ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತು

ಇತರರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತು

ಯೇಸುವಿನಿಂದ ಕಲಿಯುವುದು . . .

ಇತರರೊಂದಿಗೆ ಹೇಗೆ ವ್ಯವಹರಿಸಬೇಕೆಂಬುದರ ಕುರಿತು

ದಯಾಪರರಾಗಿರಬೇಕು ಏಕೆ?

ಜನರು ನಿಮಗೆ ನಿರ್ದಯೆ ತೋರಿಸುವಾಗಲೂ ನೀವವರಿಗೆ ದಯೆಯನ್ನು ತೋರಿಸುತ್ತೀರೋ? ಯೇಸುವನ್ನು ಅನುಕರಿಸಲು ನಾವು ಬಯಸುವುದಾದರೆ ನಮ್ಮನ್ನು ದ್ವೇಷಿಸುವವರಿಗೂ ನಾವು ದಯೆ ತೋರಿಸಬೇಕು. ಯೇಸು ಹೇಳಿದ್ದು: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. . . . ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. . . . ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.”—ಲೂಕ 6:32-36; 10:25-37.

ಕ್ಷಮಿಸಬೇಕು ಏಕೆ?

ನಾವು ತಪ್ಪುಗಳನ್ನು ಮಾಡಿದಾಗ ದೇವರು ನಮ್ಮನ್ನು ಕ್ಷಮಿಸಬೇಕೆಂದು ನಾವು ಬಯಸುತ್ತೇವೆ. ದೇವರ ಬಳಿ ಕ್ಷಮೆಗಾಗಿ ಬೇಡುವುದು ಸೂಕ್ತವಾಗಿದೆ ಎಂದು ಯೇಸು ಕಲಿಸಿದನು. (ಮತ್ತಾಯ 6:12) ಆದರೆ ನಾವೆಷ್ಟು ಹೆಚ್ಚಾಗಿ ಇತರರನ್ನು ಕ್ಷಮಿಸುತ್ತೇವೋ ಅಷ್ಟು ಹೆಚ್ಚಾಗಿ ಯೆಹೋವನು ನಮ್ಮನ್ನು ಕ್ಷಮಿಸುತ್ತಾನೆಂದು ಸಹ ಯೇಸು ಹೇಳಿದನು. ಅವನಂದದ್ದು: “ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ.” —ಮತ್ತಾಯ 6:14, 15.

ಕುಟುಂಬಗಳು ಸಂತೋಷವಾಗಿರಬಲ್ಲವು ಹೇಗೆ?

ಯೇಸು ಅವಿವಾಹಿತನಾಗಿದ್ದರೂ, ಕುಟುಂಬ ಜೀವನವನ್ನು ಸಂತೋಷಕರವಾಗಿ ಮಾಡುವ ಕುರಿತು ಅವನಿಂದ ನಾವು ಹೆಚ್ಚನ್ನು ಕಲಿಯಸಾಧ್ಯವಿದೆ. ಯೇಸು ತನ್ನ ನುಡಿ ಮತ್ತು ಕ್ರಿಯೆಗಳ ಮೂಲಕ ನಾವು ಅನುಕರಿಸಬಲ್ಲ ಒಂದು ಉತ್ತಮ ಮಾದರಿಯನ್ನಿಟ್ಟನು. ಕೆಳಗಿನ ಮೂರು ಅಂಶಗಳನ್ನು ಪರಿಗಣಿಸಿ.

1. ಗಂಡನು ತನ್ನ ಹೆಂಡತಿಯನ್ನು ತನ್ನ ಸ್ವಂತ ಶರೀರದ ಹಾಗೆ ಪ್ರೀತಿಸಬೇಕು. ಯೇಸು ಗಂಡಂದಿರಿಗೆ ಮಾದರಿಯಿಟ್ಟಿದ್ದಾನೆ. ತನ್ನ ಶಿಷ್ಯರಿಗೆ ಅವನು ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ . . . ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.” ಹೇಗೆ? ‘ನಾನು ನಿಮ್ಮನ್ನು ಪ್ರೀತಿಸಿದ ಪ್ರಕಾರವೇ’ ಎಂದನು ಯೇಸು. (ಯೋಹಾನ 13:34) ಈ ಮೂಲತತ್ತ್ವವನ್ನು ಗಂಡಂದಿರಿಗೆ ಅನ್ವಯಿಸುತ್ತಾ ಬೈಬಲ್‌ ಹೇಳುವುದು: “ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟಂತೆಯೇ, ಪುರುಷರೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ . . . ಪುರುಷರೂ ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. ಏಕೆಂದರೆ ಯಾರೂ ಎಂದೂ ಸ್ವಶರೀರವನ್ನು ದ್ವೇಷಿಸುವುದಿಲ್ಲ, ಆದರೆ ಅದನ್ನು ಪೋಷಿಸಿ, ಸಂರಕ್ಷಿಸುತ್ತಾರೆ. ಅದೇ ಪ್ರಕಾರ ಕರ್ತನು ಸಭೆಯನ್ನು ಪೋಷಿಸಿ ಸಂರಕ್ಷಿಸುವಾತನಾಗಿದ್ದಾನೆ.”—ಎಫೆಸ 5:25, 28, 29, NIBV.

2. ವಿವಾ ಸಂಗಾತಿಗಳು ಒಬ್ಬರಿಗೊಬ್ಬರು ನಂಬಿಗಸ್ತರಾಗಿರಬೇಕು. ವಿವಾಹ ಸಂಗಾತಿಯನ್ನು ಬಿಟ್ಟು ಬೇರೆಯವರೊಂದಿಗೆ ಲೈಂಗಿಕ ಸಂಬಂಧವನ್ನಿಡುವದು ದೇವರ ವಿರುದ್ಧ ಪಾಪವಾಗಿದೆ ಮತ್ತು ಇದು ಕುಟುಂಬಗಳನ್ನು ಹಾಳುಗೆಡವುತ್ತದೆ. ಯೇಸು ಹೇಳಿದ್ದು: “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು . . . ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು . . . ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ.”—ಮತ್ತಾಯ 19:4-9.

3. ಮಕ್ಕಳು ತಮ್ಮ ಹೆತ್ತವರಿಗೆ ಅಧೀನರಾಗಿರಬೇಕು. ಯೇಸು ಪರಿಪೂರ್ಣನಾಗಿದ್ದರೂ ಮಗುವಾಗಿದ್ದಾಗ ತನ್ನ ಅಪರಿಪೂರ್ಣ ಹೆತ್ತವರಿಗೆ ವಿಧೇಯನಾದನು. 12 ವರ್ಷದ ಬಾಲಕನಾಗಿದ್ದ ಯೇಸುವಿನ ಕುರಿತು ಬೈಬಲ್‌ ಹೇಳುವುದು: “ಬಳಿಕ ಆತನು ಅವರ [ಅವನ ಹೆತ್ತವರ] ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು.”—ಲೂಕ 2:51; ಎಫೆಸ 6:1-3.

ಈ ಮೂಲತತ್ತ್ವಗಳನ್ನು ಅನ್ವಯಿಸಬೇಕು ಏಕೆ?

ತಾನು ಕಲಿಸಿದ ಪಾಠಗಳ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.” (ಯೋಹಾನ 13:17) ನಿಜ ಕ್ರೈಸ್ತರಾಗಿರಬೇಕಾದರೆ, ಇತರರನ್ನು ಉಪಚರಿಸುವ ಕುರಿತು ಯೇಸು ಕೊಟ್ಟ ಸಲಹೆಯನ್ನು ನಾವು ಅನ್ವಯಿಸಿಕೊಳ್ಳಬೇಕು. ಅವನು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35. (w08 8/1)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದ ಅಧ್ಯಾಯ 14ನ್ನು ನೋಡಿ

[ಪಾದಟಿಪ್ಪಣಿ]

^ ಪ್ಯಾರ. 14 ಯೆಹೋವನ ಸಾಕ್ಷಿಗಳ ಪ್ರಕಾಶನ.

[ಪುಟ 24, 25ರಲ್ಲಿರುವ ಚಿತ್ರ]

ದುಂದುವೆಚ್ಚ ಮಾಡಿದ ಮಗನ ಕುರಿತಾದ ಯೇಸುವಿನ ಸಾಮ್ಯವು ದಯೆ ಮತ್ತು ಕ್ಷಮಿಸುವುದರ ಪ್ರಮುಖತೆಯನ್ನು ನಮಗೆ ಕಲಿಸುತ್ತದೆ.—ಲೂಕ 15:11-32

[ಪುಟ 25ರಲ್ಲಿರುವ ಚಿತ್ರ]

ವಿವಾಹ ಸಂಗಾತಿಗಳು ಒಬ್ಬರಿಗೊಬ್ಬರು ನಂಬಿಗಸ್ತರಾಗಿರಬೇಕು