ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರನ್ನು ಅನುಸರಿಸಿರಿ’

‘ದೇವರನ್ನು ಅನುಸರಿಸಿರಿ’

ದೇವರ ಸಮೀಪಕ್ಕೆ ಬನ್ನಿರಿ

‘ದೇವರನ್ನು ಅನುಸರಿಸಿರಿ’

ಎಫೆಸ 4:​32–5:2

ಉಪಕಾರ, ಕರುಣೆ, ಕ್ಷಮೆ, ಪ್ರೀತಿ. ಈ ಸದ್ಗುಣಗಳನ್ನು ಇಂದು ಜನರು ಬಹಳ ವಿರಳವಾಗಿ ತೋರಿಸುತ್ತಿರುವುದು ನಿಜವಾಗಿ ಖೇದಕರ. ನಿಮ್ಮ ವಿಷಯದಲ್ಲೇನು? ಅಂಥ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವೇ ಇಲ್ಲವೆಂಬ ಅನಿಸಿಕೆ ನಿಮಗಾಗಿದೆಯೇ? ನಮ್ಮಲ್ಲಿ ಬೇರೂರಿರುವ ದುರ್ನಡತೆಗಳು ಹಾಗೂ ಹಿಂದಿನ ಕಹಿ ಅನುಭವಗಳಂಥ ನಿರ್ದಿಷ್ಟ ತಡೆಗಳಿಂದಾಗಿ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಅಸಾಧ್ಯವೆಂದು ನಮ್ಮ ಸ್ವಯಂ-ಟೀಕಾತ್ಮಕ ಹೃದಯವು ಪಟ್ಟುಹಿಡಿಯಬಹುದು. ಆದರೆ ನಮ್ಮಲ್ಲಿ ಅಂಥ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವಿದೆ ಎಂದು ನಮ್ಮ ನಿರ್ಮಾಣಿಕನು ಹೇಳುತ್ತಾನೆ. ಈ ಭರವಸದಾಯಕ ಸತ್ಯವನ್ನು ಬೈಬಲ್‌ ಕಲಿಸುತ್ತದೆ.

“ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ” ಎಂದು ದೇವರ ವಾಕ್ಯವು ನಿಜ ಕ್ರೈಸ್ತರನ್ನು ಉತ್ತೇಜಿಸುತ್ತದೆ. (ಎಫೆಸ 5:⁠1) ಈ ಮಾತುಗಳು ದೇವರಿಗೆ ತನ್ನ ಆರಾಧಕರ ಮೇಲಿರುವ ಭರವಸೆಯ ಗಮನಾರ್ಹ ಅಭಿವ್ಯಕ್ತಿಗಳಾಗಿವೆ! ಹೇಗೆ? ಯೆಹೋವ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ಉಂಟುಮಾಡಿದನು. (ಆದಿಕಾಂಡ 1:​26, 27) ಹೀಗೆ ತನ್ನಲ್ಲಿರುವ ಗುಣಗಳನ್ನು ಮಾನವರು ಪ್ರತಿಬಿಂಬಿಸುವ ರೀತಿಯಲ್ಲಿ ದೇವರು ಅವರನ್ನು ಸೃಷ್ಟಿಸಿದನು. * ಆದುದರಿಂದ ‘ದೇವರನ್ನು ಅನುಸರಿಸುವವರಾಗಿರಿ’ ಎಂದು ಕ್ರೈಸ್ತರನ್ನು ಬೈಬಲ್‌ ಉತ್ತೇಜಿಸುವಾಗ, ಯೆಹೋವನು ತಾನೇ ಅವರಿಗೆ ಹೀಗನ್ನುವಂತಿದೆ: “ಮಗನೇ, ನಿನ್ನ ಮೇಲೆ ನನಗೆ ನಂಬಿಕೆಯಿದೆ. ನಿನ್ನಲ್ಲಿ ಕುಂದುಕೊರತೆಗಳಿವೆ ಎಂದೂ ಗೊತ್ತು. ಆದರೂ ನನ್ನಲ್ಲಿರುವಂಥ ಗುಣಗಳನ್ನು ನಿರ್ದಿಷ್ಟ ಮಟ್ಟಿಗೆ ಬೆಳೆಸಿಕೊಳ್ಳಲು ನಿನ್ನಿಂದ ಸಾಧ್ಯವೆಂದು ನಾನು ಬಲ್ಲೆ.”

ನಾವು ಅನುಸರಿಸಬಲ್ಲ ದೇವರ ಕೆಲವು ಗುಣಗಳು ಯಾವುವು? ಪೂರ್ವಾಪರ ವಚನಗಳು ಅದಕ್ಕೆ ಉತ್ತರ ನೀಡುತ್ತವೆ. ದೇವರನ್ನು ಅನುಸರಿಸುವಂತೆ ಪೌಲನು ಉತ್ತೇಜನ ನೀಡಿದಾಗ “ಆದದರಿಂದ” ಎಂಬ ಶಬ್ದದಿಂದ ಆರಂಭಿಸಿದ್ದನ್ನು ಗಮನಿಸಿ. ಈ ಶಬ್ದವು ಉಪಕಾರ (ದಯೆ), ಕೋಮಲ ಕರುಣೆ ಮತ್ತು ಕ್ಷಮೆಯ ಕುರಿತು ತಿಳಿಸುವ ಹಿಂದಿನ ವಚನವನ್ನು ಮುಂದಿನ ವಚನಕ್ಕೆ ಜೋಡಿಸುತ್ತದೆ. (ಎಫೆಸ 4:32; 5:⁠1) ಆಮೇಲೆ, ದೇವರನ್ನು ಅನುಸರಿಸಿರಿ ಎಂಬ ಬುದ್ಧಿವಾದವನ್ನು ಹಿಂಬಾಲಿಸಿದ ವಚನದಲ್ಲಿ ಪೌಲನು ಕ್ರೈಸ್ತರಿಗೆ ನಿಸ್ವಾರ್ಥ ಪ್ರೀತಿಯನ್ನು ಜೀವನ ಶೈಲಿಯಾಗಿ ಬೆನ್ನಟ್ಟಲು ಹೇಳುತ್ತಾನೆ. (ಎಫೆಸ 5:⁠2) ನಿಜವಾಗಿಯೂ ದಯೆ, ಹೃತ್ಪೂರ್ವಕ ಕರುಣೆ, ಉದಾರ ಕ್ಷಮೆ ಹಾಗೂ ಪ್ರೀತಿಯನ್ನು ತೋರಿಸುವ ವಿಷಯದಲ್ಲಿ ನಮಗಿರುವ ಮಹೋನ್ನತ ಮಾದರಿಯು ಯೆಹೋವ ದೇವರದ್ದೇ ನಿಶ್ಚಯ.

ನಾವು ದೇವರಂತಾಗಲು ಏಕೆ ಬಯಸುತ್ತೇವೆ? ಪೌಲನ ಮಾತುಗಳಲ್ಲಿರುವ ಪ್ರಬಲ ಪ್ರಚೋದನೆಯನ್ನು ಗಮನಿಸಿ. “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.” ಈ ಹೇಳಿಕೆಯು ನಿಮ್ಮ ಮನಸ್ಸನ್ನು ಸ್ಪರ್ಶಿಸದೇ? ಯೆಹೋವನು ತನ್ನ ಆರಾಧಕರನ್ನು ಅತಿ ಪ್ರಿಯ ಮಕ್ಕಳಂತೆ ವೀಕ್ಷಿಸುತ್ತಾನೆ. ಒಬ್ಬ ಪುಟ್ಟ ಮಗನು ತನ್ನ ತಂದೆಯಂತಾಗಲು ಪ್ರಯತ್ನಿಸುವ ಪ್ರಕಾರವೇ ನಿಜ ಕ್ರೈಸ್ತರು ತಮ್ಮ ಸ್ವರ್ಗೀಯ ತಂದೆಯಾದ ದೇವರಂತಾಗಲು ಸಕಲ ಪ್ರಯತ್ನಮಾಡುತ್ತಾರೆ.

ಮಾನವರು ತನ್ನನ್ನು ಅನುಸರಿಸುವಂತೆ ಯೆಹೋವ ದೇವರು ಬಲವಂತಪಡಿಸುವುದಿಲ್ಲ. ಬದಲಾಗಿ ಆತನು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟು ಘನಪಡಿಸಿದ್ದಾನೆ. ಆದದರಿಂದ ನೀವು ದೇವರನ್ನು ಅನುಸರಿಸುವಿರೋ ಇಲ್ಲವೋ ಎಂಬುದು ನಿಮಗೆ ಬಿಟ್ಟ ಆಯ್ಕೆ. (ಧರ್ಮೋಪದೇಶಕಾಂಡ 30:​19, 20) ಆದರೆ ದೇವರಲ್ಲಿರುವಂಥ ಗುಣಗಳನ್ನು ತೋರಿಸಲು ನಿಮಗೆ ಸಾಧ್ಯವಿದೆ ಎಂಬುದನ್ನು ಮಾತ್ರ ಮರೆಯಬೇಡಿ. ದೇವರನ್ನು ಅನುಸರಿಸಲು ಆತನು ಎಂಥವನು ಎಂದು ನೀವು ತಿಳಿಯುವ ಅಗತ್ಯವಿದೆ ನಿಶ್ಚಯ. ಆತನ ಸಕಲ ಗುಣಗಳನ್ನೂ ಮಾರ್ಗಗಳನ್ನೂ ಕಲಿಯಲು ಬೈಬಲ್‌ ನಿಮಗೆ ಸಹಾಯಮಾಡಬಲ್ಲದು. ಈ ದೇವರ ಎಣೆಯಿಲ್ಲದ ವ್ಯಕ್ತಿತ್ವವು ಆತನನ್ನು ಅನುಸರಿಸುವಂತೆ ಲಕ್ಷಾಂತರ ಜನರ ಮನಸ್ಸನ್ನು ಸೆಳೆದಿದೆ. (w08 10/1)

[ಪಾದಟಿಪ್ಪಣಿ]

^ ಪ್ಯಾರ. 5 ಮನುಷ್ಯರು ದೇವರ ಹೋಲಿಕೆಯ ಮೇರೆಗೆ ಸೃಷ್ಟಿಮಾಡಲ್ಪಟ್ಟದ್ದು ವ್ಯಕ್ತಿತ್ವ-ಸ್ವಭಾವಗಳ ಸಂಬಂಧದಲ್ಲಿ ಎಂಬದಾಗಿ ಕೊಲೊಸ್ಸೆ 3:​9, 10 ಸೂಚಿಸುತ್ತದೆ. ದೇವರನ್ನು ಮೆಚ್ಚಿಸಬಯಸುವವರು “ನೂತನಸ್ವಭಾವವನ್ನು” ಧರಿಸಿಕೊಳ್ಳುವಂತೆ ಈ ವಚನದಲ್ಲಿ ಉತ್ತೇಜಿಸಲಾಗಿದೆ. ಆ ಸ್ವಭಾವವು “ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ” ಬರುತ್ತದೆ.