ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’

ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’

ಅವರ ನಂಬಿಕೆಯನ್ನು ಅನುಕರಿಸಿರಿ

ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’

ಮರಿಯಳು ಕತ್ತೇಮರಿಯ ಮೇಲೆ ಹತ್ತಿ ಅತ್ತಿತ್ತ ಸರಿಯುತ್ತಾ ನೇರವಾಗಿ ಕೂತುಕೊಂಡಳು. ಆಕೆ ಸವಾರಿ ಮಾಡುತ್ತ ಅನೇಕ ತಾಸುಗಳ ಪಯಣವನ್ನು ಮಾಡಿದ್ದಳು. ತುಸು ಮುಂದಿನಿಂದ ಯೋಸೇಫನು ದಾರಿನಡೆಯುತ್ತಿದ್ದನು. ಅವರ ಪ್ರಯಾಣವು ದೂರದ ಬೇತ್ಲೆಹೇಮಿನ ಕಡೆಗಿತ್ತು. ತನ್ನ ಗರ್ಭದಲ್ಲಿದ್ದ ಮಗು ಚಲಿಸಿದ ಅನುಭವವು ಮರಿಯಳಿಗೆ ಇನ್ನೊಮ್ಮೆ ಆಯಿತು.

ಮರಿಯಳು ದಿನತುಂಬಿದ ಗರ್ಭಿಣಿಯಾಗಿದ್ದಳು. ಬೈಬಲ್‌ ಆಕೆಯ ಈ ಸ್ಥಿತಿಯನ್ನು “ಪೂರ್ಣಗರ್ಭಿಣಿ” ಎಂದು ವರ್ಣಿಸುತ್ತದೆ. (ಲೂಕ 2:⁠6) ಈ ದಂಪತಿ ಪಯಣಿಸುವಾಗ ಹೊಲಗಳನ್ನು ದಾಟುತ್ತ ಹೋದಂತೆ, ಉಳುತ್ತಾ ಬಿತ್ತುತ್ತಾ ಇದ್ದ ಕೆಲವು ರೈತರು ತಮ್ಮ ಕೆಲಸವನ್ನು ಬಿಟ್ಟು ಅವರತ್ತ ನೋಡಿದ್ದಿರಬೇಕು ಮತ್ತು ಈ ಸ್ತ್ರೀ ಇಂಥಾ ಸ್ಥಿತಿಯಲ್ಲಿ ಏಕೆ ಪ್ರಯಾಣಿಸುತ್ತಿದ್ದಾಳೆ ಎಂದು ಪ್ರಾಯಶಃ ಯೋಚಿಸಿದ್ದಿರಬೇಕು. ನಜರೇತಿನ ತನ್ನ ಮನೆಯಿಂದ ಇಷ್ಟು ದೂರ ಪಯಣಿಸುವಂತೆ ಮರಿಯಳನ್ನು ಯಾವುದು ನಡಿಸಿದ್ದಿರಬೇಕು?

ಕೆಲವು ತಿಂಗಳುಗಳ ಮೊದಲು ಈ ಯೆಹೂದಿ ಯುವತಿ ಮಾನವ ಇತಿಹಾಸದಲ್ಲೇ ಅದ್ವಿತೀಯವಾದ ಒಂದು ನೇಮಕವನ್ನು ಪಡೆದಳು. ಅದೇನೆಂದರೆ, ಮೆಸ್ಸೀಯನಾಗಲಿದ್ದ ದೇವಕುಮಾರನನ್ನು ಆಕೆ ಹೆರಲಿಕ್ಕಿದ್ದಳು! (ಲೂಕ 1:35) ಹೆರುವ ಸಮಯ ಹತ್ತರಿಸುತ್ತಿದ್ದಾಗ, ಈ ಪ್ರಯಾಣವನ್ನು ಮಾಡುವ ಅಗತ್ಯ ಉಂಟಾಯಿತು. ಈ ಮಧ್ಯೆ, ಮರಿಯಳು ತನ್ನ ನಂಬಿಕೆಗೆ ಸವಾಲನ್ನೊಡ್ಡುವ ಅನೇಕ ವಿಷಯಗಳನ್ನು ಎದುರಿಸಿದಳು. ಆಧ್ಯಾತ್ಮಿಕವಾಗಿ ದೃಢವಾಗಿ ಉಳಿಯಲು ಆಕೆಗೆ ಯಾವುದು ಸಹಾಯಮಾಡಿತೆಂದು ನಾವೀಗ ನೋಡೋಣ.

ಬೇತ್ಲೆಹೇಮಿಗೆ ಪಯಣ

ಪಯಣಿಸುತ್ತಿದ್ದವರು ಯೋಸೇಫ ಮತ್ತು ಮರಿಯ ಮಾತ್ರವೇ ಅಲ್ಲ. ಕೈಸರ ಔಗುಸ್ತನು ಆಗ ತಾನೆ ಹೊರಡಿಸಿದ ಒಂದು ಆಜ್ಞೆಗನುಸಾರ ದೇಶದಲ್ಲಿ ನೋಂದಣಿ ನಡೆಯಬೇಕಾಗಿತ್ತು. ಇದಕ್ಕಾಗಿ ಜನರು ತಮ್ಮ ತಮ್ಮ ಊರುಗಳಿಗೆ ಹೋಗಬೇಕಾಗಿತ್ತು. ಆಗ ಯೋಸೇಫನು ಏನು ಮಾಡಿದನು? ಆ ವಿಷಯದಲ್ಲಿ ವೃತ್ತಾಂತ ಹೇಳುವುದು: “ಯೋಸೇಫನು ಸಹ ತಾನು ದಾವೀದನ ಮನೆತನದವನೂ ಗೋತ್ರದವನೂ ಆಗಿದ್ದದರಿಂದ ಹೆಸರುಬರಸಿಕೊಳ್ಳುವದಕ್ಕಾಗಿ . . . ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದನು.”​—⁠ಲೂಕ 2:​1-4.

ಈ ಸಮಯದಲ್ಲಿ ಕೈಸರನು ಕೊಟ್ಟ ಆಜ್ಞೆ ಆಕಸ್ಮಿಕ ಸಹಘಟನೆಯಾಗಿರಲಿಲ್ಲ. ಯಾಕೆಂದರೆ ಬೇತ್ಲೆಹೇಮಿನಲ್ಲಿ ಮೆಸ್ಸೀಯನಾದ ಯೇಸು ಜನಿಸುವನೆಂದು ಏಳುನೂರು ವರ್ಷಗಳ ಹಿಂದೆಯೇ ಮುಂತಿಳಿಸಲಾಗಿತ್ತು. ಆದರೆ ಏನಾಯಿತೆಂದರೆ ನಜರೇತಿನಿಂದ ಕೇವಲ 11 ಕಿ.ಮೀ. ದೂರದಲ್ಲಿ ಬೇತ್ಲೆಹೇಮ್‌ ಎಂಬ ಹೆಸರಿನ ಊರು ಇತ್ತು. ಆದರೆ ಮೆಸ್ಸೀಯನು ಹುಟ್ಟಲಿರುವ ಸ್ಥಳವು ‘ಎಫ್ರಾತದ ಬೇತ್ಲೆಹೇಮ್‌’ ಎಂದು ಪ್ರವಾದನೆಯು ನಿರ್ದಿಷ್ಟವಾಗಿ ಹೇಳಿತ್ತು. (ಮೀಕ 5:⁠2) ಈಗಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ದಕ್ಷಿಣದ ಆ ಚಿಕ್ಕ ಬೇತ್ಲೆಹೇಮ್‌ ಹಳ್ಳಿಯು ನಜರೇತಿನಿಂದ ಗುಡ್ಡಗಾಡಿನ 150 ಕಿ.ಮೀ.ಗಳಷ್ಟು ದೂರದಲ್ಲಿತ್ತು. ಯೋಸೆಫನನ್ನು ಕರೆಯಲಾದದ್ದು ಈ ಬೇತ್ಲೆಹೇಮಿಗೇ, ಏಕೆಂದರೆ ಅದು ಅರಸನಾದ ದಾವೀದನ ಪೂರ್ವಜರ ಬೀಡಾಗಿತ್ತು. ಯೋಸೇಫನೂ ಮರಿಯಳೂ ಅದೇ ಕುಟುಂಬಕ್ಕೆ ಸೇರಿದವರಾಗಿದ್ದರು.

ಆದರೆ ಬೇತ್ಲೆಹೇಮಿಗೆ ಅಷ್ಟು ದೂರ ಪ್ರಯಾಣಿಸುವ ಯೋಸೇಫನ ನಿರ್ಣಯವನ್ನು ಮರಿಯಳು ಒಪ್ಪುತ್ತಿದ್ದಳೊ? ಹೇಗೆಂದರೂ, ಅದು ಆಕೆಗೆ ಒಂದು ಕಷ್ಟಕರವಾದ ಪ್ರಯಾಣವಾಗುತ್ತಿತ್ತು. ಅದು ಚಳಿಗಾಲದ ಆರಂಭ ಹಾಗೂ ಬೇಸಗೆಯ ಕೊನೆಯಾಗಿದ್ದುದರಿಂದ ಅಲ್ಪ ಸ್ಪಲ್ಪ ಮಳೆಯೂ ಬರುತ್ತಿದ್ದಿರಬೇಕು. ಅಷ್ಟೇ ಅಲ್ಲ, ‘ಗಲಿಲಾಯದಿಂದ ಮೇಲೇರುತ್ತ’ ಎಂದು ಬೈಬಲ್‌ನಲ್ಲಿ ಹೇಳಿರುವ ಪದಗಳು ಸೂಕ್ತವಾಗಿದ್ದವು; ಏಕೆಂದರೆ ಬೇತ್ಲೆಹೇಮ್‌ 760 ಮೀಟರ್‌ಗಳಿಗೂ ಹೆಚ್ಚು ಎತ್ತರದಲ್ಲಿತ್ತು. ಹಲವಾರು ದಿನಗಳ ಪ್ರಯಾಣದ ಕೊನೆಯು ತುಂಬಾ ಪ್ರಯಾಸಕರ. ಮಾತ್ರವಲ್ಲ ಆ ಪ್ರಯಾಣ ಮಾಮೂಲಿಗಿಂತ ಹೆಚ್ಚು ಸಮಯವನ್ನು ತಕ್ಕೊಂಡಿದ್ದಿರಬೇಕು, ಏಕೆಂದರೆ ಮರಿಯಳ ದೇಹಸ್ಥಿತಿಯಿಂದಾಗಿ ಆಕೆಗೆ ಅನೇಕ ಬಾರಿ ವಿಶ್ರಾಂತಿ ಬೇಕಿದ್ದಿರಬಹುದು. ದಿನತುಂಬಿದ ಗರ್ಭಿಣಿಯಾಗಿದ್ದ ಆ ಯುವತಿ ತನ್ನ ಮನೆಯಲ್ಲಿಯೇ ಇರಬೇಕೆಂದು ಹಂಬಲಿಸಿದ್ದಿರುವುದು ಸ್ವಾಭಾವಿಕ. ಏಕೆಂದರೆ ಪ್ರಸವವೇದನೆ ಪ್ರಾರಂಭಿಸುವಾಗ ಆಕೆಗೆ ಸಹಾಯಮಾಡಲು ಕುಟುಂಬದವರು ಮತ್ತು ಮಿತ್ರರು ಸಿದ್ಧರಾಗಿರುತ್ತಿದ್ದರು. ಈ ಕಾರಣಗಳಿಂದ, ಈ ಪ್ರಯಾಣಕ್ಕೆ ಆಕೆಗೆ ಧೈರ್ಯದ ಆವಶ್ಯಕತೆಯಿತ್ತೆಂಬುದು ನಿಸ್ಸಂದೇಹ.

ಹೀಗಿದ್ದರೂ, ಯೋಸೇಫನು “ಹೆಸರುಬರಸಿಕೊಳ್ಳುವದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಮರಿಯಳ ಸಂಗಡ” ಹೋದನೆಂದು ಬೈಬಲ್‌ ಲೇಖಕ ಲೂಕನು ಹೇಳುತ್ತಾನೆ. (ಲೂಕ 2:​4, 5) ಯೋಸೇಫನ ಹೆಂಡತಿಯಾಗಿದ್ದ ಮರಿಯಳು ತನ್ನ ನಿರ್ಣಯಗಳಲ್ಲಿ ಬದಲಾವಣೆಯನ್ನು ಮಾಡುವ ಅಗತ್ಯವಿತ್ತು. ಆಕೆ ತನ್ನ ಪತಿಯನ್ನು ಆಧ್ಯಾತ್ಮಿಕ ಶಿರಸ್ಸಾಗಿ ವೀಕ್ಷಿಸಿ, ಅವನಿಗೆ ಸಹಕಾರಿಣಿ ಆಗಿರಬೇಕೆಂಬ ದೇವರು ನೇಮಿಸಿದ ಪಾತ್ರಕ್ಕೆ ತಲೆಬಾಗಿ ಯೋಸೇಫನ ನಿರ್ಣಯಗಳನ್ನು ಬೆಂಬಲಿಸಿದಳು. * ಹೀಗೆ ತನ್ನ ನಂಬಿಕೆಯ ಮೇಲೆ ಬರಬಹುದಾಗಿದ್ದ ಸವಾಲನ್ನು ಮರುಮಾತಿಲ್ಲದ ವಿಧೇಯತೆಯ ಮೂಲಕ ನಿಭಾಯಿಸಿದಳು.

ಮರಿಯಳು ವಿಧೇಯಳಾಗಲು ಇನ್ನಾವುದು ಆಕೆಯನ್ನು ಪ್ರಚೋದಿಸಿದ್ದಿರಬಹುದು? ಮೆಸ್ಸೀಯನ ಜನ್ಮಸ್ಥಳ ಬೇತ್ಲೆಹೇಮ್‌ ಎಂಬ ಪ್ರವಾದನೆಯ ಕುರಿತು ಆಕೆಗೆ ತಿಳಿದಿತ್ತೊ? ಬೈಬಲ್‌ ಆ ವಿಷಯದಲ್ಲಿ ಏನೂ ತಿಳಿಸುವುದಿಲ್ಲ. ಆದರೂ ಆ ಪ್ರವಾದನೆಯ ಕುರಿತು ಅವಳಿಗೆ ಗೊತ್ತಿರಲಿಲ್ಲ ಎಂದು ಹೇಳಸಾಧ್ಯವಿಲ್ಲ. ಏಕೆಂದರೆ ಆ ನಿಜಸಂಗತಿಯು ಧಾರ್ಮಿಕ ಮುಖಂಡರಿಗೆ ಹಾಗೂ ಜನಸಾಮಾನ್ಯರಿಗೆ ಸಹ ತಿಳಿದಿತ್ತು. (ಮತ್ತಾಯ 2:​1-7; ಯೋಹಾನ 7:​40-42) ಶಾಸ್ತ್ರಗ್ರಂಥದ ವಿಷಯದಲ್ಲಿ ಮರಿಯಳಿಗೆ ಜ್ಞಾನವಿತ್ತು. (ಲೂಕ 1:​46-55) ಅವಳು ತನ್ನ ಗಂಡನಿಗೆ ವಿಧೇಯಳಾಗಿ ಇಲ್ಲವೆ ಸರಕಾರದ ಆಜ್ಞೆಯ ಕಾರಣದಿಂದ ಅಥವಾ ಇವೆರಡೂ ಕಾರಣಗಳಿಂದ ಬೇತ್ಲೆಹೇಮಿಗೆ ಹೋಗಿದ್ದಿರಲಿ, ಆಕೆ ಇಟ್ಟ ಮಾದರಿ ನಿಜವಾಗಿಯೂ ವಿಶ್ವಸನೀಯವಾಗಿತ್ತು. ಪುರುಷರಾಗಲಿ ಸ್ತ್ರೀಯರಾಗಲಿ ಅವರು ತೋರಿಸುವ ದೀನಭಾವದ ವಿಧೇಯತೆಯನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ. ಅಧೀನತೆ ಎಂಬ ಗುಣವು ಅತಿಯಾಗಿ ದುರ್ಲಕ್ಷಿಲ್ಪಡುತ್ತಿರುವ ಈ ದಿನಗಳಲ್ಲಿ, ಮರಿಯಳ ಮಾದರಿಯು ನಂಬಿಗಸ್ತ ಜನರೆಲ್ಲರಿಗೆ ಒಂದು ಹೊಳೆಯುವ ಮಾದರಿಯಾಗಿದೆ.

ಕ್ರಿಸ್ತನ ಜನನ

ಮರಿಯ ಬೇತ್ಲೆಹೇಮನ್ನು ದೂರದಿಂದ ದೃಷ್ಟಿಸಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬೇಕು. ಅವರು ಗುಡ್ಡಗಾಡನ್ನು ಹತ್ತಿ, ಕೊಯ್ಲಿಗೆ ತಯಾರಾಗಿದ್ದ ಆಲಿವ್‌ ತೋಟಗಳನ್ನು ದಾಟಿದಾಗ, ಆ ಚಿಕ್ಕ ಹಳ್ಳಿಯ ಇತಿಹಾಸದ ಕುರಿತು ಮರಿಯ ಮತ್ತು ಯೋಸೇಫರು ಯೋಚಿಸಿದ್ದಿರಬೇಕು. ಪ್ರವಾದಿಯಾದ ಮೀಕನು ಹೇಳಿದಂತೆ ಅದು ಯೂದಾಯದ ಪಟ್ಟಣಗಳಲ್ಲಿ ಅತಿ ಚಿಕ್ಕದಾಗಿತ್ತು. ಆದರೂ ಒಂದು ಸಾವಿರ ವರುಷಗಳ ಮುಂಚೆ ಅದು ಬೋವಜ, ನವೋಮಿ ಮತ್ತು ದಾವೀದನ ಜನ್ಮಸ್ಥಳವಾಗಿತ್ತು.

ಆ ಹಳ್ಳಿಯಲ್ಲಿ ಕಿಕ್ಕಿರಿದ ಜನಸಂದಣಿಯಿತ್ತು. ಇತರರು ತಮ್ಮ ಹೆಸರು ಬರೆಯಿಸಿಕೊಳ್ಳಲು ಮೊದಲೇ ಬಂದಿದ್ದುದರಿಂದ ಛತ್ರದಲ್ಲಿ ಯೋಸೇಫ ಮರಿಯಳಿಗೆ ಸ್ಥಳವಿರಲಿಲ್ಲ. * ಆ ರಾತ್ರಿ ತಂಗಲು ಒಂದು ಗೋದಲಿಯಲ್ಲದೆ ಇನ್ನಾವ ಆಯ್ಕೆಯೂ ಇರಲಿಲ್ಲ. ಮರಿಯಳು ಪ್ರಥಮ ಬಾರಿ ತೀವ್ರ ನೋವನ್ನು ಅನುಭವಿಸುವುದನ್ನೂ ಅದು ಹೆಚ್ಚಾಗುತ್ತಾ ಬರುವುದನ್ನೂ ಕಂಡಾಗ ಯೋಸೇಫನಿಗಾದ ಕಳವಳವನ್ನು ನಾವು ಊಹಿಸಬಹುದು. ಅನನುಕೂಲ ಸ್ಥಳವಾದ ಈ ಗೋದಲಿಯಲ್ಲಿಯೇ ಅವಳಿಗೆ ಪ್ರಸವವೇದನೆ ಆರಂಭವಾಗಿತ್ತು.

ಮರಿಯಳು ಅನುಭವಿಸಿದ ಸ್ಥಿತಿಗಾಗಿ ಎಲ್ಲೆಲ್ಲಿಯೂ ಇರುವ ಸ್ತ್ರೀಯರು ಅನುಭೂತಿ ತೋರಿಸಬಲ್ಲರು. ಬಾಧ್ಯತೆಯಾಗಿ ಬಂದ ಪಾಪದ ಕಾರಣ ಸ್ತ್ರೀಯರು ಮಕ್ಕಳನ್ನು ಹೆರುವಾಗ ತೀವ್ರನೋವನ್ನು ಅನುಭವಿಸುವರೆಂದು ಸುಮಾರು 4,000 ವರುಷಗಳ ಹಿಂದೆಯೇ ಯೆಹೋವ ದೇವರು ಮುಂತಿಳಿಸಿದ್ದನು. (ಆದಿಕಾಂಡ 3:16) ಮರಿಯಳಿಗೆ ಸಹ ಈ ನೋವಿನಿಂದ ವಿನಾಯಿತಿ ಇರಲಿಲ್ಲ. ಲೂಕನ ವೃತ್ತಾಂತ ಈ ದೃಶ್ಯದ ಹಿಂದಿರುವ ಯಾವುದೇ ವಿಷಯವನ್ನು ತಿಳಿಸದೆ “ಆಕೆಯು ತನ್ನ ಚೊಚ್ಚಲುಮಗನನ್ನು” ಹೆತ್ತಳೆಂದು ಮಾತ್ರ ಹೇಳುತ್ತದೆ. (ಲೂಕ 2:⁠7) ನಿಜ, ಮರಿಯಳ “ಚೊಚ್ಚಲುಮಗನು” ಹುಟ್ಟಿದ್ದನು. ಕಡಿಮೆಪಕ್ಷ ಅವಳ ಏಳು ಮಂದಿ ಮಕ್ಕಳಲ್ಲಿ ಜ್ಯೇಷ್ಠನ ಜನನವಾಗಿತ್ತು. (ಮಾರ್ಕ 6:⁠3) ಈ ಮಗನು ಸದಾ ವಿಶಿಷ್ಟ ಪುತ್ರನಾಗಿರಲಿದ್ದನು. ಏಕೆಂದರೆ ಇವನು ಮರಿಯಳ ಜ್ಯೇಷ್ಠಪುತ್ರನಷ್ಟೇ ಅಲ್ಲ, ಯೆಹೋವ ದೇವರ ‘ಜ್ಯೇಷ್ಠಪುತ್ರನೂ’ ಏಕಜಾತ ಕುಮಾರನೂ ಆಗಿದ್ದನು.​—⁠ಕೊಲೊಸ್ಸೆ 1:⁠15.

ಈ ಹಂತದಲ್ಲಿ, ಲೂಕನ ವೃತ್ತಾಂತವು ಒಂದು ಜನಪ್ರಿಯ ವಿವರಣೆಯನ್ನು ಸೇರಿಸುತ್ತದೆ: “ಆಕೆ . . . ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ . . . ಗೋದಲಿಯಲ್ಲಿ ಮಲಗಿಸಿದಳು.” (ಲೂಕ 2:⁠7) ಯೇಸುವಿನ ಜನನದ ಕುರಿತ ನಾಟಕಗಳು, ಕಲಾಕೃತಿಗಳು ಮತ್ತು ಭೂಮಿಯಾದ್ಯಂತದ ದೃಶ್ಯಗಳು ಈ ಸಂದರ್ಭವನ್ನು ಭಾವುಕವಾಗಿಸುತ್ತವೆ. ಆದರೆ ನಿಜಸಂಗತಿಯೇನೆಂದು ನೋಡಿ. ಗೋದಲಿಯು ಮೇವು ಹಾಕುವ ಸ್ಥಳ. ಬೇಸಾಯದ ಪ್ರಾಣಿಗಳು ಆ ಬಾನೆಯಲ್ಲಿ ತಿನ್ನುತ್ತವೆ. ಈ ಕುಟುಂಬ ಶುದ್ಧಗಾಳಿಯಿರದ ಅಂಥ ಒಂದು ಹಟ್ಟಿಯಲ್ಲಿ ತಂಗಿತ್ತು. ಆರೋಗ್ಯದ ದೃಷ್ಟಿಯಲ್ಲಿ ಆ ಸ್ಥಳವು ಅಂದೂ ಇಂದೂ ಒಂದು ಒಳ್ಳೆಯ ಸ್ಥಳವಲ್ಲ. ಒಂದುವೇಳೆ ಬೇರೆ ಸ್ಥಳ ಲಭ್ಯವಿರುತ್ತಿದ್ದರೆ, ಇಂಥ ಸ್ಥಳವನ್ನು ಯಾವ ಹೆತ್ತವರಾದರೂ ಆರಿಸಿಕೊಳ್ಳುತ್ತಿದ್ದರೋ? ಹೆತ್ತವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ಬಯಸುತ್ತಾರಲ್ಲಾ. ಹೀಗಿರುವಾಗ, ಮರಿಯ ಯೋಸೇಫರು ದೇವಪುತ್ರನ ಜನನಕ್ಕೆ ಎಷ್ಟು ಉತ್ತಮ ಸ್ಥಳವನ್ನು ಆರಿಸಿಕೊಳ್ಳಲು ಬಯಸಿದ್ದಿರಬೇಕು!

ಆದರೂ, ತಮ್ಮ ಅನನುಕೂಲತೆಗಳಿಂದಾಗಿ ಅವರು ಕಹಿಮನಸ್ಕರಾಗಲಿಲ್ಲ. ತಮಲ್ಲಿ ಏನು ಇತ್ತೋ ಅದನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಉದಾಹರಣೆಗೆ, ಮರಿಯಳು ತಾನೇ ಕೂಸನ್ನು ನೋಡಿಕೊಂಡಳು. ಅದನ್ನು ಬಟ್ಟೆಯಿಂದ ಮೃದುವಾಗಿ ಬಿಗಿದು ಬೆಚ್ಚಗಾಗಿಯೂ ಸುಖವಾಗಿಯೂ ನಿದ್ದೆಹೋಗುವಂತೆ ಮೆಲ್ಲನೆ ಗೋದಲಿಯಲ್ಲಿ ಮಲಗಿಸಿದಳು. ಮರಿಯಳು ತನ್ನ ಸದ್ಯದ ಪರಿಸ್ಥಿತಿಗಳ ಕುರಿತು ಚಿಂತೆಯನ್ನು ಮಾಡದೆ, ಮಗುವಿಗೆ ಯಾವುದು ಉತ್ತಮವೋ ಅದನ್ನು ಮಾಡುವುದರಲ್ಲಿ ನಿರತಳಾದಳು. ಈ ಮಗುವನ್ನು ಆಧ್ಯಾತ್ಮಿಕವಾಗಿ ಪರಿಪಾಲಿಸುವುದೇ ಅತಿ ಪ್ರಾಮುಖ್ಯ ಕೆಲಸವಾಗಿದೆ ಎಂದು ಮರಿಯ ಯೋಸೇಫರಿಬ್ಬರೂ ಅರಿತಿದ್ದರು. (ಧರ್ಮೋಪದೇಶಕಾಂಡ 6:​6-8) ಆಧ್ಯಾತ್ಮಿಕ ಕೊರತೆಯುಳ್ಳ ಲೋಕದಲ್ಲಿ ಇಂದು ತಮ್ಮ ಮಕ್ಕಳನ್ನು ಪರಿಪಾಲಿಸುವಾಗ ವಿವೇಚನೆಯುಳ್ಳ ಹೆತ್ತವರು ಇದೇ ರೀತಿಯ ಆದ್ಯತೆಗಳನ್ನು ಬೆಳೆಸಿಕೊಳ್ಳುತ್ತಾರೆ.

ಪ್ರೋತ್ಸಾಹದಾಯಕ ಭೇಟಿ

ಥಟ್ಟನೆ ಕೇಳಿಬಂದ ಒಂದು ಗದ್ದಲ ಪ್ರಶಾಂತ ದೃಶ್ಯವನ್ನು ಕದಡಿಸಿತು! ವಿಶೇಷವಾಗಿ ಮಗುವನ್ನೂ ತಾಯಿತಂದೆಯನ್ನೂ ನೋಡಲು ಅತ್ಯಾತುರದಿಂದ ಆ ಹಟ್ಟಿಯೊಳಗೆ ನುಗ್ಗಿದರು ಕುರುಬರು. ಅವರು ಹರ್ಷೋಲ್ಲಾಸ ತುಂದಿಲರಾಗಿದ್ದರು. ಅವರ ಮುಖದಲ್ಲಿ ಸಂತಸವು ಹೊರಚಿಮ್ಮುತ್ತಿತ್ತು. ಹೊಲದಲ್ಲಿ ತಮ್ಮ ಕುರಿಹಿಂಡುಗಳೊಂದಿಗೆ ಇದ್ದ ಅವರು ತರಾತುರಿಯಿಂದ ಹೊರಟುಬಂದಿದ್ದರು. * ಬೆರಗಾಗಿ ಅವರನ್ನೇ ನೋಡುತ್ತಿದ್ದ ಮರಿಯ ಮತ್ತು ಯೋಸೇಫನಿಗೆ ಕುರುಬರು ಆಗತಾನೇ ತಮಗಾಗಿದ್ದ ಅದ್ಭುತಕರ ಅನುಭವವನ್ನು ತಿಳಿಸಿದರು. ಹೊಲದಲ್ಲಿ ರಾತ್ರಿವೇಳೆ ಕುರಿಗಳನ್ನು ಕಾಯುತ್ತಿದ್ದಾಗ ಫಕ್ಕನೆ ಒಬ್ಬ ದೇವದೂತನು ಅವರಿಗೆ ಕಾಣಿಸಿಕೊಂಡಿದ್ದನು. ಯೆಹೋವನ ಪ್ರಭೆಯು ಸುತ್ತಲೂ ಹೊಳೆಯುತ್ತಿದ್ದಾಗ, ಕ್ರಿಸ್ತನು ಅಥವಾ ಮೆಸ್ಸೀಯನು ಜನಿಸಿದ್ದಾನೆಂದು ಆ ದೇವದೂತನು ಘೋಷಿಸುತ್ತಾ, ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವುದನ್ನು ಕಾಣುವಿರಿ ಎಂದು ಹೇಳಿದ್ದನು. ಆಗ ಇನ್ನೂ ಹೆಚ್ಚು ವಿಸ್ಮಯಕರ ಸಂಗತಿಯೊಂದು ನಡೆಯಿತು. ಕೂಡಲೇ ಆ ದೂತನ ಸಂಗಡ ದೊಡ್ಡ ದೇವದೂತ ಗಣವು ಕಾಣಿಸಿಕೊಂಡು ಯೆಹೋವನ ಮಹಿಮೆಯನ್ನು ಕೊಂಡಾಡುತ್ತಾ ಏಕಕಂಠದಿಂದ ಸ್ತುತಿಹಾಡಿತ್ತು.

ಆದ್ದರಿಂದ, ಈ ದೀನರಾದ ಕುರುಬರು ಬೇತ್ಲೆಹೇಮಿಗೆ ತರಾತುರಿಯಿಂದ ಧಾವಿಸಿ ಬಂದದ್ದರಲ್ಲಿ ಆಶ್ಚರ್ಯವೇನಿಲ್ಲ! ಆ ನವಜನಿತ ಕೂಸು ದೇವದೂತನು ವಿವರಿಸಿದಂತೆಯೇ ಗೋದಲಿಯಲ್ಲಿ ಮಲಗಿರುವುದನ್ನು ನೋಡಿ ಅವರು ಅತ್ಯಂತ ಪುಳಕಿತರಾಗಿದ್ದಿರಬೇಕು! ಆದರೆ ಅವರು ಈ ಶುಭವರ್ತಮಾನವನ್ನು ತಮ್ಮಲ್ಲೇ ಇಟ್ಟುಕೊಳ್ಳಲಿಲ್ಲ. “ಅವರು ಆ ಮಗುವಿನ ವಿಷಯದಲ್ಲಿ ತಮಗೆ ಹೇಳಿದ್ದ ಮಾತನ್ನು ತಿಳಿಯಪಡಿಸಿದರು. ಅದನ್ನು ಕೇಳಿದವರೆಲ್ಲರೂ ತಮಗೆ ಕುರುಬರು ಹೇಳಿದ ಮಾತುಗಳಿಗೆ ಆಶ್ಚರ್ಯಪಟ್ಟರು.” (ಲೂಕ 2:​17, 18) ಆ ದಿನಗಳ ಧಾರ್ಮಿಕ ಮುಖಂಡರು ಕುರುಬರನ್ನು ತುಚ್ಛವಾಗಿ ನೋಡುತ್ತಿದ್ದರೆಂಬುದು ಸ್ಪುಟ. ಆದರೆ ಯೆಹೋವನು ಆ ದೀನರಾದ ನಂಬಿಗಸ್ತ ಪುರುಷರನ್ನು ಅಮೂಲ್ಯರೆಂದು ಕಂಡನು. ಆದರೆ ಈ ಭೇಟಿ ಮರಿಯಳ ಮೇಲೆ ಯಾವ ಪರಿಣಾಮಬೀರಿತು?

ಪ್ರಸೂತಿಯ ವೇದನೆಗಳಿಂದಾಗಿ ಮರಿಯಳು ತೀರ ಸುಸ್ತಾಗಿ ಹೋಗಿದ್ದಳೆಂಬುದು ಖಂಡಿತ. ಆದರೂ ಅವಳು ಕುರುಬರ ಪ್ರತಿಯೊಂದು ಮಾತನ್ನೂ ಕಿವಿಗೊಟ್ಟು ಕೇಳಿದಳು. ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಾಗಿ “ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿದ್ದಳು.” (ಲೂಕ 2:19) ಈ ಯುವ ಸ್ತ್ರೀಯು ನಿಜವಾಗಿಯೂ ಚಿಂತನಾಶೀಲೆ. ದೇವದೂತರ ಈ ಸಂದೇಶ ಮಹತ್ತ್ವದ್ದೆಂದು ಆಕೆಗೆ ತಿಳಿದಿತ್ತು. ಆಕೆಯು ತನ್ನ ಮಗನ ಗುರುತು ಮತ್ತು ಮಹತ್ತ್ವವನ್ನು ತಿಳಿದು ಅದನ್ನು ಮಾನ್ಯ ಮಾಡುವಂತೆ ಅವಳ ದೇವರಾದ ಯೆಹೋವನು ಬಯಸಿದ್ದನು. ಆದಕಾರಣ, ಆಕೆ ಆ ಮಾತುಗಳನ್ನು ಆಲಿಸಿದ್ದಷ್ಟೇ ಅಲ್ಲ, ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಪದೇ ಪದೇ ಯೋಚಿಸುತ್ತಿದ್ದಳು. ತನ್ನ ಜೀವಮಾನದಲ್ಲೆಲ್ಲಾ ಮರಿಯಳು ತೋರಿಸಿದ ನಂಬಿಕೆಗೆ ಇದೊಂದು ಪ್ರಧಾನ ಕೀಲಿಕೈ.

ಮರಿಯಳ ಮಾದರಿಯನ್ನು ನೀವೂ ಅನುಸರಿಸುವಿರೋ? ಯೆಹೋವನ ವಾಕ್ಯವಾದ ಬೈಬಲಿನಲ್ಲಿ ಮಹತ್ತ್ವವುಳ್ಳ ಆಧ್ಯಾತ್ಮಿಕ ಸತ್ಯವು ತುಂಬಿರುತ್ತದೆ. ಆದರೆ ನಾವು ಆ ಸತ್ಯಕ್ಕೆ ಪ್ರಥಮವಾಗಿ ಗಮನಕೊಡದಿರುವಲ್ಲಿ ಅದು ನಮಗೆ ಯಾವ ಒಳಿತನ್ನೂ ಮಾಡಲಾರದು. ಗಮನ ಕೊಡುವುದೆಂದರೆ ಕ್ರಮವಾಗಿ ಬೈಬಲ್‌ ವಾಚನ ಮಾಡುವುದು ಎಂದರ್ಥ. ಆ ವಾಚನವು ಕೇವಲ ಒಂದು ಸಾಹಿತ್ಯ ಕೃತಿಯ ವಾಚನವಲ್ಲ, ದೇವರ ಪ್ರೇರಿತ ವಾಕ್ಯದ ವಾಚನ. (2 ತಿಮೊಥೆಯ 3:16) ಬಳಿಕ, ಮರಿಯಳಂತೆ ನಾವು ಆ ಆಧ್ಯಾತ್ಮಿಕ ನುಡಿಗಳನ್ನು ನಮ್ಮ ಹೃದಮನದಲ್ಲಿ ಶೇಖರಿಸಿಟ್ಟುಕೊಂಡು, ಆ ಕುರಿತು ಯೋಚಿಸುತ್ತಾ ಇರಬೇಕು. ಬೈಬಲಿನಲ್ಲಿ ನಾವು ಓದುವುದನ್ನು ಮನನಮಾಡುತ್ತಾ ಯೆಹೋವನ ಸಲಹೆಯನ್ನು ಹೆಚ್ಚು ಪೂರ್ಣವಾಗಿ ಹೇಗೆ ಅನ್ವಯಿಸಬಲ್ಲೆವು ಎಂದು ಯೋಚನೆಮಾಡುವಲ್ಲಿ ನಾವು ನಮ್ಮ ನಂಬಿಕೆಯನ್ನು ಬೆಳೆಸಲು ಬೇಕಾಗುವ ಪೋಷಣೆಯನ್ನು ಕೊಡುವೆವು.

ಮನಸ್ಸಿನಲ್ಲಿಡಲು ಇನ್ನೂ ಹೆಚ್ಚು ಮಾತುಗಳು

ಧರ್ಮಶಾಸ್ತ್ರದ ನೇಮದ ಪ್ರಕಾರ ಮಗುವಿಗೆ ಎಂಟು ದಿನವಾದಾಗ ಮರಿಯ-ಯೋಸೇಫರು ಮಗುವಿಗೆ ಸುನ್ನತಿ ಮಾಡಿಸಿ ಅವನಿಗೆ ಯೇಸು ಎಂದು ಹೆಸರಿಟ್ಟರು. (ಲೂಕ 1:31) ಬಳಿಕ, ಮಗುವಿಗೆ 40 ದಿನವಾದಾಗ, ಅವರು ಅವನನ್ನು ಬೇತ್ಲೆಹೇಮಿನಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದ್ದ ಯೆರೂಸಲೇಮಿನ ದೇವಾಲಯಕ್ಕೆ ಒಯ್ದರು. ಧರ್ಮಶಾಸ್ತ್ರ ಬಡವರಿಗಾಗಿ ಅನುಮತಿಸಿದ್ದ ಶುದ್ಧೀಕರಣ ಅರ್ಪಣೆಗಳನ್ನು ಅಂದರೆ ಎರಡು ಬೆಳವಕ್ಕಿಗಳನ್ನೊ ಇಲ್ಲವೆ ಎರಡು ಪಾರಿವಾಳಗಳನ್ನೊ ಅವರು ಅರ್ಪಿಸಿದರು. ಅನುಕೂಲಸ್ಥ ಹೆತ್ತವರು ಕೊಡಸಾಧ್ಯವಿದ್ದ ಹೋತ ಮತ್ತು ಬೆಳವಕ್ಕಿಗಿಂತ ಕಡಮೆಯಾದುದನ್ನು ತಾವು ಕೊಟ್ಟದ್ದಕ್ಕಾಗಿ ಬೇಸರಗೊಂಡಿದ್ದಿರಬಹುದಾದರೂ ಅವರು ಅದನ್ನೆಲ್ಲಾ ಬದಿಗೊತ್ತಿದರು. ಆದರೂ, ಅಲ್ಲಿದ್ದಾಗ ಅವರಿಗೆ ಬಲವಾದ ಪ್ರೋತ್ಸಾಹನೆ ದೊರೆಯಿತು.​—⁠ಲೂಕ 2:​21-24.

ಆಗ ಅಲ್ಲಿಗೆ ಸಿಮೆಯೋನನೆಂಬ ವೃದ್ಧನು ಬಂದು ಉತ್ತೇಜಕ ಮಾತುಗಳನ್ನಾಡಿದಾಗ, ಮರಿಯಳಿಗೆ ತನ್ನ ಮನಸ್ಸಿನಲ್ಲಿಟ್ಟು ಆಲೋಚಿಸಲು ಇನ್ನಷ್ಟು ಮಾತುಗಳು ದೊರೆತವು. ಸಾಯುವ ಮೊದಲು ಮೆಸ್ಸೀಯನನ್ನು ನೋಡುವನೆಂಬ ವಾಗ್ದಾನ ಅವನಿಗೆ ಕೊಡಲ್ಪಟ್ಟಿತ್ತು. ಮಗುವಾದ ಯೇಸುವೇ ಮುಂತಿಳಿಸಲ್ಪಟ್ಟ ಆ ಮೆಸ್ಸೀಯನಾದ ರಕ್ಷಕನೆಂದು ಯೆಹೋವನ ಪವಿತ್ರಾತ್ಮವು ಅವನಿಗೆ ಸೂಚಿಸಿತು. ಮುಂದೊಂದು ದಿನ ಮರಿಯಳು ತಾಳಿಕೊಳ್ಳಬೇಕಾಗಿದ್ದ ವೇದನೆಯ ಕುರಿತಾಗಿಯೂ ಸಿಮೆಯೋನನು ಆಕೆಯನ್ನು ಎಚ್ಚರಿಸಿದನು. ಖಡ್ಗವು ಆಕೆಯನ್ನು ತಿವಿಯಿತೋ ಎಂಬಂಥ ಅನುಭವ ಅವಳಿಗಾಗುವುದೆಂದು ಅವನು ಮುಂತಿಳಿಸಿದನು. (ಲೂಕ 2:​25-35) ಆ ವೇದನಾಭರಿತ ಮಾತುಗಳು, ಮೂವತ್ತು ವರ್ಷಗಳ ಬಳಿಕ ಬಂದ ಆ ಕಠಿನ ಕಾಲವನ್ನು ಸಹಿಸಿಕೊಳ್ಳಲು ಆಕೆಗೆ ನೆರವಾಗಿದ್ದಿರಲೂಬಹುದು. ಸಿಮೆಯೋನನ ನಂತರ, ಅನ್ನ ಎಂಬ ಪ್ರವಾದಿನಿ ಸಹ ಆ ಪುಟ್ಟ ಯೇಸುವನ್ನು ನೋಡಿ, ಯೆರೂಸಲೇಮಿನ ವಿಮೋಚನೆಯ ನಿರೀಕ್ಷೆಯನ್ನು ನೆಚ್ಚಿಕೆಯಿಂದ ಮುನ್ನೋಡುತ್ತಿದ್ದ ಎಲ್ಲರೊಂದಿಗೆ ಯೇಸುವಿನ ಕುರಿತಾಗಿ ಮಾತಾಡಿದಳು.​—⁠ಲೂಕ 2:​36-38.

ಯೋಸೇಫ ಮತ್ತು ಮರಿಯಳು ತಮ್ಮ ಮಗನನ್ನು ಯೆರೂಸಲೇಮಿನ ಯೆಹೋವನ ಆಲಯಕ್ಕೆ ತಂದದ್ದು ಉತ್ತಮ ನಿರ್ಣಯವೇ ಸರಿ! ಹೀಗೆ ಅವರು ತಮ್ಮ ಮಗನಿಗೆ ಜೀವನಪರ್ಯಂತವೂ ನಂಬಿಗಸ್ತಿಕೆಯಿಂದ ಯೆಹೋವನ ಆಲಯಕ್ಕೆ ಹೋಗುವ ಅಭ್ಯಾಸವನ್ನು ತೊಡಗಿಸಿದರು. ಅಲ್ಲಿದ್ದಾಗ, ಅವರು ತಮ್ಮ ಶಕ್ತಿಗನುಸಾರ ದೇವರ ಸೇವೆಯಲ್ಲಿ ತಮ್ಮನ್ನು ಕೊಟ್ಟುಕೊಂಡರು ಹಾಗೂ ಉಪದೇಶವನ್ನೂ ಪ್ರೋತ್ಸಾಹವನ್ನೂ ಪಡೆದುಕೊಂಡರು. ಆ ದಿನ ಮರಿಯಳು ದೇವಾಲಯದಿಂದ ಹೊರಬಂದಾಗ ಅವಳ ನಂಬಿಕೆಯು ಇನ್ನಷ್ಟೂ ಬಲಗೊಂಡಿತ್ತು. ಮಾತ್ರವಲ್ಲ, ಆಲೋಚಿಸಲಿಕ್ಕಾಗಿ ಮತ್ತು ಇತರರಿಗೆ ತಿಳಿಸಲಿಕ್ಕಾಗಿ ಅವಳ ಮನಸ್ಸಿನಲ್ಲಿ ಆಧ್ಯಾತ್ಮಿಕ ವಿಷಯಗಳು ತುಂಬಿತುಳುಕುತ್ತಿದ್ದವು.

ಇಂದು ಹೆತ್ತವರು ಆ ಮಾದರಿಯನ್ನು ಅನುಸರಿಸುವುದನ್ನು ನೋಡುವುದು ಸುಂದರಾನುಭವ. ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು ತಮ್ಮ ಮಕ್ಕಳನ್ನು ನಂಬಿಗಸ್ತಿಕೆಯಿಂದ ಕ್ರೈಸ್ತ ಕೂಟಗಳಿಗೆ ಒಯ್ಯುತ್ತಾರೆ. ಇಂಥ ಹೆತ್ತವರು, ತಮ್ಮ ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹನೆಯ ಮಾತುಗಳನ್ನು ನೀಡುತ್ತ ತಮಗೆ ಸಾಧ್ಯವಿರುವುದನ್ನು ಮಾಡುತ್ತಾರೆ. ಹೀಗೆ ಅವರು ಹೆಚ್ಚು ಬಲವುಳ್ಳವರು, ಹೆಚ್ಚು ಸಂತೋಷಿತರು ಮತ್ತು ಇತರರಿಗೆ ಹಂಚಲು ಸುವಿಷಯಗಳಿಂದ ತುಂಬಿದವರು ಆಗಿರುತ್ತಾರೆ. ಅವರನ್ನು ಭೇಟಿಯಾಗಲು ನಿಮಗೆ ಹಾರ್ದಿಕ ಸ್ವಾಗತವಿದೆ. ಹಾಗೆ ಮಾಡುವಲ್ಲಿ, ಮರಿಯಳಂತೆ ನಿಮ್ಮ ನಂಬಿಕೆಯೂ ಸದಾ ಸುದೃಢವಾಗಿ ಬೆಳೆಯುವುದು. (w08 10/1)

[ಪಾದಟಿಪ್ಪಣಿಗಳು]

^ ಪ್ಯಾರ. 10 ಈ ಪ್ರಯಾಣಕ್ಕೂ ಇದಕ್ಕೆ ಮುಂಚೆ ಮರಿಯಳು ಮಾಡಿದ ಪ್ರಯಾಣಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ಆಗ “ಮರಿಯಳು ಎದ್ದು . . . ಹೊರಟು” ಸಂಬಂಧಿಕಳಾದ ಎಲೀಸಬೆತಳ ಬಳಿಗೆ ಹೋಗಿದ್ದಳು. (ಲೂಕ 1:39) ಆ ಸಮಯದಲ್ಲಿ, ಮರಿಯಳಿಗೆ ನಿಶ್ಚಿತಾರ್ಥವಾಗಿತ್ತು, ಇನ್ನೂ ಮದುವೆಯಾಗಿರಲಿಲ್ಲ. ಆದಕಾರಣ ಯೋಸೇಫನನ್ನು ವಿಚಾರಿಸದೇ ಅವಳು ಅಲ್ಲಿಗೆ ಹೋಗಿದ್ದಿರಬಹುದು. ಆದರೆ ಮದುವೆಯಾದ ಬಳಿಕ ಅವರು ಜೊತೆಯಾಗಿ ಮಾಡಿದ ಪ್ರಯಾಣದ ಹೊಣೆಯು ಯೋಸೇಫನ ಮೇಲಿತ್ತು, ಮರಿಯಳ ಮೇಲಲ್ಲ. ಆದ್ದರಿಂದ ಅವಳು ವಿಧೇಯಳಾದಳು.

^ ಪ್ಯಾರ. 14 ಆ ದಿನಗಳಲ್ಲಿ ಯಾತ್ರಿಕರಿಗೂ ವರ್ತಕರ ತಂಡಗಳಿಗೂ ತಂಗಲಿಕ್ಕಾಗಿ ಛತ್ರಗಳಲ್ಲಿ ಸ್ಥಳ ಒದಗಿಸುವ ವಾಡಿಕೆಯಿತ್ತು.

^ ಪ್ಯಾರ. 19 ಈ ಕುರುಬರು ತಮ್ಮ ಹಿಂಡುಗಳೊಂದಿಗೆ ಹೊರಗೆ ಹೊಲದಲ್ಲಿ ಜೀವಿಸುತ್ತಿದ್ದರು ಎಂಬುದು ಯೇಸುವಿನ ಜನನದ ಕುರಿತಾದ ಬೈಬಲಿನ ಕಾಲಗಣನೆಯನ್ನು ಪುಷ್ಟೀಕರಿಸುತ್ತದೆ: ಕ್ರಿಸ್ತನ ಜನನ ಡಿಸೆಂಬರ್‌ನಲ್ಲಿ ಆಗಿರಲಿಲ್ಲ ಏಕೆಂದರೆ ಆ ಸಮಯದಲ್ಲಿ ಕುರಿಗಳು ಹೊರಗೆ ಹೊಲದಲ್ಲಿ ಅಲ್ಲ, ಹಟ್ಟಿಯೊಳಗೆ ಇರುತ್ತಿದ್ದವು. ಆದ್ದರಿಂದ ಕ್ರಿಸ್ತನ ಜನನವು ಆದದ್ದು ಸುಮಾರು ಅಕ್ಟೋಬರ್‌ನ ಆರಂಭದಲ್ಲಿ ಎಂದು ಲೆಕ್ಕಿಸಸಾಧ್ಯವಿದೆ.