ನಮ್ಮ ನೋವನ್ನು ಅರಿತುಕೊಳ್ಳುವ ದೇವರು
ದೇವರ ಸಮೀಪಕ್ಕೆ ಬನ್ನಿರಿ
ನಮ್ಮ ನೋವನ್ನು ಅರಿತುಕೊಳ್ಳುವ ದೇವರು
“ಪರಾನುಭೂತಿ ಎಂದರೆ ಪರರಿಗೆ ನೋವಾದಾಗ ನಮಗೂ ನೋವಾಗುವುದೇ.” ಹೀಗೆಂದು, ಯೆಹೋವನ ಸಾಕ್ಷಿಗಳ ಒಬ್ಬ ವೃದ್ಧ ಸುವಾರ್ತಿಕರು ಈ ಅಮೂಲ್ಯ ಗುಣದ ಅರ್ಥವನ್ನು ವಿವರಿಸಿದರು. ಪರಾನುಭೂತಿಯ ಪ್ರಧಾನ ಮಾದರಿಯು ಸ್ವತಃ ಯೆಹೋವ ದೇವರೇ ಆಗಿದ್ದಾನೆ. ತನ್ನ ಜನರು ಅನುಭವಿಸುವ ವೇದನೆಯನ್ನು ಆತನೂ ಅನುಭವಿಸುತ್ತಾನೆ. ಆ ಕುರಿತು ನಾವು ಹೇಗೆ ಭರವಸೆಯಿಂದಿರಬಲ್ಲೆವು? ಯೆಹೋವನ ಪ್ರೀತಿಯ ಪರಾನುಭೂತಿಯು ಯೇಸು ಭೂಮಿಯಲ್ಲಿದ್ದಾಗ ಅವನ ನಡೆನುಡಿಗಳಿಂದ ಪೂರ್ಣವಾಗಿ ವ್ಯಕ್ತವಾಯಿತು. (ಯೋಹಾನ 5:19) ಉದಾಹರಣೆಗೆ, ಯೋಹಾನ 11:33-35ರಲ್ಲಿ ವರ್ಣಿಸಲಾದ ವೃತ್ತಾಂತವನ್ನು ಗಮನಿಸಿರಿ.
ಯೇಸುವಿನ ಸ್ನೇಹಿತ ಲಾಜರನು ಅಕಾಲ ಮರಣಕ್ಕೆ ತುತ್ತಾದಾಗ ಯೇಸು ಲಾಜರನ ಹಳ್ಳಿಗೆ ಹೋದನು. ಲಾಜರನ ಅಕ್ಕಂದಿರಾದ ಮಾರ್ಥಮರಿಯರು ಅವನ ಮರಣದಿಂದ ಅತಿಯಾಗಿ ದುಃಖಿತರಾಗಿದ್ದರು. ಯೇಸು ಈ ಕುಟುಂಬವನ್ನು ಬಹಳವಾಗಿ ಪ್ರೀತಿಸಿದ್ದನು. (ಯೋಹಾನ 11:5) ಅವನ ಪ್ರತಿಕ್ರಿಯೆ ಏನಾಗಿತ್ತು? ವೃತ್ತಾಂತವು ಹೇಳುವುದು: “[ಮರಿಯಳು] ಗೋಳಾಡುವದನ್ನೂ ಆಕೆಯ ಸಂಗಡ ಬಂದ ಯೆಹೂದ್ಯರು ಗೋಳಾಡುವದನ್ನೂ ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ತತ್ತರಿಸಿ—ಅವನನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದನು. ಅವರು—ಸ್ವಾಮೀ, ಬಂದು ನೋಡು ಅಂದರು. ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:33-35) ಯೇಸು ಅತ್ತದ್ದೇಕೆ? ಅವನ ಪ್ರಿಯ ಮಿತ್ರನಾದ ಲಾಜರನು ಸತ್ತಿದ್ದನು ನಿಜ. ಆದರೆ, ಯೇಸು ಅನಂತರ ಅವನನ್ನು ಪುನಃ ಜೀವಂತಗೊಳಿಸಲಿದ್ದನು. (ಯೋಹಾನ 11:41-44) ಯೇಸುವಿನ ದುಃಖಕ್ಕೆ ಬೇರೆ ಏನಾದರೂ ಕಾರಣವಿತ್ತೋ?
ಮೇಲೆ ಉಲ್ಲೇಖಿಸಿರುವ ಮಾತುಗಳನ್ನು ಪುನಃ ನೋಡಿರಿ. ಯೇಸು ಮರಿಯಳನ್ನೂ ಅವಳೊಂದಿಗೆ ಗೋಳಾಡುತ್ತಿರುವವರನ್ನೂ ಕಂಡಾಗ ‘ನೊಂದುಕೊಂಡು ತತ್ತರಿಸಿದನು’ ಎಂಬುದನ್ನು ಗಮನಿಸಿ. ಇಲ್ಲಿ ಉಪಯೋಗಿಸಲಾದ ಮೂಲ ಭಾಷೆಯ ಪದಗಳು ತೀವ್ರ ವೇದನೆಯನ್ನು ಸೂಚಿಸುತ್ತವೆ. * ತಾನು ಕಂಡ ವಿಷಯಗಳಿಂದ ಯೇಸುವಿನ ಮನಕರಗಿತು. ದುಃಖವು ಉಕ್ಕಿಬಂದಾಗ ಆತನು ಅತ್ತುಬಿಟ್ಟನು. ಇತರರು ಪಡುತ್ತಿದ್ದ ದುಃಖದಿಂದಾಗಿ ಯೇಸುವಿನ ಹೃದಯವೂ ನೊಂದಿತು. ನೀವು ಪ್ರೀತಿಸುವ ಯಾರಾದರೂ ದುಃಖದಿಂದ ಅಳುವಾಗ ನೀವೂ ನೊಂದು ಕಣ್ಣೀರು ಸುರಿಸಿದ್ದುಂಟೋ?—ರೋಮಾಪುರ 12:15.
ಯೇಸು ತೋರಿಸಿದ ಪರಾನುಭೂತಿ ಅವನ ತಂದೆಯಾದ ಯೆಹೋವನ ಗುಣಗಳ ಮತ್ತು ಮಾರ್ಗಗಳ ಅಮೂಲ್ಯ ಒಳನೋಟವನ್ನು ನಮಗೆ ಕೊಡುತ್ತದೆ. ಯೇಸು ತನ್ನ ತಂದೆಯ ಗುಣಗಳನ್ನು ಎಷ್ಟು ಪರಿಪೂರ್ಣವಾಗಿ ತೋರಿಸಿದನೆಂದರೆ, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಎಂದು ಅವನು ಹೇಳಶಕ್ತನಾದನು. (ಯೋಹಾನ 14:9) ಆದುದರಿಂದ, “ಯೇಸು ಕಣ್ಣೀರು ಬಿಟ್ಟನು” ಎಂದು ನಾವು ಓದುವಾಗ, ಯೆಹೋವನು ತನ್ನ ಆರಾಧಕರ ನೋವನ್ನು ಸ್ವತಃ ಅನುಭವಿಸುತ್ತಾನೆ ಎಂಬ ಭರವಸೆ ನಮಗಿರಬಲ್ಲದು. ಈ ವಾಸ್ತವಾಂಶವನ್ನು ಬೈಬಲಿನ ಇತರ ಲೇಖಕರು ಸಹ ದೃಢೀಕರಿಸುತ್ತಾರೆ. (ಯೆಶಾಯ 63:9; ಜೆಕರ್ಯ 2:8) ಯೆಹೋವನು ಅದೆಷ್ಟು ಕೋಮಲ ಭಾವವುಳ್ಳ ದೇವರಾಗಿದ್ದಾನೆ!
ಹೌದು, ಪರಾನುಭೂತಿ ಆಕರ್ಷಕ ಗುಣ. ನಾವು ನಿರಾಶೆ ಅಥವಾ ಖಿನ್ನತೆಯಲ್ಲಿ ಮುಳುಗಿರುವಾಗ ನಮ್ಮನ್ನು ಅರ್ಥಮಾಡಿಕೊಳ್ಳುವ ಹಾಗೂ ನಮ್ಮ ನೋವಿನಲ್ಲಿ ಭಾಗಿಯಾಗುವ ವ್ಯಕ್ತಿಯ ಕಡೆಗೆ ನಾವು ಸೆಳೆಯಲ್ಪಡುತ್ತೇವೆ. ನಮ್ಮ ನೋವನ್ನು ಅನುಭವಿಸುವ ಮತ್ತು ನಮ್ಮ ಕಣ್ಣೀರಿನ ಕಾರಣವನ್ನು ಅರಿತುಕೊಳ್ಳುವ ಕನಿಕರವುಳ್ಳ ದೇವರಾದ ಯೆಹೋವನ ಕಡೆಗೆ ನಾವು ಇನ್ನೆಷ್ಟು ಹೆಚ್ಚು ಸೆಳೆಯಲ್ಪಡಬೇಕು!—ಕೀರ್ತನೆ 56:8. (w08 5/1)
[ಪಾದಟಿಪ್ಪಣಿ]
^ ಪ್ಯಾರ. 6 “ಕಣ್ಣೀರು ಬಿಟ್ಟನು” ಎಂದು ಭಾಷಾಂತರಿಸಲಾದ ಗ್ರೀಕ್ ಪದವು ಹೆಚ್ಚಾಗಿ “ಮೌನ ರೋದನ”ಕ್ಕೆ ಸೂಚಿಸುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮರಿಯ ಮತ್ತು ಇತರರ ಅಳುವನ್ನು ವರ್ಣಿಸಲು ಉಪಯೋಗಿಸಲ್ಪಟ್ಟಿರುವ ಶಬ್ದವು “ಗಟ್ಟಿಯಾಗಿ ಅಳುವುದು, ಗೋಳಾಟ” ಎಂಬುದನ್ನು ಸೂಚಿಸಬಹುದು.