—ಸ್ವಾಮೀ, ನೀನು ಎಲ್ಲಾ ಬಲ್ಲೆ; ನಿನ್ನ ಮೇಲೆ ನಾನು ಮಮತೆ ಇಟ್ಟಿದ್ದೇನೆಂಬದು ನಿನಗೆ ತಿಳಿದದೆ” ಅಂದನು. ಯೇಸು ಅವನಿಗೆ “ನನ್ನ ಕುರಿಗಳನ್ನು ಮೇಯಿಸು” ಅಂದನು.—ಯೋಹಾನ 21:15-17.
ಪ್ರಶ್ನೆಗೆ ಉತ್ತರ ತಿಳಿದಿದ್ದರೂ ಯೇಸು ಪುನಃ ಪುನಃ ಅವನಿಗೆ ಅದೇ ಪ್ರಶ್ನೆಯನ್ನು ಕೇಳಿದ್ದೇಕೆ? ಯೇಸು ಹೃದಯವನ್ನು ಬಲ್ಲವನಾಗಿದ್ದನು. ಆದ್ದರಿಂದ ಪೇತ್ರನು ತನ್ನನ್ನು ಪ್ರೀತಿಸಿದ್ದನೆಂದು ಅವನಿಗೆ ತಿಳಿದಿತ್ತು. (ಮಾರ್ಕ 2:8) ಆ ಪ್ರಶ್ನೆಗಳನ್ನು ಕೇಳುವ ಮೂಲಕ ಯೇಸು ಪೇತ್ರನಿಗೆ ಅವನ ಪ್ರೀತಿಯನ್ನು ಮೂರು ಸಾರಿ ದೃಢೀಕರಿಸಿ ಹೇಳುವ ಸಂದರ್ಭವನ್ನು ಕೊಟ್ಟನು. ಪ್ರತ್ಯುತ್ತರವಾಗಿ ಯೇಸು “ನನ್ನ ಕುರಿಮರಿಗಳನ್ನು ಮೇಯಿಸು. . . . ನನ್ನ ಕುರಿಗಳನ್ನು ಕಾಯಿ. . . . ನನ್ನ ಕುರಿಗಳನ್ನು ಮೇಯಿಸು” ಎಂದು ಹೇಳಿದ ಮಾತುಗಳು, ಪಶ್ಚಾತ್ತಾಪಿಯಾದ ಅಪೊಸ್ತಲನಿಗೆ ತಾನಿನ್ನೂ ಭರವಸಾರ್ಹನೆಂಬ ಆಶ್ವಾಸನೆಯನ್ನು ಕೊಟ್ಟಿತು. ಎಷ್ಟೆಂದರೂ ಯೇಸು ಪೇತ್ರನಿಗೆ ಒಂದು ಅಮೂಲ್ಯವಾದ ಸ್ವತ್ತನ್ನು ಅಂದರೆ ಕುರಿಗಳಂಥ ಸ್ವಭಾವದ ತನ್ನ ಪ್ರಿಯ ಹಿಂಬಾಲಕರನ್ನು ಪರಿಪಾಲಿಸುವ ಜವಾಬ್ದಾರಿಯನ್ನು ಕೊಡುತ್ತಿದ್ದನು. (ಯೋಹಾನ 10:14, 15) ಯೇಸುವಿನ ದೃಷ್ಟಿಯಲ್ಲಿ ತಾನಿನ್ನೂ ಭರವಸಾರ್ಹನು ಎಂದು ತಿಳಿದು ಪೇತ್ರನಿಗೆ ಖಂಡಿತ ನೆಮ್ಮದಿಯಾಗಿದ್ದಿರಬೇಕು!
ಪಶ್ಚಾತ್ತಾಪಪಟ್ಟ ತನ್ನ ಅಪೊಸ್ತಲನನ್ನು ಯೇಸು ನಿಶ್ಚಯವಾಗಿಯೂ ಕ್ಷಮಿಸಿದನು. ಯೇಸು ತನ್ನ ತಂದೆಯ ಗುಣಗಳನ್ನೇ ತೋರಿಸಿದ್ದರಿಂದ ಯೆಹೋವನು ಸಹ ಪೇತ್ರನನ್ನು ಕ್ಷಮಿಸಿದನು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಯೋಹಾನ 5:19) ಯೆಹೋವನು ಕ್ಷಮಿಸಲು ಮನಸ್ಸಿಲ್ಲದವನಲ್ಲ. ಆತನು ಪಶ್ಚಾತ್ತಾಪಪಟ್ಟ ಪಾಪಿಯನ್ನು ‘ಕ್ಷಮಿಸಲು’ ಸಿದ್ಧನಾಗಿರುವ ಕರುಣಾಭರಿತ ದೇವರು. ಇದು ನಮ್ಮ ಮನಸ್ಸಿಗೆ ಎಷ್ಟೊಂದು ನೆಮ್ಮದಿಯನ್ನು ತರುತ್ತದೆ! (w08 6/1)