ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯ ಪ್ರಿಯನು

ನ್ಯಾಯ ಪ್ರಿಯನು

ದೇವರ ಸಮೀಪಕ್ಕೆ ಬನ್ನಿರಿ

ನ್ಯಾಯ ಪ್ರಿಯನು

ಇಬ್ರಿಯ 10:​26-31

ಯಾರಾದರೂ ನಿಮಗೆ ಅನ್ಯಾಯ ಮಾಡಿದ್ದಾರೋ ಅಥವಾ ನಿಮ್ಮೊಂದಿಗೆ ಕ್ರೂರವಾಗಿ ನಡಕೊಂಡಿದ್ದಾರೋ? ಹಾಗೆ ಮಾಡಿದ ಮೇಲೂ ಅದಕ್ಕಾಗಿ ಅವರು ಯಾವ ಪರಿತಾಪವನ್ನೂ ತೋರಿಸದೆ ಯಾವ ಶಿಕ್ಷೆಯನ್ನೂ ಅನುಭವಿಸದೆ ಇದ್ದಾರೋ? ಸಹಿಸಲು ಕಷ್ಟಕರವಾದ ಅನ್ಯಾಯಗಳಲ್ಲಿ ಇದಕ್ಕಿಂತ ಘೋರವಾದದ್ದು ಬೇರೆ ಇಲ್ಲ. ಅದರಲ್ಲೂ ನಿಮ್ಮನ್ನು ಪ್ರೀತಿಸಿ ಪಾಲಿಸುವರೆಂದು ನೀವು ನಿರೀಕ್ಷಿಸುವ ವ್ಯಕ್ತಿಯು ಹಾಗೆ ಮಾಡಿದಾಗಲಂತೂ ಅದು ಅತ್ಯಂತ ಕಷ್ಟಕರ. ‘ಇಂಥದೆಲ್ಲ ಆಗಲಿಕ್ಕೆ ದೇವರು ಯಾಕೆ ಬಿಡುತ್ತಾನೋ’ ಎಂದು ನೀವು ಯೋಚಿಸುತ್ತಿರಬಹುದು. * ನಿಜ ಸಂಗತಿಯೇನಂದರೆ ಯೆಹೋವ ದೇವರು ಸಕಲ ಅನ್ಯಾಯಗಳನ್ನು ದ್ವೇಷಿಸುತ್ತಾನೆ. ಪಾಪವನ್ನು ಮಾಡುತ್ತಾ ಇರುವ ಕಠಿನ ಹೃದಯದ ಮನುಷ್ಯರು ದೇವರ ನ್ಯಾಯದಂಡನೆಯನ್ನು ಪಾರಾಗಲಾರರು ಎಂದು ದೇವರ ವಾಕ್ಯವಾದ ಬೈಬಲ್‌ ನಮಗೆ ಭರವಸೆ ನೀಡುತ್ತದೆ. ಇಬ್ರಿಯ 10:​26-31ರಲ್ಲಿರುವ ಅಪೊಸ್ತಲ ಪೌಲನ ಮಾತುಗಳನ್ನು ನಾವೀಗ ಪರಿಗಣಿಸೋಣ.

ಪೌಲನು ಬರೆದುದು: “ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ.” (ವಚನ 26) ಬೇಕುಬೇಕೆಂದು ಪಾಪಮಾಡುವವರು ಅತ್ಯಂತ ಹೆಚ್ಚು ಶಿಕ್ಷಾಪಾತ್ರರು. ಏಕೆ? ಮೊದಲನೆದಾಗಿ, ಅವರ ಪಾಪವು ಬಲಹೀನತೆಯ ಕ್ಷಣದಲ್ಲಿ ಒಮ್ಮೆ ಮಾತ್ರ ಮಾಡಲಾದ ಪಾಪವಲ್ಲ. ಅವರು ಪದೇಪದೇ ಪಾಪವನ್ನು ರೂಢಿಯಾಗಿ ಮಾಡುತ್ತಾರೆ. ನಾವೆಲ್ಲರೂ ಅಪರಿಪೂರ್ಣತೆಯಿಂದ ಮಾಡುವ ತಪ್ಪಿನ ಹಾಗೆ ಅದು ಇರುವುದಿಲ್ಲ. ಎರಡನೆಯದಾಗಿ, ಅವರು ಪಾಪ ಮಾಡುವುದು ಉದ್ದೇಶಪೂರ್ವಕವಾಗಿ. ಬೈಬಲ್‌ ಅನ್ನುವ ಪ್ರಕಾರ ಅವರು “ಬೇಕೆಂದು ಪಾಪ” ಮಾಡುತ್ತಾರೆ. ಕೆಟ್ಟತನವು ಅವರ ಹೃದಯದಲ್ಲಿ ಆಳವಾಗಿ ಬೇರುಬಿಟ್ಟಿರುತ್ತದೆ. ಮೂರನೇದಾಗಿ, ಅವರ ಪಾಪಗಳು ಅರಿವಿಲ್ಲದೆ ಮಾಡಿದ ಪಾಪಗಳಲ್ಲ. ದೇವರ ಉದ್ದೇಶ ಮತ್ತು ಮಾರ್ಗಗಳ ಕುರಿತ “ಸತ್ಯದ ಪರಿಜ್ಞಾನವನ್ನು” ಅವರು ಹೊಂದಿದ್ದರೂ ಪಾಪಮಾಡುತ್ತಾರೆ.

ಪಶ್ಚಾತ್ತಾಪಪಡದೆ ದುರುದ್ದೇಶದಿಂದ ಪಾಪ ಮಾಡುವವರನ್ನು ದೇವರು ಹೇಗೆ ವೀಕ್ಷಿಸುತ್ತಾನೆ? “ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ” ಎನ್ನುತ್ತಾನೆ ಪೌಲನು. ಮಾನವಕುಲಕ್ಕೆ ದೇವರ ಕೊಡುಗೆಯಾದ ಕ್ರಿಸ್ತನ ವಿಮೋಚನಾ ಯಜ್ಞವು ನಾವು ಅಪರಿಪೂರ್ಣತೆಯಿಂದ ಮಾಡುವ ಪಾಪಗಳನ್ನು ನಿವಾರಣೆಮಾಡುತ್ತದೆ. (1 ಯೋಹಾನ 2:​1, 2) ಆದರೆ ಪಶ್ಚಾತ್ತಾಪಪಡದೆ ಪಾಪಮಾಡುವವರು ಈ ಅಮೂಲ್ಯ ಕೊಡುಗೆಗಾಗಿ ತಮಗೆ ಯಾವ ಗಣ್ಯತೆಯೂ ಇಲ್ಲವೆಂದು ತೋರಿಸುತ್ತಾರೆ. ದೇವರ ದೃಷ್ಟಿಯಲ್ಲಿ ಅವರು ‘ದೇವಕುಮಾರನನ್ನು ತುಳಿದು, . . . ತಮ್ಮನ್ನು ಪವಿತ್ರಮಾಡಿದಂಥ [ಯೇಸುವಿನ] ರಕ್ತವನ್ನು ಅಶುದ್ಧವೆಂದೆಣಿಸುತ್ತಾರೆ.’ (ವಚನ 29) ತಮ್ಮ ನಡವಳಿಕೆಯ ಮೂಲಕ ಅವರು ಯೇಸುವನ್ನು ತಿರಸ್ಕರಿಸಿ ಆತನ ರಕ್ತವನ್ನು ಒಬ್ಬ ಅಪರಿಪೂರ್ಣ ಮಾನವನ ರಕ್ತವೋ ಎಂಬಂತೆ ‘ಅಶುದ್ಧವಾಗಿ’ ಅಥವಾ ಕೀಳಾಗಿ ಪರಿಗಣಿಸುತ್ತಾರೆ. ಅಂಥ ಕೃತಘ್ನರು ಕ್ರಿಸ್ತನ ವಿಮೋಚನಾ ಯಜ್ಞದಿಂದ ಯಾವ ಪ್ರಯೋಜನವನ್ನೂ ಪಡೆಯಲಾರರು.

ಹೀಗಿರಲಾಗಿ ಇಂಥ ದುಷ್ಟರಿಗೆ ಮುಂದೇನು ಕಾದಿದೆ? ನ್ಯಾಯವಂತನಾದ ದೇವರು ವಾಗ್ದಾನಿಸಿದ್ದು: ‘ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು.’ (ವಚನ 30) ಆದ್ದರಿಂದ ಇತರರಿಗೆ ಅನ್ಯಾಯ ಮಾಡಿ ಪಾಪವನ್ನು ಮಾಡುತ್ತಾ ಇರುವವರೇ, ಎಚ್ಚರ! ದೇವರ ನೀತಿಯ ನಿಯಮಗಳನ್ನು ಬೇಕುಬೇಕೆಂದು ಮುರಿಯುವವರು ದಂಡನೆಯನ್ನು ಹೇಗೂ ತಪ್ಪಿಸಿಕೊಳ್ಳಲಾರರು. ದುಷ್ಟರು ತಾವು ತೋಡಿದ ಗುಂಡಿಗೆ ತಾವೇ ಬೀಳುವರು. (ಗಲಾತ್ಯ 6:⁠7) ಒಂದುವೇಳೆ ಈಗ ಅವರಿಗೆ ಏನೂ ಕೆಡುಕಾಗಲಿಕ್ಕಿಲ್ಲ, ಆದರೆ ಭವಿಷ್ಯದಲ್ಲಿ ಬೇಗನೇ ದೇವರು ಭೂಮಿಯಿಂದ ಸಕಲ ಅನ್ಯಾಯವನ್ನು ತೆಗೆದುಹಾಕುವನು. ಆಗ ಅವರು ತಮ್ಮ ದುಷ್ಕೃತ್ಯದ ಫಲವನ್ನು ಅನುಭವಿಸಲೇಬೇಕು. (ಜ್ಞಾನೋಕ್ತಿ 2:​21, 22) ಪೌಲನು ಎಚ್ಚರಿಸುವುದು: “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು.”​—⁠ವಚನ 31.

ಬೇಕುಬೇಕೆಂದು ಮಾಡಿದ ಪಾಪವನ್ನು ಯೆಹೋವ ದೇವರು ಮನ್ನಿಸಲಾರನು. ದುಷ್ಟರ ಅನ್ಯಾಯದಿಂದಾಗಿ ಮನನೊಂದವರಿಗೆ ಇದನ್ನು ತಿಳಿಯುವುದು ಸಾಂತ್ವನಕರವೂ ಆಶ್ವಾಸನದಾಯಕವೂ ಆಗಿದೆ. ಸಕಲ ಅನ್ಯಾಯವನ್ನು ಹೇಸುವ ದೇವರಾದ ಯೆಹೋವನ ಹಸ್ತಕ್ಕೆ ದುಷ್ಟರಿಗೆ ಮುಯ್ಯಿತೀರಿಸುವುದನ್ನು ಒಪ್ಪಿಸಿ ನಾವು ಭರವಸೆಯಿಂದ ಇರಬಲ್ಲೆವು. (w08 11/1)

[ಪಾದಟಿಪ್ಪಣಿ]

^ ಪ್ಯಾರ. 4 ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸಿದ್ದಾನೆ ಎಂಬ ಚರ್ಚೆಗಾಗಿ ಬೈಬಲ್‌ ನಿಜವಾಗಿ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 106-114 ನೋಡಿ.