ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಸ್ಯೆಗಳನ್ನು ಬಗೆಹರಿಸುವುದು

ಸಮಸ್ಯೆಗಳನ್ನು ಬಗೆಹರಿಸುವುದು

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಸಮಸ್ಯೆಗಳನ್ನು ಬಗೆಹರಿಸುವುದು

ಗಂಡ: “ಮಕ್ಕಳು ಎಲ್ಲಿ ಕಾಣ್ತಾ ಇಲ್ಲ?”

ಹೆಂಡತಿ: “ಶಾಪಿಂಗ್‌ಗೆ ಹೋಗಿದ್ದಾರೆ, ಬಟ್ಟೆ ತರಲಿಕ್ಕೆ.”

ಗಂಡ: [ಸಿಟ್ಟಿನಿಂದ ಧ್ವನಿಯೇರಿಸಿ] “ಮತ್ತೆ ಬಟ್ಟೆ ತರಲಿಕ್ಕಾ? ಹೋದ ತಿಂಗಳಲ್ಲಿ ತಾನೇ ಹೊಸ ಬಟ್ಟೆ ತಂದರು!”

ಹೆಂಡತಿ: [ಸಿಟ್ಟುಗೊಂಡದಕ್ಕೆ ನೊಂದುಕೊಂಡು ತನ್ನನ್ನು ಸಮರ್ಥಿಸುತ್ತಾ] “ಅಲ್ಲೊಂದು ಸೇಲ್‌ ಬಂದಿದೆಯಲ್ಲ, ಅದಕ್ಕೆ ಹೋಗುತ್ತೇವೆ ಅಂತ ಹೇಳಿದರು, ನಾನು ‘ಹುಂ’ ಎಂದೆ.”

ಗಂಡ: [ರೇಗಾಡುತ್ತಾ] “ಮಕ್ಕಳು ನನ್ನನ್ನು ಕೇಳದೆ ಹಣ ಖರ್ಚುಮಾಡೊದು ನನಗೆ ಹಿಡಿಸಲ್ಲ ಅಂತ ನಿನಗೆ ಗೊತ್ತು! ಆದರೂ ನನಗೆ ಹೇಳದೆ ಕೇಳದೆ ಅವರನ್ನು ಹೇಗೆ ಕಳುಹಿಸಿದೆ?”

ಈ ದಂಪತಿಯ ಮಧ್ಯೆ ಯಾವ ಸಮಸ್ಯೆಯಿದೆಯೆಂದು ನೆನಸುತ್ತೀರಿ? ಗಂಡ ಮುಂಗೋಪಿಯೆಂಬುದು ಸ್ಪಷ್ಟ. ಅಲ್ಲದೆ, ತಮ್ಮ ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು ಎಂಬ ವಿಷಯದಲ್ಲಿ ಆ ದಂಪತಿಗೆ ಭಿನ್ನಾಭಿಪ್ರಾಯವಿದೆ. ಸರಾಗವಾಗಿ ಸಂವಾದ ಮಾಡುವುದರಲ್ಲಿಯೂ ಅವರಿಗೆ ಸಮಸ್ಯೆಯಿದೆ.

ಯಾವ ವಿವಾಹವೂ ತೊಂದರೆಮುಕ್ತವಲ್ಲ. ಒಂದಲ್ಲ ಒಂದು ಸಮಸ್ಯೆಯನ್ನು ದಂಪತಿಗಳು ಎದುರಿಸಿಯೇ ಎದುರಿಸುತ್ತಾರೆ. ಆದರೆ ಸಮಸ್ಯೆಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಪತಿಪತ್ನಿಯರು ಅವನ್ನು ಬಗೆಹರಿಸಲು ಕಲಿಯುವುದು ಅತಿ ಪ್ರಾಮುಖ್ಯ. ಯಾಕೆ?

ಯಾಕೆಂದರೆ, ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಸಮಯ ದಾಟಿದಂತೆ ಅವು ಅಡ್ಡಗೋಡೆಯಂತೆ ಬೆಳೆದು ಸಂವಾದವನ್ನು ತಡೆಯಬಲ್ಲವು. “ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ” ಎಂದು ಜ್ಞಾನಿ ರಾಜ ಸೊಲೊಮೋನನು ಹೇಳಿದನು. (ಜ್ಞಾನೋಕ್ತಿ 18:19) ಸಮಸ್ಯೆಗಳನ್ನು ಬಗೆಹರಿಸುವಾಗ ಮುಕ್ತವಾಗಿ ಸಂಭಾಷಿಸಬೇಕು. ಅದಕ್ಕಾಗಿ ನೀವೇನು ಮಾಡಬಲ್ಲಿರಿ?

ವೈವಾಹಿಕ ಜೀವನದಲ್ಲಿ ಸಂವಾದವು ಜೀವರಕ್ತದಂತಿದ್ದರೆ ಪ್ರೀತಿ ಮತ್ತು ಗೌರವವು ಅದರ ಹೃದಯ ಮತ್ತು ಶ್ವಾಸಕೋಶದಂತಿವೆ. (ಎಫೆಸ 5:33) ಪ್ರೀತಿಯು, ಸಮಸ್ಯೆಗಳನ್ನು ಬಗೆಹರಿಸುವಾಗ ಹಳೆಯ ತಪ್ಪುಒಪ್ಪು, ನೋವುಗಳನ್ನು ಮರೆತು ಸದ್ಯದ ಸಮಸ್ಯೆಯ ಮೇಲೆ ಗಮನವಿಡುವಂತೆ ದಂಪತಿಗಳನ್ನು ಪ್ರಚೋದಿಸುತ್ತದೆ. (1 ಕೊರಿಂಥ 13:4, 5; 1 ಪೇತ್ರ 4:8) ಒಬ್ಬರನ್ನೊಬ್ಬರು ಗೌರವಿಸುವ ದಂಪತಿಗಳು ಪರಸ್ಪರ ಮುಕ್ತವಾಗಿ ಮಾತಾಡಲು ಅವಕಾಶ ಕೊಡುತ್ತಾರೆ. ಅವರು ಬರೇ ಮಾತುಗಳನ್ನಲ್ಲ ಅದರ ಅರ್ಥವನ್ನೂ ಗ್ರಹಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಸಮಸ್ಯೆಗಳನ್ನು ಬಗೆಹರಿಸಲು ನಾಲ್ಕು ಹೆಜ್ಜೆಗಳು

ಕೆಳಗಿರುವ ನಾಲ್ಕು ಹೆಜ್ಜೆಗಳನ್ನು ಪರಿಗಣಿಸಿ. ಮಾತ್ರವಲ್ಲ, ಸಮಸ್ಯೆಗಳನ್ನು ಪ್ರೀತಿಗೌರವದಿಂದ ಬಗೆಹರಿಸುವುದರಲ್ಲಿ ಬೈಬಲ್‌ ಮೂಲತತ್ತ್ವಗಳು ಹೇಗೆ ಸಹಾಯಮಾಡುತ್ತವೆ ಎಂಬುದನ್ನೂ ಗಮನಿಸಿ.

1. ಚರ್ಚಿಸಲು ಸಮಯವನ್ನು ಬದಿಗಿರಿಸಿ. “ಪ್ರತಿಯೊಂದು ಕಾರ್ಯಕ್ಕೂ . . . ತಕ್ಕ ಸಮಯವುಂಟು. . . . ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ಬೈಬಲ್‌ ಹೇಳುತ್ತದೆ. (ಪ್ರಸಂಗಿ 3:1, 7) ಆರಂಭದಲ್ಲಿ ತಿಳಿಸಲಾದ ಜಗಳದಂತೆ, ಕೆಲವು ಸಮಸ್ಯೆಗಳು ತೀವ್ರ ಭಾವನೆಗಳನ್ನು ಉದ್ರೇಕಿಸಬಲ್ಲವು. ಹಾಗಾಗುವಲ್ಲಿ, ಕೋಪ ಭುಗಿಲೇಳುವ ಮುನ್ನ ಸಂಯಮ ತೋರಿಸಿ ತುಸು ಹೊತ್ತು ಚರ್ಚೆ ನಿಲ್ಲಿಸಿ. ಅಂದರೆ ‘ಸುಮ್ಮನಿರಿ.’ “ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು” ಎಂಬ ಬೈಬಲಿನ ಸಲಹೆಗೆ ಕಿವಿಗೊಟ್ಟರೆ ನಿಮ್ಮ ದಾಂಪತ್ಯವನ್ನು ಬಹಳ ಹಾನಿಯಿಂದ ತಪ್ಪಿಸಬಹುದು.—ಜ್ಞಾನೋಕ್ತಿ 17:14.

ಆದರೆ, “ಮಾತಾಡುವ ಸಮಯ” ಸಹ ಉಂಟು. ಸಮಸ್ಯೆಗಳನ್ನು ಅಲಕ್ಷಿಸಿದರೆ ಅವು ಕಳೆಗಳಂತೆ ಹುಲುಸಾಗಿ ಬೆಳೆಯುತ್ತವೆ. ಆದಕಾರಣ, ಸಮಸ್ಯೆಗಳನ್ನು ನಿರ್ಲಕ್ಷ್ಯಿಸಿ ಇಂದಲ್ಲ ನಾಳೆ ಎಲ್ಲವೂ ಸರಿಯಾಗುತ್ತದೆ ಎಂದೆಣಿಸಬೇಡಿ. ನೀವು ಚರ್ಚೆಯನ್ನು ನಿಲ್ಲಿಸಿದ್ದಲ್ಲಿ ಆ ಬಗ್ಗೆ ಇನ್ನೊಮ್ಮೆ ಯಾವಾಗ ಮಾತಾಡುವಿರೆಂದು ಹೇಳಿ. ಈ ಮೂಲಕ ನಿಮ್ಮ ಸಂಗಾತಿಗೆ ಗೌರವವನ್ನು ತೋರಿಸುತ್ತೀರಿ. ಮಾತ್ರವಲ್ಲ ಅದು, ಬೈಬಲಿನ ಈ ಬುದ್ಧಿವಾದವನ್ನು ಪಾಲಿಸಲು ನಿಮಗಿಬ್ಬರಿಗೂ ನೆರವಾಗಬಲ್ಲದು: “ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಅಂತೆಯೇ ನೀವು ಹೇಳಿದ ಮಾತನ್ನು ಖಂಡಿತ ಉಳಿಸಿಕೊಳ್ಳಿ.

ಇದನ್ನು ಪ್ರಯತ್ನಿಸಿ: ನಿಮ್ಮ ಕುಟುಂಬ ಸಮಸ್ಯೆಗಳನ್ನು ಚರ್ಚಿಸಲು ಪ್ರತಿ ವಾರವೂ ಒಂದು ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿ. ಕೆಲಸದಿಂದ ಬಂದೊಡನೆ, ಊಟಕ್ಕೆ ಮುಂಚೆ, ಮುಂತಾದ ನಿರ್ದಿಷ್ಟ ಸಮಯದಲ್ಲಿಯೇ ಸಾಮಾನ್ಯವಾಗಿ ನೀವು ರೇಗಾಡುತ್ತೀರಿ ಎಂಬುದು ನಿಮ್ಮ ಗಮನಕ್ಕೆ ಬರುವಲ್ಲಿ, ಅಂಥ ಸಮಯಗಳಲ್ಲಿ ಸಮಸ್ಯೆಗಳನ್ನು ಚರ್ಚಿಸಬೇಡಿರಿ. ನೀವಿಬ್ಬರೂ ಶಾಂತ ಸ್ಥಿತಿಯಲ್ಲಿರುವ ಸಮಯವನ್ನು ಆಯ್ಕೆಮಾಡಿ.

2. ಅಭಿಪ್ರಾಯವನ್ನು ಮುಚ್ಚುಮರೆಯಿಲ್ಲದೆ ಗೌರವಪೂರ್ವಕವಾಗಿ ತಿಳಿಸಿ. “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ.” (ಎಫೆಸ 4:25) ವೈವಾಹಿಕ ಜೀವನದಲ್ಲಿ ವಿವಾಹ ಸಂಗಾತಿಯೇ ನಿಮ್ಮ ಅತ್ಯಾಪ್ತ ನೆರೆಯವರು. ಆದುದರಿಂದ ಅವರೊಂದಿಗೆ ಮಾತಾಡುವಾಗ ನಿಮ್ಮ ಭಾವನೆಗಳನ್ನು ಮುಚ್ಚುಮರೆಯಿಲ್ಲದೆ ನಿರ್ದಿಷ್ಟವಾಗಿ ತಿಳಿಸಿ. ಮದುವೆಯಾಗಿ 26 ವರ್ಷವಾಗಿರುವ ಮಾರ್ಗರೇಟ್‌ * ತಿಳಿಸುವುದು: “ಸಮಸ್ಯೆಯೆದ್ದಾಗಲೆಲ್ಲಾ ನನ್ನ ಮನಸ್ಸಿನ ಭಾವನೆಗಳನ್ನು ನನ್ನ ಯಜಮಾನರಿಗೆ ತಿಳಿಸಬೇಕೆಂದಿಲ್ಲ, ಅವರು ತಾವಾಗಿಯೇ ಅರ್ಥಮಾಡಿಕೊಳ್ಳುತ್ತಾರೆಂದು ಮದುವೆಯ ಹೊಸದರಲ್ಲಿ ನಾನು ನೆನಸಿದ್ದೆ. ಆದರೆ ಅದು ಸರಿಯಲ್ಲವೆಂದು ಆಮೇಲೆ ನನಗೆ ಗೊತ್ತಾಯಿತು. ನಾನೀಗ ನನ್ನ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸುತ್ತೇನೆ.”

ಒಂದು ಸಮಸ್ಯೆಯನ್ನು ಚರ್ಚಿಸುವಾಗ ನಿಮ್ಮ ಗುರಿಯು ಜಗಳವನ್ನೋ ಎದುರಾಳಿಯನ್ನೋ ಜಯಿಸುವುದಲ್ಲ. ಬದಲಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಸಂಗಾತಿಗೆ ತಿಳಿಯಪಡಿಸುವುದೇ ಆಗಿದೆ ಎಂದು ನೆನಪಿಡಿರಿ. ಇದನ್ನು ಪರಿಣಾಮಕಾರಿಯಾಗಿ ಮಾಡಲಿಕ್ಕಾಗಿ ಸಮಸ್ಯೆ ಏನಾಗಿದೆ ಎಂದು ನೀವು ನೆನಸುತ್ತೀರಿ, ಅದು ಯಾವಾಗ ಏಳುತ್ತದೆ ಮತ್ತು ನಿಮಗೆ ಹೇಗೆ ಅನಿಸುತ್ತದೆ ಎಂದು ವಿವರಿಸಿರಿ. ಉದಾಹರಣೆಗಾಗಿ, ಮನೆಯನ್ನು ನಿಮ್ಮ ಸಂಗಾತಿ ಅಚ್ಚುಕಟ್ಟಾಗಿ ಇಡದಿದ್ದಲ್ಲಿ ನಿಮಗೆ ಇರಿಸುಮುರಿಸಾದರೆ ನೀವು ಗೌರವದಿಂದ ಹೀಗೆ ಹೇಳಬಹುದು: ‘ನೀವು ಮನೆಗೆ ಬಂದೊಡನೆ ಬಟ್ಟೆಗಳನ್ನು ಅಲ್ಲಲ್ಲಿ ಬಿಸಾಡುತ್ತೀರಲ್ಲ [ಸಮಸ್ಯೆ ಏನು ಮತ್ತು ಯಾವಾಗ ಏಳುತ್ತದೆ], ಮನೆಯನ್ನು ನೀಟಾಗಿಡುವುದಕ್ಕೆ ನಾನೆಷ್ಟು ಕಷ್ಟಪಡುತ್ತೇನೆ ಎಂಬ ಬಗ್ಗೆ ನಿಮಗೆ ಸ್ವಲ್ಪವೂ ಚಿಂತೆಯಿಲ್ಲ [ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ].’ ಆಮೇಲೆ ಅದಕ್ಕೆ ನೀವೆಣಿಸುವ ಪರಿಹಾರವನ್ನು ಜಾಣ್ಮೆಯಿಂದ ತಿಳಿಸಿ.

ಇದನ್ನು ಪ್ರಯತ್ನಿಸಿ: ನಿಮ್ಮ ಸಂಗಾತಿಯೊಂದಿಗೆ ಮಾತಾಡುವ ಮೊದಲೇ ನೀವು ಹೇಳಲಿಕ್ಕಿರುವ ವಿಷಯವನ್ನು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಳ್ಳಿ. ಅದನ್ನು ಮಾಡಲು, ಸಮಸ್ಯೆ ಯಾವುದೆಂದೂ ಅದನ್ನು ಹೇಗೆ ಬಗೆಹರಿಸಲು ಇಷ್ಟಪಡುತ್ತೀರೆಂದೂ ಬರೆದಿಟ್ಟುಕೊಳ್ಳಿ.

3. ಸಂಗಾತಿಗೆ ಕಿವಿಗೊಟ್ಟು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಕ್ರೈಸ್ತರು, “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ” ಎಂದು ಯೇಸುವಿನ ಶಿಷ್ಯ ಯಾಕೋಬನು ಬರೆದನು. (ಯಾಕೋಬ 1:19) ನಿಮ್ಮ ವಿವಾಹಸಂಗಾತಿ ಸಮಸ್ಯೆಯ ಕುರಿತಾದ ನಿಮ್ಮ ಅನಿಸಿಕೆಯನ್ನು ಅರಿತುಕೊಳ್ಳುವುದಿಲ್ಲ ಎಂಬ ಭಾವನೆಯು ಉಂಟುಮಾಡುವ ದುಃಖಕ್ಕಿಂತ ಹೆಚ್ಚಿನದ್ದು ಬೇರೊಂದಿಲ್ಲ. ಆದುದರಿಂದ, ಅಂಥ ಅನಿಸಿಕೆಯು ನಿಮ್ಮ ಸಂಗಾತಿಯಲ್ಲಿ ಉಂಟಾಗದಂತೆ ಜಾಗ್ರತೆವಹಿಸಿರಿ!—ಮತ್ತಾಯ 7:12.

ಮೂವತ್ತೈದು ವರ್ಷ ವೈವಾಹಿಕ ಜೀವನ ನಡೆಸಿರುವ ವೂಲ್ಫ್‌ಗ್ಯಾನ್‌ ತಿಳಿಸುವುದು: “ಸಮಸ್ಯೆಗಳನ್ನು ಚರ್ಚಿಸುವಾಗ ನನ್ನ ಪತ್ನಿ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರಂತೂ ನನಗೆ ತಲೆ ಚಿಟ್ಟುಹಿಡಿಯುತ್ತದೆ.” ಮದುವೆಯಾಗಿ 20 ವರ್ಷವಾಗಿರುವ ಡಯಾನಾ ಹೇಳುವುದು: “ಸಮಸ್ಯೆಗಳನ್ನು ತಿಳಿಸುವಾಗ ನನ್ನ ಗಂಡ ನನಗೆ ನಿಜವಾಗಿಯೂ ಕಿವಿಗೊಡುವುದಿಲ್ಲ ಎಂದು ಅನೇಕ ಸಲ ಅವರನ್ನು ದೂರುತ್ತೇನೆ.” ಈ ತಡೆಗಟ್ಟನ್ನು ನೀವು ಹೇಗೆ ನಿಭಾಯಿಸಬಲ್ಲಿರಿ?

ನಿಮ್ಮ ಸಂಗಾತಿಯ ಆಲೋಚನೆ ಅಥವಾ ಭಾವನೆಗಳೆಲ್ಲವೂ ನಿಮಗೆ ಅರ್ಥವಾಗುತ್ತದೆಂದು ಊಹಿಸಬೇಡಿ. “ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ” ಎನ್ನುತ್ತದೆ ದೇವರ ವಾಕ್ಯ. (ಜ್ಞಾನೋಕ್ತಿ 13:10) ನಿಮ್ಮ ಸಂಗಾತಿ ತನ್ನ ಮನಸ್ಸಿನಲ್ಲಿರುವುದೆಲ್ಲವನ್ನು ಹೇಳಲು ಅವಕಾಶಕೊಟ್ಟು ಗೌರವ ತೋರಿಸಿರಿ. ಅವರು ಹೇಳಿದ್ದೆಲ್ಲವೂ ನಿಮಗೆ ಸಂಪೂರ್ಣವಾಗಿ ಅರ್ಥವಾಗಿದೆಯೆಂದು ಖಾತ್ರಿಪಡಿಸಿಕೊಳ್ಳಲಿಕ್ಕಾಗಿ ಅದನ್ನು ಮತ್ತೆ ಅವರಿಗೆ ಹೇಳಿರಿ. ಆದರೆ ಕೆಣಕುವ ರೀತಿಯಲ್ಲೋ ಜಗಳವಾಡುವ ರೀತಿಯಲ್ಲೋ ಹೇಳಬೇಡಿ. ನೀವು ತಪ್ಪಾಗಿ ಅರ್ಥಮಾಡಿಕೊಂಡಿದ್ದನ್ನು ನಿಮ್ಮ ಸಂಗಾತಿ ತಿದ್ದಿದಲ್ಲಿ ಅವರನ್ನು ತಡೆಯಬೇಡಿ. ಒಬ್ಬರೇ ಎಲ್ಲಾ ಮಾತನ್ನಾಡಬೇಡಿ. ಒಬ್ಬರು ಇನ್ನೊಬ್ಬರ ಆಲೋಚನೆ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ತನಕ ನೀವು ಇದೇ ರೀತಿಯ ಸಂಭಾಷಣೆಯನ್ನು ಮುಂದುವರಿಸಿರಿ.

ನಿಮ್ಮ ಸಂಗಾತಿ ಹೇಳುವುದನ್ನು ಜಾಗ್ರತೆಯಿಂದ ಕಿವಿಗೊಡಲು ಮತ್ತು ಅವನ/ಳ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ದೈನ್ಯತೆ ಮತ್ತು ತಾಳ್ಮೆ ಅಗತ್ಯ ಎಂಬುದೇನೋ ನಿಜ. ಆದರೆ ನಿಮ್ಮ ಸಂಗಾತಿಗೆ ನೀವು ಮೊದಲು ಗೌರವ ತೋರಿಸುವಲ್ಲಿ ಅವರೂ ನಿಮಗೆ ಗೌರವ ತೋರಿಸಲು ಪ್ರೇರಿಸಲ್ಪಡುವರು.—ಮತ್ತಾಯ 7:2; ರೋಮಾಪುರ 12:10.

ಇದನ್ನು ಪ್ರಯತ್ನಿಸಿ: ನಿಮ್ಮ ಸಂಗಾತಿ ಹೇಳುವುದನ್ನು ನೀವು ಪುನರುಚ್ಚರಿಸುವಾಗ ಅವರು ಹೇಳಿದ ಮಾತುಗಳನ್ನೇ ಗಿಣಿಪಾಠದಂತೆ ಹೇಳಬೇಡಿ. ಅನುಕಂಪ ತೋರಿಸುತ್ತಾ, ನಿಮ್ಮ ಸಂಗಾತಿ ಹೇಳಿದ್ದನ್ನು ಮತ್ತು ಅವರ ಭಾವನೆಯನ್ನು ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ ಎಂದು ವಿವರಿಸಲು ಪ್ರಯತ್ನಿಸಿ.​—⁠1 ಪೇತ್ರ 3:8.

4. ಪರಿಹಾರ ಸೂಚಿಸುವಾಗ ಒಪ್ಪಿಕೊಳ್ಳಿ. “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.” (ಪ್ರಸಂಗಿ 4:9, 10) ಪತಿಪತ್ನಿಯರಿಬ್ಬರೂ ಒಮ್ಮತದಿಂದ ಕಾರ್ಯನಡೆಸಿ ಪರಸ್ಪರ ಬೆಂಬಲಿಸಿದರೆ ಹೆಚ್ಚಿನ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಸಾಧ್ಯವಿದೆ.

ಯೆಹೋವ ದೇವರು ಗಂಡನನ್ನು ಕುಟುಂಬದ ತಲೆಯಾಗಿ ಅಂದರೆ ಯಜಮಾನನಾಗಿ ನೇಮಿಸಿದ್ದಾನೆ ನಿಜ. (1 ಕೊರಿಂಥ 11:3; ಎಫೆಸ 5:23) ಆದರೆ ತಲೆತನವೆಂದರೆ ಸರ್ವಾಧಿಕಾರ ಛಲಾಯಿಸುವುದಲ್ಲ. ವಿವೇಚನೆಯುಳ್ಳ ಗಂಡನು ಸ್ವೇಚ್ಛಾನುಸಾರವಾಗಿ ನಿರ್ಣಯ ಮಾಡುವುದಿಲ್ಲ. ವಿವಾಹವಾಗಿ 20 ವರ್ಷವಾಗಿರುವ ಡೇವಿಡ್‌ ಹೇಳುವುದು: “ನನ್ನಾಕೆಗೂ ಒಪ್ಪುವಂಥ ಒಂದು ವಿಷಯವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ನಮ್ಮಿಬ್ಬರಿಗೂ ಸರಿಕಾಣುವ ನಿರ್ಣಯವನ್ನು ಮಾಡುತ್ತೇನೆ.” ಏಳು ವರ್ಷ ದಾಂಪತ್ಯ ಜೀವನ ನಡೆಸಿರುವ ಟಾನ್ಯಾ ಅನ್ನುವುದು: “ಯಾರು ಸರಿ ಯಾರು ತಪ್ಪು ಎಂಬುದು ಮುಖ್ಯವಲ್ಲ. ಸಮಸ್ಯೆಯನ್ನು ಪರಿಹರಿಸುವ ವಿಧದಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಬಿಟ್ಟುಕೊಡುವುದು ಮತ್ತು ವಿವೇಚನೆಯು ಯಶಸ್ಸಿನ ಕೀಲಿಕೈಯಾಗಿದೆಯೆಂದು ನಾನು ಕಂಡುಕೊಂಡೆ.”

ಇದನ್ನು ಪ್ರಯತ್ನಿಸಿ: ಒಂದು ಸಮಸ್ಯೆಯನ್ನು ನಿಭಾಯಿಸಲಿಕ್ಕಾಗಿ ನೀವು ನೆನಸುವ ಬೇರೆ ಬೇರೆ ಪರಿಹಾರಗಳನ್ನು ಜೊತೆಗೂಡಿ ಪಟ್ಟಿಮಾಡಿ. ನಿಮ್ಮ ವಿಚಾರಗಳನ್ನೆಲ್ಲಾ ಬರೆದ ಬಳಿಕ ಆ ಪಟ್ಟಿಯನ್ನು ಪರಿಶೀಲಿಸಿ ನೀವಿಬ್ಬರೂ ಒಪ್ಪುವ ಒಂದು ಪರಿಹಾರವನ್ನು ಕಾರ್ಯರೂಪಕ್ಕೆ ಹಾಕಿ. ಅನಂತರ ಸ್ವಲ್ಪ ದಿನಗಳ ಬಳಿಕ ಆ ಪರಿಹಾರವನ್ನು ಕಾರ್ಯರೂಪಕ್ಕೆ ಹಾಕಿದ್ದೀರೋ ಮತ್ತು ಅದರಲ್ಲಿ ಎಷ್ಟು ಯಶಸ್ಸು ಗಳಿಸಿದ್ದೀರಿ ಎಂಬುದನ್ನು ಪರೀಕ್ಷೆಮಾಡಿ ನೋಡಿ.

ಒಬ್ಬರೇ ಅಲ್ಲ, ಜೊತೆಗೂಡಿ ಎಳೆಯಿರಿ

“ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು” ಎಂದು ಯೇಸು ವಿವಾಹದ ಕುರಿತು ಹೇಳಿದನು. (ಮತ್ತಾಯ 19:6) ‘ಕೂಡಿಸಿದ್ದನು’ ಎಂದು ಭಾಷಾಂತರವಾಗಿರುವ ಗ್ರೀಕ್‌ ಪದದ ಅರ್ಥವು ‘ನೊಗ ಹೊರಿಸು’ ಎಂದಾಗಿದೆ. ಯೇಸುವಿನ ಕಾಲದಲ್ಲಿ ನೊಗದ ಕೆಳಗೆ ಎರಡು ಪ್ರಾಣಿಗಳನ್ನು ಕಟ್ಟಿ ಕೆಲಸಕ್ಕೆ ಹೂಡುತ್ತಿದ್ದರು. ಆ ಎರಡು ಪ್ರಾಣಿಗಳು ಪರಸ್ಪರ ಸಹಕರಿಸದಿದ್ದರೆ ಸರಿಯಾಗಿ ಕೆಲಸಮಾಡಸಾಧ್ಯವಿರಲಿಲ್ಲ. ಅಲ್ಲದೆ, ನೊಗವು ಅವುಗಳ ಕತ್ತನ್ನು ಉಜ್ಜಿ ಗಾಯಗೊಳಿಸುತ್ತಿತ್ತು. ಅವು ಒಟ್ಟಿಗೆ ಸಹಕರಿಸಿ ಕೆಲಸಮಾಡಿದರೆ ಮಾತ್ರ ಭಾರವಾದ ಹೊರೆಗಳನ್ನು ಸುಲಭವಾಗಿ ಎಳೆಯುತ್ತಿದ್ದವು, ಹೊಲವನ್ನೂ ಉಳುತ್ತಿದ್ದವು.

ಅದೇ ರೀತಿ ಪತಿಪತ್ನಿಯರು ಜೊತೆಗೂಡಿ ಕೆಲಸಮಾಡದಿದ್ದಲ್ಲಿ ವಿವಾಹವೆಂಬ ನೊಗದ ಕೆಳಗೆ ಘರ್ಷಣೆಗೆ ಒಳಗಾಗಬಹುದು. ಆದರೆ ಅವರು ತಮ್ಮ ಸಂಸಾರದ ಬಂಡಿಯನ್ನು ಒಟ್ಟಿಗೆ ಎಳೆಯಲು ಕಲಿಯುವುದಾದರೆ ಹೆಚ್ಚಿನ ಮಟ್ಟಿಗೆ ಯಾವುದೇ ಸಮಸ್ಯೆಯನ್ನು ನಿಭಾಯಿಸಬಲ್ಲರು ಹಾಗೂ ಹೆಚ್ಚು ಒಳಿತನ್ನು ಸಾಧಿಸಬಲ್ಲರು. ಸಂತುಷ್ಟ ವಿವಾಹಿತ ವ್ಯಕ್ತಿಯಾದ ಕಲಾಲ ಎಂಬವನು ಹೇಳಿದ್ದು: “ನಾನೂ ನನ್ನ ಹೆಂಡತಿಯೂ ಮುಚ್ಚುಮರೆಯಿಲ್ಲದೆ ಮಾತಾಡುತ್ತೇವೆ. ಇನ್ನೊಬ್ಬರ ಪರಿಸ್ಥಿತಿಯಲ್ಲಿ ನಮ್ಮನ್ನು ಇಟ್ಟುಕೊಳ್ಳುತ್ತೇವೆ. ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುತ್ತೇವೆ ಮತ್ತು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುತ್ತೇವೆ. ಹೀಗೆ ಕಳೆದ 25 ವರ್ಷಗಳಲ್ಲಿ ನಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ.” ನೀವು ಸಹ ಹಾಗೆ ಮಾಡುವಿರೋ? (w08 5/1)

ಹೀಗೆ ಕೇಳಿಕೊಳ್ಳಿ . . .

▪ ನನ್ನಾಕೆಯೊಂದಿಗೆ/ನನ್ನವರೊಂದಿಗೆ ನಾನು ಪ್ರಾಮುಖ್ಯವಾಗಿ ಚರ್ಚಿಸಬಯಸುವ ಸಮಸ್ಯೆ ಯಾವುದು?

▪ ಈ ಕುರಿತು ನನ್ನ ಸಂಗಾತಿಯ ನಿಜ ಭಾವನೆಗಳು ನನಗೆ ಅರ್ಥವಾಗುತ್ತಿವೆ ಎಂಬುದನ್ನು ನಾನು ಹೇಗೆ ಖಚಿತಪಡಿಸಿಕೊಳ್ಳಬಲ್ಲೆ?

▪ ನಾನು ಹೇಳಿದಂತೆಯೇ ಆಗಬೇಕೆಂದು ಹಠಹಿಡಿದರೆ ಯಾವ ಸಮಸ್ಯೆಯನ್ನು ಉಂಟುಮಾಡುತ್ತೇನೆ?

[ಪಾದಟಿಪ್ಪಣಿ]

^ ಪ್ಯಾರ. 17 ಕೆಲವು ಹೆಸರುಗಳನ್ನು ಬದಲಿಸಲಾಗಿದೆ.