ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮನ್ನು ಅಮೂಲ್ಯವೆಂದೆಣಿಸುವ ದೇವರು

ನಮ್ಮನ್ನು ಅಮೂಲ್ಯವೆಂದೆಣಿಸುವ ದೇವರು

ದೇವರ ಸಮೀಪಕ್ಕೆ ಬನ್ನಿರಿ

ನಮ್ಮನ್ನು ಅಮೂಲ್ಯವೆಂದೆಣಿಸುವ ದೇವರು

ಲೂಕ 12:6, 7

‘ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸಬಹುದು.’ ಈ ಮಾತುಗಳೊಂದಿಗೆ, ನಮ್ಮ ಹೃದಯವು ಕೆಲವೊಮ್ಮೆ ನಮ್ಮನ್ನು ಕಠಿಣವಾಗಿ ಖಂಡಿಸಬಹುದು ಎಂಬುದನ್ನು ಬೈಬಲ್‌ ಅಂಗೀಕರಿಸುತ್ತದೆ. ನಾವು ದೇವರ ಪ್ರೀತಿ, ಪರಾಮರಿಕೆಗೆ ಯೋಗ್ಯರೇ ಅಲ್ಲ ಎಂದು ಅದು ಪಟ್ಟುಹಿಡಿಯಲೂಬಹುದು. ಹಾಗಿದ್ದರೂ “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ” ಎಂಬ ಭರವಸೆಯನ್ನು ಬೈಬಲ್‌ ನೀಡುತ್ತದೆ. (1 ಯೋಹಾನ 3:19, 20) ದೇವರು ನಮ್ಮನ್ನು ನಮಗಿಂತಲೂ ಹೆಚ್ಚು ಚೆನ್ನಾಗಿ ತಿಳಿದಿರುತ್ತಾನೆ. ನಾವು ನಮ್ಮನ್ನು ವೀಕ್ಷಿಸುವುದಕ್ಕಿಂತ ದೇವರು ನಮ್ಮನ್ನು ವೀಕ್ಷಿಸುವ ವಿಧ ತೀರಾ ಬೇರೆ. ಯಾರ ವೀಕ್ಷಣೆಯು ಅತಿ ಪ್ರಾಮುಖ್ಯವಾಗಿದೆಯೋ ಆ ಯೆಹೋವ ದೇವರು ನಮ್ಮನ್ನು ಹೇಗೆ ವೀಕ್ಷಿಸುತ್ತಾನೆ? ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಯೇಸು ಹೇಳಿದ ಮನಮುಟ್ಟುವ ದೃಷ್ಟಾಂತದಲ್ಲಿ ನಾವು ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುತ್ತೇವೆ.

“ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ” ಎಂದು ಒಂದು ಸಂದರ್ಭದಲ್ಲಿ ಯೇಸು ಹೇಳಿದನು. (ಮತ್ತಾಯ 10:29, 31) ಲೂಕ 12:6, 7ಕ್ಕನುಸಾರವಾಗಿ ಯೇಸು ಮತ್ತೂ ಹೇಳಿದ್ದು: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ . . . ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” ಈ ಸರಳವಾದ ಪ್ರಭಾವಯುತ ದೃಷ್ಟಾಂತವು ಯೆಹೋವನು ತನ್ನ ಪ್ರತಿಯೊಬ್ಬ ಆರಾಧಕನನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ನಮಗೆ ಕಲಿಸುತ್ತದೆ.

ಆಹಾರಕ್ಕಾಗಿ ಬಳಸುತ್ತಿದ್ದ ಪಕ್ಷಿಗಳಲ್ಲಿ ಗುಬ್ಬಿಗಳು ತೀರಾ ಕಡಿಮೆ ಬೆಲೆಗೆ ದೊರೆಯುತ್ತಿದ್ದವು. ಬಡವರಾದ ಸ್ತ್ರೀಯರು, ಪ್ರಾಯಶಃ ಯೇಸುವಿನ ತಾಯಿ ಸಹ ಮಾರುಕಟ್ಟೆಗಳಲ್ಲಿ ಅಡಿಗೆಗಾಗಿ ಈ ಚಿಕ್ಕ ಪಕ್ಷಿಗಳನ್ನು ಖರೀದಿಸುವುದನ್ನು ಯೇಸು ನೋಡಿದ್ದನೆಂಬುದು ನಿಸ್ಸಂಶಯ. ಒಂದು ಅಸಾರಿಯನ್‌ ನಾಣ್ಯಕ್ಕೆ, ಅಂದರೆ ಈಗಿನ 2 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಎರಡು ಗುಬ್ಬಿಗಳನ್ನು ಒಬ್ಬನು ಖರೀದಿಸಬಹುದಿತ್ತು. ಈ ಪಕ್ಷಿಗಳು ಎಷ್ಟು ಕಡಿಮೆ ಬೆಲೆಗೆ ಸಿಗುತ್ತಿದ್ದವೆಂದರೆ ಎರಡು ನಾಣ್ಯಕ್ಕೆ ನಾಲ್ಕಲ್ಲ ಐದು ಗುಬ್ಬಿಗಳು ಸಿಗುತ್ತಿದ್ದವು. ಐದನೇದು ಪುಕ್ಕಟೆ.

ಈ ಗುಬ್ಬಿಗಳಲ್ಲಿ ಒಂದಾದರೂ “ದೇವರಿಗೆ ಮರೆತುಹೋಗುವದಿಲ್ಲ” ಅಥವಾ “ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು” ಎಂದು ಯೇಸು ಹೇಳಿದನು. (ಮತ್ತಾಯ 10:29) ಗುಬ್ಬಿಯೊಂದು ಪ್ರತಿಸಲ ಗಾಯಗೊಂಡಾಗ ಅಥವಾ ಆಹಾರಕ್ಕಾಗಿ ನೆಲಕ್ಕೆ ಎರಗುವಾಗ ಯೆಹೋವನು ತಪ್ಪದೆ ಅದನ್ನು ಗಮನಿಸುತ್ತಾನೆ. ಈ ಚಿಕ್ಕ ಪಕ್ಷಿಗಳನ್ನು ಉಂಟುಮಾಡುವುದು ತೀರ ಅಲ್ಪವೆಂದು ಯೆಹೋವನು ಎಣಿಸಲಿಲ್ಲ. ಅವನ್ನು ಅಲ್ಪವೆಂದು ಮರೆತುಬಿಡುವುದೂ ಇಲ್ಲ. ವಾಸ್ತವಿಕವಾಗಿ ಆತನು ಅವನ್ನು ಬೆಲೆಯುಳ್ಳವೆಂದು ಎಣಿಸುತ್ತಾನೆ. ಯಾಕೆಂದರೆ ಅವು ಆತನ ಅಮೂಲ್ಯ ಸೃಷ್ಟಿ. ಯೇಸುವಿನ ದೃಷ್ಟಾಂತದ ಪಾಠ ಈಗ ನಿಮಗೆ ತಿಳಿಯಿತೋ?

ತನ್ನ ಬೋಧಿಸುವ ಕಲೆಯಲ್ಲಿ ಯೇಸು ಕೆಲವೊಮ್ಮೆ ಹೋಲಿಕೆಗಳನ್ನು ಮಾಡಿದನು. ಚಿಕ್ಕ ಪಾಠಗಳನ್ನು ಕಲಿಸಿ, ಅದೇ ಪಾಠಗಳನ್ನು ಹೆಚ್ಚು ಮಹತ್ವದ ವಿಷಯಗಳಿಗೆ ಹೇಗೆ ಅನ್ವಯಿಸಬಹುದು ಎಂಬುದನ್ನು ತೋರಿಸಿದನು. ಉದಾಹರಣೆಗೆ, ಯೇಸು ಇದನ್ನೂ ಹೇಳಿದನು: “ಕಾಗೆಗಳನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿಸಲಹುತ್ತಾನೆ. ಹಕ್ಕಿಗಳಿಗಿಂತ ನೀವು ಎಷ್ಟೋ ಹೆಚ್ಚಿನವರಲ್ಲವೇ.” (ಲೂಕ 12:24) ಗುಬ್ಬಿಗಳ ದೃಷ್ಟಾಂತದ ಮೂಲಕ ಯೇಸು ಕಲಿಸಿದ ಪಾಠ ಈಗ ಇನ್ನಷ್ಟು ಸ್ಪಷ್ಟವಾಗುತ್ತದೆ. ಅದೇನೆಂದರೆ ಯೆಹೋವನು ಈ ಚಿಕ್ಕ ಚಿಕ್ಕ ಹಕ್ಕಿಗಳನ್ನು ಸಾಕಿಸಲಹುತ್ತಾನಾದರೆ ತನ್ನನ್ನು ಪ್ರೀತಿಸುವ ಮತ್ತು ಆರಾಧಿಸುವ ಮನುಷ್ಯರನ್ನು ಇನ್ನೆಷ್ಟು ಹೆಚ್ಚಾಗಿ ಪರಾಮರಿಸುವನು!

‘ನಮ್ಮ ಹೃದಯಕ್ಕಿಂತ ದೊಡ್ಡವನಾಗಿರುವ’ ದೇವರಿಂದ ಗಮನಿಸಲ್ಪಡಲು ಮತ್ತು ಪರಾಮರಿಕೆ ಹೊಂದಲು ನಾವು ತೀರಾ ಅಯೋಗ್ಯರು ಎಂದು ನೆನಸುವ ಅಗತ್ಯವಿಲ್ಲವೆಂಬುದು ಯೇಸುವಿನ ಮಾತುಗಳಿಂದ ವ್ಯಕ್ತವಾಗುತ್ತದೆ. ನಾವು ನಮ್ಮಲ್ಲಿ ಕಾಣಶಕ್ತರಾಗದ ವಿಷಯವನ್ನು ನಮ್ಮ ನಿರ್ಮಾಣಿಕನು ಕಾಣುತ್ತಾನೆಂಬದು ಅದೆಷ್ಟು ಸಾಂತ್ವನಕರ! (w08 4/1)

[ಪುಟ 25ರಲ್ಲಿರುವ ಚಿತ್ರ ಕೃಪೆ]

Sparrows: © ARCO/D. Usher/age fotostock