ದೇವರ ಹೆಸರನ್ನು ಉಪಯೋಗಿಸುವುದು ತಪ್ಪೋ?
ದೇವರ ಹೆಸರನ್ನು ಉಪಯೋಗಿಸುವುದು ತಪ್ಪೋ?
ಹೆಚ್ಚಾಗಿ “ಹಳೆ ಒಡಂಬಡಿಕೆ” ಎಂದು ಕರೆಯಲ್ಪಡುವ ಹೀಬ್ರು ಶಾಸ್ತ್ರದಲ್ಲಿ ದೇವರ ಹೆಸರು ಸುಮಾರು 7000 ಬಾರಿ (ಬಲದಿಂದ ಎಡಕ್ಕೆ ಓದಿ) יהוה ಎಂಬ ಹೀಬ್ರು ಅಕ್ಷರ ರೂಪದಲ್ಲಿ ಕಂಡುಬರುತ್ತದೆ. ಅಂದರೆ, ದೇವರ ಹೆಸರು ನಾಲ್ಕು ಹೀಬ್ರು ಅಕ್ಷರಗಳಾದ ಯೋಡ್ ಹೆ ವಾ ಹೆ Yohdh He Waw He ಎಂಬದರಿಂದ ಪ್ರತಿನಿಧಿಸಲ್ಪಟ್ಟಿದೆ. ಇದರ ಸಾಮಾನ್ಯ ಲಿಪ್ಯಂತರ YHWH ಎಂದಾಗಿದೆ.
ಪುರಾತನ ಕಾಲದಲ್ಲಿದ್ದ ಯೆಹೂದ್ಯರಲ್ಲಿ ದೇವರ ಹೆಸರನ್ನು ಉಪಯೋಗಿಸುವುದು ತಪ್ಪೆಂಬ ಮೂಢನಂಬಿಕೆಯು ಕಾಲಕ್ರಮೇಣ ಬಂತು. ಆ ಮೂಢನಂಬಿಕೆಯ ಕಾರಣದಿಂದಾಗಿ ಅವರು ಆ ಹೆಸರನ್ನು ಉಚ್ಚರಿಸಲು ಸಹ ನಿರಾಕರಿಸಿದರು ಮತ್ತು ತಮ್ಮ ಬರಹಗಳಲ್ಲಿ ಅದಕ್ಕೆ ಬದಲಿ ಶಬ್ದಗಳನ್ನು ಉಪಯೋಗಿಸತೊಡಗಿದರು. ಆದರೂ ಅನೇಕ ಬೈಬಲ್ ಭಾಷಾಂತರಕಾರರು ಆ ಹೆಸರಿನ ಬದಲಾಗಿ “ಯಾಹು” ಅಥವಾ “ಯೆಹೋವ” ಎಂಬ ಹೆಸರನ್ನು ಉಪಯೋಗಿಸಿದ್ದಾರೆ. ಈ ಹೆಸರನ್ನು ಉಪಯೋಗಿಸಿರುವ ಭಾಷಾಂತರಗಳಲ್ಲಿ ಕ್ಯಾಥಲಿಕ್ ಜೆರೂಸಲೆಮ್ ಬೈಬಲ್ ಒಂದಾಗಿದೆ. ಈ ಭಾಷಾಂತರಕ್ಕೆ ಅನುಸಾರವಾಗಿ, ಮೋಶೆಯನ್ನು ತಮ್ಮ ಬಳಿಗೆ ಕಳುಹಿಸಿದವನು ಯಾರು ಎಂದು ಇಸ್ರಾಯೇಲ್ಯರು ಕೇಳುವಲ್ಲಿ ತಾನು ಹೇಗೆ ಉತ್ತರ ಕೊಡಬೇಕೆಂದು ಮೋಶೆಯು ದೇವರನ್ನು ಕೇಳಿದಾಗ, ದೇವರು ಅವನಿಗೆ ಹೇಳಿದ್ದು: “ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.”—ವಿಮೋಚನಕಾಂಡ 3:15.
ತಾನು ದೇವರ ಹೆಸರನ್ನು ಉಪಯೋಗಿಸಿದ ಕುರಿತು ಯೇಸು ತನ್ನ ಪ್ರಾರ್ಥನೆಯಲ್ಲಿ ತಿಳಿಸಿದನು. ಅವನಂದದ್ದು: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು.” ಸಾಮಾನ್ಯವಾಗಿ ಕರ್ತನ ಪ್ರಾರ್ಥನೆಯೆಂದು ಕರೆಯಲ್ಪಡುವ ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.”—ಯೋಹಾನ 17:26; ಮತ್ತಾಯ 6:10.
ಹೀಗಿರುವಲ್ಲಿ, ನಜರೇತಿನ ಯೇಸು ಎಂಬ ತನ್ನ ಇತ್ತೀಚಿಗಿನ ಪುಸ್ತಕದಲ್ಲಿ XVIನೆಯ ಪೋಪ್ ಬೆನಡಿಕ್ಟ್‌ರವರು ದೇವರ ನಾಮದ ಕುರಿತು ಈ ಕೆಳಗಿನಂತೆ ಹೇಳಿರುವುದು ಆಶ್ಚರ್ಯದ ಸಂಗತಿ. “YHWH ಎಂಬ ಪದದಲ್ಲಿ ವ್ಯಕ್ತಪಡಿಸಲಾದ ದೇವರ ಸ್ವನಿರ್ದೇಶಿತ ನಾಮವನ್ನು ಉಚ್ಚರಿಸಲು ಇಸ್ರಾಯೇಲ್ಯರು ನಿರಾಕರಿಸಿದ್ದು ಸಂಪೂರ್ಣ ಸರಿ. ಯಾಕೆಂದರೆ ಈ ಮೂಲಕ ಅವರು ಅದನ್ನು ವಿಧರ್ಮಿ ದೇವತೆಗಳ ನಾಮಮಟ್ಟಕ್ಕೆ ತಂದು ಅವಹೇಳನ ಮಾಡುವುದನ್ನು ತಪ್ಪಿಸಿದ್ದಾರೆ. ಅದೇ ರೀತಿಯಲ್ಲಿ, ಇತ್ತೀಚಿನ ಬೈಬಲ್ ಭಾಷಾಂತರಗಳು ಈ ಹೆಸರನ್ನು ಬೈಬಲಿನಲ್ಲಿ ಬಳಸಿರುವುದೂ ತಪ್ಪು. ಇಸ್ರಾಯೇಲು ಆ ಹೆಸರನ್ನು ಕೇವಲ ಪುರಾತನ ನಾಮವಾಗಿ ನೋಡಿತ್ತು ಮಾತ್ರವಲ್ಲ ಯಾವಾಗಲೂ ಅದನ್ನು ರಹಸ್ಯವಾದುದೆಂದು ಹಾಗೂ ಉಚ್ಚರಿಸಲು ಅಶಕ್ಯವಾದುದೆಂದು ಪರಿಗಣಿಸಿತ್ತು.”
ನಿಮ್ಮ ಅಭಿಪ್ರಾಯವೇನು? ದೇವರ ಹೆಸರನ್ನು ಉಪಯೋಗಿಸುವುದು ಸರಿಯೋ ತಪ್ಪೋ? ಯೆಹೋವನು ತಾನೇ ಹೇಳಿದ್ದು: “ಇದೇ ನನ್ನ ಹೆಸರು; ತಲತಲಾಂತರಕ್ಕೂ ಸ್ಮರಿಸಬೇಕಾದ ನನ್ನ ನಾಮ.” ಹೀಗಿರುವಲ್ಲಿ, ದೇವರ ಹೆಸರನ್ನು ಉಪಯೋಗಿಸುವುದು ತಪ್ಪೆಂದು ಹೇಳಲು ಯಾರಿಗಾದರೂ ಹಕ್ಕಿದೆಯೋ? (w08 7/1)
[ಪುಟ 26ರಲ್ಲಿರುವ ಚಿತ್ರ]
ಯೇಸು ದೇವರ ಹೆಸರನ್ನು ತನ್ನ ಪ್ರಾರ್ಥನೆಯಲ್ಲಿ ಉಪಯೋಗಿಸಿದನು