ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಇಗೋ, ಯೆಹೋವನ ದಾಸಿ!”

“ಇಗೋ, ಯೆಹೋವನ ದಾಸಿ!”

ಅವರ ನಂಬಿಕೆಯನ್ನು ಅನುಕರಿಸಿರಿ

“ಇಗೋ, ಯೆಹೋವನ ದಾಸಿ!”

ಸಂದರ್ಶಕನು ಮರಿಯಳ ಮನೆಯೊಳಗೆ ಬಂದಾಗ ಆಕೆ ಆಶ್ಚರ್ಯಚಕಿತಳಾಗಿ ಎವೆಯಿಕ್ಕದೆ ನೊಡುತ್ತಾ ನಿಂತಳು. ಅವಳ ತಂದೆತಾಯಿಯ ಕುರಿತು ಅವನು ವಿಚಾರಿಸಲಿಲ್ಲ. ಅವನು ಬಂದದ್ದು ಆಕೆಯನ್ನು ನೋಡಲಿಕ್ಕಾಗಿಯೇ! ಅವನು ನಜರೇತಿನವನಲ್ಲ ಎಂಬ ವಿಷಯದಲ್ಲಿ ಅವಳಿಗೆ ಖಾತ್ರಿಯಿತ್ತು. ಯಾಕೆಂದರೆ ಅವಳ ಈ ಚಿಕ್ಕ ಊರಲ್ಲಿ ಅಪರಿಚಿತರನ್ನು ಕೂಡಲೆ ಗುರುತಿಸಬಹುದಿತ್ತು. ಇವನನ್ನಾದರೊ ಗುರುತಿಸುವುದು ಬಹು ಸುಲಭ. ಅವನು ಮರಿಯಳನ್ನು ತೀರಾ ಹೊಸ ರೀತಿಯಲ್ಲಿ ಸಂಬೋಧಿಸುತ್ತಾ, “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು [ಯೆಹೋವನು] ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನು.—ಲೂಕ 1:28.

ಈ ವಿಧದಲ್ಲಿ ಬೈಬಲ್‌ ಗಲಿಲಾಯದ ನಜರೇತ್‌ ಎಂಬ ಊರಿನ ಹೇಲಿಯ ಮಗಳಾದ ಮರಿಯಳ ಕುರಿತು ನಮಗೆ ತಿಳಿಸುತ್ತದೆ. ಆಕೆ ತನ್ನ ಜೀವನದಲ್ಲಿ ಮಹತ್ವದ ನಿರ್ಣಯಗಳನ್ನು ಮಾಡಬೇಕಾಗಿದ್ದ ಸಮಯದಲ್ಲಿ ಬೈಬಲ್‌ ನಮಗೆ ಆಕೆಯನ್ನು ಪರಿಚಯಪಡಿಸುತ್ತದೆ. ಧನಿಕನಲ್ಲದಿದ್ದರೂ ದೇವರಿಗೆ ನಂಬಿಗಸ್ತನಾಗಿದ್ದ ಬಡಗಿ ಯೋಸೇಫನೊಂದಿಗೆ ಆಕೆಯ ವಿವಾಹ ನಿಶ್ಚಯವಾಗಿತ್ತು. ಹೀಗೆ ಆಕೆಯ ಜೀವನವು ಸರಿಯಾಗಿ ಯೋಜಿಸಲ್ಪಟ್ಟಿದ್ದಂತೆ ಕಂಡುಬಂತು. ಅಂದರೆ ಆಕೆ ಯೋಸೇಫನ ಹೆಂಡತಿಯಾಗಿ ಸಹಕರಿಸುತ್ತಾ ಮಕ್ಕಳನ್ನು ಬೆಳೆಸಿ ಅವನೊಂದಿಗೆ ಸರಳ ಜೀವನವನ್ನು ನಡೆಸುವುದಾಗಿತ್ತು. ಆದರೆ ಹಠಾತ್ತಾಗಿ, ಈ ಸಂದರ್ಶಕನು ಅವಳನ್ನು ಭೇಟಿಯಾಗಿ ದೇವರಿಂದ ಬಂದ ಒಂದು ಜವಾಬ್ದಾರಿಯುತ ನೇಮಕವನ್ನು ಕೊಟ್ಟನು. ಇದು ಆಕೆಯ ಜೀವನವನ್ನೇ ಮಾರ್ಪಡಿಸಲಿತ್ತು.

ಬೈಬಲ್‌ ಮರಿಯಳ ಕುರಿತು ಹೆಚ್ಚು ಮಾಹಿತಿಯನ್ನು ಕೊಡದಿರುವುದು ನಿಮಗೆ ಆಶ್ಚರ್ಯವನ್ನುಂಟುಮಾಡೀತು. ಆಕೆಯ ಹಿನ್ನೆಲೆಯ ಬಗ್ಗೆ ಅದು ಕೊಂಚವೇ ತಿಳಿಸುತ್ತದೆ, ವ್ಯಕ್ತಿತ್ವದ ಬಗ್ಗೆ ಇನ್ನೂ ಕಡಿಮೆ, ತೋರಿಕೆಯ ವಿಷಯದಲ್ಲಾದರೋ ಏನೂ ತಿಳಿಸುವುದಿಲ್ಲ. ಆದರೂ, ದೇವರ ವಾಕ್ಯ ಆಕೆಯ ವಿಷಯವಾಗಿ ಏನನ್ನು ಹೇಳುತ್ತದೋ ಅದು ಮಹತ್ವದ್ದೆಂಬುದು ಖಂಡಿತ.

ಮರಿಯಳ ಪರಿಚಯ ಮಾಡಿಕೊಳ್ಳಬೇಕಾದರೆ ನಾವು ವಿವಿಧ ಧರ್ಮಗಳು ಆಕೆಯ ಕುರಿತು ಕಲಿಸಿರುವ ತಪ್ಪುಕಲ್ಪನೆಗಳನ್ನು ತೊರೆದುಬಿಡುವ ಅಗತ್ಯವಿದೆ. ಆದಕಾರಣ ಬಣ್ಣ, ಶಿಲೆ ಅಥವಾ ಪ್ಲಾಸ್ಟರ್‌ನಿಂದ ಮಾಡಿರುವ ಆಕೆಯ ಚಿತ್ರ ಮತ್ತು ಮೂರ್ತಿಗಳ ಕುರಿತು ನಾವೀಗ ಚರ್ಚಿಸದಿರೋಣ. ಅದೇ ಪ್ರಕಾರ, ಅಷ್ಟೊಂದು ದೀನ ಮಹಿಳೆಗೆ “ದೇವಮಾತೆ,” “ದಿವ್ಯರಾಣಿ” ಎಂಬ ಉನ್ನತ ಬಿರುದುಗಳನ್ನು ಕೊಡುವ ಜಟಿಲ ದೇವತಾಶಾಸ್ತ್ರ ಮತ್ತು ಸಿದ್ಧಾಂತವನ್ನೂ ಬದಿಗಿಡೋಣ. ಬದಲಾಗಿ, ಬೈಬಲು ಆಕೆಯ ಕುರಿತು ನಿಜವಾಗಿಯೂ ತಿಳಿಸುವ ವಿಷಯಗಳಿಗೆ ನಮ್ಮ ಗಮನ ಕೊಡೋಣ. ಅದು ನಮಗೆ ಆಕೆಯ ನಂಬಿಕೆಯ ವಿಷಯದಲ್ಲಿ ಅಮೂಲ್ಯ ಒಳನೋಟವನ್ನು ಹಾಗೂ ಆಕೆಯನ್ನು ಹೇಗೆ ಅನುಕರಿಸಬಲ್ಲೆವೆಂಬುದನ್ನು ತೋರಿಸುತ್ತದೆ.

ದೇವದೂತನ ಭೇಟಿ

ಮರಿಯಳನ್ನು ಭೇಟಿಯಾದ ಆ ಸಂದರ್ಶಕನು ಬರಿಯ ಮನುಷ್ಯನಾಗಿರಲಿಲ್ಲ ಎಂಬುದು ನಿಮಗೆ ತಿಳಿದಿರಬಹುದು. ಅವನು ಗಬ್ರಿಯೇಲ ದೂತನಾಗಿದ್ದನು. ಅವನು ಮರಿಯಳನ್ನು, “ದೇವರ ದಯೆ ಹೊಂದಿದವಳೇ,” ಎಂದು ಸಂಬೋಧಿಸಿದಾಗ, ಆಕೆ ಆ ಮಾತಿಗೆ ‘ತತ್ತರಿಸಿದಳು’ ಮತ್ತು ಆ ಅಸಾಮಾನ್ಯ ಅಭಿವಂದನೆಯ ವಿಷಯ ಯೋಚಿಸತೊಡಗಿದಳು. (ಲೂಕ 1:29) ದೇವದೂತನು ಯೆಹೋವ ದೇವರ ದಯೆಯ ಬಗ್ಗೆ ಮಾತಾಡುತ್ತಿದ್ದನು. ಅದು ಆಕೆಗೆ ಪ್ರಾಮುಖ್ಯವಾಗಿತ್ತು. ಹೀಗಿದ್ದರೂ, ತನಗೆ ದೇವರ ದಯೆಯಿದೆಯೆಂದು ಭಾವಿಸಿ ಆಕೆ ಹೆಮ್ಮೆಯಿಂದ ವರ್ತಿಸಲಿಲ್ಲ. ನಾವು ದೇವರ ದಯೆಯನ್ನು ಪಡೆಯಲು ಪ್ರಯತ್ನಿಸುತ್ತಿರುವಲ್ಲಿ, ನಮಗೆ ಅದು ಈಗಾಗಲೇ ದೊರೆತಿದೆಯೋ ಎಂಬಂತೆ ಅಹಂಕಾರದಿಂದ ವರ್ತಿಸದಿರೋಣ. ಹೀಗೆ ಮಾಡಿದರೆ, ತರುಣಿ ಮರಿಯಳು ಪೂರ್ತಿಯಾಗಿ ಗ್ರಹಿಸಿದ ಮಹತ್ತ್ವದ ಪಾಠವನ್ನು ನಾವು ಸಹ ಕಲಿಯುವೆವು. ದೇವರು ಆಹಂಕಾರಿಗಳನ್ನು ವಿರೋಧಿಸಿ, ನಮ್ರರೂ ದೀನರೂ ಆಗಿರುವವರನ್ನು ಪ್ರೀತಿಸಿ ಬೆಂಬಲಿಸುತ್ತಾನೆ.—ಯಾಕೋಬ 4:6.

ಇಂಥ ದೈನ್ಯಭಾವ ಮರಿಯಳಿಗೆ ಅಗತ್ಯವಾಗಿತ್ತು ಏಕೆಂದರೆ ದೇವದೂತನು ಆಕೆಗೆ ಬಹುಮಟ್ಟಿಗೆ ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದ್ದ ಸದವಕಾಶವನ್ನು ನೀಡಿದ್ದನು. ಸಕಲ ಮಾನವರಲ್ಲಿ ಅತ್ಯಂತ ಪ್ರಮುಖನಾಗಲಿರುವ ಒಂದು ಮಗುವನ್ನು ಆಕೆ ಹೆರುವಳೆಂದು ಅವನು ಹೇಳಿದನು. ಗಬ್ರಿಯೇಲನು ಹೇಳಿದ್ದು: “ಇದಲ್ಲದೆ ದೇವರಾಗಿರುವ ಕರ್ತನು [ಯೆಹೋವನು] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ದಾವೀದನ ವಂಶದವರಲ್ಲಿ ಒಬ್ಬನು ಸದಾಕಾಲ ಆಳುವನು ಎಂಬ ದೇವರ ವಾಗ್ದಾನವು ಮರಿಯಳಿಗೆ ಖಂಡಿತ ತಿಳಿದಿತ್ತು. ದೇವರು ಆ ವಾಗ್ದಾನವನ್ನು ಒಂದು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ದಾವೀದನಿಗೆ ಕೊಟ್ಟಿದ್ದನು. (2 ಸಮುವೇಲ 7:12, 13) ಹೀಗೆ ಆಕೆಯ ಮಗನು, ದೇವಜನರು ಶತಮಾನಗಳಿಂದಲೂ ಕಾಯುತ್ತಿದ್ದ ಮೆಸ್ಸೀಯನಾಗಲಿದ್ದನು!

ಅಷ್ಟೇಕೆ, ಅವಳ ಮಗನು “ಪರಾತ್ಪರನ ಕುಮಾರನು” ಎಂದು ಕರೆಯಲ್ಪಡುವನೆಂದು ದೇವದೂತನು ಅವಳಿಗೆ ಹೇಳಿದನು. ಆದರೆ ಮಾನವರಲ್ಲಿ ಒಬ್ಬಾಕೆ ಸ್ತ್ರೀ ದೇವಕುಮಾರನನ್ನು ಹೆರುವುದಾದರೂ ಹೇಗೆ? ಮರಿಯಳು ಆ ರೀತಿಯಲ್ಲಿ ಮಗನನ್ನು ಹೆರುವದು ನಿಜವಾಗಿಯೂ ಹೇಗೆ ಸಾಧ್ಯ? ಯೋಸೇಫನೊಂದಿಗೆ ಆಕೆಗೆ ನಿಶ್ಚಿತಾರ್ಥವಾಗಿದ್ದರೂ ಅವರಿನ್ನೂ ಮದುವೆಯಾಗಿರಲಿಲ್ಲ. ಆದುದರಿಂದ ಆಕೆ ಮುಚ್ಚುಮರೆಯಿಲ್ಲದೆ ಕೇಳಿದ್ದು: “ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ.” (ಲೂಕ 1:34) ಮರಿಯಳು ತನ್ನ ಕನ್ಯಾವಸ್ಥೆಯನ್ನು ಯಾವುದೇ ರೀತಿಯಲ್ಲಿ ನಾಚಿಕೆಪಡದೆ ತಿಳಿಸಿದ್ದನ್ನು ಗಮನಿಸಿರಿ. ಆಕೆ ತನ್ನ ಕನ್ಯಾವಸ್ಥೆಯನ್ನು ಅತ್ಯಮೂಲ್ಯವೆಂದು ಭಾವಿಸಿದಳು. ಇಂದು ಅನೇಕ ಯುವಜನರು ತಮ್ಮ ಕನ್ಯಾವಸ್ಥೆಯನ್ನು ಕಳೆದುಕೊಳ್ಳಲು ಕಟ್ಟಾಸೆಪಡುತ್ತಾರೆ ಮಾತ್ರವಲ್ಲ ಹಾಗೆ ಮಾಡದಿರುವವರನ್ನು ಹಾಸ್ಯಕ್ಕೂ ಗುರಿಪಡಿಸುತ್ತಾರೆ. ಈ ಲೋಕವು ಖಂಡಿತವಾಗಿಯೂ ಬದಲಾಗಿದೆ, ಆದರೆ ದೇವರಾದ ಯೆಹೋವನು ಮಾರ್ಪಟ್ಟಿಲ್ಲ. (ಮಲಾಕಿಯ 3:6) ಮರಿಯಳ ದಿನಗಳಲ್ಲಿದ್ದಂತೆ, ತನ್ನ ನೈತಿಕ ಮಟ್ಟಗಳನ್ನು ಪಾಲಿಸುವ ಜನರನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ.—ಇಬ್ರಿಯ 13:4

ಮರಿಯಳು ದೇವರ ನಂಬಿಗಸ್ತ ಸೇವಕಿಯಾಗಿದ್ದರೂ ಅಪರಿಪೂರ್ಣಳಾಗಿದ್ದಳು. ಹಾಗಿರುವಾಗ ಆಕೆ ದೇವಕುಮಾರನಂಥ ಪರಿಪೂರ್ಣ ಸಂತಾನವನ್ನು ಹೇಗೆ ತಾನೇ ಹೆತ್ತಾಳು? ಗಬ್ರಿಯೇಲನು ಅದನ್ನು ವಿವರಿಸಿದನು: “ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.” (ಲೂಕ 1:35) ಪವಿತ್ರ ಅಂದರೆ “ಶುದ್ಧ,” “ನಿರ್ಮಲ,” “ಪರಿಶುದ್ಧ.” ಸಾಮಾನ್ಯವಾಗಿ, ಹೆತ್ತವರಲ್ಲಿರುವ ಅಪರಿಪೂರ್ಣತೆಯು ಮಕ್ಕಳಿಗೆ ದಾಟಿಸಲ್ಪಡುತ್ತದೆ. ಆದರೆ ಈ ಸಂದರ್ಭದಲ್ಲಿಯಾದರೋ ಯೆಹೋವನು ಒಂದು ಅದ್ವಿತೀಯ ಪವಾಡವನ್ನು ತೋರಿಸಲಿದ್ದನು. ಮೊದಲಾಗಿ ಆತನು ತನ್ನ ಮಗನ ಜೀವವನ್ನು ಸ್ವರ್ಗದಿಂದ ಮರಿಯಳ ಗರ್ಭಕ್ಕೆ ಸ್ಥಾನಾಂತರಿಸುವನು. ಆ ಬಳಿಕ ತನ್ನ ಕಾರ್ಯಕಾರಿ ಶಕ್ತಿ ಇಲ್ಲವೆ ಪವಿತ್ರಾತ್ಮವು ಮರಿಯಳನ್ನು ‘ನೆರಳಿನ’ ಹಾಗೆ ಆವರಿಸುವಂತೆ ಮಾಡುವನು. ಹೀಗೆ ಆ ಮಗು ಪಾಪದ ಯಾವುದೇ ಸೋಂಕಿನಿಂದ ಸುರಕ್ಷಿತವಾಗಿ ಇಡಲ್ಪಡುವುದು. ದೇವದೂತನ ಆ ಮಾತುಗಳನ್ನು ಮರಿಯಳು ನಂಬಿದಳೊ? ಆಕೆಯ ಪ್ರತಿವರ್ತನೆ ಏನಾಗಿತ್ತು?

ಗಬ್ರಿಯೇಲನಿಗೆ ಮರಿಯಳು ಕೊಟ್ಟ ಉತ್ತರ

ಒಬ್ಬಾಕೆ ಕನ್ಯೆಯು ಮಗುವನ್ನು ಹೆರುವ ವಿಷಯವನ್ನು ನಂಬುವುದಕ್ಕೆ ಸಂದೇಹವಾದಿಗಳಿಗೆ ಹಾಗೂ ಕ್ರೈಸ್ತಪ್ರಪಂಚದ ಕೆಲವು ದೇವತಾಶಾಸ್ತ್ರಜ್ಞರಿಗೂ ಕಷ್ಟವಾಗುತ್ತದೆ. ಅವರು ಎಷ್ಟೇ ವಿದ್ಯಾವಂತರಾಗಿದ್ದರೂ ಒಂದು ಸರಳ ಸತ್ಯವನ್ನು ಗ್ರಹಿಸಲು ಮಾತ್ರ ತಪ್ಪುತ್ತಾರೆ. ಅದೇನು? ಗಬ್ರಿಯೇಲನು ಹೇಳಿದ್ದು: “ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವುದಿಲ್ಲ.” (ಲೂಕ 1:37) ಮರಿಯಳು ಗಬ್ರಿಯೇಲನ ಮಾತುಗಳನ್ನು ಸತ್ಯವೆಂದು ನಂಬಿದಳು ಯಾಕೆಂದರೆ ಆಕೆ ಮಹಾ ನಂಬಿಕೆಯುಳ್ಳ ತರುಣಿಯಾಗಿದ್ದಳು. ಆದರೆ ಏನು ಹೇಳಿದರೂ ನಂಬಿಬಿಡುವ ಕುರುಡು ನಂಬಿಕೆ ಅದಾಗಿರಲಿಲ್ಲ. ವಿವೇಚನಾಶಕ್ತಿಯುಳ್ಳ ಯಾವನೇ ವ್ಯಕ್ತಿ ಮಾಡುವಂತೆ, ಮರಿಯಳಿಗೆ ತನ್ನ ನಂಬಿಕೆಗೆ ಆಧಾರವಾಗಿ ಏನಾದರೂ ರುಜುವಾತಿನ ಅಗತ್ಯವಿತ್ತು. ಆಕೆಗೆ ಈ ಮೊದಲೇ ಸತ್ಯವೆಂದು ತಿಳಿದಿದ್ದ ಒಂದು ವಿಷಯಕ್ಕೆ ಹೆಚ್ಚಿನ ಪುರಾವೆಯನ್ನು ಕೂಡಿಸಲು ಗಬ್ರಿಯೇಲನು ಸಿದ್ಧನಾಗಿದ್ದನು. ಅವಳ ಸಂಬಂಧಿಕಳಾಗಿದ್ದ ವೃದ್ಧೆ ಎಲಿಸಬೇತಳ ಕುರಿತು ಅವನು ತಿಳಿಸಿದನು. ಎಲಿಸಬೇತಳು ದೀರ್ಘಕಾಲ ಬಂಜೆಯಾಗಿದ್ದದ್ದು ಎಲ್ಲರಿಗೂ ತಿಳಿದಿತ್ತು. ದೇವರು ಅವಳನ್ನು ಅದ್ಭುತಕರವಾಗಿ ಗರ್ಭವತಿಯಾಗುವಂತೆ ಮಾಡಿದ್ದನು!

ಈಗ ಮರಿಯ ಏನು ಮಾಡುವಳು? ಆಕೆಗೆ ಕೊಡಲ್ಪಟ್ಟಿದ್ದ ನೇಮಕವು ಅವಳ ಮುಂದಿತ್ತು ಮತ್ತು ಗಬ್ರಿಯೇಲನು ಹೇಳಿದ ಎಲ್ಲ ವಿಷಯಗಳನ್ನು ದೇವರು ನಿಜವಾಗಿ ಮಾಡುವನೆಂಬ ರುಜುವಾತು ಆಕೆಗಿತ್ತು. ಈ ಸದವಕಾಶ ಆಕೆಗೆ ಯಾವ ರೀತಿಯ ಭಯವನ್ನೂ ಪೇಚಾಟವನ್ನೂ ತರಲಿಲ್ಲವೆಂದು ನಾವು ಭಾವಿಸಬಾರದು. ಏಕೆಂದರೆ, ಒಂದನೆಯದಾಗಿ, ಯೋಸೇಫನೊಂದಿಗೆ ಆಗಿದ್ದ ನಿಶ್ಚಿತಾರ್ಥದ ಬಗ್ಗೆ ಅವಳಿಗೆ ಯೋಚಿಸಲಿಕ್ಕಿತ್ತು. ಅವಳು ಗರ್ಭಿಣಿಯೆಂದು ಅವನಿಗೆ ತಿಳಿದು ಬಂದಾಗ ಅವನು ಆಕೆಯನ್ನು ಮದುವೆಯಾದಾನೇ? ಎರಡನೆಯದಾಗಿ, ಆಕೆಗೆ ದೊರೆತಿದ್ದ ನೇಮಕವು ತಾನೇ ಗಂಭೀರ ಜವಾಬ್ದಾರಿಯಾಗಿತ್ತು. ಯಾಕೆಂದರೆ ದೇವರ ಎಲ್ಲ ಸೃಷ್ಟಿಜೀವಿಗಳಲ್ಲಿ ಅತ್ಯಮೂಲ್ಯ ಜೀವವನ್ನು, ದೇವರ ಅತಿಪ್ರಿಯ ಕುಮಾರನ ಜೀವವನ್ನೇ ಆಕೆ ಗರ್ಭದಲ್ಲಿ ಹೊರಬೇಕಾಗಿತ್ತು! ಅವನು ಅಸಹಾಯಕ ಶಿಶುವಾಗಿರುವಾಗ ಅವನನ್ನು ಪರಾಮರಿಸಿ, ದುಷ್ಟಲೋಕದಲ್ಲಿ ಅವನನ್ನು ಸಂರಕ್ಷಿಸಬೇಕಾಗಿತ್ತು. ಇದು ಮಹತ್ವಪೂರ್ಣ ಜವಾಬ್ದಾರಿಯೇ ಸರಿ!

ಬಲಾಢ್ಯರೂ ನಂಬಿಗಸ್ತರೂ ಆಗಿದ್ದ ಮನುಷ್ಯರು ಸಹ ದೇವರಿಂದ ಬಂದ ಕಷ್ಟಕರ ನೇಮಕಗಳನ್ನು ಸ್ವೀಕರಿಸಲು ಕೆಲವು ಸಲ ಹಿಂಜರಿದಿದ್ದಾರೆಂದು ಬೈಬಲ್‌ ತೋರಿಸುತ್ತದೆ. ದೇವರ ವದನಕನಾಗಿ ಕೆಲಸಮಾಡಲು ತನ್ನಲ್ಲಿ ಸಾಕಷ್ಟು ವಾಕ್ಚಾತುರ್ಯವಿಲ್ಲವೆಂದು ಮೋಶೆ ಆಕ್ಷೇಪವನ್ನೆತ್ತಿದನು. (ವಿಮೋಚನಕಾಂಡ 4:10) ತಾನು ಕೇವಲ “ಬಾಲಕನು,” ದೇವರು ನೇಮಿಸಿದ ಕೆಲಸವನ್ನು ಪೂರೈಸಲು ತೀರಾ ಚಿಕ್ಕವನು ಎಂಬುದು ಯೆರೆಮೀಯನ ಆಕ್ಷೇಪವಾಗಿತ್ತು. (ಯೆರೆಮೀಯ 1:6) ಯೋನನಾದರೋ ತನಗೆ ಕೊಡಲ್ಪಟ್ಟ ನೇಮಕವನ್ನೇ ಬಿಟ್ಟು ಓಡಿಹೋದನು! (ಯೋನ 1:3) ಆದರೆ ಮರಿಯಳ ಪ್ರತಿಕ್ರಿಯೆ ಏನು?

ಅವಳ ಮಾತುಗಳು ಸಾಚಾ ದೀನತೆ ಮತ್ತು ವಿಧೇಯತೆಯನ್ನು ಶತಮಾನಗಳಿಂದಲೂ ಮಾರ್ದನಿಸುತ್ತವೆ. ಆಕೆ ಗಬ್ರಿಯೇಲನಿಗೆ ಹೇಳಿದ್ದು: “ಇಗೋ, ನಾನು ಕರ್ತನ [ಯೆಹೋವನ] ದಾಸಿ; ನಿನ್ನ ಮಾತಿನಂತೆ ನನಗಾಗಲಿ.” (ಲೂಕ 1:38) ದಾಸಿಯು ಸೇವಕಿಯರಲ್ಲಿ ಅತಿ ಕೆಳಗಿನವಳು. ಆಕೆಯ ಜೀವ ಪೂರ್ಣವಾಗಿ ಅವಳ ಯಜಮಾನನ ಕೈಯಲ್ಲಿತ್ತು. ತನ್ನ ಯಜಮಾನ ಯೆಹೋವ ದೇವರ ಬಗ್ಗೆ ಮರಿಯಳಿಗೂ ಅದೇ ಮನೋಭಾವವಿತ್ತು. ಆತನ ಹಸ್ತದಲ್ಲಿ ತಾನು ಸುಭದ್ರಳೆಂದೂ ನಿಷ್ಠಾವಂತರಿಗೆ ಆತನು ನಿಷ್ಠೆಯನ್ನು ತೋರಿಸುತ್ತಾನೆಂದೂ ಈ ಕಷ್ಟದ ನೇಮಕವನ್ನು ತಾನು ಉತ್ತಮವಾಗಿ ನಿಭಾಯಿಸುವಲ್ಲಿ ಆತನು ತನ್ನನ್ನು ಆಶೀರ್ವದಿಸುವನೆಂದೂ ಆಕೆಗೆ ಗೊತ್ತಿತ್ತು.—ಕೀರ್ತನೆ 18:25.

ನಮಗೆ ಕಷ್ಟವೆಂದು ತೋರುವ, ಅಸಾಧ್ಯವಾಗಿಯೂ ಕಾಣುವ ಕೆಲಸವನ್ನು ಮಾಡುವಂತೆ ಕೆಲವೊಮ್ಮೆ ದೇವರು ನಮ್ಮಿಂದ ಕೇಳಿಕೊಳ್ಳುತ್ತಾನೆ. ಮರಿಯಳು ಮಾಡಿದಂತೆ ಆತನಲ್ಲಿ ಭರವಸೆಯಿಟ್ಟು ಆತನ ಕೈಯಲ್ಲಿ ನಮ್ಮನ್ನು ಒಪ್ಪಿಸಿಕೊಡುವಂತೆ, ತನ್ನ ವಾಕ್ಯದಲ್ಲಿ ಹೇರಳ ಕಾರಣಗಳನ್ನು ಸಹ ಆಧಾರವಾಗಿ ಕೊಡುತ್ತಾನೆ. (ಜ್ಞಾನೋಕ್ತಿ 3:5, 6) ಮರಿಯಳಂತೆ ನಾವೂ ಅದನ್ನು ಮಾಡುವೆವೊ? ಹಾಗೆ ಮಾಡುವಲ್ಲಿ, ಆತನಲ್ಲಿ ನಮ್ಮ ನಂಬಿಕೆಯನ್ನು ಇನ್ನೂ ದೃಢಪಡಿಸಲು ಬೇಕಾದ ಕಾರಣಗಳನ್ನು ಕೊಡುತ್ತ ಯೆಹೋವನು ನಮಗೆ ಪ್ರತಿಫಲ ನೀಡುವನು.

ಎಲಿಸಬೇತಳೊಂದಿಗೆ ಭೇಟಿ

ಎಲಿಸಬೇತಳ ಕುರಿತು ಗಬ್ರಿಯೇಲನು ಹೇಳಿದ ಮಾತು ಮರಿಯಳಿಗೆ ಮಹತ್ತ್ವದ ಅರ್ಥದಲ್ಲಿತ್ತು. ಅವಳಲ್ಲದೆ ಲೋಕದ ಇನ್ನಾವ ಮಹಿಳೆ ಎಲಿಸಬೇತಳ ಸನ್ನಿವೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡಾಳು? ಮರಿಯಳು ಧಾವಿಸುತ್ತ ಸುಮಾರು ಮೂರೋ ನಾಲ್ಕೋ ದಿನ ಪಯಣಿಸಿ ಯೆಹೂದದ ಆ ಪರ್ವತ ಪ್ರದೇಶಕ್ಕೆ ಹೋದಳು. ಎಲಿಸಬೇತ್‌ ಮತ್ತು ಜಕರೀಯನ ಮನೆಗೆ ಕಾಲಿಟ್ಟೊಡನೆ ಆಕೆಯ ನಂಬಿಕೆಯನ್ನು ಬಲಪಡಿಸಲು ಯೆಹೋವನು ದೃಢವಾದ ರುಜುವಾತನ್ನು ಕೊಟ್ಟನು. ಮರಿಯಳ ಅಭಿವಂದನೆಯನ್ನು ಎಲಿಸಬೇತಳು ಕೇಳಿದೊಡನೆ ಆಕೆಯ ಗರ್ಭದಲ್ಲಿದ್ದ ಶಿಶು ಹರ್ಷದಿಂದ ಜಿಗಿಯಿತು. ಆಕೆ ಪವಿತ್ರಾತ್ಮಭರಿತಳಾಗಿ ಮರಿಯಳನ್ನು ತನ್ನ “ಸ್ವಾಮಿಯ ತಾಯಿ” ಎಂದು ಸಂಬೋಧಿಸಿದಳು. ಮರಿಯಳ ಮಗನು ಎಲಿಸಬೇತಳ ಸ್ವಾಮಿ, ಮೆಸ್ಸೀಯನಾಗುವನೆಂದು ದೇವರು ಆಕೆಗೆ ಪ್ರಕಟಪಡಿಸಿದನು. ಅದಲ್ಲದೆ, ಮರಿಯಳ ನಂಬಿಗಸ್ತಿಕೆಯ ವಿಧೇಯತೆಗಾಗಿ ಆಕೆಯನ್ನು ಶ್ಲಾಘಿಸುವಂತೆ ಎಲಿಸಬೇತಳು ಪ್ರೇರಿಸಲ್ಪಟ್ಟವಳಾಗಿ “ನಂಬಿದವಳಾದ ನೀನು ಧನ್ಯಳೇ” ಎಂದು ಹರಸಿದಳು. (ಲೂಕ 1:39-45) ಹೌದು, ಮರಿಯಳಿಗೆ ಯೆಹೋವನು ಏನೆಲ್ಲಾ ವಾಗ್ದಾನಿಸಿದ್ದನೊ ಅವೆಲ್ಲವು ನೆರವೇರುವವು!

ಆಗ ಮರಿಯಳು ಹೇಳಿದ ಮಾತುಗಳು ಬೈಬಲಿನ ಪುಸ್ತಕವಾದ ಲೂಕ 1:46-55ರಲ್ಲಿ ಜೋಪಾನವಾಗಿ ಇಡಲ್ಪಟ್ಟಿವೆ. ಬೈಬಲ್‌ ದಾಖಲೆಯಲ್ಲಿ ಮರಿಯಳು ಹೇಳಿದ ಮಾತುಗಳಲ್ಲಿ ಅದು ಅತಿ ಉದ್ದದ ಹೇಳಿಕೆ. ಅದು ಆಕೆಯ ವಿಷಯದಲ್ಲಿ ಹೆಚ್ಚನ್ನು ಪ್ರಕಟಪಡಿಸುತ್ತದೆ. ಮೆಸ್ಸೀಯನ ತಾಯಿಯಾಗಿ ಸೇವೆಮಾಡುವ ಸುಯೋಗಕ್ಕಾಗಿ ಯೆಹೋವನನ್ನು ಆಕೆ ಸ್ತುತಿಸಿದ್ದು, ಅವಳಲ್ಲಿದ್ದ ಕೃತಜ್ಞತೆ ಮತ್ತು ಗಣ್ಯತೆಯ ಮನೋಭಾವವನ್ನು ತೋರಿಸುತ್ತದೆ. ಯೆಹೋವನು ಅಹಂಕಾರಿಗಳನ್ನೂ ಬಲಾಢ್ಯರನ್ನೂ ಹೀನಸ್ಥಿತಿಗೆ ದೊಬ್ಬುತ್ತಾನೆ ಮತ್ತು ಆತನನ್ನು ಸೇವಿಸಲು ಬಯಸುವ ದೀನದರಿದ್ರರಿಗೆ ಸಹಾಯಮಾಡುತ್ತಾನೆ ಎಂದು ತಿಳಿಸಿದರಲ್ಲಿ ಆಕೆಯಲ್ಲಿದ್ದ ಗಾಢ ನಂಬಿಕೆಯು ತೋರಿಬರುತ್ತದೆ. ಅವಳಿಗೆ ಶಾಸ್ತ್ರದ ಒಳ್ಳೆಯ ಜ್ಞಾನವಿತ್ತೆಂದೂ ಅದು ಸೂಚಿಸುತ್ತದೆ. ಒಂದು ಅಂದಾಜಿಗನುಸಾರ ಆಕೆ ಹೀಬ್ರು ಶಾಸ್ತ್ರದಿಂದ 20ಕ್ಕೂ ಹೆಚ್ಚು ಉಲ್ಲೇಖಗಳನ್ನು ಮಾಡಿದ್ದಾಳೆ.

ಹೀಗೆ ಮರಿಯಳು ದೇವರ ವಾಕ್ಯದ ವಿಷಯದಲ್ಲಿ ಆಳವಾಗಿ ಆಲೋಚಿಸಿದಳೆಂಬುದು ಸ್ಪಷ್ಟ. ಆದರೂ ಆಕೆ ದೀನಳಾಗಿಯೇ ಇದ್ದಳು. ಆಕೆ ತನ್ನ ಸನ್ನಿವೇಶವನ್ನು ತಾನೇ ವಿವರಿಸಿ ಹೇಳುವ ಬದಲಿಗೆ ಶಾಸ್ತ್ರವಚನಗಳೇ ಅವನ್ನು ವಿವರಿಸುವಂತೆ ಬಿಟ್ಟುಕೊಟ್ಟಳು. ಆಕೆಯ ಗರ್ಭದಲ್ಲಿ ಆಗ ಬೆಳೆಯುತ್ತಿದ್ದ ಮಗನು ಮುಂದಕ್ಕೆ ಒಂದು ದಿನ ಅದೇ ಮನೋಭಾವವನ್ನು ತೋರಿಸಿ, “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು” ಎಂದು ಹೇಳಲಿದ್ದನು. (ಯೋಹಾನ 7:16) ಆದುದರಿಂದ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೇಯದು: ‘ದೇವರ ವಾಕ್ಯಕ್ಕೆ ಅಂಥ ಗೌರವ ಮತ್ತು ಪೂಜ್ಯ ಭಾವನೆಯನ್ನು ನಾನು ತೋರಿಸುತ್ತೇನೊ? ಇಲ್ಲವೆ ನನ್ನ ಸ್ವಂತ ವಿಚಾರಗಳನ್ನು ಮತ್ತು ಬೋಧನೆಗಳನ್ನೇ ನಾನು ಮೆಚ್ಚುತ್ತೇನೊ?’ ಮರಿಯಳ ಉತ್ತರವು ದೇವರ ವಾಕ್ಯಕ್ಕೆ ಗೌರವವನ್ನು ತೋರಿಸಿತೆಂಬುದು ಸ್ಪಷ್ಟ.

ಮರಿಯಳು ಎಲಿಸಬೇತಳೊಂದಿಗೆ ಮೂರು ತಿಂಗಳು ಕಳೆದಳು. ಅವರು ಒಬ್ಬರಿಗೊಬ್ಬರು ಬಹಳ ಪ್ರೋತ್ಸಾಹನೆಯನ್ನು ಕೊಟ್ಟುಕೊಂಡರು ಎಂಬದಕ್ಕೆ ಸಂದೇಹವಿಲ್ಲ. (ಲೂಕ 1:56) ಈ ಇಬ್ಬರೂ ಸ್ತ್ರೀಯರು ಸ್ನೇಹಪರತೆಯ ಪ್ರಮುಖತೆಯನ್ನು ನಮಗೆ ನೆನಪು ಹುಟ್ಟಿಸುತ್ತಾರೆ. ಯೆಹೋವ ದೇವರನ್ನು ನಿಜವಾಗಿಯೂ ಪ್ರೀತಿಸುವ ಸ್ನೇಹಿತರನ್ನು ನಾವು ಆರಿಸಿಕೊಂಡಲ್ಲಿ, ಆಧ್ಯಾತ್ಮಿಕವಾಗಿ ಬೆಳೆದು ಆತನ ಸಮೀಪಕ್ಕೆ ಬರುತ್ತೇವೆ ಖಂಡಿತ. (ಜ್ಞಾನೋಕ್ತಿ 13:20) ಕೊನೆಗೆ, ಮರಿಯಳು ತನ್ನ ಮನೆಗೆ ಹಿಂದೆರಳುವ ಸಮಯ ಬಂತು. ಆದರೆ, ಆಕೆಯು ಗರ್ಭವತಿಯೆಂದು ಯೋಸೇಫನಿಗೆ ತಿಳಿದುಬಂದಾಗ ಅವನು ಏನನ್ನುವನು?

ಮರಿಯ ಮತ್ತು ಯೋಸೇಫ

ಮರಿಯಳು ತಾನು ಗರ್ಭಿಣಿಯೆಂದು ಯೋಸೇಫನಿಗೆ ತಿಳಿಸಲು ತನ್ನ ದೇಹಸ್ಥಿತಿ ತೋರಿಸುವ ತನಕ ಕಾಯಲಿಲ್ಲ ನಿಶ್ಚಯ. ಆಕೆ ಯೋಸೇಫನಿಗೆ ಅದನ್ನು ತಿಳಿಸಲೇಬೇಕಿತ್ತು. ತಾನು ಹೇಳಲಿದ್ದ ಸಂಗತಿಗೆ ಆ ಸಭ್ಯನೂ ದೇವಭೀರುವೂ ಆದ ವ್ಯಕ್ತಿ ಹೇಗೆ ಪ್ರತಿವರ್ತಿಸಾನು ಎಂಬ ವಿಷಯದಲ್ಲಿ ಆಕೆ ಚಿಂತಿಸುತ್ತಿದ್ದಿರಲೂಬಹುದು. ಹೀಗಿದ್ದರೂ, ಆಕೆ ಅವನನ್ನು ಸಮೀಪಿಸಿ ತನಗೆ ಸಂಭವಿಸಿದ ಸಕಲ ವಿಷಯಗಳನ್ನು ತಿಳಿಸಿದಳು. ನೀವು ಭಾವಿಸಸಾಧ್ಯವಿರುವಂತೆ, ಯೋಸೇಫನು ತೀರ ಕಳವಳಪಟ್ಟನು. ಈ ಪ್ರಿಯ ಹುಡುಗಿ ಹೇಳಿದ್ದನ್ನು ನಂಬಲು ಅವನು ಬಯಸಿದರೂ, ಆಕೆ ಹೇಳಿದಂಥ ವಿಷಯವು ಹಿಂದೆಂದೂ ಸಂಭವಿಸಿದ್ದಿರಲಿಲ್ಲ. ಆಗ ಅವನು ಏನೆಲ್ಲಾ ಯೋಚಿಸಿದ್ದಿರಬಹುದು, ಹೇಗೆ ತರ್ಕಮಾಡಿರಬಹುದೆಂದು ಬೈಬಲ್‌ ತಿಳಿಸುವುದಿಲ್ಲ. ಆದರೂ ಆಕೆಯನ್ನು ವಿಚ್ಛೇದಿಸಲು ಅವನು ನಿರ್ಣಯಿಸಿದನೆಂದು ಅದು ಹೇಳುತ್ತದೆ. ಏಕೆಂದರೆ ಆ ಕಾಲದಲ್ಲಿ, ನಿಶ್ಚಿತಾರ್ಥವಾಗಿದ್ದವರನ್ನು ವಿವಾಹಿತರೆಂದೇ ಎಣಿಸಲಾಗುತ್ತಿತ್ತು. ಆದರೂ, ಆಕೆಯನ್ನು ಬಹಿರಂಗವಾದ ಅವಮಾನಕ್ಕೆ ಅಥವಾ ಶಿಕ್ಷೆಗೆ ಒಳಪಡಿಸಬೇಕೆಂದು ಅವನು ಬಯಸಲಿಲ್ಲ. ಗುಟ್ಟಾಗಿ ವಿಚ್ಛೇದನೆ ಮಾಡಲು ನಿರ್ಣಯಿಸಿದನು. (ಮತ್ತಾಯ 1:18, 19) ಈ ದಯಾಪರ ಪುರುಷನು ಈ ಅಭೂತಪೂರ್ವ ಸನ್ನಿವೇಶದಿಂದಾಗಿ ಸಂಕಟಪಡುವುದು ಮರಿಯಳನ್ನು ತುಂಬ ನೋಯಿಸಿದ್ದಿರಬೇಕು. ಆದರೂ ಯೋಸೇಫನು ಮರಿಯಳನ್ನು ನಂಬದೆ ಇದ್ದುದಕ್ಕಾಗಿ ಆಕೆಯು ವೈಮನಸ್ಯ ತಾಳಲಿಲ್ಲ.

ಆದರೆ ಯೋಸೇಫನು ತನಗೆ ಸರಿಯೆಂದು ತೋರಿದ ನಿರ್ಣಯವನ್ನು ಮಾಡುವಂತೆ ಯೆಹೋವನು ಅನುಮತಿಸಲಿಲ್ಲ. ಮರಿಯಳ ಗರ್ಭಧಾರಣೆ ನಿಜವಾಗಿಯೂ ಒಂದು ಅದ್ಭುತ ಸಂಗತಿ ಎಂದು ದೇವರ ದೂತನು ಯೋಸೇಫನಿಗೆ ಒಂದು ಸ್ವಪ್ನದಲ್ಲಿ ತಿಳಿಸಿದನು. ಇದು ಅವನಿಗೆ ಎಷ್ಟೊಂದು ಉಪಶಮನ ಕೊಟ್ಟಿದ್ದಿರಬೇಕು! ಮರಿಯಳು ಆರಂಭದಲ್ಲಿ ಮಾಡಿದ್ದನ್ನೇ ಈಗ ಯೋಸೇಫನು ನಡಿಸಿದನು. ಅಂದರೆ, ಅವನು ಯೆಹೋವನ ಮಾರ್ಗದರ್ಶನಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದನು. ಮರಿಯಳನ್ನು ತನ್ನ ಹೆಂಡತಿಯಾಗಿ ತೆಗೆದುಕೊಂಡು, ಯೆಹೋವನ ಕುಮಾರನನ್ನು ಪರಾಮರಿಸುವ ಆ ಅದ್ವಿತೀಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಾದನು.—ಮತ್ತಾಯ 1:20-24.

ಈ 2000 ವರುಷಗಳ ಹಿಂದಿನ ಯುವ ದಂಪತಿಗಳಿಂದ ವಿವಾಹಿತರೂ ವಿವಾಹಾರ್ಥಿಗಳೂ ಕಲಿತುಕೊಳ್ಳುವುದು ಸೂಕ್ತ. ತನ್ನ ಯುವ ಪತ್ನಿಯು ತಾಯ್ತನದ ಕರ್ತವ್ಯಗಳನ್ನೂ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುವುದನ್ನು ಯೋಸೇಫನು ನೋಡಿದಾಗ, ಯೆಹೋವನ ದೂತನು ತನ್ನನ್ನು ಮಾರ್ಗದರ್ಶಿಸಿದಕ್ಕಾಗಿ ನಿಶ್ಚಯವಾಗಿ ಸಂತೋಷಪಟ್ಟನು. ದೊಡ್ಡ ದೊಡ್ಡ ನಿರ್ಣಯಗಳನ್ನು ಮಾಡುವಾಗ ಯೆಹೋವನ ಮೇಲೆ ಆತುಕೊಂಡಿರುವ ಮಹತ್ವವನ್ನು ಯೋಸೇಫನು ಕಂಡಿದ್ದಿರಬೇಕು. (ಕೀರ್ತನೆ 37:5; ಜ್ಞಾನೋಕ್ತಿ 18:13) ಕುಟುಂಬದ ತಲೆಯಾಗಿ ನಿರ್ಣಯಗಳನ್ನು ಮಾಡುವಾಗ ಜಾಗ್ರತೆಯನ್ನೂ ದಯೆಯನ್ನೂ ಅವನು ತೋರಿಸಿದ್ದನೆಂಬುದಕ್ಕೆ ಸಂಶಯವಿಲ್ಲ.

ಇನ್ನೊಂದು ಕಡೆ, ಮರಿಯಳು ಯೋಸೇಫನನ್ನು ಮದುವೆಯಾಗಲು ಒಪ್ಪಿಕೊಂಡದ್ದರಿಂದ ನಾವು ಏನನ್ನು ಊಹಿಸಿಕೊಳ್ಳಬಲ್ಲೆವು? ಮೊದಲಲ್ಲಿ ಆಕೆಯು ಹೇಳಿದ್ದನ್ನು ಗ್ರಹಿಸಿಕೊಳ್ಳಲು ಅವನಿಗೆ ಕಷ್ಟವಾಗಿತ್ತು ನಿಜ. ಆದರೂ ಕುಟುಂಬದ ತಲೆಯಾಗಲಿದ್ದ ಆ ಪುರುಷನಿಗಾಗಿ ಆಕೆ ತಾಳ್ಮೆಯಿಂದ ಕಾದಳು ಮತ್ತು ಅವನಲ್ಲಿ ಭರವಸೆಯಿಟ್ಟಳು. ಅದು ಇಂದಿನ ಕ್ರೈಸ್ತ ಮಹಿಳೆಯರಿಗೆ ಹೇಗೋ ಹಾಗೆಯೇ ಅವಳಿಗೂ ಉತ್ತಮ ಪಾಠವಾಗಿತ್ತು ನಿಶ್ಚಯ. ಕೊನೆಯದಾಗಿ, ಈ ಘಟನೆಗಳು ಯೋಸೇಫ ಮರಿಯ ಇಬ್ಬರಿಗೂ ಪ್ರಾಮಾಣಿಕವೂ ಮುಕ್ತವೂ ಆದ ಸಂವಾದವು ಎಷ್ಟು ಮಹತ್ವ ಎಂಬ ವಿಷಯದಲ್ಲಿ ಹೆಚ್ಚನ್ನು ಕಲಿಸಿದ್ದಿರಬೇಕು.

ಆ ಯುವ ದಂಪತಿಗಳು ಉತ್ತಮವಾದ ಅಸ್ತಿವಾರಗಳ ಮೇಲೆ ತಮ್ಮ ಮದುವೆಯನ್ನು ಆರಂಭಿಸಿದರೆಂಬುದು ನಿಶ್ಚಯ. ಅವರಿಬ್ಬರೂ ಎಲ್ಲ ವಿಷಯಗಳಿಗಿಂತ ಹೆಚ್ಚಾಗಿ ಯೆಹೋವನನ್ನು ಪ್ರೀತಿಸಿದರು. ಹೊಣೆಗಾರಿಕೆಯುಳ್ಳ, ಪರಾಮರಿಸುವ ಹೆತ್ತವರಾಗಿ ಆತನನ್ನು ಮೆಚ್ಚಿಸಲು ಹಂಬಲಿಸಿದರು. ಖಂಡಿತವಾಗಿ ಅವರಿಗೆ ಅಧಿಕ ಆಶೀರ್ವಾದಗಳು ಸಹ ಕಾದಿದ್ದವು. ಲೋಕವು ತಿಳಿದಿರುವವರಲ್ಲೇ ಅತ್ಯಂತ ಮಹಾ ಪುರುಷನಾಗಿ ಬೆಳೆಯಲಿದ್ದ ಯೇಸುವನ್ನು ಸಾಕಿಸಲಹುವ ಪ್ರತೀಕ್ಷೆ ಅವರ ಮುಂದಿತ್ತು. (w08 7/1)