ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹದಿವಯಸ್ಕರೊಂದಿಗೆ ಸಂವಾದ

ಹದಿವಯಸ್ಕರೊಂದಿಗೆ ಸಂವಾದ

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಹದಿವಯಸ್ಕರೊಂದಿಗೆ ಸಂವಾದ

“ನನ್ನ ಮಗ ಚಿಕ್ಕವನಿರುವಾಗ ಅವನೊಂದಿಗೆ ಮಾತಾಡುವುದು ತುಂಬ ಸುಲಭವಾಗಿತ್ತು, ಈಗ ಅವನಿಗೆ 16 ವರ್ಷ. ಅವನು ಏನು ಯೋಚನೆ ಮಾಡ್ತಾನೆ ಎಂದು ನನಗೂ ನನ್ನ ಪತಿಗೂ ತಿಳಿಯುವುದೇ ಕಷ್ಟ. ರೂಮಲ್ಲಿ ಅವನಷ್ಟಕ್ಕೆ ಇದ್ದುಬಿಡ್ತಾನೆ. ನಮ್ಮೊಂದಿಗೆ ಮಾತೇ ಕಡಿಮೆ!”—ಮೀರ್ಯಾಮ್‌, ಮೆಕ್ಸಿಕೊ.

“ಚಿಕ್ಕವರಿರುವಾಗ ನನ್ನ ಮಕ್ಕಳು ನಾನೇನು ಹೇಳಿದ್ರೂ ಬಹಳ ಖುಷಿಯಿಂದ ಕೇಳ್ತಾ ಇದ್ದರು. ಈಗ ಹದಿವಯಸ್ಕರಾಗಿರುವ ಅವರು ನನಗೆ ಏನೂ ಗೊತ್ತಿಲ್ಲವೋ ಎಂಬಂತೆ ವರ್ತಿಸುತ್ತಿದ್ದಾರೆ.”—ಸ್ಕಾಟ್‌, ಆಸ್ಟ್ರೇಲಿಯ.

ನಿಮಗೆ ಹದಿವಯಸ್ಸಿನ ಮಕ್ಕಳಿರುವುದಾದರೆ ಮೇಲೆ ತಿಳಿಸಿದ ಹೆತ್ತವರ ಅನುಭವವು ನಿಮಗೂ ಆಗುತ್ತಿರಬಹುದು. ಈ ಮುಂಚೆ ನಿಮ್ಮ ಮಕ್ಕಳೊಂದಿಗೆ ಸಂವಾದವು ತುಂಬಾ ಸರಳವೂ ಸುಲಭವೂ ಆಗಿದ್ದಿರಬಹುದು. ಆದರೆ ಈಗ ಅಂಥ ಮಾತುಕತೆ ನಿಂತುಬಿಟ್ಟಂತೆ ಕಾಣುತ್ತದೆ. ಇಟೆಲಿಯ ಆಂಜೇಲಾ ಎಂಬ ತಾಯಿಯು ಹೇಳುವುದು: “ನನ್ನ ಮಗ ಚಿಕ್ಕವನಿದ್ದಾಗ ಪ್ರಶ್ನೆಗಳ ಸುರಿಮಳೆಯೇ ಅವನಲ್ಲಿತ್ತು. ಆದರೆ ಈಗ ನಾನೇ ಹೋಗಿ ಅವನನ್ನು ಮಾತಾಡಿಸ್ಬೇಕು. ನಾನೇನಾದ್ರು ಮಾತಾಡ್ಲಿಲ್ಲ ಅಂದ್ರೆ ಎಷ್ಟೋ ದಿನ ಸರಿಯಾದ ಮಾತುಕತೆಯೇ ಇರುವುದಿಲ್ಲ.”

ಎಲ್ಲರೊಂದಿಗೆ ಎಷ್ಟೊಂದು ಮಾತಾಡುತ್ತಿದ್ದ ನಿಮ್ಮ ಮಗನೊ ಮಗಳೊ ಈಗ ತಮ್ಮಷ್ಟಕ್ಕೆ ಇದ್ದುಬಿಡುವುದನ್ನು ಆಂಜೇಲಾಳಂತೆ ನೀವೂ ಕಂಡುಕೊಂಡಿರಬಹುದು. ಮಾತನಾಡಲು ಮಾಡುವ ಎಲ್ಲಾ ಪ್ರಯತ್ನಗಳಿಗೆ ಕೇವಲ ಹಾಂ ಅಥವಾ ಹೂಂ ಉತ್ತರ ಮಾತ್ರ. “ಶಾಲೆ ಹೇಗಾಯ್ತು?” ಎಂದು ಮಗನನ್ನು ಕೇಳಿದರೆ, “ಚೆನ್ನಾಗಿತ್ತು” ಅಷ್ಟೇ ಉತ್ತರ. “ಇವತ್ತು ಏನೆಲ್ಲಾ ಆಯ್ತು?” ಎಂದು ಮಗಳನ್ನು ಕೇಳಿದರೆ, “ಏನಿಲ್ಲ” ಎಂದು ತಲೆಯಲ್ಲಾಡಿಸುವುದು. “ನೀನು ಯಾಕೆ ಸರಿ ಮಾತಾಡುವುದಿಲ್ಲ?” ಎಂದು ಕೇಳಿದರೆ ಮೌನವೇ ಉತ್ತರ.

ಕೆಲವು ಹದಿವಯಸ್ಕರು ತುಂಬಾ ಮಾತಾಡುತ್ತಾರೆ ನಿಜ. ಆದರೆ ಅವರು ಮಾತಾಡುವ ವಿಷಯಗಳು ಹೆತ್ತವರು ಕೇಳಲು ಇಷ್ಟಪಡುವ ವಿಷಯಗಳಲ್ಲ. ನೈಜೀರಿಯಾದ ಎಡ್ನಾ ಎಂಬ ತಾಯಿ ನೆನಪಿಸುವುದು: “ಮಗಳಿಗೆ ಏನಾದರೂ ಕೆಲಸ ಹೇಳಿದ್ರೆ ನನಗೆ ಯಾಕೆ ಉಪದ್ರ ಕೊಡ್ತಿ ಎಂದು ಹೇಳಿಬಿಡ್ತಾಳೆ.” ಮೆಕ್ಸಿಕೊದ ರಾಮಾನ್‌ ಸಹ ತನ್ನ 16 ವರ್ಷದ ಮಗನ ಕುರಿತು ಇದನ್ನೇ ಅವಲೋಕಿಸುತ್ತಾ ಅನ್ನುವುದು: “ಪ್ರತಿದಿನ ನಮ್ಮ ಜಗಳಾಟ ಇದ್ದದ್ದೆ. ಅವನಿಗೆ ಏನಾದ್ರೂ ಕೆಲಸ ಹೇಳಿದ್ರೆ ತಟ್ಟನೆ ಏನಾದ್ರೂ ನೆವನ ಹೇಳಿ ತಪ್ಪಿಸಿಕೊಳ್ತಾನೆ.”

ಪ್ರತ್ಯುತ್ತರ ಕೊಡದ ಹದಿವಯಸ್ಕರೊಂದಿಗೆ ಸಂವಾದಿಸಲು ಪ್ರಯತ್ನಿಸುವುದು ಹೆತ್ತವರ ತಾಳ್ಮೆಗೆಡಿಸಬಲ್ಲದು. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 15:22) “ನನ್ನ ಮಗನ ಮನಸ್ಸಿನಲ್ಲಿ ಏನಿದೆ ಎಂದು ನನಗೆ ತಿಳಿಯದಿರುವಾಗ ಎಷ್ಟು ಸಿಟ್ಟುಬರುತ್ತದೆಂದರೆ ಗಟ್ಟಿಯಾಗಿ ಅರಚುವ ಎಂದನ್ನಿಸುತ್ತದೆ.” ಎಂದು ರಶ್ಯಾದ ಆನ ಎಂಬ ಒಂಟಿ ತಾಯಿಯು ಒಪ್ಪಿಕೊಳ್ಳುತ್ತಾಳೆ. ಸಂವಾದವು ಅತ್ಯಗತ್ಯವಾಗಿರುವ ಈ ಸಮಯದಲ್ಲೇ, ಯುವಜನರು ಮತ್ತು ಅವರ ಹೆತ್ತವರು ಉತ್ತಮ ಸಂವಾದ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ತೋರುವುದೇಕೆ?

ಅಡೆತಡೆಗಳನ್ನು ಗುರುತಿಸುವುದು

ಸಂವಾದ ಅಂದರೆ ಕೇವಲ ಮಾತುಕತೆಯಲ್ಲ. “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು” ಎಂದು ಯೇಸು ಹೇಳಿದನು. (ಲೂಕ 6:45) ಆದುದರಿಂದ ಉತ್ತಮ ಸಂವಾದದ ಮೂಲಕ ಇತರರಿಂದ ಕಲಿಯುತ್ತೇವೆ ಮತ್ತು ನಮ್ಮ ಬಗ್ಗೆಯೂ ಇತರರಿಗೆ ತಿಳಿಯಪಡಿಸುತ್ತೇವೆ. ಆದರೆ ಹದಿವಯಸ್ಕರಿಗೆ ತಮ್ಮ ಹೃದ-ಮನದ ವಿಷಯಗಳನ್ನು ಇತರರಿಗೆ ತಿಳಿಸುವುದು ಕಷ್ಟಕರವಾಗಿರಬಲ್ಲದು. ಯಾವಾಗಲೂ ಸರಾಗವಾಗಿ ಮಾತಾಡುತ್ತಿರುವ ಮಕ್ಕಳು ಸಹ ಹರೆಯವನ್ನು ಪ್ರವೇಶಿಸಿದಾಗ ತಟ್ಟನೆ ಮಿತಭಾಷಿಗಳೂ ಸಂಕೋಚ ಪಡುವವರೂ ಆಗಬಲ್ಲರು. ತಾವು ಎಲ್ಲರಿಗೂ ಕಾಣಿಸುವ ವೇದಿಕೆಯ ಮೇಲಿದ್ದೇವೆ, ತಾವು ಹೇಳುವುದನ್ನು ಮತ್ತು ಮಾಡುವುದನ್ನು ಎಲ್ಲರೂ ನೋಡುತ್ತಿದ್ದಾರೋ ಎಂಬಂತೆ ಹದಿವಯಸ್ಕರಿಗೆ ಅನಿಸುತ್ತದೆಂದು ಪರಿಣತರು ಹೇಳುತ್ತಾರೆ. ಎಲ್ಲರ ನೋಟಕ್ಕೆ ಬೀಳುವ ಆ ಒತ್ತಡವನ್ನು ಎದುರಿಸುವ ಬದಲು ಅದರಿಂದ ತಪ್ಪಿಸಿಕೊಂಡು ಒಂಟಿಯಾಗಿರಲು ಹದಿವಯಸ್ಕರು ಅಡೆತಡೆಗಳನ್ನು ನಿರ್ಮಿಸುತ್ತಾರೆ.

ಸಂವಾದವನ್ನು ತಡೆಯುವ ಇನ್ನೊಂದು ಅಡೆತಡೆಯು, ಹದಿವಯಸ್ಕರು ಸ್ವಾತಂತ್ರ್ಯವನ್ನು ಬಯಸುವುದೇ. ಇದನ್ನು ತಡೆಯ ಸಾಧ್ಯವಿಲ್ಲ ಏಕೆಂದರೆ ನಿಮ್ಮ ಮಗ/ಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಅದರಲ್ಲಿ ಕೆಲವೊಮ್ಮೆ ವ್ಯಕ್ತಿತ್ವ ವಿಕಸನಕ್ಕಾಗಿ ಕುಟುಂಬದಿಂದ ಪ್ರತ್ಯೇಕ ಉಳಿಯುವ ಸಂದರ್ಭವೂ ಕೂಡಿರಬಹುದು. ಆದರೆ ನಿಮ್ಮ ಹದಿವಯಸ್ಕನು ಮನೆಬಿಟ್ಟು ಹೋಗಲು ಸಮರ್ಥನೆಂದು ಇದರರ್ಥವಲ್ಲ. ಏಕೆಂದರೆ ಅವರಿಗೆ ಹಿಂದಿಗಿಂತ ಹೆಚ್ಚಾಗಿ ಈಗ ನಿಮ್ಮ ಅಗತ್ಯವಿದೆ. ಆದರೆ ಪ್ರೌಢತೆಗೆ ತಲುಪುವ ಮೊದಲೇ ಈ ಕಾರ್ಯಗತಿಯು ಪ್ರಾರಂಭಗೊಳ್ಳುತ್ತದೆ. ಪ್ರೌಢರಾಗುತ್ತಾ ಇರುವಾಗ ಅನೇಕ ಹದಿವಯಸ್ಕರು ತಮ್ಮ ಆಲೋಚನೆಗಳನ್ನು ಇತರರಿಗೆ ತಿಳಿಸುವ ಮುಂಚೆ ವಿಷಯಗಳನ್ನು ತಾವಾಗಿಯೇ ನಿರ್ಣಯಿಸಲು ಇಷ್ಟಪಡುತ್ತಾರೆ.

ಆದರೆ ಹದಿವಯಸ್ಕರು ತಮ್ಮ ಸಮವಯಸ್ಕರಿಂದ ವಿಷಯಗಳನ್ನು ಗುಪ್ತವಾಗಿಡುವುದು ವಿರಳ. ಮೆಕ್ಸಿಕೊದ ಜೆಸಿಕ ಎಂಬ ತಾಯಿಯು ಸಹ ಇದನ್ನೇ ಕಂಡುಕೊಂಡಳು. ಅವಳನ್ನುವುದು: “ನನ್ನ ಮಗಳು ಚಿಕ್ಕವಳಿದ್ದಾಗ ಏನಾದರೂ ಸಮಸ್ಯೆಯಿದ್ದಲ್ಲಿ ಯಾವಾಗಲೂ ನನ್ನ ಬಳಿಗೆ ಬರುತ್ತಿದ್ದಳು. ಆದರೆ ಈಗ ಅವಳು ಹೋಗುವುದು ಗೆಳತಿಯರ ಹತ್ತಿರ.” ಒಂದುವೇಳೆ ನಿಮ್ಮ ಮಕ್ಕಳೂ ಹೀಗೆ ಮಾಡುತ್ತಿರುವಲ್ಲಿ ಇದರರ್ಥ ಹೆತ್ತವರಾದ ನೀವು ಅವರಿಗೆ ಬೇಡವೆಂದಲ್ಲ. ಬಾಯಿಬಿಟ್ಟು ಹೇಳದಿದ್ದರೂ ಹದಿವಯಸ್ಕರು ತಮ್ಮ ಸ್ನೇಹಿತರ ಸಲಹೆಗಳಿಗಿಂತ ಹೆತ್ತವರ ಸಲಹೆಗಳನ್ನು ಹೆಚ್ಚು ಮಾನ್ಯ ಮಾಡುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾದರೆ ಸಂವಾದವು ಯಾವಾಗಲೂ ಉತ್ತಮವಾಗಿರುವಂತೆ ನೀವು ಹೇಗೆ ನೋಡಿಕೊಳ್ಳಬಲ್ಲಿರಿ?

ಸಫಲತೆಯ ಕೀಲಿಕೈಗಳು—ಅಡೆತಡೆಗಳನ್ನು ತೆಗೆದುಹಾಕುವುದು

ನೇರವಾದ ಉದ್ದ ಹೆದ್ದಾರಿಯಲ್ಲಿ ವಾಹನ ನಡೆಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ಅನೇಕ ಕಿಲೋಮೀಟರ್‌ ಪ್ರಯಾಣಿಸುವ ತನಕ ನಿಮ್ಮ ಸ್ಟಿಅರಿಂಗ್‌ಗೆ ಕೇವಲ ಸ್ವಲ್ಪವೇ ಹೊಂದಾಣಿಕೆ ಮಾಡಲಿಕ್ಕಿತ್ತು. ಆದರೆ ಈಗ ಫಕ್ಕನೆ ರಸ್ತೆಯ ಒಂದು ದೊಡ್ಡ ತಿರುವಿಗೆ ನೀವು ಬಂದಿದ್ದೀರಿ. ಕಾರು ರಸ್ತೆಯ ಮೇಲೆ ಉಳಿಯುವಂತೆ ನಿಮ್ಮ ಕಾರಿನ ಸ್ಟಿಅರಿಂಗನ್ನು ಪೂರಾ ರೀತಿಯಲ್ಲಿ ಸರಿಹೊಂದಿಸದೆ ಬೇರೆ ಉಪಾಯವೇ ಇಲ್ಲ. ನಿಮ್ಮ ಮಗ ಹದಿವಯಸ್ಕನಾದಾಗಲೂ ಹಾಗೆಯೇ. ಕೆಲವು ವರ್ಷಗಳ ತನಕ ಮಕ್ಕಳೊಂದಿಗಿನ ನಿಮ್ಮ ಸಂವಾದದಲ್ಲಿ ನೀವು ಸ್ವಲ್ಪವೇ ಹೊಂದಾಣಿಕೆ ಮಾಡಿದ್ದಿರಬಹುದು. ಆದರೆ ಈಗ ನಿಮ್ಮ ಮಗುವಿನ ಜೀವಿತದಲ್ಲಿ ಒಂದು ದೊಡ್ಡ ತಿರುವು ಬಂದಿದೆ. ಆ ತಿರುವನ್ನು ಸರಿಯಾಗಿ ದಾಟುವಂತೆ ನೀವು ನಿಮ್ಮ ಸಂವಾದದ ಶೈಲಿಯನ್ನು ಹೊಂದಿಸಿಕೊಳ್ಳಬೇಕು. ಈ ಕೆಳಗಿನ ಪ್ರಶ್ನೆಗಳನ್ನು ಸ್ವತಃ ನಿಮಗೆ ಕೇಳಿಕೊಳ್ಳಿ.

‘ನನ್ನ ಮಗ ಅಥವಾ ಮಗಳು ಸಂವಾದಕ್ಕೆ ಸಿದ್ಧರಿರುವಾಗ, ನಾನು ಸಿದ್ಧನೋ?’ “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ಎಂದು ಬೈಬಲನ್ನುತ್ತದೆ. (ಜ್ಞಾನೋಕ್ತಿ 25:11) ಈ ವಚನವು ಸ್ಪಷ್ಟಪಡಿಸುವಂತೆ, ತಕ್ಕ ಸಮಯದಲ್ಲಿ ಆಡುವ ಮಾತುಗಳೇ ಉತ್ತಮ ಕೀಲಿಕೈ. ದೃಷ್ಟಾಂತಕ್ಕೆ, ರೈತನು ತನ್ನ ಕೊಯ್ಲನ್ನು ಸಮಯಕ್ಕೆ ಮುಂಚೆ ಕೊಯ್ಯಸಾಧ್ಯವಿಲ್ಲ ಅಥವಾ ಅದನ್ನು ಮುಂದೂಡಲೂ ಸಾಧ್ಯವಿಲ್ಲ. ಬದಲಿಗೆ ಕೊಯ್ಲಿನ ಸಮಯ ಬಂದಾಗಲೇ ಅವನು ಅದನ್ನು ಕೊಯ್ಯಬೇಕು. ನಿಮ್ಮ ಹದಿವಯಸ್ಕರು ಸಹ ಒಂದು ನಿರ್ದಿಷ್ಟ ಸಮಯದಲ್ಲಿ ಮಾತಾಡಲು ಹೆಚ್ಚು ಮನಸ್ಸುಮಾಡಬಹುದು. ಆ ಸಂದರ್ಭವನ್ನು ಎಂದೂ ಕಳಕೊಳ್ಳಬೇಡಿ. ಆಸ್ಟ್ರೇಲಿಯಾದ ಫ್ರಾನ್ಸಸ್‌ ಎಂಬ ಒಂಟಿ ತಾಯಿಯು ಹೇಳುವುದು: “ಅನೇಕ ಸಲ ನನ್ನ ಮಗಳು ರಾತ್ರಿ ನನ್ನ ಬೆಡ್‌ ರೂಮಿಗೆ ಬಂದು ಕೆಲವೊಮ್ಮೆ ತಾಸಿನ ತನಕ ಇರುತ್ತಾಳೆ. ನನಗೆ ರಾತ್ರಿ ಹೆಚ್ಚು ಹೊತ್ತು ಎಚ್ಚರವಿರಲು ಕಷ್ಟಕರವಾಗಿದ್ದರೂ ಆ ಸಮಯದಲ್ಲಿ ನಾವು ಎಲ್ಲಾ ವಿಷಯಗಳ ಕುರಿತು ಮಾತಾಡಲು ಶಕ್ತರಾದೆವು.”

ಇದನ್ನು ಪ್ರಯತ್ನಿಸಿ: ನಿಮ್ಮ ಹದಿವಯಸ್ಕನು ಮಾತಾಡಲು ಮನಸ್ಸಿಲ್ಲದವನಾಗಿ ಕಾಣುವುದಾದರೆ, ಒಟ್ಟುಗೂಡಿ ಏನಾದರೂ ಮಾಡಲು ಪ್ರಯತ್ನಿಸಿ. ಉದಾಹರಣೆಗೆ, ಅವನ ಜೊತೆಯಲ್ಲಿ ವಾಕಿಂಗ್‌ಗೆ ಹೋಗಿ, ಒಟ್ಟಿಗೆ ಡ್ರೈವಿಂಗ್‌ ಮಾಡಿ, ಆಟಆಡಿ ಅಥವಾ ಮನೆಗೆಲಸ ಮಾಡಿ. ಹೆಚ್ಚಾಗಿ ಇಂತಹ ಸಂದರ್ಭಗಳು ಹದಿವಯಸ್ಕರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳುವಂತೆ ಪ್ರೇರೇಪಿಸುತ್ತವೆ.

‘ಮಾತುಗಳ ಹಿಂದಿರುವ ಅವರ ಭಾವನೆಗಳನ್ನು ನಾನು ಗ್ರಹಿಸುತ್ತೇನೋ?ಯೋಬ 12:11 ಹೇಳುವುದು: “ಅಂಗಳವು ಆಹಾರವನ್ನು ರುಚಿನೋಡುವ ಪ್ರಕಾರ ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.” ನಿಮ್ಮ ಮಗನು ಅಥವಾ ಮಗಳು ಏನು ಹೇಳುತ್ತಾರೋ ಅದನ್ನು ನೀವು ‘ವಿವೇಚಿಸುವ’ ಅಗತ್ಯ ಎಂದಿಗಿಂತಲೂ ಹೆಚ್ಚಾಗಿ ಈಗ ಇದೆ. ಹದಿವಯಸ್ಕರು ಏನಾದರೂ ಹೇಳುವಾಗ ಅದು ಸತ್ಯವೋ ಎಂಬಂತೆ ಹೇಳಿಬಿಡುತ್ತಾರೆ. ಉದಾಹರಣೆಗೆ, ನಿಮ್ಮ ಮಗನೋ ಮಗಳೋ “ನೀನು ನನ್ನನ್ನು ಯಾವಾಗಲೂ ಚಿಕ್ಕ ಮಗುವಿನ ಹಾಗೆ ನೋಡುತ್ತಿ!” “ನಾನು ಹೇಳುವುದನ್ನು ನೀನು ಕೇಳುವುದೇ ಇಲ್ಲ!” ಎಂದು ಹೇಳಬಹುದು. “ನಾನು ಯಾವಾಗ ಹಾಗೆ ಮಾಡಿದ್ದೇನೆ” ಎಂದು ನೀವು ವಾದ ಮಾಡುವ ಬದಲಾಗಿ, ಅಂಥ ಅರ್ಥದಲ್ಲಿ ಅವರು ಮಾತಾಡಲಿಲ್ಲ ಎಂಬುದನ್ನು ಗ್ರಹಿಸಿರಿ. ಉದಾಹರಣೆಗೆ, “ನೀನು ನನ್ನನ್ನು ಯಾವಾಗಲೂ ಮಗುವಿನ ಹಾಗೆ ನೋಡುತ್ತಿ!” ಎಂಬ ಮಾತಿನ ಅರ್ಥವು “ನೀನು ನನ್ನನ್ನು ನಂಬುವುದಿಲ್ಲ ಎಂದು ನನಗನಿಸುತ್ತದೆ” ಎಂದಾಗಿರಬಹುದು, “ನಾನು ಹೇಳುವುದನ್ನು ನೀನು ಕೇಳುವುದೇ ಇಲ್ಲ” ಎಂಬ ಮಾತಿನ ಅರ್ಥವು “ನನಗೆ ನಿಜವಾಗಿ ಹೇಗನಿಸುತ್ತಿದೆ ಎಂಬುದನ್ನು ನಾನು ನಿನಗೆ ಹೇಳಬಯಸುತ್ತೇನೆ” ಎಂದಾಗಿರಬಹುದು. ಆದ್ದರಿಂದ ಅವರ ಮಾತುಗಳ ಹಿಂದಿರುವ ಅರ್ಥವನ್ನು ಗ್ರಹಿಸಲು ಪ್ರಯತ್ನಿಸಿ.

ಇದನ್ನು ಪ್ರಯತ್ನಿಸಿ: ಹದಿವಯಸ್ಕನು ದೃಢವಾಗಿ ಅಥವಾ ಖಂಡಿತವಾಗಿ ಒಂದು ಹೇಳಿಕೆಯನ್ನು ಮಾಡುವಾಗ ಹೀಗನ್ನಿರಿ: “ನಿನ್ನ ಮನಸ್ಸಿಗೆ ನೋವಾಗಿದೆ ಅಂತ ನನಗೆ ಗೊತ್ತು, ನಿನ್ನನ್ನು ಮಗುವಿನಂತೆ ನೋಡುತ್ತೇನೆಂದು ನಿನಗ್ಯಾಕೆ ಅನಿಸ್ತಾ ಇದೆ, ನನಗೆ ಹೇಳು ಮಗನೇ.” ಮಧ್ಯೆ ಬಾಯಿಹಾಕದೆ ಅವರು ಹೇಳುವುದನ್ನೆಲ್ಲಾ ಕೇಳಿರಿ.

‘ನನ್ನ ಮಗನನ್ನು ಅಥವಾ ಮಗಳನ್ನು ಮಾತಾಡುವಂತೆ ಒತ್ತಾಯಮಾಡುವ ಮೂಲಕ ನನಗರಿವಿಲ್ಲದೇ ನಾನು ಸಂವಾದವನ್ನು ಕಷ್ಟಕರವಾಗಿ ಮಾಡುತ್ತಿದ್ದೇನೋ?’ ಬೈಬಲ್‌ ಹೀಗೆ ಹೇಳುತ್ತದೆ: “ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.” (ಯಾಕೋಬ 3:18) ಹದಿವಯಸ್ಕರು ಮಾತಾಡಲು ಮನಸ್ಸು ಮಾಡುವಂತೆ, ನಿಮ್ಮ ನಡೆನುಡಿಗಳ ಮೂಲಕ “ಸಮಾಧಾನದ” ಸನ್ನಿವೇಶವನ್ನು ಸೃಷ್ಟಿಸಿರಿ. ನೀವು ವಕೀಲನಂತೆ ನಿಮ್ಮ ಮಗುವನ್ನು ಬೆಂಬಲಿಸಬೇಕೆಂದು ನೆನಪಿಡಿರಿ. ಆದ್ದರಿಂದ ಒಂದು ವಿಷಯದ ಕುರಿತು ಮಕ್ಕಳೊಂದಿಗೆ ಮಾತಾಡುವಾಗ, ಅವರು ಹೇಳಿದ ವಿಷಯವು ತಪ್ಪೆಂದು ರುಜುಪಡಿಸಲು ಪ್ರತಿವಾದಿ ವಕೀಲನಂತೆ ಇರಲು ಹೆತ್ತವರು ಪ್ರಯತ್ನಿಸುವುದಿಲ್ಲ. “ವಿವೇಕಿ ಹೆತ್ತವರು ತಮ್ಮ ಹದಿವಯಸ್ಕರಿಗೆ ‘ನಿನಗೆ ಯಾವಾಗ ಬುದ್ಧಿ ಬರುತ್ತದೋ ಏನೋ’ ಅಥವಾ ‘ನಿನಗೆ ಎಷ್ಟು ಸಾರಿ ಹೇಳಬೇಕು?’ ಎಂಬಂಥ ಮಾತುಗಳನ್ನು ಹೇಳುವುದಿಲ್ಲ.” ಎಂದು ಕೊರಿಯದ ಆನ್‌ ಎಂಬ ತಂದೆ ಹೇಳುತ್ತಾನೆ. ಅವನು ಮತ್ತೂ ಹೇಳುವುದು: “ನಾನು ಸಹ ಅನೇಕ ಬಾರಿ ಇದೇ ತಪ್ಪನ್ನು ಮಾಡಿದೆ. ತದನಂತರ ನನಗೆ ತಿಳಿಯಿತೇನೆಂದರೆ ನಾನು ಅವರೊಂದಿಗೆ ಮಾತಾಡಿದ ರೀತಿ ಮತ್ತು ನಾನು ಏನು ಹೇಳುತ್ತಿದ್ದೆನೋ ಅದು ನನ್ನ ಮಕ್ಕಳಿಗೆ ಕಿರಿಕಿರಿ ಉಂಟುಮಾಡುತ್ತಿತ್ತು.”

ಇದನ್ನು ಪ್ರಯತ್ನಿಸಿ: ನಿಮ್ಮ ಹದಿವಯಸ್ಕನು ನಿಮ್ಮ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ತೋರಿಸದಿರುವಲ್ಲಿ ಬೇರೆ ವಿಧಾನವನ್ನು ಪ್ರಯತ್ನಿಸಿ. ಉದಾಹರಣೆಗೆ, ಇವತ್ತು ಏನೆಲ್ಲಾ ಮಾಡಿದಿ ಎಂದು ನಿಮ್ಮ ಮಗಳನ್ನು ಕೇಳುವ ಬದಲು ಸ್ವತಃ ನೀವೇ ಇವತ್ತು ಏನೆಲ್ಲಾ ಮಾಡಿದಿರೆಂದು ಹೇಳಿರಿ. ಆಗ ಅವಳು ಪ್ರತಿಕ್ರಿಯಿಸುತ್ತಾಳೋ ನೋಡಿರಿ. ಅಥವಾ ಯಾವುದೇ ವಿಚಾರದ ಕುರಿತು ಅವಳ ಅಭಿಪ್ರಾಯ ನೀವು ತಿಳಿಯಬಯಸುವಾಗ, ಅವಳ ಕಡೆಗೇ ಪ್ರಶ್ನೆಯನ್ನು ಕೇಂದ್ರೀಕರಿಸಬೇಡಿ. ಬೇರೆ ಕಡೆಗೆ ಗಮನ ಹೋಗುವಂಥ ಪ್ರಶ್ನೆಯ ಮೂಲಕ ಅದನ್ನು ಕೇಳಿರಿ. ಉದಾಹರಣೆಗೆ ಆ ವಿಷಯದ ಕುರಿತು ಅವಳ ಗೆಳತಿಯ ಅಭಿಪ್ರಾಯ ಏನೆಂದು ಕೇಳಬಹುದು. ಆ ಕುರಿತು ತನ್ನ ಗೆಳತಿಗೆ ಅವಳು ಯಾವ ಸಲಹೆ ಕೊಡಲು ಬಯಸುತ್ತಾಳೆಂದು ಕೇಳಿ.

ಹದಿವಯಸ್ಕರೊಂದಿಗೆ ಸಂವಾದಿಸುವುದು ಅಸಾಧ್ಯವಾದ ಕೆಲಸವೇನಲ್ಲ. ಆದರೆ ಮಕ್ಕಳ ಅಗತ್ಯಕ್ಕನುಸಾರ ನಿಮ್ಮ ಮಾತನಾಡುವ ರೀತಿಯನ್ನು ಹೊಂದಿಸಿಕೊಳ್ಳಿರಿ. ಹೀಗೆ ಮಾಡುವುದರಲ್ಲಿ ಸಫಲರಾದ ಇತರ ಹೆತ್ತವರೊಂದಿಗೆ ಮಾತಾಡಿರಿ. (ಜ್ಞಾನೋಕ್ತಿ 11:14) ನಿಮ್ಮ ಮಗನ ಅಥವಾ ಮಗಳ ಹತ್ತಿರ ಮಾತಾಡುತ್ತಿರುವಾಗ “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ . . . ಕೋಪಿಸುವದರಲ್ಲಿಯೂ ನಿಧಾನವಾಗಿ” ಇರ್ರಿ. (ಯಾಕೋಬ 1:19) ಎಲ್ಲಕ್ಕಿಂತಲೂ ಮುಖ್ಯವಾಗಿ, ನಿಮ್ಮ ಹದಿವಯಸ್ಕರನ್ನು ‘ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯೊಂದಿಗೆ’ ಬೆಳೆಸಲು ಪ್ರಯತ್ನಿಸುವುದನ್ನು ಎಂದೂ ಬಿಟ್ಟುಬಿಡಬೇಡಿ.—ಎಫೆಸ 6:4, NW. (w08 8/1)

ನಿಮ್ಮನ್ನೇ ಕೇಳಿಕೊಳ್ಳಿ . . .

ನನ್ನ ಮಗ ಅಥವಾ ಮಗಳು ಹದಿವಯಸ್ಕರಾದಾಗಿನಿಂದ ನಾನು ಅವರಲ್ಲಿ ಯಾವ ಬದಲಾವಣೆಗಳನ್ನು ಗಮನಿಸಿದ್ದೇನೆ?

ಮಾತನಾಡುವ ಶೈಲಿಯನ್ನು ನಾನು ಹೇಗೆ ಉತ್ತಮಗೊಳಿಸಬಲ್ಲೆ?

[ಪುಟ 20ರಲ್ಲಿರುವ ಚೌಕ]

ಹೆತ್ತವರಿಂದ ಸಲಹೆಗಳು

“ನಾವು ಬೇರೆಯವರೊಂದಿಗೆ ಇರುವಾಗ ನನ್ನ ಮಗ ಹೆಚ್ಚು ಸರಾಗವಾಗಿ ಮಾತಾಡುತ್ತಾನೆ. ತದನಂತರ ಅವರು ಚರ್ಚಿಸಿದ ಅದೇ ವಿಷಯದ ಕುರಿತು ಇನ್ನೂ ಹೆಚ್ಚನ್ನು ನಾವಿಬ್ಬರೇ ಇರುವಾಗ ಅವನೊಂದಿಗೆ ಮಾತಾಡುತ್ತೇನೆ.”—ಆಂಜೇಲಾ, ಇಟೆಲಿ.

“ಮಕ್ಕಳನ್ನು ಸ್ವಲ್ಪ ಹೊಗಳಿ ಅವರನ್ನು ನಾವೆಷ್ಟು ಪ್ರೀತಿಸುತ್ತೇವೆಂದು ಹೇಳುವುದಾದರೆ ಅವರು ಮನಸ್ಸುಬಿಚ್ಚಿ ಮಾತನಾಡಲು ಇಷ್ಟಪಡುವುದನ್ನು ನಾವು ಕಂಡುಕೊಂಡಿದ್ದೇವೆ.”—ಡಾನ್ಸೀಸೆಟೀ, ಬ್ರೆಸಿಲ್‌.

“ಬೈಬಲ್‌ ಮಟ್ಟಗಳಿಗನುಸಾರ ಬೆಳೆಸಲ್ಪಟ್ಟ ಪ್ರೌಢ ಯುವಜನರೊಂದಿಗೆ ನಾನು ಮಾತನಾಡಿ, ಹದಿವಯಸ್ಕರಾಗಿರುವಾಗ ಅವರಿಗೆ ಹೇಗನಿಸುತ್ತಿತ್ತು ಮತ್ತು ಅವರ ಹೆತ್ತವರು ಹೇಗೆ ಸಹಾಯಮಾಡಿದರು ಎಂದು ಕೇಳಿದೆ. ಅದು ನಿಜವಾಗಿಯೂ ನನಗೆ ಸಹಾಯಕರ ಮಾಹಿತಿಯನ್ನು ಕೊಟ್ಟಿತು.”—ಡಾನ್‌, ಬ್ರಿಟನ್‌.