ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆದಾಮನು ಪರಿಪೂರ್ಣನಾಗಿದ್ದಲ್ಲಿ ಅವನು ಪಾಪಮಾಡಿದ್ದೇಕೆ?

ಆದಾಮನು ಪರಿಪೂರ್ಣನಾಗಿದ್ದಲ್ಲಿ ಅವನು ಪಾಪಮಾಡಿದ್ದೇಕೆ?

ನಮ್ಮ ಓದುಗರ ಪ್ರಶ್ನೆ

ಆದಾಮನು ಪರಿಪೂರ್ಣನಾಗಿದ್ದಲ್ಲಿ ಅವನು ಪಾಪಮಾಡಿದ್ದೇಕೆ?

ಆದಾಮನು ಪಾಪಮಾಡಲು ಸಾಧ್ಯವಿತ್ತು ಏಕೆಂದರೆ ದೇವರು ಅವನಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದನು. ಆ ಉಡುಗೊರೆಯು ಆದಾಮನ ಪರಿಪೂರ್ಣತೆಯೊಂದಿಗೆ ಯಾವ ರೀತಿಯಲ್ಲೂ ಘರ್ಷಿಸುವುದಿಲ್ಲ. ನಿಜವೇನೆಂದರೆ ದೇವರೊಬ್ಬನೇ ಸಂಪೂರ್ಣ ಅರ್ಥದಲ್ಲಿ ಪರಿಪೂರ್ಣನು. (ಧರ್ಮೋಪದೇಶಕಾಂಡ 32:​3, 4; ಕೀರ್ತನೆ 18:30; ಮಾರ್ಕ 10:18) ಬೇರೆ ಯಾವುದೇ ವಸ್ತು ಅಥವಾ ವ್ಯಕ್ತಿಯಲ್ಲಿ ಇರುವಂಥ ಪರಿಪೂರ್ಣತೆಯು ಕೇವಲ ಸೀಮಿತ. ಉದಾಹರಣೆಗೆ, ಚೂರಿಯಿಂದ ಮಾಂಸವನ್ನು ಸಂಪೂರ್ಣವಾಗಿ ತುಂಡರಿಸಬಹುದು. ಆದರೆ ಅದೇ ಚೂರಿಯಿಂದ ಸೂಪ್‌ ಕುಡಿಯಲು ಆದೀತೇ? ಒಂದು ವಸ್ತುವು ಪರಿಪೂರ್ಣವಾಗಿರುವುದು ಕೇವಲ ಅದನ್ನು ತಯಾರಿಸಿದ ಉದ್ದೇಶದ ಸಂಬಂಧದಲ್ಲಿ ಮಾತ್ರ.

ಹಾಗಾದರೆ ದೇವರು ಆದಾಮನನ್ನು ಉಂಟುಮಾಡಿದ್ದು ಯಾವ ಉದ್ದೇಶಕ್ಕಾಗಿ? ಆದಾಮನ ಮೂಲಕ ಇಚ್ಛಾಸ್ವಾತಂತ್ರ್ಯವುಳ್ಳ ಬುದ್ಧಿವಂತ ಮಾನವರನ್ನು ಉಂಟುಮಾಡುವುದೇ ದೇವರ ಉದ್ದೇಶವಾಗಿತ್ತು. ದೇವರ ಕಡೆಗೆ ಮತ್ತು ಆತನ ಮಾರ್ಗಗಳ ಕಡೆಗೆ ತಮ್ಮ ಪ್ರೀತಿಯನ್ನು ಬೆಳೆಸಬಯಸುವವರು ಆತನ ನಿಯಮಗಳಿಗೆ ವಿಧೇಯರಾಗುವ ಮೂಲಕ ಇದನ್ನು ತೋರಿಸಬಹುದಿತ್ತು. ಆದುದರಿಂದ ವಿಧೇಯತೆಯು ಮಾನವನ ಯೋಚನಾ ಸಾಮರ್ಥ್ಯದೊಂದಿಗೆ ಯಾಂತ್ರಿಕವಾಗಿ ಬರಸಾಧ್ಯವಿರಲಿಲ್ಲ. ಬದಲಾಗಿ ಅವನ ಹೃದಯದಿಂದ ಮನಃಪೂರ್ವಕವಾಗಿ ಹೊರಹೊಮ್ಮಬೇಕಿತ್ತು. (ಧರ್ಮೋಪದೇಶಕಾಂಡ 10:​12, 13; 30:​19, 20) ಹೀಗೆ ವಿಧೇಯತೆ ಅಥವಾ ಅವಿಧೇಯತೆಯನ್ನು ಆರಿಸಿಕೊಳ್ಳುವ ಸಾಮರ್ಥ್ಯ ಇರದಿದ್ದಲ್ಲಿ ಆದಾಮನು ಅಪೂರ್ಣನು ಅಂದರೆ ಅಪರಿಪೂರ್ಣನು ಆಗುತ್ತಿದ್ದನು. ಹೀಗಿರುವಲ್ಲಿ ಆದಾಮನು ತನ್ನ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಲು ಆರಿಸಿಕೊಂಡದ್ದು ಹೇಗೆ? “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು” ಎಂಬ ದೇವರ ಆಜ್ಞೆಗೆ ತನ್ನ ಪತ್ನಿ ತೋರಿಸಿದ ಅವಿಧೇಯತೆಯನ್ನು ಅನುಸರಿಸುವ ಮೂಲಕವೇ ಎಂದು ಬೈಬಲ್‌ ದಾಖಲೆ ತೋರಿಸುತ್ತದೆ.​—⁠ಆದಿಕಾಂಡ 2:17; 3:​1-6.

ಹಾಗಾದರೆ ದೇವರು ಆದಾಮನನ್ನು ನೈತಿಕ ಬಲಹೀನತೆಯೊಂದಿಗೆ ನಿರ್ಮಿಸಿದನೋ? ಇದರಿಂದಾಗಿ ಅವನಿಗೆ ಸರಿಯಾದ ನಿರ್ಣಯವನ್ನು ಮಾಡಲು ಅಥವಾ ಶೋಧನೆಯನ್ನು ಎದುರಿಸಲು ಸಾಮರ್ಥ್ಯವಿರಲಿಲ್ಲವೋ? ಆದಾಮನು ಅವಿಧೇಯನಾಗುವ ಮುಂಚೆ ಯೆಹೋವ ದೇವರು ಪ್ರಥಮ ಮಾನವ ಜೊತೆಯನ್ನು ಸೇರಿಸಿ ತನ್ನೆಲ್ಲಾ ಭೂಸೃಷ್ಟಿಯನ್ನು ಪರೀಕ್ಷಿಸಿದನು. ಅವೆಲ್ಲವೂ “ಬಹು ಒಳ್ಳೇದಾಗಿತ್ತು” ಎಂದು ನಿರ್ಣಯಿಸಿದ್ದನು. (ಆದಿಕಾಂಡ 1:31) ಆದುದರಿಂದ ಆದಾಮನು ಪಾಪಮಾಡಿದಾಗ ಅವನ ಸೃಷ್ಟಿಕರ್ತನಾದ ಯೆಹೋವನು ತನ್ನ ಸೃಷ್ಟಿಕಾರ್ಯದಲ್ಲಿ ಏನನ್ನೂ ಸರಿಪಡಿಸುವ ಅಗತ್ಯವಿರಲಿಲ್ಲ. ಬದಲಾಗಿ ಆದಾಮನ ತಪ್ಪನ್ನು ಸೂಕ್ತವಾಗಿಯೇ ಅವನ ಮೇಲೆ ನೇರವಾಗಿ ಹೊರಿಸಿದನು. (ಆದಿಕಾಂಡ 3:​17-19) ಯಾಕೆಂದರೆ ಎಲ್ಲಾದಕ್ಕಿಂತ ಹೆಚ್ಚಾಗಿ ದೇವರಿಗೆ ವಿಧೇಯನಾಗಿರಲು ಅವನು ತಪ್ಪಿದ್ದನು. ದೇವರ ಮೇಲಣ ಮತ್ತು ಆತನ ನೀತಿಯುತ ನಿಯಮಗಳ ಮೇಲಣ ಪ್ರೀತಿಯು ತನ್ನನ್ನು ಪ್ರಚೋದಿಸುವಂತೆ ಆದಾಮನು ಬಿಡಲಿಲ್ಲ.

ಭೂಮಿಯಲ್ಲಿರುವಾಗ ಯೇಸು ಸಹ ಆದಾಮನಂತೆ ಪರಿಪೂರ್ಣ ಮನುಷ್ಯನಾಗಿದ್ದನು ಎಂಬುದನ್ನು ಗಮನಿಸಿ. ಆದಾಮನ ಸಂತತಿಯವರಿಗಿಂತ ಭಿನ್ನವಾಗಿ ಯೇಸುವಾದರೋ ಪವಿತ್ರಾತ್ಮದಿಂದ ಜನಿಸಿದನು. ಆದುದರಿಂದ ಶೋಧನೆಯನ್ನು ಎದುರಿಸಲು ಅಶಕ್ತಗೊಳಿಸುವ ಯಾವುದೇ ಬಲಹೀನತೆಯನ್ನು ಬಾಧ್ಯತೆಯಾಗಿ ಪಡೆಯಲಿಲ್ಲ. (ಲೂಕ 1:​30, 31; 2:21; 3:​23, 38) ತನ್ನ ಸ್ವಸಂಕಲ್ಪದಿಂದ ಯೇಸು ಕಠಿಣ ಒತ್ತಡಗಳ ಕೆಳಗೂ ನಿಷ್ಠನಾಗಿ ಉಳಿದನು. ಆದಾಮನಾದರೋ ತನ್ನ ಇಚ್ಛಾಸ್ವಾತಂತ್ರ್ಯವನ್ನು ಬಳಸುವುದರಲ್ಲಿ ಯೆಹೋವನ ಆಜ್ಞೆಗೆ ವಿಧೇಯನಾಗಲು ತಪ್ಪಿದ್ದಕ್ಕೆ ವೈಯಕ್ತಿಕವಾಗಿ ತಾನೇ ಹೊಣೆಯಾಗಿದ್ದನು.

ಆದಾಮನು ದೇವರಿಗೆ ಅವಿಧೇಯನಾಗಲು ಆಯ್ಕೆಮಾಡಿದ್ದೇಕೆ? ಯಾವುದಾದರೂ ವಿಧದಲ್ಲಿ ತನ್ನ ಸನ್ನಿವೇಶವನ್ನು ಸುಧಾರಿಸುವೆನೆಂದು ಅವನು ನೆನಸಿದನೋ? ಇಲ್ಲ. ಏಕೆಂದರೆ ಅಪೊಸ್ತಲ ಪೌಲನು ಬರೆದದ್ದು: “ಆದಾಮನು ವಂಚನೆಗೆ ಒಳಬೀಳಲಿಲ್ಲ.” (1 ತಿಮೊಥೆಯ 2:14) ಆದರೂ ನಿಷೇಧಿತ ಮರದ ಹಣ್ಣನ್ನು ತಿನ್ನಲು ಈ ಮೊದಲೇ ಆರಿಸಿಕೊಂಡ ಹವ್ವಳ ಇಷ್ಟಗಳಿಗನುಸಾರ ನಡೆಯಲು ನಿರ್ಣಯಿಸಿದನು. ತನ್ನ ಪತ್ನಿಯನ್ನು ಮೆಚ್ಚಿಸುವ ಅವನ ಇಚ್ಛೆಯು ತನ್ನ ನಿರ್ಮಾಣಿಕನಿಗೆ ವಿಧೇಯನಾಗುವ ಅಪೇಕ್ಷೆಗಿಂತ ಬಹಳ ಬಲವಾಗಿತ್ತು. ಆದ್ದರಿಂದ ಆದಾಮನಿಗೆ ಅವನ ಹೆಂಡತಿಯು ನಿಷೇಧಿತ ಹಣ್ಣನ್ನು ನೀಡಿದಾಗ ಅವನು ಏನು ಮಾಡಬೇಕಿತ್ತು? ಅವಿಧೇಯನಾದರೆ ದೇವರೊಂದಿಗಿನ ಸಂಬಂಧದ ಮೇಲೆ ಯಾವ ಪರಿಣಾಮ ಬೀರುತ್ತದೆಂದು ಅವನು ಯೋಚಿಸಬೇಕಿತ್ತು. ಅವನಲ್ಲಿ ದೇವರ ಮೇಲೆ ಆಳವಾದ ನಿಶ್ಚಲ ಪ್ರೀತಿ ಇರಲಿಲ್ಲ. ಆದ್ದರಿಂದ ಅವನು ತನ್ನ ಪತ್ನಿಯ ಒತ್ತಡಕ್ಕೆ ಮಣಿದನು.

ಆದಾಮನು ಮಕ್ಕಳನ್ನು ಪಡೆಯುವ ಮುಂಚೆಯೇ ಪಾಪಮಾಡಿದ ಕಾರಣ ಅವನ ಸಂತತಿಯೆಲ್ಲವೂ ಅಪರಿಪೂರ್ಣತೆಯೊಂದಿಗೆ ಜನಿಸಿತು. ಆದರೂ ಆದಾಮನಂತೆ ನಮಗೂ ಇಚ್ಛಾಸ್ವಾತಂತ್ರ್ಯ ಇದೆ. ಆದುದರಿಂದ ಯೆಹೋವನ ಒಳ್ಳೇತನವನ್ನು ಗಣ್ಯತಾಪೂರ್ವಕವಾಗಿ ಧ್ಯಾನಿಸಲು ಆಯ್ಕೆಮಾಡೋಣ. ಹಾಗೂ ನಮ್ಮ ವಿಧೇಯತೆ ಮತ್ತು ಆರಾಧನೆಗೆ ಯೋಗ್ಯನಾದ ದೇವರ ಕಡೆಗೆ ಬಲವಾದ ಪ್ರೀತಿಯನ್ನು ಬೆಳೆಸಿಕೊಳ್ಳೋಣ.​—⁠ಕೀರ್ತನೆ 63:6; ಮತ್ತಾಯ 22:​36, 37. (w08 10/1)