ಸೇವೆಗೆ ಸಿದ್ಧನಿದ್ದ ತಿಮೊಥೆಯ
ನಿಮ್ಮ ಮಕ್ಕಳಿಗೆ ಕಲಿಸಿರಿ
ಸೇವೆಗೆ ಸಿದ್ಧನಿದ್ದ ತಿಮೊಥೆಯ
“ನೀನು ಸಿದ್ಧನೋ?” ನಿಮಗೆ ಯಾರಾದರೂ ಹೀಗೆ ಕೇಳಿದ್ದುಂಟೋ?— ಪ್ರಶ್ನೆ ಕೇಳಿದವನು ನೀವು ತಯಾರಿದ್ದೀರೋ ಎಂದು ತಿಳಿಯಲು ಬಯಸಿದ್ದನು. ಉದಾಹರಣೆಗೆ, ‘ನಿನ್ನ ಶಾಲಾ ಪುಸ್ತಕಗಳೆಲ್ಲಾ ಇವೆಯೋ? ಪಾಠಗಳನ್ನೆಲ್ಲ ಓದಿ ಆಯ್ತಾ?’ ಎಂಬರ್ಥದಲ್ಲಿ ಆ ವ್ಯಕ್ತಿಯು ಹಾಗೆ ಕೇಳಿರಬಹುದು. ನಾವೀಗ ನೋಡಲಿರುವಂತೆ ತಿಮೊಥೆಯನೂ ಸಿದ್ಧನಿದ್ದನು.
ತಿಮೊಥೆಯನು ಸಿದ್ಧಮನಸ್ಕನೂ ಆಗಿದ್ದನು. ಅದರ ಅರ್ಥವೇನೆಂದು ನಿಮಗೆ ಗೊತ್ತೋ? ದೇವರ ಸೇವೆಗಾಗಿ ಕರೆಯಲ್ಪಟ್ಟಾಗ ಅವನ ಮನೋಭಾವವು, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದ ಇನ್ನೊಬ್ಬ ದೇವಭಕ್ತನ ಮನೋಭಾವದಂತಿತ್ತು. (ಯೆಶಾಯ 6:8) ಸೇವೆಗಾಗಿ ಯಾವಾಗಲೂ ಸಿದ್ಧನಾಗಿದ್ದದರಿಂದ ತಿಮೊಥೆಯನು ಒಂದು ಉತ್ತೇಜಕ ಜೀವನವನ್ನು ಆನಂದಿಸಿದನು. ಇದರ ಬಗ್ಗೆ ನೀವು ಕೇಳಿಸಿಕೊಳ್ಳಲು ಬಯಸುತ್ತೀರೋ?—
ಯೆರೂಸಲೇಮಿನಿಂದ ನೂರಾರು ಕಿಲೋ ಮೀಟರ್ ದೂರದಲ್ಲಿದ್ದ ಲುಸ್ತ್ರ ಎಂಬ ಸ್ಥಳದಲ್ಲಿ ತಿಮೊಥೆಯನು ಜನಿಸಿದನು. ಅವನ ಅಜ್ಜಿ ಲೋವಿ ಮತ್ತು ತಾಯಿ ಯೂನೀಕೆ ಶಾಸ್ತ್ರಗ್ರಂಥವನ್ನು ಚೆನ್ನಾಗಿ ಅಭ್ಯಾಸಿಸುತ್ತಿದ್ದರು. ತಿಮೊಥೆಯನು ಇನ್ನೂ ಕೂಸಾಗಿದ್ದಾಗಲೇ ಅವರು ಅವನಿಗೆ ದೇವರ ವಾಕ್ಯದ ಕುರಿತು ಕಲಿಸಲಾರಂಭಿಸಿದರು.—2 ತಿಮೊಥೆಯ 1:5; 3:15.
ತಿಮೊಥೆಯನು ಬಹುಶಃ ಇನ್ನೂ ಹದಿವಯಸ್ಕನಾಗಿದ್ದಾಗಲೇ ಅಪೊಸ್ತಲ ಪೌಲನು ತನ್ನ ಪ್ರಥಮ ಸುವಾರ್ತಾ ಸಂಚಾರದಲ್ಲಿ ಬಾರ್ನಬನೊಂದಿಗೆ ಲುಸ್ತ್ರಕ್ಕೆ ಬಂದನು. ಪ್ರಾಯಶಃ ಅದೇ ಸಮಯದಲ್ಲಿ ತಿಮೊಥೆಯನ ತಾಯಿ ಮತ್ತು ಅಜ್ಜಿ ಕ್ರೈಸ್ತರಾದರು. ಪೌಲ ಮತ್ತು ಬಾರ್ನಬರು ಎದುರಿಸಿದ ತೊಂದರೆಗಳ ಕುರಿತು ನೀವು ಕೇಳಬಯಸುತ್ತೀರೋ?—ಕ್ರೈಸ್ತರನ್ನು ಇಷ್ಟಪಡದ ಜನರು ಪೌಲನಿಗೆ ಕಲ್ಲೆಸೆದು, ನೆಲಕ್ಕುರುಳಿಸಿ ಊರ ಹೊರಕ್ಕೆ ಎಳೆದೊಯ್ದರು. ಅವನು ಸತ್ತನೆಂದು ಅವರು ಭಾವಿಸಿದರು.
ಪೌಲನ ಬೋಧನೆಗಳಲ್ಲಿ ನಂಬಿಕೆಯಿಟ್ಟ ಜನರು ವ್ಯಾಕುಲಗೊಂಡು ಅವನನ್ನು ಸುತ್ತುವರಿದಾಗ ಅವನು ಚೇತರಿಸಿಕೊಂಡು ಎದ್ದನು. ಮರುದಿನ ಪೌಲಬಾರ್ನಬರು ಅಲ್ಲಿಂದ ಹೊರಟರಾದರೂ ಕೊಂಚ ಸಮಯದಲ್ಲಿ ಅವರು ಪುನಃ ಲುಸ್ತ್ರಕ್ಕೆ ಹಿಂದಿರುಗಿದರು. ಆಗ ಪೌಲನು ಶಿಷ್ಯರಿಗೆ ಉಪದೇಶಿಸುತ್ತಾ “ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ” ಹೇಳಿದನು. (ಅ. ಕೃತ್ಯಗಳು 14:8-22) ಪೌಲನು ಹಾಗೆ ಹೇಳಿದ್ದರ ಅರ್ಥವೇನೆಂದು ನಿಮಗೆ ಗೊತ್ತೋ?—ಯಾರು ದೇವರ ಸೇವೆಮಾಡುತ್ತಾರೋ ಅವರಿಗೆ ಜನರು ತೊಂದರೆ ಕೊಡುತ್ತಾರೆಂದೇ ಅದರರ್ಥ. “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು” ಎಂದು ಪೌಲನು ಅನಂತರ ತಿಮೊಥೆಯನಿಗೂ ಬರೆದನು.—2 ತಿಮೊಥೆಯ 3:12; ಯೋಹಾನ 15:20.
ಲುಸ್ತ್ರದಿಂದ ಹೊರಟ ನಂತರ ಪೌಲಬಾರ್ನಬರು ಮನೆಗೆ ಹಿಂದಿರುಗಿದರು. ಕೆಲವು ತಿಂಗಳುಗಳ ನಂತರ ಪೌಲನು ಸೀಲನನ್ನು ತನ್ನೊಂದಿಗೆ ಕರೆದುಕೊಂಡು ತಾನು ಈ ಹಿಂದೆ ಸಂದರ್ಶಿಸಿದ ಸ್ಥಳಗಳಲ್ಲಿದ್ದ ಹೊಸ ಶಿಷ್ಯರನ್ನು ಪ್ರೋತ್ಸಾಹಿಸಲು ಹೋದನು. ಅವರಿಬ್ಬರು ಲುಸ್ತ್ರಕ್ಕೆ ಬಂದಾಗ ಪೌಲನನ್ನು ಇನ್ನೊಮ್ಮೆ ನೋಡಲು ತಿಮೊಥೆಯನು ಎಷ್ಟೊಂದು ಸಂತೋಷಪಟ್ಟಿದ್ದಿರಬೇಕು! ಪೌಲ ಸೀಲರೊಂದಿಗೆ ಸಂಚರಿಸಲು ಆಮಂತ್ರಿಸಲ್ಪಟ್ಟಾಗ ತಿಮೊಥೆಯನು ಇನ್ನಷ್ಟು ಹೆಚ್ಚು ಸಂತಸಪಟ್ಟನು. ಅವನು ಈ ಕರೆಯನ್ನು ಸ್ವೀಕರಿಸಿ ಒಡನೆಯೇ ಹೊರಡಲು ಸಿದ್ಧನಿದ್ದನು.—ಅ. ಕೃತ್ಯಗಳು 15:40-16:5.
ಈ ಮೂವರೂ ಅನೇಕ ಕಿಲೋ ಮೀಟರ್‌ಗಳಷ್ಟು ದೂರ ನಡೆಯುತ್ತಾ ಒಟ್ಟಿಗೆ ಪ್ರಯಾಣಿಸಿ ಅನಂತರ ಹಡಗನ್ನು ಹತ್ತಿದರು. ದಡ ಸೇರಿದ ಮೇಲೆ ಅವರು ಗ್ರೀಸ್‌ನ ಥೆಸಲೊನೀಕಕ್ಕೆ ಕಾಲ್ನಡೆಯಾಗಿ ಹೋದರು. ಇಲ್ಲಿ ಅನೇಕರು ಕ್ರೈಸ್ತರಾದರು. ಆದರೆ ಇತರರು ಸಿಟ್ಟುಗೊಂಡು ಗಲಭೆ ಎಬ್ಬಿಸಿದರು. ಪೌಲ, ಸೀಲ ಮತ್ತು ತಿಮೊಥೆಯರ ಜೀವಗಳು ಅಪಾಯಕ್ಕೆ ಒಳಗಾದವು. ಆದ್ದರಿಂದ ಅವರು ಬೆರೋಯಕ್ಕೆ ಹೊರಟುಹೋದರು.—ಅ. ಕೃತ್ಯಗಳು 17:1-10.
ಥೆಸಲೊನೀಕದಲ್ಲಿದ್ದ ಹೊಸ ವಿಶ್ವಾಸಿಗಳ ಕುರಿತು ಪೌಲನಿಗೆ ಚಿಂತೆಯಿತ್ತು. ಆದ್ದರಿಂದ ಅವನು ತಿಮೊಥೆಯನನ್ನು ಅಲ್ಲಿಗೆ ಹಿಂದೆ ಕಳುಹಿಸಿದನು. ಏಕೆಂದು ನಿಮಗೆ ಗೊತ್ತೋ?— ಪೌಲನು ತದನಂತರ ಥೆಸಲೊನೀಕದ ಕ್ರೈಸ್ತರಿಗೆ ತಿಳಿಸಿದಂತೆ ‘[ಅವರನ್ನು] ದೃಢಪಡಿಸುವದಕ್ಕೂ [ಅವರ] ನಂಬಿಕೆಯ ವೃದ್ಧಿಗಾಗಿ ಪ್ರಬೋಧಿಸುವದಕ್ಕೂ’ ಆಗಿತ್ತು. ತಿಮೊಥೆಯನು ಇನ್ನೂ ಚಿಕ್ಕ ಪ್ರಾಯದವನಾಗಿದ್ದರೂ ಅಂಥ ಅಪಾಯಕರ ನೇಮಕಕ್ಕೆ ಪೌಲನು ಅವನನ್ನು ಕಳುಹಿಸಿದ್ದೇಕೆ?— ವಿರೋಧಿಗಳಿಗೆ ತಿಮೊಥೆಯನ ಅಷ್ಟೊಂದು ಪರಿಚಯವಿರಲಿಲ್ಲ ನಿಜ, ಮತ್ತು ಮುಖ್ಯವಾಗಿ ಅವನು ಅಲ್ಲಿಗೆ ಹೋಗಲು ಸಿದ್ಧನಿದ್ದನು. ಇದನ್ನು ಮಾಡಲು ಅವನಿಗೆ ತುಂಬಾ ಧೈರ್ಯ ಬೇಕಿತ್ತು! ಅವನು ಅಲ್ಲಿ ಹೋದ ಪರಿಣಾಮವೇನಾಯಿತು? ಥೆಸಲೊನೀಕದವರ ನಂಬಿಗಸ್ತಿಕೆಯನ್ನು ತಿಮೊಥೆಯನು ಕಂಡುಕೊಂಡು ಅದನ್ನು ಪೌಲನಿಗೆ ತಿಳಿಸಿದನು. ಆದದರಿಂದ ಪೌಲನು ಅವರಿಗೆ ಬರೆದದ್ದು: “ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.”—1 ಥೆಸಲೊನೀಕ 3:2-7.
ಮುಂದಿನ ಹತ್ತು ವರ್ಷಗಳ ತನಕ ತಿಮೊಥೆಯನು ಪೌಲನೊಂದಿಗೆ ಸೇವೆಮಾಡಿದನು. ಪೌಲನು ರೋಮಿನಲ್ಲಿ ಸೆರೆಯಲ್ಲಿದ್ದಾಗ ಆಗಷ್ಟೇ ಸೆರೆಮನೆಯಿಂದ ಬಿಡಿಸಲ್ಪಟ್ಟ ತಿಮೊಥೆಯನು ಅವನೊಂದಿಗಿರಲು ಅಲ್ಲಿಗೆ ಹೋದನು. ಸೆರೆಯಲ್ಲಿದ್ದಾಗಲೇ ಪೌಲನು ಪ್ರಾಯಶಃ ತಿಮೊಥೆಯನ ಮೂಲಕ ಫಿಲಿಪ್ಪಿಯವರಿಗೆ ಪತ್ರ ಬರೆದನು. ಪೌಲನು ಹೇಳಿದ್ದು: ‘ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ನಿರೀಕ್ಷಿಸುತ್ತೇನೆ. ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.’—ಫಿಲಿಪ್ಪಿ 2:19-22; ಇಬ್ರಿಯ 13:23.
ಆ ಮಾತುಗಳು ತಿಮೊಥೆಯನನ್ನು ಎಷ್ಟು ಸಂತೋಷಪಡಿಸಿದ್ದಿರಬೇಕು! ಪೌಲನು ತಿಮೊಥೆಯನನ್ನು ಬಹಳವಾಗಿ ಪ್ರೀತಿಸಿದನು. ಏಕೆಂದರೆ ಅವನು ಸೇವೆಮಾಡಲು ಸಿದ್ಧನಾಗಿದ್ದನು. ನೀವೂ ಸಿದ್ಧರಿರುವಿರೆಂದು ನಾವು ನಂಬುತ್ತೇವೆ. (w08 4/1)
ಪ್ರಶ್ನೆಗಳು:
❍ ತಿಮೊಥೆಯನು ಹುಟ್ಟಿ ಬೆಳೆದದ್ದು ಎಲ್ಲಿ, ಪೌಲನು ಪ್ರಥಮ ಬಾರಿ ಅಲ್ಲಿ ಹೋದಾಗ ಏನು ಸಂಭವಿಸಿತು?
❍ ಪೌಲ ಸೀಲರೊಂದಿಗೆ ಸಂಚರಿಸಲು ಆಮಂತ್ರಿಸಲ್ಪಟ್ಟಾಗ ತಿಮೊಥೆಯನು ಏನು ಮಾಡಿದನು?
❍ ತಿಮೊಥೆಯನು ಧೈರ್ಯ ತೋರಿಸಿದ್ದು ಹೇಗೆ, ಪೌಲನು ಅವನನ್ನು ಬಹಳವಾಗಿ ಪ್ರೀತಿಸಿದ್ದೇಕೆ?
[ಪುಟ 18ರಲ್ಲಿರುವ ಚಿತ್ರ]
ಏನು ಸಂಭವಿಸಿತು?