ಶೀಘ್ರದಲ್ಲೇ ಪರದೈಸ್ ಭೂಮಿ!
ಶೀಘ್ರದಲ್ಲೇ ಪರದೈಸ್ ಭೂಮಿ!
“ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.
ಈಪ್ರಸಿದ್ಧ ಪ್ರಾರ್ಥನೆಯನ್ನು ಅನೇಕರು ‘ನಮ್ಮ ತಂದೆಯೇ’ ಅಥವಾ ‘ಕರ್ತನ ಪ್ರಾರ್ಥನೆ’ ಎಂದು ಕರೆಯುತ್ತಾರೆ. ಈ ಪ್ರಾರ್ಥನೆಯು ಮಾನವಕುಲಕ್ಕೆ ಒಂದು ನಿರೀಕ್ಷೆಯನ್ನು ಕೊಡುತ್ತದೆ. ಅದು ಹೇಗೆ?
ಈಗ ಸ್ವರ್ಗದಲ್ಲಿ ದೇವರ ಚಿತ್ತವು ಹೇಗೆ ನಿಶ್ಚಿತವಾಗಿ ನೆರವೇರುತ್ತಿದೆಯೋ ಅಷ್ಟೇ ನಿಶ್ಚಿತವಾಗಿ ಅದು ಭೂಮಿಯಲ್ಲಿಯೂ ನೆರವೇರುವಂತೆ ದೇವರ ರಾಜ್ಯವು ಮಾಡಲಿದೆ ಎಂದು ಕರ್ತನ ಪ್ರಾರ್ಥನೆಯು ತೋರಿಸುತ್ತದೆ. ಈ ಭೂಮಿಯನ್ನು ಸುಂದರ ತೋಟ ಅಂದರೆ ಪರದೈಸಾಗಿ ಮಾಡುವುದೇ ದೇವರ ಚಿತ್ತವಾಗಿದೆ. (ಪ್ರಕಟನೆ 21:1-5) ಹಾಗಾದರೆ ನಿಜವಾಗಿ ದೇವರ ರಾಜ್ಯವೆಂದರೇನು ಮತ್ತು ಅದು ಭೂಮಿಯನ್ನು ಪರದೈಸಾಗಿ ಮಾಡುವುದಾದರೂ ಹೇಗೆ?
ದೇವರ ವಾಸ್ತವಿಕ ಸರಕಾರ
ದೇವರ ರಾಜ್ಯ ಒಂದು ವಾಸ್ತವಿಕ ಸರಕಾರವಾಗಿದೆ. ಯಾವುದೇ ಸರಕಾರವು ಆಳ್ವಿಕೆ ನಡೆಸಬೇಕಾದರೆ ಆಳುವವರು, ಪ್ರಜೆಗಳು ಮತ್ತು ನಿಯಮಗಳು ಬೇಕೇ ಬೇಕು. ದೇವರ ರಾಜ್ಯದಲ್ಲಿ ಈ ಎಲ್ಲಾ ವಿಷಯಗಳು ಇವೆಯೋ? ಮುಂದಿರುವ ಮೂರು ಪ್ರಶ್ನೆಗಳಿಗೆ ಬೈಬಲ್ ನೀಡುವ ಉತ್ತರಗಳನ್ನು ಗಮನಿಸಿರಿ:
ದೇವರ ರಾಜ್ಯದಲ್ಲಿ ಆಳುವವರು ಯಾರು? (ಯೆಶಾಯ 33:22) ರಾಜ್ಯವಾಳುವ ಅಧಿಕಾರವನ್ನು ಯೆಹೋವ ದೇವರು ತನ್ನ ಮಗನಾದ ಯೇಸು ಕ್ರಿಸ್ತನಿಗೆ ಕೊಟ್ಟಿದ್ದಾನೆ. (ಮತ್ತಾಯ 28:18) ಯೆಹೋವ ದೇವರ ನಿರ್ದೇಶನದ ಕೆಳಗೆ ಯೇಸುವು “ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ” ನಿರ್ದಿಷ್ಟ ಸಂಖ್ಯೆಯ ಜನರನ್ನು ಆರಿಸಿದ್ದಾನೆ. ಅವರು ಆತನೊಂದಿಗೆ ರಾಜರಾಗಿ “ಭೂಮಿಯ ಮೇಲೆ” ಆಳುವರು.—ಪ್ರಕಟನೆ 5:9, 10.
ತನ್ನ ಪ್ರಜೆಗಳು ವಿಧೇಯರಾಗಬೇಕಾದ ಯಾವ ನಿಯಮಗಳನ್ನು ದೇವರ ರಾಜ್ಯವು ಸ್ಥಾಪಿಸಿದೆ? ಕೆಲವು ನಿಯಮಗಳು ಅಥವಾ ಆಜ್ಞೆಗಳು ಪ್ರಜೆಗಳಿಂದ ನಿರ್ದಿಷ್ಟ ಕ್ರಿಯೆಗಳನ್ನು ಮಾಡುವಂತೆ ಕೇಳಿಕೊಳ್ಳುತ್ತವೆ. ಆ ನಿಯಮಗಳಲ್ಲೇ ಅತಿ ಪ್ರಾಮುಖ್ಯ ನಿಯಮಗಳನ್ನು ಗುರುತಿಸುತ್ತಾ ಯೇಸು ಅಂದದ್ದು: “ನಿನ್ನ ದೇವರಾಗಿರುವ [ಯೆಹೋವನನ್ನು] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.”—ಮತ್ತಾಯ 22:37-39.
ಆದರೆ ಇತರ ಕೆಲವು ನಿಯಮಗಳು, ನಿರ್ದಿಷ್ಟ ಕ್ರಿಯೆಗಳನ್ನು ಮಾಡದಿರುವಂತೆ ದೇವರ ರಾಜ್ಯದ ಪ್ರಜೆಗಳನ್ನು ಕೇಳಿಕೊಳ್ಳುತ್ತವೆ. ಉದಾಹರಣೆಗೆ, ಬೈಬಲ್ ನೇರವಾಗಿ ತಿಳಿಸುವುದು: “ಮೋಸಹೋಗಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ವಿಟರು, ಸಲಿಂಗಕಾಮಿಗಳು, ಕಳ್ಳರು, 1 ಕೊರಿಂಥ 6:9, 10, NIBV.
ಲೋಭಿಗಳು, ಕುಡುಕರು, ಬೈಯುವವರು, ಸುಲಿಗೆಮಾಡುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.”—ದೇವರ ರಾಜ್ಯದ ಪ್ರಜೆಗಳು ಯಾರು? ದೇವರ ರಾಜ್ಯದ ಪ್ರಜೆಗಳನ್ನು ಯೇಸು ಕುರಿಗಳಿಗೆ ಹೋಲಿಸಿದನು. ಆತನು ಹೇಳಿದ್ದು: “ಅವು ನನ್ನ ಸ್ವರಕ್ಕೆ ಕಿವಿಗೊಡುವವು. ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” (ಯೋಹಾನ 10:16) ದೇವರ ರಾಜ್ಯದ ಪ್ರಜೆಯಾಗಬೇಕಾದರೆ, ಒಬ್ಬನು ತಾನು ‘ಒಳ್ಳೇ ಕುರುಬನಾಗಿರುವ’ ಯೇಸುವನ್ನು ಹಿಂಬಾಲಿಸುತ್ತೇನೆಂದು ಕೇವಲ ಹೇಳಿದರೆ ಸಾಲದು, ಆತನು ಆಜ್ಞಾಪಿಸುವುದನ್ನೆಲ್ಲಾ ಮಾಡಬೇಕು ಸಹ. ಯೇಸು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.”—ಮತ್ತಾಯ 7:21.
ಆದುದರಿಂದ ಯಾರು ದೇವರ ರಾಜ್ಯದ ಪ್ರಜೆಗಳಾಗಿರುತ್ತಾರೋ ಅವರು ಯೇಸು ಮಾಡಿದಂತೆಯೇ ‘ಯೆಹೋವ’ ಎಂಬ ದೇವರ ಹೆಸರನ್ನು ಉಪಯೋಗಿಸಬೇಕು ಮತ್ತು ಅದನ್ನು ಗೌರವಿಸಬೇಕು. (ಯೋಹಾನ 17:26) ‘ಪರಲೋಕ ರಾಜ್ಯದ ಈ ಸುವಾರ್ತೆಯ’ ಕುರಿತು ಇತರರಿಗೆ ಕಲಿಸಬೇಕೆಂಬ ಯೇಸುವಿನ ಆಜ್ಞೆಗೆ ಅವರು ವಿಧೇಯರಾಗುತ್ತಾರೆ. (ಮತ್ತಾಯ 24:14; 28:19, 20) ಮತ್ತು ಅವರು ಒಬ್ಬರಿಗೊಬ್ಬರು ಯಥಾರ್ಥ ಪ್ರೀತಿ ತೋರಿಸುತ್ತಾರೆ.—ಯೋಹಾನ 13:35.
‘ಲೋಕನಾಶಕರನ್ನು ನಾಶಮಾಡುವುದು’
ದೇವರ ರಾಜ್ಯವು ಭೂಮಿಯ ಮೇಲೆ ಮಹತ್ತಾದ ಬದಲಾವಣೆಗಳನ್ನು ತರಲಿದೆ ಎಂದು ಸದ್ಯದ ಲೋಕ ಪರಿಸ್ಥಿತಿಗಳು ತೋರಿಸಿಕೊಡುತ್ತವೆ. ಅದು ನಮಗೆ ಹೇಗೆ ಗೊತ್ತು? “ದೇವರ ರಾಜ್ಯವು ಹತ್ತಿರವದೆ” ಎಂಬುದನ್ನು ಗುರುತಿಸುವ ಒಂದು ಬಹುಮುಖೀಯ ಸೂಚನೆಯನ್ನು ಯೇಸು 2000 ವರ್ಷಗಳ ಹಿಂದೆ ತಿಳಿಸಿದನು. (ಲೂಕ 21:31) ಹಿಂದಿನ ಲೇಖನದಲ್ಲಿ ತೋರಿಸಿದಂತೆ, ಈಗ ಭೂವ್ಯಾಪಕವಾಗಿ ಆ ಸೂಚನೆಯ ವೈಶಿಷ್ಟ್ಯಗಳು ಸ್ಪಷ್ಟವಾಗಿ ತೋರಿಬರುತ್ತಿವೆ.
ಇದರ ನಂತರ ಏನಾಗಲಿದೆ? ಯೇಸು ಉತ್ತರಿಸುತ್ತಾನೆ: “ಆ ಸಮಯದಲ್ಲಿ ಮಹಾ ಸಂಕಟ ಇರುವದು. ಲೋಕವು ಸೃಷ್ಟಿಯಾದಂದಿನಿಂದ ಇಂಥ ಸಂಕಟವು ಎಂದೂ ಸಂಭವಿಸಿಲ್ಲ. ಇನ್ನು ಮುಂದೆಯೂ ಸಂಭವಿಸುವುದಿಲ್ಲ.” (ಮತ್ತಾಯ 24:21, NIBV) ಇದು ಮನುಷ್ಯರಿಂದ ಮಾಡಲ್ಪಡುವ ನಾಶನವಲ್ಲ. ಬದಲಿಗೆ ‘ಲೋಕನಾಶಕರನ್ನು ನಾಶಮಾಡಲು’ ದೇವರೇ ಕ್ರಿಯೆಗೈಯುವನು. (ಪ್ರಕಟನೆ 11:18) ಯಾರ ಸ್ವಾರ್ಥಪರ ಕೃತ್ಯಗಳು ಈ ಭೂಗ್ರಹವನ್ನು ನಾಶಕ್ಕೆ ದೂಡುತ್ತಾ ಇವೆಯೊ ಆ ದುಷ್ಟ ಜನರು “ದೇಶದೊಳಗಿಂದ ಕೀಳಲ್ಪಡುವರು.” ಆದರೆ ದೇವರು ಒಪ್ಪುವಂಥ ರೀತಿಯಲ್ಲಿ ಆತನ ಸೇವೆ ಮಾಡುವ “ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.”—ಜ್ಞಾನೋಕ್ತಿ 2:21, 22.
ಯೆಹೋವ ದೇವರು ಇಂಥ ಕಠಿಣ ಕ್ರಮ ಕೈಗೊಳ್ಳುವುದು ನ್ಯಾಯಯುತ. ಏಕೆ? ಈ ದೃಷ್ಟಾಂತವನ್ನು ಪರಿಗಣಿಸಿ: ನೀವು ಒಂದು ಚಿಕ್ಕ ಕಟ್ಟಡದ ಮಾಲೀಕರೆಂದು ಊಹಿಸಿ. ಅದರಲ್ಲಿ ವಾಸಿಸುವ ಕೆಲವು ಬಾಡಿಗೆದಾರರು ಒಳ್ಳೇ ನಡತೆಯವರೂ ಜಾಗರೂಕರೂ ಮತ್ತು ಬಾಡಿಗೆಯನ್ನು ಸರಿಯಾಗಿ ಕೊಟ್ಟು ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವವರೂ ಆಗಿದ್ದಾರೆ. ಆದರೆ ಇತರ ಬಾಡಿಗೆದಾರರು ಅವ್ಯವಸ್ಥಿತರೂ ಸ್ವಾರ್ಥಿಗಳೂ ಆಗಿದ್ದಾರೆ. ಅವರು ಬಾಡಿಗೆ ಕೊಡುವುದಿಲ್ಲ ಮಾತ್ರವಲ್ಲ ಮನೆಯನ್ನು ಹಾಳುಮಾಡುತ್ತಿದ್ದಾರೆ. ನೀವೆಷ್ಟು ಬಾರಿ ಎಚ್ಚರಿಸಿದರೂ ಅವರು ಅದನ್ನೇ ಮಾಡುತ್ತಿದ್ದಾರೆ. ಆಗ ನೀವೇನು ಮಾಡುವಿರಿ? ಮಾಲೀಕರಾದ ನೀವು ಆ ಕೆಟ್ಟ ಬಾಡಿಗೆದಾರರನ್ನು ನಿಶ್ಚಯವಾಗಿಯೂ ಮನೆಯಿಂದ ಹೊರಹಾಕುವಿರಿ.
ಅದೇ ರೀತಿಯಲ್ಲಿ, ಯೆಹೋವ ದೇವರು ಭೂಮಿಯನ್ನು ಸೃಷ್ಟಿಸಿದವನಾಗಿದ್ದಾನೆ ಮತ್ತು ಅದರಲ್ಲಿರುವ ಎಲ್ಲವೂ ಆತನಿಗೇ ಸೇರಿದ್ದು. ಆದುದರಿಂದ ಈ ಭೂಗ್ರಹದ ಮೇಲೆ ಯಾರು ಇರಬೇಕೆಂಬುದನ್ನು ನಿರ್ಣಯಿಸುವ ಹಕ್ಕು ಆತನಿಗೇ ಇದೆ. (ಪ್ರಕಟನೆ 4:11) ತನ್ನ ಚಿತ್ತದಂತೆ ನಡೆಯದ ಮತ್ತು ಇತರರ ಹಕ್ಕುಗಳನ್ನು ಅತಿಕ್ರಮಿಸುವ ದುಷ್ಟ ಜನರನ್ನು ಈ ಭೂಮಿಯಿಂದ ತೆಗೆದುಹಾಕುವುದು ತನ್ನ ಉದ್ದೇಶವಾಗಿದೆ ಎಂದು ಯೆಹೋವನು ಹೇಳಿದ್ದಾನೆ.—ಕೀರ್ತನೆ 37:9-11.
ಪರದೈಸಿನ ಪುನಃಸ್ಥಾಪನೆ
ಶೀಘ್ರದಲ್ಲೇ ಯೇಸುವಿನ ನೇತೃತ್ವದ ಕೆಳಗೆ ದೇವರ ರಾಜ್ಯವು ಈ ಭೂಮಿಯನ್ನು ಆಳುವುದು. ಇದನ್ನು ಯೇಸು “ಹೊಸ ಸೃಷ್ಟಿ” ಎಂದು ಕರೆದನು. (ಮತ್ತಾಯ 19:28) ಆಗ ಪರಿಸ್ಥಿತಿಯು ಹೇಗಿರುವುದು? ಮುಂದೆ ಕೊಟ್ಟಿರುವ ಬೈಬಲ್ ವಾಗ್ದಾನಗಳ ಕಡೆಗೆ ಗಮನ ಕೊಡಿ:
ಕೀರ್ತನೆ 46:9. “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ.”
ಯೆಶಾಯ 35:1. “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”
ಯೆಶಾಯ 65:21-23. “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು.”
ಯೋಹಾನ 5:28, 29. “ಸಮಾಧಿಗಳಲ್ಲಿರುವವರೆಲ್ಲರು [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”
ಪ್ರಕಟನೆ 21:4. “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”
ನಂಬಲು ಕಾರಣಗಳಿವೆಯೋ?
ಬೈಬಲಿನಲ್ಲಿರುವ ವಾಗ್ದಾನಗಳನ್ನು ನೀವು ನಂಬುತ್ತೀರೋ? ಅನೇಕರು ನಂಬುವುದಿಲ್ಲ ಎಂದು ಬೈಬಲ್ ಮುಂತಿಳಿಸಿದೆ. “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು . . . —ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ” ಬೈಬಲ್ ಹೇಳುತ್ತದೆ. (2 ಪೇತ್ರ 3:3, 4) ಆದರೆ ಅಂಥ ಕುಚೋದ್ಯಗಾರರ ವಿಚಾರಗಳು ಶುದ್ಧ ತಪ್ಪು. ಬೈಬಲ್ ಹೇಳುವುದನ್ನು ನೀವು ಏಕೆ ನಂಬಬಲ್ಲಿರಿ ಎಂಬುದಕ್ಕೆ ಕೇವಲ ನಾಲ್ಕು ಕಾರಣಗಳನ್ನು ನೋಡೋಣ:
(1) ಈ ಮುಂಚೆ ಸಹ ದೇವರು ಭೂಮಿಯಲ್ಲಿರುವ ದುಷ್ಟರ ವಿರುದ್ಧ ಕ್ರಮ ಕೈಗೊಂಡಿದ್ದಾನೆ. ನೋಹನ ದಿನದ ಜಲಪ್ರಳಯವು ಇದಕ್ಕೆ ಪ್ರಮುಖ ಉದಾಹರಣೆ.—2 ಪೇತ್ರ 3:5-7.
(2) ಈಗ ಇರುವ ಭೌಗೋಳಿಕ ಪರಿಸ್ಥಿತಿಗಳನ್ನು ಬೈಬಲ್ ನಿಖರವಾಗಿ ಮುಂತಿಳಿಸಿತ್ತು.
(3) ಇಂದು ಎಲ್ಲಾ ವಿಷಯಗಳೂ “ಲೋಕಾದಿಯಿಂದಿದ್ದ ಹಾಗೆಯೇ” ಇಲ್ಲ. ಹಿಂದೆಂದೂ ಸಂಭವಿಸಿರದ ರೀತಿಯಲ್ಲಿ ನಮ್ಮ ಭೂಗ್ರಹವು ಇಂದು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಪರಿಸರೀಯವಾಗಿ ಅವನತಿಗಿಳಿಯುತ್ತಾ ಇದೆ.
(4) “ಪರಲೋಕ ರಾಜ್ಯದ ಈ ಸುವಾರ್ತೆಯು” ಈಗ ಲೋಕದಾದ್ಯಂತ ಸಾರಲ್ಪಡುತ್ತಾ ಇದೆ. ಇದು, ಬೇಗನೆ “ಅಂತ್ಯವು ಬರುವದು” ಎಂಬುದನ್ನು ಸೂಚಿಸುತ್ತದೆ.—ಮತ್ತಾಯ 24:14.
ನೀವು ಬೈಬಲನ್ನು ಅಧ್ಯಯನ ಮಾಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಆಮಂತ್ರಿಸುತ್ತಾರೆ. ಹೀಗೆ ಮಾಡುವುದರಿಂದ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಸದಾ ಜೀವಿಸುವ ನಿರೀಕ್ಷೆಯ ಬಗ್ಗೆ ನೀವು ಹೆಚ್ಚನ್ನು ಕಲಿಯಬಲ್ಲಿರಿ. (ಯೋಹಾನ 17:3) ನಿಜ, ಒಂದು ಅತಿ ಸಂತೋಷದ ಜೀವಿತವು ಮಾನವರ ಮುಂದಿದೆ. ಶೀಘ್ರದಲ್ಲೇ ಅತ್ಯುತ್ತಮ ಸಮಯ ಬರಲಿದೆ! ಆ ಭವಿಷ್ಯತ್ತಿನ ಭಾಗವಾಗಿರಲು ನೀವು ಬಯಸುವಿರೋ? (w08 8/1)
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿಷಯಗಳು ಹಿಂದೆ ಇದ್ದಂತೆಯೇ ಇರುವವು ಎಂದು ಅನೇಕರು ಹೇಳುವುದು ಶುದ್ಧ ತಪ್ಪಾಗಿದೆ
[ಪುಟ 8ರಲ್ಲಿರುವ ಚಿತ್ರ]
ಈ ಭವಿಷ್ಯತ್ತಿನ ಭಾಗವಾಗಿ ನೀವಿರುವಿರೋ?