ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಸೇಫನ ಅಣ್ಣಂದಿರಂತೆ ನೀವೂ ಹೊಟ್ಟೆಕಿಚ್ಚು ಪಡುತ್ತೀರೋ?

ಯೋಸೇಫನ ಅಣ್ಣಂದಿರಂತೆ ನೀವೂ ಹೊಟ್ಟೆಕಿಚ್ಚು ಪಡುತ್ತೀರೋ?

ನಿಮ್ಮ ಮಕ್ಕಳಿಗೆ ಕಲಿಸಿರಿ

ಯೋಸೇಫನ ಅಣ್ಣಂದಿರಂತೆ ನೀವೂ ಹೊಟ್ಟೆಕಿಚ್ಚು ಪಡುತ್ತೀರೋ?

ಹೊಟ್ಟೆಕಿಚ್ಚು ಅಂದರೇನು ಎಂದು ಸ್ವಲ್ಪ ತಿಳಿಯೋಣ. ಬೇರೆಯವರು ಯಾರನ್ನಾದರೂ ಹೊಗಳಿ ಅವನೆಷ್ಟು ಚೆಂದ, ಎಷ್ಟು ಒಳ್ಳೇ ಹುಡುಗ, ತುಂಬ ಹುಷಾರು ಎಂದೇನಾದರೂ ಹೇಳಿದರೆ ನೀವು ಮುಖ ಸಿಂಡರಿಸಿಕೊಳ್ಳುತ್ತೀರೋ? *​—⁠ಅದಕ್ಕೆ ಹೊಟ್ಟೆಕಿಚ್ಚು ಎನ್ನುತ್ತಾರೆ ಯಾಕೆಂದರೆ ಅಂಥವರನ್ನು ನೋಡಿದರೆ ನಿಮಗಾಗುವುದಿಲ್ಲ.

ಹೆತ್ತವರು ಒಂದು ಮಗುವಿಗಿಂತ ಇನ್ನೊಂದು ಮಗುವನ್ನು ಹೆಚ್ಚು ಮುದ್ದಿಸುವಾಗ ಹೊಟ್ಟೆಕಿಚ್ಚು ಉಂಟಾಗಬಲ್ಲದು. ಹೊಟ್ಟೆಕಿಚ್ಚು ದೊಡ್ಡ ಸಮಸ್ಯೆಯನ್ನೇ ತಂದ ಒಂದು ಕುಟುಂಬದ ಕುರಿತು ಬೈಬಲ್‌ ತಿಳಿಸುತ್ತದೆ. ಅದು ತಂದ ತೊಂದರೆ ಮತ್ತು ಅದರಿಂದ ನಾವು ಕಲಿಯಬಲ್ಲ ಪಾಠದ ಕುರಿತು ನಾವು ಸ್ವಲ್ಪ ಚರ್ಚಿಸೋಣ.

ಯೋಸೇಫನು ಯಾಕೋಬನ 11ನೇ ಮಗ. ಯೋಸೇಫನೆಂದರೆ ಅವನ ಮಲಅಣ್ಣಂದಿರಿಗೆ ಹೊಟ್ಟೆಉರಿ. ಏಕೆಂದು ನಿಮಗೆ ಗೊತ್ತೋ?​—⁠ಏಕೆಂದರೆ ಅವರ ತಂದೆ ಯೋಸೇಫನನ್ನು ಅತಿಯಾಗಿ ಮುದ್ದಿಸುತ್ತಿದ್ದನು. ಉದಾಹರಣೆಗೆ, ಯಾಕೋಬನು ಯೋಸೇಫನಿಗಾಗಿ ಪಟ್ಟೆ ಪಟ್ಟೆಯುಳ್ಳ ಒಂದು ಚೆಂದದ ಅಂಗಿಯನ್ನು ಹೊಲಿಸಿಕೊಟ್ಟಿದ್ದನು. “ಯೋಸೇಫನು [ಯಾಕೋಬನಿಗೆ] ಮುಪ್ಪಿನಲ್ಲಿ ಹುಟ್ಟಿದವನಾದ್ದರಿಂದ” ಅವನನ್ನು ಹೆಚ್ಚು ಪ್ರೀತಿಸುತ್ತಿದ್ದನು. ಮಾತ್ರವಲ್ಲ, ತನ್ನ ಒಲುಮೆಯ ಮಡದಿಯಾದ ರಾಹೇಲಳ ಮೊದಲನೇ ಮಗ ಅವನಾಗಿದ್ದನು.

ಬೈಬಲ್‌ ತಿಳಿಸುವುದು: ‘ಅವನ ಅಣ್ಣತಮ್ಮಂದಿರು​—⁠ನಮ್ಮ ತಂದೆ ತನ್ನ ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆಂದು ನೋಡಿ ಯೋಸೇಫನನ್ನು ಹಗೆಮಾಡಿದರು.’ ಒಂದು ದಿನ ಯೋಸೇಫನು ತಾನು ಕಂಡ ಕನಸಿನಲ್ಲಿ ತನ್ನ ಅಣ್ಣಂದಿರೆಲ್ಲರೂ ಮಾತ್ರವಲ್ಲ ತಂದೆ ಸಹ ತನಗೆ ಅಡ್ಡಬಿದ್ದದ್ದನ್ನು ಕುಟುಂಬಕ್ಕೆ ತಿಳಿಸಿದನು. ಆಗ “ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು” ಎಂದು ಬೈಬಲ್‌ ಹೇಳುತ್ತದೆ. ಅಂಥಾ ಕನಸನ್ನು ತಿಳಿಸಿದ್ದಕ್ಕಾಗಿ ಅವನ ತಂದೆ ಸಹ ಅವನನ್ನು ಗದರಿಸಿದನು.​—⁠ಆದಿಕಾಂಡ 37:​1-11.

ಯೋಸೇಫನು 17 ವರ್ಷದವನಾಗಿದ್ದಾಗ ಒಮ್ಮೆ ಅವನ ಅಣ್ಣಂದಿರು ತಮ್ಮ ಮನೆಯ ಆಡುಕುರಿಗಳನ್ನು ಮೇಯಿಸಲಿಕ್ಕಾಗಿ ತುಂಬ ದೂರ ಹೋಗಿದ್ದರು. ಆದ್ದರಿಂದ ಅವರ ಕ್ಷೇಮಸಮಾಚಾರವನ್ನು ವಿಚಾರಿಸಿ ಬರಲು ಯಾಕೋಬನು ಯೋಸೇಫನನ್ನು ಕಳುಹಿಸಿದನು. ಅವನು ದೂರದಿಂದ ಬರುವುದನ್ನು ಕಂಡು ಅವನ ಅಣ್ಣಂದಿರಲ್ಲಿ ಹೆಚ್ಚಿನವರು ಅವನಿಗೆ ಏನು ಮಾಡಲು ಬಯಸಿದರೆಂದು ನಿಮಗೆ ಗೊತ್ತೋ?​—⁠ಅವನನ್ನು ಕೊಲ್ಲಬಯಸಿದರು! ಆದರೆ ಅವರಲ್ಲಿಬ್ಬರಾದ ರೂಬೇನ್‌, ಯೆಹೂದನು ಅದನ್ನು ಒಪ್ಪಲಿಲ್ಲ.

ಆಗ ಈಜಿಪ್ಟ್‌ಗೆ ಹೋಗುತ್ತಿದ್ದ ಕೆಲವು ವ್ಯಾಪಾರಿಗಳು ಆ ದಾರಿಯಾಗಿ ಬಂದರು. ಯೆಹೂದನು, ‘ಅವರಿಗೆ [ಇವನನ್ನು] ಮಾರಿಬಿಡೋಣ ಬನ್ನಿ’ ಎಂದು ಹೇಳಿದಾಗ ಅವನ ಅಣ್ಣಂದಿರು ಒಪ್ಪಿದರು. ಆಮೇಲೆ ಅವರು ಆಡನ್ನು ಕೊಯ್ದು ಅದರ ರಕ್ತದಲ್ಲಿ ಯೋಸೇಫನ ಅಂಗಿಯನ್ನು ಅದ್ದಿದರು. ತದನಂತರ ಅದನ್ನು ಅವರ ತಂದೆಗೆ ತೋರಿಸಿದಾಗ ಅವನು ಅಳುತ್ತಾ ‘ದುಷ್ಟ ಮೃಗವು ಅವನನ್ನು ಕೊಂದು ತಿಂದಿರಬೇಕು’ ಎಂದು ಗೋಳಾಡಿದನು!​—⁠ಆದಿಕಾಂಡ 37:​12-36.

ಕಾಲಾನಂತರ, ಯೋಸೇಫನು ಈಜಿಪ್ಟ್‌ನ ಅರಸನಾದ ಫರೋಹನ ಮೆಚ್ಚಿಕೆಗೆ ಪಾತ್ರನಾದನು. ಇದಕ್ಕೆ ಕಾರಣವೇನೆಂದರೆ, ಫರೋಹನಿಗೆ ಬಿದ್ದ ಎರಡು ಸ್ವಪ್ನಗಳ ಅರ್ಥವನ್ನು ದೇವರ ಸಹಾಯದಿಂದ ಬಿಚ್ಚಿ ಹೇಳಲು ಶಕ್ತನಾದದ್ದೇ. ಕನಸಿನಲ್ಲಿ ಮೊದಲು, ಏಳು ಕೊಬ್ಬಿದ ಹಸುಗಳು ಕಾಣಿಸಿದವು, ಅವನ್ನು ಹಿಂಬಾಲಿಸಿ ಏಳು ಬಡಕಲು ಹಸುಗಳು ಕಾಣಿಸಿದವು. ಎರಡನೇ ಕನಸು, ಏಳು ಪುಷ್ಟಿಯುಳ್ಳ ತೆನೆಗಳು ಮತ್ತು ಏಳು ಬತ್ತಿಹೋದ ತೆನೆಗಳ ಕುರಿತಾಗಿತ್ತು. ಎರಡೂ ಕನಸುಗಳು ಏಳು ವರ್ಷದ ಸುಭಿಕ್ಷವನ್ನೂ ಏಳು ವರ್ಷದ ದೊಡ್ಡ ಬರಗಾಲವನ್ನೂ ಸೂಚಿಸುತ್ತವೆ ಎಂದು ಯೋಸೇಫನು ಹೇಳಿದನು. ಆದ್ದರಿಂದ ಸುಭಿಕ್ಷೆಯ ಸಮಯದಲ್ಲಿ ಆಹಾರಧಾನ್ಯಗಳನ್ನು ಹೇರಳವಾಗಿ ಶೇಖರಿಸಿಟ್ಟು ಮುಂದೆ ಬರಲಿದ್ದ ಬರಗಾಲಕ್ಕಾಗಿ ಸಿದ್ಧಮಾಡಲು ಫರೋಹನು ಯೋಸೇಫನನ್ನು ಅಧಿಕಾರಿಯಾಗಿ ನೇಮಿಸಿದನು.

ಬರಗಾಲ ಬಂತು. ಬಹು ದೂರದಲ್ಲಿ ವಾಸಿಸುತ್ತಿದ್ದ ಯೋಸೇಫನ ಕುಟುಂಬದವರಿಗೂ ಆಹಾರಧಾನ್ಯ ಮುಗಿದು ಹೋಯಿತು. ಆದ್ದರಿಂದ ಯಾಕೋಬನು ಯೋಸೇಫನ ಹತ್ತು ಮಂದಿ ಅಣ್ಣಂದಿರನ್ನು ಆಹಾರಧಾನ್ಯ ತರುವಂತೆ ಈಜಿಪ್ಟ್‌ಗೆ ಕಳುಹಿಸಿಕೊಟ್ಟನು. ಅವರು ಯೋಸೇಫನ ಎದುರಲ್ಲಿ ಬಂದು ನಿಂತರೂ ಅವನ ಗುರುತು ಹಿಡಿಯಲಿಲ್ಲ. ತನ್ನ ಗುರುತು ಪರಿಚಯ ಹೇಳದೆ ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸಿದನು. ತನ್ನನ್ನು ಅಷ್ಟು ಕೆಟ್ಟದಾಗಿ ಉಪಚರಿಸಿದ್ದಕ್ಕಾಗಿ ಅವರು ನಿಜವಾಗಿ ದುಃಖಿತರಾಗಿದ್ದರು ಎಂದು ಅವನಿಗೆ ತಿಳಿದುಬಂತು. ಆಮೇಲೆ ತಾನು ಯಾರೆಂದು ಯೋಸೇಫನು ಅವರಿಗೆ ಹೇಳಿದನು. ಅವರು ಸಂತೋಷದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು!​—⁠ಆದಿಕಾಂಡ ಅಧ್ಯಾಯ 40 ರಿಂದ 45.

ಈ ಬೈಬಲ್‌ ಕಥೆಯಿಂದ ನಮಗೇನು ಪಾಠ?​—⁠ಹೊಟ್ಟೆಕಿಚ್ಚಿನಿಂದ ಬರುವ ತೊಂದರೆ ತುಂಬ. ಸ್ವಂತ ಅಣ್ಣತಮ್ಮಂದಿರಿಗೂ ಹಾನಿಮಾಡಲು ಅದು ಹೇಸದು! ನಾವೀಗ ಅ. ಕೃತ್ಯಗಳು 5:​17, 18 ಮತ್ತು 7:​54-59 ಓದೋಣ ಮತ್ತು ಈ ಹೊಟ್ಟೆಕಿಚ್ಚಿನಿಂದಾಗಿ ಜನರು ಯೇಸುವಿನ ಶಿಷ್ಯರಿಗೆ ಏನು ಮಾಡಿದರು ಎಂದು ನೋಡೋಣ.​—⁠ ಇದನ್ನು ಓದಿದ ಬಳಿಕ, ಹೊಟ್ಟೆಕಿಚ್ಚು ಪಡದಂತೆ ನಾವೇಕೆ ಜಾಗ್ರತೆವಹಿಸಬೇಕು ಎಂಬುದನ್ನು ನೀವು ನೋಡಬಲ್ಲಿರೋ?​—⁠

ಯೋಸೇಫನು 110 ವರ್ಷ ಬದುಕಿದನು. ಅವನು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನೂ ನೋಡಿದನು. ಅವರು ಒಬ್ಬರನ್ನೊಬ್ಬರು ನೋಡಿ ಹೊಟ್ಟೆಕಿಚ್ಚುಪಡಬಾರದೆಂತಲೂ ಪರಸ್ಪರ ಪ್ರೀತಿಸುವಂತೆಯೂ ಯೋಸೇಫನು ಅವರಿಗೆ ಆಗಾಗ್ಗೆ ಕಲಿಸಿದ್ದನೆಂಬುದು ನಿಶ್ಚಯ.​—⁠ಆದಿಕಾಂಡ 50:​22, 23, 26. (w08 10/1)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ‘​—⁠’ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಏನಾದರೂ ಹೇಳುವಂತೆ ಉತ್ತೇಜಿಸಲು ಈ ಗುರುತನ್ನು ಕೊಡಲಾಗಿದೆ.

ಪ್ರಶ್ನೆಗಳು:

❍ ಹೊಟ್ಟೆಕಿಚ್ಚುಪಡುವುದು ಎಂದರೇನು?

❍ ಯೋಸೇಫನ ಅಣ್ಣಂದಿರು ಹೊಟ್ಟೆಕಿಚ್ಚಿನಿಂದ ಏನು ಮಾಡಿದರು?

❍ ಯೋಸೇಫನು ತನ್ನ ಅಣ್ಣಂದಿರನ್ನು ಕ್ಷಮಿಸಿದ್ದೇಕೆ?

❍ ಈ ಕಥೆಯಿಂದ ನಾವು ಏನು ಕಲಿಯುತ್ತೇವೆ?