ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ತವರಿಗಿರುವ ನಿರೀಕ್ಷೆಯ ಕುರಿತು

ಸತ್ತವರಿಗಿರುವ ನಿರೀಕ್ಷೆಯ ಕುರಿತು

ಯೇಸುವಿನಿಂದ ಕಲಿಯುವುದು . . .

ಸತ್ತವರಿಗಿರುವ ನಿರೀಕ್ಷೆಯ ಕುರಿತು

ಯೇಸು ಸತ್ತವರೊಳಗಿಂದ ಕಡಿಮೆಪಕ್ಷ ಮೂವರನ್ನು ಜೀವಿತರಾಗಿ ಎಬ್ಬಿಸಿದನು. ಈ ಮೂಲಕ ಸತ್ತವರಿಗೆ ಖಂಡಿತವಾಗಿಯೂ ನಿರೀಕ್ಷೆಯಿದೆ ಎಂದು ತೋರಿಸಿಕೊಟ್ಟನು. (ಲೂಕ 7:​11-17; 8:​49-56; ಯೋಹಾನ 11:​1-45) ಸತ್ತವರಿಗಿರುವ ನಿರೀಕ್ಷೆಯ ಕುರಿತು ತಿಳಿದುಕೊಳ್ಳಬೇಕಾದರೆ ನಾವು ಮೊದಲಾಗಿ ಮರಣಕ್ಕೆ ಏನು ಕಾರಣ ಮತ್ತು ಅದರ ಆರಂಭ ಹೇಗಾಯಿತು ಎಂಬುದನ್ನು ತಿಳಿಯಬೇಕು.

ನಾವು ಅಸ್ವಸ್ಥರಾಗುವುದೂ ಸಾಯುವುದೂ ಏಕೆ?

ಯೇಸು ಜನರ ಪಾಪಗಳನ್ನು ಕ್ಷಮಿಸಿದಾಗ ಅವರು ಗುಣಹೊಂದಿದರು. ಉದಾಹರಣೆಗಾಗಿ, ಪಾರ್ಶ್ವವಾಯು ರೋಗಿಯೊಬ್ಬನನ್ನು ಯೇಸುವಿನ ಬಳಿ ಕರೆತಂದಾಗ ಆತನಂದದ್ದು: “ಯಾವದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವದೋ? ಎದ್ದು ನಡೆ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಪಾರ್ಶ್ವವಾಯುರೋಗಿಯನ್ನು ನೋಡಿ​—⁠ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು.” (ಮತ್ತಾಯ 9:​2-6) ಪಾಪದಿಂದಲೇ ಅಸ್ವಸ್ಥ ಮತ್ತು ಮರಣ ಬಂತ್ತೆಂದು ಮೇಲಿನ ವಚನ ತಿಳಿಸುತ್ತದೆ. ನಾವು ಪಾಪಪೂರ್ಣ ಸ್ಥಿತಿಯನ್ನು ಬಾಧ್ಯತೆಯಾಗಿ ಹೊಂದಿದ್ದು ಮೊದಲನೆಯ ಮನುಷ್ಯನಾದ ಆದಾಮನಿಂದಲೇ.​—⁠ಲೂಕ 3:38; ರೋಮಾಪುರ 5:⁠12.

ಯೇಸು ಸತ್ತದ್ದು ಏಕೆ?

ಯೇಸು ಪಾಪವನ್ನೇ ಮಾಡಿರಲಿಲ್ಲ. ಆದ್ದರಿಂದ ಅವನು ಮರಣಕ್ಕೆ ಅರ್ಹನಾಗಿರಲಿಲ್ಲ. ಆದರೂ ನಮಗಾಗಿ ಸಾಯುವ ಮೂಲಕ ಆತನು ನಮ್ಮ ಪಾಪಗಳಿಗಾಗಿ ತನ್ನ ಜೀವವನ್ನು ಬೆಲೆಯಾಗಿ ತೆತ್ತನು. ತನ್ನ ರಕ್ತವು “ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದನು ಅವನು.​—⁠ಮತ್ತಾಯ 26:⁠28.

ಯೇಸು ಇದನ್ನೂ ಹೇಳಿದನು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾಯ 20:28) ತಾನು ತೆತ್ತ ಬೆಲೆಯನ್ನು ಯೇಸು “ಈಡು” ಅಂದರೆ ವಿಮೋಚನಾ ಮೌಲ್ಯ ಎಂದು ಕರೆದನು. ಯಾಕೆಂದರೆ ಅದು ಇತರರನ್ನು ಮರಣದಿಂದ ಬಿಡುಗಡೆಮಾಡಿತು. ಯೇಸು ಮತ್ತೂ ಹೇಳಿದ್ದು: ‘ನಾನಾದರೋ ಅವರಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.’ (ಯೋಹಾನ 10:10) ಮೃತರಿಗಿರುವ ನಿರೀಕ್ಷೆಯನ್ನು ತಿಳುಕೊಳ್ಳಬೇಕಾದರೆ ಅವರ ಸದ್ಯದ ಪರಿಸ್ಥಿತಿಯನ್ನು ಕೂಡಾ ನಾವು ತಿಳುಕೊಳ್ಳುವ ಆವಶ್ಯಕತೆಯಿದೆ.

ಸತ್ತಾಗ ಏನು ಸಂಭವಿಸುತ್ತದೆ?

ಮರಣದಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ತನ್ನ ಮಿತ್ರನಾದ ಲಾಜರನು ಸತ್ತಾಗ ಯೇಸು ವಿವರಿಸುತ್ತಾ ತನ್ನ ಶಿಷ್ಯರಿಗೆ ಅಂದದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ [ಬೇಥಾನ್ಯಕ್ಕೆ] ಹೋಗುತ್ತೇನೆ ಎಂದು ಹೇಳಿದನು . . . ಆದರೆ ಅವರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಹೇಳುತ್ತಾನೆಂದು ನೆನಸಿದರು. ಆಗ ಯೇಸು ಸ್ಪಷ್ಟವಾಗಿ ಅವರಿಗೆ​—⁠ಲಾಜರನು ಸತ್ತುಹೋದನು . . . ಎಂದು ಹೇಳಿದನು.” ಹೀಗೆ ಸತ್ತವರು ನಿದ್ರೆಮಾಡುತ್ತಿದ್ದಾರೆ ಅಂದರೆ ಪ್ರಜ್ಞಾರಹಿತರಾಗಿದ್ದಾರೆ ಎಂದು ಯೇಸು ಸ್ಪಷ್ಟಪಡಿಸಿದನು.​—⁠ಯೋಹಾನ 11:​1-15.

ಯೇಸು ತನ್ನ ಮಿತ್ರನಾದ ಲಾಜರನನ್ನು ಪುನಃ ಬದುಕಿಸಿದಾಗ ಲಾಜರನು ಸತ್ತು ನಾಲ್ಕು ದಿನವಾಗಿತ್ತು. ಹಾಗಿದ್ದರೂ ಸತ್ತಾಗ ಏನಾಯಿತು ಎಂಬದರ ಬಗ್ಗೆ ಲಾಜರನು ಯಾವುದೇ ಹೇಳಿಕೆಯನ್ನು ನೀಡಿದನೆಂದು ಬೈಬಲ್‌ ತಿಳಿಸುವುದಿಲ್ಲ. ಏಕೆಂದರೆ ಅವನು ಸತ್ತಾಗ ಪ್ರಜ್ಞಾರಹಿತನಾಗಿದ್ದನು ಮತ್ತು ಯಾವ ತಿಳುವಳಿಕೆಯೂ ಅವನಿಗಿರಲಿಲ್ಲ.​—⁠ಪ್ರಸಂಗಿ 9:​5, 10; ಯೋಹಾನ 11:​17-44.

ಸತ್ತವರಿಗೆ ಯಾವ ನಿರೀಕ್ಷೆ ಇದೆ?

ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ ಸತ್ತವರು ಜೀವಿತರಾಗಿ ಎದ್ದುಬರುವರು. ಯೇಸು ಹೇಳಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”​—⁠ಯೋಹಾನ 5:​28, 29.

ಈ ನಿರೀಕ್ಷೆಯು ದೇವರ ಪ್ರೀತಿಯ ಪ್ರತೀಕ. ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”​—⁠ಯೋಹಾನ 3:16; ಪ್ರಕಟನೆ 21:​4, 5. (w08 11/1)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 6 ನೋಡಿ. *

[ಪಾದಟಿಪ್ಪಣಿ]

^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.