ನೋಹನ ದಿನದ ಜಲಪ್ರಳಯ ಇಡೀ ಭೂಮಿಯನ್ನು ಆವರಿಸಿತ್ತೋ?
ನಮ್ಮ ಓದುಗರ ಪ್ರಶ್ನೆ
ನೋಹನ ದಿನದ ಜಲಪ್ರಳಯ ಇಡೀ ಭೂಮಿಯನ್ನು ಆವರಿಸಿತ್ತೋ?
ನೋಹನ ದಿನದ ಜಲಪ್ರಳಯವು ಸಂಭವಿಸಿದ್ದು 4,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ. ಆದುದರಿಂದ ಅದನ್ನು ಪ್ರತ್ಯಕ್ಷಕಂಡು ಪಾರಾದ ಸಾಕ್ಷಿಗಳು ಇಂದು ಯಾರೂ ಇಲ್ಲ. ಆದರೆ ಆ ವಿಪತ್ತಿನ ಕುರಿತ ಲಿಖಿತ ದಾಖಲೆ ನಮಗಿದೆ. ಅದಕ್ಕನುಸಾರ, ಆ ಪ್ರಳಯದ ನೀರು ಎಷ್ಟು ಪ್ರಬಲವಾಗಿತ್ತೆಂದರೆ ಆ ಕಾಲದ ಅತ್ಯುನ್ನತ ಬೆಟ್ಟಗಳನ್ನೂ ಮುಳುಗಿಸಿತ್ತು.
ಆ ಚಾರಿತ್ರಿಕ ದಾಖಲೆ ಹೇಳುವುದು: “ಜಲಪ್ರಳಯವು ನಾಲ್ವತ್ತು ದಿನ ಭೂಮಿಯ ಮೇಲೆ ಇದ್ದು . . . ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು. ನೀರು ಆ ಬೆಟ್ಟಗಳಿಗಿಂತಲೂ ಹದಿನೈದು ಮೊಳ [6.5. ಮೀ] ಹೆಚ್ಚಲು ಅವುಗಳು ಸಂಪೂರ್ಣವಾಗಿ ಮುಚ್ಚಿ” ಹೋದವು.—ಆದಿಕಾಂಡ 7:17-20.
ಒಮ್ಮೆ ಇಡೀ ಭೂಮಂಡಲವೇ ನೀರಿನಿಂದ ಮುಳುಗಿಹೋಗಿತ್ತು ಎಂಬದು ಕೇವಲ ಕಟ್ಟುಕಥೆ ಅಥವಾ ಉತ್ಪ್ರೇಕ್ಷೆಯಲ್ಲದೆ ಬೇರೇನೂ ಅಲ್ಲ ಎಂದು ಕೆಲವರು ಹೇಳಬಹುದು. ಆದರೆ ಖಂಡಿತ ಹಾಗಲ್ಲ! ವಾಸ್ತವವೇನೆಂದರೆ ಭೂಮಿಯ ಹೆಚ್ಚಿನಾಂಶವು ಇನ್ನೂ ನೀರಿನಿಂದಲೇ ಆವೃತವಾಗಿದೆ. ಭೂಮಿಯ ಸುಮಾರು 71 ಪ್ರತಿಶತದಷ್ಟು ಭಾಗವನ್ನು ಸಮುದ್ರ ಜಲವು ಆವರಿಸಿದೆ. ಹಾಗಾದರೆ ಜಲಪ್ರಳಯದ ನೀರು ನಿಜವಾಗಿ ಇನ್ನೂ ಭೂಮಿಯಲ್ಲಿದೆ. ನೀರ್ಗಲ್ಲಿನ ನದಿಗಳು ಮತ್ತು ಧ್ರುವ ಪ್ರದೇಶದ ಹಿಮಗಡ್ಡೆಗಳು ಕರಗಿ ನೀರಾದಲ್ಲಿ ಸಮುದ್ರದ ನೀರಿನ ಮಟ್ಟವು ನ್ಯೂಯಾರ್ಕ್ ಮತ್ತು ಟೋಕಿಯೋದಂತಹ ನಗರಗಳನ್ನು ಮುಳುಗಿಸುವಷ್ಟರ ಮಟ್ಟಿಗೆ ಏರಬಲ್ಲದು.
ಅಮೆರಿಕದ ವಾಯುವ್ಯ ಭೂಪ್ರದೇಶವನ್ನು ಅಧ್ಯಯನ ಮಾಡುವ ಭೂವಿಜ್ಞಾನಿಗಳು, ನೂರರಷ್ಟು ಪುರಾತನ ವಿಪತ್ಕಾರಕ ಪ್ರಳಯಗಳು ಆ ಪ್ರದೇಶವನ್ನು ಮುಳುಗಿಸಿಬಿಟ್ಟಿದ್ದವೆಂದು ಅಂದಾಜುಮಾಡುತ್ತಾರೆ. ಅಂಥ ಒಂದು ಪ್ರಳಯದಲ್ಲಿ, ಸುಮಾರು 600 ಮೀ. ಎತ್ತರದ ಜಲಪ್ರವಾಹವು ಭೋರ್ಗರೆಯುತ್ತಾ ತಾಸಿಗೆ 105 ಕಿ.ಮೀ. ರಭಸದಿಂದ ಆ ಪ್ರದೇಶವನ್ನು ನುಗ್ಗಿತೆಂದು ಮತ್ತು ಆ ನೆರೆನೀರಿನ ಪ್ರಮಾಣವು 2,000 ಘನ ಕಿ.ಮೀ. ಆಗಿದ್ದು ಅದರ ಭಾರವು ಎರಡು ಲಕ್ಷ ಕೋಟಿ ಟನ್‌ಗಳಿಗಿಂತಲೂ ಹೆಚ್ಚಾಗಿತ್ತೆಂದು ಅವರು ಹೇಳುತ್ತಾರೆ. ತದ್ರೀತಿಯ ಆವಿಷ್ಕಾರಗಳು ಅಂಥ ಒಂದು ಭೌಗೋಳಿಕ ಪ್ರಳಯವು ಸಂಭವಿಸಿದ್ದಿರಬೇಕು ಎಂಬದನ್ನು ಬೇರೆ ವಿಜ್ಞಾನಿಗಳೂ ನಂಬುವಂತೆ ಮಾಡಿದೆ.
ಆದರೆ ಬೈಬಲನ್ನು ದೇವರ ವಾಕ್ಯವೆಂದು ನಂಬುವವರಿಗಾದರೋ ಭೌಗೋಳಿಕ ಪ್ರಳಯವು ಕೇವಲ ಸಂಭವನೀಯತೆಯಲ್ಲ, ಅದು ನಿಜಸಂಗತಿ. ಯೇಸು ದೇವರಿಗೆ “ನಿನ್ನ ವಾಕ್ಯವೇ ಸತ್ಯವು” ಎಂದು ಹೇಳಿದ್ದಾನೆ. (ಯೋಹಾನ 17:17) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆ ಎಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 2:3, 4) ಒಂದುವೇಳೆ ದೇವರ ವಾಕ್ಯದಲ್ಲಿ ಮಿಥ್ಯೆಗಳಿರುವಲ್ಲಿ ಪೌಲನು ಯೇಸುವಿನ ಹಿಂಬಾಲಕರಿಗೆ ದೇವರ ಮತ್ತು ಆತನ ಉದ್ದೇಶದ ಕುರಿತು ಸತ್ಯವನ್ನು ಹೇಗೆ ಕಲಿಸಸಾಧ್ಯವಿತ್ತು?
ಜಲಪ್ರಳಯವು ನಿಜವಾಗಿಯೂ ಸಂಭವಿಸಿತ್ತೆಂದು ಯೇಸು ನಂಬಿದ್ದನು ಮಾತ್ರವಲ್ಲ ಅದು ಇಡೀ ಭೂಮಿಯನ್ನು ಆವರಿಸಿತ್ತೆಂದೂ ನಂಬಿದ್ದನು. ಯೇಸು ತನ್ನ ಸಾನ್ನಿಧ್ಯ ಮತ್ತು ಯುಗದ ಸಮಾಪ್ತಿಯಲ್ಲಿ ನಡೆಯಲಿರುವ ಘಟನೆಗಳನ್ನು ತನ್ನ ಮಹಾ ಪ್ರವಾದನೆಯಲ್ಲಿ ನೋಹನ ದಿನದ ಘಟನೆಗಳಿಗೆ ಹೋಲಿಸಿದನು. (ಮತ್ತಾಯ 24:37-39) ನೋಹನ ದಿನಗಳ ಜಲಪ್ರಳಯದ ಕುರಿತು ಅಪೊಸ್ತಲ ಪೇತ್ರನು ಸಹ ಬರೆದನು: “ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.”—2 ಪೇತ್ರ 3:6.
ನೋಹನು ಒಬ್ಬ ಕಾಲ್ಪನಿಕ ವ್ಯಕ್ತಿಯಾಗಿದ್ದಲ್ಲಿ ಮತ್ತು ಜಲಪ್ರಳಯವು ಒಂದು ದಂತಕಥೆಯಾಗಿದ್ದಲ್ಲಿ ಈ ಅಂತ್ಯ ಕಾಲದಲ್ಲಿರುವ ಜನರಿಗೆ ಪೇತ್ರ ಮತ್ತು ಯೇಸು ಕೊಟ್ಟ ಎಚ್ಚರಿಕೆಗಳು ನಿರರ್ಥಕವಾಗಿರುತ್ತಿದ್ದವು. ಜಲಪ್ರಳಯವು ದಂತಕಥೆ ಎಂಬ ವಿಚಾರವು ತಾನೇ ಒಬ್ಬ ವ್ಯಕ್ತಿಯು ಬೈಬಲ್ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಮಾಡಬಲ್ಲದು. ಅಲ್ಲದೆ ನೋಹನ ಜಲಪ್ರಳಯಕ್ಕಿಂತ ಮಹತ್ತಾದ ಒಂದು ಸಂಕಟವನ್ನು ಪಾರಾಗುವ ಸಾಧ್ಯತೆಗಳನ್ನೂ ಗಂಡಾಂತರಕ್ಕೆ ಒಡ್ಡಬಲ್ಲದು.—2 ಪೇತ್ರ 3:1-7.
ದೇವರು ತನ್ನ ಜನರ ಕಡೆಗಿರುವ ಮಹಾ ಕರುಣೆಯ ಕುರಿತು ಮಾತಾಡುತ್ತಾ ಅಂದದ್ದು: “ಇಂಥಾ ಜಲಪ್ರಲಯವು ಭೂಮಿಯನ್ನು ತಿರಿಗಿ ಆವರಿಸುವದಿಲ್ಲವೆಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವದಿಲ್ಲ, ಗದರಿಸುವದಿಲ್ಲ.” ನೋಹನ ದಿನದ ಜಲಪ್ರಳಯವು ಭೂಮಿಯನ್ನು ಮುಳುಗಿಸಿದ್ದು ಎಷ್ಟು ನೈಜವೋ ದೇವರ ಪ್ರೀತಿಪೂರ್ವಕ ದಯೆಯೂ ಆತನಲ್ಲಿ ಭರವಸೆಯಿಡುವವರ ಮೇಲೆ ಅಷ್ಟೇ ನೈಜವಾಗಿದೆ.—ಯೆಶಾಯ 54:9 (w08 6/1)