ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೊಬ್ಬ ಒಳ್ಳೇ ತಂದೆಯೋ?

ನೀವೊಬ್ಬ ಒಳ್ಳೇ ತಂದೆಯೋ?

ನೀವೊಬ್ಬ ಒಳ್ಳೇ ತಂದೆಯೋ?

“ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”—⁠ಕೊಲೊಸ್ಸೆ 3:⁠21.

ಒಬ್ಬ ತಂದೆ ತನ್ನ ಮಕ್ಕಳ ಮನನೋಯಿಸದಂತೆ ನಡೆಯುವುದು ಹೇಗೆ? ತಂದೆಯಾಗಿರುವ ತನ್ನ ಪಾತ್ರವನ್ನು ಅವನು ಮನಗಾಣುವುದು ಅತ್ಯಾವಶ್ಯಕ. ಮಾನಸಿಕ ಸ್ವಾಸ್ಥ್ಯದ ಕುರಿತು ಒಂದು ಪತ್ರಿಕೆಯು ಹೇಳುವುದು: “ತಂದೆತನವು ಒಂದು ಅತ್ಯಂತ ಜಟಿಲವಾದ ಹಾಗೂ ಅಸಾಧಾರಣವಾದ ಜವಾಬ್ದಾರಿ. ಯಾಕೆಂದರೆ ಅದು ಮಕ್ಕಳ ಭಾವನಾತ್ಮಕ ಹಾಗೂ ಬುದ್ಧಿಶಕ್ತಿಯ ಬೆಳವಣಿಗೆಯ ಮೇಲೆ ಪ್ರಚಂಡ ಪ್ರಭಾವವನ್ನು ಬೀರುತ್ತದೆ.”

ತಂದೆಯ ಪಾತ್ರವೇನು? ಹೆಚ್ಚಿನ ಕುಟುಂಬಗಳಲ್ಲಿ ಮುಖ್ಯವಾಗಿ ಶಿಕ್ಷೆ ನೀಡುವ ಕೆಲಸ ಮಾತ್ರ ತಂದೆಯದೆಂದು ಎಣಿಸುತ್ತಾರೆ. ಆದುದರಿಂದಲೇ ತಂಟೆಮಾಡುವ ಮಗುವಿಗೆ ತಾಯಿ, ‘ಸ್ವಲ್ಪ ತಡಿ, ನಿಮ್ಮಪ್ಪ ಬರಲಿ ಮಾಡಿಸ್ತೇನೆ’ ಎಂದು ಹೇಳುವುದು ಸಾಮಾನ್ಯ. ಮಕ್ಕಳು ಸದಾಚಾರಿಗಳಾಗಿ ಬೆಳೆದು ದೊಡ್ಡವರಾಗಲು ಸಾಕಷ್ಟು ಶಿಸ್ತು ಮತ್ತು ಸ್ವಲ್ಪಮಟ್ಟಿನ ಕಟ್ಟುನಿಟ್ಟು ಅತ್ಯಾವಶ್ಯಕ. ಹಾಗಿರುವುದರಿಂದ ಒಳ್ಳೇ ತಂದೆಯಾಗಿರುವುದರಲ್ಲಿ ಹೆಚ್ಚಿನ ವಿಷಯಗಳು ಕೂಡಿವೆ.

ಪ್ರತಿಯೊಬ್ಬ ತಂದೆಗೆ ತಾನು ಅನುಸರಿಸಲು ನೆರವಾಗುವ ಒಂದು ಉತ್ತಮ ಮಾದರಿ ಇಲ್ಲದಿರುವುದು ವಿಷಾದಕರ. ಕೆಲವು ಪುರುಷರು ಚಿಕ್ಕಂದಿನಿಂದ ತಂದೆಯ ಆಸರೆ ಇಲ್ಲದೆ ಬೆಳೆದಿರುತ್ತಾರೆ. ಇನ್ನೂ ಕೆಲವರು ಅತಿ ಕಟ್ಟುನಿಟ್ಟು ಹಾಗೂ ನಿಷ್ಠುರರಾದ ತಂದೆಗಳಿಂದ ಬೆಳಸಲ್ಪಟ್ಟಿರುತ್ತಾರೆ. ಆದ್ದರಿಂದ ಅವರೂ ತಮ್ಮ ಮಕ್ಕಳನ್ನು ಅದೇ ರೀತಿಯ ಕಟ್ಟುನಿಟ್ಟಿನಿಂದ ಬೆಳೆಸುತ್ತಾರೆ. ಅಂಥ ಒಬ್ಬ ತಂದೆಯು ತನ್ನ ಸ್ವಭಾವವನ್ನು ಬದಲಾಯಿಸಿ ತಂದೆತನದ ಕೌಶಲಗಳನ್ನು ಹೇಗೆ ಸುಧಾರಿಸಬಹುದು?

ಒಳ್ಳೇ ತಂದೆಯಾಗುವುದಕ್ಕಾಗಿ ವ್ಯಾವಹಾರಿಕ ಹಾಗೂ ಭರವಸೆಯೋಗ್ಯ ಸಲಹೆಯ ಮೂಲವೊಂದಿದೆ. ಆ ಮೂಲವಾದ ಬೈಬಲ್‌ ಕುಟುಂಬ ಜೀವಿತಕ್ಕಾಗಿ ಅತ್ಯುತ್ತಮ ಸಲಹೆಯನ್ನು ಒದಗಿಸುತ್ತದೆ. ಅದರ ಸಲಹೆಯು ಕೇವಲ ಸಿದ್ಧಾಂತವಲ್ಲ. ಅದರ ಮಾರ್ಗದರ್ಶನೆ ನಮಗೆ ಹಾನಿಕರವೂ ಅಲ್ಲ. ಬೈಬಲಿನ ಸಲಹೆಯು ಅದರ ಗ್ರಂಥಕರ್ತನಾದ ಯೆಹೋವ ದೇವರ ವಿವೇಕವನ್ನು ಬಿಂಬಿಸುತ್ತದೆ. ಆತನು ಕುಟುಂಬ ಜೀವನದ ಮೂಲನೂ ಹೌದು. (ಎಫೆಸ 3:​14, 15) ನೀವೊಬ್ಬ ತಂದೆಯಾಗಿದ್ದರೆ ತಂದೆತನದ ಕುರಿತು ಬೈಬಲ್‌ ಏನನ್ನುತ್ತದೆ ಎಂಬುದನ್ನು ಪರಿಗಣಿಸುವುದು ಒಳ್ಳೇದು. *

ಒಳ್ಳೇ ತಂದೆಯಾಗಿರುವುದು ನಿಮ್ಮ ಮಕ್ಕಳ ಶಾರೀರಿಕ ಮತ್ತು ಭಾವನಾತ್ಮಕ ಸುಕ್ಷೇಮಕ್ಕೆ ಪ್ರಾಮುಖ್ಯ ಮಾತ್ರವಲ್ಲ ಆಧ್ಯಾತ್ಮಿಕ ಸುಕ್ಷೇಮಕ್ಕೂ ಅತ್ಯಾವಶ್ಯಕ. ತಂದೆಯೊಂದಿಗೆ ಅತಿಪ್ರೀತಿಯ ಹಾಗೂ ಅತ್ಯಾಪ್ತ ಸಂಬಂಧವಿರುವ ಮಗನು ದೇವರೊಂದಿಗೂ ಅತ್ಯಾಪ್ತ ಸಂಬಂಧವನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು. ಎಷ್ಟೆಂದರೂ ನಮ್ಮ ನಿರ್ಮಾಣಿಕನಾದ ಯೆಹೋವ ದೇವರೂ ಒಂದರ್ಥದಲ್ಲಿ ನಮ್ಮ ತಂದೆ ಎಂಬದಾಗಿ ಬೈಬಲ್‌ ಹೇಳುತ್ತದಲ್ಲಾ. (ಯೆಶಾಯ 64:⁠8) ತಂದೆಯಿಂದ ಮಕ್ಕಳಿಗೆ ಅಗತ್ಯವಿರುವ ಆರು ವಿಷಯಗಳನ್ನು ನಾವೀಗ ನೋಡೋಣ. ಆ ಅಗತ್ಯವನ್ನು ಪೂರೈಸಲು ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸುವುದು ಒಬ್ಬ ತಂದೆಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಒಂದೊಂದಾಗಿ ಪರಿಗಣಿಸೋಣ.

1 ಮಕ್ಕಳಿಗೆ ತಂದೆಯ ಪ್ರೀತಿ ಬೇಕು

ಸ್ವತಃ ತಂದೆಯಾದ ಯೆಹೋವ ದೇವರು ಪರಿಪೂರ್ಣ ಮಾದರಿಯಾಗಿದ್ದಾನೆ. ತನ್ನ ಜೇಷ್ಠಪುತ್ರನಾದ ಯೇಸುವಿನ ಕುರಿತು ದೇವರಿಗಿರುವ ಅನಿಸಿಕೆಯ ಬಗ್ಗೆ ಬೈಬಲ್‌ ಹೇಳುವುದು: ‘ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸುತ್ತಾನೆ.’ (ಯೋಹಾನ 3:35; ಕೊಲೊಸ್ಸೆ 1:15) ತನ್ನ ಮಗನ ಮೇಲಿದ್ದ ಪ್ರೀತಿ ಮತ್ತು ಮೆಚ್ಚಿಕೆಯನ್ನು ಯೆಹೋವನು ಒಂದಕ್ಕಿಂತಲೂ ಹೆಚ್ಚು ಸಲ ವ್ಯಕ್ತಪಡಿಸಿದನು. ಯೇಸು ದೀಕ್ಷಾಸ್ನಾನ ಪಡೆದಾಗ ಯೆಹೋವನು ಸ್ವರ್ಗದಿಂದ ಮಾತಾಡುತ್ತಾ ಅಂದದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.” (ಲೂಕ 3:22) ತಂದೆಗೆ ತನ್ನ ಮೇಲಿದ್ದ ಪ್ರೀತಿಯನ್ನು ಯೇಸು ಎಂದೂ ಸಂಶಯಿಸಲಿಲ್ಲ. ದೇವರ ಮಾದರಿಯಿಂದ ಮಾನವ ತಂದೆಯಂದಿರು ಏನು ಕಲಿಯಬಹುದು?

ನೀವು ನಿಮ್ಮ ಮಕ್ಕಳನ್ನು ‘ಪ್ರೀತಿಸುತ್ತೀರಿ’ ಎಂದು ಮಾತಿನಲ್ಲಿ ವ್ಯಕ್ತಪಡಿಸಲು ಎಂದಿಗೂ ಹಿಂಜರಿಯಬೇಡಿ. ಐದು ಮಕ್ಕಳ ತಂದೆಯಾದ ಕೆಲ್ವಿನ್‌ ಅನ್ನುವುದು: “ಮಕ್ಕಳನ್ನು ಪ್ರೀತಿಸುತ್ತೇನೆಂದು ಹೇಳುವ ಮೂಲಕ ಮಾತ್ರವಲ್ಲ ಅವರಲ್ಲಿ ಪ್ರತಿಯೊಬ್ಬನಲ್ಲೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ನಾನು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದೆ. ಚಿಕ್ಕವರಿರುವಾಗ ಅವರಿಗೆ ಸ್ನಾನಮಾಡಿಸಿ ಒರಸಿ ಶುಚಿಗೊಳಿಸುತ್ತಲೂ ಇದ್ದೆ.” ಅಷ್ಟೇಅಲ್ಲ, ನೀವು ಅವರನ್ನು ಇಷ್ಟಪಡುತ್ತೀರಿ ಎಂದು ನಿಮ್ಮ ಮಕ್ಕಳಿಗೆ ತಿಳಿದಿರುವ ಅಗತ್ಯವಿದೆ. ಆದ್ದರಿಂದ ಅವರನ್ನು ಸದಾ ತಿದ್ದುತ್ತಾ ಅತಿಯಾಗಿ ಟೀಕಿಸುವವರಾಗಿರಬೇಡಿ. ಬದಲಿಗೆ ಮುಕ್ತವಾಗಿ ಹೊಗಳಿರಿ. ಇಬ್ಬರು ಹದಿಹರೆಯದ ಹೆಣ್ಮಕ್ಕಳ ತಂದೆ ಡಾನಿಜೆಟ್‌ ಹೇಳುವುದು: “ತನ್ನ ಮಕ್ಕಳನ್ನು ಹೊಗಳುವ ಸಂದರ್ಭಗಳಿಗಾಗಿ ತಂದೆಯು ಸದಾ ಹುಡುಕುತ್ತಿರಬೇಕು.” ನೀವು ಅವರನ್ನು ಮೆಚ್ಚುತ್ತೀರಿ ಎಂಬ ಅರಿವು ಅವರಲ್ಲಿ ಹಿತಕರವಾದ ಆತ್ಮಗೌರವವನ್ನು ಮೂಡಿಸಲು ನೆರವಾಗುವುದು. ಇದರಿಂದಾಗಿ ಮಕ್ಕಳು ದೇವರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲೂ ಶಕ್ತರಾಗಬಹುದು.

2 ಮಕ್ಕಳಿಗೆ ಉತ್ತಮ ಮಾದರಿ ಬೇಕು

“ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ” ಎಂದು ಯೇಸುವಿನ ಕುರಿತು ಯೋಹಾನ 5:19 ಹೇಳುತ್ತದೆ. ತಂದೆಯು “ಮಾಡುವದನ್ನು” ಕಂಡು ಯೇಸು ಅದರಂತೆ ಮಾಡಿದನೆಂದು ಮೇಲಿನ ವಚನ ಹೇಳುವುದನ್ನು ಗಮನಿಸಿ. ಮಕ್ಕಳು ಹೆಚ್ಚಾಗಿ ಅದನ್ನೇ ಮಾಡುತ್ತಾರೆ. ಉದಾಹರಣೆಗೆ, ತಂದೆ ತನ್ನ ಹೆಂಡತಿಗೆ ಮಾನಮರ್ಯಾದೆ ತೋರಿಸುವುದಾದರೆ ಅವನ ಮಗನೂ ದೊಡ್ಡವನಾದಾಗ ಸ್ತ್ರೀಯರಿಗೆ ಮಾನಮರ್ಯಾದೆಯನ್ನು ತೋರಿಸುವನು. ತಂದೆಯ ಉತ್ತಮ ಮಾದರಿಯಿಂದ ಗಂಡುಮಕ್ಕಳ ಮನೋಭಾವವು ಪ್ರಭಾವಿಸಲ್ಪಡುತ್ತದೆ ಮಾತ್ರವಲ್ಲ ಪುರುಷರ ಕಡೆಗೆ ಹೆಣ್ಣು ಮಕ್ಕಳಿಗಿರುವ ನೋಟವು ಸಹ ಪ್ರಭಾವಿಸಲ್ಪಡುತ್ತದೆ.

ನಿಮ್ಮ ಮಕ್ಕಳಿಗೆ ಕ್ಷಮೆ ಕೇಳಲು ಕಷ್ಟವೊ? ಇಲ್ಲಿ ಸಹ ನಿಮ್ಮ ಮಾದರಿಯು ಅತ್ಯಾವಶ್ಯಕ. ಒಂದು ಸಂದರ್ಭದಲ್ಲಿ ತನ್ನ ಇಬ್ಬರು ಗಂಡುಮಕ್ಕಳು ದುಬಾರಿ ಕ್ಯಾಮರವೊಂದನ್ನು ಒಡೆದುಬಿಟ್ಟದ್ದನ್ನು ಕೆಲ್ವಿನ್‌ ನೆನಪಿಸಿಕೊಳ್ಳುತ್ತಾನೆ. ಅವನಿಗೆ ಬಂದ ಸಿಟ್ಟಿನ ಭರದಲ್ಲಿ ಮೇಜನ್ನು ಎಷ್ಟು ಬಲವಾಗಿ ಗುದ್ದಿದನೆಂದರೆ ಅದು ಮುರಿದು ಇಬ್ಭಾಗವಾಯಿತು. ಆಮೇಲೆ ಕೆಲ್ವಿನ್‌ಗೆ ತುಂಬ ಬೇಸರವಾದ್ದರಿಂದ ಅವನು ತನ್ನ ಮುಂಗೋಪಕ್ಕಾಗಿ ಮಕ್ಕಳ ಬಳಿ ಮಾತ್ರವಲ್ಲ ಪತ್ನಿಯೊಂದಿಗೂ ಕ್ಷಮೆ ಕೇಳಿದನು. ಕ್ಷಮೆಯಾಚಿಸುವಿಕೆಯು ತನ್ನ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಿತೆಂದು ಅವನು ನೆನಸುತ್ತಾನೆ. ಅವನ ಮಕ್ಕಳು ಈಗ ಮುಜುಗರವಿಲ್ಲದೆ ಕ್ಷಮೆಕೇಳುತ್ತಾರೆ.

3 ಮಕ್ಕಳಿಗೆ ಸಂತೋಷದ ಪರಿಸರ ಬೇಕು

ಯೆಹೋವನು “ಸಂತೋಷದ ದೇವರು.” (1 ತಿಮೊಥೆಯ 1:11) ಆದ್ದರಿಂದಲೇ ಆತನ ಪುತ್ರನಾದ ಯೇಸು ತನ್ನ ತಂದೆಯೊಂದಿಗಿರಲು ಬಹಳ ಸಂತೋಷಿಸಿದ್ದನೆಂಬುದಕ್ಕೆ ಸಂದೇಹವಿಲ್ಲ. ಯೇಸು ಮತ್ತು ಅವನ ತಂದೆಯ ನಡುವೆಯಿದ್ದ ಸಂಬಂಧದ ಮೇಲೆ ಜ್ಞಾನೋಕ್ತಿ 8:30 ಬೆಳಕುಬೀರುತ್ತದೆ: “ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ . . . ಇದ್ದೆನು.” (ಜ್ಞಾನೋಕ್ತಿ 8:30) ತಂದೆ-ಮಗನ ಮಧ್ಯೆ ಎಂತಹ ಪ್ರೀತಿಯ ಸಂಬಂಧವು ಅಸ್ತಿತ್ವದಲ್ಲಿತ್ತು!

ನಿಮ್ಮ ಮಕ್ಕಳಿಗೆ ಸಂತೋಷದ ಪರಿಸರ ಬೇಕು. ಅವರೊಂದಿಗೆ ಕೂಡಿ ಆಟವಾಡಲು ಸಮಯ ಕೊಡುವಾಗ ಅಂಥ ಸಂತೋಷದ ವಾತಾವರಣವನ್ನು ಸೃಷ್ಟಿಸಲು ಸಾಧ್ಯ. ಒಟ್ಟುಗೂಡಿ ಆಡುವ ಮೂಲಕ ಹೆತ್ತವರ ಮತ್ತು ಮಕ್ಕಳ ಬಂಧವು ಬಲಗೊಳ್ಳುತ್ತದೆ. ಫೆಲಿಕ್ಸ್‌ ಅದನ್ನು ಒಪ್ಪುತ್ತಾನೆ. ಹದಿಹರೆಯದ ಮಗನಿರುವ ಅವನನ್ನುವುದು: “ನನ್ನ ಮಗನೊಂದಿಗೆ ಆಟ-ವಿನೋದಕ್ಕೆ ಸಮಯ ಕೊಡುವುದು ನಮ್ಮ ಸಂಬಂಧಕ್ಕೆ ಅತಿ ಪ್ರಾಮುಖ್ಯವಾಗಿತ್ತು. ನಾವು ಕೂಡಿ ಆಡುತ್ತೇವೆ, ಸ್ನೇಹಿತರನ್ನು ಭೇಟಿಮಾಡುತ್ತೇವೆ, ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುತ್ತೇವೆ. ಇದು ನಮ್ಮ ಕೌಟುಂಬಿಕ ಐಕ್ಯವನ್ನು ಬಲಪಡಿಸಿದೆ.”

4 ಮಕ್ಕಳಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಕಲಿಸಬೇಕು

ಯೇಸು ತನ್ನ ತಂದೆಯಿಂದ ಕಲಿತುಕೊಂಡನು. ಆದಕಾರಣ ಅವನು ಹೇಳಿದ್ದು: “ಆತನಿಂದ ನಾನು ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ.” (ಯೋಹಾನ 8:26) ದೇವರ ದೃಷ್ಟಿಯಲ್ಲಿ ಮಕ್ಕಳಿಗೆ ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶಿಕ್ಷಣಕೊಡುವ ಜವಾಬ್ದಾರಿ ತಂದೆಯದ್ದು. ತಂದೆಯಾದ ನಿಮಗಿರುವ ಜವಾಬ್ದಾರಿಯಲ್ಲಿ ಒಂದು ಯಾವುದೆಂದರೆ ನಿಮ್ಮ ಮಕ್ಕಳ ಹೃದಯದಲ್ಲಿ ನೀತಿಯ ತತ್ವಗಳನ್ನು ಬೇರೂರಿಸುವುದೇ. ಅಂಥ ತರಬೇತಿಯನ್ನು ಬಾಲ್ಯದಿಂದಲೇ ಆರಂಭಿಸಬೇಕು. (2 ತಿಮೊಥೆಯ 3:​14, 15) ಫೆಲಿಕ್ಸನು ತನ್ನ ಮಗನಿಗೆ ಚಿಕ್ಕಂದಿನಿಂದಲೇ ಬೈಬಲ್‌ ಕಥೆಗಳನ್ನು ಓದಿ ಹೇಳುತ್ತಿದ್ದನು. ಬೈಬಲ್‌ ಕಥೆಗಳ ನನ್ನ ಪುಸ್ತಕದಲ್ಲಿರುವ ಸಚಿತ್ರ, ಸ್ವಾರಸ್ಯಕರ ಕಥೆಗಳನ್ನೂ ಉಪಯೋಗಿಸುತ್ತಿದ್ದನು. * ಮಗನು ಬೆಳೆದು ದೊಡ್ಡವನಾದಂತೆ ಫೆಲಿಕ್ಸ್‌ನು ಸೂಕ್ತವಾದ ಇತರ ಬೈಬಲ್‌ ಸಾಹಿತ್ಯವನ್ನು ಬಳಸಿದನು.

“ಕುಟುಂಬ ಬೈಬಲ್‌ ಅಧ್ಯಯನವನ್ನು ಆನಂದಕರವನ್ನಾಗಿ ಮಾಡುವುದು ನಿಜವಾಗಿಯೂ ಅಷ್ಟೇನು ಸುಲಭವಲ್ಲ. ಆಧ್ಯಾತ್ಮಿಕ ವಿಷಯಗಳನ್ನು ತಾವು ಗಣ್ಯಮಾಡುತ್ತೇವೆಂದು ಮೊದಲು ಹೆತ್ತವರು ತೋರಿಸುವುದು ಪ್ರಾಮುಖ್ಯ. ಏಕೆಂದರೆ ಹೆತ್ತವರು ಹೇಳುವುದೊಂದು ಮಾಡುವುದು ಇನ್ನೊಂದಾದರೆ ಮಕ್ಕಳು ಅದನ್ನು ಕೂಡಲೆ ಗಮನಿಸುತ್ತಾರೆ” ಎಂದು ಡಾನಿಜೆಟ್‌ ಹೇಳುತ್ತಾನೆ. ಮೂರು ಗಂಡುಮಕ್ಕಳ ತಂದೆಯಾದ ಕಾರ್ಲೋಸ್‌ ಹೇಳುವುದು: “ಕುಟುಂಬದ ಅಗತ್ಯಗಳನ್ನು ಚರ್ಚಿಸಲು ವಾರಕ್ಕೊಮ್ಮೆ ನಾವು ಕೂಡಿಬರುತ್ತೇವೆ. ಚರ್ಚಿಸುವ ವಿಷಯಗಳನ್ನು ಆರಿಸಿಕೊಳ್ಳಲು ಕುಟುಂಬದ ಪ್ರತಿ ಸದಸ್ಯನಿಗೆ ಅವಕಾಶವಿದೆ.” ತನ್ನ ಮಕ್ಕಳು ಎಲ್ಲೇ ಇರಲಿ ಏನೇ ಮಾಡುತ್ತಿರಲಿ ಅವರೊಂದಿಗೆ ದೇವರ ಕುರಿತು ಮಾತಾಡಲು ಕೆಲ್ವಿನ್‌ ಅವಕಾಶ ಹುಡುಕಿದನು. ಇದು ಮೋಶೆಯ ಮಾತುಗಳನ್ನು ನೆನಪಿಗೆ ತರುತ್ತದೆ: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”​—⁠ಧರ್ಮೋಪದೇಶಕಾಂಡ 6:​6, 7.

5 ಮಕ್ಕಳಿಗೆ ಶಿಸ್ತು ಅಗತ್ಯ

ಮಕ್ಕಳು ಬೆಳೆದು ಪರಿಶ್ರಮಿಗಳೂ ಜವಾಬ್ದಾರಿಯುತರೂ ಆಗುವಂತೆ ಅವರಿಗೆ ಶಿಸ್ತು ಅವಶ್ಯ. ಮಕ್ಕಳಿಗೆ ಶಿಸ್ತುಕೊಡುವುದೆಂದರೆ ಅವರನ್ನು ಸರಿಯಾಗಿ ಹೊಡೆದು ಬಡಿದು ಬೆದರಿಸುವುದೆಂದು ಕೆಲವು ಹೆತ್ತವರ ಅನಿಸಿಕೆ. ಆದರೆ ಹೆತ್ತವರು ಹಾಗೆ ಕಠಿಣವಾಗಿ ಶಿಕ್ಷಿಸಬೇಕೆಂದು ಬೈಬಲ್‌ ಹೇಳುವುದಿಲ್ಲ. ಬದಲಾಗಿ ಯೆಹೋವನು ಶಿಕ್ಷಿಸುವ ರೀತಿಯಲ್ಲಿ ಅಂದರೆ ಪ್ರೀತಿಪೂರ್ವಕವಾಗಿ ಶಿಕ್ಷಿಸಬೇಕು. (ಇಬ್ರಿಯ 12:​4-11) ಬೈಬಲ್‌ ಅನ್ನುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.”​—⁠ಎಫೆಸ 6:⁠4.

ಆಗಿಂದಾಗ್ಗೆ ಶಿಕ್ಷೆಕೊಡುವ ಅಗತ್ಯವೂ ಇರಬಹುದು. ಆದರೆ ಹಾಗೆ ಶಿಕ್ಷೆಕೊಡುವ ಕಾರಣವನ್ನು ಮಗು ತಿಳಿದಿರಬೇಕು. ಹೆತ್ತವರು ಕೊಡುವ ಶಿಕ್ಷೆಯಿಂದಾಗಿ ಮಗುವಿಗೆ ‘ನಾನು ಅಪ್ಪಅಮ್ಮಗೆ ಬೇಡವಾಗಿದ್ದೇನೋ’ ಎಂಬ ಭಾವನೆ ಬರಬಾರದು. ಮಕ್ಕಳನ್ನು ಸಿಕ್ಕಾಪಟ್ಟೆ ಹೊಡೆದು ಗಾಯಗೊಳಿಸುವುದನ್ನು ಬೈಬಲ್‌ ಒಪ್ಪುವುದಿಲ್ಲ. (ಜ್ಞಾನೋಕ್ತಿ 16:32) ಕೆಲ್ವಿನ್‌ ಹೇಳುವುದು: “ಗಂಭೀರ ವಿಷಯಗಳ ಕುರಿತು ನಮ್ಮ ಮಕ್ಕಳನ್ನು ತಿದ್ದಲು ನಾನು ಅವರಿಗೆ ಶಿಕ್ಷೆಕೊಡುತ್ತಿದ್ದೆ. ಆದರೆ ಅವರ ಮೇಲೆ ಪ್ರೀತಿಯಿರುವುದರಿಂದಲೇ ಶಿಕ್ಷೆಕೊಡುತ್ತಿದ್ದೇನೆಂದು ಸ್ಪಷ್ಟಪಡಿಸುತ್ತಿದ್ದೆ.”

6 ಮಕ್ಕಳಿಗೆ ಸಂರಕ್ಷಣೆ ಬೇಕು

ಅಯೋಗ್ಯ ಪ್ರಭಾವಗಳಿಂದ ಹಾಗೂ ಅಪಾಯಕರ ಸಹವಾಸಿಗಳಿಂದ ಮಕ್ಕಳನ್ನು ಕಾಪಾಡುವ ಅಗತ್ಯವಿದೆ. ಮುಗ್ಧ ಮಕ್ಕಳನ್ನು ವಂಚಿಸಲು ಪಣತೊಟ್ಟಿರುವ ‘ದುಷ್ಟ’ ಜನರು ಈ ಲೋಕದಲ್ಲಿರುವುದು ವಿಷಾದಕರ. (2 ತಿಮೊಥೆಯ 3:​1-5, 13) ಅಂಥವರಿಂದ ನಿಮ್ಮ ಮಕ್ಕಳನ್ನು ನೀವು ಹೇಗೆ ಸಂರಕ್ಷಿಸಬಹುದು? ಬೈಬಲ್‌ ಈ ವಿವೇಕಯುತ ಸಲಹೆಯನ್ನು ನೀಡುತ್ತದೆ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:⁠3) ವಿಪತ್ತಿನಿಂದ ನಿಮ್ಮ ಮಕ್ಕಳನ್ನು ತಪ್ಪಿಸಲಿಕ್ಕಾಗಿ ಅವರ ಮುಂದಿರುವ ಅಪಾಯಗಳಿಗೆ ನೀವು ಎಚ್ಚರವಾಗಿರಬೇಕು. ಸಮಸ್ಯೆಗಳಿಗೆ ನಡೆಸಬಹುದಾದ ಸನ್ನಿವೇಶಗಳನ್ನು ಮುನ್ನೋಡಿರಿ ಮತ್ತು ಸೂಕ್ತ ಮುಂಜಾಗ್ರತೆಗಳನ್ನು ವಹಿಸಿರಿ. ಉದಾಹರಣೆಗೆ, ಇಂಟರ್‌ನೆಟ್‌ ವೀಕ್ಷಿಸಲು ನೀವು ಮಕ್ಕಳಿಗೆ ಅನುಮತಿಸುವುದಾದರೆ ಅದನ್ನು ಸುರಕ್ಷಿತವಾಗಿ ಬಳಸುವ ರೀತಿ ಅವರಿಗೆ ತಿಳಿದಿದೆ ಎಂಬುದನ್ನು ಖಾತ್ರಿಗೊಳಿಸಿ. ಕಂಪ್ಯೂಟರನ್ನು ಎಲ್ಲರಿಗೂ ಕಾಣುವಂಥ ಸ್ಥಳದಲ್ಲಿ ಇಡುವ ಮೂಲಕ ನೀವದರ ಬಳಕೆಯನ್ನು ಸುಲಭವಾಗಿ ಮೇಲ್ವಿಚಾರ ಮಾಡಬಹುದು.

ಮಕ್ಕಳನ್ನು ದುರುಪಯೋಗಿಸುವ ಈ ದುಷ್ಟ ಲೋಕದಲ್ಲಿ ಮುಂಬರುವ ಅಪಾಯಗಳನ್ನು ಎದುರಿಸಲು ತಂದೆಯೊಬ್ಬನು ಮಕ್ಕಳನ್ನು ಸಜ್ಜುಗೊಳಿಸಿ ತರಬೇತಿ ನೀಡಬೇಕು. ನೀವಿರದಾಗ ಮಕ್ಕಳನ್ನು ಯಾರಾದರೂ ದುರುಪಯೋಗಿಸಲು ಪ್ರಯತ್ನಿಸುವಲ್ಲಿ ಏನು ಮಾಡಬೇಕೆಂದು ನಿಮ್ಮ ಮಕ್ಕಳಿಗೆ ತಿಳಿದಿದೆಯೋ? * ತಮ್ಮ ಶರೀರದ ಗುಪ್ತಾಂಗಗಳ ಯೋಗ್ಯ ಮತ್ತು ಅಯೋಗ್ಯ ಉಪಯೋಗಗಳನ್ನು ನಿಮ್ಮ ಮಕ್ಕಳು ತಿಳಿದಿರಬೇಕು. ಕೆಲ್ವಿನ್‌ ಹೇಳುವುದು: “ನಾನು ಈ ತರಬೇತಿಯನ್ನು ಬೇರೆ ಯಾರಿಗೂ ವಹಿಸಿಕೊಡಲಿಲ್ಲ, ಶಾಲಾ ಟೀಚರ್‌ಗಳಿಗೆ ಸಹ. ನನ್ನ ಮಕ್ಕಳಿಗೆ ಸೆಕ್ಸ್‌ನ ಕುರಿತು ಕಲಿಸುವ ಮತ್ತು ಮಕ್ಕಳ ಮೇಲೆ ಅತ್ಯಾಚಾರವಾಗುವ ಅಪಾಯದ ಕುರಿತು ಕಲಿಸುವ ಜವಾಬ್ದಾರಿ ನನ್ನದು.” ಅವನ ಮಕ್ಕಳೆಲ್ಲರೂ ಈಗ ಹದಿವಯಸ್ಸನ್ನು ಸುರಕ್ಷಿತವಾಗಿ ದಾಟಿ ಮದುವೆಯಾಗಿ ಸಂತೋಷದಿಂದಿದ್ದಾರೆ.

ದೇವರ ಸಹಾಯವನ್ನು ಕೋರಿ

ತಂದೆಯು ತನ್ನ ಮಕ್ಕಳಿಗೆ ಕೊಡಬಲ್ಲ ಅತ್ಯಂತ ದೊಡ್ಡ ಉಡುಗೊರೆ ಯಾವುದೆಂದರೆ ಅವರು ದೇವರೊಂದಿಗೆ ದೃಢವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದೇ. ಇದರಲ್ಲಿ ತಂದೆಯ ಮಾದರಿಯು ಅತ್ಯಂತ ಪ್ರಾಮುಖ್ಯ. ಡಾನಿಜೆಟ್‌ ಹೇಳುವುದು: “ದೇವರೊಂದಿಗೆ ತಮಗಿರುವ ಸಂಬಂಧವನ್ನು ತಾವೆಷ್ಟು ನೆಚ್ಚುತ್ತೇವೆಂದು ತಂದೆಯಂದಿರು ತೋರಿಸಿಕೊಡುವ ಅಗತ್ಯವಿದೆ. ಇದು ವಿಶೇಷವಾಗಿ ಅವರು ವೈಯಕ್ತಿಕ ಕಷ್ಟಸಮಸ್ಯೆಗಳನ್ನು ಎದುರಿಸುವಾಗ ಸ್ಪಷ್ಟವಾಗಿ ತೋರಿಬರಬೇಕು. ಅಂಥಾ ಸಂದರ್ಭಗಳಲ್ಲಿ ತಾನು ಯೆಹೋವನಲ್ಲಿ ಎಷ್ಟು ಗಾಢ ಭರವಸೆಯಿಟ್ಟಿದ್ದೇನೆಂದು ತಂದೆ ತೋರಿಸುತ್ತಾನೆ. ಯೆಹೋವನ ಒಳ್ಳೇತನಕ್ಕಾಗಿ ಪದೇಪದೇ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಮಾಡುವ ಕುಟುಂಬ ಪ್ರಾರ್ಥನೆಗಳು ಮಕ್ಕಳಿಗೆ ದೇವರನ್ನು ತಮ್ಮ ಮಿತ್ರನನ್ನಾಗಿ ಮಾಡುವ ಮಹತ್ತ್ವವನ್ನು ಕಲಿಸುತ್ತವೆ.”

ಹಾಗಾದರೆ, ಒಳ್ಳೇ ತಂದೆಯಾಗಿರುವುದರಲ್ಲಿ ಅಡಗಿರುವ ಗುಟ್ಟೇನು? ಮಕ್ಕಳನ್ನು ಬೆಳೆಸುವುದು ಹೇಗೆ ಎಂದು ಅತ್ಯುತ್ತಮವಾಗಿ ತಿಳಿದಿರುವ ಯೆಹೋವ ದೇವರ ಸಹಾಯವನ್ನು ಕೋರಿರಿ. ದೇವರ ವಾಕ್ಯದ ಮಾರ್ಗದರ್ಶನಕ್ಕೆ ಅನುಸಾರವಾಗಿ ನಿಮ್ಮ ಮಕ್ಕಳನ್ನು ತರಬೇತುಗೊಳಿಸುವುದಾದರೆ ಜ್ಞಾನೋಕ್ತಿ 22:6ರಲ್ಲಿ ವರ್ಣಿಸಲಾದ ಈ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (w08 10/1)

[ಪಾದಟಿಪ್ಪಣಿಗಳು]

^ ಪ್ಯಾರ. 6 ಈ ಲೇಖನದಲ್ಲಿ ಕೊಡಲಾದ ಬೈಬಲ್‌ ಸಲಹೆಯು ಮುಖ್ಯವಾಗಿ ತಂದೆಯ ಪಾತ್ರದ ಮೇಲೆ ಕೇಂದ್ರೀಕರಿಸುತ್ತದಾದರೂ ಅದರ ಅನೇಕ ಮೂಲತತ್ತ್ವಗಳು ತಾಯಂದಿರಿಗೂ ಅನ್ವಯಿಸುತ್ತವೆ.

^ ಪ್ಯಾರ. 18 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.

^ ಪ್ಯಾರ. 25 ಲೈಂಗಿಕ ದುರುಪಚಾರದಿಂದ ಮಕ್ಕಳನ್ನು ಸಂರಕ್ಷಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಚ್ಚರ! (ಇಂಗ್ಲಿಷ್‌) 2007, ಅಕ್ಟೋಬರ್‌ ಸಂಚಿಕೆಯ ಪುಟ 3-11 ನೋಡಿ. ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.

[ಪುಟ 21ರಲ್ಲಿರುವ ಚಿತ್ರ]

ತಂದೆ ತನ್ನ ಮಕ್ಕಳಿಗೆ ಉತ್ತಮ ಮಾದರಿಯಾಗಿರಬೇಕು

[ಪುಟ 22ರಲ್ಲಿರುವ ಚಿತ್ರ]

ತಂದೆ ತನ್ನ ಮಕ್ಕಳ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬೇಕು

[ಪುಟ 23ರಲ್ಲಿರುವ ಚಿತ್ರ]

ಮಕ್ಕಳಿಗೆ ಪ್ರೀತಿಪೂರ್ಣ ಶಿಸ್ತು ಅಗತ್ಯ